ನಾರಾಯಣಃ ಹರಿಃ
ನಾನು ಸುಮಾರು ಎರಡು ವರುಷಗಳಿಂದ ಅನುಭವಿಸಿ, ಹೆಣಗುತ್ತಿದ್ದ ಆರೋಗ್ಯ ಸಮಸ್ಯೆ ಉಲ್ಭಣಗೊಂಡು, ಇನ್ನು ಸಹಿಸಲು ಸಾಧ್ಯವೇ ಇಲ್ಲವೆನ್ನಿಸಿದಾಗ ಬೆಂಗಳೂರಿನಲ್ಲಿ ಮಗಳಿಗೆ ಪರಿಚಯವಿದ್ದ ತಜ್ಙ ವೈದ್ಯರ ಬಳಿ ತಪಾಸಣೆಗೆ ಹೋದಾಗ, ಅವರಂದದ್ದು – ಇಷ್ಟು ದಿನ ಈ ನರಕಯಾತನೆಯನ್ನು ಹೇಗೆ ಸಹಿಸಿದಿರೀ ತಾಯಿ, ಇನ್ನು ತಡಮಾಡುವಂತಿಲ್ಲ, ಇನ್ನೇನಾದರೂ ಅಂಗಗಳು ಘಾಸಿಗೊಳ್ಳುವ ಮೊದಲೇ ಗರ್ಭಕೋಶವನ್ನು ಲೆಪ್ರಾಸ್ಕೋಪಿ ಶಸ್ರ್ತಕ್ರಿಯೆಯ ಮೂಲಕ ತೆಗೆದು ಚಿಕಿತ್ಸೆ ನೀಡಬೇಕು, ಇನ್ನು ಮೂರುದಿನಗಳ ನಂತರ ಬರುವ ಶುಕ್ರವಾರಕ್ಕೆ ಆಪರೇಷನ್ ಥಿಯೇಟರ್ ಬುಕ್ ಮಾಡುತ್ತೇನೆ.
ಯಾರಿಗೂ ಯೋಚಿಸಲೂ ಪುರಸೊತ್ತಿಲ್ಲ, ಮಕ್ಕಳಿಗಂತೂ ತೀರದ ಸಮಾಧಾನ. ಕಳೆದ ಹಲವಾರು ತಿಂಗಳುಗಳಿಂದಲೇ ಅವರುಗಳು ಹೇಳುತ್ತಿದ್ದರೂ ನಾನೇನೋ, ನಾನು ಧನ್ವಂತರಿಯ ವಂಶಸ್ಥೆ, ನನಗೇ ಹೆಚ್ಚು ಬುದ್ಧಿಶಕ್ತಿ, ಆರೋಗ್ಯಶಕ್ತಿ ಇದೆ, ನಾನೇ ನಿಭಾಯಿಸುತ್ತೇನೆ, ಎನ್ನುತ್ತಾ ಅವರುಗಳ ಬಾಯಿ ಮುಚ್ಚಿಸುತ್ತಿದ್ದೆನಾದ್ದರಿಂದ, ಅವರುಗಳು “ಸದ್ಯ ತೀರ್ಥ ಶಂಖದಿಂದ ಬಿತ್ತು, ಈಗ ಅಮ್ಮ ತೆಗೆದುಕೊಳ್ಳುತ್ತಾಳೆ” ಎಂದು ನಿಡುಸುಯ್ದರು.
ನನಗೂ ಅನುಭವಿಸಿ ಸಾಕಾಗಿತ್ತು, ಹಾಗೇ ಬಿಟ್ಟರೆ ಮುಂದಿನ ದಿನಗಳು ಇನ್ನೂ ಕಠಿಣವಾಗಿರುತ್ತದೆ ಎಂದಾಗ ತೆಪ್ಪಗಾದೆ.
ಮುಂದಿನದೆಲ್ಲಾ ಸರಸರಾಂತ ನಡೆಯಿತು. ಮಕ್ಕಳುಗಳು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯನ್ನು ಪರಿಷ್ಕರಿಸಿ ಸಮಯ ಹೊಂದಿಸಿಕೊಂಡು ತಯಾರಾದರು. ನನ್ನ ಪತಿದೇವರು ಎಂದಿನಂತೆ ಜವಾಬ್ದಾರಿಯನ್ನೆಲ್ಲಾ ರಾಘವೇಂದ್ರ ಸ್ವಾಮಿಗಳಿಗೆ ವಹಿಸಿ ಆತಂಕವನ್ನು ನಿಯಂತ್ರಿಸಿಕೊಂಡರು.
ನನ್ನ ಮಕ್ಕಳುಗಳಲ್ಲಿರುವ ಒಂದು ವಿಶಿಷ್ಟ ಗುಣ ಎಂದರೆ ಆತಂಕದ ಸಮಯದಲ್ಲಿ ತಮಗಾಗುತ್ತಿರುವ ತಳಮಳವನ್ನು ತೋರಗೊಡದೆ, ಬೇರೆಯವರನ್ನೂ ತಳಮಳಗೊಳಿಸದೆ ಹಾಸ್ಯಭರಿತವಾಗಿ ಬೇರೆಯದೇ ವಿಚಾರಗಳನ್ನು ಮಾತನಾಡುತ್ತಾ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವುದು.
ನಾನಾದರೂ ಏನು ಮಾಡಬೇಕು, ಏನು ಬಿಡಬೇಕು ತಿಳಿಯದೆ ತಲ್ಲಣಗೊಂಡಿದ್ದೆ. ವಯೋಸಹಜವಾಗಿಯೂ, ಮಧುಮೇಹ ಇರುವುದರಿಂದಲೂ ಒಳಗೊಳಗೇ ಭಯ ಆತಂಕ ಮನೆ ಮಾಡಿತ್ತು. ಸಧ್ಯಕ್ಕಂತೂ ಸಾವಿಗೆ ಹೆದರದಿದ್ದರೂ, ಅಕಸ್ಮಾತ್ ಹಿಂತಿರುಗಿ ಬರದಿದ್ದರೆ ಗಂಡ, ಮಕ್ಕಳಿಗೆ ಹೇಳಬೇಕಾದ ಮಾತುಗಳನ್ನು ಹೇಳಿಬಿಡಲೇ, ನನ್ನ ವಸ್ತುಗಳನ್ನು ಹೇಗೆ ವಿಲೇವಾರಿ ಮಾಡಬೇಕೆಂದು ತೀಳಿಸಿಬಿಡಲೇ, ಎಲ್ಲ ತಿಳಿಸಿ, ನಂತರ ಆರೋಗ್ಯಪೂರ್ಣವಾಗಿ ಹಿಂದಿರುಗಿ ಬಂದರೆ, ನಗೆಪಾಟಲಾಗುವಂತಾದರೇ, ಅದಲ್ಲದೆ, ಅಕಸ್ಮಾತ್ ಹೋಗೇ ಬಿಟ್ಟರೆ . . . ಛೇ, ಇಲ್ಲಸಲ್ಲದ ಯೋಚನೆಗಳು ಮನವನ್ನು ಮುತ್ತುತ್ತಿದ್ದವು. ತಡೆಯಲಾರದೆ, ಹೀಗೆಲ್ಲಾ ಯೋಚನೆಗಳು ಬರುತ್ತಿವೆ ಎಂದು ನನ್ನ ಮಗಳ ಬಳಿ ಹೇಳಿದಾಗ, ಅವಳು ತನ್ನ ಎದೆಯೊಳಗಾಗುತ್ತಿರುವ ಭಯ ಭೀತಿಯನ್ನು ಪಕ್ಕದ ಕೋಣೆಗೆ ಹೋಗಿ ನಾಲ್ಕಾರು ನಿಮಿಷ ಅತ್ತು, ಕಣ್ಣು, ಮುಖ ತೊಳೆದುಕೊಂಡು ಬಂದು, ಏನೂ ಆಗಿಯೇ ಇಲ್ಲವೇನೋ, ನನಗೇನೂ ತಿಳಿಯುವುದೇ ಇಲ್ಲವೆಂಬಂತೆ ನಟಿಸುತ್ತಾ, – ಅಮ್ಮಾ, ನಿನ್ನ ಆಪರೇ಼ಷನ್ನಿಗೆ ಇನ್ನೂ ಒಂದು ದಿನದ ಸಮಯ ಇದೆ, ನಿನ್ನ ಅನಿಸಿಕೆ, ಅಭಿಪ್ರಾಯ, ಉಪದೇಶಗಳನ್ನೆಲ್ಲಾ ನಿನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿ ಪಾಸ್ ವರ್ಡ್ ಬದಲಾಯಿಸಿ, ಅದನ್ನು ಎಲ್ಲಾದರೂ ಬರೆದಿಟ್ಟಿರು, ನೀನು ಹಿಂದೆ ಬರದಿದ್ದರೆ, ನಾವು ಹುಡುಕಿ ನೋಡಿ ಕೇಳಿಕೊಳ್ಳುತ್ತೀವೆ, ಬಂದರೆ, ನೀನೇ ಡಿಲೀಟ್ ಮಾಡಿ ಬಿಡುವಂತೆ, ಅದಕ್ಯಾಕೆ ಚಿಂತೆ ಎನ್ನುವುದೇ?
ಇರಲಿ, ಆ ಹಿಂದಿನ ದಿನ ನಾನು ಅನುಭವಿಸಿದ ಆತಂಕವನ್ನು ನೆನೆಯಲೂ ಭಯಪಟ್ಟುಕೊಂಡು ಏನೇನೋ ಬರೆಯ ಹೊರಟಿದ್ದೇನೆ , ಕ್ಷಮಿಸಿ.
ಶುಕ್ರವಾರ ಆಪರೇಷನ್ ಎಂದು ನಿಗದಿಯಾಗಿತ್ತಲ್ಲಾ, ಗುರುವಾರ ಮಧ್ಯಾನ್ಹವೇ ಆಸ್ಪತ್ರೆಗೆ ದಾಖಲಾಗಲು ಹೊರಟಿದ್ದಾಯಿತು. ಅಲ್ಲಿಯ ಸಿಬ್ಬಂದಿ ನಿಜಕ್ಕೂ ನನ್ನನ್ನು ನಡೆಸಿಕೊಂಡ ರೀತಿಯನ್ನು ದಾಖಲಿಸುವ ಸಲುವಾಗಿಯೇ ಈ ಲೇಖನವನ್ನು ನಾನು ಬರೆಯ ಹೊರಟಿರುವುದು.
ನಮ್ಮನ್ನು ಕೋಣೆಯೆಡೆಗೆ ಕರದೊಯ್ದ ವಾರ್ಡ್ ಬಾಯ್, ಆಯಾಗಳು, ದಾದಿಯರು, ಡ್ಯೂಟಿ ಡಾಕ್ಟರುಗಳು, ಡಯಟೀಷಿಯನ್, ಫಸಿಯೋಥೆರಪಿಸ್ಟ್ ಎಲ್ಲರೂ ಎಷ್ಟು ಆತ್ಮೀಯತೆಯಿಂದ ನಡೆಸಿಕೊಂಡರು ಎಂದರೆ ಅವರ ಸೇವಾ ಋಣವನ್ನು ತೀರಿಸುವುದು, ತೀರಿಸುವುದು ಇರಲಿ, ಬಣ್ಣಿಸುವುದೂ ಸಹ ಸಾಧ್ಯವಿಲ್ಲವೇನೋ ಎನ್ನಿಸಿಬಿಟ್ಟಿತು.
ಮುಂಗೈಗೆ ಐ ವಿ ನೀಡುವ ಕ್ಲಿಪ್ ಹಾಕುವಾಗ, ಇಂಜಕ್ಷನ್ನುಗಳನ್ನು ಕೊಡುವಾಗ ಎಷ್ಟು ಆತ್ಮೀಯ, ಸೌಜನ್ಯಪೂರಿತ ನಡುವಳಿಕೆಗಳು ಎಂದರೆ ನನಗಂತೂ ಹೃದಯ ತುಂಬಿ ಬಂತು. ಅನಸ್ತೇಷಿಯಾ ನೀಡುವ ವೈದ್ಯರು ಬಂದು ಲೋಕಲ್ ಅನಸ್ತೇಷಿಯಾ ನೀಡುತ್ತೇವೆಂದಾಗ ನನ್ನ ಜಂಘಾ ಬಲವೇ ಉಡುಗಿ ಹೋಗಿತ್ತು. ಹೇಗೂ ಜನರಲ್ ಅನಸ್ತೇಷಿಯಾ ನೀಡುತ್ತಾರೆ, ಎಚ್ಚರವಾಗುವುದರೊಳಗೆ ಆಪರೇಷನ್ ಮುಗಿದು ಹೋಗಿರುತ್ತದೆ, ನಂತರ ಹೇಗಾದರೂ ನಿಭಾಯಿಸಬಹುದು ಎಂದುಕೊಂಡಿದ್ದವಳಿಗೆ ಅವರ ಮಾತು ಕೇಳಿ ಗಾಭರಿಯಾಯಿತು. ಆಗ ಅವರು ನನ್ನನ್ನು ಸಮಾಧಾನಿಸಿದ ರೀತಿ ಎಷ್ಟು ಧೈರ್ಯ ತುಂಬುವಂತಿತ್ತು ಎಂದರೆ, ಮಾರನೆಯ ದಿನ ಆಪರೇಷನ್ ಥಿಯೇಟರಿನಲ್ಲಿ ನಾನೇ – ಇರಲಿ, ಲೋಕಲ್ ಅನಸ್ತೇಷಿಯಾವನ್ನೆ ಕೊಡಿ – ಎಂದುಬಿಟ್ಟೆ.
ಆದರೂ ಬೆನ್ನು ಮೂಳೆಗೆ ಇಂಜಕ್ಷನ್ ಕೊಡುತ್ತಾರೆಂದುದರಿಂದ ಎದೆಯಲ್ಲಿ ಪುಕ ಪುಕ. ಆದರೆ ಅದನ್ನು ನೀಡುವ ಸಮಯದಲ್ಲಿ ಆಪರೇಷನ್ ಟೇಬಲ್ ಮೇಲೆ ಕುಳಿತಿದ್ದ ನನ್ನನ್ನು ಒಂದು 23-24 ವಯಸ್ಸಿನ ತರುಣಿ, ದಾದಿ ಎಷ್ಟು ಆಪ್ಯಾಯಮಾನವಾಗಿ ತನ್ನ ಎದೆಗಾನಿಸಿಕೊಂಡು ತಬ್ಬಿ ಹಿಡಿದಿದ್ದಳೆಂದರೆ, ನಾನು ನೆಮ್ಮದಿಯಿಂದ ದೇವರ ಸ್ತೋತ್ರ ಹೇಳಿಕೊಳ್ಳಲು ಪ್ರಾರಂಭಿಸಿಬಿಟ್ಟೆ. ಮುಂದಿನ ಕೆಲವಾರು ನಿಮಿಷಗಳಲ್ಲೇ ಅರೆಬರೆ ಎಚ್ಚರ. ಸುಮಾರು ಎರಡು ಗಂಟೆಗಳ ದೀರ್ಘ ಶಸ್ರ್ತಚಿಕಿತ್ಸೆ ಹೇಗೆ ಎದುರಿಸಿದೆನೋ, ಈಗಲೂ ನೆನೆಸಿಕೊಂಡರೆ ಮೈ ಜುಂ ಎನ್ನುತ್ತದೆ. ನನ್ನ ಕತ್ತಿನಿಂದ ಕೆಳಭಾಗಕ್ಕೆ ಡುಬುರು ಹಾಕಿದಂತೆ ದೊಡ್ಡ ಪರದೆಯನ್ನು ಹಾಕಿಬಿಟ್ಟಿದ್ದರಿಂದ ಏನೇನೋ ಮಂಪರು, ಏನೇನೋ ಯಾತನೆ, ಆತಂಕ. ನನ್ನ ಅಕ್ಕ ಪಕ್ಕ ಕುಳಿತು ಬಿ.ಪಿ., ಪಲ್ಸ್, ಮುಂತಾದವುಗಳನ್ನು ಮಾನೀಟರ್ ಮಾಡುತ್ತಿದ್ದ ಇಬ್ಬರು ನರ್ಸುಗಳು, ನನ್ನ ಕಣ್ಣುಗಳಲ್ಲಿ ಆತಂಕ, ಭೀತಿಯ ಛಾಯೆ ಕಂಡ ಕೂಡಲೇ ಕೈಗಳನ್ನು ಮೃದುವಾಗಿ ಸವರಿ ಸಮಾಧಾನಿಸುತ್ತಿದ್ದ ರೀತಿ, ನಿಜಕ್ಕೂ ಅವರ್ಚನೀಯ.
ಹಾಗೆಯೇ ಮುಂದಿನ ಮೂರು ದಿನಗಳು, ಪೋಸ್ಟ್ ಆಪರೇಷನ್ ವಾರ್ಡಿನಲ್ಲೇ ಆಗಲಿ, ನಂತರವೇ ಆಗಲಿ ಅವರುಗಳು ಮಾಡಿದ ಸೇವೆಗೆ ಎಷ್ಟು ಕೃತಜ್ಙತೆಗಳನ್ನು ಅರ್ಪಿಸಿದರೂ ಸಾಲದು.
ಕಸ ಗುಡಿಸುವವರು, ಸಾರಿಸುವವರು , ಕಸದ ಬುಟ್ಟಿ ಶುದ್ಧೀಕರಿಸುವವರು, ಊಟ ತಿಂಡಿ ನೀಡುವವರು, ಔಷಧಿ ಇಂಜಕ್ಷನ್ನುಗಳನ್ನು ನೀಡುವವರು ಒಬ್ಬೊಬ್ಬರೂ ತಮ್ಮ ಕರ್ತವ್ಯವನ್ನು ಎಷ್ಟು ನಿಷ್ಠಯಿಂದ ಮುಖದ ಮೇಲೊಂದು ತೆಳುನಗೆಯೊಂದಿಗೆ ನಿರ್ವಿಕಾರವಾಗಿ ನಿಭಾಯಿಸುತ್ತಿದ್ದರೆಂದರೆ, ಹ್ಯಾಟ್ಸ್ ಆಫ್ ಟು ದೆಮ್.
ಅದರಲ್ಲೂ ಇಬ್ಬರ ಬಗ್ಗೆ ಪ್ರತ್ಯೇಕವಾಗಿಯೇ ನಾನು ಬರೆಯಬೇಕು. 22-23 ರ ತರುಣಿ ನೀಡಿದ ಸ್ಪಾಂಜ್ ಬಾತ್ ಮತ್ತು ಎಷ್ಟು ಮೂತ್ರ ಹೊರ ಹೋಗುತ್ತಿದೆ ಎಂದು ಅಳೆಯುವ ಸಲುವಾಗಿ ನಳಿಕೆಯ ಮೂಲಕ ಮಂಚದ ಪಕ್ಕದಲ್ಲಿ ಕಟ್ಟಿದ್ದ ಮೂತ್ರ ಶೇಖರಣಾ ಚೀಲದಲ್ಲಿ ಶೇಖರಣೆಯಾಗುತ್ತಿದ್ದ ಮೂತ್ರವನ್ನು ಪ್ರತೀ 2- 3 ಗಂಟೆಗಳಿಗೊಮ್ಮೆ, ನಿಶರಾತ್ರಿಯ ಸಮಯದಲ್ಲೂ ಸಹ ಬಂದು ಖಾಲಿಮಾಡಿ ಅಳೆದು ಅದನ್ನು ಡ್ಯೂಟಿ ನರ್ಸ್ಸಿಗೆ ವರದಿ ಮಾಡುತ್ತಿದ್ದ ಒಬ್ಬ 27-28 ರ ತರುಣ, ಸ್ವಲ್ಪವೂ ಕೂಡ ಅಸಹ್ಯ ಭಾವವನ್ನು ಸೂಚಿಸದೆ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದರೆಂದರೆ ನನ್ನಲ್ಲಿ ಮೂಡಿದ ಸುಭಾವನೆಗಳನ್ನು ವ್ಯಕ್ತಪಡಿಸಲು ಅಕ್ಷರಗಳಿಗೆ ತಡಕಾಡುವಂತಾಗುತ್ತಿದೆ.
ಅವರುಗಳ ವಯಸ್ಸಿನ ಇತರ ಹಲವರು ಜೀವನದಲ್ಲಿ ಮೋಜು, ಮಸ್ತಿ, ಕಾಮ, ಕ್ರೋಧ, ಮೋಹಗಳಿಂದ ಜೀವನ ನಡೆಸುತ್ತಿರಬೇಕಾದರೆ ಇವರುಗಳ ಸೇವಾ ಮನೋಭಾವಕ್ಕೆ, ಕರ್ತವ್ಯ ನಿಷ್ಠೆಗೆ ಮನಸ್ಸಿನಲ್ಲಿ ಗೌರವಾದರಗಳು ಮಡುಗಟ್ಟಿ ನಿಂತಿವೆ.
ಇನ್ನು ಡಾಕ್ಟರುಗಳ ಬಗ್ಗೆಯಂತೂ ಹೇಳುವಂತೆಯೇ ಇಲ್ಲ, ನಮ್ಮ ಆರೋಗ್ಯವೇ ಅವರ ಭಾಗ್ಯ ಎಂಬಂತೆ ಮುತುವರ್ಜಿಯಿಂದ ನನ್ನನ್ನು ನಡೆಸಿಕೊಂಡ ಆ ಇಡೀ ತಂಡಕ್ಕೆ ಸದಾ ಒಳಿಗಾತಲು ಎಂದು ಆ ಹರಿಯಲ್ಲಿ ಮನದುಂಬಿ ಪ್ರಾರ್ಥಿಸಬಲ್ಲೆ ನಾನು ಅಷ್ಟೆ.
ಈ ಬಾರಿಯ ನನ್ನ ಆಸ್ಪತ್ರೆಯ ವಾಸದ ನಂತರ ನನಗನಿಸಿದ್ದು, ಬರಿಯ “ವೈದ್ಯೋ ನಾರಾಯಣಃ ಹರಿಃ” ಅಲ್ಲ, ಆರೋಗ್ಯ ಸೇವೆಯಲ್ಲಿ ಸ್ವಇಚ್ಚೆಯಿಂದ ತಮ್ಮನ್ನು ತಾವು ತೊಡಗಿಸಿಕೊಂಡ ಪ್ರತಿಯೊಬ್ಬರೂ ನಾರಾಯಣ, ಹರಿಗೆ ಸಮಾನರು ಎಂದು.
ನನ್ನಂತಹ ಹಲವಾರು ಜನರಿಗೆ ಆರೋಗ್ಯ ಭಾಗ್ಯವನ್ನು ಕರುಣಿಸುತ್ತಿರುವ ಆ ಪ್ರತ್ಯಕ್ಷ ನಾರಾಯಣಃ ಹರಿಃ ತಂಡಕ್ಕೆ, ಅವರಂತಹ ಇನ್ನಿತರರಿಗೂ ಸದಾ ಸನ್ಮಂಗಳಾಭಿರಸ್ತು.
–ಪದ್ಮಾಆನಂದ್, ಮೈಸೂರು
ತಮ್ಮ ಸ್ವಂತ ಅನುಭವ ದ ಅನಾವರಣ ಚಿಕಿತ್ಸೆ ಮಾಡಿಸಿಕೊಳ್ಳಲು ಹಿಂದುಮುಂದು ಮಾಡುವವರಿಗೆ ಅಭಯದಾನ ಮಾಡುವಂತಹ ಆಪ್ತ ವಾಗಿಮೂಡಿ ಬಂದಿದೆ ಪದ್ಮಾ ಮೇಡಂ ವಂದನೆಗಳು.
ಶೀಘ್ರವಾಗಿ ಓದಿ ಮೆಚ್ಚುಗೆ ವ್ಯಕ್ತಪಡಿಸಿದ ನಿಮಗೆ ವಂದನೆಗಳು.
ನಿಮ್ಮ ಹಾಗೆ ನನಗೂ ಲ್ಯಾಪ್ರೋಸ್ಕೋಪ್ ಆಪರೇಷನ್ ಆಗಿತ್ತು ..ಆಗ ನನ್ನ ಮಗನಿಗೆ ಇಂಜಿನಿಯರ್ ಲಾಸ್ಟ್ ಸೆಮ್. ಅವನಿಗೆ ಹೇಳಲೇ ಇಲ್ಲ,ಆಗ ನನಗೂ ಅವ್ನ ನೆನಪಾಗಿ ಅತ್ತಿದ್ದೆ ..ನನ್ನ ದಿನ ಮುಗಿಯಿತು ಇನ್ನು ನಿನ್ನ ನೋಡಲು ಇರುವೆನೋ ಕಂದಾ ಎಂದು ದೇವರ ದಯೆ ಏನೂ ಆಗದೆ ಉಷಾರಾಗಿ ಮನೆಗೆ ಬಂದೆ ನಂತರವೇ ಅವನಿಗೆ ಫೋನಲ್ಲಿ ತಿಳಿಸಿದ್ದು…ಚಂದದ ಬರಹ
ನಿಮ್ಮ ನೆನಪನ್ನೂ ಹಂಚಿಕೊಳ್ಳುತ್ತಾ, ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.
ಅತ್ಯಂತ ಸೂಕ್ತ ಚಿತ್ರದೊಂದಿಗೆ ಪ್ರಕಟಿಸಿದ “ಸುರಹಿನ್ನೆ” ಗೆ ಧನ್ಯವಾದಗಳು.
ಸ್ವಾನುಭವದಲ್ಲಿ ಮೂಡಿಬಂದ ಲೇಖನವು ಬಹಳ ಆಪ್ತವೆನಿಸಿತು, ಪದ್ಮಾ ಮೇಡಂ.
ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಚೆನ್ನಾಗಿದೆ ಲೇಖನ
ವಂದನೆಗಳು.
ಅನುಭವಜನ್ಯ ಬರೆಹ; ನಿಮ್ಮ ನೋವನ್ನು ಮುಚ್ಚಿಟ್ಟು ಅಥವಾ ಸಹಿಸಿ, ಪರರ ಸೇವಾಪರತೆಯನ್ನು
ಮನಗಂಡು ಶ್ಲಾಘಿಸಿದ್ದೀರಿ. ಇದು ನಿಮ್ಮ ಸಹೃದಯತೆಯ ಲಕ್ಷಣ. ಸಾಹಿತ್ಯವು ಹೀಗೆ
ಪಾಡನ್ನು ಹಾಡಾಗಿಸುವ ಕಲೆಯನ್ನು ಜನರಿಗೆ ತಲಪಿಸಬೇಕು. ತಕ್ಷಣವೇ ನನಗೆ
ನಾನಿಷ್ಟಪಡುವ ಕವಿ ರವೀಂದ್ರನಾಯಕ ಸಣ್ಣಕ್ಕಿಬೆಟ್ಟು ಅವರ ʼನೂರು ನೋವಿನ ನಡುವೆ ಒಂದು
ನಗೆಯು ಕಾಡಿʼ ಎಂಬ ಭಾವಗೀತೆಯು ನೆನಪಾಗಿ ಇನ್ನೊಮ್ಮೆ ಆಲಿಸಿದೆ.
ಈ ನೆಪ ಮತ್ತು ನೆನಪ – ಎರಡೂ ನಿಮ್ಮ ಬರೆಹದಿಂದಾದವು. ಸಮಯಾನುಕೂಲ ನೋಡಿಕೊಂಡು
ನಿಮ್ಮ ಈ ಅನುಭವವನ್ನು ಕೆಲವು ಪಾತ್ರಗಳ ಮೂಲಕ ಕತೆ ಮಾಡುವ ಶಕ್ತಿ ನಿಮಗಿದೆ. ಸಾವಕಾಶ
ರಚನೆಯಾಗಲಿ ಎಂದು ಹಾರೈಸುವೆ. ಕೆಲವೊಮ್ಮೆ ನಾವು ಕೊಡುವ ಹಣವು ವೈದ್ಯಕೀಯ
ಸೇವಾಗುಣಕ್ಕೆ ಸರಿಸಾಟಿ ಆಗಲಾರದು. ಎಲ್ಲವನೂ ಹಣದಿಂದ ಅಳೆಯಲು ಹೋಗುವ ಮಾನವ
ಇಂಥ ವಿಚಾರದಲ್ಲಿ ದೈನೇಸಿಯಾಗುತ್ತಾನೆ. ಹಣದಾಚೆಗಿನ ಗುಣವೇ ಕೊನೆಗೂ ಉಳಿಯುವಂಥದು.
ಅದರಲೂ ಆ ವಯೋಮಾನದ ಹಲವರು ಮೋಜು ಮಸ್ತಿಗಳಲಿ ತೊಡಗಿಕೊಂಡು ಇರುವ ಒಂದು
ಜೀವ ಜೀವನವನ್ನು ʼಬೀದಿಪಾಲುʼ ಮಾಡಿ, ʼಹಾದಿರಂಪ ಬೀದಿರಂಪʼ ಆಗಿಸುವತ್ತ ಮನಸಾಗಿದ್ದರೆ
ಇಂಥವರು ಸೇವೆಯೇ ದೇವರೆಂದು ಬದುಕುತ್ತಾ ಬತ್ತಿಯುರಿದು ಬೆಳಕಾಗುವಂತೆ ಸವೆಯುತ್ತಾ
ಸಾರ್ಥಕವಾಗಿದ್ದಾರೆ. ಇವರಿಗೊಂದು ಸೆಲ್ಯೂಟ್ ಹೇಳಲು ನಿಮ್ಮ ಬರೆಹ ಪ್ರೇರಣೆಯಾಗಿದೆ. ಧನ್ಯವಾದ.
ನಿಮ್ಮ ಸಹೃದಯ ಸ್ಪಂದನೆಗಾಗಿ ಧನ್ಯವಾದಗಳು ಸರ್. ನಿಮ್ಮ ಸಲಹೆಯಂತೆ ಕಥಾ ರೂಪ ಕೊಡಲು ಪ್ರಯತ್ನಿಸುತ್ತೇನೆ.
ಮನೆ ಮುಟ್ಟುವ ಹೃದಯಕ್ಕೆ ಹತ್ತಿರವಾಗುವ ಚೆಂದದ ಲೇಖನ
ನಿಮ್ಮ ಮೆಚ್ಚುಗೆಗೆ ವಂದನೆಗಳು.
ನಿಮ್ಮ ಅನುಭವ ಲೇಖನ ಓದಿ ಮನಸ್ಸು ತುಂಬಿತು. ಪ್ರತಿ ನಿತ್ಯ ರೋಗಿಗಳ ಸೇವೆ ಮಾಡುವ ವೈದ್ಯರು, ಮತ್ತು ಅವರ ತಂಡಕ್ಕೆ ನಿಜಕ್ಕೂ ದೇವರು ಆಯುರಾರೋಗ್ಯ ಕರುಣಿಸಲಿ. ಸುಂದರ ನಿರೂಪಣೆಯೊಂದಿಗೆ ಲೇಖನ ಚೆನ್ನಾಗಿ ಮೂಡಿಬಂತು..
ನಿಮ್ಮ ಮೆಚ್ಚುಗೆಯ ಪ್ರತಿಕ್ರಯೆಗಾಗಿ ಧನ್ಯವಾದಗಳು.