ವಾಟ್ಸಾಪ್ ಕಥೆ 56: ಮಾಡದವರ ಪಾಪ ಆಡಿದವರ ಬಾಯಲ್ಲಿ.
ಒಂದೂರಿನಲ್ಲಿ ಒಬ್ಬ ರಾಜ ವಿಶೇಷ ದಿನಗಳಲ್ಲಿ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಮಾಡಿಸುತ್ತಿದ್ದ. ಒಂದು ಬಾರಿ ದೊಡ್ಡದೊಂದು ಬಯಲಿನಲ್ಲಿ ಆಹ್ವಾನಿತರು ಸಾಲಾಗಿ ಊಟಕ್ಕೆ ಕುಳಿತಿದ್ದರು. ಸಿದ್ಧ ಪಡಿಸಿದ್ದ ಆಹಾರದ ಮುಖ್ಯ ಖಾದ್ಯಗಳನ್ನು ಅಲ್ಲಿಗೆ ಬಂದಿದ್ದ ರಾಜನು ತಾನೇ ಸ್ವಹಸ್ತದಿಂದ ಬ್ರಾಹ್ಮಣರಿಗೆ ಬಡಿಸಿದ. ಅದೇ ವೇಳೆಗೆ ಆಕಾಶದಲ್ಲಿ ಗಿಡುಗವೊಂದು ನಾಗರ ಹಾವನ್ನು ತನ್ನ ಬಾಯಲ್ಲಿ ಕಚ್ಚಿ ಹಿಡಿದುಕೊಂಡು ಹಾರುತ್ತಿತ್ತು. ಜನರು ಊಟಕ್ಕೆ ಕುಳಿತಿದ್ದ ಸ್ಥಳದ ಮೇಲೆ ಹಾರುತ್ತಿದ್ದಾಗ ನೇತಾಡುತ್ತಿದ್ದ ಹಾವಿನ ಬಾಯಿಂದ ಒಂದು ತೊಟ್ಟು ವಿಷ ಖಾದ್ಯಗಳನ್ನಿರಿಸಿದ್ದ ಪಾತ್ರೆಯೊಳಕ್ಕೆ ಬಿದ್ದುಬಿಟ್ಟಿತು. ಇದು ಅಲ್ಲಿದ್ದರ್ಯಾರ ಗಮನಕ್ಕೂ ಬರಲಿಲ್ಲ. ವಿಷಮಿಶ್ರಿತವಾದ ಆಹಾರ ಸೇವಿಸಿದವರಲ್ಲಿ ಒಂದಿಬ್ಬರು ತೀವ್ರವಾಗಿ ತೊಂದರೆಪಟ್ಟು ಪ್ರಜ್ಞಾಹೀನರಾದರು. ಅರಮನೆಯ ವೈದ್ಯರು ಬಂದು ಅವರಿಗೆ ಚಿಕಿತ್ಸೆ ನೀಡಿದರೂ ಪ್ರಯೋಜನವಾಗದೇ ಅವರು ಮೃತಪಟ್ಟರು. ರಾಜನಿಗೆ ಇದರಿಂದ ತುಂಬ ದುಃಖವಾಯಿತು. ಸತ್ತವರ ಕುಟುಂಬಕ್ಕೆ ರಾಜನು ಪರಿಹಾರ ನೀಡಿದ. ಉಳಿದವರು ಅವರ ಆಯುಸ್ಸೇ ಅಷ್ಟಿದ್ದಿತು ಎಂದು ಸಮಾಧಾನ ಪಟ್ಟುಕೊಂಡರು.
ಜನರ ಪಾಪಪುಣ್ಯಗಳ ಲೆಕ್ಕ ದಾಖಲಿಸುತ್ತಿದ್ದ ಯಮಕಿಂಕರ ಚಿತ್ರಗುಪ್ತನಿಗೆ ಪೀಕಲಾಟವಾಯಿತು. ಕೊಲೆಯ ಪಾಪವನ್ನು ಯಾರಲೆಕ್ಕಕ್ಕೆ ಬರೆಯುವುದು ಎಂದು. ಏಕೆಂದರೆ ರಾಜನು ಯಾವ ತಪ್ಪೂ ಮಾಡಿಲ್ಲ, ಹೇಗಾಯಿತೆಂಬುದು ಯಾರಿಗೂ ತಿಳಿಯಲಿಲ್ಲ. ಗಿಡುಗದ ಆಹಾರವಾಗಿದ್ದ ಹಾವನ್ನು ಅದು ಹಿಡಿದುಕೊಂಡು ಹೋಗುತ್ತಿದ್ದುದು ಸಹಜ. ಏಕೆಂದರೆ ಅದರ ಆಹಾರ ಹಾವು. ಹಾವು ಪ್ರಾಣಸಂಕಟದಲ್ಲಿತ್ತು. ಅದಕ್ಕಂತೂ ತನ್ನಿಂದ ತಪ್ಪಾಗಿದೆ ಎಂಬುದು ತಿಳಿದಿಲ್ಲ. ಯಮಧರ್ಮರಾಜನನ್ನು ಚಿತ್ರಗುಪ್ತ ಕೇಳಿದ. ಯಮಧರ್ಮನು ಸದ್ಯಕ್ಕೆ ಯಾರ ಲೆಕ್ಕಕ್ಕೂ ಸೇರಿಸದಿರು. ಆ ಊರಿನ ಜನರ ನಡವಳಿಕೆಯ ಮೇಲೆ ನಿಗಾ ಇಡು, ಮುಂದೆ ಉತ್ತರ ಸಿಗುತ್ತದೆ ಎಂದನು.
ಹಾಗೇ ಕೆಲವಾರು ದಿನಗಳು ಕಳೆದವು. ಒಂದುದಿನ ಬೇರೆ ಊರಿನ ಕೆಲವು ಬ್ರಾಹ್ಮಣ ಪಂಡಿತರುಗಳು ಆ ಊರಿನ ರಾಜನನ್ನು ಕಾಣಲು ಬಂದರು. ಅರಮನೆಯ ದಾರಿ ಗೊತ್ತಿಲ್ಲದೆ ದಾರಿಯಲ್ಲಿ ಕಟ್ಟೆಯೊಂದರ ಮೇಲೆ ಹೂ ಕಟ್ಟುತ್ತಿದ್ದ ಹೂವಾಡಗಿತ್ತಿಯನ್ನು ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದರು. ಆಕೆ ತನಗೆ ಗೊತ್ತಿದ್ದ ದಾರಿಯನ್ನು ತಿಳಿಸುತ್ತಾ ಅವರು ಏತಕ್ಕೆ ಬಂದಿದ್ದಾರೆ ಎಂದು ಪ್ರಶ್ನಿಸಿದಳು. ಅವರು ತಮ್ಮ ಪಾಂಡಿತ್ಯ ಪ್ರದರ್ಶಿಸಿ ರಾಜರಿಂದ ಬಹುಮಾನಗಳನ್ನು ಪಡೆಯಬೇಕೆಂದು ಬಂದಿದ್ದೇವೆ ಎಂದು ಹೇಳಿದರು. ಆಕೆ ಸುಮ್ಮನಿರದೆ ಅದೆಲ್ಲಾ ಮಾಡಿ ಆದರೆ ರಾಜರು ಭೋಜನಕ್ಕೆ ಆಹ್ವಾನಿಸಿದರೆ ಮಾತ್ರ ಹೋಗಬೇಡಿ. ಏಕೆಂದರೆ ಅವರೇ ಬಡಿಸಿದ್ದ ಭೋಜನಮಾಡಿ ಬ್ರಾಹ್ಮಣರಿಬ್ಬರು ಸತ್ತಿದ್ದರು. ರಾಜನು ಊಟದಲ್ಲಿ ವಿಷ ಬೆರೆಸಿದ್ದ. ಎಂದು ಎಚ್ಚರಿಕೆ ನೀಡಿದಳು.
ಈ ಮಾತುಗಳನ್ನು ಅಗೋಚರನಾಗಿ ಕೇಳಿಸಿಕೊಳ್ಳುತ್ತಿದ್ದ ಚಿತ್ರಗುಪ್ತನಿಗೆ ತನ್ನ ಸಂದೇಹಕ್ಕೆ ಉತ್ತರ ಸಿಕ್ಕಿತು. ಆಹಾರದಲ್ಲಿ ವಿಷ ಬೆರೆಯಲು ರಾಜನಾಗಲಿ, ಗಿಡುಗನಾಗಲಿ, ಹಾವಾಗಲಿ ಕಾರಣರಾಗಿರಲಿಲ್ಲ. ಅದೊಂದು ಆಕಸ್ಮಿಕ ಘಟನೆ. ಆದರೆ ಹೂವಾಡಗಿತ್ತಿ ತಾನೇ ನಿಸ್ಸಂಶಯವಾಗಿ ಆ ಪಾಪಕ್ಕಾಗಿ ರಾಜನನ್ನು ದೂಷಿಸಿದಳು. ಆಕೆಗೆ ಸತ್ಯ ಸಂಗತಿ ಗೊತ್ತಿಲ್ಲದಿದ್ದರೂ ಆರೋಪ ಮಾಡಿದ್ದಕ್ಕಾಗಿ ಚಿತ್ರಗುಪ್ತನಿಗೆ ಯಮಧರ್ಮರಾಜನು ಈ ಪಾಪವನ್ನು ಆಕೆಯ ಲೆಕ್ಕಕ್ಕೆ ಸೇರಿಸಿಬಿಡು ಎಂದು ತೀರ್ಪು ಕೊಟ್ಟನು.
ನಾವು ಯಾರಾದರೊಬ್ಬರ ಕೃತ್ಯದ ಬಗ್ಗೆ ಸತ್ಯವಾದ ವಿಚಾರಗಳನ್ನು ತಿಳಿದುಕೊಳ್ಳದೆ ಆಡಿದರೆ ಅದು ನಮ್ಮದೇ ತಪ್ಪಾಗುತ್ತದೆ. ಆದ್ದರಿಂದಲೇ “ಮಾಡದವರ ಪಾಪ ಆಡಿದವರ ಬಾಯಲ್ಲಿ” ಎಂಬ ಗಾದೆಮಾತು ರೂಢಿಯಲ್ಲಿದೆ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ
ಚೆನ್ನಾಗಿದೆ
ಚೆನ್ನಾಗಿದೆ
ಧನ್ಯವಾದಗಳು ಆಶಾ ಮೇಡಂ
ಧನ್ಯವಾದಗಳು ನಯನಮೇಡಂ
ಮಾಡಿದವರ ಪಾಪ ಆಡುವವರ ಬಾಯಲ್ಲಿ – ಗಾದೆಗೆ ಪೂರಕವಾದ ಸೊಗಸಾದ ಕಥೆ ಉತ್ತಮ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದೆ.
ಧನ್ಯವಾದಗಳು ಪದ್ಮಾ ಮೇಡಂ
ಕಥೆಯೊಂದಕ್ಕೆ ಸಾಂದರ್ಭಿಕವಾಗಿ ಹುಟ್ಟಿಕೊಂಡ ಗಾದೆಮಾತು ಬಹಳ ಅರ್ಥಪೂರ್ಣ. ಎಂದಿನಂತೆ, ಸಂದೇಶಯುಕ್ತ ಕಥೆಗೆ ಪೂರಕವಾಗಿ ಮೂಡಿಬಂದ ಚಿತ್ರವು ಕಥೆಯ ಸತ್ವವನ್ನು ಹೆಚ್ಚಿಸಿದೆ…ಧನ್ಯವಾದಗಳು ನಾಗರತ್ನ ಮೇಡಂ.
ಓದಿ ಪ್ರತಿಕ್ರಿಯೆ ನೀಡಿದ ನಿಮಗೂ ಧನ್ಯವಾದಗಳು ಶಂಕರಿ ಮೇಡಂ
ಕಥೆ ತುಂಬಾ ಇಷ್ಟವಾಯ್ತು ನಾಗರತ್ನ.
ಹೃತ್ಪೂರ್ವಕವಾದ ಧನ್ಯವಾದಗಳು ಮೇಡಂ