ಅಮೂಲ್ಯ ಸಾಹಿತ್ಯ ಸುಧೆ ನೀಡಿರುವ “ಡಾ ಸಿ ಪಿ ಕೆ”.

Share Button

ಕನ್ನಡ ಸಾರಸ್ವತ ಲೋಕದಲ್ಲಿ ಅಗ್ರಪಂಕ್ತಿಯ ಸಾಹಿತಿಗಳಲ್ಲಿ ಇವರಿಗೆ ಪ್ರಮುಖ ಸ್ಥಾನವಿದೆ. “ಸಿಪಿಕೆ” ಈ ಹೆಸರಿನಿಂದಲೇ ಪ್ರಸಿದ್ಧರಾದವರು. ಈ ಮೂರು ಅಕ್ಷರದ ಚಮತ್ಕಾರ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಶಕೆಯನ್ನು ಪ್ರಾರಂಭಿಸಿತು. ಡಾ ಸಿ ಪಿ ಕೃಷ್ಣಕುಮಾರ್ ರವರು ಸಾಹಿತ್ಯ ಲೋಕದಲ್ಲಿ ಸಾಧಿಸಿದ್ದು ಅಪಾರ. ಅಂದಿನಿಂದ ಇಂದಿನವರೆಗೂ ಕೂಡ ಸರಳ ಸಜ್ಜನಿಕೆಯಿಂದ ಬದುಕಿ, ತಮ್ಮ ಬೋಧಕ ವೃತ್ತಿಯಿಂದ ನಿವೃತ್ತರಾದ ನಂತರವೂ ಕೂಡ ಸಾಹಿತ್ಯದಲ್ಲಿ ವಿಶಿಷ್ಟ ಪ್ರಯೋಗಗಳ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಕೈ ಆಡಿಸಿದ ಸಾಧನೆ ಇವರದ್ದು. ಇವರು ಇಂದಿಗೂ ಕೂಡ ದಿನಪತ್ರಿಕೆಗಳಲ್ಲಿ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಬರೆಯುತ್ತಾರೆ, ಸ್ಪಂದಿಸುತ್ತಾರೆ. ಅಲ್ಲದೆ ಹಲವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಎಂದಿನ ಚುರುಕು ಭಾಷಣವನ್ನು ಮಾಡಿ ಎಲ್ಲರನ್ನೂ ಸೆಳೆಯುತ್ತಾರೆ. ಇವರ ಪ್ರತಿಯೊಂದು ಪದಪುಂಜಗಳು ಕೂಡ ಅರ್ಥಗರ್ಭಿತ ಹಾಗೂ ಮೌಲ್ಯಯುತವಾಗಿರುತ್ತವೆ. ಇವರು ಹುಟ್ಟು ಹಬ್ಬವನ್ನು ಮಂಗಳವಾರ ಆಚರಿಸಿಕೊಂಡಿದ್ದಾರೆ. ಅವರ ಜೊತೆಗಿನ ಒಡನಾಟದ ಸವಿ ಸವಿ ಮೆಲುಕು.

“ಡಾ ಸಿ.ಪಿ.ಕೆ”- (ಡಾ ಸಿ. ಪಿ. ಕೃಷ್ಣಕುಮಾರ್) ಎಂಬ ಮೂರಕ್ಷರ ಕನ್ನಡ ಸಾರಸ್ವತ ಲೋಕದಲ್ಲಿ ಒಂದು ರೀತಿಯಲ್ಲಿ ಮೋಡಿ ಮಾಡಿದೆ ಎಂದು ಹೇಳಬೇಕು. ಇವರ ಲೇಖನಿಯಿಂದ ಇದುವರೆವಿಗೂ ಹರಿದು ಬಂದಿರುವ ಸಾಹಿತ್ಯ ಸಾರ ನಿಜಕ್ಕೂ ಅರ್ಥಪೂರ್ಣ, ಮೌಲಿಕ. ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕಿನ ಚಿಕ್ಕನಾಯಕನಹಳ್ಳಿ ಪುಟ್ಟೇಗೌಡರ ಮಗ ಕೃಷ್ಣಕುಮಾರ್ ಅವರು 1939 ಎಪ್ರಿಲ್ 8 ರಂದು ಜನಿಸಿದರು. ತಾಯಿ ಚಿಕ್ಕಮ್ಮ; ತಂದೆ ಪುಟ್ಟೇಗೌಡರು. ಇವರು ಮೋಜಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಸಿ.ಪಿ.ಕೆ. 9 ತಿಂಗಳ ಕೂಸಿದ್ದಾಗ ತಾಯಿ ತೀರಿಕೊಂಡರು.

ಸಿ. ಪಿ. ಕೃಷ್ಣಕುಮಾರ್ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿರುವ ಇವರು ಇಂದಿಗೂ ಸಹ ತಮ್ಮ ಎಂದಿನ ಚಿಕ್ಕ-ಚೊಕ್ಕ ಅರ್ಥಪೂರ್ಣ, ಜೊತೆಗೆ ಸಮಗ್ರ ವನ್ನು ಸಾರುವ ಇವರ ಲೇಖನಗಳನ್ನು, ಕವನಗಳನ್ನು, ಒಟ್ಟಾರೆ ಎಲ್ಲಾ ಸಾಹಿತ್ಯವನ್ನು ಓದುವುದೇ ಒಂದು ರೀತಿಯ ಸೊಗಸು. ಜೊತೆಗೆ ರಸಪಾಕ!. ಇವರು ಬರೆದಿರುವ ಪುಸ್ತಕಗಳು ಸಮಗ್ರ ಮಾಹಿತಿಗಳ ಸಂಗ್ರಹ. ಅದರಲ್ಲೂ “ಚಿಂತನ ಚಿಂತಾಮಣಿ”- 793 ಚಿಂತನ ಬರಹಗಳು ಈ ಪುಸ್ತಕದಲ್ಲಿ ಅಡಗಿವೆ. ಅವನ್ನು ಓದುತ್ತಾ ಹೋದರೆ ಬದುಕಿನ ವಿವಿಧ ಮಜಲುಗಳ ಬಗ್ಗೆ, ತಾವು ಕಂಡ, ಜೀವನ ಸತ್ಯ ದರ್ಶನ, ಅನುಭವಗಳ ರಸಮಾಲೆ….. ಜೊತೆಗೆ ಅವರು ತಮ್ಮ ಲೇಖನಗಳಿಗೆ ಬಳಸುವ ಉಪಮಾನ, ಉಪಮೇಯಗಳು….. ನವಿರಾಗಿ ಓದಿಸಿಕೊಂಡು ಹೋಗುವ ಸಾಮರ್ಥ್ಯ……. ಸರಳ, ಸುಂದರ, ಅರ್ಥಪೂರ್ಣ, ಮೌಲಿಕ ಬರಹಗಳು……. ಮತ್ತೆ ಮತ್ತೆ ಓದಬೇಕೆನಿಸುವ ಆಸಕ್ತಿ ಮೂಡಿಸುವ ಸಾಹಿತ್ಯ ಸುಧೆ…… ಇದೇ ರೀತಿ ವಿಭಿನ್ನ ಅಭಿಪ್ರಾಯಗಳು ಓದಿದ ಪ್ರತಿಯೊಬ್ಬರಿಗೂ ಮೂಡುತ್ತದೆ.

ಇನ್ನು ಒಂದು ಗಮನಿಸಬೇಕಾದ ಅಂಶವೆಂದರೆ ಅವರು ಹಲವು ಉತ್ಕೃಷ್ಟ ಗ್ರಂಥಗಳನ್ನು ಬರೆದಿದ್ದರೂ ಕೂಡ, ಅವತ್ತಿನಿಂದ ಇವತ್ತಿನ ತಮ್ಮ ಇಳಿ ವಯಸ್ಸಿನವರೆಗೂ ಕೂಡ ಪತ್ರಿಕೆಗಳಿಗೆ ಬರೆಯುವುದನ್ನು ಮಾತ್ರ ನಿಲ್ಲಿಸಿಲ್ಲ. ಪತ್ರಿಕೆಗಳ ಹಲವು ಕಾಲಂ ಗಳಲ್ಲಿ ಅವರ ಹನಿಗವಿತೆ, ಚುಟುಕು, ಲೇಖನ, ಪ್ರಚಲಿತ ವಿದ್ಯಾಮಾನಗಳಿಗೆ ಸಂಬಂಧಿಸಿದಂತ ಚಿಕ್ಕ ವಿಮರ್ಶಾ ಲೇಖನ ಆಗಿರಬಹುದು, ದಿನಂಪ್ರತಿ ಪತ್ರಿಕೆಗಳಿಗೆ ಇವರು ಬರೆಯುವ ಹವ್ಯಾಸ ನಿಜಕ್ಕೂ ಯುವಕರನ್ನು ನಾಚಿಸುತ್ತಿದೆ. ಪ್ರಚಲಿತ ವಿಷಯಗಳಿಗೆ ತಕ್ಕಂತೆ ತಮ್ಮದೇ ಆದ ಶೈಲಿಯಲ್ಲಿ ಪದಗಳನ್ನು ಸೇರಿಸಿ ಕಣ್ಣಿಗೆ ಕಟ್ಟುವಂತೆ ಪ್ರಸ್ತುತಪಡಿಸುವ ರೀತಿ ನಿಜಕ್ಕೂ ಅದ್ಭುತ!.

“ಒಬ್ಬ ಕವಿಯಾದವನು, ಲೇಖಕನಾದವನು ಒಂದಿಷ್ಟು ಪುಸ್ತಕಗಳನ್ನು ಬರೆದು, ಕೆಲವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಸಾಲದು” ಎಂಬ ಮಾತಿದೆ. ಇದಕ್ಕೆ ವಿರುದ್ಧವಾಗಿ ನಿಲ್ಲುವವರು ಸಿ.ಪಿ.ಕೆ. ಅನಿಸುತ್ತದೆ. ಪ್ರಚಲಿತ ಸಮಸ್ಯೆಗಳಿಗೆ ಕವಿಯಾದವನು, ಲೇಖಕನಾದವನು ಸ್ಪಂದಿಸುವ ರೀತಿಯಲ್ಲಿ ಆಗಬೇಕು. ಸಿ ಪಿ ಕೆ ರವರು ದಿನನಿತ್ಯದ ಸಾಮಾಜಿಕ ಘಟನೆಗಳನ್ನು ತಮ್ಮ ಲೇಖನಿಯ ಮೂಲಕ ಸ್ಪಂದಿಸುವುದರಲ್ಲೀ ಒಂದು ರೀತಿಯಲ್ಲಿ ಇವರು ಸಿದ್ಧಹಸ್ತರು. ರಾಜ್ಯದ ಎಲ್ಲಾ ದಿನ, ವಾರ,ಸ ಪತ್ರಿಕೆಗಳು ಅಲ್ಲದೇ ಸ್ಥಳೀಯ ಪತ್ರಿಕೆಗಳಲ್ಲಿ ಏನಾದರೊಂದು ಬರಹ ಇದ್ದೇ ಇರುತ್ತದೆ. ತಮ್ಮ ಬರಹದಂತೆ ಭಾಷಣ ಕೂಡಾ ಅರ್ಥ ಪೂರ್ಣವಾಗಿರುತ್ತದೆ.

ನನ್ನ ಬಾಲ್ಯದಿಂದಲೂ ಸಿ.ಪಿ.ಕೆ. ಎಂದರೆ ನನಗೆ ತುಂಬಾ ಅಚ್ಚುಮೆಚ್ಚು.ನಾನು ಪ್ರೌಢಾವಸ್ಥೆಗೆ ಬಂದಾಗ ನನಗಿನ್ನೂ ನೆನಪಿದೆ, ಪತ್ರಿಕೆಗಳಲ್ಲಿ ಇವರ ವಿಚಾರಪೂರ್ಣ ಬರಹಗಳನ್ನು ಓದಿ ತುಂಬಾ ಸ್ಪೂರ್ತಿ ಗೊಳ್ಳುತ್ತಿದ್ದೆ. “ಮೈಸೂರು ಮಿತ್ರ” ದಿನಪತ್ರಿಕೆಯಲ್ಲಿ ಇವರ ವಿಳಾಸ ಪ್ರಕಟವಾಗಿತ್ತು. ನಾನು ತಕ್ಷಣ ಅವರಿಗೆ ಒಂದು ಪತ್ರ ಬರೆದು ಸುಮ್ಮನಾದೆ. ವಾರದೊಳಗೆ ನನ್ನ ಪತ್ರಕ್ಕೆ ಪ್ರತಿಸ್ಪಂದನೆ ಬಂತು!. ನಿಜಕ್ಕೂಅಚ್ಚರಿಯಾಯಿತು. ಸಾಹಿತಿಗಳು ಸಾಮಾನ್ಯರ ಪ್ರತಿಕ್ರಿಯೆಗೆ ಸ್ಪಂದಿಸುವುದು ಇವರ ದೊಡ್ಡ ಗುಣ. ಪತ್ರದಲ್ಲಿ ಚಿಕ್ಕ ಸಾಲುಗಳು ಗಮನ ಸೆಳೆದವು…..”ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ನಿಮ್ಮ ಸಾಹಿತ್ಯ ಕೃಷಿ ಉಜ್ವಲವಾಗಲಿ…” ಎಂದು ಆಶೀರ್ವದಿಸಿದ್ದರು. ಆ ಪತ್ರವನ್ನು ನಾನು ಇಂದಿಗೂ ಜೋಪಾನವಾಗಿ ಇಟ್ಟುಕೊಂಡಿದ್ದೇನೆ.

“ಡಾ ಸಿ.ಪಿ.ಕೆ”- (ಡಾ ಸಿ. ಪಿ. ಕೃಷ್ಣಕುಮಾರ್)

ಸಿ.ಪಿ.ಕೆ. ಅವರನ್ನು ನೋಡಬೇಕೆಂಬ ಕುತೂಹಲ ಒಂದಲ್ಲ ಒಂದು ರೀತಿಯಲ್ಲಿ ನನಗೆ ನಿರಂತರವಾಗಿ ಕಾಡುತ್ತಲೇ ಇತ್ತು. ಸಭೆ ಸಮಾರಂಭಗಳಲ್ಲಿ ಮಾತ್ರ ಅವರನ್ನು ದೂರದಿಂದ ನೋಡಿ ಯಾವಾಗಲೂ ಒಂದು ಬಾರಿ ಫೋಟೋ ತೆಗೆಸಿಕೊಂಡಿದ್ದರು ನೆನಪು. ಅನಂತರದ ದಿನಗಳಲ್ಲಿ ಪಿ.ಯು.ಸಿ ಓದುತ್ತಿರುವಾಗಲೇ ನನಗೆ ನನ್ನ ತಂದೆಯ ಅನುಕಂಪ ಆಧಾರಿತ ಸರ್ಕಾರಿ ಕೆಲಸ ಸಿಕ್ಕಿದ್ದರಿಂದ, ಪಿಯುಸಿ ಮುಗಿದ ನಂತರ ನಾನು ಮಹಾರಾಜ ಸಂಜೆ ಕಾಲೇಜಿಗೆ ಪದವಿ ತರಗತಿಗಾಗಿ ಸೇರಿಕೊಂಡೆ. ಆದರೆ ಆರು ತಿಂಗಳು ಮಾತ್ರ ಹೋದೆ. ನಂತರ ಪೂರ್ತಿ ಓದಲಾಗಲಿಲ್ಲ. ಸಾಹಿತ್ಯದ ಆಸಕ್ತಿ ಇದ್ದುದರಿಂದ, ಕೆಲಸವು ಕೂಡ ಸಿಕ್ಕಿದ್ದರಿಂದ ಪೂರ್ತಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ನನ್ನನ್ನು ತೊಡಗಿಸಿಕೊಂಡೆ. ನಂತರದ ದಿನಗಳಲ್ಲಿ ಪ್ರೊ ಕೆ. ಭೈರವಮೂರ್ತಿ ಅವರು ಸಹ ಪರಿಚಯ ಆದರು. ಮುಂದೆ ನಾನು ತ್ರಿವೇಣಿ ಪಾಂಡವಪುರ ಇವರ ಕವನ ಸಂಕಲನ ವನ್ನೂ ಪ್ರೋತ್ಸಾಹದ ದೃಷ್ಟಿಯಿಂದ ಹೊರ ತಂದಾಗ ಸಿ.ಪಿ.ಕೆ. ಯವರು … ಮನದ ಮಿಡಿತ… ಕವನ ಸಂಕಲನಕ್ಕೇ ಬೆನ್ನುಡಿ ಬರೆದು ಕೊಟ್ಟರು.

ಉದ್ಯಾನ ನಗರಿ ಮೈಸೂರಿನಲ್ಲಿ ನಡೆಯುವ ಹಲವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಸಿಪಿಕೆ ಮತ್ತು ಭೈರವಮೂರ್ತಿ ಜೋಡಿ ಕಾರ್ಯಕ್ರಮಗಳಿಗೆ ಒಂದು ರೀತಿಯಲ್ಲಿ ಮೆರುಗು ನೀಡುತ್ತಿತ್ತು. ಸಿ ಪಿ ಕೆ ಅವರ ಮನೆಗೆ ಭೈರವಮೂರ್ತಿಯವರ ಕಾರು…. ಒಂದು ರೀತಿಯಲ್ಲಿ ಅವಿನಾಭಾವ ಸಂಬಂಧ ಇರುತ್ತಿತ್ತು. ಭೈರವಮೂರ್ತಿಗಳು ನಿಧನರಾದಾಗ ಸಿ ಪಿ ಕೆ ಅವರು ಭಾವುಕರಾಗಿದ್ದರು. ರಾಷ್ಟ್ರ ಕವಿ ಕುವೆಂಪುರವರ ಶಿಷ್ಯ ದೇ ಜವರೇಗೌಡ ರವರು…… ದೇ ದೇವರೇಗೌಡರ ಶಿಷ್ಯ ಸಿ ಪಿ ಕೆ……ಡಾ ಸಿ ಪಿ ಕೆ ರವರ ಶಿಷ್ಯ ಪ್ರೊ ಕೆ ಬೈರವಮೂರ್ತಿ ರವರು….. ಈ ರೀತಿ ಶಿಷ್ಯ ಪರಂಪರೆ ನಿರಂತರವಾಗಿ ಸಾಗುತ್ತಿದೆ.

ಸಿ ಪಿ ಕೆ ಅವರು ಕೂಡ ಹಲವು ಸಾಹಿತ್ಯ ವಿದ್ಯಾರ್ಥಿಗಳನ್ನು, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಆಸಕ್ತಿ ಹೊಂದಿರುವ ಎಲ್ಲರನ್ನೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಪ್ರೋತ್ಸಾಹಿಸುವ ಗುಣವನ್ನು ಕೂಡ ಹೊಂದಿದ್ದಾರೆ. ಸಿ ಪಿ ಕೆ ಮತ್ತು ಭೈರವ ಮೂರ್ತಿರವರ ಒಡನಾಟ ಸಿಕ್ಕಿರುವುದು ನನ್ನ ಪಾಲಿಗೆ ಮರೆಯಲಾಗದ ವಿಷಯ. ನಂತರದಲ್ಲಿ ನನಗೆ ಆತ್ಮೀಯರಾದರು ಸಿ.ಪಿ.ಕೆ. ಯವರು. ಇವರ ಮನೆಗೆ ನಾನು ಹಲವು ಬಾರಿ ನನ್ನ ಆತ್ಮೀಯ ಸ್ನೇಹಿತರಾದ ಕಣ್ಣೂರು. ವಿ. ಗೋವಿಂದಾಚಾರಿ ರವರೊಂದಿಗೆ ಹೋಗಿದ್ದೇವೆ. ಆ ಸಮಯಗಳಲ್ಲಿ ಹತ್ತು ನಿಮಿಷಗಳಲ್ಲಿ ಅವರೊಂದಿಗಿನ ಆತ್ಮೀಯ ಮಾತುಕತೆ, ಅವರ ಸರಳತನ, ಚಹಾಕೂಟ, ಎಲ್ಲವೂ ಸಹ ಇಂದಿಗೂ ಸಹ ಸವಿ-ಸವಿ-ನೆನಪು. ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಹಲವು ಯುವ ಲೇಖಕರು/ ಕವಿಗಳ ಪುಸ್ತಕಗಳಿಗೆ ಮುನ್ನುಡಿ, ಬೆನ್ನುಡಿ ಬರೆದು ಪ್ರೋತ್ಸಾಹ ನೀಡಿದ್ದಾರೆ.ಪಡುವಾರಹಳ್ಳಿ ಕಡೆಗೆ ಹೋದಾಗಲೆಲ್ಲ ಅವರನ್ನು ಕನಿಷ್ಠ ಐದು ನಿಮಿಷವಾದರೂ ಸಹ ಭೇಟಿ ಮಾಡುವುದು ಇಂದಿಗೂ ಸಹ ನಡೆಯುತ್ತಲೇ ಇದೆ.

ಇನ್ನೂ ಅವರ ವ್ಯಕ್ತಿತ್ವದ ಬಗ್ಗೆ….. ಸಾಹಿತ್ಯದಲ್ಲಿನ ಶಿಸ್ತಿನ ಬಗ್ಗೆ….. ಹೇಳುವುದಾದರೆ ಅವರು ತುಂಬಾ ಸರಳ ವ್ಯಕ್ತಿ. ಎಂದಿಗೂ ಸಹ ಮೋಟರ್ ಗಾಡಿಯನ್ನು ಓಡಿಸುವುದಿಲ್ಲ. ಮೊಬೈಲನ್ನು ಬಳಸುವುದಿಲ್ಲ. ಇದು ವಿಶೇಷ. ಇದರ ಜೊತೆಗೆ ಸಾಹಿತ್ಯದ ಯಾವುದೇ ಕಾರ್ಯಕ್ರಮಕ್ಕೆ ನಾವು ಅವರನ್ನು ಕರೆಯಲು ಹೋದಾಗ ಅವರು ಮೊದಲು ಕ್ಯಾಲೆಂಡರ್ ನೋಡುತ್ತಾರೆ. ಏಕೆಂದರೆ ಯಾವುದಾದರೂ ಕಾರ್ಯಕ್ರಮ ಮೊದಲೇ ನಿಗದಿಯಾಗಿದೆಯೇ ಎಂದು ಪರಿಶೀಲಿಸಿ, ನಂತರ ಕಾರ್ಯಕ್ರಮಕ್ಕೆ ಬರುವುದನ್ನು ಒಪ್ಪಿಕೊಳ್ಳುತ್ತಾರೆ. ಜೊತೆಗೆ ಮುಂಚಿತವಾಗಿಯೇ ಕಾರ್ಯಕ್ರಮಕ್ಕೆ ಬಂದು ಅಲ್ಲಿ ಅವರಿಗೆ ನೀಡಿರುವ ಸಭಾ ಸ್ಥಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಕೊನೆಯವರೆಗೂ ಸಹ ಇದ್ದು, ಯಶಸ್ವಿಗೊಳಿಸಿ, ಆಶೀರ್ವದಿಸಿ ಹೋಗುತ್ತಾರೆ. ಇದೊಂದು ಅವರ ದಿನಚರಿ. ಜೊತೆಗೆ ಅವರು ಬರೆದಂತೆ ಅವರ ಭಾಷಣಗಳು ಕೂಡ ಅರ್ಥಪೂರ್ಣ. ಮನಮೋಹಕ ಹಾಗೂ ಮಾಹಿತಿ ದಾಯಕವಾಗಿರುತ್ತವೆ. ಅವರು ಪೂರ್ವ ತಯಾರಿಯೊಂದಿಗೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪೂರ್ವ ಪೀಠಿಕೆ ಹಾಕಿಕೊಂಡು 15 ನಿಮಿಷ ದಿಂದ ಅರ್ಧಗಂಟೆಯೊಳಗೆ ಏನು ಹೇಳಬೇಕು ಎಲ್ಲವನ್ನು ತಮ್ಮದೇ ಆದ ಶೈಲಿಯಲ್ಲಿ ಹೇಳಿ ಮುಗಿಸುತ್ತಾರೆ. ಅದು ವಿನೋದ ಚಟಾಕಿ ಯೊಂದಿಗೆ!. ಇವರದು ಲಘು ಧಾಟಿಯ ಭಾಷಣದ ರೀತಿಯಲ್ಲಿ ಒಂದು ಪ್ರೀತಿ ಇರುತ್ತದೆ. ವಿಷಯದ ಒಳ-ಹೊರಗು ಇರುತ್ತದೆ.

ನಾನು “ದೀಪ್ತಿ ಸಂಸ್ಕೃತಿಕ ವೇದಿಕೆ”ಯನ್ನು ಪ್ರಾರಂಭಿಸಲು ಪ್ರೇರಣೆಯಾದವರು ಪ್ರೊ. ಕೆ. ಭೈರವಮೂರ್ತಿಯವರು ಕೂಡಾ. ಇವರ ಜೊತೆಗೂಡಿ ಸಿ.ಪಿ.ಕೆ ಯವರು ನನ್ನ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿದರು. ನನ್ನ ಸಂಸ್ಥೆ ಈಗ ಆರು ವರ್ಷ ತುಂಬಿದೆ. ಅಂದಿನಿಂದ ಇಂದಿನವರೆಗೂ ಒಂದಲ್ಲ ಒಂದು ನನ್ನ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಇವರು ಭಾಗವಹಿಸುತ್ತಾ ಬಂದಿದ್ದಾರೆ. ನನಗೆ ಇದೊಂದು ಹೆಮ್ಮೆಯ ಸಂಗತಿ. ಇವರ ಆತ್ಮೀಯ ಒಡನಾಟದ ಬಗ್ಗೆ ಬರೆಯಬೇಕೆಂದರೆ ನನಗೆ ಸಮಯ ಸಾಲದು!.

ಸಿ.ಪಿ.ಕೆ ಯವರಿಗೆ ಪಂಪ ಪ್ರಶಸ್ತಿ ಬಂದಿದೆ. ಇನ್ನು ಹಲವು ಪ್ರಶಸ್ತಿಗಳು ಹರಸಿ ಬಂದಿವೆ. ಅವರ ಇದುವರೆಗಿನ ಸಾಹಿತ್ಯ ಸೇವೆಗೆ ಮತ್ತಷ್ಟು ಪ್ರಶಸ್ತಿಗಳು ಬರಲಿ. ಬಂದರೆ ಕನ್ನಡಾಂಬೆಗೆ ಹೆಮ್ಮೆ. ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಾ ಸಾಹಿತ್ಯದ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ ಇವರ ಲೇಖನಿಯಿಂದ ಮತ್ತಷ್ಟು ಸಾಹಿತ್ಯ ಕೃತಿಗಳು ಹೊರಬರಲಿ. ಇದು ನಮ್ಮೆಲ್ಲರ ಆಶಯ. ನಿಮಗಿದೋ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಸರ್.

ಕಾಳಿಹುಂಡಿ ಶಿವಕುಮಾರ್, ಮೈಸೂರು.

10 Responses

  1. ಸಿ.ಪಿ.ಕೆ.ಎಂದೇ ಪರಿಚಿತರಾಗಿರುವ ಹಾಗೂ ನಮಗೆ ಗುರುಗಳೂ ಆಗಿದ್ದ ವರ ಪರಿಚಯಾತ್ಮಕ ಲೇಖನ ಚೆನ್ನಾಗಿ ಬಂದಿದೆ ಸಾರ್..

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ಧನ್ಯವಾದಗಳು ಮೇಡಂ ನಿಮ್ಮ ಗುರುಗಳು ಎಂದು ಕೇಳಿ ಖುಷಿ ಪಟ್ಟೆ.

  2. MANJURAJ H N says:

    ನಮ್ಮ ಗುರುಗಳು ಅದ್ಭುತ ಮತ್ತು ಅವರಿಂದ ರಚಿತವಾದುದೆಲ್ಲ ಅಮೋಘ
    ನಿಮ್ಮ ಲೇಖನದ ಮೂಲಕ ಗುರುವಂದನೆ; ನಿಮಗೂ ಅಭಿನಂದನೆ.
    ಸಿಪಿಕೆಯೆಂದರೆ ಸಾಹಿತ್ಯ ಮತ್ತು ಸಂಸ್ಕೃತಿಯ ಆರೋಗ್ಯ; ಇಂಥವರು ನಮ್ಮ
    ಕನ್ನಡ ನಾಡಿನ ಭಾಗ್ಯ. ನೂರ್ಕಾಲ ಸುಖವಾಗಿರಲಿ.

    ಧನ್ಯವಾದಗಳು ಸರ್

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ಇವರ ಸರಳ ಸಜ್ಜನಿಕೆ ಬದುಕು ಎಲ್ಲರಿಗೂ ಮಾದರಿ ಹಲವರಿಗೆ ಗುರುಗಳಾಗಿದ್ದಾರೆ ನಿಮಗೆ ಧನ್ಯವಾದಗಳು.

  3. ಪದ್ಮಾ ಆನಂದ್ says:

    ಮೇರು ವ್ಯಕ್ತಿತ್ವದ ಸಿಪಿಕೆ ಅವರಿಗೆ ಶುಭಾಶಯ ಕೋರುತ್ತಾ, ಅವರ ಕುರಿತಾದ ಮಾಹಿತಿಗಳನ್ನು ಹಂಚಿಕೊಂಡ ಚಂದದ ಆತ್ಮೀಯ ಬರಹ

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ಮುಂದಿನ ದಿನಗಳಲ್ಲಿ ನಾವು ಸಾಹಿತಿಗಳ ಮನೆ ಮನೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಮೇಡಂ ನೀವು ಬನ್ನಿ ಮೇಡಂ.

  4. ನಯನ ಬಜಕೂಡ್ಲು says:

    Nice

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ನಿಮ್ಮ ಅನಿಸಿಕೆಗೆ ಧನ್ಯವಾದಗಳು ಮೇಡಂ.

  5. ಚೆಂದದ ಅಭಿನಂದನ ಲೇಖನ

  6. ಶಂಕರಿ ಶರ್ಮ says:

    ಹಿರಿಯ ಸಾಹಿತಿ ಸಿಪಿಕೆ ಸರ್ ಅವರ ಮೇರುವ್ಯಕ್ತಿತ್ವದ ಪರಿಚಯ ಲೇಖನವು ಅವರ ಕುರಿತು ಬಹಳಷ್ಟು ಮಾಹಿತಿಗಳನ್ನು ನೀಡಿದೆ…ಧನ್ಯವಾದಗಳು.

Leave a Reply to ಕಾಳಿಹುಂಡಿ ಶಿವಕುಮಾರ್, ಮೈಸೂರು. Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: