ಪ್ರವಾಸ

ಶ್ರೀನಗರದಲ್ಲಿ ಶ್ರೀರಾಮನವಮಿ

Share Button

ಜಮ್ಮು ಕಾಶ್ಮೀರದ ಪ್ರವಾಸದಲ್ಲಿದ್ದೆವು. ಶ್ರೀರಾಮನವಮಿಯಂದು (06-04-2025) ನಮ್ಮ ತಂಗುದಾಣ ಶ್ರೀನಗರವಾಗಿತ್ತು. ಬೆಳಗ್ಗೆ ಗುಲ್ಮಾಗ್ ಗೆ ಭೇಟಿ ನೀಡಿದೆವು. ಅಲ್ಲಿ ಕೇಬಲ್ ಕಾರ್‌ನಲ್ಲಿ ಪರ್ವತವನ್ನೇರಿದೆವು. ಕೆಳಗೆ ಹಿಮದ ಹಾಸು ಶ್ವೇತವರ್ಣದ ನೆಲವಾಗಿತ್ತು. ಯೂರೋಪಿನ ಮೌಂಟ್ ಟಿಟ್ಲಿಸ್ ನೆನಪಾಯಿತು. ಇಲ್ಲಿಯ ವ್ಯವಸ್ಥೆ ಅಲ್ಲೋಲ ಕಲ್ಲೋಲ. ಸರದಿಯಲ್ಲಿ ಗಂಟೆಗಟ್ಟಲೆ ಕಾಯಬೇಕು. ಗಮ್ ಬೂಟ್ಸ್ ಹಾಕಬೇಕು. ಕೈಗೆ ಕೈಚೀಲ ಧರಿಸಿದೆವು. ಮೈಮೇಲೆ ಮೂರು ಪದರದ ಬಟ್ಟೆಗಳು. ಮೇಲೆ ಹೋದರೆ ಹಿಮಾಚ್ಛಾದಿತ ಪರ್ವತಗಳು ಕೈಬೀಸಿ ಕರೆದವು. ಸೂಜಿಪರ್ಣ ಮರಗಳು ಎತ್ತರಕ್ಕೆ ನಿಂತಿದ್ದವು. ಹಿಮದ ಮೇಲೆ ಕೆಲವು ಆಟಗಳನ್ನು ಆಡಬಹುದಿತ್ತು. ಕೆಲವು ಆಡಲು ಹೋದರು. ಬೇರೆಯವರಿಗೆ ಕೂರಲೂ ಸ್ಥಳವಿಲ್ಲ. ಕಾಶ್ಮೀರದ ‘ಕಾವಾ’ ಚಹವನ್ನು ಕುಡಿದೆವು. ಹೂವಿನ ಮತ್ತು ಕೇಸರಿಯ ಪರಿಮಳ. ಪಾನಕದಂತೆ ಸಿಹಿಯಾಗಿತ್ತು. ಇದಕ್ಕೆ ಹಾಲು ಹಾಕುವುದಿಲ್ಲ. ಒಟ್ಟಿನಲ್ಲಿ ಗಂಟಲಿಗೆ ಕಾವಾ ಚಹದ ಬಿಸಿ ಹಿತವಾಗಿತ್ತು. ನಾವು ಅಲ್ಲೇ ಸ್ವಲ್ಪ ಸುತ್ತಾಡಿದೆವು. ನಲವತ್ತು ವರ್ಷಗಳಿಗೂ ಹಿಂದೆ ನೋಡಿದ ಗುಲ್ಮಾರ್ಗ್ ಇದಾಗಿರಲಿಲ್ಲ. ಆಗ ಸ್ವಚ್ಛ ಸುಂದರವಾಗಿತ್ತು. ಈಗ ಕಸ, ಜನಜಂಗುಳಿ ಬೇಜಾರು ತರಿಸಿತ್ತು. ಅಭಿವೃದ್ಧಿ ಹೊಂದಿದೆ ನಿಜ ಆದರೆ… ಆಗ ಕಾರು ಹೋಗುವ ತನಕ ಮಾತ್ರ ಹೋಗಬಹುದಿತ್ತು. ಈಗ ಕೇಬಲ್ ಕಾರು (ಗೊಂಡೊಲಾ) ಮತ್ತು ಗಮ್ ಬೂಟಿನಲ್ಲಿ ಕಾಲಿಗೆ ಚಿತ್ರಹಿಂಸೆ!

ಸಂಜೆ ಶ್ರೀನಗರಕ್ಕೆ ಸುಮಾರು ಆರು ಗಂಟೆಗೆ ತಲುಪಿ ನಮ್ಮ ಹೋಟೆಲನ್ನು ಸೇರಿಕೊಂಡೆವು. ಅಲ್ಲಿ ರಾಮನವಮಿಯ ಪ್ರಯುಕ್ತ ನಮ್ಮ ಅಡಿಗೆಭಟ್ಟರು ಪಾನಕ, ಕೋಸಂಬರಿ ಸಿದ್ಧಪಡಿಸಿದ್ದರು. ವಾಹ್! ನಮಗೆಲ್ಲರಿಗೂ ಸಂತೋಷವಾಯಿತು. ಮನದ ಒಂದು ಮೂಲೆಯಲ್ಲಿ ರಾಮನವಮಿ ಆಚರಿಸಲಿಲ್ಲವಲ್ಲಾ ಎನ್ನುವ ಬೇಸರ ಬೆಳಗಿನಿಂದ ಮನೆಮಾಡಿತ್ತು. ನಮಗೆಲ್ಲಾ ಪಾನಕ, ಕೋಸಂಬರಿ ಹಂಚಿದ ರಘುರಾಂರವರು ನಮಗೆ ಒಂದು ಆಫರ್ ಕೊಟ್ಟರು. ‘ನೀವೆಲ್ಲಾ 7.30 ಗಂಟೆಗೆ ರೆಡಿ ಇದ್ದರೆ ನಿಮ್ಮನ್ನು ಎರಡು ರಸ್ತೆಗಳನ್ನು ದಾಟಿದರೆ ಇರುವ ರಾಮನ ದೇವಸ್ಥಾನಕ್ಕೆ ಕರೆದೊಯ್ಯುತ್ತೇನೆ’. ನಮಗೆಲ್ಲಾ ಇನ್ನೂ ಸಂತೋಷವಾಯಿತು. ಶ್ರೀನಗರದಲ್ಲಿ ಶ್ರೀರಾಮನನ್ನು ನೋಡುವುದೆಂದರೆ ಎಂತಹ ಪುಣ್ಯ ಮತ್ತು ಆಶ್ಚರ್ಯ! ತಕ್ಷಣವೇ ರೂಮಿಗೆ ಹೋಗಿ ಫ್ರೆಶ್ ಆಗಿ ಬಂದೆವು. ಹೋಟೆಲಿನಿಂದ ಹತ್ತು ನಿಮಿಷದ ನಡಿಗೆಯಷ್ಟೇ. ಸುಮಾರು 20 ಜನ ಗುಂಪಾಗಿ ಹೊರಟೆವು. ಅಂಗಡಿಗಳೆಲ್ಲಾ ಆಗಲೇ ಮುಚ್ಚುತ್ತಿದ್ದವು. ಮನದಲ್ಲಿ ಎಲ್ಲೋ ಒಂದು ಚಿಕ್ಕ ಅಳುಕು ಇದ್ದೇ ಇತ್ತು. ರಘುರಾಂ ‘ಇಲ್ಲೆಲ್ಲಾ ಓಡಾಡುವುದೇ ಕಷ್ಟ ಇತ್ತು. ಈಗ CRPF ಮತ್ತು SSP ಇರುವುದರಿಂದ ಪರವಾಗಿಲ್ಲ’ ಎಂದರು.

PC: Internet

ದೇವಸ್ಥಾನವನ್ನು ತಲುಪಿದೆವು. ಹತ್ತಿರವೇ ಯೋಧರು ಕಾಯುತ್ತಿದ್ದರು. ದೇವಸ್ಥಾನದ ಬಾಗಿಲಲ್ಲಿ ಕೂಡ ಇದ್ದರು. ಹಳೆಯ ದೇವಸ್ಥಾನ ಎನ್ನಿಸಿತು. ಶ್ರೀರಾಮ, ಸೀತಾದೇವಿ ಮತ್ತು ಲಕ್ಷ್ಮಣರ ಭವ್ಯ ಅಮೃತಶಿಲೆಯ ಮೂರ್ತಿಗಳು. ಧನ್ಯತಾಭಾವ ಮೂಡಿತು ಎಂದು ಬೇರೆ ಹೇಳಬೇಕಿಲ್ಲ! ನಾವು ಪ್ರವೇಶಿಸಿದಾಗ ಆರತಿ ನಡೆಯುತ್ತಿತ್ತು. ಪಕ್ಕದಲ್ಲೇ ದೊಡ್ಡ ಹನುಮಾನ್ ಮೂರ್ತಿ ಇತ್ತು. ಮತ್ತೊಂದೆಡೆ ಶಿವಲಿಂಗ, ನೇಪಾಳದ ಪಶುಪತಿನಾಥನಂತೆ ಇತ್ತು. ಎದುರಿಗೆ ದೇವಿ. ಎಲ್ಲರೂ ಆರತಿಯಲ್ಲಿ ಪಾಲ್ಗೊಂಡೆವು. ನಾನು ತುಳಸೀದಾಸರ ಭಜನೆಯನ್ನು ಹಾಡಿದೆ. ಮತ್ತೊಬ್ಬರು ಶ್ರೀರಾಮನ ಕೀರ್ತನೆಯನ್ನು ಹಾಡಿದರು.

ದೇವಸ್ಥಾನವೂ 8 ಗಂಟೆಗೆ ಮುಚ್ಚುತ್ತದೆ. ಸರಿ, ನಾವೆಲ್ಲಾ ವಾಪಸ್ ಹೊರಟೆವು. ಹೊರಗೆ ಬಂದ ಮೇಲೆ ಅಲ್ಲಿದ್ದ ಸಿಆರ್‌ಪಿಎಫ್ ಯೋಧರಿಗೆ ವಂದನೆ ಸಲ್ಲಿಸಿದೆ. ಅವರು ಇನ್ನೇನೂ ಹೇಳಲಿಲ್ಲ ‘ಬೇಗ ನಿಮ್ಮ ಸ್ಥಳವನ್ನು ಸೇರಿಕೊಳ್ಳಿ’ ಎಂದರು ಅಷ್ಟೇ. ಕಾಶ್ಮೀರದ ಪರಿಸ್ಥಿತಿಯ ಅರಿವುಂಟಾಯಿತು.
ಒಟ್ಟಿನಲ್ಲಿ ಶ್ರೀರಾಮನ ದೇವಸ್ಥಾನದ ಭೇಟಿ ಶ್ರೀನಗರದಲ್ಲಿ ಆಗಿದ್ದನ್ನು ನಾನೆಂದೂ ಮರೆಯಲಾರೆ!

ಡಾ.ಎಸ್.ಸುಧಾ, ಮೈಸೂರು

11 Comments on “ಶ್ರೀನಗರದಲ್ಲಿ ಶ್ರೀರಾಮನವಮಿ

    1. ಧನ್ಯವಾದಗಳು ಗೆಳತಿ. ನೀನು ಜೊತೆಗೆ ಇದ್ದದ್ದು ಇನ್ನೂ ಖುಷಿ ಕೊಟ್ಟಿತು.

    1. ಧನ್ಯವಾದಗಳು ಗೆಳತಿ ನಾಗರತ್ನ. ಪ್ರೋತ್ಸಾಹ ಹೀಗೇ ಇರಲಿ

  1. ಪ್ರವಾಸಕಥನ……..ಇಷ್ಟವಾಯಿತು ಮೇಡಂ, ಧನ್ಯವಾದಗಳು.
    ಶ್ರೀನಗರದ ಶ್ರೀರಾಮ ಅಂತೆಯೇ…….
    ಪ್ರಾಚೀನ ದೇಗುಲದ ಪರಿಚಯ ಸೊಗಸಾಗಿ ನಿರೂಪಿತ.
    ಆದರೂ ನಿಮ್ಮ ಧೈರ್ಯ
    ಅಬ್ಬಾ! ಜೈ ಶ್ರೀರಾಮ್

  2. ಧನ್ಯವಾದಗಳು ಮಂಜುರಾಜ್ ಅವರೇ. Durghatane ನಡೆದ ಒಂದು ವಾರದ ಮೊದಲು ನಾವು ಪಹಲ್ಗಮ್ ಗೆ ಹೋಗಿದ್ದೆವು.

    1. ಮೆಚ್ಚಿದಕ್ಕೆ ಧನ್ಯವಾದಗಳು ಪದ್ಮಾ ಆನಂದ್.

  3. ಯೋಧರ ಕಣ್ಗಾವಲಿನಲ್ಲಿ ಶ್ರೀನಗರದಲ್ಲಿ ಶ್ರೀರಾಮನ ಭೇಟಿ ದೊರಕಿದ ಜಮ್ಮು ಕಾಶ್ಮೀರ ಪ್ರವಾಸದ ಅನುಭವ ಲೇಖನವು ಬಹಳ ಚೆನ್ನಾಗಿದೆ ಮೇಡಂ.

  4. ಧನ್ಯವಾದಗಳು ಹೇಮಾಮಾಲಾ ಪ್ರಕಟಿಸಿದ್ದಕ್ಕೆ.

Leave a Reply to Nirmala G V Cancel reply

 Click this button or press Ctrl+G to toggle between Kannada and English

Your email address will not be published. Required fields are marked *