ಚಿಕ್ಕಂದಿನಲ್ಲಿ ನಮ್ಮಜ್ಜಿ ಮನೆಯಲ್ಲಿ ಇದ್ದ ದಿನಮಾನಗಳು. ದಸರೆಯ ರಜೆಗೆ ಬಂದಿದ್ದ ಮೊಮ್ಮಕ್ಕಳು. ಬಡತನದಲ್ಲೂ ಪ್ರೀತಿ ಮಮತೆಗೆ ಕೊರತೆ ಮಾಡದ ಈ ಮಡಿಹೆಂಗಸು, ಆಗಾಗ ಬಯ್ಯುತಿದ್ದರೂ ಅದರಲ್ಲಿ ಕಾಳಜಿ ಬೆರೆತ ವಾತ್ಸಲ್ಯವಿತ್ತು. ಹಗಲೆಲ್ಲಾ ಅದೂ ಇದೂ ಆಟವಾಡಿ, ದಣಿದು ರಾತ್ರಿಯಾಯಿತೆಂಬ ಕಾರಣಕ್ಕಾಗಿ ಒಂದೆಡೆ ಉಸ್ಸಪ್ಪ ಎಂದು ಗೋಡೆಯ ಕಂಬಕ್ಕೆ ಒರಗಿ ಕುಳಿತಾಗ ನಿದ್ರಾದೇವಿ ಅಪ್ಪಿಕೊಳ್ಳುವ ಸಮಯದಲ್ಲಿ ನಮ್ಮಜ್ಜಿ ರೇಗುತ್ತಾ, ಊಟ ಮಾಡಿ ಮಲಗಿಕೊಳ್ಳಿ ಎಂದು ಬುದ್ಧಿವಾದ ಹೇಳುತ್ತಿದ್ದರು ಮಾತ್ರವಲ್ಲದೇ ಮಧ್ಯಾಹ್ನ ಉಳಿದಿದ್ದನ್ನು ರಾತ್ರಿಗೆ ವಿಲೇವಾರಿ ಮಾಡುವ ತವಕದಲ್ಲಿ ಸಾಲಾಗಿ ಕೂರಿಸಿ, ಕೈ ತುತ್ತು ಹಾಕುತಿದ್ದರು. ಆ ಸಂದರ್ಭದಲ್ಲಿ ಒಂದು ಕತೆ ಹೇಳಿದ್ದು ನನ್ನ ನೆನಪಿನ ಕೋಶದಲ್ಲಿ ಭದ್ರವಾಗಿ ಕೂತಿದೆ.
ಒಮ್ಮೆ ಪರಶಿವನು ಬೇಟೆಯಾಡಿ ಆಯಾಸಗೊಂಡು ಮನೆಗೆ ಬಂದವನೇ ತನ್ನ ಮಡದಿ ಪಾರ್ವತಿಯನ್ನು ಕೇಳುತ್ತಾನಂತೆ: ‘ರಾತ್ರಿಯಾಗುವ ತನಕ ಕಾಯಲಾರೆ, ಏನಾದರೂ ಇದ್ದರೆ ಅದನ್ನೇ ಬಡಿಸು’ ಎಂದು. ಅಡುಗೆ ಮಾಡಲೂ ಸಮಯ ಸಿಗದೇ ಹೋದಾಗ ಆಕೆಯು ಬೇಗಬೇಗನೆ ಅನ್ನಕಿಟ್ಟು, ಪಕ್ಕದ ವಿಷ್ಣುವಿನ ಮನೆಗೆ ಹೋದಳಂತೆ. ತನ್ನ ಗಂಡನಿಗೆ ಬಲು ಇಷ್ಟದ ಹಲಸಿನ ಕಾಯಿ ಸಾಂಬಾರನ್ನು ಈಸಿಕೊಂಡು ಬರಲು. ಯಾಕೋ ಏನೋ ನಾರಾಯಣನ ಹೆಂಡತಿ ಮಹಾಲಕ್ಷ್ಮಿಯು ‘ಸಾಂಬಾರೇನೋ ಇದೆ, ಆದರೆ ಕೊಡುವಷ್ಟಿಲ್ಲ. ಸ್ವಲ್ಪ ತಾಳು, ನಿನ್ನೆ ತಾನೇ ಘಮಗುಡುವ ಮೆಂತ್ಯದ ಹಿಟ್ಟು ಮಾಡಿಟ್ಟಿದ್ದೇನೆ. ಹಸುವಿನ ಬೆಣ್ಣೆಯಿಂದ ತೆಗೆದ ತುಪ್ಪವನ್ನೂ ಕೊಡುತ್ತೇನೆ. ಒಗ್ಗರಣೆ ಮಾಡಿ ಕಲೆಸಿ ತುತ್ತುನ್ನಾಗಿಸಿ ಕೈಗೇ ಕೊಡು. ಹೇಗೂ ಬಿಸಿಯನ್ನಕ್ಕೆ ಇದು ಚೆನ್ನಾಗಿ ಹೊಂದುತ್ತದೆ’ ಎಂದು ಬಟ್ಟಲಿಗೆ ಹಾಕಿ ಕೊಟ್ಟಳಂತೆ. ಹಾಗೆ ಕೊಡುವಾಗ ಸ್ವಲ್ಪವೇ ಇದ್ದ ಸಾಂಬಾರು ಕೊಡುವುದನ್ನೂ ಮರೆಯಲಿಲ್ಲ. (ದೇವರ ನಡುವೆಯೂ ಅವರ ಮಡದಿಯರ ನಡುವೆಯೂ ತುಂಬಾ ಸಾಮರಸ್ಯವಿತ್ತು; ಆದರೆ ಭೂಲೋಕದ ಅವರ ಭಕ್ತರ ನಡುವೆಯೇ ಹೆಚ್ಚು ಸಾಮರಸ್ಯವಿರಲಿಲ್ಲ!)
ಬಾಳೆಲೆ ಹಾಕಿಕೊಂಡು ಕುಳಿತಿದ್ದ ಶಿವನ ಮುಖದಲ್ಲಿ ಹೆಡೆಯಾಡುತ್ತಿದ್ದ ಅಸಹನೆ ಮತ್ತು ಹಸಿವನ್ನು ತಾಳಿಕೊಳ್ಳಲಾಗದ ಆತನ ಸಂಕಟವನ್ನು ಮುಖಭಾವ ಮಾತ್ರದಿಂದಲೇ ಅರಿತ ಗಿರಿಜೆಯು ಬೇಗ ಬೇಗ ತುಪ್ಪದ ಒಗ್ಗರಣೆ ಮಾಡಿ, ಬಿಸಿಯನ್ನಕೆ ಮೆಂತ್ಯದ ಹಿಟ್ಟು ಕಲೆಸಿ, ತುತ್ತನ್ನಾಗಿಸಿ, ಒಂದೊಂದೇ ತುತ್ತನ್ನು ಬಾಳೆಲೆಗೆ ಇಡುತ್ತಾ ಹೋದಳಂತೆ. ಭಯಂಕರ ಹಸಿವೆಯಿಂದ ಒದ್ದಾಡುತಿದ್ದ ಈಶ್ವರನು ಘಮಘಮ ಎನುತಿದ್ದ ಆ ಪಿಡಿಚೆ ಅನ್ನವನ್ನು ತಿನ್ನುತ್ತಾ ಆಸ್ವಾದಿಸುತ್ತಾ ಇದ್ದರೂ ‘ಯಾಕೋ ನಾಲಗೆಗೆ ಸಪ್ಪೆ’ ಎನಿಸಿತಂತೆ. ಆಗ ಪಾರ್ವತಿಯು ತುತ್ತನ್ನು ಕಲೆಸಿ, ಅದರ ಮೇಲೆ ಹಲಸಿನಕಾಯಿಯ ಸಾಂಬಾರಿನ ಹನಿಯುದುರಿಸಿ ಕೊಡಲು ಶುರುಮಾಡಿದಳಂತೆ. ಇದೀಗ ಪರಶಿವನಿಗೆ ಹೊಸ ರುಚಿ ದಕ್ಕಿ ಇನ್ನಷ್ಟು ಸಂತಸದಿಂದ ಉಂಡನಂತೆ. ಅನ್ನವಿಟ್ಟ ಮಡದಿಯನ್ನೂ ಪಕ್ಕದ ಮನೆಯ ವಿಷ್ಣುವಿನ ಧರ್ಮಪತ್ನಿ ಮಹಾಲಕ್ಷ್ಮಿಯನ್ನೂ ಮರೆಯದೇ ನೆನಪಿಸಿಕೊಂಡು ಈರ್ವರು ಅನ್ನದಾತೆಯರಿಗೂ ನಮಿಸಿದನಂತೆ.
ಎಲ್ಲರಿಗೂ ಆಗುವಷ್ಟು ಸಾಂಬಾರು ಇಲ್ಲದಿದ್ದಾಗ ನಮ್ಮಜ್ಜಿಯು ಹೀಗೆ ಒಮ್ಮೆ ಮೆಂತ್ಯದ ಹಿಟ್ಟು, ಮತ್ತೊಮ್ಮೆ ಹುರುಳಿಪುಡಿ, ಮಗದೊಮ್ಮೆ ಚಟ್ನಿಪುಡಿ ಎಂದು ಹಬೆಯಾಡುವ ಅನ್ನಕೆ ಒಂದು ಚಮಚ ಕಡಲೆಕಾಯಿ ಎಣ್ಣೆ ಮತ್ತು ಉಪ್ಪು ಸೇರಿಸಿ ಕಲೆಸಿ ತುತ್ತು ಮಾಡಿ ಎಲ್ಲ ಮೊಮ್ಮಕ್ಕಳಿಗೂ ಕೊಡುತ್ತಿದ್ದರು. ನಾವು ತಿನ್ನುವುದಿಲ್ಲ ಎಂಬ ಕಾರಣಕ್ಕಾಗಿ ಇಂಥದೊಂದು ಕತೆಯನ್ನು ಹೆಣೆದು ‘ಸಾಕ್ಷಾತ್ ಭಗವಂತನೇ ತಿನ್ನುವಾಗ ನಿಮ್ಮದೇನು?’ ಎಂಬ ಎಚ್ಚರಿಕೆ ರೂಪದ ಸಂದೇಶವನ್ನೂ ರವಾನಿಸುತ್ತಿದ್ದರು. ಹುರುಳಿ ಚಟ್ನಿಪುಡಿಯ ಸುವಾಸನೆ, ಕಾಯಿಚಟ್ನಿಪುಡಿಯ ಒಣಕೊಬ್ಬರಿಯ ಜಿಡ್ಡು, ಮೆಂತ್ಯದ ಹಿಟ್ಟಿನ ಬಣ್ಣ, ರುಚಿ ಮತ್ತು ಗಂಧ – ಇವೆಲ್ಲ ಈಗಲೂ ನನ್ನ ಪಂಚೇಂದ್ರಿಯಗಳಲ್ಲಿ ಭದ್ರವಾಗಿ ಕೂತಿವೆ; ಆಗಾಗ ನೆನಪಾಗಿ ಕಾಡುತ್ತವೆ.
ಊಟದ ಹಲವು ರೀತಿಯ ವ್ಯಂಜನಗಳನ್ನು ಕುರಿತು ಲೇಖನ ಬರೆದಾಗ ಈ ಸವಿನೆನಪು ನನಗೆ ಉಕ್ಕಿ ಬಂತು. ನಮ್ಮಲ್ಲಿ ಯಾವ ಕಾರಣಕ್ಕೂ ಅಂಗಡಿಯಲ್ಲಿ ಸಿಗುವ ಮಾರಿಕೆಯ ಸಾಂಬಾರುಪುಡಿಯನ್ನು ಬಳಸುವುದಿಲ್ಲ. ಅದು ಎಷ್ಟೇ ಕಷ್ಟವಾಗಲಿ, ಸಮಯ ಇಲ್ಲದೇ ಹೋಗಲಿ, ಮನೆಯಲ್ಲೇ ದೊಡ್ಡ ಬಾಣಲೆಯಲ್ಲಿ ಹುರಿದು ಈಗ ಮಿಕ್ಸಿಯಲ್ಲೂ, ಹಿಂದೆ ಒರಳುಕಲ್ಲಿನಲ್ಲೂ ಕುಟ್ಟಿ ಪುಡಿ ಮಾಡಿಟ್ಟುಕೊಳ್ಳುತ್ತಿದ್ದರು. ಸಾರಿನಪುಡಿ, ಹುಳಿಪುಡಿ ಮತ್ತು ಪಲ್ಯದಪುಡಿ ಎಂದು ಮೂರುಬಗೆ. ಹೀಗೆ ಒರಳಿನಲ್ಲಿ ಕುಟ್ಟುವಾಗ ತುಂಬಾ ನುಣ್ಣಗೆ ಪುಡಿಯಾಗದೇ, ಪದಾರ್ಥಗಳ ಹಳುಕು (ಚೂರು) ಗಳು ಸ್ವಲ್ಪ ಸ್ವಲ್ಪ ಹಾಗೆಯೇ ಉಳಿಯುತ್ತಿದ್ದುದರಿಂದ ಸಾರು, ಹುಳಿ ತಿನ್ನುವಾಗ ನಮಗೆ ಮೆಣಸಿನಕಾಯಿ, ದನಿಯಾ, ಜೀರಿಗೆ ಮುಂತಾದ ಇನ್‌ಗ್ರಿಡಿಯಂಟ್ಸ್ ಅನುಭವಕ್ಕೆ ಬರುತ್ತಿದ್ದವು. ಚಟ್ನಿಯನ್ನು ಮಾಡುವಾಗಲೂ ಅಷ್ಟೇ. ತೀರಾ ನುಣ್ಣಗೆ ರುಬ್ಬಬಾರದು; ಅದರ ಹಳುಕುಗಳು ಬಾಯಿಗೆ ಸಿಗುವಂತಿದ್ದರೆ ಕೆಲವರಿಗೆ ಇಷ್ಟ. ಈ ವಿಚಾರ ಇಲ್ಲೇಕೆ ಬಂತೆಂದರೆ, ಒಮ್ಮೊಮ್ಮೆ ಏನೂ ಇಲ್ಲದಿದ್ದಾಗ ನಮ್ಮಜ್ಜಿಯು ಬಿಸಿಯನ್ನಕ್ಕೆ ಮೆಣಸಿನಪುಡಿಯನ್ನು ಕಡಲೆಕಾಯಿ ಎಣ್ಣೆಯಿಂದ ಬೆರೆಸಿ, ಕಾಯಿತುರಿ, ಉಪ್ಪು ಹಾಕಿ, ಉಂಡೆ ಮಾಡಿ ಕೈಗಿಡುತ್ತಿದ್ದರು. ಅದೊಂದು ಖಾರ ಅಡರುವ ಪರಿ ಪರಿ ಪರಿಮಳ! ಒಂದೆಡೆ ಮೆಣಸಿನಪುಡಿಯ ರೌರವ, ಮತ್ತೊಂದೆಡೆ ಅದನ್ನು ಸುಪ್ತವಾಗಿಸಲು ಹರಸಾಹಸ ಪಡುವ ಕಾಯಿತುರಿ ಸೌರಭ, ಇನ್ನೊಂದೆಡೆ ಘಮಗುಡುವ ಕಡಲೆಕಾಯಿ ಎಣ್ಣೆ! ಪೈಪೋಟಿಗೆ ಬಿದ್ದರೆಂಬಂತೆ ಪ್ರತಿ ತುತ್ತಲೂ ಹಾಹಾಕಾರ! ‘ಖಾರ ಆಯ್ತೇನ್ರೋ ಮಕ್ಕಳೇ, ಇನ್ನೊಂಚೂರು ಎಣ್ಣೆ, ಉಪ್ಪು ಕಲೆಸಿ ತುತ್ತನಿಡುವೆ’ ಎಂದು ಅಕ್ಕರೆಯಿಂದ ಹೇಳುತ್ತಿದ್ದರು. ಅಷ್ಟೇನೂ ಗಟ್ಟಿಯಿಲ್ಲದ ನೀರು ಮೊಸರನ್ನ ತಿಂದ ಮೇಲೆಯೇ ನಮ್ಮ ಬಾಯಿಗೆ ಸಮಾಧಾನವಾಗುತ್ತಿದ್ದುದು. ಖಾರದ ರುಚಿ ಬೇಕು ಎಂಬ ಆಸೆಯೇ ಎಲ್ಲ; ಆದರೆ ಅದನ್ನು ಸಹಿಸಿಕೊಳ್ಳುವಷ್ಟು ನಮ್ಮ ನಾಲಗೆಗೆ ಸಾಮರ್ಥ್ಯವಿರಲಿಲ್ಲ. ಮೆಂತ್ಯದ ಹಿಟ್ಟನ್ನು ಹುಣಸೇಗೊಜ್ಜಿನಲ್ಲಿ ಕದಡಿ ಒಂಚೂರು ಸಾರಿನಪುಡಿ, ಬೆಲ್ಲ ಬೆರೆಸಿ, ಒಗ್ಗರಣೆ ತೋರಿದರೆ ಮೆಂತ್ಯದ ಹಿಟ್ಟಿನಿಂದ ಗೊಜ್ಜು ತಯಾರಾಗುತ್ತದೆ. ಇದನ್ನು ನಂಚಿಕೊಳ್ಳಲೂ ಬಹುದು; ಅನ್ನಕ್ಕೆ ಕಲೆಸಿಕೊಂಡು ತಿನ್ನಲೂಬಹುದು.
ಇನ್ನೊಂದು ಕತೆ: ಶಿವನ ಪಾಶುಪತಾಸ್ತ್ರವನ್ನು ಪಡೆದ ಅರ್ಜುನನು ಇನ್ನಷ್ಟು ದಿವ್ಯಾಸ್ತ್ರಗಳನ್ನು ಪಡೆಯಲೆಂದು, ಇಂದ್ರಕೀಲ ಪರ್ವತಕ್ಕೆ ಬಂದಾಗ ಆತನ ಸಂಭ್ರಮ ಹೇಳತೀರದು. ಸ್ವತಃ ದೇವೇಂದ್ರನು ತನ್ನ ಮಗನಾದ ಮಧ್ಯಮಪಾಂಡವನನ್ನು ಕರೆದುಕೊಂಡು ಹೋಗಿ ತನ್ನ ಅಮರಾವತಿಯ ವೈಭವವನ್ನು ತೋರಿಸುತ್ತಿದ್ದನಂತೆ. ಅಲ್ಲಿಯೇ ಇದ್ದ ರಂಭೆ, ಮೇನಕೆ, ಊರ್ವಶಿ, ತಿಲೋತ್ತಮೆಯರೇ ಮೊದಲಾದ ಅಪ್ಸರೆಯರು ಈ ಹೊಸ ಮನುಷ್ಯನನ್ನು ನೋಡಿ ಉಲ್ಲಾಸಗೊಂಡರಂತೆ. ಅದನ್ನು ಮೂರು ಲೋಕದ ಗಂಡ ಎಂಬ ಬಿರುದಾಂಕಿತನಾದ ವಿಕ್ರಮಾರ್ಜುನವಿಜಯನೂ ಗಮನಿಸಿದನಂತೆ. ಎಲ್ಲ ವೈಭವೋಪೇತ ಪ್ರಸಂಗವನ್ನು ನೋಡಿ ತನ್ನ ವಿಶ್ರಾಂತಿಗೃಹಕ್ಕೆ ಮರಳಿದಾಗ ಅದು ಹೇಗೋ ಊರ್ವಶಿಯು ಅವನ ಮಲಗುವ ಕೋಣೆಗೆ ಬಂದು ತನ್ನನ್ನು ವಿಶೇಷವಾಗಿ ನೋಡಿದ್ದನ್ನು ನೆನಪಿಸುವಳು. ಅದಕ್ಕೆ ಅರ್ಜುನನು, ‘ಅಂಥ ವಿಶೇಷವೇನಿಲ್ಲ. ನೀನು ನಮ್ಮ ಪೂರ್ವಜರ ಕಡೆಯವಳು. ಅದೂ ಅಲ್ಲದೇ ನನ್ನ ತಂದೆಯ ಆಸ್ಥಾನದಲ್ಲಿ ಇರುವವಳು. ನನ್ನ ತಾಯಿಗೆ ಸಮಾನ. ಅಂಥ ಕೆಟ್ಟದೃಷ್ಟಿಯಲ್ಲೇನೂ ನಾನು ನೋಡಿಲ್ಲ ಮತ್ತು ದುಷ್ಟ ಕೌರವರನ್ನು ಸಂಹರಿಸುವ ಯುದ್ಧೋತ್ಸಾಹದಲ್ಲಿರುವ ನನಗೆ ಅಂಥ ಮನಸೂ ಇಲ್ಲ’ ಎಂದು ಸ್ಪಷ್ಟಪಡಿಸಿದನಂತೆ. ಆಗ ಊರ್ವಶಿಯು ‘ನಾವು ಅಪ್ಸರಾಕುಲದವರು. ನಮಗೆ ಎಲ್ಲೆಕಟ್ಟುಗಳಿಲ್ಲ. ನಿನ್ನ ತಂದೆಯ ಸಂಪತ್ತಾದ ನಾವು ನಿನಗೂ ಹಕ್ಕುಳ್ಳ ಸಂಪತ್ತೇ. ಹಾಗಾಗಿ ನೀನು ನನ್ನ ಮೋಹದಾಸೆಯನ್ನು ತಣಿಸು’ ಎಂದಾಗ ಅಂಥ ಅರ್ಜುನನೂ ಕೈ ಮುಗಿದು ನಿರಾಕರಿಸಿ, ‘ಹೋಗು ಮಹಾತಾಯಿಯೇ’ ಎಂದನಂತೆ. ಆಗವಳು ರೋಷಗೊಂಡು, ‘ಅತ್ಯಂತ ಸಂದಿಗ್ಧ ಸಂದರ್ಭದಲ್ಲಿ ನೀನು ನಪುಂಸಕನಾಗು’ ಎಂದು ಶಪಿಸಿದಳಂತೆ. ಅದಕ್ಕಾಗಿ ಅವನು ಮುಂದೆ ಅಜ್ಞಾತವಾಸದಲ್ಲಿದ್ದಾಗ ವಿರಾಟರಾಯನ ಆಸ್ಥಾನದಲ್ಲಿ ನೃತ್ಯ ಕಲಿಸುವ ಬೃಹನ್ನಳೆಯಾಗಿ ಜೀವಿಸಬೇಕಾಗುತ್ತದೆ. ಆಗ ಇಂಥ ಶಾಪದಿಂದ ಕಂಗೆಟ್ಟ ಅರ್ಜುನನು ಕಳಾಹೀನನಾಗಿ ತನ್ನ ತಂದೆಯನ್ನು ಭೇಟಿ ಮಾಡಿದಾಗ ದೇವೇಂದ್ರನು ‘ನೀವು ಮಾನವರು, ಪಾಪಪ್ರಜ್ಞೆಯಿಂದ ಬಳಲುವ ವಿಧಿನೀತಿಯವರು. ಅಂಥ ಸಂದರ್ಭದಲ್ಲಿ ನಿನ್ನ ನಪುಂಸಕತ್ವವು ಉಳಿದವರಿಗೆ ಗೊತ್ತಾಗದಂತೆ ನೋಡಿಕೊಳ್ಳುವ ಹೊಣೆ ನನ್ನದು’ ಎಂದು ಅಭಯ ನೀಡಿ, ಊಟಕ್ಕೆ ಆಹ್ವಾನಿಸಿ, ಜೊತೆಯಲ್ಲಿ ಉಂಡನಂತೆ. ಆಗ ಬಡಿಸಿದ ತರಹೇವಾರಿ ಚಟ್ನಿಪುಡಿ ರೆಸಿಪಿಗಳಿಂದ ಅವನ ಮನ ಸಂತೋಷಗೊಂಡು, ಶಾಪವನ್ನು ಮರೆತು, ಹಗುರಾದನಂತೆ. ಅಷ್ಟೇ ಅಲ್ಲ, ಅದರೆಲ್ಲ ರೆಸಿಪಿಗಳನ್ನು ಕೇಳಿ ತಿಳಿದುಕೊಂಡು, ಮರಳಿ ಭೂಮಿಗೆ ಬಂದ ಮೇಲೆ, ಸುಭದ್ರೆಗೂ ತಿಳಿಸಿ, ವಿಧವಿಧವಾದ ಚಟ್ನಿಪುಡಿಗಳನ್ನು ಮಾಡಿಸಿಕೊಂಡು ಊಟದ ಆನಂದವನ್ನು ಹೆಚ್ಚಿಸಿಕೊಂಡನಂತೆ, ಇನ್ನೂ ಒಂದು ಹೆಜ್ಜೆ ಮುಂದುವರೆದು, ಪಾಂಡವರು ಅಜ್ಞಾತವಾಸದಲ್ಲಿದ್ದಾಗ, ಇಂಥ ರೆಸಿಪಿಗಳನ್ನು ಭೀಮನಿಗೂ ಕಲಿಸಿ, ವಿರಾಟರಾಯನ ಅಡುಗೆಮನೆಯಲ್ಲಿ ಚೆಂದದ ಊಟಗಳನ್ನು ಮಾಡಿದರಂತೆ. ಅಂತೂ ಅರ್ಜುನನಂಥವನಿಗೂ ಅಂಥ ಭೀಕರ ಶಾಪವನ್ನು ಮರೆಸುವಷ್ಟು ಶಕ್ತಿ ಇಂಥ ವಿಧವಿಧವಾದ ಚಟ್ನಿಪುಡಿಗಳಿಗೆ ಇದೆ ಎಂಬುದು ಈ ಕತೆಯ ಅಂತರಾಳ.
ಚಟ್ನಿ ಮತ್ತು ಚಟ್ನಿಪುಡಿಗಳನ್ನು ಕುರಿತು ಚಟ್ನಿಪುರಾಣ ಎಂಬ ಪ್ರತ್ಯೇಕ ಪ್ರಬಂಧದಲ್ಲಿ ಹೆಚ್ಚು ಅವಲೋಕಿಸಿರುವುದರಿಂದ ಇಲ್ಲಿ ಅದರ ಸಾಹಸಕ್ಕೆ ಮತ್ತೆ ಕೈ ಹಾಕುವುದಿಲ್ಲ. ಆದರೆ ನನ್ನ ಪ್ರಕಾರ ಚಟ್ನಿಪುಡಿ ಬೇರೆ; ಚಟ್ನಿಯ ಪುಡಿ ಬೇರೆ! ಹುರಿಗಡಲೆ ಚಟ್ನಿ, ಟೊಮ್ಯಾಟೊ ಕಾಯಿ ಚಟ್ನಿ ಮತ್ತು ಈರುಳ್ಳಿ ಚಟ್ನಿಗಳನ್ನು ಹೊರತುಪಡಿಸಿ, ಇನ್ನಾವುದೇ ಚಟ್ನಿಯಿರಲಿ (ಕಡಲೇಬೇಳೆ ಚಟ್ನಿ, ಸೊಪ್ಪಿನ ಚಟ್ನಿ, ಮೆಂತ್ಯ ಮೆಣಸಿನಕಾಯಿ ಚಟ್ನಿ, ಗೋರೀಕಾಯಿ ಚಟ್ನಿ, ಹೀರೇಕಾಯಿ ಚಟ್ನಿ, ಇತ್ಯಾದಿ) ನೀರು ಬೆರೆಸದೇ ಒರಳುಕಲ್ಲಿನಲ್ಲಿ ರುಬ್ಬಿ ತಯಾರಿಸಿದ್ದು ಏನಾದರೂ ಉಳಿದರೆ, ಅದನ್ನು ಮಾರನೆಯ ದಿವಸ ಬಾಣಲೆಯಲ್ಲಿ ಒಂದು ಚಮಚೆ ಎಣ್ಣೆ ಹಾಕಿ ಹುರಿದರೆ ಆಗ ಅದು ಚಟ್ನಿಯ ಪುಡಿ! ಬಹುತೇಕ ನಾವು ಗಡಿಬಿಡಿಯ ಚಟ್ನಿ ಮಾಡುವುದರಿಂದಾಗಿ ಮಿಕ್ಸಿಯನ್ನೇ ಬಳಸುತ್ತೇವೆ. ಸ್ವಲ್ಪ ನೀರು ಹಾಕಿಯೇ ತೀರುತ್ತೇವೆ; ಇಲ್ಲದಿದ್ದರೆ ಅದು ನುರಿಯುವುದಿಲ್ಲ. ಇಂಥವು ಉಳಿದರೆ ಅದು ಬೇಗ ಹಳಸಿ ಹೋಗುತ್ತದೆ; ಮಾರನೆಯ ದಿನದ ತನಕ ಬಾಳುವುದಿಲ್ಲ. ಇನ್ನು ಚಟ್ನಿಪುಡಿ ಎಂಬುದು ಡ್ರೈ! ಕಡಲೆಬೇಳೆ, ಹುರಿಗಡಲೆ, ಕಡಲೆಕಾಯಿಬೀಜ ಇವುಗಳಿಂದ ತಯಾರಿಸಿದ್ದು ಚಟ್ನಿಪುಡಿ. ಆರೋಗ್ಯಕ್ಕೆ ಒಳ್ಳೆಯದೆಂದು ಕರಿಬೇವಿನ ಚಟ್ನಿಪುಡಿಯನ್ನೂ ಬಳಸುತ್ತಾರೆ. ಇವನ್ನು ದೀರ್ಘಕಾಲ ಇಟ್ಟು ಬಳಸಬಹುದು. ಆಂಧ್ರದ ಊಟದ ಮೆನುಗಳಲ್ಲಿ ಇವುಗಳದೇ ಪಾರುಪತ್ಯ. ಈಗ ಇಂಥ ಪುಡಿಗಳನ್ನು ಇಡ್ಲಿ, ದೋಸೆಗಳ ಮೇಲೆ ಚೆನ್ನಾಗಿಯೇ ಉದುರಿಸಿ ತಿನ್ನುವ ಪೋಡಿ ಇಡ್ಲಿ, ಪೋಡಿ ದೋಸಾ ಫೇಮಸ್ಸಾಗಿದೆ. ತೆಳುವಾದ ತಟ್ಟೆಯಿಡ್ಲಿಯ ಮೇಲೆ ಬಿಸಿಬಿಸಿ ತುಪ್ಪ ಸವರಿ (ಕೆಲವರು ಸುರಿದು!) ಅದರ ಮೇಲೆ ಇಂಥ ನೈಸಾದ ಚಟ್ನಿಪುಡಿಯನ್ನು ಉದುರಿಸಿ ತಿನ್ನುವ ಹೊಸ ಖಯಾಲಿ. ಇನ್ನು ಮಸಾಲೆ ದೋಸೆಗೆ ಸವರುವ ಕೆಂಪುಚಟ್ನಿಯದೇ ಬೇರೆ ವಿಚಾರ. ಬೆಳ್ಳುಳ್ಳಿ ಬೆರೆಸಿರುತ್ತಾರೆಂಬ ಕಾರಣಕ್ಕೆ ನನ್ನಂಥ ಕೆಲವರು ನಿಷೇಧಿಸುವುದೂ ಉಂಟು.
ಒಟ್ಟಿನಲ್ಲಿ ಚಟ್ನಿಪುಡಿಗಳ ವೈವಿಧ್ಯವು ನಮ್ಮನ್ನು ಬೆರಗುಗೊಳಿಸುವಂಥದು. ಹಲಸಿನ ಬೀಜವನ್ನು ಪುಡಿ ಮಾಡಿಕೊಂಡು ಚಟ್ನಿಪುಡಿಯನ್ನು ತಯಾರಿಸುತ್ತಾರಂತೆ. ಕೆಲವರು ಚಟ್ನಿಪುಡಿಯ ತಯಾರಿಕೆಗೆ ಸ್ವಲ್ಪ ಉದ್ದಿನಬೇಳೆ ಮತ್ತು ಕರಿಮೆಣಸು ಸೇರಿಸುವರು. ಇನ್ನು ಒಣಕೊಬ್ಬರಿ ಇರಲೇಬೇಕು. ಇದು ಘಾಟಿನ ಅಂಶವನ್ನು ಇಲ್ಲವಾಗಿಸುವ ಉಪಾಯ. ಒಗ್ಗರಣೆ ಬೆರೆಸದೇ ಹಾಗೆಯೇ ಇಟ್ಟರೆ ಬಹಳ ಕಾಲ ಬರುತ್ತದೆ. ಬೇಕಾದಾಗ ಸ್ವಲ್ಪ ಪ್ರಮಾಣಕ್ಕೆ ಸಾಸುವೆ, ಇಂಗು ಒಗ್ಗರಣೆ ಕೊಟ್ಟರೆ ತಾಜಾ ಆಗುತ್ತದೆ. ದಿಢೀರನೆ ಬೇಕಾದಾಗ ಇದು ಆಪತ್ಬಾಂಧವ. ಜೊತೆಗೆ ಇದು ಸರ್ವಾಂತರ್ಯಾಮಿ. ಅನ್ನಕ್ಕೂ ಕಲೆಸಿಕೊಳ್ಳಬಹುದು. ದೋಸೆ ಇಡ್ಲಿಗೂ ಸೈ, ಘಮ್ಮೆನ್ನುವ ಚಟ್ನಿಪುಡಿ ಮತ್ತು ಗಟ್ಟಿ ಮೊಸರು ಇದ್ದರೆ ಚಲ್ತಾ ಹೈ! ಉಪ್ಪಿಟ್ಟು, ಕಲಸನ್ನಗಳು ಸಪ್ಪೆ ಎನಿಸಿದರೆ ಇದು ಸಹಾಯಕ. ಮೊಸರನ್ನಕ್ಕಂತೂ ಉಪ್ಪಿನಕಾಯಿಗೆ ಪರ್ಯಾಯ. ಅಧಿಕ ರಕ್ತದೊತ್ತಡ ಇರುವವರು ಉಪ್ಪಿನಕಾಯಿ ನಿಷೇಧಿಸುವುದರಿಂದಾಗಿ ಇದು ಅವರಿಗೆ ಪ್ರಿಯ. ಬಿಳಿಯನ್ನಕ್ಕೆ ಚಟ್ನಿಪುಡಿಯನ್ನು ಕಲೆಸಿಕೊಂಡು ತಿನ್ನುವುದೂ ಒಂದು ಕಲೆ. ಅನ್ನ ಹಬೆಯಾಡುತ್ತಿರಬೇಕು; ಆದರೆ ತೀರಾ ಮುದ್ದೆಯಾಗದೇ ಉದುರುದುರಾಗಿರಬೇಕು. ಮೊದಲಿಗೆ ಒಂದು ಚಮಚೆ ಶುದ್ಧ ಕಡಲೆಕಾಯಿ ಎಣ್ಣೆಯನ್ನು ತಟ್ಟೆಯಲ್ಲಿ ಹರವಿದ ಅನ್ನಕ್ಕೆ ಹಾಕಿಕೊಂಡು (ಸಾಸುವೆ, ಉದ್ದಿನಬೇಳೆಯ ಒಗ್ಗರಣೆ ಇದ್ದರೆ ಇನ್ನೂ ಮೇಲು) ಕಲೆಸಬೇಕು. ಆನಂತರ ಒಂಚೂರು ಉಪ್ಪು ಮತ್ತು ತೆಂಗಿನ ತುರಿಯನ್ನು ಹಾಕಿ ಮತ್ತೆ ಕಲೆಸಬೇಕು. ಇದು ಹದವಾದ ಮೇಲೆ ಚಟ್ನಿಪುಡಿಯನ್ನು (ತರಿತರಿಯಾಗಿದ್ದರೆ ಅದರ ಆಸ್ವಾದವೇ ಬೇರೆ) ಹಾಕಿಕೊಂಡು ಮತ್ತೆ ಕಲೆಸಬೇಕು. ಹೀಗೆ ಕೊನೆಯ ಬಾರಿ ಕಲೆಸುವಾಗ ಮೂರು ಚಮಚೆಯಷ್ಟು ತಿಳಿಸಾರನ್ನು ಹಾಕಿಕೊಳ್ಳಬೇಕು. ಕೈಯ ಬೆರಳುಗಳಿಗೆ ಅಂಟಬಾರದು! ಇದು ಚಟ್ನಿಪುಡಿಯನ್ನವು ಸೊಗಸಾಗಿ ಕಲೆಸಿದ್ದರ ಮತ್ತು ಎಲ್ಲವನ್ನೂ ಪ್ರಮಾಣಬದ್ಧವಾಗಿಸಿದ್ದರ ದ್ಯೋತಕ. ಅನ್ನದ ಹದ, ಎಣ್ಣೆಯ ಹದ, ಚಟ್ನಿಪುಡಿಯ ಹದ, ಸಾರಿನ ಹದ – ಈ ಎಲ್ಲವೂ ಯಾವುದೋ ಒಂದು ಸೂತ್ರಕ್ಕೆ ಬದ್ಧವಾಗಿ ಕಲೆ ಹಾಕಿದ ಮತ್ತು ಕಲೆಯಾಗಿಸಿದ್ದರ ಪ್ರತೀಕ! ಹೀಗೆ ತಯಾರಿಸಿಕೊಂಡದ್ದನ್ನು ಉಂಡೆ ಕಟ್ಟಿ, ಹಪ್ಪಳ, ಸಂಡಿಗೆ, ಮಜ್ಜಿಗೆ ಮೆಣಸಿನಕಾಯಿಯೊಂದಿಗೆ ನಂಚಿಕೊಂಡು ತಿನ್ನುತ್ತಿದ್ದರೆ ಆಹಾ! ಇಂದ್ರನ ಅಮರಾವತಿಯಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿಹ ಅಪ್ಸರೆಯರ ಸಮೂಹಕ್ಕೆ ಇದರ ಜಾಡು ಗೊತ್ತಾಗಿ ‘ಇದು ನಿಜವಾದ ರಸಾನಂದ’ ವೆಂದು ಲಗ್ಗೆಯಿಡುವುದು ಖಂಡಿತ. ಅವರು ಹುಡುಕಿಕೊಂಡು ಬರುವ ಮೊದಲೇ ನಾವು ಇಂಥ ಸುಖಾಸ್ವಾದವನುಂಡು ಮಲಗಿ ಬಿಡುವುದು ಎಲ್ಲ ರೀತಿಯಿಂದಲೂ ಸೂಕ್ತ! ಅಂದರೆ ಚಟ್ನಿಪುಡಿಯು ಕೇವಲ ಒಣ ಬೇಳೆಗಳ ಹುಡಿಯಲ್ಲ; ಅದರ ಮಹತ್ತು ಮತ್ತು ಮೆಹನತ್ತುಗಳ ಸಾಮ್ರಾಜ್ಯವೇ ಬೇರೆ! (ಆದರೆ ಇದರ ಒಂದು ಅಡ್ಡ ಪರಿಣಾಮವೆಂದರೆ, ಸ್ವಲ್ಪ ದಿವಸಗಳಾದ ಮೇಲೆ ಮುಗ್ಗುಲು ವಾಸನೆ ಬರಲಾರಂಭಿಸುವುದು. ಇದಕ್ಕೊಂದು ಉಪಾಯವಿದೆ. ಚಟ್ನಿಪುಡಿಗೆ ಬಳಸುವ ಒಣಕೊಬ್ಬರಿಯನ್ನು ಬಿಸಿಲಿನಲ್ಲಿಟ್ಟು ಇನ್ನೊಮ್ಮೆ ಒಣಗಿಸಿ, ಬಳಸಬೇಕು.)
ಇನ್ನು ದೂರದ ಊರು, ದೇಶಗಳಲ್ಲಿ ಇರುವ ಮಕ್ಕಳಿಗೆ ಅಮ್ಮಂದಿರು ಮಾಡಿ ಕಳಿಸುವ ಲೋಕೈಕ ರೆಸಿಪಿ! ಪ್ರಯಾಣ, ಪ್ರವಾಸಕಾಲಕ್ಕೆ ಇದು ಬಹಳ ಮುಖ್ಯ. ಎಲೆಕ್ಷನ್ ಡ್ಯೂಟಿಗೆ ಹೋಗುವಂಥ ಸಂದರ್ಭದಲ್ಲಿ ಚಪಾತಿ, ರೊಟ್ಟಿಗೆ ಇದೇ ಸೂಕ್ತ ವ್ಯಂಜನ. ಕೆಡುವುದಿಲ್ಲ; ಜಿಡ್ಡು ಜಾರಿ ಡಬ್ಬಿಯಿಂದಾಚೆ ಇಣುಕುವುದಿಲ್ಲ; ಇನ್ನೊಬ್ಬರೊಂದಿಗೆ ಸುಲಭವಾಗಿ ಹಂಚಿಕೊಂಡು ತಿನ್ನಲು ಹೇಳಿ ಮಾಡಿಸಿದ್ದು. ಅಂಗಡಿಯ ಮಾರಿಕೆಯ ಚಟ್ನಿಪುಡಿಗಳಲ್ಲಿ ಘಾಟಿನ ಅಂಶವೇ ಹೆಚ್ಚು. ಏಕೆಂದರೆ ತಿಂಗಳುಗಟ್ಟಲೆ ಕಾಪಾಡುವ ಸಲುವಾಗಿ ಒಣಕೊಬ್ಬರಿ ಮತ್ತು ಸಾಸುವೆ ಒಗ್ಗರಣೆಯನ್ನು ತೋರದೇ ಒಣಪುಡಿಯನ್ನೇ ಮಾರಾಟ ಮಾಡುವುದುಂಟು. ಅಂಥವನ್ನು ಬಳಸುವಾಗ ಮನೆಗೆ ತಂದು ಸ್ವಲ್ಪ ರಿಪೇರಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮೆಣಸಿನಪುಡಿಯನ್ನೇ ಬಾಯಿಗೆ ಹಾಕಿಕೊಂಡಂತಾಗುತ್ತದೆ. ಚಟ್ನಿಪುಡಿಗಳ ಒಂದೇ ಒಂದು ಡೈರೆಕ್ಟ್ ಎಫೆಕ್ಟೆಂದರೆ ಇದು ಒಣಪದಾರ್ಥವಾಗಿದ್ದು, ನಾರಿನ ಅಂಶ (ಫೈಬರ್) ಇರುವುದಿಲ್ಲ. ಹಾಗಾಗಿ ಇಂಥವನ್ನು ಊಟತಿಂಡಿಯಲ್ಲಿ ಬಳಸುವಾಗ ಹಣ್ಣು, ತರಕಾರಿಗಳನ್ನು ಸಹ ಜೊತೆಗೆ ಸೇವಿಸಬೇಕು. ಇಲ್ಲದಿದ್ದರೆ ಪಾಯಿಖಾನೆ ಕಷ್ಟವಾಗಿ, ಕ್ರಮೇಣ ಅದು ಮೂಲವ್ಯಾಧಿಗೆ ತಿರುಗಬಹುದಾದ ಅಪಾಯವಿದೆ.
ನಾನು ಒಂಬತ್ತನೇ ತರಗತಿಯಲ್ಲಿದ್ದಾಗ ಹುಣಸೂರಿನ ನಮ್ಮ ಫುಟ್‌ಬಾಲ್ ತಂಡದಲ್ಲಿದ್ದ ಅಜಯ್, ವಿಜಯ್ ಎಂಬ ಇಬ್ಬರು ಅವಳಿ ಅಣ್ಣತಮ್ಮಂದಿರು. ಅವರ ತಂದೆ ಕಾಫಿಪುಡಿ ಅಂಗಡಿ ನಡೆಸುತ್ತಿದ್ದರು. ತುಸು ಚಿಕ್ಕವನಾದ ವಿಜಯ್‌ಗೆ ಚಟ್ನಿಪುಡಿ ಕಂಡರೆ ಬಲು ವ್ಯಾಮೋಹ. ಹಾಗಾಗಿ ಆ ಅಣ್ಣತಮ್ಮಂದಿರ ವಿಚಾರ ಬಂದಾಗ, ನಮ್ಮ ಸಹಪಾಠಿಗಳು ಕಾಫಿಪುಡಿನೋ, ಚಟ್ನಿಪುಡಿನೋ? ಎಂದು ಕೇಳಿ ಖಚಿತ ಪಡಿಸಿಕೊಳ್ಳುತ್ತಿದ್ದರು. ಹೀಗೆ ಚಟ್ನಿಪುಡಿಯು ಒಬ್ಬನ ನಿಕ್‌ನೇಮ್ ಆಗಿ ತನ್ನ ಸ್ಥಾನಮಾನವನ್ನು ಹೆಚ್ಚು ಮಾಡಿಕೊಂಡಿತ್ತು! ಶಿವಣ್ಣನ ಕಡ್ಡಿಪುಡಿ ಎಂಬ ಸಿನಿಮಾ ನೋಡುವಾಗ ನನಗೆ ಇದೆಲ್ಲಾ ನೆನಪಾಗಿತ್ತು. ಒಟ್ಟಿನಲ್ಲಿ ಪುಡಿಯು ಕೇವಲ ಪುಡಿಯಲ್ಲ; ಅದು ಉಳಿದವುಗಳೊಂದಿಗೆ ಸೇರಿಕೊಂಡು ಇಡಿಯಾಗುವುದನ್ನು ಬಲ್ಲದು! “ಅಲ್ಪ ನಾನು ಎಂದು ಕುಗ್ಗಿ ಮುದುಗ ಬೇಡವೋ: ಓ ಅಲ್ಪವೆ, ಅನಂತದಿಂದ ಗುಣಿಸಿಕೊ; ನೀನ್ ಅನಂತವಾಗುವೆ!” ಎಂದಿದ್ದಾರೆ ಕವಿ ಕುವೆಂಪು ಅವರು. ಈ ಸಾಲು ನೆನಪಾದಾಗಲೆಲ್ಲಾ ನನಗೆ ಚಟ್ನಿಪುಡಿ ಮೊದಲಾದ ಪುಡಿಗಳ ಸಾಮ್ರಾಜ್ಯವೇ ಕಣ್ಣ ಮುಂದೆ ಸುಳಿದು, ‘ನಾವು ಮುನ್ನೆಲೆಗೇ ಬರಲಿಲ್ಲವಲ್ಲ ಎಂದು ಕೊರಗದಿರಿ. ನಿಮ್ಮನ್ನೂ ಆದರಿಸುವವರು ಲೋಕದಲ್ಲಿದ್ದಾರೆ. ಮಹತ್ತಾದುದೊಂದಿಗೆ ಬೆರೆತು ಬೃಹತ್ತಾಗುವ ಅವಕಾಶವಿದೆ. ನಿಮಗಾಗಿ ಅನ್ನ, ಮೊಸರು ಕಾಯುತ್ತಿವೆ. ಅದರೊಂದಿಗೆ ಬೆರೆತು ಭವಿಸಿ’ ಎಂದು ಸಾಂತ್ವನಿಸಬೇಕೆನಿಸುತ್ತದೆ. ಯಾವುದರಿಂದ ಬೆರೆಯುತ್ತದೆಯೋ ಅದೇ ಆಗಿ ಬಿಡುವ ಚೋದ್ಯವನ್ನು ಉಪ್ಪಿನಿಂದಲೂ ಸಕ್ಕರೆಯಿಂದಲೂ ಕಲಿಯಬೇಕು. ಹೀಗಾಗಿ ಸ್ವತಂತ್ರವಾಗಿಯೂ ಬದುಕುವ ಅರ್ಹತೆ ಇರುವ, ಎಲ್ಲದರೊಂದಿಗೂ ಸಹಬಾಳುವೆ ನಡೆಸಲು ಬರುವ ಊಟದಲ್ಲಿ ಆಪತ್ತಿನ ನೆಂಟನೂ ಸುಗಂಧಕೆ ಬಂಟನೂ ಆಗಿರುವ ಚಟ್ನಿಪುಡಿಯು ಬದುಕಿನ ಅಮೂಲ್ಯಪಾಠವನ್ನು ಹೇಳುವಂತಿದೆ.
–ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ಅಭಭ್ಬಾ…ನೀವು ಹೇಳಿರುವ ಬಗೆಬಗೆಯ ಚಟ್ನಿ ಪುಡಿ ರಸಿಪಿ ಜೊತೆಯಲ್ಲಿ.. ಪೌರಾಣಿಕ ಕಥೆಗಳನ್ನು ತಳಕು ಹಾಕಿಕೊಂಡು ಬರೆದಿರುವ ಪುಡಿಗಳ ಸಾರ್ಮಾಜ್ಯ…ಸೂಪರ್.. ಮಂಜುಸಾರ್
ಚಟ್ನಿಪುಡಿಯ ಪುರಾಣವನ್ನು ಮೆಚ್ಚಿದ ನಿಮಗೆ ಧನ್ಯವಾದ ಮೇಡಂ….
ಪುಡಿಗಳ ಕುರಿತಾದ ಲೇಖನ ರಸಧೂತಗಳನ್ನು ಬಡಿದೆಬ್ಬಿಸುವಂತಿದೆ ಹಾಗೇ ಪೌರಾಣಿಕ ಕಥೆಗಳು ಮುದ ನುವಂತಿದೆ.
ರಸದೂತಗಳನು ಬಡಿದೆಬ್ಬಿಸಿದರೆ ಬರೆದದ್ದು ಸಾರ್ಥಕ ಮೇಡಂ
ನನ್ನುದ್ದೇಶವೂ ಅದೇ !
ಪುಡಿಗಳ ಸಾಮ್ರಾಜ್ಯದಲ್ಲಿ, ಅವುಗಳ ಮೌಲ್ಯಯುತ ಬಳಕೆಗಳನ್ನು ತನ್ನಜ್ಜಿಯ ಕೈ ತುತ್ತಿನೊಂದಿಗೆ ಹಂಚಿಕೊಂಡ ಪರಿ ಅನನ್ಯ! ಚಟ್ನಿ ಪುರಾಣವಂತೂ ಸೂಪರ್.
ನನ್ನಜ್ಜಿಯ ಕೈ ತುತ್ತು !
ಅದೊಂದು ದಿವ್ಯಾನುಭವ ; ಇದನ್ನು ಕುರಿತೇ ಲೇಖನ ಬರೆಯುವಷ್ಟಿದೆ!!
ನಿಮ್ಮ ಹೃದಯವೈಶಾಲ್ಯದ ಪ್ರತಿಕ್ರಿಯೆ ನನ್ನನು ಬಾಲ್ಯಕೆ ದೂಡಿತು. ಧನ್ಯವಾದ ಮೇಡಂ
ಶಿವ ಮತ್ತು ವಿಷ್ಣು ಕುಟುಂಬದ ಸಾಮರಸ್ಯ, ಅರ್ಜುನನು ಅಮರಾವತಿಯಿಂದ ಚಟ್ನಿಪುಡಿ ರೆಸಿಪಿ ತಂದಿದ್ದು, ಅಜ್ಜಿಯ ಜಾಣತನದ ಚಟ್ನಿಪುಡಿ ಅನ್ನದ ಊಟೋಪಚಾರವೆಲ್ಲಾ ಮಕ್ಕಳ ಹಸಿವೆ ನೀಗಿಸುವುದರ ಜೊತೆಗೆ, ಅವರ ಕಲ್ಪನಾಶಕ್ತಿಗೆ ಪುಷ್ಠಿ ನೀಡಿದ್ದು, ವಿಜಯ್ ಚಟ್ನಿಪುಡಿಯ ಅಂಕಿತನಾಮದೊಂದಿಗೆ ಸಾಕಾರಗೊಂಡಿದೆ. ವ್ಯಂಜನದ ತಳಕು ಮಾನವ ಸಂಸ್ಕೃತಿಯೊಂದಿಗಿರುವ ಕುರುಹು, ಈ ಲೇಖನ.
ಬರಹ ಮಸ್ತಿಕಕ್ಕೆ ಮಾತ್ರವಲ್ಲ ಜಿವ್ಹೆಗೂ ಮುದನೀಡಿತು, ಅಭಿನಂದನೆಗಳು, ಸರ್.
ಅದ್ಭುತವಾದ ಲೇಖನ ಗುರುವರ್ಯ ಸವಿದೆ ಆನಂದಿಸಿದೆ ಧನ್ಯವಾದ
ಅದ್ಭುತವಾದ ಲೇಖನ ಗುರುವರ್ಯ ಸವಿದೆ ಆನಂದಿಸಿದೆ
ಅದ್ಬುತ ಸಾರ್.. ಚಟ್ನಿ ಪುಡಿಗೆ ಸಂಬಂಧಿಸಿದ ಲಲಿತ ಪ್ರಬಂಧವು ಬಲಿತ ಪ್ರಬಂಧವಾಗಿದೆ. ನಮಗೆ ಮಾಹಿತಿ ಕಣಜವನ್ನು ನೀಡುವ ನಿಮ್ಮ ಕಾಯಕಕ್ಕೆ ಶರಣು.. ಶರಣು..
ಮನೆಯವರೆಲ್ಲಾ ಊರಿಗೆ ಹೋದಾಗ ಚಟ್ನಿ ಪುಡಿ -ಉಪ್ಪಿನಕಾಯಿ ಅನ್ನ ಮೋಸರಿನ ಜೊತೆ ಮೃಸ್ಟಾನ್ನ. ನಿಮ್ಮ ಪುಡಿ ಗಳ ಸಾಮ್ರಾಜ್ಯ ಪ್ರಬಂಧ ನಮಗೆ ಮೃಸ್ಟಾನ್ನ