‘ಬಸೂ’ ಪರಿಚಯಿಸಿದ ಹೊಸ ಲೋಕ..
ಕಳೆದ 1998-99 ರಲ್ಲಿ ನಾನೊಂದು ಪುಟ್ಟ ಪತ್ರಿಕೆ(ಮಹಾಕೂಟ)ಯನ್ನು ಬಾದಾಮಿಯಿಂದ ಹುಟ್ಟು ಹಾಕಿದೆ. ನನ್ನ ಇನ್ನೊರ್ವ ಹಿರಿಯ ಗೆಳಯ ಎಂ.ಎಂ.ಬಸಯ್ಯನಿಂದ ‘ಬಸೂ’ (ಬಸವರಾಜ ಸೂಳಿಭಾವಿ) ಅವರ ಸಂಪರ್ಕವಾಯಿತು. ಆಗ ಬಸೂ ಸಾರಥ್ಯದಲ್ಲಿ ಗದಗ ನಗರದಿಂದ ಪ್ರಕಟವಾಗುವ ‘ಲಡಾಯಿ’ ಪತ್ರಿಕೆ ನಮ್ಮ ಉತ್ತರ ಕರ್ನಾಟಕದಲ್ಲಿಯೇ ಬಲು ಜನಪ್ರಿಯವಾಗಿತ್ತು. ಅವರ ಹೋರಾಟದ ಕಿಚ್ಚು, ಬರಹದ ಶೈಲಿ, ಧೈರ್ಯ ಎಲ್ಲವನ್ನೂ ನೋಡಿ ಅವರ ಪ್ರಥಮ ಭೇಟಿಯಲ್ಲಿಯೇ ಬೆರಗಾಗಿದ್ದೆ. ತದನಂತರ ನಾನೂ ಒಂಚೂರು ‘ಬಸೂ’ವಿನಂತಿಯೇ ಆಗಬೇಕೆಂಬ ಆಶಯದ ಬೀಜವನ್ನು ನನ್ನೊಳಗೆ ಬಿತ್ತಿಕೊಂಡೆ, ದಶಕದ ನಂತರ ಬೀಜ ಮೊಳಕೆಯೊಡೆಯಿತು..! ತುಂಬಾ ತಡವಾಗಿಯಾದರೂ ಮೊಳಕೆಯೊಡೆಯಿತಲ್ಲ ಅನ್ನೊ ಖುಷಿಯಲ್ಲಿದ್ದಾಗಲೇ ಸಾಮಾಜಿಕ ಕಳಕಳಿಯುಳ್ಳ ಬಸೂ ಜೈಲು ಪಾಲಾದ ಸುದ್ದಿ ಬಂತು, ನಾನು ಒಮ್ಮಿಂದೊಮ್ಮಲೆ ಕುಸಿದುಬಿದ್ದೆ.
ಒಟ್ಟು ಗೆಳಯ ಬಸೂ ನಿರಂತರ ಹೋರಾಟ, ಆಘಾತ, ನೋವು, ನಲಿವು ಈ ಎಲ್ಲವುಗಳನ್ನು ಒಟ್ಟೊಟ್ಟಿಗೆ ಕಟ್ಟಿಕೊಂಡು ನಮ್ಮಂತವರನ್ನು ಪ್ರೀತಿಯಿಂದ ಮಾತನಾಡಿಸುತ್ತಾ ಬದಲಾವಣೆಯತ್ತ ಮುಖಮಾಡಲು ಪ್ರೇರೆಪಿಸುತ್ತಿದ್ದಾನೆ. ಸಧ್ಯಕ್ಕೆ ಪತ್ರಿಕೆಯನ್ನು ನಿಲ್ಲಿಸಿ ‘ಲಡಾಯಿ’ ಪ್ರಕಾಶನದ ಮೂಲಕ ವೈಚಾರಿಕ ಪುಸ್ತಕಗಳನ್ನು ಕಟ್ಟಿಕೊಡುತ್ತಿದ್ದಾರೆ. ಇವರ ‘ಅಪರಾಧ’ ಅನ್ನೊ ಕವಿತೆಯಲ್ಲಿ ಬಸೂ ತಮ್ಮ ಬದುಕಿನ ವಾಸ್ತವವನ್ನೆ ಬಿಚ್ಚಿಟ್ಟಿದ್ದಾರೆ ನೀವೂ ಓದಿರಿ. ‘ನಾನು ಅಕ್ಷರಗಳಲ್ಲಿ ಪ್ರಜಾಸತ್ತೆ, ನಾಗರಿಕ ಹಕ್ಕು ಓದಿಕೊಂಡವನು. ಪದವಿ ಕಲಿವ ಮಕ್ಕಳಿಗೆ ದಶಕಗಳ ಕಾಲ ಪಾಠ ಮಾಡಿದವನು. ಆಗ ಜೇಲಿನವರೂ ಕರೆದು ಹಾರ ಹಾಕಿ ಭಾಷಣ ಮಾಡಿಸಿದ್ದರು. ಒಣ ಪಾಠ, ಪ್ರವಚನ ಸಾಕಾಗಿ ಈ ದಿನ ನೊಂದ ಜೀವದ ಕಣ್ಣೀರು ಒರೆಸಿದೆ, ನಡುಬೀದಿಯಲ್ಲಿ ನಿಂತೇ. ತೆರೆದು ತೋರಿಸಿದೆ ಜನಗಳ ಎದೆಯ ಬೇನೆ, ಪ್ರಜಾಸತ್ತೆಯ ಉಳುವಿನ ಮಾತು ಎತ್ತಿದೆನಷ್ಟೆ, ಜೇಲಿನ ಬಾಗಿಲೊಂದು ತೆರೆಯಿತು ಹಣೆಗೆ (ಅಪರಾಧ)ಪಟ್ಟವೂ ಸಿಕ್ಕಿತು. ಉಳ್ಳವರ ದೇಶದಲ್ಲಿ ಜನರ ಹಕ್ಕಿನ ಮಾತು ಸದಾ ಅಪರಾಧವೇ.. ಯಾರಿಗೆ ಗೊತ್ತಿಲ್ಲ ಈ ಹೊತ್ತಿನ ನಿಮ್ಮ ಮೌನವೂ ನಿರಪರಾಧವೇನಲ್ಲ. ನಾನೀಗ ಅಪರಾಧಿ.. ನೀವು?’ ಹೀಗೆ ಗೆಳೆಯ ಪ್ರಶ್ನಿಸುವ ಮೂಲಕ ನನ್ನ ಹೃದಯದೊಳಗೆ ಇಳಿದು ಕಲ್ಮಶವ ತೊಳೆಯುತ್ತಿದ್ದಾನೆ.
ಬಸೂ ಸ್ವಂತಕ್ಕೊಂದು ಸೂರು ಕಟ್ಟಿಕೊಳ್ಳದೆ, ಕಳೆದ ಇಪ್ಪತ್ತು ವರ್ಷಗಳಿಂದ ಪುಟ್ಟ ಬಾಡಿಗೆ ಕೋಣೆಯೊಂದರಲ್ಲಿಯೇ ಬದುಕು ಕಟ್ಟಿಕೊಂಡು ಸದಾ ಸಮಾನತೆಗಾಗಿ ಮೌನ ಚಳುವಳಿಯೊಂದಿಗೆ ಈ ಜಗವ ಸುತ್ತುತ್ತಿದ್ದಾನೆ ಜೋಗಿ ಜಂಗಮನಂತೆ. ಒಟ್ಟು ಬಸೂ ನನಗಂತೂ ಇಷ್ಟ, ಪರಿಚಯ ಮಾಡಿಕೊಂಡರೆ ನಿಮಗೂ.. (ಒಮ್ಮೆ ಬಸೂ ಅವರೊಂದಿಗೆ ಮಾತನಾಡಿ ನೋಡಿರಿ. 9480286844)
– ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ.
Avara hslavaaru barahagalannu odiddene. Great
ಈಗಿನ ಕಾಲದಲ್ಲಿ ನಿಸ್ವಾರ್ಥಿಗಳು ಅಪರೂಪ. ಬರಹ ಇಷ್ಟವಾಯಿತು.