ಕಾದಂಬರಿ : ತಾಯಿ – ಪುಟ 21

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಮರುದಿನ ರಾಜಲಕ್ಷ್ಮಿ ಭಾಸ್ಕರನಿಗೆ ಫೋನ್ ಮಾಡಿ ಬೆಳಿಗ್ಗೆ 12 ಗಂಟೆಗೆ ಬರಲು ಹೇಳಿದರು.
“ಸಾಯಂಕಾಲ ಬಂದರಾಗತ್ತಾಮ್ಮ?”
“ಬೇಡ. ಬೆಳಿಗ್ಗೇನೇ ಬಾ.”
ಭಾಸ್ಕರ 12.15ಗೆ ಬಂದ. ರಾಜಲಕ್ಷ್ಮಿ ಅವನನ್ನು ತನ್ನ ರೂಮ್‌ಗೆ ಕರೆದೊಯ್ದರು.
“ಏನು ವಿಷಯಾಮ್ಮ?”
“ನಿನಗೆ ತಿಂಗಳಿಗೆ ಎಷ್ಟು ಸಂಬಳ ಬರ‍್ತಿದೆ?”
“ಇಪ್ಪತ್ತು ಸಾವಿರ ಬರಬಹುದು ಯಾಕಮ್ಮಾ?”
“ಮದುವೆ ಮಾಡಿಕೊಂಡು ಜೀವನ ಸಾಗಿಸಕ್ಕಾಗತ್ತಾ?”
ಅವನು ಉತ್ತರಿಸಲಿಲ್ಲ.

“ಚಿನ್ಮಯಿ ಒಳ್ಳೆಯ ಹುಡುಗಿ. ನಿನ್ನ ಆಯ್ಕೆ ಸರಿಯಾಗಿದೆ. ಮೊದಲು ಕೆಲಸಕ್ಕೆ ಪ್ರಯತ್ನ ಮಾಡು. ಬೆಳಿಗ್ಗೆ 9 ರಿಂದ 6 ಗಂಟೆಯವರೆಗೆ ದುಡಿದು 30,000 ರೂ. ಆದ್ರೂ ಸಿಗಬೇಕು. ಆಗ ಮದುವೆಯಾಗಬಹುದು.”
“ನನ್ನ ಓದಿಗೆ ಅಂತಹ ಕೆಲಸ ಎಲ್ಲಿ ಸಿಗುತ್ತದೆ?”
“ನೀನು ಸೀರಿಯಸ್ ಆಗಿ ಪ್ರಯತ್ನಿಸಿದರೆ ಖಂಡಿತಾ ಸಿಗುತ್ತದೆ. ಚಿನ್ಮಯಿಯ ಜೊತೆ ನೀನು ಅವಳ ತಾಯಿ-ತಂದೆಯ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ….”
“ಗೊತ್ತಮ್ಮ”
“ಮದುವೆ ಆಗುವವರೆಗೂ ದಯವಿಟ್ಟು ನಿಮ್ಮ ಸುತ್ತಾಟ ನಿಲ್ಲಿಸಿ. ವೃಥಾ ಬೇರೆಯವರ ಬಾಯಿಗೆ ಆಹಾರವಾಗಬೇಡಿ.”
“ಆಗಲೀಮ್ಮ….”
“ನನ್ನ ಮಾತಿನಿಂದ ಬೇಜಾರಾಗಿದ್ರೆ ಕ್ಷಮಿಸು. ನಮ್ಮನೆ ಹುಡುಗ ನೀನು. ನಿನ್ನ ಬಗ್ಗೆ ಯಾರಾದರೂ ಏನಾದರೂ ಅಂದರೆ ನಿನಗಿಂತ ನನಗೇ ಹೆಚ್ಚು ಬೇಜಾರಾಗುತ್ತದೆ ಅನ್ನುವುದನ್ನು ಮರೆಯಬೇಡ.”
“ನೀವು ನೊಂದುಕೊಳ್ಳಬೇಡಿ. ನಿಮಗೆ ಕೆಟ್ಟ ಹೆಸರು ತರುವ ಕೆಲಸ ನಾನು ಖಂಡಿತಾ ಮಾಡಲ್ಲ” ಭಾಸ್ಕರ ಅವರ ಕೈ ಹಿಡಿದು ಕಣ್ಣಿಗೊತ್ತಿಕೊಂಡು ಹೇಳಿದ.
ರಾಜಲಕ್ಷ್ಮಿಗೆ ಸಮಾಧಾನವಾಯಿತು. ಅವರು ಅಂದು ರಾತ್ರಿ ಮೋಹನ್‌ಗೂ ಫೋನ್ ಮಾಡಿ ವಿಷಯ ತಿಳಿಸಿದರು.

“ಅಮ್ಮಾ, ನಂಜನಗೂಡಿನ ಹೈಸ್ಕೂಲ್‌ನಲ್ಲಿ ಕಂಪ್ಯೂಟರ್ ಟೀಚರ್ ಪೋಸ್ಟ್ ಖಾಲಿಯಿದೆ. ಮ್ಯಾನೇಜ್‌ಮೆಂಟ್‌ನವರು ನನಗೆ ತುಂಬಾ ಪರಿಚಯ. ನಾನು ಹೇಳಿದರೆ 30,000 ಸಂಬಳ ಖಂಡಿತಾ ಕೊಡ್ತಾರೆ. ಆದರೆ ಭಾಸ್ಕರಂಗೆ ನಂಜನಗೂಡಿನಲ್ಲಿ ಕೆಲಸ ಮಾಡಕ್ಕೆ ಇಷ್ಟವಾಗುತ್ತದೋ ಇಲ್ಲವೋ ಗೊತ್ತಿಲ್ಲ.”
“ಮೈಸೂರಿಂದ ಓಡಾಡಬಹುದಲ್ವಾ?”
“ಓಡಾಡಬಹುದು. ಆದರೆ ಚಿನ್ಮಯಿಗೆ ಇಷ್ಟವಾಗದಿರಬಹುದು.”
“ಚಿನ್ಮಯೀನ್ನ ನಾನು ಒಪ್ಪಿಸ್ತೇನೆ. ನೀನು ಆ ಕೆಲಸ ಸಿಗುವ ಹಾಗೆ ಮಾಡು.”
“ಸರೀಮ್ಮ. ನಾನು ಮ್ಯಾನೇಜ್‌ಮೆಂಟ್ ಜೊತೆ ಮಾತಾಡ್ತೀನಿ” ಎಂದ ಮೋಹನ್.

ಒಂದು ವಾರ ಕಳೆಯಿತು. ಒಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಕೃಷ್ಣವೇಣಿಯನ್ನು ನೋಡಲು ಅವರ ಸೊಸೆ ರೋಹಿಣಿ ಬಂದಳು. ಕೃಷ್ಣವೇಣಿ, ಭವಾನಿ, ಭುವನೇಶ್ವರಿಯ ಜೊತೆ ಕೋಟೆ ಆಂಜನೇಯನ ದೇವಸ್ಥಾನಕ್ಕೆ ಹೋಗಿದ್ದರು.
“ನಾನು ಫೋನ್ ಮಾಡಿ ಬರಬೇಕಾಗಿತ್ತೂಂತ ಕಾಣತ್ತೆ. ನಮ್ಮತ್ತೆ ಹೇಗಿದ್ದಾರೆ?”
“ಆರಾಮವಾಗಿದ್ದಾರೆ. ನಿಮ್ಮಾವ, ನಿಮ್ಮನೆಯವರು ಅವರ ಬಗ್ಗೆ ಏನೇನೋ ಹೇಳಿದ್ದರು….”
ಅದೆಲ್ಲಾ ಸುಳ್ಳು ಮೇಡಂ. ನಾನು ನಿಮ್ಮ ಹತ್ತಿರ ಕೊಂಚ ಪ್ರತ್ಯೇಕವಾಗಿ ಮಾತನಾಡಬಹುದಾ/”
“ಧಾರಾಳವಾಗಿ ಮಾತನಾಡಿ. ಇಲ್ಲಿಗೆ ಯಾರೂ ಬರಲ್ಲ. ಈಗ ಅವರವರ ಕೆಲಸದಲ್ಲಿ ತೊಡಗಿರುತ್ತಾರೆ.”

“ನಾನು ನಮ್ಮತ್ತೇನ್ನ ಮನೆಗೆ ಕರೆದುಕೊಂಡು ಹೋಗಬೇಕೂಂತಿದ್ದೀನಿ ಮೇಡಂ….”
“ನಿಮಗೂ-ಅವರಿಗೂ ಆಗಲ್ಲಾಂತ ಗೊತ್ತು….”
“ಅದು ಸುಳ್ಳು. ನಮ್ಮತ್ತೆ ತುಂಬಾ ಒಳ್ಳೆಯವರು. ನನ್ನ ಒಳ್ಳೆಯದಸ್ಕೋರ ನಾನು ಬೇರೆ ಮನೆಗೆ ಹೋಗುವಂತೆ ಮಾಡಿದರು.”
“ನನಗೆ ನಿಮ್ಮ ಮಾತು ಅರ್ಥವಾಗುತ್ತಿಲ್ಲ.”
“ಹೌದು ಮೇಡಂ. ನಮ್ಮತ್ತೆ ತುಂಬಾ ಒಳ್ಳೆಯವರು. ನಮ್ಮ ಮಾವನ ನಡತೆ ಸರಿಯಾಗಿಲ್ಲ. ಅದನ್ನು ಮಾತಲ್ಲಿ, ಕೃತಿಯಲ್ಲಿ ತೋರಿಸ್ತಿರ್ತಾರೆ.”
“ಹೌದಾ?”
“ಹೌದಮ್ಮ. ಡೆವಲಪ್‌ಮೆಂಟ್ ಆಫೀಸರ್ ಆಗಿರಲಿಲ್ಲ. ಯಾವುದೋ ಪ್ರೈವೇಟ್ ಆಫೀಸ್‌ನಲ್ಲಿ ಗುಮಾಸ್ತರಾಗಿದ್ರು. ಪೆನ್ಷನ್ ಕೂಡ ಬರಲ್ಲ. ನಮ್ಮ ಅತ್ತೆಯ ಮನೆಯವರು ತುಂಬಾ ಶ್ರೀಮಂತರು. ಅತ್ತೆ ಒಬ್ಬರೇ ಮಗಳು. ಅವರು ತಮ್ಮ ಸಮಸ್ತ ಆಸ್ತೀನ್ನ ಮಗಳಿಗೆ ಬರೆದಿದ್ದರು. ಈ ವಿಚಾರ ಮಾವನಿಗೆ ಗೊತ್ತಾಗಿ ಪ್ರೀತಿಯ ನಾಟಕವಾಡಿ ಅತ್ತೇನ್ನ ಮದುವೆಯಾದರು.”
“ನಿಮ್ಮ ಅತ್ತೆಗೆ ನಿಮ್ಮ ಮಾವ ಮೊದಲೇ ಪರಿಚಯವಿದ್ರಾ?”
“ದೂರದ ನೆಂಟರೂಂ ಕಾಣತ್ತೆ…”
“ಓ…ಹಾಗಾಗಿ ಪರಿಚಯ.”

“ಹುಂ. ನಮ್ಮತ್ತೆ ಊರಿನಲ್ಲಿದ್ದ ಆಸ್ತಿ ಮಾರಿ ಈ ಊರಿನಲ್ಲಿ ಮನೆಗಳನ್ನು ತೆಗೆದುಕೊಂಡ್ರು.”
“ಎಷ್ಟು ಮನೆಗಳಿವೆ ನಿಮ್ಮತ್ತೇಗೆ?”
“ದೊಡ್ಡದೊಂದು 4 ಬೆಡ್‌ರೂಂ ಮನೆಯಿದೆ. 60×80ರ ಸೈಟಿನಲ್ಲಿ ಕಟ್ಟಿರೋದು ಸ್ಟೋರ್ ರೂಂ, ಊಟದ ಮನೆ, ಪೂಜಾರೂಂ ಎಲ್ಲಾ ಪ್ರತ್ಯೇಕವಾಗಿದ್ದು ವಿಶಾಲವಾಗಿವೆ. ದೊಡ್ಡಮನೆಯ ಹಿಂದುಗಡೆ ನಾಲ್ಕು ಮನೆಗಳಿವೆ. ಎಲ್ಲಾ ಎರಡು ಬೆಡ್‌ರೂಂ ಮನೆಗಳು. ಅತ್ತೆ ಆ ಮನೆಗಳ ಬಾಡಿಗೆ ನಮ್ಮ ಮಾವನಿಗೆ ಬರುವ ಹಾಗೆ ಮಾಡಿದ್ದಾರೆ.”
“ಹಾಗಿದ್ರೂ ನಿಮ್ಮ ಮಾವ ಯಾಕೆ ನಿಮ್ಮ ಅತ್ತೆಯ ಮೇಲೆ ಇಲ್ಲಸಲ್ಲದ್ದು ಹೇಳ್ತಾರೆ?”
“ನಮ್ಮಾವ ಬಾಡಿಗೆ ತೊಗೊಳ್ಳುವ ನೆಪದಲ್ಲಿ ಹೋಗಿ ಆ ಮನೆ ಹೆಂಗಸರ ಹತ್ತಿರ ಕೆಟ್ಟದಾಗಿ ನಡ್ಕೋತಿದ್ರು. ಅದಕ್ಕೆ ನಮ್ಮತ್ತೆ ಆ ಮನೆಗಳ ಗಂಡಸರಿಗೆ ನೀವೇ ಬಂದು ಪ್ರತಿ ತಿಂಗಳ ಐದನೇ ತಾರೀಕು ಒಳಗೆ ಬಾಡಿಗೆ ಕೊಡಬೇಕೂಂತ ಮಾಡಿದ್ರು. ನನ್ನ ಹತ್ತಿರಾನೂ ತುಂಬಾ ಕೆಟ್ಟದಾಗಿ ನಡ್ಕೋತಿದ್ರು. ಬೇಕೂಂತ ಓಡಾಡುವಾಗ ಕೈ ಮೈ ತಾಗಿಸೋರು. ಬಡಿಸುವಾಗ ಕೈ ಹೊಡೀತಿದ್ರು.”
“ನಿಮ್ಮ ಯಜಮಾನರು ಸುಮ್ಮನಿರ್ತಿದ್ರಾ?”
“ಅವರಿಗೆ ಬೆನ್ನು ಮೂಳೆಯೇ ಇಲ್ಲ. ಸುಳಿವು ಸೂಕ್ಷ್ಮ ಗೊತ್ತಾಗಲ್ಲ. ನಮ್ಮತ್ತೆ ಇದನ್ನೆಲ್ಲಾ ಗಮನಿಸಿ ‘ಊಟ ಚೆನ್ನಾಗಿರಲ್ಲ’ ಅಂತ ರಾಗ ತೆಗೆದರು. ಆಮೇಲೆ ನಾನು ಕೂತರೆ ನಿಂತರೆ ತಪ್ಪು ತೆಗೆಯಕ್ಕೆ ಶುರು ಮಾಡಿದ್ರು. ನಾನು ಮಾಡಿದ ಅಡಿಗೆ, ತಿಂಡಿ ಮುಟ್ಟುತ್ತಿರಲಿಲ್ಲ. ವಿಷ ಹಾಕಿದ್ದೀಯ ಅಂತಿದ್ರು. ಕೊನೆಗೆ ನೀವು ಬೇರೆ ಮನೆ ಮಾಡಿಕೊಂಡು ಹೋಗೀಂತ ಹಠ ಮಾಡಿದರು. ನಾವು ಮನೆ ಬಿಟ್ಟು ಹೊರಡುವ ದಿನ “ನನ್ನ ಗಂಡ ನಿನಗೆ ಕೊಡ್ತಿದ್ದ ಉಪಟಳ ತಪ್ಪಿಸಲು ಹೀಗೆ ಮಾಡಿದೆ ಅಂತ ಹೇಳಿದ್ರು.”
“ನಿಮ್ಮತ್ತೆ ಒಳ್ಳೆಯ ಹೆಂಗಸು.”

“ಹೌದು ಮೇಡಂ. ಈಗ ಅವರ ಮಗಳಿಗೆ 5ನೇ ತಿಂಗಳು. ಅವಳನ್ನು ಬಾಣಂತನಕ್ಕೆ ಕರೆತರಬೇಕು. ಅವಳಿಗೆ ಇಲ್ಲಿಯ ವಿದ್ಯಮಾನಗಳು ಗೊತ್ತಿಲ್ಲ. ಅವಳು ಬರುವ ವೇಳೆಗೆ ಅತ್ತೆ ಮನೆಯಲ್ಲಿರಬೇಕು. ಬಾಣಂತನ ಮಾಡಕ್ಕೆ ಜನನ್ನ ಗೊತ್ತು ಮಾಡಬೇಕು. ಅಡಿಗೆಯವರನ್ನು ಗೊತ್ತು ಮಾಡಬೇಕು….”
“ನೀವು ಬೇರೆ ಮನೆಯಲ್ಲೇ ಇರ್ತೀರಾ?”
“ನನ್ನ ನಾದಿನಿ ಬಂದಾಗ ನಾವು ಬರಲೇಬೇಕಾಗತ್ತೆ. ಅವಳು ತುಂಬಾ ಒಳ್ಳೆಯ ಹುಡುಗಿ. ಅವಳಿರುವವರೆಗೂ ಎಲ್ಲವೂ ಚೆನ್ನಾಗಿತ್ತು.”
“ಅಡಿಗೆಯವರು ನಿಮ್ಮ ಮನೆಯಲ್ಲೇ ಇರಬೇಕಾ?”
“ಒಂದು ಮನೆ ಖಾಲಿ ಇದೆ. ಆ ಮನೆಯಲ್ಲಿ ಅವರು ಇರಬಹುದು. ಬಾಡಿಗೆ ವಿಚಾರ ಯೋಚಿಸಬೇಕು. ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಅಡಿಗೆ, ರಾತ್ರಿ ಅಡಿಗೆ ಮಾಡಿಕೊಡಬೇಕು. ಅವರೇ ಬಾಣಂತನದ ಜವಾಬ್ಧಾರಿ ವಹಿಸಿಕೊಂಡರೆ ತುಂಬಾ ಒಳ್ಳೆಯದು.”
“ನಿಮ್ಮ ನಾದಿನೀನ್ನ ಯಾವಾಗ ಕರೆದುಕೊಂಡು ಬರ್ತೀರಾ?”
“7ನೇ ತಿಂಗಳಲ್ಲಿ ಕರೆದುಕೊಂಡು ಬರ್ತೀವಿ.”

“ಅಷ್ಟು ಹೊತ್ತಿಗೆ ನಿಮ್ಮತ್ತೇನ್ನ ನಾನು ಮನೆಗೆ ಕಳಿಸಿಕೊಡ್ತೇನೆ. ಯೋಚಿಸಬೇಡಿ.”
“ನೀವೇ ಯಾರಾದರೂ ಅಡಿಗೆಯವರನ್ನು ಗೊತ್ತು ಮಾಡಿಕೊಡಲು ಆಗುತ್ತದಾ?”
“ನಿಮ್ಮ ಮನೆಗೆ ಬಾಡಿಗೆ ಎಷ್ಟು? ದಿನಕ್ಕೆ 5 ಮಂದಿಗೆ ಊಟ, ತಿಂಡಿ, ಕಾಫಿ ಮಾಡಲು ಕೊಡುವ ಸಂಬಳ, ಬಾಣಂತನ ಮಾಡಲು ಕೊಡುವ ಸಂಬಳ -ಎಲ್ಲಾ ಸೇರಿ ಎಷ್ಟಾಗಬಹುದು?”
“ಬಾಡಿಗೆ 10,000 ರೂ. ಉಳಿದವರಿಗೆ 16 ಸಾವಿರ ಹೇಳಿದ್ದೀವಿ. ಅಡಿಗೆ ತಿಂಡಿ ಮಾಡಲು 15 ಸಾವಿರ ಕೊಡ್ತೀವಿ. ಅಡಿಗೆಯವರು ನಮ್ಮ ಮನೆಯಲ್ಲೇ ಊಟ ಮಾಡಲಿ. ಬಾಣಂತನಕ್ಕೆ 10,000 ರೂ. ಕೊಡ್ತೀನಿ.”
“ಆಗಲಿ ನಾನು ವಿಚಾರಿಸಿ ಹೇಳ್ತೀನಿ.”
“ನಿಮ್ಮಿಂದ ತುಂಬಾ ಉಪಕಾರವಾಯ್ತು ಮೇಡಂ. ನಮ್ಮ ಮಾವನಿಗೆ ಈ ವಿಚಾರ ಹೇಳಬೇಡಿ. ನಾವು ನಮ್ಮತ್ತೆ ಅಲ್ಲಿಗೆ ಬಂದ ಮೇಲೆ ಶಿಫ್ಟ್ ಆಗ್ತೇವೆ. ನನ್ನ ನಾದಿನಿಯನ್ನೂ ಆಗಲೇ ಕರೆತರುತ್ತೇವೆ.”
“ಆಗಲಿ, ನಾನು ಯಾರನ್ನಾದರೂ ವಿಚಾರಿಸ್ತೇನೆ” ಎಂದರು ರಾಜಲಕ್ಷ್ಮಿ.

ಅಂದು ರಾತ್ರಿ ಊಟ ಕೊಡಲು ಬಂದ ಗೌರಮ್ಮ ಬಹಳ ಅತ್ತಿರುವ ಹಾಗೆ ಕಾಣುತ್ತಿತ್ತು.
“ಯಾಕಳ್ತಿದ್ದೀರ ಗೌರಮ್ಮ?”
“ಅಳದೆ ಇನ್ನೇನು ಮಾಡಲಮ್ಮ? ಇವತ್ತು ಚಿನ್ಮಯಿ, ಭಾಸ್ಕರ ರಂಗನತಿಟ್ಟಿಗೆ ಹೋಗಿದ್ದಾರೆ. ಶ್ರೀರಂಗಪಟ್ಟಣದ ನನ್ನ ಪರಿಚಿತರೊಬ್ಬರು ಫೋನ್ ಮಾಡಿದ್ದರು. ಅವರು ಹೋಗಿ ನನ್ನ ಓರಗಿತ್ತಿಗೆ ಹೇಳಿದ್ರೆ ಅವಳು ನಮ್ಮನೆಯವರಿಗೆ ಏನೇನೋ ಹೇಳಿ ಅವರ ತಲೆ ಕೆಡಿಸ್ತಾಳೆ. ನಾನು ಏನು ಮಾಡಲಿ ರಾಜಮ್ಮ?”
“ನಮ್ಮ ವೃದ್ಧಾಶ್ರಮದ ಕೆಲಸ ಬಿಟ್ಟು ಮೈಸೂರಲ್ಲಿ ಮನೆ ಮಾಡಿ ನಿಮ್ಮನೆಯವರನ್ನು ಕರೆದುಕೊಂಡು ಬನ್ನಿ. ಮಗಳ ಮದುವೆ ಮಾಡಿ.”
“ತಮಾಷೆ ಮಾಡ್ತಿದ್ದೀರಾ ರಾಜಮ್ಮ?”
“ಇಲ್ಲ ನಿಜ ಹೇಳ್ತಿದ್ದೀನಿ. ಭಾಸ್ಕರನಿಗೆ ನಂಜನಗೂಡಿನಲ್ಲಿ ಕೆಲಸ ಸಿಗುವ ಹಾಗಿದೆ. ಅವನು ಒಪ್ಪಿಕೊಳ್ತಾನೆ. ಒಂದು ತಿಂಗಳಲ್ಲಿ ನೀವು ಒಬ್ಬ ಸರಿಯಾದ ಅಡಿಗೆಯವರನ್ನು ಗೊತ್ತು ಮಾಡಿಕೊಡಿ. ನಿಮಗೆ ಬೇರೆ ವ್ಯವಸ್ಥೆ ನಾನು ಮಾಡಿಕೊಡ್ತೀನಿ.”
“ರಾಜಮ್ಮ ಬೇರೆ ಅಡಿಗೆಯವರಾ?”
“ಹೌದು. ಅವರಿಗೆ ಇಲ್ಲೇ ಇರಲು ಪರ‍್ಮಿಶನ್ ಕೊಡ್ತೀನಿ. ಇವತ್ತು ಚಿನ್ಮಯಿಗೆ ಬೈಬೇಡಿ. ನಾನೇ ನಾಳೆ ಅವಳ ಹತ್ತಿರ ಮಾತಾಡ್ತೀನಿ.”
“ಸರೀಮ್ಮ.”
“ಈ ಕೆಲಸ ನೀವು ಬಿಡುವುದರಿಂದ ನಿಮಗೇನೂ ನಷ್ಟವಾಗಲ್ಲ. ಇರೋದಿಕ್ಕೆ ಮನೆ, ಕೈ ತುಂಬಾ ಸಂಬಳ ಸಿಗುತ್ತದೆ. ನಿಮ್ಮನೆಯವರು ಮಗಳು, ಅಳಿಯನ ಜೊತೆ ಆರಾಮವಾಗಿರಬಹುದು.”
ಗೌರಮ್ಮ ಮಾತಾಡಲಿಲ್ಲ.

(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ
https://www.surahonne.com/?p=42306

-ಸಿ.ಎನ್. ಮುಕ್ತಾ

5 Responses

  1. ಪದ್ಮಾ ಆನಂದ್ says:

    ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಲು ಮುಂದುವರೆದರೆ ತಾನಾಗಿಯೇ ದಾರಿಗಳು ತೆರೆದುಕೊಳ್ಳುತ್ತಾ ಹೋಗುತ್ತವೆ ಎಂಬುದಕ್ಕೆ ಉದಾಹರಣೆಯಂತಿದೆ ಈ ವಾರದ ಕಂತು.

  2. ಕಾದಂಬರಿ ಪರಹಾರದ ಹಾದಿಯತ್ತ ಸಾಗುತ್ತಿರುವುದುನ್ನು ಓದಿ ಮನಸ್ಸು ನಿರಾಳ ವಾಗುತ್ತಿದೆ ಅದರ ಜೊತೆಗೆ.. ನಮ್ಮ ನಮ್ಮ ಪಾತ್ರ ಗಳನ್ನು ಎಷ್ಟು ಜತನವಾಗಿ ನಿರ್ವಹಿಸಬೇಕೆಂಬುದರ ಬಗ್ಗೆ..ಸೂಕ್ಷ್ಮ ಅವಲೋಕನ ಇದೆ..

  3. ನಯನ ಬಜಕೂಡ್ಲು says:

    Beautiful

  4. ಸಿ.ಎನ್ ಮುಕ್ತಾ says:

    ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಇವರಿಗೂ ಹಾಗೂ ಅಭಿಪ್ರಾಯ ತಿಳಿಸಿರುವ ಆತ್ಮೀಯ ಗೆಳತಿಯರಿಗೆ ಧನ್ಯವಾದಗಳು

  5. ಶಂಕರಿ ಶರ್ಮ says:

    ಕಥಾಪಾತ್ರಗಳ ಸೂಕ್ಷ್ಮ ನಿರ್ವಹಣೆ ಅತ್ಯಂತ ಸಮರ್ಪಕವಾಗಿದೆ. ರೂವಾರಿ ಮುಕ್ತಾ ಮೇಡಂ …. ಧನ್ಯವಾದಗಳು.

Leave a Reply to ಪದ್ಮಾ ಆನಂದ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: