ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 20

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ದಿನ 7:  ‘ ಹೊ ಚಿ ಮಿನ್ಹ್ ‘ ನಗರ … ರಿಯುನಿಫಿಕೇಷನ್ ಪ್ಯಾಲೇಸ್…21/09/2024

21/09/2024 ರಂದು ಬೆಳಗಾಯಿತು. ನಾವು ಉಪಾಹಾರ ಮುಗಿಸಿ, 0730 ಗಂಟೆಗೆ ಹೋಟೆಲ್ ‘ಕ್ವೀನ್ ಆನ್’ ನ ರಿಸೆಪ್ಷನ್ ನಲ್ಲಿ ಸಿದ್ದವಾಗಿರಬೇಕೆಂಬ ಸಂದೇಶ ಬಂದಿತ್ತು . ನಮಗೆ ಹನೋಯಿ, ಡನಾಂಗ್ ಗಳಲ್ಲಿ ಕೊಡಲಾದ ಕೊಠಡಿಗಳಿಗೆ ಹೋಲಿಸಿದರೆ ಇಲ್ಲಿಯ ರೂಮ್ ಚಿಕ್ಕದಾಗಿತ್ತು .ಆದರೆ ಬೇಕಿದ್ದ ಅನುಕೂಲತೆಗಳಿದ್ದುವು. ಹೊ ಚಿ ಮಿನ್ಹ್ ನಗರವು ವಿಯೆಟ್ನಾಂನ ಎರಡನೆಯ ಅತಿ ದೊಡ್ಡದಾದ ಜನಸಾಂದ್ರತೆಯುಳ್ಳ ನಗರ . ಈ ನಗರಕ್ಕೆ ಮೊದಲು ಸೈಗಾನ್ ಎಂಬ ಹೆಸರಿತ್ತು. 1960-1975 ರ ಅವಧಿಯಲ್ಲಿ ಸಂಭವಿಸಿದ ಎರಡನೆಯ ವಿಯೆಟ್ನಾಂ ಯುದ್ದ ಅಥವಾ ಇಂಡೋ-ಚೈನಾ ಯುದ್ದದ ಸಮಯದಲ್ಲಿ ಸೈಗಾನ್ ಯುದ್ದದ ಪ್ರಮುಖ ಕ್ಷೇತ್ರವಾಗಿತ್ತು ಹಾಗೂ ಅಮೇರಿಕದ ಸೈನ್ಯ ಇಲ್ಲಿ ಕಾರ್ಯಾಚರಣೆ ಮಾಡಿತ್ತು. 1975 ರಲ್ಲಿ ಹೊ ಚಿ ಮಿನ್ಹ್ ಅವರ ನಾಯಕತ್ವದಲ್ಲಿ ಉತ್ತರ ವಿಯೆಟ್ನಾಂನವರು ಇಲ್ಲಿ ಹಿಡಿತ ಸಾಧಿಸಿದರು. ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ ಒಂದಾದುವು. ತಮ್ಮ ರಾಷ್ಟ್ರನಾಯಕನ ಗೌರವಾರ್ಥ ಸೈಗಾನ್ ನಗರದ ಹೆಸರನ್ನು ಹೊ ಚಿ ಮಿನ್ಹ್ ಸಿಟಿ ಎಂದು ಬದಲಾಯಿಸಿದರು. ಈಗ ಎರಡೂ ಹೆಸರುಗಳು ಚಾಲನೆಯಲ್ಲಿದೆ.

0730 ಗಂಟೆಗೆ ‘ವಿನ್ಸಂಟ್’ ಎಂಬ ಎಳೆಯ ವಯಸ್ಸಿನ ಮಾರ್ಗದರ್ಶಿ ಬಂದ. ಈತನೂ ವಿದ್ಯಾರ್ಥಿ, ಫ್ರೀ ಲಾನ್ಸರ್ ಆಗಿ ಕೆಲಸ ಮಾಡುತ್ತಾನೆ ಎಂದು ಗೊತ್ತಾಯಿತು. ಈ ದಿನ ನಾವು ಹೊ ಚಿ ಮಿನ್ಹ್ ನಗರದ ಅಧ್ಯಕ್ಷರ ಅರಮನೆ, ಮ್ಯೂಸಿಯಂ ಇತ್ಯಾದಿ ನೋಡಲಿದ್ದೇವೆ. ಮಳೆಯ ಸಾಧ್ಯತೆ ಇದೆ, ನಿಮ್ಮ ಬಳಿ ಕೊಡೆ ಇದ್ದರೆ ತೆಗೆದುಕೊಳ್ಳಿ ಎಂದ. ಅಂದು ಮೊದಲು ನಾವು ಭೇಟಿ ಕೊಟ್ಟ ಸ್ಥಳ ವಿಯೆಟ್ನಾಂನ ‘ಇಂಡಿಪೆಂಡೇನ್ಸ್ ಪ್ಯಾಲೇಸ್ (ಸ್ವಾತಂತ್ರ್ಯ ಭವನ)’ . ಇದನ್ನು ‘ ರಿಯುನಿಫಿಕೇಷನ್ ಪ್ಯಾಲೇಸ್’ ಎಂದೂ ಕರೆಯುತ್ತಾರೆ. ಈ ಬೃಹತ್ ಕಟ್ಟಡವನ್ನು ಮೂಲತ: ವಿಯೆಟ್ನಾಂನಲ್ಲಿ ತಮ್ಮ ವಸಾಹತು ಸ್ಥಾಪಿಸಿದ್ದ ಫ್ರೆಂಚರು 1868 ರಿಂದ 1871 ರ ಅವಧಿಯಲ್ಲಿ ನಿರ್ಮಿಸಿ ತಮ್ಮ ಇಂಡೋ-ಚೀನಾ ಗವರ್ನರ್ ಜನರಲ್ ರವರ ನಿವಾಸ ಹಾಗೂ ಆಡಳಿತ ಕಚೇರಿಯನ್ನಾಗಿಸಿದ್ದರು. ಇದಕ್ಕೆ ‘‘ನೊರೊಡೊಮ್ ಪ್ಯಾಲೇಸ್ “ ಎಂಬ ಹೆಸರಿತ್ತು. ಹಲವಾರು ಫ್ರೆಂಚ್ ಗವರ್ನರ್ ಗಳು ಇಲ್ಲಿದ್ದು ಆಡಳಿತ ನಡೆಸಿದ್ದರು. ಜಪಾನ್ ಸೇನೆಯು ಎರಡನೆಯ ವಿಶ್ವ ಮಹಾಯುದ್ದದ ಸಂದರ್ಭದಲ್ಲಿ ಮಾರ್ಚ್09, 1945 ರಂದು ಫ್ರೆಂಚರನ್ನು ಹಿಮ್ಮೆಟ್ಟಿಸಿ ಕೆಲವೇ ತಿಂಗಳ ಮಟ್ಟಿಗೆ ಈ ಅರಮನೆಯನ್ನು ತನ್ನ ಹಿಡಿತದಲ್ಲಿರಿಸಿಕೊಂಡಿತ್ತು . ಸೆಪ್ಟೆಂಬರ್ 1945 ರಲ್ಲಿ ಜಪಾನ್ ಸೋತು ಯುದ್ದಶಾಂತಿ ಘೋಷಣೆಯಾದ ಮೇಲೆ, ಫ್ರೆಂಚರು ಪುನ: ಮರಳಿದರು.

ಇಂಡಿಪೆಂಡೆನ್ಸ್ ಪ್ಯಾಲೇಸ್, ಹೊ ಚಿ ಮಿನ್ಹ್ ನಗರ

ಅನಂತರ 1954 ರಲ್ಲಿ ‘ಡೀನ್ ಬೀನ್ ಫು’ (Dien Bien Phu) ಎಂಬಲ್ಲಿ ನಡೆದ ಪ್ರಥಮ ವಿಯೆಟ್ನಾಂ ಯುದ್ದದಲ್ಲಿ (ಅಥವಾ ಇಂಡೋ-ಚೀನಾ ಯುದ್ದ) ಸ್ಥಳೀಯ ಕಮ್ಯುನಿಸ್ಟ್ ಸೇನೆಯು ಫ್ರೆಂಚರನ್ನು ಸೋಲಿಸಿತು. ಆಮೇಲೆ ನಡೆದ ಜಿನಿವಾ ಒಪ್ಪಂದದ ಪ್ರಕಾರ , ಫ್ರೆಂಚರು ವಿಯೆಟ್ನಾಂನಿಂದ ಕಾಲ್ಕಿತ್ತರು ಹಾಗೂ ತಾತ್ಕಾಲಿಕವಾಗಿ ಉತ್ತರ ವಿಯೆಟ್ನಾಂ ಮತ್ತು ದಕ್ಷಿಣ ವಿಯೆಟ್ನಾಂ ಎಂದು ದೇಶವನ್ನು ವಿಭಾಗಿಸಲಾಯಿತು. ತಾತ್ಕಾಲಿಕವಾಗಿ ಉತ್ತರ ವಿಯೆಟ್ನಾಂನಲ್ಲಿ ಕಮ್ಯೂನಿಸಂ ತತ್ವವನ್ನು ಪಾಲಿಸುತ್ತಿದ್ದ ಹೊ ಚಿ ಮಿನ್ಹ್ ( Ho Chi Minh) ಅವರು ಅಧ್ಯಕ್ಷರಾದರು. ದಕ್ಷಿಣ ವಿಯೆಟ್ನಾಂನಲ್ಲಿ ಎಂಗೊ ಡಿನ್ ಡೀಮ್ (Ngo Dinh Diem) ನೇತೃತ್ವದ ರಿಪಬ್ಲಿಕ್ ಆಫ್ ವಿಯೆಟ್ನಾಂ ಅಸ್ತಿತ್ವಕ್ಕೆ ಬಂತು. ಸ್ವಲ್ಪ ಸಮಯದಲ್ಲಿಯೇ ಚುನಾವಣೆ ನಡೆದು ಸೂಕ್ತ ನಾಯಕರನ್ನು ಆಯ್ಕೆ ಮಾಡಬೇಕೆಂಬ ಒಪ್ಪಂದವೂ ಆಗಿತ್ತು.

ಇಲ್ಲಿಗೆ ಯುದ್ದದ ಒಂದು ಮಹಾಪರ್ವ ಮುಗಿಯಿತೆಂದು ವಿಯೆಟ್ನಾಂ ಜನರು ನಿರಾಳರಾಗುವಷ್ಟರಲ್ಲಿ ಇನ್ನೊಂದು ಯುದ್ದದ ಸುಳಿಹು ಸಿಕ್ಕಿತ್ತು. ದಕ್ಷಿಣ ವಿಯೆಟ್ನಾಂನ ಸ್ವಯಂಘೋಷಿತ ಅಧ್ಯಕ್ಷ ಡಿನ್ ಡೀಮ್ ಸರ್ವಾಧಿಕಾರಿ ಹಾಗೂ ಪ್ರಜಾಪ್ರಭುತ್ವದ ವಿರೋಧಿಯಾಗಿದ್ದರು. ಅಮೇರಿಕಾ ಸರಕಾರವನ್ನು ನೆಚ್ಚಿಕೊಂಡ ಇವರಿಗೆ ‘ ಪಪೆಟ್ ಪ್ರೆಸಿಡೆಂಟ್’ ಎಂಬ ವ್ಯಂಗ್ಯಭರಿತ ಅನ್ವರ್ಥ ನಾಮವೂ ಇತ್ತಂತೆ. ಅವರ ಕೆಥೊಲಿಕ್ ಪರ ನಡವಳಿಕೆಗಳು ಹಾಗೂ ಸ್ವಜನರನ್ನು ಉನ್ನತ ಹುದ್ದೆಗಳಲ್ಲಿರಿಸಿ ಆ ಮೂಲಕ ಜನರಿಗೆ ಕಿರುಕುಳ ಸೃಷ್ಟಿಯಾದಾಗ ಜನರು ಬಂಡಾಯವೆದ್ದರು. 1956 ರಲ್ಲಿ ಸಣ್ಣ ಅಸಮಾಧಾನದ ರೂಪದಲ್ಲಿ ಶುರುವಾದ ಬಂಡಾಯವು 1960 ರ ವೇಳೆಗೆ ತೀವ್ರವಾಯಿತು. ಸ್ಥಳೀಯ ಬೌದ್ಧ ಧರ್ಮೀಯರನ್ನು ಹಿಂಸಿಸಿದರು. ಇದಕ್ಕೆಲ್ಲ ಕಾರಣ ಡಿನ್ ಡೀಮ್ ನ ಸರ್ವಾಧಿಕಾರಿ ಧೋರಣೆ ಹಾಗೂ ಆತನಿಗಿರುವ ಆಮೇರಿಕಾದ ಬೆಂಬಲ ಎಂದು ಮನಗಂಡ ಸ್ಥಳೀಯರು 1963 ರಲ್ಲಿ ಡಿನ್ ಡೀಮ್ ಅನ್ನು ಬಂಧಿಸಿ ಹತ್ಯೆ ಮಾಡಿದರು. ಡಿನ್ ಡೀಮ್ ನ ಮರಣದಿಂದಾಗಿ ದಕ್ಷಿಣ ವಿಯೆಟ್ನಾಂನಲ್ಲಿ ಗಮನಾರ್ಹ ಸುಧಾರಣೆಗಳೇನೂ ಆಗಲಿಲ್ಲ. ಅಧಿಕಾರದಲ್ಲಿದ್ದ ಜನರಲ್ ಗಳು ತಂತಮ್ಮೊಳಗೆ ಜಗಳವಾಡುತ್ತಾ ಅಸ್ಥಿರ ಸರಕಾರವನ್ನು ರೂಪಿಸಿದ್ದರು. ಇದನ್ನು ಗಮನಿಸುತ್ತಿದ್ದ ಅಮೇರಿಕಾದ ಅಧ್ಯಕ್ಷ ಜಾನ್ಸನ್ ಅವರ ನೇತೃತ್ವದ ಸರಕಾರವು ತಾನು ದಕ್ಷಿಣ ವಿಯೆಟ್ನಾಂನ ಸ್ಥಳೀಯ ಸೇನೆಗೆ ಸಹಕಾರ ನೀಡದಿದ್ದಲ್ಲಿ ಪೌರಾತ್ಯ ದೇಶಗಳಲ್ಲಿ ಕಮ್ಯೂನಿಸಂನ ಪ್ರಾಬಲ್ಯ ವರ್ಧಿಸಬಹುದೆಂದು ತರ್ಕಿಸಿತು. ದಕ್ಷಿಣ ವಿಯೆಟ್ನಾಂ ಜನರಿಗೆ ಮಹದುಪಕಾರ ಮಾಡುವ ಭ್ರಮೆಯಲ್ಲಿ, ರಷ್ಯಾ ಬೆಂಬಲಿತ ಉತ್ತರ ವಿಯೆಟ್ನಾಂ ಮೇಲೆ ವಿಮಾನಗಳ ಮೂಲಕ ಬಾಂಬ್ ಮಳೆಗರೆಯಲಾರಂಭಿಸಿತು. ಹೀಗೆ 1965 ರಲ್ಲಿ ಆರಂಭವಾದ ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ ದೇಶದ ಎರಡನೆಯ ಇಂಡೋ-ಚೀನಾ ಸುದೀರ್ಘ ಯುದ್ದ ಆರಂಭವಾಗಿ 1975 ರ ವರೆಗೂ ನಡೆಯಿತು.

ಕೊನೆಗೆ ಎಪ್ರಿಲ್ 30, 1975 ರಂದು ಉತ್ತರ ವಿಯೆಟ್ನಾಂನ ಲಿಬರೇಶನ್ ಸೇನೆಯು ಇಲ್ಲಿಗೆ ಟ್ಯಾಂಕ್ ನುಗ್ಗಿಸಿ ಅರಮನೆಯನ್ನು ವಶಪಡಿಸಿಕೊಂಡು ತಮ್ಮ ವಿಜಯವನ್ನು ಸಾರಿದ ಚಾರಿತ್ರಿಕ ಘಟನೆ ನಡೆಯಿತು. ಈ ಟ್ಯಾಂಕ್ ಸಂಖ್ಯೆ 390 ರ ಮಾದರಿಯನ್ನು ಅರಮನೆಯ ಆವರಣದಲ್ಲಿ ಈಗಲೂ ಕಾಣಬಹುದು. ಅಂದು ಉತ್ತರ ವಿಯೆಟ್ನಾಮಿಗರು ಯುದ್ದದಲ್ಲಿ ಗೆದ್ದು, ಉತ್ತರ ಹಾಗೂ ದಕ್ಷಿಣ ವಿಯೆಟ್ನಾಂ ಒಂದಾಗಿ ದೇಶ ನಿರ್ಮಿಸಲು ಪಣ ತೊಟ್ಟರು. ಅಂದಿನಿಂದ ಈ ಅರಮನೆಯು ‘ರಿಯುನಿಫಿಕೇಷನ್ ಪ್ಯಾಲೇಸ್‘ ಎಂಬ ಹೆಸರು ಪಡೆಯಿತು.

ಪ್ರಸ್ತುತ ಈ ಅರಮನೆಯು ಹೊ ಚಿ ಮಿನ್ಹ್ ನಗರದ ಪ್ರವಾಸಿ ಆಕರ್ಷಣೆಯಾಗಿದ್ದು, 20000 ಚದರ ಮೀ ವ್ಯಾಪ್ತಿಯಲ್ಲಿ ಹಬ್ಬಿದೆ. 95 ಕೊಠಡಿಗಳು, ಬಾಂಕ್ವೆಟ್ ಹಾಲ್ ಗಳು, ಬಂಕರ್ ಗಳು, ಸುರಂಗ ಮಾರ್ಗ, ಅಂದಿನ ಮುದ್ರಣಾಲಯ ಇತ್ಯಾದಿ ಹೊಂದಿರುವ ಈ ಅರಮನೆಯಲ್ಲಿ ಮ್ಯೂಸಿಯಂ ಹಾಗೂ ಯುದ್ಧಕ್ಕೆ ಸಂಬಂಧಿಸಿದ ಹಲವಾರು ಫೊಟೊಗಳು ಹಾಗೂ ವಸ್ತುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಪ್ರತಿಯೊಂದು ಫೊಟೊದ ಹಿಂದೆ ರಕ್ತಸಿಕ್ತ ನೋವಿನ ಕತೆ ಇದೆ. ಇಲ್ಲಿಯ ಯುದ್ದಚರಿತ್ರೆಯನ್ನು ತಿಳಿಯಬೇಕಿದ್ದರೆ ಅದೆಷ್ಟೋ ದಿನಗಳು ಬೇಕು. ಕೆಲವು ಚಿತ್ರಗಳಲ್ಲಿ ಕಂಡ ಅಮಾಯಕರ, ಮುಗ್ಧ ಮಕ್ಕಳ ಸಾವು , ನೋವು ಕಣ್ಣೀರು ತರಿಸಿತು. 20 ಕ್ಕೂ ಹೆಚ್ಚು ವರ್ಷದ ದೀರ್ಘಾವಧಿಯ ವಿವಿಧ ಯುದ್ಧಗಳಲ್ಲಿ ವಿಯೆಟ್ನಾಂನಲ್ಲಿ ಮಡಿದ ಬೇರೆ ಬೇರೆ ದೇಶಗಳ ಯೋಧರ ಮತ್ತು ಸ್ಥಳೀಯರ ಸಂಖ್ಯೆ 13 ಲಕ್ಷಕ್ಕೂ ಹೆಚ್ಚು . ಇದಕ್ಕೆಲ್ಲಾ ಸಾಕ್ಷಿಯಾಗಿದ್ದ ಈ ‘ಇಂಡಿಪೆಂಡೆನ್ಸ್ ಪ್ಯಾಲೇಸ್’ ನ ಕಂಬಗಳಿಗೆ ಮಾತು ಬರುತ್ತಿದ್ದರೆ ಆ ಯುದ್ದಗಳ ಕರಾಳ ಕಥೆ-ವ್ಯಥೆಯನ್ನು ಹಂಚಿಕೊಳ್ಳುತ್ತಿದ್ದುವು ಅನಿಸಿತು. ಯುದ್ಧ ಯಾರಿಗೂ ಒಳಿತು ಮಾಡುವುದಿಲ್ಲ, ಆದರೆ ಅನಾದಿ ಕಾಲದಿಂದಲೂ ಅಕಾರಣವಾಗಿ, ಸಕಾರಣವಾಗಿ ಯುದ್ದ ಸಂಭವಿಸಿದೆ, ಸಂಭವಿಸುತ್ತಲಿದೆ. ಮಡಿದ ಎಲ್ಲರಿಗೂ ನಮನ ಸಲ್ಲಿಸಿ ನಾವು ಮೂಕವಾಗಿ ಹೊರಬಂದೆವು.

ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ :  https://www.surahonne.com/?p=42177

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು

7 Responses

  1. Nirmala G V says:

    ನಾನು ಸುಮಾರು 10ವರ್ಷಗಳಷ್ಟು ಹಿಂದೆ ಭೇಟಿ ಮಾಡಿದ್ದೆಲ್ಲಾ ನೆನಪಾಯಿತು. ಸುಂದರ ಕಥನ. ಅಭಿನಂದನೆಗಳು.

  2. ಪದ್ಮಾ ಆನಂದ್ says:

    ಅನಗತ್ಯ ಅಥವಾ ಅಗತ್ಯ, ಯಾವುದೇ ಯುದ್ಧವಾದರೂ ಅದರಲ್ಲಿ ಅಮಾಯಕ ಜೀವಗಳ ಬಲಿದಾನವಾಗುವುದಂತೂ.ನಿಜ. ಪ್ರವಾಸ ಕಥನದ ಈ ಕಂತು ಓದಿ ಮೂಕವಾಯಿತು ಮನ.

  3. ಪ್ರವಾಸ ಕಥನ ಎಂದಿನಂತೆ ಉತ್ತಮ ನಿರೂಪಣೆ ಯೊಂದಿಗೆ ಅನಾವರಣ ಗೊಳಿಸಿದ್ದೀರಿ.ಗೆಳತಿ ಹೇಮಾ..ಓದಿ ಖುಷಿಯಾಯಿತು.ಪೂರಕ.ಚಿತ್ರ ಗಳೂ ಮನಕ್ಕೆ ಮುದ ತಂದವು

  4. ಶಂಕರಿ ಶರ್ಮ says:

    ಸತತ ಯುದ್ಧದಿಂದ ಮರಣ ಹೊಂದಿದ ಸೈನಿಕರು, ಅಮಾಯಕರು, ಉತ್ತರ ಮತ್ತು ದಕ್ಷಿಣ ವಿಯೆಟ್ನಾಂಗಳು ಒಂದಾದ ಬಗೆ, ಇವೆಲ್ಲವುಗಳ ಕ್ಲುಪ್ತ ವಿವರಣೆಯು ಮನಕರಗುವಂತಿದೆ… ನಿಮ್ಮಂತೆ ನಮಗೂ ಹೃದಯ ಭಾರವಾಯಿತು. ಎಂದಿನಂತೆ, ಕುತೂಹಲಕಾರಿ ಪ್ರವಾಸ ಕಥನವು ಮುದನೀಡಿತು.

  5. ನಯನ ಬಜಕೂಡ್ಲು says:

    ನೋವಿನಿಂದ ಕೂಡಿದ ಚರಿತ್ರೆ, ಮನಸ್ಸನ್ನು ತಟ್ಟುತ್ತದೆ.

  6. MANJURAJ H N says:

    ಹೊಚಿಮಿನ್‌ ಬಗ್ಗೆ ಇತಿಹಾಸದ ಪುಸ್ತಕದಲ್ಲಿ ಓದಿದ್ದು ಬಿಟ್ಟರೆ ಮತ್ತೆ ಮಾಹಿತಿ ಇರಲಿಲ್ಲ. ನಿಮ್ಮ ಬರೆಹದಿಂದಾಗಿ
    ಗಮನಿಸುವಂತಾಯಿತು. ಯುದ್ಧಗಳಲ್ಲಿ ನರಳುವ ಸಾಮಾನ್ಯ ಜನರನ್ನು ಕುರಿತ ಕತೆಗಳ ಅಧ್ಯಯನ
    ನಡೆಸಲು ನನ್ನ ವಿದ್ಯಾರ್ಥಿಯೊಬ್ಬರಿಗೆ ಸಂಶೋಧನೆ ನಡೆಸುವ ಸಿನಾಪ್ಸಿಸ್‌ (ಸಾರಲೇಖ) ತಯಾರಿಸಲು
    ಪ್ರೇರಣೆಯಾಯಿತು. ಅಧ್ಯಯನದಿಂದ ಅಭ್ಯಾಸ ಎಂದರೆ ಇದೇ. ನಿಮಗೆ ಧನ್ಯವಾದಗಳು.

  7. ಯುದ್ಧದ ಭೀಕರತೆಯನ್ನು, ಅದಕ್ಕೆ ಬಲಿಯಾದ ವಿಯೆಟ್ನಾಮ್ ವಿವರಣೆ ಮನದಾಳದಲ್ಲಿ ನಿಲ್ಲುವುದವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: