ಪ್ರಕೃತಿ-ಪ್ರಭೇದ

ಇದೇನು ಗೊತ್ತೇ…??

Share Button


ಚಿಕ್ಕಂದಿನಲ್ಲಿ ಮನೆಯ ಹಿರಿಯರೊಂದಿಗೆ ಗುಡ್ಡ, ತೋಟದಲ್ಲಿ ಅಡ್ಡಾಡುತ್ತಿದ್ದಾಗ ಅವರು ಕೆಲವು ಹಣ್ಣುಗಳನ್ನು ಗಿಡಗಳಿಂದ ಕೊಯ್ದು, ” ನೋಡು, ಇದನ್ನು ತಿನ್ನು. ಶರೀರಕ್ಕೆ ಬಹಳ ಒಳ್ಳೆಯದು” ಎಂದು ಕೈಗೆ ಕೊಡುತ್ತಿದ್ದರು. ಏನು, ಎತ್ತ ಎಂದು ಯೋಚಿಸದೆ ಗುಳಂನೆ ತಿಂದು ಖುಷಿಪಡುತ್ತಿದ್ದೆ. ಆ ಬಳಿಕ, ಎಲ್ಲಿ ಕಂಡರೂ ಕಿತ್ತು ತಿನ್ನುತ್ತಿದ್ದೆ…ಗೆಳತಿಯರಿಗೂ ಪಾಲು ಸಿಗುತ್ತಿತ್ತು ಬಿಡಿ. ನನಗೆ ಮಕ್ಕಳಾದ ಮೇಲೆ, ಅವಕಾಶ ಸಿಕ್ಕಿದಾಗ ಅವರಿಗೂ ಅವುಗಳ ಪರಿಚಯ ಮಾಡಿಸಿದ್ದಾಯಿತು. ಅವುಗಳಲ್ಲಿ, ಕುಂಟಾಲ, ನೇರಳೆ, ಮುಳ್ಳಣ್ಣು, ಕಿಸ್ಕಾರ, ಅಬ್ರಿಕೆ, ರೆಂಜೆ, …ಇತ್ಯಾದಿ ಹಣ್ಣುಗಳ ರುಚಿಯನ್ನು ಮರೆಯುವ ಹಾಗೇ ಇಲ್ಲ!

ಪ್ರಸ್ತುತ ನಾವು ವಾಸವಾಗಿರುವ ಮನೆಯ ಕೈತೋಟದಲ್ಲಿ ಅಪರೂಪಕ್ಕೆ ಅಂತಹ ಒಂದು ಗಿಡ ಹುಟ್ಟಿ ಹಣ್ಣು ಬಿಟ್ಟಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಅದನ್ನು ನಮ್ಮ ಆಡುಭಾಷೆಯಲ್ಲಿ ಅಜ್ಜಿ ಪುಟ್ಳಕ್ಕ ಎನ್ನುವುದು ಗೊತ್ತು. ನಮ್ಮ ಗೂಗಲ್ ಮಾಮನ ಭಂಡಾರದಲ್ಲಿ ಸಿಗದ ಮಾಹಿತಿ ಇಲ್ಲ ಅಲ್ಲವೇ? ಕುತೂಹಲದಿಂದ ಇದರ ಬಗ್ಗೆ ಜಾಲಾಡಿದಾಗ ತಿಳಿದ ವಿಷಯವು ಅತ್ಯಂತ ಕುತೂಹಲ ಮತ್ತು ಆಸಕ್ತಿದಾಯಕವಾಗಿದೆ.

ತಂಪು ಜಾಗದಲ್ಲಿ, ಗದ್ದೆ ಬದುಗಳಲ್ಲಿ ಸಾಮಾನ್ಯವಾಗಿ ಬೆಳೆಯುವ, ಅತ್ಯಂತ ಮೃದು ಕಾಂಡದ ಈ ಗಿಡವನ್ನು ಬಯಲುಸೀಮೆಯಲ್ಲಿ ಗದ್ದೆ ಹಣ್ಣಿನ ಗಿಡ, ನೆಲಚೆರಿ, ಗುಮ್ಮಟ್ಟೆ ಗಿಡ ಇತ್ಯಾದಿ ಹೆಸರಿನಿಂದ ಕರೆಯುವರು. ಆಂಗ್ಲ ಭಾಷೆಯಲ್ಲಿ ಗ್ರೌಂಡ್ ಬೆರ್ರಿ ಅಥವಾ ಗೂಸ್ ಬೆರ್ರಿ(Ground berry / Goose berry) ಎನ್ನುವರು. ನಮ್ಮ ದೇಶ ಮಾತ್ರವಲ್ಲದೆ, ಮಲೇಶಿಯಾ, ಆಸ್ಟ್ರೇಲಿಯಾಗಳಲ್ಲೂ ಇದನ್ನು ಕಾಣಬಹುದು.

ಈ ಹಣ್ಣು ನಗರಗಳಲ್ಲಿ ಕೆಲವು ಕಡೆ ಮಾರಾಟ ಮಾಡುತ್ತಾರಾದರೂ ಬೆಲೆ ಬಹಳ ತುಟ್ಟಿ  ಬೆಂಗಳೂರಿನಂತಹ ಮಹಾನಗರದಲ್ಲಿ 100 ಗ್ರಾಂಗೆ ₹150/-..!!! ಅಮೆರಿಕದಲ್ಲೂ ಈ ಹಣ್ಣು ಸಿಗುವುದೆಂದು ತಿಳಿಯಿತು. ಆದರೆ ಅದರ ಬೆಲೆ ಕೇಳಿದರೆ ತಲೆ ಸುತ್ತಿ ಬೀಳುವುದು ಗ್ಯಾರಂಟಿ! 100 ಗ್ರಾಂಗೆ ₹345/-..!!!

ಈ ಹಣ್ಣಿನಲ್ಲಿ ಮುಖ್ಯವಾಗಿ, ಕಣ್ಣಿನ ಉತ್ತಮ ದೃಷ್ಟಿಗಾಗಿ ಅಗತ್ಯವಿರುವ ವಿಟಮಿನ್ ಎ, ಚರ್ಮದ ಆರೋಗ್ಯಕ್ಕಾಗಿ ಬೇಕಾಗುವ ವಿಟಮಿನ್ ಸಿ, ಹೇರಳವಾಗಿದ್ದು, ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಒಳ್ಳೆಯ ಆರೋಗ್ಯಕರ ನಿದ್ದೆಗೆ ಇದು ಸಹಕಾರಿ. ಪುಟ್ಟ ಟೊಮೆಟೊದಂತೆ ಕಾಣುವ ಇದು ತೆಳುವಾದ ಹೊರ ಕವಚ ಹೊಂದಿದ್ದು,  ಗಿಡದಲ್ಲಿ ಗಂಟೆಯಂತೆ ನೇತಾಡಿಕೊಂಡು ಇರುವುದನ್ನು ನೋಡಲು ಚಂದ. ಇದರ ಹೊರ ಕವಚವು ಬಹಳ ತೆಳುವಾಗಿದ್ದು ವಿಷಕಾರಿಯಾಗಿದೆ. ಆದ್ದರಿಂದ ಪಶುಗಳು ಇದನ್ನು ತಿನ್ನುವುದಿಲ್ಲ. ಪುಟ್ಟ ಮಕ್ಕಳು ಬಳಸುವಾಗ ಬಹಳ ಜಾಗ್ರತೆ ವಹಿಸಬೇಕಾಗುತ್ತದೆ. ಮೊದಲಿಗೆ ಹಸಿರು ಬಣ್ಣ ಹೊಂದಿರುವ ಕಾಯಿಯು ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಸ್ವಲ್ಪ ಹುಳಿ ಮಿಶ್ರಿತ ಸಿಹಿ ರುಚಿ ಇರುವ ಇದರಲ್ಲಿ ಬೇರೆ ಬೇರೆ ತಳಿಗಳಿದ್ದು,ಕೆಂಪು ಬಣ್ಣದ ಹಣ್ಣುಗಳೂ ಇವೆಯಂತೆ. ಪೂರ್ತಿ ಸಸ್ಯವನ್ನು ಆಯುರ್ವೇದ ಚಿಕಿತ್ಸೆಯಲ್ಲಿ ತಲೆನೋವು, ಕಿವಿನೋವು, ಕೀಲುನೋವು ಇತ್ಯಾದಿಗಳ ನಿವಾರಣೆಗೆ ಉಪಯೋಗಿಸುವರು. ಹೆಚ್ಚು ತಿಂದರೆ ಶೀತವಾಗುವ ಸಂಭವವಿದೆ.

ಇಷ್ಟೆಲ್ಲಾ ಆರೋಗ್ಯಕರವಾದ ಉಪಯೋಗವಿರುವ ಹಣ್ಣುಗಳು ಪ್ರಕೃತಿಯಲ್ಲಿ ಸಹಜವಾಗಿ ಲಭ್ಯವಿರುವುದು ಇಂದು ಹೆಚ್ಚಿನವರಿಗೆ ತಿಳಿದಿಲ್ಲ. ಶರೀರದ ಆರೋಗ್ಯ ವರ್ಧನೆಗೆ ಸಹಕಾರಿಯಾಗುವ ಇಂತಹ ಹಣ್ಣುಗಳ ಪರಿಚಯವನ್ನು  ಮಕ್ಕಳಿಗೂ ಮಾಡಿಸುವುದು ಬ಼ಹಳ ಸೂಕ್ತ…ಅಲ್ಲವೇ?

– ಶಂಕರಿ ಶರ್ಮ

10 Comments on “ಇದೇನು ಗೊತ್ತೇ…??

  1. ಮಾಹಿತಿಪೂರ್ಣ ಲೇಖನ. ಮಕ್ಕಳಿಗಿರಲಿ, ಇದರ ಪರಿಚಯ ನಮಗೆ ಮಾಡಿಕೊಟ್ಟ ನಿಮಗೆ ವಂದನೆಗಳು.

    1. ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ಪದ್ಮಾ ಮೇಡಂ.

    1. ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ನಾಗರತ್ನ ಮೇಡಂ

  2. ಗೊತ್ತಿರಲಿಲ್ಲ. ತಿಳಿದ ಹಾಗಾಯಿತು.
    ಹಣ್ಣುಗಳದೇ ಒಂದು ಲೋಕ ; ಒಂಥರಾ ವಿಶ್ವಕೋಶ.
    ಪರಿಚಯಿಸಿದ ನಿಮಗೆ ಧನ್ಯವಾದ. ಎಲ್ಲ ವಿಚಾರಗಳನ್ನೂ
    ಒಂದೆಡೆ ಸೇರಿಸಿಕೊಟ್ಟ ಹಿತಮಿತ ಶೈಲಿ. ಅದೇ ಖುಷಿ.
    ಧನ್ಯವಾದಗಳು.

    1. ಓದಿ ಸ್ಪಂದಿಸಿದ ನಿಮಗೆ ಹೃತ್ಪೂರ್ವಕ ನಮನಗಳು ಸರ್.

  3. ಈ ಹಣ್ಣಿನೊಂದಿಗೆ ನನ್ನ ಬಾಲ್ಯದ ನೆನಪು ಥಳಕು ಹಾಕಿಕೊಂಡಿದೆ. ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ಅಯೋಧ್ಯೆಯ ಬೀದಿಯಲ್ಲಿ ನೋಡಿ, ಖರೀದಿಸಿ ತಿಂದೆವು. ಚೆಂದದ ಬರಹ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *