ಕಾದಂಬರಿ : ತಾಯಿ – ಪುಟ 22

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಮರುದಿನ ಬೆಳಿಗ್ಗೆ ರಾಜಲಕ್ಷ್ಮಿ ಮೋಹನ್‌ಗೆ ಕರೆಮಾಡಿ “ನೀನು ಈಗಾಗಲೇ ಬಾ. ನಾನು ಭಾಸ್ಕರಂಗೂ ಫೋನ್ ಮಾಡ್ತೀನಿ. ಸ್ವಲ್ಪ ಮಾತಾಡುವುದಿದೆ.”
“ಆಗಲಿ ಅಮ್ಮ. ನಾನೇ ಭಾಸ್ಕರನ್ನ ಕರೆದುಕೊಂಡು 12 ಗಂಟೆ ಹೊತ್ತಿಗೆ ರ‍್ತೀನಿ. ಚಿನ್ಮಯಿ, ಗೌರಮ್ಮ ಇಬ್ಬರೂ ಇದ್ದರೆ ಒಳ್ಳೆಯದು.”
“ನೀವು ಎಲ್ಲಿಗೆ ಬರಬೇಕೂಂತ ನಾನೇ ಫೋನ್ ಮಾಡ್ತೀನಿ.”
“ಆಗಲಿ ಅಮ್ಮ.”

ರಾಜಲಕ್ಷ್ಮಿ ಡಾ|| ಜಯಲಕ್ಷ್ಮಿಗೆ ಫೋನ್ ಮಾಡಿ 12 ಗಂಟೆಯ ಹೊತ್ತಿಗೆ ತಾವೆಲ್ಲಾ ಬರಬಹುದಾ?” ಎಂದು ಕೇಳಿದರು. ಜಯಲಕ್ಷ್ಮಿ ಒಪ್ಪಿದರು.
12-30ರ ಹೊತ್ತಿಗೆ ಎಲ್ಲರೂ ಡಾ|| ಜಯಲಕ್ಷ್ಮಿ ಮನೆಯಲ್ಲಿದ್ದರು.
“ಭಾಸ್ಕರ್ ಮೋಹನ ಕೆಲಸದ ವಿಷಯ ಹೇಳಿದ್ನಾ?”
“ಹೇಳಿದ್ದಾರೆ ಅಮ್ಮ. ನನಗೆ ಒಪ್ಪಿಗೆಯಿದೆ. ಆದರೆ….” ಎನ್ನುತ್ತಾ ಅವನು ಚಿನ್ಮಯಿ ಕಡೆ ನೋಡಿದ.
“ರಾಜಮ್ಮ ದಿನಾ ಓಡಾಡೋದು ಕಷ್ಟ ಅಲ್ವಾ?” ಎಂದರು ಗೌರಮ್ಮ.
“ನಿಮ್ಮನೆ ಪಕ್ಕದಲ್ಲೇ ಭಾಸ್ಕರಂಗೆ ಕೆಲಸ ಸಿಗುವವರೆಗೂ ಚಿನ್ಮಯೀನ್ನ ಕೊಂಚ ಹದ್ದುಬಸ್ತಿನಲ್ಲಿಟ್ಟುಕೊಳ್ಳಿ. ಮೋಹನ ಏಳಪ್ಪಾ ನನ್ನನ್ನು ಆಶ್ರಮದ ಹತ್ತಿರಬಿಡು….”
“ರಾಜಮ್ಮ ಹಾಗಲ್ಲ….”
“ಇನ್ನು ಹೇಗೆ? ಚಿನ್ಮಯಿ-ಭಾಸ್ಕರ ಬೇಗ ಮದುವೆಯಾಗಬೇಕೂಂದ್ರೆ ಭಾಸ್ಕರ ಕೆಲಸಕ್ಕೆ ಸೇರಲೇಬೇಕು. ನಂಜನಗೂಡು ತುಂಬಾ ದೂರಾನಾ? ಸಾವಿರಾರು ಜನ ದೂರ ದೂರ ಟ್ರಾವಲ್ ಮಾಡಿಕೊಂಡು ಕೆಲಸ ಮಾಡ್ತಿಲ್ವಾ? ನನಗೇ ಬುದ್ಧಿಯಿಲ್ಲ. ಎಲ್ಲರ ಸಮಸ್ಯೆ ನನ್ನ ತಲೆಯ ಮೇಲೆ ಹಾಕ್ಕೊಂಡು ಒದ್ದಾಡ್ತೀನಿ.”
“ರಾಜಮ್ಮ ತಪ್ಪಾಯ್ತು ಕ್ಷಮಿಸಿ. ನೀವು ನಮ್ಮ ಒಳ್ಳೆಯದಕ್ಕೇ ಹೇಳ್ತೀರಾಂತ ನನಗೆ ಗೊತ್ತು. ನೀವು ಹೇಳಿದ್ದಕ್ಕೆ ನಮ್ಮ ಒಪ್ಪಿಗೆಯಿದೆ. ಹೇಳಿಮ್ಮ.”

ರಾಜಲಕ್ಷ್ಮಿ ಅವರ ಹೊಸ ಕೆಲಸದ ಬಗ್ಗೆ ಹೇಳಿದರು. “ಗೌರಮ್ಮ ನಿಮಗೆ ಇಷ್ಟವಿರಲಿ ಇಲ್ಲದಿರಲಿ ನೀವು ಈ ಕೆಲಸ ಒಪ್ಪಿಕೊಳ್ಳಬೇಕು. ಆಗ ನೀವು ನಿಮ್ಮನೆಯವರು ಒಟ್ಟಿಗೆ ಇರಬಹುದು. ಆದರೆ ಒಂದು ತಿಂಗಳಲ್ಲಿ ನೀವು ನಮ್ಮ ವೃದ್ಧಾಶ್ರಮಕ್ಕೆ ಅಡಿಗೆಯವರನ್ನು ಹುಡುಕಿಕೊಡಿ. ಅವರಿಗೆ ನಮ್ಮಲ್ಲೇ ಇರಲು ಪರ‍್ಮಿಷನ್ ಕೊಡ್ತೀನಿ. ಇದರಿಂದ ಅವರಿಗೂ ಒಳ್ಳೆಯದಾಗಬೇಕು.”
ಗೌರಮ್ಮ ಪರಿಚಿತರಿಗೆಲ್ಲಾ ಹೇಳಿದರು. ಶ್ರೀರಂಗಪಟ್ಟಣದಲ್ಲಿ ಶೇಷಮ್ಮ ಎನ್ನುವ ವಿಧವೆ ಇದ್ದರು. ಮಕ್ಕಳಿರಲಿಲ್ಲ. ಆಕೆಗೆ ಅಂಗನವಾಡಿಯಲ್ಲಿ ಆಯಾ ಕೆಲಸ. ಆಕೆಯ ಅಣ್ಣ ಶ್ರೀರಂಗಪಟ್ಟಣದಲ್ಲಿ ಹೆಸರುವಾಸಿಯಾದ ಪುರೋಹಿತರು. ರಾಜಕಾರಣಿಗಳಿಗೆ, ಸಿನಿಮಾನಟರಿಗೆ ಬೇಕಾದವರು. ಶೇಷಮ್ಮ ನಾಲ್ಕು ಕಾಸು ಕೈಗೆ ಬರುತ್ತದಲ್ಲಾ ಎಂದು ಕೆಲಸಕ್ಕೆ ಸೇರಿದ್ದರು. ಆಗ ಆಕೆಗೆ 55 ವರ್ಷ ಎರಡು ವರ್ಷ ಕೆಲಸ ಮಾಡಿದ್ದರು. ಅವರಣ್ಣ-ಅತ್ತಿಗೆ ಇದ್ದಕ್ಕಿದ್ದಂತೆ ಕೆಲಸಕ್ಕೆ ಹೋಗಬೇಡ” ಎಂದು ಶುರು ಮಾಡಿದ್ದರು. ಕೆಲಸಕ್ಕೆ ಹೋಗದೆ ಮನೆಯಲ್ಲಿರಬಹುದಿತ್ತು. ಆದರೆ ಅವರಣ್ಣ ಸ್ಪಷ್ಟವಾಗಿ ಹೇಳಿದ್ದರು. “ಶೇಷು ನೀನು ಇನ್ನೆರಡು ತಿಂಗಳು ಕೆಲಸ ಮಾಡು. ಅಷ್ಟರಲ್ಲಿ ಬೇರೆ ಕೆಲಸ ಬೇರೆ ಊರಿನಲ್ಲಿ ಹುಡುಕಿಕೋ. ನಮ್ಮ ಮನೆಯಲ್ಲಿ ಇರೋದಾದರೆ ನೀನು ಮಡಿಯಾಗಲೇ ಬೇಕು. ಇಲ್ಲದಿದ್ದರೆ ಸಂಪ್ರದಾಯಸ್ಥನಾದ ನಾನು ತುಂಬಾ ಮಾತು ಕೇಳಬೇಕಾಗತ್ತೆ.”

ಗೌರಮ್ಮ ಶ್ರೀರಂಗಪಟ್ಟಣಕ್ಕೆ ಹೋದಾಗ ಶೇಷಮ್ಮ ಅವರನ್ನು ಭೇಟಿಯಾಗಿ ಎಲ್ಲಾ ವಿಚಾರ ಹೇಳಿ ತಮಗೊಂದು ಕೆಲಸ ಹುಡುಕಿಕೊಡಲು ಕೇಳಿದ್ದರು.
“ಶೇಷಮ್ಮ, ನಿಮ್ಮಣ್ಣ ಅಷ್ಟೊಂದು ಸಂಪ್ರದಾಯಸ್ಥರಾ?””
“ಹಾಗೇನಿಲ್ಲ. ಇದೆಲ್ಲಾ ನಮ್ಮತ್ತಿಗೆ ಚಿತಾವಣೆ. ನನಗಂತೂ ಅತ್ತಿಗೆಯ ಕೊಂಕುನುಡಿಗಳನ್ನು ಕೇಳಿ ಸಾಕಾಗಿದೆ. ದಯವಿಟ್ಟು ನನಗೊಂದು ಕೆಲಸ ಕೊಡಿಸಿ” ಎಂದು ಬೇಡಿದ್ದರು.
ಗೌರಮ್ಮ ತಾವೇ ಶ್ರೀರಂಗಪಟ್ಟಣಕ್ಕೆ ಹೋಗಿ ಶೇಷಮ್ಮನನ್ನು ಕರೆದು ತಂದು ಆಶ್ರಮದ ಕೆಲಸ ಕಾರ್ಯಗಳ ಪರಿಚಯ ಮಾಡಿಸಿದ್ದರು. ಶೇಷಮ್ಮ ಗೌರಮ್ಮನಿಗಿಂತ ಅಚ್ಚುಗಟ್ಟಾಗಿ ಕೆಲಸ ಮಾಡಬಲ್ಲರು ಎಂದು ರಾಜಲಕ್ಷ್ಮಿಗೆ ಅನ್ನಿಸಿತ್ತು.

ವೃದ್ಧಾಶ್ರಮದ ವ್ಯವಸ್ಥೆಯಾದ ನಂತರ ಗೌರಮ್ಮ ಮಗಳ ಮದುವೆಯನ್ನು ಒಂಟಿಕೊಪ್ಪಲ್ ದೇವಸ್ಥಾನದಲ್ಲಿ ಏರ್ಪಾಡುಮಾಡಿದರು. ಆತ್ಮೀಯರಾದ 20 ಜನ ನೆಂಟರಿಷ್ಟರನ್ನು ಕರೆದಿದ್ದರು. ಅದೇ ದಿನ ಸಾಯಂಕಾಲ ವೃದ್ಧಾಶ್ರಮದ ಮುಂದೆ ಶಾಮಿಯಾನ ಹಾಕಿ ರಿಸೆಪ್ಷನ್ ಮಾಡಿ ವೃದ್ಧಾಶ್ರಮದವರಿಗೆ, ಡಾ|| ಜಯಲಕ್ಷ್ಮಿ ದಂಪತಿಗಳಿಗೆ, ಮೋಹನ್ ಮನೆಯವರಿಗೆ ಊಟದ ಏರ್ಪಾಡು ಮಾಡಿದ್ದರು. ಗೌರಮ್ಮನ ಧಾರಾಳತನ ನೋಡಿ ರಾಜಲಕ್ಷ್ಮಿಗೆ ಆಶ್ಚರ್ಯವಾಗಿತ್ತು.
“ರಾಜಮ್ಮ, ಇದಕ್ಕೆಲ್ಲಾ ಕೃಷ್ಣವೇಣಿ, ಅವರ ಸೊಸೆ ತುಂಬಾ ಹಣದ ಸಹಾಯ ಮಾಡಿದ್ರಮ್ಮ. ನೀವು ಅವರ ಸಮಸ್ಯೆ ಪರಿಹರಿಸಿದ್ದಕ್ಕೆ ಅವರಿಗೆ ತುಂಬಾ ಸಂತೋಷವಾಗಿದೆ. ಈ ತಿಂಗಳಾದ ಮೇಲೆ ನಾನು ಅವರ ಮನೆಗೆ ಶಿಫ್ಟ್ ಆಗ್ತೀನಿ.”
“ಒಳ್ಳೆಯದು. ಶೇಷಮ್ಮ ಯಾವಾಗ ಬರ‍್ತಾರೆ?”
“ಮದುವೆಗೆ ಬಂದವರು ಅವರ ಸ್ನೇಹಿತರ ಮನೆಯಲ್ಲಿದ್ದಾರೆ. ನಾಳೆಯಿಂದಲೇ ಅವರು ಬರಲು ಸಿದ್ಧ.”
“ನಾಳೆಯಿಂದಲೇ ಅವರು ಬರಲು ಹೇಳಿ. ನೀವು ಹೋಗಿ ನಿಮ್ಮ ಮನೆ ಸಾಮಾನು, ಸರಂಜಾಮು ಅಣಿ ಮಾಡಿಕೊಳ್ಳಿ.”
“ಆಯ್ತಮ್ಮ.”

ಇಪ್ಪತ್ತು ದಿನ ಕಳೆಯುವಷ್ಟರಲ್ಲಿ ಗೌರಮ್ಮನ ಎಲ್ಲಾ ಸಮಸ್ಯೆಗಳೂ ಪರಿಹಾರವಾಗಿ, ರಾಜಲಕ್ಷ್ಮಿ ನೆಮ್ಮದಿಯ ನಿಟ್ಟುಸಿರುಬಿಟ್ಟರು.
ಒಂದು ಭಾನುವಾರ ಬೆಳಿಗ್ಗೆಯೇ ಡಾ|| ಸೀತಾಲಕ್ಷ್ಮಿ ರಾಜಲಕ್ಷ್ಮಿಗೆ ಫೋನ್ ಮಾಡಿದರು.
“ರಾಜಲಕ್ಷ್ಮಿಯವರೇ ಈಗ ತಾನೇ ನಿಮ್ಮ ಅಳಿಯ ಫೋನ್ ಮಾಡಿದ್ದರು. ಮುಂದಿನ ವಾರ ಅವರು ಅವರ ಹೆಂಡ್ತಿ ಇಂಡಿಯಾಕ್ಕೆ ಬರ‍್ತಿದ್ದಾರೆ. ಇಂಡಿಯಾಕ್ಕೆ ಬಂದ ಮೇಲೆ ನಿಮಗೆ ಫೋನ್ ಮಾಡ್ತಾರಂತೆ.”
“ಆಗಲಿ ಬಿಡಿ. ಅವರು ಬರುವುದರೊಳಗೆ ಕೆಲವು ಕೆಲಸಗಳಾಗಬೇಕು ಡಾಕ್ಟರ್.”

“ಏನು ಹೇಳಿ?”
“ಈ ವೃದ್ಧಾಶ್ರಮನ್ನ ನನ್ನ ಅಳಿಯನ ಹೆಸರಿಗೆ ಬರೆದು, ಆಡಳಿತವನ್ನು ನಿರ್ವಹಿಸಲು ಒಂದು ಟ್ರಸ್ಟ್ ನೇಮಿಸೋಣಾಂತ ಇದ್ದೀನಿ.”
“ಯಾಕೆ ಈ ಆಲೋಚನೆ ಬಂತು ನಿಮಗೆ?”
“ನನಗೂ ವಯಸ್ಸಾಯ್ತು. ನಾನು ಬದುಕಿರುವಾಗಲೇ ಇದೆಲ್ಲಾ ಆದರೆ ಒಳ್ಳೆಯದಲ್ವೇ? ನಿಮಗೆ ತುಂಬಾ ಜನ ವಿದ್ಯಾವಂತರು ಪರಿಚಯ ರ‍್ತಾರೆ. ನೀವು, ಮೋಹನ ಟ್ರಸ್ಟ್ನಲ್ಲಿ ಯರ‍್ಯಾರಿರಬೇಕೂಂತ ತೀರ್ಮಾನಿಸಿ.”
“ನಿಮ್ಮ ಅಳಿಯಂಗೆ ಈ ವಿಚಾರ ಹೇಳಿದ್ದೀರಾ?”
“ಅವರು ಬಂದಾಗ ಹೇಳಬೇಕು.”
“ಆಗಲಿ, ನೀವು ಹೇಳಿದ ಏರ್ಪಾಡು ಮಾಡೋಣ” ಎಂದರು ಡಾಕ್ಟರ್.

ಹದಿನೈದು ದಿನಗಳಲ್ಲಿ ರಾಜಲಕ್ಷ್ಮಿಯ ಅಳಿಯ ಭರತ್ ಹೆಂಡತಿಯ ಜೊತೆ ಬಂದಿಳಿದರು. ರಾಜಲಕ್ಷ್ಮಿ ತಮ್ಮ ಯೋಚನೆಯ ಬಗ್ಗೆ ಹೇಳಿದ್ದರು.
“ಅಮ್ಮಾ, ನಾನು ಹೋಗುವುದರೊಳಗೆ ಮೋಹನ್ ಜೊತೆ ಸೀತಾಲಕ್ಷ್ಮಿ ಆಂಟಿ ಜೊತೆ ಮಾತನಾಡಿ ಎಲ್ಲಾ ವ್ಯವಸ್ಥೆ ಮಾಡ್ತೀನಿ. ನೀವು ಯೋಚಿಸಬೇಡಿ” ಭರತ್ ಭರವಸೆ ನೀಡಿದ.”
ರಾಜಲಕ್ಷ್ಮಿ ಒಂದು ಸಾಯಂಕಾಲ ಮುಂದುಗಡೆ ವೆರಾಂಡದಲ್ಲಿ ಕುರ್ಚಿ ಹಾಕಿಕೊಂಡು ಕುಳಿತಿದ್ದರು. ಭರತ್-ಇಂದಿರಾ ಊರಿಗೆ ಹೋಗಿ ನಾಲ್ಕು ದಿನಗಳಾದ್ದವು. ವೃದ್ಧಾಶ್ರಮವನ್ನು ಡಾ|| ಸೀತಾಲಕ್ಷ್ಮಿ ಹೆಸರಿಗೆ ಬರೆಯಲಾಗಿತ್ತು. ಅವರು ಅದನ್ನು ಭರತ್ ಹೆಸರಿಗೆ ವಿಲ್ ಮಾಡಬೇಕಿತ್ತು. ಮೋಹನ ವಾರದೊಳಗೆ ಎಲ್ಲಾ ರೆಡಿ ಮಾಡುವುದಾಗಿ ಹೇಳಿದ್ದ.

ರಾಜಲಕ್ಷ್ಮಿಯ ಮನಸ್ಸು ಮಕ್ಕಳ ಬಗ್ಗೆ ಯೋಚಿಸುತ್ತಿತ್ತು. ಅಪ್ಪ-ಅಮ್ಮನ ಬಗ್ಗೆ ಅಪಾರ ಕಾಳಜಿ ತೋರುತ್ತಿದ್ದ ಮಗಳು ರಜನಿ ಅಕಾಲ ಮರಣಕ್ಕೆ ಗುರಿಯಾಗಿದ್ದಳು. ಅವಳ ಮಕ್ಕಳು ಹೇಗಿದ್ದಾರೆಂದು ಅವರಿಗೆ ಗೊತ್ತಿರಲಿಲ್ಲ. ಭರತ್ ಬೇಸರದಿಂದ ಹೇಳಿದ್ದ
“ತಿಂಗಳ ಕೊನೆಯಲ್ಲಿ ಅಥವಾ ಹಣದ ಅವಶ್ಯಕತೆ ಇದ್ದಾಗ ಮಾತ್ರ ನಾನು ಅವರಿಗೆ ನೆನಪಾಗ್ತೀನಿ. ನೋಡಕ್ಕೆ ಹೋದರೆ 5 ನಿಮಿಷವೂ ಮಾತಾಡಲ್ಲ.”
ರಾಜಲಕ್ಷ್ಮಿಗೆ ತುಂಬಾ ಬೇಸರವಾಗಿತ್ತು. ತಕ್ಷಣ ರಾಹುಲ್ ಕುಟುಂಬ ನೆನಪಾಗಿತ್ತು. ಅವನ ಮಕ್ಕಳು ಹೇಗಿದ್ದಾರೋ ಏನೋ? ಮಗನಿಗೆ ತಾಯಿಯ ಪ್ರೀತಿ ಅರ್ಥವಾಗಲಿಲ್ಲ. ತಾಯಿ-ತಂದೆಯರಿಗಿಂತ ಅತ್ತೆ-ಮಾವನೇ ಹೆಚ್ಚಾದರು. ಅವನಿಗೆ ಅಮ್ಮ ಬೇಕಿರಲಿಲ್ಲ. ಅಮ್ಮ ಕೊಡುವ ಹಣ ಬೇಕಿತ್ತು. ನಾನು ಹಣ ಕೊಡದಿದ್ದುದರಿಂದ ಕೆಟ್ಟವಳಾದೆ.
“ನಾನು ತಪ್ಪು ಮಾಡಿದೆನಾ?” ಎನ್ನುವ ಪ್ರಶ್ನೆ ಕಾಡಿತು. ಆದರೆ ಯಾರ ಸಹಾಯವೂ ಇಲ್ಲದ ವಯಸ್ಸಾದ ಹೆಂಗಸರ ನೆನಪಾದಾಗ ಅವರಿಗೆ ತಾನು ಒಳ್ಳೆಯ ಕೆಲಸ ಮಾಡಿದ್ದೇನೆ” ಎನ್ನಿಸಿತು. ಅಷ್ಟರಲ್ಲಿ ಶೇಷಮ್ಮ ಕಾಫಿ ತಂದು ಅವರಿಗೆ ಕೊಟ್ಟು, ತಾವೂ ಕುಡಿಯತೊಡಗಿದರು.

ಅವರು ಕಾಫಿ ಕುಡಿದು ಮಾತನಾಡುತ್ತಾ ಕುಳಿತಿದ್ದಾಗ ವಯಸ್ಸಾದ ದಂಪತಿಗಳು ಒಳಗೆ ಬಂದರು. ಅವರ ಹಿಂದೇ ಡಾ|| ಸೀತಾಲಕ್ಷ್ಮಿ ಬಂದರು.
“ಓ ಡಾಕ್ಟರ್ ಬನ್ನಿ ಒಳಗೆ, ಇರ‍್ಯಾರು?”
“ರಾಜಮ್ಮ ಇವರು ನನಗೆ ತುಂಬಾ ಬೇಕಾದವರು. ಗಂಗಾಧರ್-ಗಿರಿಜಾ ದಂಪತಿಗಳು ನನಗೆ ಬೇಕಾದವರು.”
“ಏನು ವಿಷಯ ಡಾಕ್ಟರ್?”
“ಗಂಗಾಧರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ರು. ಗಿರಿಜಾ ಪಕ್ಕಾ ಗೃಹಿಣಿ. ಇರೋ ಒಬ್ಬ ಮಗನ್ನ ತುಂಬಾ ಕಷ್ಟಪಟ್ಟು ಡಾಕ್ಟರ್ ಮಾಡಿದರು. ಅವನು ಹೈಯರ್ ಸ್ಟಡೀಸ್‌ಗೆ ಅಮೇರಿಕಾಗೆ ಹೋಗಲು ಬಯಸಿದಾಗ ಇದ್ದ ಸ್ವಂತ ಮನೆ ಮಾರಿ ಅಮೇರಿಕಾಕ್ಕೆ ಕಳಿಸಿದರು. ಅವನು ಅಲ್ಲಿಯ ಹುಡುಗಿಯನ್ನು ಮದುವೆಯಾಗಿ ಸೆಟ್ಲ್ ಆಗಿಬಿಟ್ಟ. ಇವರ ಕಡೆ ತಿರುಗಿಯೂ ನೋಡ್ತಿಲ್ಲ.”
“ಈಗಿನ ಮಕ್ಕಳೇ ಹಾಗೆ.”

“ರಾಜಮ್ಮ ಇಬ್ಬರೂ ಕೈಲಾಗದವರು. ನಮ್ಮನೆ ಔಟ್‌ಹೌಸ್‌ನಲ್ಲರ‍್ತಾರೆ. ನಿಮ್ಮ ವೃದ್ಧಾಶ್ರಮದಿಂದ ಇವರಿಬ್ಬರಿಗೂ ಊಟ-ತಿಂಡಿ ಕೊಡಕ್ಕಾಗತ್ತಾ? ಪೇಮೆಂಟ್ ವಿಚಾರ ಯೋಚಿಸಬೇಡಿ.”
“ನೀವು ಹೇಳಿದ ನಂತರ ನಾನು ಇಲ್ಲ ಅನ್ನಕ್ಕಾಗುತ್ತದಾ? ಖಂಡಿತಾ ಊಟ-ತಿಂಡಿ ಕೊಡ್ತೀನಿ……”
“ಇದುವರೆಗೂ ಇವರು ಒಂದು ವೃದ್ಧಾಶ್ರಮದಲ್ಲಿದ್ದರು. ಅದನ್ನು ಮುಚ್ಚಿಬಿಟ್ಟರಂತೆ. ಅದಕ್ಕೆ ನಮ್ಮನೆಗೆ ಬಂದರು. ಇವತ್ತು ರಾತ್ರಿಯಿಂದಲೇ ಊಟ ಕಳುಹಿಸಿ.”
“ಆಗಲಿ…. ಕಳಿಸ್ತೀನಿ.”
“ದಿನಾ ನಮ್ಮ ಡ್ರೈವರ್ ರಾಮು ಬಂದು ತೆಗೆದುಕೊಂಡು ಹೋಗ್ತಾನೆ.”
ರಾಜಲಕ್ಷ್ಮಿ ಒಪ್ಪಿದರು.

ಅವರೆಲ್ಲಾ ಹೋದನಂತರ ಅವರು ಕಣ್ಣು ಮುಚ್ಚಿಕುಳಿತರು. ಒಳಗಣ್ಣಿನೆದರು ಮಗ-ಸೊಸೆಯರ ಚಿತ್ರ ಬಂದವು.
ಮುದೆ ಹೀಗೆ ಒಂದು ದಿನ ನನ್ನ ಮಗ ಸೊಸೆ ಬರಬಹುದು. ಅವರಿಗೂ ಇಂತಹ ಏರ್ಪಾಡು ಮಾಡಿಕೊಡಬಹುದು. ನಾನಿಲ್ಲದಿದ್ದರೂ ಈ ವ್ಯವಸ್ಥೆ ಆಗಬೇಕು” ಎಂದುಕೊಂಡರು.
ಅವರೀಗ ಮಗನ ತಪ್ಪುಗಳನ್ನು ಕ್ಷಮಿಸಿದ ತಾಯಿಯ ಸ್ಥಾನದಲ್ಲಿ ನಿಂತು ಯೋಚಿಸುತ್ತಿದ್ದರು. ತಾಯಿ ತಾಯಿಯೇ ಅಲ್ಲವೇ?

ಕಾದಂಬರಿಯ ಹಿಂದಿನ ಭಾಗ ಇಲ್ಲಿದೆhttps://www.surahonne.com/?p=42378

-ಸಿ.ಎನ್. ಮುಕ್ತಾ

(ಮುಗಿಯಿತು)

8 Responses

  1. ತುಂಬಾ ಸುಂದರವಾಗಿ ಮೂಡಿ ಬಂದಿತು. ವಾಸ್ತವ ಚಿತ್ರಣ.

  2. ಪದ್ಮಾ ಆನಂದ್ says:

    ಒಳ್ಳೆಯ ಕೆಲಸಗಳೆಡೆಗೆ ಮನಸ್ಸನ್ನು ನೆಟ್ಟರೆ ಇರುವ ಕ್ಲೇಶಗಳೆಲ್ಲಾ ದೂರ ಸರಿದು ಮಾಡಹೊರಟ ಕೆಲಸಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳನ್ನು ಹುಡುಕಿಕೊಳ್ಳು ಪ್ರಬುದ್ಧತೆಯೂ ಲಭಿಸುತ್ತದೆ ಎಂಬ ಸಕಾರಾತ್ಮಕ ವಿಷಯವನ್ನೊಳಗೊಂಡ ಸುಂದರ ಕಾದಂಬರಿ ಸುಲಲಿತವಾಗಿ ಓದಿಸಿಕೊಂಡು ಮುದ ನೀಡಿತು. ಅಭಿನಂದನೆಗಳು ಲೇಖಕಿ ಮುಕ್ತಾ ಮೇಡಂ ಅವರಿಗೂ, ಪ್ರಕಟಿಸಿದ “ಸುರಹೊನ್ನೆ” ಸಂಪಾದಕಿ ಹೇಮಮಾಲಾ ಅವರಿಗೂ.

  3. ಪ್ರಚಲಿತ ವಿದ್ಯಾಮಾನಗಳ ಅನಾವರಣ ಅವುಗಳ ಮದ್ಯೆ.. ರಾಜಲಕ್ಷ್ಮಿ ಯಂತಹ ಮಾತೃಹೃದಯ ಇರುವಂತವರು ಅಪರೂಪ ತಮಗಾದ ಅನುಭವ..ಆ ರೀತಿ ಅಲ್ಲದಿದ್ದರೂ ಬೇರೆ ಬೇರೆ ಕಾರಣಗಳಿಂದ ನೊಂದು ಬೆಂದವರಿಗೆ ಬೆಂಬಲವಾಗಿ ನಿಂತು..ತಮ್ಮ ಕೈಲಾದಸೇವೆ ಸಲಹ ಸೂಚನೆ ನೀಡಿ ತದನಂತರ ವೂ ವೃಧ್ಧಾಶ್ರಮ ನೆಡಿಸಿಕೊಂಡು ಹೋಗುವವರಿಗೆ ಹಸ್ತಾಂತರ ಮಾಡುವ ಏರ್ಪಾಡು… ಮುಂದಿನ ಪೀಳಿಗೆಯ ತಂದೆತಾಯಿಗಳ ಪರಿಸ್ಥಿತಿ ಯ ಬಗ್ಗೆ ಒಂದು ಕಿವಿ ಮಾತು..ಎಲ್ಲವೂ ಬಹಳ ಆಪ್ತ ವಾಗಿ..ಬಂದು ತಾಯಿ ಮಿನಿ ಕಾದಂಬರಿ ನನ್ನ ಮನವನ್ನು ಗೆದ್ದಿತು ಧನ್ಯವಾದಗಳು ಮೇಡಂ.. ಭಾಷೆ ಸರಳವಾಗಿದ್ದು ಸುಲಲಿತವಾಗಿ ಓದಿಸಿಕೊಂಡುಹೋಯಿತು.

  4. ನಯನ ಬಜಕೂಡ್ಲು says:

    ಇಷ್ಟು ದಿನ ಬಹಳ ಸೊಗಸಾಗಿ ಮೂಡಿ ಬಂತು ಕಾದಂಬರಿ. ತುಂಬಾ ಚೆನ್ನಾಗಿತ್ತು.

  5. C.,N Muktha says:

    ಕಾದಂಬರಿ ಪ್ರಕಟಿಸಿದ ಹೇಮಮಾಲಾ ಇವರಿಗೂ, ಕಾದಂಬರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತಮಗೆಲ್ಲರಿಗೂ ನಾನು ಆಭಾರಿ.

  6. Hema Mala says:

    ಈ ದಿನಗಳಲ್ಲಿ ಶಿಥಿಲಗೊಳ್ಳುತ್ತಿರುವ ಕೌಟುಂಬಿಕ ಸಾಮರಸ್ಯವು ಸಾಮಾಜಿಕ ಪಿಡುಗಿನ ರೂಪ ತಳೆದಿದೆ. ಈ ಹಿನ್ನೆಲೆಯಲ್ಲಿ ನಿರೂಪಿಸಿದ ‘ತಾಯಿ’ ಕಾದಂಬರಿಯು ಬಹಳ ಅರ್ಥವತ್ತಾಗಿ, ಸೊಗಸಾಗಿ ಮೂಡಿ ಬಂದಿದೆ. ಧನ್ಯವಾದಗಳು ಮೇಡಂ.

  7. ಶಂಕರಿ ಶರ್ಮ says:

    ಪ್ರತಿ ಕಂತಿನಲ್ಲೂ ಕುತೂಹಲವನ್ನು ಉಳಿಸುತ್ತಾ, ಸೊಗಸಾಗಿ ಮೂಡಿಬಂದ “ತಾಯಿ” ಕಾದಂಬರಿಯು, ಸಮಾಜಕ್ಕೆ ಸೂಕ್ತ ಸಂದೇಶವನ್ನು ನೀಡುವುದರಲ್ಲಿ ಸಫಲವಾಗಿದೆ. ನಮ್ಮ ಅಭಿಮಾನದ, ಹಿರಿಯ ಕಾದಂಬರಿಗಾರ್ತಿ ಮುಕ್ತಾ ಮೇಡಂ ಅವರಿಗೆ ಧನ್ಯ ನಮನಗಳು.

Leave a Reply to C.,N Muktha Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: