ಕೈಬೀಸಿ ಕರೆಯುವ ಪಾಟನ್ ಮತ್ತು ಮೊಧೇರಾ

Share Button

ಗುಜರಾತಿನ ವಿಶ್ವಪಾರಂಪರಿಕ ತಾಣಗಳು

‘ನೀವು ಭಾರತದ ದೇಶದ ನೂರು ರೂಪಾಯಿ ನೋಟು ನೋಡಿದ್ದೀರಾ?’ ಎಂದು ಯಾರಾದರೂ ಕೇಳಿದರೆ ‘ಅದನ್ನು ನೋಡಿಲ್ದೆ ಏನು? ಈಗಂತೂ ಮನೆಯಿಂದ ಹೊರಗೆ ಹೊರಟರೆ ನೂರು ರೂಪಾಯಿಗಳನ್ನು ಹಿಡಿದೇ ಹೊರಡುವ ಕಾಲ’ ಅಂತ ನಿಮಗೆ ಕೋಪ ಬಂದರೂ ಆಶ್ಚರ್ಯವಿಲ್ಲ. ನಿಜವೇ. ಆದರೆ ಅದರ ಎರಡು ಬದಿಗಳಲ್ಲಿ ಕಾಣುವ ಚಿತ್ರಗಳು ಯಾವವು ಎಂದಾಗ ಕೆಲವರಿಗೆ ಗಲಿಬಿಲಿಯಾಗಬಹುದಲ್ಲವೇ? ಕೆಲವರು ಅವುಗಳನ್ನೂ ಕಂಡಿರಬಹುದು. ಇರಲಿ, ನಿಮ್ಮನ್ನು ಗಲಿಬಿಲಿಗೆ ತಳ್ಳುವ ಯಾವ ಉದ್ದೇಶವೂ ನನಗಿಲ್ಲ. ನಾನೇ ಹೇಳಿಬಿಡುತ್ತೇನೆ. ನೋಟಿನ ಒಂದು ಬದಿಯಲ್ಲಿ ಮಹಾತ್ಮ ಗಾಂಧಿಯವರ ಚಿತ್ರ, ಮತ್ತೊಂದು ಕಡೆ ಗುಜರಾತಿನ ಪ್ರಸಿದ್ಧ ಮೆಟ್ಟಿಲುಬಾವಿ ‘ರಾಣಿ ಕೀ ವಾವ್’ ಚಿತ್ರವನ್ನು ಕಾಣಬಹುದು. ತಾವೆಲ್ಲಾ ಮತ್ತೊಮ್ಮೆ ಗಮನಿಸಲೆಂದು ಕೆಳಗೆ ಚಿತ್ರವನ್ನೂ ಕೊಟ್ಟಿದ್ದೇನೆ.

ರಾಣೀ ಕೀ ವಾವ್‍ ನೋಟಿನೊಂದಿಗೆ

 ಗುಜರಾತಿನ ಪಾಟನ್‍ ಪಟ್ಟಣದಲ್ಲಿರುವ ಈ ಮೆಟ್ಟಿಲುಬಾವಿಯನ್ನು 2014ರಲ್ಲಿ ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಿದ ನಂತರ 2018ರಿಂದ ‘ರಾಣಿ ಕಿ ವಾವ್‍’ ಚಿತ್ರ ನಮ್ಮ 100ರೂಪಾಯಿನ ನೋಟಿನಲ್ಲಿ ವಿಜೃಂಭಿಸುತ್ತಿದೆ. ನೋಟಿನಲ್ಲಿ ಕಾಣುವ ಮೆಟ್ಟಿಲುಬಾವಿಯ ಚಿತ್ರ ನೋಡಿದ ನಂತರ ಮತ್ತು ಅದರ ಅದ್ಭುತ ಸೌಂದರ್ಯದ ಬಗ್ಗೆ ಕೇಳಿದ ಸಮಯದಿಂದ ನನಗೆ ಅದನ್ನು ನೋಡುವ ಬಯಕೆಯಾಗಿತ್ತು. ನನ್ನ ಒತ್ತಾಯದಿಂದ ಹೊರಟ ನಾವು ಅಂದರೆ ನನ್ನ ಪತಿ ಮತ್ತು ಮಗ 11ನೇ ದಿನಾಂಕ ಅಹಮದಾಬಾದಿಗೆ ವಿಮಾನದಲ್ಲಿ, ಅಲ್ಲಿಂದ ಸುಮಾರು 130 ಕಿಮೀ ದೂರವಿರುವ ಮೊಧೇರಾಗೆ ಕಾರಿನಲ್ಲಿ ಪಯಣಿಸಿದೆವು. ಜನವರಿ 12ರಂದು ಬೆಳಗ್ಗೆ ಅಲ್ಲಿಂದ ಮುಂದೆ ಕಾರಿನಲ್ಲಿ 50ಕಿಮೀ ಪಯಣಿಸಿ ‘ರಾಣಿ ಕಿ ವಾವ್‍’ ಕಂಡ ಕ್ಷಣದಲ್ಲಿ ನನ್ನ ಬಯಕೆ ಫಲಿಸಿತು.

ನಮ್ಮ ಮಾರ್ಗದರ್ಶಿ ಹೇಳಿದಂತೆ ‘ರಾಣಿ ಕಿ ವಾವ್’ ಸಾವಿರ ವರ್ಷಗಳ ಹಿಂದೆ ಸರಸ್ವತಿ ನದಿಯ ತಟದಲ್ಲಿತ್ತಂತೆ. ಈಗ ಸರಸ್ವತಿ ನದಿ ಗುಪ್ತಗಾಮಿನಿಯಲ್ಲವೇ? ಈ ಮೆಟ್ಟಿಲುಬಾವಿಯನ್ನು ಚಾಲುಕ್ಯ ವಂಶದ ರಾಣಿ ಉದಯಮತಿ ತನ್ನ ಪತಿ ಭೀಮ I ನೆನಪಿನಲ್ಲಿ ಹನ್ನೊಂದನೆಯ ಶತಮಾನದಲ್ಲಿ ಕಟ್ಟಿಸಿದಳಂತೆ. ಚಾಲುಕ್ಯರ ಆಳ್ವಿಕೆ ಕೊನೆಗೊಂಡ ನಂತರ ಕಲಾತ್ಮಕವಾದ ಈ ಬಾವಿ ಅನಾಥವಾಗಿ, ಯಾರ ಕಣ್ಣಿಗೂ ಕಾಣಿಸದಷ್ಟು ಸಂಪೂರ್ಣವಾಗಿ ಭೂಮಿಯ ಒಳಗೆ ಹೂತುಹೋಯಿತಂತೆ. ಭಾರತದ ಪುರಾತತ್ವ ಇಲಾಖೆಯ ಶ್ರಮಭರಿತ ಉತ್ಖನನದಿಂದ ಅದು ಮತ್ತೊಮ್ಮೆ ಜಗತ್ತಿನ ಬೆಳಕು ಕಂಡಿದ್ದು ಸುಮಾರು 1980ರ ವೇಳೆಗೆ. ಆ ಸ್ಥಳದ ಸುತ್ತಮುತ್ತವಿರುವ ಮಣ್ಣು, ಮರಳುಗಳನ್ನು ಬಹಳ ಜತನದಿಂದ ತೆರವುಗೊಳಿಸಿ ಹೂತುಹೋಗಿದ್ದ ಮೆಟ್ಟಲುಬಾವಿಯ ಸೊಬಗನ್ನು ಕಲಾರಸಿಕರಿಗೆ, ಇತಿಹಾಸಕಾರರಿಗೆ ತೆರೆದು ತೋರಿಸಲು ಪುರಾತತ್ವ ಇಲಾಖೆಯವರು ಸುಮಾರು 1940ರಿಂದ 1980ರವರೆಗೆ ಶ್ರಮಿಸಿದ್ದಾರೆ. ಇಂದು ಜನ ಇದರ ಸೌಂದರ್ಯವನ್ನು ಕಣ್ತುಂಬಿಕೊಂಡು ಬೆರಗಾಗುತ್ತಿದ್ದಾರೆ; ಮೂಕರಾಗುತ್ತಿದ್ದಾರೆ.

ಏಳು ಮಜ಼ಲುಗಳುಳ್ಳ ಬಾವಿಯನ್ನು ಕಟ್ಟಿಸಿದಾಗ ಆ ಕಾಲದ ಅವಶ್ಯಕತೆಗೆ ತಕ್ಕಂತೆ ಕೆಳಗಿನ ಮಜ಼ಲಿನ ಬಾವಿಯಲ್ಲಿ ನೀರನ್ನು ಶೇಖರಿಸಲಾಗುತ್ತಿತ್ತು. ಈಗ ಪ್ರವಾಸಿಗರು ನೀರನ್ನು ನೋಡಲಾಗದಿದ್ದರೂ, ನೆಲಮಟ್ಟದಿಂದ 95 ಮೆಟ್ಟಿಲುಗಳ ಕೆಳಗೆ ಮಂದಿರದಂತಿರುವ ಬಾವಿಯ ಅದ್ಭುತ ಸೌಂದರ್ಯವನ್ನು ಆಸ್ವಾದಿಸಲು ಅಡ್ಡಿ ಇಲ್ಲ. ಮೆಟ್ಟಿಲುಗಳ ಅಕ್ಕಪಕ್ಕದ ಗೋಡೆಗಳಲ್ಲಿ ಮನೋಜ್ಞವಾಗಿ, ಸಾಲುಸಾಲಾಗಿ ಕೆತ್ತಿರುವ ಕಲಾತ್ಮಕ ಶಿಲ್ಪಗಳನ್ನು ನೋಡುತ್ತಿದ್ದರೆ ನೆತ್ತಿಯನ್ನು ಸುಡುವ ಬಿಸಿಲಿನ ಬೇಗೆ, ಸರಿಯುತ್ತಿರುವ ಕಾಲದ ಅರಿವು ಎರಡೂ ನೆನಪೇ ಆಗುವುದಿಲ್ಲ. ಕಣ್ಮುಂದೆ ರಾರಾಜಿಸುವ ದೇವಾನುದೇವತೆಗಳು, ಎದ್ದು ಬರುವಂತಿರುವ ಅಪ್ಸರೆಯರು, ವಿವಿಧ ಭಂಗಿಯ ಶಿಲಾಬಾಲಿಕೆಯರನ್ನು ಕಂಡಾಗ ನೋಡುಗರ ಮನ ಅವುಗಳೊಳಗೆ ತಲ್ಲಿನವಾಗುವುದು ಖಂಡಿತ. ನನಗೆ ಕರ್ನಾಟಕದ ಬೇಲೂರಿನ ಶಿಲಾಬಾಲಕಿಯರು ನೆನಪಾದರು. ಬೇಲೂರಿನಲ್ಲಿ ಬಳಪದ ಕಲ್ಲು(soap stone) ಬಳಕೆಯಾಗಿದೆ. ಇಲ್ಲಿ ಸಂಚಿತ ಕಲ್ಲನ್ನು (sedimentary) ಬಳಸಲಾಗಿದೆ. ಸುಮಾರು ಸಾವಿರ ವರ್ಷಗಳಷ್ಟು ಹಳೆಯದಾದರೂ ಅದು ಇಂದಿಗೂ ಭವ್ಯತೆಯ ಸಾಕಾರವೇ.

ರಾಣಿ ಕಿ ವಾವ್

ಈ ಸ್ಥಳವನ್ನು ಬೆಳಕಿರುವ ಹೊತ್ತಿನಲ್ಲಿ, ಬಿಸಿಲು ಜಾಸ್ತಿಯಾಗುವ ಮುನ್ನ ವೀಕ್ಷಿಸುವುದು ಒಳ್ಳೆಯದು.

ಮುಂದಿನ ನಮ್ಮ ಪಯಣ ಪಾಟನ್‍ ಪಟ್ಟಣದಿಂದ 50ಕಿಮೀ ದೂರದಲ್ಲಿ ಮೆಹ್ಸಾನಾ ಜಿಲ್ಲೆಯಲ್ಲಿರುವ ಮೊಧೇರಾದ ಸೂರ್ಯದೇವಾಲಯದತ್ತ ಸಾಗಿತು ಪುರಾತತ್ವ ಇಲಾಖೆಯವರ ಸುಪರ್ದಿನಲ್ಲಿರುವ ಈ ಸ್ಮಾರಕವನ್ನೂ ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಲಾಗಿದೆ. ಇದನ್ನು ಒಂದನೇ ಭೀಮನ ಆಳ್ವಿಕೆಯ ಕಾಲದ ನಂತರ ಸುಮಾರು ಸಾವಿರ ವರ್ಷಗಳ ಹಿಂದೆ ಕಟ್ಟಿಸದ್ದೆಂದು (ಸುಮಾರು1026-27ರಲ್ಲಿ) ಅಂದಾಜಿಸಲಾಗಿದೆ. ಸೊಗಸಾದ ಸೂರ್ಯ ದೇವಾಲಯದ ಗರ್ಭಗುಡಿ ಈಗ ಬರಿದಾಗಿರುವುದು ವಿಷಾದನೀಯ. ಅಲ್ಲಾವುದೀನ್‍ ಖಿಲ್ಜಿಯ ದಾಳಿಯ ಸಮಯದಲ್ಲಿ ಗರ್ಭಗುಡಿಯಲ್ಲಿದ್ದ ಸೂರ್ಯದೇವರ ಮೂರ್ತಿ ಕಾಣೆಯಾಗಿರಬಹುದೆಂದು ದಾಖಲಾಗಿದೆ. ದೇವಾಲಯದ ಇಷ್ಟು ಭಾಗ ಉಳಿದಿರುವುದೇ ಭಾರತೀಯರ ಸೌಭಾಗ್ಯ.

ನಾವು ಸೂರ್ಯಾಸ್ತಮಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ದೇವಾಲಯವನ್ನು ತಲುಪಿದೆವು. ದೇವಾಲಯ ಬಹಳ ವಿಸ್ತಾರವಾದ ಪ್ರದೇಶದಲ್ಲಿದೆ. ಮುಂಭಾಗದಲ್ಲಿ ಗಮನ ಸೆಳೆಯುವ ಸೂರ್ಯಕುಂಡದ ಸುತ್ತಲಿದ್ದ ಚಿಕ್ಕ, ಚಿಕ್ಕ ಸುಂದರವಾದ 108 ದೇವಾಲಯಗಳಲ್ಲಿ ಕೇವಲ ಮೂರು ಮಾತ್ರ ಉಳಿದುಕೊಂಡಿವೆ.

ಅದಕ್ಕೆ ಕೂಡಿಕೊಂಡಿರುವಂತಹ ಸಭಾಂಗಣದ ಕಂಭಗಳ ಮೇಲಿರುವ ಸೂಕ್ಷ್ಮ ಕೆತ್ತನೆಗಳು ಮನಸೆಳೆಯುತ್ತವೆ. ಮಹಾಭಾರತ, ಭಾಗವತ, ರಾಮಾಯಣದ ಕಥಾವಸ್ತುಗಳನ್ನು ಕೇವಲ ಒಂದು ಕೆತ್ತನೆಯಲ್ಲಿ ಹಿಡಿದಿಟ್ಟಿರುವ ಪರಿ ನೋಡುಗರ ಕಣ್ಣಿಗೆ ಹಬ್ಬವೇ.

ಇದಕ್ಕೆ ಸೇರಿದಂತೆಯೇ ಮತ್ತೊಂದು ಭಾಗದಲ್ಲಿರುವ ಗರ್ಭಗುಡಿ ಬರಿದಾಗಿದ್ದರೂ ಇಂದಿಗೂ ವಿಷುವತ್ ಸಂಕ್ರಾಂತಿಯ ದಿನಗಳಲ್ಲಿ (equinoxes) ಸೂರ್ಯೋದಯವಾಗುತ್ತಿದ್ದಂತೆ ಸೂರ್ಯಕಿರಣಗಳು ಗರ್ಭಗುಡಿಯನ್ನು ಬೆಳಗುತ್ತವೆ. ದೇವಾಲಯದ ಸುತ್ತಲೂ ಇರುವ ಸೂರ್ಯ ಮತ್ತು ಅಷ್ಟದಿಕ್ಪಾಲಕರ ಮೂರ್ತಿಗಳು ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನೂ ಒಳಗೊಂಡಿವೆ. ಜನಜೀವನಕ್ಕೆ ಸಂಬಂಧಿಸಿದ ಹಲವಾರು ಕೆತ್ತನೆಗಳಲ್ಲಿ ಹೆಣ್ಣೊಬ್ಬಳು ಮಗುವಿಗೆ ಜನ್ಮ ನೀಡುವ ದೃಶ್ಯವನ್ನೂ ಕೆತ್ತಿರುವುದನ್ನು ನೋಡಿ ಬೆರಗಾದೆ.

ಹೀಗೆ ದೇವಾಲಯದ ಸೊಬಗನ್ನು ನೋಡುತ್ತಿದ್ದಂತೆ ಕತ್ತಲಾವರಿಸಿತು. ಒಳಭಾಗಕ್ಕೆ ವಿದ್ಯುದ್ದೀಪಗಳಿಲ್ಲದಿದ್ದರೂ ದೇವಾಲಯದ ಹೊರಭಾಗಕ್ಕೆ ಅಳವಡಿಸಿರುವ ದೀಪಗಳು ಮನಮೋಹಕವಾಗಿವೆ.

ಮೊಧೇರಾದ ಸೂರ್ಯದೇವಾಲಯ

ಈ ದೇವಾಲಯದ ಸೌಂದರ್ಯವನ್ನು ಮತ್ತಷ್ಟು ಸೂರೆಗೊಳ್ಳಲು ನಮಗಾಗಿ ಕಾದಿತ್ತು ‘ಶಬ್ದ ಮತ್ತು ಬೆಳಕು’ ಪ್ರದರ್ಶನ. ಇದಕ್ಕಾಗಿ ಪ್ರತ್ಯೇಕ ಟಿಕೆಟ್‍ ಪಡೆದಿದ್ದೆವು. ಸೂರ್ಯಕುಂಡದ ಬಳಿಯೇ ಪ್ರದರ್ಶನ ವೀಕ್ಷಿಸಲು ಆಸನಗಳಿದ್ದವು. ಏಳು ಗಂಟೆಗೆ ಪ್ರಾರಂಭವಾದ ಇಪ್ಪತ್ತು ನಿಮಿಷಗಳ ಪ್ರದರ್ಶನವನ್ನು ಕಾಣಲು ಸುಮಾರು 200ಜನ ಸೇರಿದ್ದರು. ಜನವರಿಯ ಹವಾಮಾನ ಹಿತವಾಗಿರುವುದರಿಂದ ಅನೇಕ ಶಾಲಾ ಮಕ್ಕಳು ಆಗಮಿಸಿದ್ದರು. (ಕಿವಿ ಮಾತು: ‘ಶಬ್ದ ಮತ್ತು ಬೆಳಕು’ ಪ್ರದರ್ಶನವನ್ನು ಕಾಣುವ ಉದ್ದೇಶವಿದ್ದಲ್ಲಿ ಮೊಧೇರಾಕ್ಕೆ ಸಂಜೆ ಭೇಟಿ ನೀಡುವುದು ಸೂಕ್ತ) ಅಕ್ಟೋಬರ್‍ 2022ರಲ್ಲಿ ಶ್ರೀ ಮೋದಿಯವರು ಉದ್ಘಾಟಿಸಿರುವ 3-ಡಿ ಪ್ರದರ್ಶನಕ್ಕೆ ಸೌರಶಕ್ತಿಯಿಂದಲೇ ವಿದ್ಯುಚ್ಛಕ್ತಿ ಸರಬರಾಜಾಗುತ್ತಿರುವುದು ವಿಶೇಷ. ಇಂತಹ ಹಲವಾರು ಪ್ರದರ್ಶನಗಳನ್ನು ಭಾರತದ ವಿವಿಧೆಡೆಗಳಲ್ಲಿ, ವಿದೇಶಗಳಲ್ಲಿಯೂ ನೋಡಿದ್ದರೂ ಇದರ ಸೌಂದರ್ಯ ಮನದುಂಬಿತು. ಜೊತೆಗೆ ಮತ್ತಷ್ಟು ಇತಿಹಾಸವೂ ತಿಳಿಯಿತು.

ಗುಜರಾತಿನ ಎರಡು ಮಹತ್ತರ, ಸುಂದರ ವಿಶ್ವ ಪಾರಂಪರಿಕ ತಾಣಗಳನ್ನು ಕಂಡ ಸಂತೋಷದಿಂದ ಬೆಂಗಳೂರಿಗೆ ವಾಪಸ್ಸಾದವು, ಇಂದಿಗೂ ಕಣ್ಣಮುಂದೆ ಕಾಣುತ್ತಿರುವ, ಕಾಡುತ್ತಿರುವ ದೃಶ್ಯಗಳನ್ನು ನಮ್ಮ ಇಷ್ಟ ಜನರ ಜೊತೆ ಹಂಚಿಕೊಂಡು ಆಸ್ವಾದಿಸುತ್ತಿದ್ದೇವೆ.

ಜಿ.ವಿ.ನಿರ್ಮಲ.

21 Responses

  1. ನಯನ ಬಜಕೂಡ್ಲು says:

    Nice article. ಹೌದಲ್ವಾ.. ನೋಟಿನಲ್ಲಿ ಇರುವ ಚಿತ್ರವನ್ನು ಸರಿಯಾಗಿ ಗಮನಿಸಿರಲೇ ಇಲ್ಲ.

  2. ವಾವ್ ಎಂಥಾ ಗಮನ ಸೆಳೆಯುವ ಲೇಖನ.. ನನಗಂತೂ ಇಷ್ಟು ಸೂಕ್ಷ್ಮ ಅವಲೋಕನ ಇಲ್ಲ… ಒಳ್ಳೆಯ ಮಾಹಿತಿ ಕೊಟ್ಟ ನಿಮಗೆ ವಂದನೆಗಳು ಮೇಡಂ

  3. ರಘುರಾಂ says:

    ಒಳ್ಳೆಯ ಮಾಹಿತಿಯುಳ್ಳ ಬರಹ.

  4. ಶಂಕರಿ ಶರ್ಮ says:

    ನೂರು ರೂಪಾಯಿಯ ನೋಟಿನಲ್ಲಿ ಸ್ಥಾನ ಪಡೆದ ಗುಜರಾತಿನ “ರಾಣಿ ಕಿ ವಾಹ್” ಹೊರ ಜಗತ್ತಿಗೆ ಕಾಣಲು ಬರೋಬ್ಬರಿ 40ವರ್ಷಗಳ ಕಾಲ ಉತ್ಖತನ ನಡೆದ ಸಂಗತಿ ನಿಜಕ್ಕೂ ಅದ್ಭುತವೇ ಸರಿ. ಅದರ ಅತ್ಯಪೂರ್ವ ಕಲಾನೈಪುಣ್ಯತೆಯು ಮನಸೆಳೆಯುವಂತಿದೆ. ಮಾಹಿತಿಪೂರ್ಣ ಲೇಖನ…ಧನ್ಯವಾದಗಳು ಮೇಡಂ.

  5. SHANTHA GOPAL H.S says:

    ನಾನೂ ಆರು ವರ್ಷಗಳ ಹಿಂದೆ ಈ ಸ್ಥಳಗಳನ್ನು ನೋಡಿದ್ದೆ.

    ನಿಮ್ಮ ಲೇಖನ ಆ ನೆನಪುಗಳನ್ನು ಹೊರತಂದಿತು. ನಾವು ಹೋಗಿದ್ದಾಗ ಸೌಂಡ್ ಅಂಡ್ ಲೈಟ್ ಶೋ ಇರಲಿಲ್ಲ. ಮತ್ತು ನಾವು ಹಗಲಲ್ಲೇ ಹೊಗಿದ್ದು

  6. ಪದ್ಮಾ ಆನಂದ್ says:

    ಕುತೂಹಲಭರಿತ ಮಾಹಿತಿಪೂರ್ಣ ಲೇಖನ.

  7. Geetha V. K. says:

    ಲೇಖನ ತುಂಬಾ ಚೆನ್ನಾಗಿದೆ. ರಾಣಿ ಕಿ ವಾವ್ ಮತ್ತು ಮೊಧೇರಾ ಐತಿಹಾಸಿಕ ಸ್ಥಳಗಳ ವಿವರಣೆ ಅತ್ಯುತ್ತಮವಾಗಿದೆ.

  8. S.sudha says:

    ನಾನೇ ನೋಡಿದಹಾಗಾಯ್ತು ನಿರ್ಮಲಾ. ಆ ಶಿಲ್ಪಿಗಳಿಗೆ ಎಷ್ಟು ಧನ್ಯವಾದಗಳ ಅರ್ಪಿಸಿದರೂ ಸಾಲದು. ಮತ್ತು ಅಂದಿನ ಇಂಜಿನಿಯರ್ ಗಳಿಗೆ.

  9. ನಾಗವೇಣಿ says:

    ನಿರ್ಮಲ ಎಲ್ಲವನ್ನು ಬಹಳ ಸುಂದರವಾಗಿ ಬರೆದಿದ್ದೀಯ…
    ನಮಗೂ ನೋಡಿದಂತೆ ಆಯ್ತು…
    ಅಲ್ಲಿಗೆ ಹೋಗಿ ನೋಡುವ ಬಯಕೆಯೂ ಆಯ್ತು…

  10. Anonymous says:

    ನಿಮ್ಮ ಪ್ರವಾಸ ಪ್ರೇಮ ಹೊಸ ತಾಣಗಳ ಹುಡುಕಾಟ ಅವುಗಳಿಗೆ ಭೇಟಿ ನೀಡಿ ಸಂತೋಷ ಪಡುವುದು ಅದ್ವಿತೀಯ.
    ಮಾತ್ರವಲ್ಲ ಅದರ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ಬರೆದು ಪರ್ಫೆಕ್ಟ್ ಲೇಖಕಿ ಯಾಗಿ ಇತರರಿಗೂ ಹಂಚುವ ಮಹತ್ಕಾರ್ಯ ಮಾಡುತ್ತೀರಿ ನಿಮಗೆ ನನ್ನ ಅಭಿವಂದನೆಗಳು

  11. Renuka says:

    Described so well that I felt that I went there once again, where I had gone three years back. Beautiful article, encouraging those who have not gone there to visit the place.

  12. Susheela Mani says:

    ದಿನನಿತ್ಯ ನೋಡುವ ನೋಟವಾದರೂ ಗಮನಿಸಿರಲಿಲ್ಲ. ನಿನ್ನ ವಿವರಣೆಗೆ ನನ್ನ ವಂದನೆಗಳು

  13. ವಾಸಂತಿ says:

    ಕಣ್ಣಿಗೆ ಕಟ್ಟುವಂತೆ ಮತ್ತು ಮನಸ್ಸಿನಲ್ಲಿ ಉಳಿಯುವಂತಹ ಬರಹ.

  14. Ahalya says:

    ಗಮನ ಸೆಳೆಯುವ ಲೇಖನ. ತುಂಬಾ ಚೆನ್ನಾಗಿದೆ. ನಾನು ಕೂಡ ನೋಡಿ ದಂತೆಆಯಿ ತು

  15. Nirmala G V says:

    ನನ್ನ ಪುಟ್ಟ ಬರಹ ಮೆಚ್ಚಿ ಜೇನು ಸುರಿಸಿದವರಿಗೆಲ್ಲಾ ನನ್ನ ನಮನಗಳು.

  16. Kaveri Sunil says:

    ಚೆಂದದ ಲೇಖನ ನಮ್ಮ ಈ ವರ್ಷದ ಆರಂಭದ ಜನವರಿ ತಿಂಗಳ ಅದೇ ಸ್ಥಳದ ಪ್ರವಾಸದ ನೆನಪನ್ನು ಹಸಿರುಗೊಳಿಸಿ ಮತ್ತೊಮ್ಮೆ ಆ ಸ್ಥಳಗಳ ಫೋಟೊ ಗಳನ್ನು ನೋಡುತ್ತಾ ತನ್ಮಯಗೊಳ್ಳುವಂತೆ ಮಾಡಿತು

  17. Kaveri Sunil says:

    ಚೆಂದದ ಲೇಖನ ನಮ್ಮ ಇತ್ತೀಚಿನ ಅದೇ ಸ್ಥಳಗಳ ಪ್ರವಾಸ ನೆನಪಿಸಿ ತನ್ಮಯ ಗೊಳುವಂತೆ ಮಾಡಿತು ಲೇಖಕಿಗೆ ಧನ್ಯವಾದಗಳು

  18. Nagarathna says:

    Very nice explanation with beautiful photos.

  19. Ravindra Kumar L. V says:

    ಫೆಬ್ರವರಿಯಲ್ಲಷ್ಟೇ ಈ ಎರಡೂ ಸ್ಥಳಗಳನ್ನು ಸುತ್ತಿ ಬಂದ ನಮಗೆ ನಿಮ್ಮ ಚಿತ್ರ ಸಹಿತ ವಿವರಣೆ ಮತ್ತೊಮೆ ಆ ಸುಂದರ ತಾಣಗಳನ್ನು ಕಣ್ಣಾರೆ ಕಂಡಂತೆ ಮಾಡಿತು. ಧನ್ಯವಾದಗಳು

  20. Ravindra Kumar L. V says:

    ಸುಂದರ ತಾಣಗಳ ಚಂದದ ಸಚಿತ್ರ ವಿವರಣೆ

  21. Aruna Sripad says:

    ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಾನೇ ಹೋಗಿ ಬಂದಂತೆ ಆಯಿತು

Leave a Reply to ಪದ್ಮಾ ಆನಂದ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: