ಕಾದಂಬರಿ : ತಾಯಿ – ಪುಟ 18
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮರುದಿನ ಬೆಳಿಗ್ಗೆ ಗೋದಾಮಣಿ ಹೊರಟರು. ಮಧ್ಯಾಹ್ನ ಭಾಸ್ಕರ ಬಂದು ಲೆಕ್ಕ ನೋಡಿದ. ಅವನು ಊಟ ಮಾಡಿಕೊಂಡು ಹೊರಟ.
ಸಾಯಂಕಾಲ ಕಾಫಿ ಕುಡಿಯುವಾಗ ರಾಜಲಕ್ಷ್ಮಿ ಕೇಳಿದರು.
“ಚಿನ್ಮಯಿ ಎಲ್ಲಿ ಗೌರಮ್ಮ?”
“ಅವಳು ಫ್ರೆಂಡ್ಸ್ ಜೊತೆ ಕೆ.ಆರ್.ಎಸ್‌ಗೆ ಹೋದಳು”
“ಹೇಗೆ ಓದ್ತಾಯಿದ್ದಾಳೆ?”
“ನಂಗೇನು ಗೊತ್ತಾಗತ್ತಮ್ಮ. ಏನೋ ಯಾವಾಗಲೂ ಓದ್ತಾ ಬರೀತಾ ಇರ‍್ತಾಳೆ. ಅದೇನು ಓದ್ತಾಳೋ ನನಗೇನು ಅರ್ಥವಾಗತ್ತೆ?”
“ನೀವು ಹೇಳುವುದು ಸರಿ” ಎಂದರು ರಾಜಲಕ್ಷ್ಮಿ.
ಅಂದು ರಾತ್ರಿ ಚಿನ್ಮಯಿ ಬಂದಾಗ 9.30ಯಾಗಿತ್ತು. ಗೋದಾಮಣಿ ಬಂದಾಗ 10 ಗಂಟೆಯಾಗಿತ್ತು. ಗೌರಮ್ಮ ಬಂದು ಎಲ್ಲರಿಗೂ ಹಾರ್ಲಿಕ್ಸ್ ಕೊಟ್ಟರು.
“ಹಾರ್ಲಿಕ್ಸ್ ಕೊಡಕ್ಕೋಸ್ಕರ ಎದ್ದಿದ್ರಾ?”
“ಹಾಗೇನಿಲ್ಲಮ್ಮ. ನಾನು ದಿನಾ ಮಲಗುವುದು ಲೇಟ್ ಅಲ್ವಾ? ಊಟಕ್ಕೆ ಬರಲ್ಲಾಂತ ನೀವು ಫೋನ್ ಮಾಡಿದ್ರಂತಲ್ಲಾ, ಅದಕ್ಕೆ ಅಮ್ಮ ಅವರು ಬಂದ ಮೇಲೆ ಹಾರ್ಲಿಕ್ಸ್ ಕೊಡೂಂತು ಹೇಳಿದ್ರು.”
“ಚಿನ್ಮಯಿ ಓದ್ತಾ ಇದ್ದಾಳಾ?”
“ಇಲ್ಲಮ್ಮ ಅವಳೂ ಈಗ ತಾನೆ ಕೆ.ಆರ್.ಎಸ್‌ನಿಂದ ಬಂದಳು.”
ಗೋದಾಮಣಿ ಏನೂ ಮಾತಾಡಲಿಲ್ಲ.
ಮರುದಿನ ತಿಂಡಿ ಕಾರ್ಯಕ್ರಮವಾದ ಮೇಲೆ ಗೋದಾಮಣಿ, ಮಧುಮತಿಯ ಜೊತೆ ರಾಜಲಕ್ಷ್ಮಿಯ ರೂಮ್‌ಗೆ ಬಂದರು.
“ಓ ನೀವಾ ಬನ್ನಿ. ಹೇಗಿತ್ತು ಪ್ರವಾಸ?”
“ತುಂಬಾ ಚೆನ್ನಾಗಿತ್ತು. ಕೆ.ಆರ್.ಎಸ್ ಬಿಟ್ಟು ಬರುವುದಕ್ಕೆ ಮನಸ್ಸಿರಲಿಲ್ಲ.”
“ಅಲ್ಲೇ ಹೋಟೆಲ್‌ನಲ್ಲಿ ಇಳೀದುಕೊಳ್ಳಬೇಕಿತ್ತು.”
“ಹಾಗೆಲ್ಲಾ ಇರಕ್ಕೆ ಸಾಧ್ಯವಾ? ನಿಮ್ಮ ಹತ್ತಿರ ಒಂದು ಮುಖ್ಯವಾದ ವಿಚಾರ ಮಾತನಾಡಬೇಕಾಗಿತ್ತು.”
“ಏನು ವಿಷಯ?”
“ನೆನ್ನೆ ಕೆ.ಆರ್.ಎಸ್‌ಗೆ ಚಿನ್ಮಯಿ ಒಬ್ಬ ಹುಡುಗ ಜೊತೆ ಬಂದಿದ್ದಳು?”
“ಹೌದಾ?”
“ಆ ಹುಡುಗ ಬೇರೆ ಯಾರೂ ಅಲ್ಲ. ಭಾಸ್ಕರ ಅಕೌಂಟೆಂಟ್. ಅವರಿಬ್ಬರಿಗೂ ಮದುವೆ ಮಾಡಿದರೆ ಒಳ್ಳೆಯದು ಅನ್ನಿಸತ್ತೆ.”
“ಅದು ಅಷ್ಟು ಸುಲಭವಲ್ಲ ಗೋದಾಮಣಿ. ಚಿನ್ಮಯಿ ತಂದೆ-ತಾಯಿ ಇದ್ದಾರಲ್ಲಾ. ಅವರು ತೀರ್ಮಾನ ತೆಗೆದುಕೊಳ್ತಾರೆ ಬಿಡಿ” ರಾಜಲಕ್ಷಿö್ಮ ಹೇಳಿದರು.
ಗೋದಾಮಣಿಗೆ ಅವರ ಉತ್ತರದಿಂದ ಸಂತೋಷವಾಗಲಿಲ್ಲ.
“ಅವರಿಂದ ಗೌರಮ್ಮನಿಗೆ ಈ ವಿಷಯ ತಿಳಿಸಬೇಕೆಂದುಕೊಂಡಿದ್ದರು.”
“ನಾವೇ ಹೇಳೋಣ.”
“ಬೇಡ. ನಾವು ಹೇಳಿದರೆ ಚೆನ್ನಾಗಿರಲ್ಲ.”
ಅಂದು ಆ ವಿಚಾರ ಅಲ್ಲಿಗೇ ಮುಗಿಯಿತು.
ಒಂದು ವಾರದ ನಂತರ ಮೋಹನ್ ರಾಜಲಕ್ಷ್ಮಿಯವರನ್ನು ನೋಡಲು ಬಂದ.
“ಏನು ವಿಚಾರ ಮೋಹನ್?”
“ನಿಮ್ಮ ಮಗ ನಿಮ್ಮ ಮೇಲೆ ಬೆಂಗಳೂರಿನಲ್ಲಿ ಕೇಸ್ ಹಾಕಿದ್ರು.”
“ಏನು ಕೇಸ್ ಹಾಕಿದ್ದ?”
“ನೀವು ಅವರಿಗೆ ಸೇರಬೇಕಾಗಿದ್ದ ಹಣ ತೆಗೆದುಕೊಂಡು ಈ ವೃದ್ಧಾಶ್ರಮ ಕಟ್ಟಿಸಿದ್ದೀರಾಂತ.”
“ಆಮೇಲೇನಾಯ್ತು.”
“ಆ ವಕೀಲರು ನಂಜನಗೂಡಿನಲ್ಲಿ ಶರೀಫ್ ಅಹಮದ್ ಅಂತ ಇದ್ದಾರೆ. ಅವರ ಬ್ರದರ್ ಹೆಸರು ನೂರ್ ಮೆಹಮದ್ ಅಂತ. ಅವರು ಲಾಯರ್ ಅವರ ಹತ್ತಿರ ಇವನು ಹೋಗಿದ್ದ.”
“ಅವರೇನಂದರಂತೆ?”
ಅವರು ನನ್ನ ಹತ್ತಿರವಿದ್ದ ಡಾಕ್ಯುಮೆಂಟ್ಸ್ ನೋಡಿದ್ದರು. ಅವರು “ನಿಮ್ಮ ತಾಯಿ ನ್ಯಾಯವಾದ ರೀತಿಯಲ್ಲೇ ವೃದ್ಧಾಶ್ರಮ ಕಟ್ಟಿದ್ದಾರೆ. ನಿನ್ನಿಂದ ಏನೂ ಮಾಡಕ್ಕಾಗಲ್ಲ. ಇಳಿವಯಸ್ಸಿಗೆ ನಿಮ್ಮ ತಾಯೀನ್ನ ದೂರ ಮಾಡಿದ್ದೀಯಾ. ವೃದ್ಧಾಶ್ರಮಕ್ಕೆ ಸೇರಿಸಿದ್ದೀಯಲ್ಲ. ನಾಚಿಕೆ ಆಗಲ್ವಾಂತ ಬೈದರಂತೆ.”
“ಒಳ್ಳೆಯದಾಯ್ತು. ಹೋದವಾರ ಇಲ್ಲಿಗೆ ಬಂದು ಜಗಳವಾಡಿಕೊಂಡು ಹೋಗಿದ್ದ….”
“ಆ ವಿಚಾರ ಬಿಡಿ. ನಿಮ್ಮ ಹತ್ತಿರ ಇನ್ನೊಂದು ವಿಷಯ ಹೇಳಬೇಕಾಗಿತ್ತು.”
“ಏನು ವಿಷಯ?”
“ಭಾನುವಾರ ಭಾಸ್ಕರ ಚಿನ್ಮಯಿ ಜೊತೆ ನಂಜನಗೂಡಿಗೆ ಬಂದಿದ್ದ. ಅವರಿಬ್ಬರೂ ಮದುವೆಯಾಗಬೇಕೂಂತ ಇದ್ದಾರೆ.”
“ಭಾಸ್ಕರಂಗೆ ಹೆಂಡತೀನ್ನ ಸಾಕುವಷ್ಟು ಸಂಬಳ ಬರ‍್ತಿದೆಯಾ?”
“ಇಲ್ಲಾಂತ ಕಾಣತ್ತೆ. ತಿಂಗಳಿಗೆ 20,000 ಬರಬಹುದು.”
ಅದರಲ್ಲಿ ಮನೆ ಬಾಡಿಗೆ ಕೊಟ್ಟುಕೊಂಡು ಅವನಿಗೆ ಸಂಸಾರ ಮಾಡಕ್ಕಾಗತ್ತಂತಾ?”
“ಗೌರಮ್ಮನವರಿಗೆ ಈ ವಿಚಾರ ಗೊತ್ತಿದೆಯಾ?”
“ಅವರಿಗೂ ಗೊತ್ತಿರಬಹುದು ಅನ್ನಿಸತ್ತೆ. ಆದರೆ ಅವರೇನೂ ಮಾತಾಡ್ತಿಲ್ಲ. ಭಾಸ್ಕರ ಮದುವೆ ಮಾಡಿಕೊಳ್ಳಲು ಬಯಸಿರುವುದು ತಪ್ಪಲ್ಲ. ಅದರ ಸಾಧಕ-ಬಾಧಕಗಳ ಬಗ್ಗೆ ಚಿಂತಿಸಬೇಕಾಗಿತ್ತು” ಎಂದರು ರಾಜಲಕ್ಷ್ಮಿ.
ಆ ರಾತ್ರಿ ಪುನಃ ಅವರಿಗೆ ನಿದ್ರೆ ಬರಲಿಲ್ಲ.
“ಭಾಸ್ಕರ ಚಿನ್ಮಯೀನ್ನ ಮದುವೆ ಆಗ್ತಾನಾ? ಮನೆ ಮಾಡ್ತಾನಾ? ಗೌರಮ್ಮನ ಗಂಡ ಎಷ್ಟು ದಿನ ತಮ್ಮನ ಮನೆಯಲ್ಲಿರಲು ಸಾಧ್ಯ? ಗಂಡ-ಹೆಂಡತಿ ಇಬ್ಬರ ಬಳಿಯೂ ಹಣವಿಲ್ಲ. ಮಗಳ ಮದುವೆ ಹೇಗೆ ಮಾಡ್ತಾರೆ? ನಾನು ಈ ಜವಾಬ್ದಾರಿ ಹೊರಲು ಸಾಧ್ಯವೆ? ಈಗಾಗಲೇ ಕೆಲವೊಮ್ಮೆ ಹೆಚ್ಚು ಖರ್ಚಾಗುತ್ತಿದೆ. ಮದುವೆಯ ನಂತರವೂ ಚಿನ್ಮಯಿ ಇಲ್ಲಿರಲು ಸಾಧ್ಯವಿಲ್ಲ. ಭಾಸ್ಕರ ಮನೆ ಮಾಡಬೇಕು. ಅಡ್ವಾನ್ಸ್ ಕೊಡಬೇಕು. ತಿಂಗಳು ತಿಂಗಳಿಗೆ ಬಾಡಿಗೆ ಕಟ್ಟಬೇಕು. ಇದಲ್ಲದೆ ಲೈಟ್ ಚಾರ್ಜ್, ವಾಟರ್ ಚಾರ್ಜ್ ಕಟ್ಟಬೇಕು….”
ಅವರ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿದವು.
ಒಂದು ಸಾಯಂಕಾಲ ಡಾ|| ಜಯಲಲಕ್ಷ್ಮಿ ರಾಜಲಕ್ಷ್ಮಿಗೆ ಫೋನ್ ಮಾಡಿದರು.
“ಇವತ್ತು ಸಾಯಂಕಾಲ ನೀವು, ಸರಸಮ್ಮ ನಮ್ಮನೆಗೆ ಬರಲು ಸಾಧ್ಯಾನಾ?”
“ಏನು ವಿಷಯ ಡಾಕ್ಟರ್?”
“ನೀವು ಬಂದ ನಂತರ ಗೊತ್ತಾಗತ್ತೆ. ನೀವು ಇಲ್ಲಿಗೆ ಬರುವ ವಿಚಾರ ಯಾರಿಗೂ ಹೇಳಬೇಡಿ.”
“ಹಾಗೇ ಆಗಲಿ.”
ಅಂದು ಸಾಯಂಕಾಲ ಆರು ಗಂಟೆಗೆ ಬಿ.ಪಿ. ತೋರಿಸಿಕೊಳ್ಳುವ ನೆಪದಲ್ಲಿ ಇಬ್ಬರೂ ಆಶ್ರಮ ಬಿಟ್ಟರು. ಡಾ|| ಜಯಲಕ್ಷಿö್ಮ ಅವರಿಗಾಗಿ ಕಾದಿದ್ದವರು ತಮ್ಮ ಕೊಠಡಿಗೆ ಕರೆದುಕೊಂಡು ಹೋದರು. ನಂತರ ಬಿಸಿಬಿಸಿ ಕಾಫಿ ಬಂತು.
“ನೀವೇ ಅಡಿಗೆ-ತಿಂಡಿ ಮಾಡ್ತಿದ್ದೀರಾ?”
“ಇಲ್ಲ ಹೊರಗಿನಿಂದ ತರಿಸ್ತೀವಿ. ಕಾಫಿ, ಟೀ ಮಾತ್ರ ನಾನೇ ಮಾಡ್ತೀನಿ.”
“ಊಟ-ತಿಂಡಿ ಚೆನ್ನಾಗಿರತ್ತಾ?”
“ಹೇಗೆ ಚೆನ್ನಾಗಿರಲು ಸಾಧ್ಯ? ದಿನಾ ಒಂದೇ ತರಹ ರುಚಿ. ಆದರೆ ವಿಧಿಯಿಲ್ಲ ಕೈಲಾಗಲ್ಲ. ಬೇರೆಯವರನ್ನು ಅವಲಂಬಿಸಲೇಬೇಕು.”
“ದಿನಾ ಅನ್ನ ಮಾಡಿಕೊಳ್ಳಿ. ಸಾರು, ಹುಳಿ ನಾನು ಕಳಿಸ್ತೀನಿ.”
“ಅದೆಲ್ಲಾ ಬೇಡ. ಏನಾದರೂ ವಿಶೇಷ ಮಾಡಿದ್ದಾಗ ತಿಳಿಸಿ. ತರಿಸಿಕೊಳ್ತೇನೆ. ನಾನು ನಿಮ್ಮ ಹತ್ತಿರ ಮಾತನಾಡಬೇಕಾಗಿತ್ತು.”
“ಏನು ವಿಷಯ?”
“ಗೋದಾಮಣಿ, ಮಧುಮತಿಗೆ ನಿಮ್ಮ ಮೇಲೆ ಕೋಪ ಬಂದಿದೆ.”
“ಯಾವ ವಿಚಾರಕ್ಕೆ ಕೋಪ?”
“ಅವರಿಬ್ಬರೂ ಭಾಸ್ಕರ್-ಚಿನ್ಮಯಿ ವಿಚಾರ ಹೇಳಿದ್ರೂ ನೀವು ಮದುವೆ ವಿಚಾರದಲ್ಲಿ ಆಸಕ್ತಿ ತೋರಿಸಲಿಲ್ಲವಂತೆ.”
“ಭಾಸ್ಕರ ಹಿಂದಿನ ಜನ್ಮದಲ್ಲಿ ನನ್ನ ಮಗನೋ, ಮೊಮ್ಮಗನೋ ಆಗಿದ್ದಾಂತ ಕಾಣತ್ತೆ. ಅವನ ಬಗ್ಗೆ ನನಗೆ ಪ್ರೀತಿ, ಕಾಳಜಿ ಇರುವುದರಿಂದಲೇ ನಾನು ಈಗಲೇ ಮದುವೆ ಬೇಡ ಅನ್ನುತ್ತಿರೋವುದು.”
“ನನಗೆ ನಿಮ್ಮ ಮಾತು ಅರ್ಥವಾಗ್ತಿಲ್ಲ.”
“ಚಿನ್ಮಯಿ-ಭಾಸ್ಕರ ಮದುವೆಯ ನಂತರ ಮನೆ ಮಾಡಲೇಬೇಕು. ಅವನಿಗೆ ಬರುವ 20,000 ರೂ. ಸಂಬಳದಲ್ಲಿ ಮನೆ ಬಾಡಿಗೆ ಕೊಟ್ಟುಕೊಂಡು ಸಂಸಾರ ಮಾಡಲು ಸಾಧ್ಯಾನಾ? ಮಗಳು ಮೈಸೂರಿನಲ್ಲಿರುವಾಗ ಅವಳ ತಂದೆ-ತಾಯಿ ಅವಳ ಜೊತೆ ಇರಬೇಕೂಂತ ಹಂಬಲಿಸಬಹುದು. ಆಗ ನಾಲ್ಕು ಜನರ ಸಂಸಾರ ತೂಗಿಸುವ ಜವಾಬ್ದಾರಿ ಭಾಸ್ಕರನ ಮೇಲೆ ಬೀಳುತ್ತದೆ….”
“ಚಿನ್ಮಯಿ ತಂದೆ ಅವರ ತಮ್ಮನ ಜೊತೆ ಇದ್ದಾರಲ್ವಾ?”
“ಅಲ್ಲಿ ಅವರು ಸುಖವಾಗಿಲ್ಲ. ಆತನಿಗೂ ವಯಸ್ಸಾಗಿದೆ. ಈ ವಯಸ್ಸಿನಲ್ಲಿ ಅವರು ಹೆಂಡತಿ ಜೊತೆ ಇರಲು ಇಷ್ಟಪಟ್ತಿದ್ದಾರೆ. ಇದುವರೆಗೂ ಗೋದಾಮಣಿ ತಿಂಗಳಿಗೆ 25,000 ರೂ. ಕೊಡ್ತಿದ್ರು.
ಮುಂದೆ ಅವರು ಕೊಡಬಹುದು. ಕೊಡದೇನೂ ಇರಬಹುದು. ಚಿನ್ಮಯಿಗೆ, ಭಾಸ್ಕರಂಗೆ ಬುದ್ಧಿ ಹೇಳಬೇಕು. ಚಿನ್ಮಯಿ ಓದು ಮುಗಿಸಿ ಕೆಲಸಕ್ಕೆ ಸೇರಿದರೆ ಅನುಕೂಲವಾಗತ್ತೆ. ಗೋದಾಮಣಿ, ಮಧುಮತಿ ನನ್ನ ರೀತಿ ಯೋಚಿಸಿರಲಾರರು….”
“ನಾನೂ ನಿಮ್ಮ ತರಹ ಯೋಚಿಸಿರಲಿಲ್ಲ. ಸರಳವಾಗಿ ಮದುವೆ ಮಾಡಬಹುದಲ್ವಾಂತ ಯೋಚಿಸ್ತಿದ್ದೆ.”
“ಮದುವೆ ಸರಳವಾಗಿ ಮಾಡಬಹುದು. ಆದರೆ ಈಗಿನ ಕಾಲದಲ್ಲಿ ಸರಳವಾಗಿ ಬದುಕು ನಡೆಸಕ್ಕಾಗಲ್ಲ ಅಲ್ವಾ? ನಾನು ಗೌರಮ್ಮನಿಗೆ ಚಿನ್ಮಯಿ ವಿಚಾರ ಹೇಳಬೇಕು. ಆಗ ಚಿನ್ಮಯಿ, ಭಾಸ್ಕರ ಇಬ್ಬರೂ ಅವರ ಜೊತೆ ಇರಬೇಕು. ನಮ್ಮ ವೃದ್ಧಾಶ್ರಮದಲ್ಲಿ ಅದು ಸಾಧ್ಯವಾಗ್ತಿಲ್ಲ.”
“ಅವರನ್ನು ಈ ಭಾನುವಾರ ಸಾಯಂಕಾಲ ಇಲ್ಲಿಗೆ ಬರಲು ಹೇಳಿ. ನಮ್ಮನೇಲಿ ಕುಳಿತು ಮಾತನಾಡಬಹುದು” ಎಂದರು ಡಾ|| ಜಯಲಕ್ಷ್ಮಿ.
“ಅದೂ ಆಗಬಹುದು” ಎಂದರು ರಾಜಲಕ್ಷ್ಮಿ.
ಅವರು ವೃದ್ಧಾಶ್ರಮಕ್ಕೆ ವಾಪಸ್ಸು ಬಂದಕೂಡಲೇ ಗೌರಮ್ಮ ಹೇಳಿದರು. “ಯಾರೋ ಇಬ್ಬರು ಗಂಡಸರು ನಿಮ್ಮನ್ನು ನೋಡಲು ಬಂದಿದ್ರು. ಅರ್ಧಗಂಟೆ ಕಾದಿದ್ದರು. ಆಮೇಲೆ “ನಾಳೆ ಬೆಳಿಗ್ಗೆ ಫೋನ್ ಮಾಡಿ ಬರ‍್ತೀನಿ’ ಅಂತ ಹೇಳಿ ಹೊರಟುಹೋದರು.
“ಬೆಳಿಗ್ಗೆ 11 ಗಂಟೆ ಮೇಲೆ ಬರಲು ಹೇಳಬೇಕಿತ್ತು.”
“ಅವರು ಫೋನ್ ಮಾಡಿ ಬರ‍್ತಾರಲ್ಲ ಬಿಡಿ.”
“ಗೌರಮ್ಮ ಅವರು ನಾನು ಪರಿಚಯಾಂತ ಹೇಳಿದ್ರಾ?”
“ಇಲ್ಲಮ್ಮಾ, ಹಾಗೇನೂ ಹೇಳಲಿಲ್ಲ.”
“ಸರಿ. ನಾಳೆ ಬರ‍್ತಾರಲ್ಲಾ ನೋಡೋಣ” ಎಂದರು ರಾಜಲಕ್ಷ್ಮಿ.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ: https://www.surahonne.com/?p=42082
-ಸಿ.ಎನ್. ಮುಕ್ತಾ
ರಾಜಲಕ್ಷ್ಮಿ ಯವರ ಯೋಚನಾ ಲಹರಿ ಇನ್ನೊಬ್ಬರಿಗೆ ಮಾದರಿಯಾಗುವಂತಿದೆ.. ತಾವು ತೆಗೆದುಕೊಂಡು ಹೋಗುತ್ತಿರುವ ಜವಾಬ್ದಾರಿ.. ಹೇಗೆ ತಂದು ನಿಲ್ಲಿಸುತ್ತಾರೆಂಬ ಕುತೂಹಲ ವಂತೂ ಉಳಿಸಿಕೊಂಡು ಸಾಗುತ್ತಿದೆ ಕಾದಂಬರಿ.. ಮೇಡಂ
ಕುತೂಹಲ ಭರಿತ ತಿರುವುಗಳೊಂದಿಗೆ ಓದುವ ಆಸಕ್ತಿಯನ್ನು ಹೆಚ್ಚಿದಿಕೊಳ್ಳುತ್ತಲೇ ಸಾಗಿದೆ.
ತಮ್ಮ ಕಾಲ ಮೇಲೆ ದೃಢವಾಗಿ ನಿಂತ ಮೇಲೆಯೇ ಸಂಸಾರ ಹೂಡಬೇಕೆಂಬ ಕಿವಿಮಾತಿನೊಂದಿಗಿನ ಇಂದಿನ ಪುಟವು ಚೆನ್ನಾಗಿ ಮೂಡಿಬಂದಿದೆ ಮೇಡಂ.
ಸೊಗಸಾಗಿದೆ
ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಇವರಿಗೂ ಹಾಗೂ ಅಭಿಪ್ರಾಯ ತಿಳಿಸಿರುವ ಆತ್ಮೀಯ ಓದುಗರಿಗೆ ಧನ್ಯವಾದಗಳು.