ವಾಟ್ಸಾಪ್ ಕಥೆ 59: ವಾಸ್ತವಿಕತೆಯ ಅರಿವು.
ಈಗಿನ ಯುವಕರು ಕಾಲೇಜಿಗೆ ವ್ಯಾಸಂಗಕ್ಕಾಗಿ ಸೇರಿದರೆ ಅವರು ಬಯಸಿದ್ದನ್ನೆಲ್ಲ ಅಪ್ಪ, ಅಮ್ಮ ತೆಗೆಸಿಕೊಡಲೇಬೇಕೆಂದು ಹಟಮಾಡುತ್ತಾರೆ. ಅಪ್ಪನ ಹಣಕಾಸು ಪರಿಸ್ಥಿತಿಯೇನು ಎಂಬುದನ್ನು ಅವರು ತಿಳಿದುಕೊಳ್ಳಲು ಪ್ರಯತ್ನಿಸುವುದೇ ಇಲ್ಲ. ಹೀಗೆ ಒಬ್ಬ ಮಗನು ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ. ಅವನ ತಂದೆ ಕೆಳಮಧ್ಯಮ ವರ್ಗದ ಕಾರ್ಮಿಕರು. ಕಷ್ಟಪಟ್ಟು ಹುಡುಗನನ್ನು ಓದಿಸುತ್ತಿದ್ದರು. ತನ್ನ ಕಾಲೇಜಿನ ಸಹಪಾಠಿಗಳಲ್ಲಿ ಕೆಲವು ಸ್ಥಿತಿವಂತರ ಮಕ್ಕಳು ಮೋಟಾರುಬೈಕುಗಳಲ್ಲಿ ಕಾಲೇಜಿಗೆ ಬರುತ್ತಿದ್ದರು. ಅವರನ್ನು ಕಂಡ ಮಗನಿಗೆ ಅವರಂತೆ ತಾನೂ ಸ್ಟೈಲಾಗಿ ಓಡಾಡಬೇಕೆಂಬ ಹಂಬಲವುಂಟಾಯಿತು. ಮನೆಯಲ್ಲಿ ತಂದೆಗೆ ವರಾತ ಹಚ್ಚಿದ. ತಂದೆ ಅವನ ಅಡ್ಮಿಷನ್, ಪುಸ್ತಕಗಳು, ಲ್ಯಾಪ್‌ಟಾಪ್ಗಳನ್ನೆಲ್ಲ ತೆಗೆಸಿಕೊಟ್ಟು ಸುಸ್ತಾಗಿದ್ದರು. ಇದ್ದ ವಿಷಯವನ್ನು ಹೇಳಿ ಮಗನನ್ನು ಸಮಾಧಾನ ಪಡಿಸಲು ಪ್ರಯತ್ನ ಪಟ್ಟರು. ಮಗ ಅಪ್ಪನ ಕಷ್ಟಗಳನ್ನು ಕೇಳಿಸಿಕೊಳ್ಳಲು ಸಿದ್ಧನೇ ಇರಲಿಲ್ಲ. “ನೀವು ಕೊಡಿಸಿದ್ದುದು ಅಗತ್ಯ ವಸ್ತುಗಳು. ಅವಿಲ್ಲದೆ ಬರೀ ಮಾತಿನಲ್ಲಿ ಇಂಜಿನಿಯರ್ ಆಗು ಎಂದರೆ ಹೇಗೆೆ?” ಎಂದು ಸಿಟ್ಟಿನಿಂದ ಕಾಲನ್ನಪ್ಪಳಿಸಿ ಅಲ್ಲೇ ಮೇಜಿನಮೇಲಿದ್ದ ಪರ್ಸನ್ನು ಜೇಬಿಗಿಳಿಸಿಕೊಂಡು ಬಾಗಿಲಬಳಿಯಿದ್ದ ಬೂಟುಗಳನ್ನು ತೊಟ್ಟು ಊಟವನ್ನೂ ಮಾಡದೆ ಹೊರನಡೆದ. ಪೋಷಕರು ನೊಂದುಕೊಂಡರು.
ಸ್ವಲ್ಪ ದೂರ ನಡೆಯುತ್ತಿದ್ದಂತೆ ಅವನಿಗೆ ಕಾಲಿಗೆ ಹಾಕಿಕೊಂಡಿದ್ದ ಬೂಟು ಒತ್ತಿದಂತಾಯಿತು. “ತಥ್‌ತೇರಿ” ಅಂದುಕೊಂಡು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರ ಮೇಲೆ ಕುಳಿತು ಕಾಲಿನ ಕಡೆಗೆ ನೋಡಿಕೊಂಡ. “ಅರೆ ! ಇದು ಅಪ್ಪನ ಬೂಟು. ಅಯ್ಯೋ ಇದೇನು ಒಳಗೆಲ್ಲ ತೂತಾಗಿದೆ…ಛೇ”ಅಂದುಕೊಂಡ. ಅವರಮ್ಮ ಕೆಲವು ದಿನಗಳ ಹಿಂದೆ ಅಪ್ಪನಿಗೆ ಹೇಳುತ್ತಿದ್ದ ಮಾತು ನೆನಪಾಯಿತು. “ರೀ..ನಿಮ್ಮ ಬೂಟುಗಳು ಬಹಳಷ್ಟು ಹಾಳಾಗಿವೆ. ಬೇರೆ ಜೊತೆ ತೊಗೋಬಾರದೇ?” ಅದಕ್ಕಪ್ಪನ ಉತ್ತರ “ಏನಿಲ್ಲ. ಅಲ್ಲಲ್ಲಿ ಸ್ವಲ್ಪ ರಿಪೇರಿ ಮಾಡಿಸಿಕೊಂಡರೆ ಇನ್ನೂ ಕೆಲವು ದಿನ ಕಳೆಯಬಹುದು” ಎಂದಿದ್ದರು. “ಆದರೆ ಎರಡು ದಿನಗಳ ಹಿಂದೆಯಷ್ಟೇ ಹೊಸದಾದ ಜೊತೆ ಬೂಟುಗಳನ್ನು ಮತ್ತು ಚಪ್ಪಲಿಗಳನ್ನು ನಾನೇ ಕೊಂಡುಕೊಂಡಿದ್ದೆ.” ಅವನ ಮನಸ್ಸು ಏಕೋ ಪಿಚ್ಚೆನ್ನಿಸಿತು. ಅದನ್ನೇ ಯೋಚಿಸುತ್ತಾ ಪರ್ಸಿಗೆ ಕೈಹಾಕಿದ. ಅವಸರದಲ್ಲಿ ಎತ್ತಿ ಜೇಬಿಗೆ ಸೇರಿಸಿದ್ದ ಪರ್ಸ್ ಕೂಡ ಅಪ್ಪನದ್ದೇ. ಅದರಲ್ಲಿ ಏನಿದೆಯೆಂದು ಪರೀಕ್ಷಿಸಿದ. ಒಂದು ಲ್ಯಾಪ್‌ಟಾಪಿಗಾಗಿ ಅಪ್ಪ ಬ್ಯಾಂಕಿನಿಂದ ತೆಗೆದುಕೊಂಡಿದ್ದ ಲೋನಿಗೆ ಸಂಬಂಧಿಸಿದ ಕಾಗದ. ಇನ್ನೊಂದು ನ್ಯೂಸ್ ಪೇಪರಿನಲ್ಲಿ ಹಳೆಯ ಸ್ಕೂಟರ್ ಕೊಳ್ಳುತ್ತೇವೆ ಎಂಬ ಜಾಹೀರಾತಿನ ಕಟಿಂಗ್. ಆಗ ನೆನಪಾಯಿತು ಮನೆಯಿಂದ ಹೊರಗಡೆ ಬಂದಾಗ ಮನೆಯ ಮುಂದೆ ಅಪ್ಪನ ಸ್ಕೂಟರ್ ಕಾಣಿಸಲಿಲ್ಲವೆಂಬುದು.
ತಕ್ಷಣ ಕಾಲು ಒತ್ತುತ್ತಿದ್ದರೂ ಲೆಕ್ಕಿಸದೆ ವೇಗವಾಗಿ ಮನೆಯ ಕಡೆಗೆ ಧಾವಿಸಿದ. ಅಮ್ಮನಿಂದ ವಿಷಯ ತಿಳಿದು ಸ್ಕೂಟರ್ ಕೊಳ್ಳುವ ಅಂಗಡಿಯತ್ತಲೇ ಓಡಿಬಂದ. ಅವನಪ್ಪ ತಮ್ಮ ಸ್ಕೂಟರ್ ನಿಲ್ಲಿಸಿ ತಮ್ಮ ಸರದಿಗಾಗಿ ಕಾಯುತ್ತಿದ್ದರು. ಸುತ್ತಮುತ್ತ ಯಾರಿದ್ದಾರೆನ್ನುವ ಪರಿವೆಯೂ ಇಲ್ಲದೆ ಅವನು ಅಪ್ಪನನ್ನು ಗಟ್ಟಿಯಾಗಿ ತಪ್ಪಿಹಿಡಿದು ದುಃಖಿಸತೊಡಗಿದ. ಅಂತಹ ಪರಿಸ್ಥಿತಿಯಲ್ಲಿಯೂ ಅವನಪ್ಪ “ಏನಾಯಿತು ಮಗೂ?” ಎಂದು ಸಮಾಧಾನವಾಗಿ ಕೇಳಿದರು. ಅವನು “ನಡೆಯಿರಿ ಮನೆಗೆ ಹೋಗೋಣ. ಇನ್ನೆಂದೂ ನಾನು ನಿಮಗೆ ಈ ರೀತಿ ಕಷ್ಟಕೊಡಲ್ಲ ನನ್ನನ್ನು ಕ್ಷಮಿಸಿ” ಎಂದು ಬಲವಂತವಾಗಿ ಅಪ್ಪನನ್ನು ಸ್ಕೂಟರಿನಲ್ಲಿ ಕೂಡಿಸಿಕೊಂಡು ಮನೆಗೆ ಕರೆತಂದನು.
ಅಂದಿನಿಂದ ಆ ಹುಡುಗ ತಂದೆಗೆ ಹೆಚ್ಚು ತೊಂದರೆ ಕೊಡದೆ ಕಷ್ಟಪಟ್ಟು ವ್ಯಾಸಂಗ ಮಾಡಿ ಇಂಜಿನಿಯರಾದನು. ಒಳ್ಳೆಯ ಕೆಲಸಕ್ಕೆ ಸೇರಿ ತಂದೆ ತಾಯಿಗಳಿಗೆ ಪ್ರೀತಿಯ ಮಗನಾಗಿ ಬಾಳಿದನು. ಹೆತ್ತವರು ತಮ್ಮ ಮಕ್ಕಳಿಗಾಗಿ ಮಾಡುವ ತ್ಯಾಗ, ಅವರ ನೋವುಗಳು ಅವನಿಗೆ ಚೆನ್ನಾಗಿ ಮನದಟ್ಟಾಯಿತು.
ಮಕ್ಕಳಿಗೆ ತಂದೆ ತಾಯಿಗಳು ಮನೆಯ ಪರಿಸ್ಥಿತಿಯ ಅರಿವಿರುವಂತೆ ಬೆಳೆಸಬೇಕಾದುದು ಅವರ ಆದ್ಯ ಕರ್ತವ್ಯ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ
Nice
ಧನ್ಯವಾದಗಳು ನಯನಮೇಡಂ
ಇಂದಿನ ಮಕ್ಕಳಿಗೆ ಉತ್ತಮ ಸಂದೇಶವನ್ನು ನೀಡುವ ಚಿಕ್ಕ ಚೊಕ್ಕ ಕಥೆಯು ತಮ್ಮದೇ ರಚನೆಯ ಪೂರಕ ಚಿತ್ರದೊಂದಿಗೆ ಬಹಳ ಚೆನ್ನಾಗಿ ಮೂಡಿಬಂದಿದೆ…ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ