ಅನರ್ಘ್ಯ ಮುತ್ತು – ಡಾ. ಮುತ್ತುಲಕ್ಷ್ಮಿರೆಡ್ಡಿ
ಅನೇಕ ಮಹಿಳಾ ರತ್ನಗಳು ಭಾರತಾಂಬೆಯ ಮಡಿಲಲ್ಲಿ ಉದಯಿಸಿವೆ. ಇವರೆಲ್ಲಾ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗಳನ್ನು ಮಾಡಿದ್ದಾರೆ. ಡಾ. ಮುತ್ತುಲಕ್ಷ್ಮಿರೆಡ್ಡಿಯವರು ಇಂತಹ ಒಂದು ಅಪರೂಪದ ಮುತ್ತು.
ಜನನ ಮತ್ತು ಬಾಲ್ಯ
ಮುತ್ತುಲಕ್ಷ್ಮಿಯವರ ಜನನ ತಮಿಳುನಾಡಿನ ಪುದುಕೋಟೈನಲ್ಲಿ ಜುಲೈ 30, 1886 ರಲ್ಲಾಯಿತು. ತಂದೆ ನಾರಾಯಣಸ್ವಾಮಿ ಅಯ್ಯರ್. ತಾಯಿ ಚಂದ್ರಮ್ಮಾಳ್. ತಾಯಿ ದೇವದಾಸಿ ಮನೆತನಕ್ಕೆ ಸೇರಿದವರು. ನಾರಾಯಣಸ್ವಾಮಿ ಅಯ್ಯರ್ ಪುದುಕೋಟೈನಲ್ಲಿದ್ದ ಎಚ್.ಎಸ್. ರಾಜ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ವಿದ್ಯಾವಂತ ಮತ್ತು ಸಂಕುಚಿತ ಭಾವನೆಗಳಿರದ ತಂದೆಯವರು ಮುತ್ತುಲಕ್ಷ್ಮಿಗೆ ವರದಾನವೇ ಆಗಿದ್ದರು. ಮಗಳನ್ನು ಬಹಳವಾಗಿ ಪ್ರೀತಿಸುತ್ತಿದ್ದ ತಂದೆ ಮುತ್ತುಲಕ್ಷ್ಮಿಯ ವಿದ್ಯಾಭ್ಯಾಸಕ್ಕೆ ಬಹಳ ಇಂಬುಕೊಟ್ಟರು. ಮುತ್ತುಲಕ್ಷ್ಮಿಗೆ 4 ವರ್ಷಗಳಾದಾಗ ಶಾಲೆಗೆ ಕಳುಹಿಸಿದರು. ಸ್ವಲ್ಪ ವರ್ಷಗಳ ನಂತರ ಕೈ ಹಲಗೆ ಹಿಡಿದು ನೆಲ್ಲುಮಂಡಿ ಶಾಲೆಗೆ ಹೋಗುತ್ತಿದ್ದರು ಮುತ್ತುಲಕ್ಷ್ಮಿ. ದಾರಿಯಲ್ಲಿ ನಿಂತ ಹುಡುಗರು ದೇವದಾಸಿ ಮಗಳೆಂದು ಹಾಸ್ಯ ಮಾಡುತ್ತಿದ್ದರು. ಇದನ್ನು ತಪ್ಪಿಸಲು ಸಂದಿಗೊಂದಿಗಳಲ್ಲಿ ನಡೆಯುತ್ತಿದ್ದಳು ಈ ಪುಟ್ಟ ಹುಡುಗಿ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಮುತ್ತುಲಕ್ಷ್ಮಿ ಶಾಲೆಯ ಮುಖ್ಯೋಪಾಧ್ಯಾಯರಿಗೂ ಅಚ್ಚುಮೆಚ್ಚು. ಅವರು ಚಂದ್ರಮ್ಮನ ಹತ್ತಿರ ಮಗಳನ್ನು ಶಾಲೆಗೆ ಕಳುಹಿಸಲೇಬೇಕೆಂದು ಒತ್ತಾಯ ಮಾಡುತ್ತಿದ್ದರು. ಸ್ವತಃ ತಾವೇ ಪಾಠವನ್ನೂ ಹೇಳುತ್ತಿದ್ದರು.
ವಿದ್ಯಾಭ್ಯಾಸ
ಅಂದಿನ ಕಾಲದಲ್ಲಿ ಮೆಟ್ರಿಕ್ಯುಲೇಷನ್ ಅಂದರೆ ಈಗಿನ ಎಸ್‌ಎಸ್‌ಎಲ್‌ಸಿ ಸಮಾನ ಪರೀಕ್ಷೆಯಾಗಿತ್ತು. 1902 ರಲ್ಲಿ ನೂರು ಜನ ವಿದ್ಯಾರ್ಥಿಗಳು ಪುದುಕೋಟೈನಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಬರೆದರು. ಕೇವಲ ಹತ್ತು ಜನ ಪಾಸಾಗಿದ್ದರು. ಇವರಲ್ಲಿ ಮುತ್ತುಲಕ್ಷ್ಮಿ ಒಬ್ಬಳೇ ವಿದ್ಯಾರ್ಥಿನಿಯಾಗಿದ್ದು, ಎಲ್ಲರಿಗಿಂತ ಹೆಚ್ಚು ಅಂಕ ಪಡೆದಿದ್ದಳು. ತಂದೆಯವರಿಗೆ ಬಹಳ ಸಂತೋಷವಾಯಿತು. ಮುಂದೆ ಓದಿಸಲು ತಯಾರಾದರು ರಾಮಸ್ವಾಮಿ. ಪುದುಕೋಟೈನಲ್ಲಿದ್ದ ಬಾಲಕರ ಕಾಲೇಜಿಗೆ ಅವಳು ಸೇರಬೇಕಿತ್ತು. ಅಂದಿನ ಸಮಾಜದಲ್ಲಿ ಯಾರಿಗೂ ಇದು ಇಷ್ಟವಿರಲಿಲ್ಲ. ಆದರೂ ಅಂದಿನ ಮಹಾರಾಜ ರಾಜಾಭೈರವ ತೊಂಡೈಮಾನ್ ಅವರ ಶಿಫಾರಸ್ಸಿನಿಂದ ಇದು ಸಾಧ್ಯವಾಯಿತು. ಮೂರು ತಿಂಗಳ ಕಾಲ ಮುತ್ತುಲಕ್ಷ್ಮಿಯ ನಡತೆಯನ್ನು ಗಮನಿಸುವುದಾಗಿ ಹೇಳಿ ಸೇರಿಸಿಕೊಳ್ಳಲಾಯಿತು. ತರಗತಿಯಲ್ಲಿ ಒಂದು ತೆರೆಯನ್ನು ಹಾಕಿ ಕೇವಲ ಅಧ್ಯಾಪಕರಿಗೆ ಕಾಣುವಂತೆ ಅವರನ್ನು ಕೂರಿಸಲಾಯಿತು. ಸಂಜೆ ಮುತ್ತುಲಕ್ಷ್ಮಿ ಕಾಲೇಜಿನಿಂದ ಹೊರಗೆ ಹೋದ ಮೇಲೆ ಗಂಟೆ ಬಾರಿಸಿ ಹುಡುಗರನ್ನು ಆಚೆ ಬಿಡುತ್ತಿದ್ದರು.
ಮುತ್ತುಲಕ್ಷ್ಮಿಗೆ ಪುದುಕೋಟೈಯಿಂದ ಇನ್ನೂ ದೊಡ್ಡ ನಗರಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಬೇಕು ಮತ್ತು ವೈದ್ಯ ವಿಜ್ಞಾನವನ್ನು ಓದಬೇಕೆಂಬ ಹಂಬಲ ಉಂಟಾಯಿತು. ಅವರ ತಂದೆ ಮದರಾಸಿಗೆ ಹೋಗುವುದೆಂದು ನಿಶ್ಚಯಿಸಿದರೂ ತಾಯಿಗೆ ಅವಳು ಹೋಗುವುದು ಇಷ್ಟವಿರಲಿಲ್ಲ. ಮಗಳಿಗೆ ಮದುವೆ ಮಾಡಬೇಕೆಂದು ಒತ್ತಾಯಿಸುತ್ತಿದ್ದರು. ತಂದೆ ಮತ್ತು ಮಗಳು 1907 ರಲ್ಲಿ ಮದರಾಸಿಗೆ ಬಂದರು. ಮುತ್ತುಲಕ್ಷ್ಮಿಗೆ ವೈದ್ಯೆ ಆಗಬೇಕೆಂಬ ಮಹದಾಸೆ ಇತ್ತು. ಮದರಾಸಿನ ವೈದ್ಯಕೀಯ ಕಾಲೇಜಿಗೆ 1907ರಲ್ಲಿ ಸೇರಿದರು. ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಏಳು ಚಿನ್ನದ ಪದಕಗಳು ಮತ್ತು ಹಲವಾರು ಬಹುಮಾನಗಳು ಇವರ ಮುಡಿಗೇರಿತು. 1912ರಲ್ಲಿ ವೈದ್ಯೆ ಆದರು. ಭಾರತದ ಕೆಲವೇ ಪ್ರಥಮ ಮಹಿಳಾ ವೈದ್ಯರಲ್ಲಿ ಒಬ್ಬರಾದರು ಮುತ್ತುಲಕ್ಷ್ಮಿ.
ಡಾ. ಮುತ್ತುಲಕ್ಷ್ಮಿ ಅವರ ಮೇಲೆ ಪ್ರಭಾವ ಬೀರಿದವರಲ್ಲಿ ಆ್ಯನಿಬೆಸೆಂಟ್ ಮತ್ತು ಮಹಾತ್ಮ ಗಾಂಧೀಜಿ ಮುಖ್ಯರಾಗುತ್ತಾರೆ. ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ವಿಶೇಷವಾಗಿ ಮಹಿಳೆಯರು ಮತ್ತು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಕಾಲೇಜಿನಲ್ಲಿದ್ದಾಗಲೇ ಸರೋಜಿನಿ ನಾಯ್ಡು ಅವರನ್ನು ಭೇಟಿಯಾಗುತ್ತಾರೆ.
ವಿವಾಹ
ಡಾ. ಸುಂದರಂ ರೆಡ್ಡಿ ಎನ್ನುವವರು ಮುತ್ತುಲಕ್ಷ್ಮಿಯನ್ನು ಮದುವೆಯಾದರು. ಇವರು ಮೊದಲ ಭಾರತೀಯ ಎಫ್ ಆರ್ ಸಿ ಎಸ್ ಆಗಿದ್ದರು. ತನ್ನನ್ನು ಸಮಾನಳೆಂದು ಗೌರವಿಸಬೇಕೆಂದು ರೆಡ್ಡಿಯವರಿಗೆ ಮುತ್ತುಲಕ್ಷ್ಮಿ ಷರತ್ತು ಹಾಕಿದ್ದರು. ಬ್ರಹ್ಮ ಸಮಾಜದ ರೀತಿಯಲ್ಲಿ ಮದುವೆ ನಡೆಯಿತು. ಇಬ್ಬರೂ ವೈದ್ಯರು. ನಿಸ್ಪೃಹಸೇವೆ ಶುರುವಾಯಿತು. ಮಕ್ಕಳೂ ಆದವು. ಸಂಸಾರದ ಏಳುಬೀಳುಗಳೂ ಇದ್ದವು. ಇದೆಲ್ಲದರ ನಡುವೆಯೂ ಮುತ್ತುಲಕ್ಷ್ಮಿ ತನ್ನ ಸೇವಾಧರ್ಮವನ್ನು ಬಿಡಲಿಲ್ಲ.
ಸಮಾಜ ಸೇವೆ ಮತ್ತು ಇತರ ಚಟುವಟಿಕೆಗಳು
ಥಿಯಾಸಾಫಿಕಲ್ ಸೊಸೈಟಿ ಪ್ರಾರಂಭಿಸಿದ ಡಬ್ಲ್ಯೂಐಎ (ವುಮೆನ್ಸ್ ಇಂಡಿಯನ್ ಅಸೋಸಿಯೇಷನ್) ನಲ್ಲಿ ಮೊದಲ ಭಾರತೀಯ ಮಹಿಳಾ ಸದಸ್ಯೆಯಾಗಿ ಮುತ್ತುಲಕ್ಷ್ಮಿ ಕೆಲಸ ಮಾಡಿದರು ಮತ್ತು ಅದರ ಪತ್ರಿಕೆಯ ಸ್ತ್ರೀ ಧರ್ಮದ ಸಂಪಾದಕಿಯಾಗಿ ಕೆಲಸ ಮಾಡಿದರು.
ಮುತ್ತುಲಕ್ಷ್ಮಿಯವರು ಲಂಡನ್ನಿಗೆ ಉನ್ನತ ಶಿಕ್ಷಣಕ್ಕೆ ಹೋದರು. ಆದರೆ ಪುನಃ ತಾಯ್ನಾಡಿಗೆ ಮರಳಿ ಮದ್ರಾಸ್ ಲೆಜಿಸ್ಲೇಟಿವ್ ಕೌನ್ಸಿಲ್‌ಗೆ ಆಯ್ಕೆಯಾದರು (1926). ಇಲ್ಲಿಯ ತಮ್ಮ ಅನುಭವಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ವೇಶ್ಯಾವಾಟಿಕೆ ಮತ್ತು ಅನೈತಿಕವಾಗಿ ಮಹಿಳೆಯರ ಸಾಗಾಣಿಕೆಯ ನಿರ್ಮೂಲನೆಯ ಬಗ್ಗೆ 1926 ರಲ್ಲಿ ಗೊತ್ತುವಳಿಯನ್ನು ಪಾಸ್ ಮಾಡಿಸಿ ‘ರೋಷಿನಿ’ ಎನ್ನುವ ಎಐಡಬ್ಲ್ಯೂಸಿಯ ಮ್ಯಾಗಜೈನಿನ ಸಂಪಾದಕಿಯಾಗಿದ್ದರು.
ಮದ್ರಾಸಿನಲ್ಲಿ ‘ಅವೈ ಹೋಮ್’ವನ್ನು ಪ್ರಾರಂಭ ಮಾಡಿದರು. ಅಡ್ಯಾರ್‌ನಲ್ಲಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಅನ್ನು ಸ್ಥಾಪಿಸಿದರು. ಮುತ್ತುಲಕ್ಷ್ಮಿ ಅವರು ಮಹಿಳೆಯರ ಪರಿವರ್ತನೆಯನ್ನು ಸಮಾಜದಲ್ಲಿ ತರಲು ಬಯಸಿದ್ದರು. ಆದ್ದರಿಂದ ಮಹಿಳೆಯರ ಏಳಿಗೆಗಾಗಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ.
ಹಲವಾರು ವಿಷಯಗಳಲ್ಲಿ ಡಾ. ಮುತ್ತುಲಕ್ಷ್ಮಿ ಅವರು ಮೊದಲ ಸಾಧಕಿ ಎನಿಸಿಕೊಂಡಿದ್ದಾರೆ.
1) ಗಂಡು ಹುಡುಗರ ಕಾಲೇಜಿಗೆ ಮೊದಲನೆಯವರಾಗಿ ಸೇರಿದ್ದು
2) ಮೊದಲನೇ ಮಹಿಳಾ ಹೌಸ್ ಸರ್ಜನ್, ಗೌರ‍್ನಮೆಂಟ್ ಮೆಟರ್ನಿಟಿ ಮತ್ತು ಆಪ್ಥಾಮಿಕ್ ಆಸ್ಪತ್ರೆ
3) ಬ್ರಿಟಿಷ್ ಭಾರತದಲ್ಲಿ ಮೊದಲನೆಯ ಮಹಿಳಾ ಶಾಸಕಿ (1926)
4) ಮೊದಲನೆಯ ಚೇರ್ ಪರ್ಸನ್, ರಾಜ್ಯ ಸಾಮಾಜಿಕ ಕಲ್ಯಾಣ ಸಲಹಾ ಸಮಿತಿ
5) ವಿಧಾನಸಭೆಯಲ್ಲಿ ಮೊದಲನೆಯ ಮಹಿಳಾ ಡೆಪ್ಯೂಟಿ ಪ್ರೆಸಿಡೆಂಟ್
6) ಮೊದಲನೆಯ ಮಹಿಳಾ ಪಾಲಿಕೆ ಸದಸ್ಯರು, ಮದ್ರಾಸ್ ನಗರಪಾಲಿಕೆ
7) ಅವೈ ಹೋಂ 1931ರಲ್ಲಿ ಸ್ಥಾಪನೆ
8) ಅಡ್ಯಾರ್‌ನಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ. ಈಗಲೂ ಚಿಕಿತ್ಸೆ ಮತ್ತು ಸಂಶೋಧನೆ ಇಲ್ಲಿ ನಡೆಯುತ್ತಿದೆ.
ಡಾ. ಮುತ್ತುಲಕ್ಷ್ಮಿಯವರು 80 ವಯಸ್ಸಾದಾಗಲೂ ಚೈತನ್ಯದಿಂದ ಪ್ರಶಸ್ತಿಗಳು ಇದ್ದು, ಹಲವಾರು ಪ್ರಶಸ್ತಿಗಳು ಇವರನ್ನು ಅಲಂಕರಿಸಿವೆ.
ಪದ್ಮಭೂಷಣ ಪ್ರಶಸ್ತಿಯನ್ನು ಸರ್ಕಾರ 1956ರಲ್ಲಿ ಮುತ್ತುಲಕ್ಷ್ಮಿಯವರಿಗೆ ನೀಡಿತು.
ಗೂಗಲ್ ಸಂಸ್ಥೆ 30 ಜುಲೈ 2019ರಲ್ಲಿ ಡೂಡಲ್ ಹಾಕಿ ಇವರ 133ನೇ ಹುಟ್ಟುಹಬ್ಬವನ್ನು ಕೊಂಡಾಡಿತು.
ಡಾ. ಮುತ್ತುಲಕ್ಷ್ಮಿ ರೆಡ್ಡಿಯಂಥವರ ಸಂತತಿ ಸಾವಿರವಾಗಲಿ.
ಆಕರಗಳು :
- Muttulakshmi Reddy A trail blazer in Surgery and Women’s Rights – V.R. Devika (2022)
- Wikipedia
ಡಾ. ಎಸ್. ಸುಧಾ, ಮೈಸೂರು
ಧನ್ಯವಾದಗಳು ಹೇಮಾಮಲಾ. ಮಹಿಳಾ ದಿನಾಚರಣೆಯ ಅಂಗವಾಗಿ ಡಾ ಮುತುಲಕ್ಷ್ಮಿ ರೆಡ್ಡಿ ಯವರ ಲೇಖನ ಮೂಡಿಬಂದಿದೆ. ಈ ಲೇಖನ ಎಲ್ಲ ಮಹಿಳೆಯರಿಗೂ ಸ್ಫೂರ್ತಿ ನೀಡಲಿ ಎನ್ನುವುದೇ ನನ್ನಾಸೆ.
ಬಹಳಷ್ಟು ಸಾಧನೆಗಳನ್ನು ಮಾಡಿರುವ ಮುತ್ತಿನಂತಹ ವ್ಯಕ್ತಿತ್ವದ ಮುದ್ದುಲಕ್ಷ್ಮಿ. ಪರಿಚಯಿಸುದ ಸುಧಾರಿಗೆ ಅಭಿನಂದನೆಗಳು
ವಂದನೆಗಳು ನಿರ್ಮಲಾ. ನಾನು ಧನ್ಯಳು.
Sudha, very good presentation of great lady and her achievements. My best compliments to you
ಥ್ಯಾಂಕ್ಸ್ ಗೀತಾ. ಪ್ರೋತ್ಸಾಹಕ್ಕೆ ಧನ್ಯವಾದಗಳು.
ಬಹಳ ಸುಂದರವಾದ ಲೇಖನ.ಅಪ್ರತಿಮ ಮಹಿಳಾ ಸಾಧಕಿಯ ಜೀವನ ಚಿತ್ರಣ ಸೊಗಸಾಗಿ ಮೂಡಿಬಂದಿದೆ ಮೇಡಮ್.ನಿಮ್ಮ ಲೇಖನಿಯಿಂದ ಇಂತಹ ಇನ್ನಷ್ಟು ಲೇಖನಗಳು ಹರಿದುಬರಲಿ.ಶುಭ ಹಾರೈಕೆಗಳು
ವರಲಕ್ಷ್ಮಿ ಪ್ರೋತ್ಸಾಹ ಕ್ಕೆ ಧನ್ಯವಾದಗಳು
ಬಹಳ ಸುಂದರವಾದ ಲೇಖನ.ಅಪ್ರತಿಮ ಮಹಿಳಾ ಸಾಧಕಿಯ ಜೀವನ ಚಿತ್ರಣ ಸೊಗಸಾಗಿ ಮೂಡಿಬಂದಿದೆ ಮೇಡಮ್.ನಿಮ್ಮ ಲೇಖನಿಯಿಂದ ಇಂತಹ ಇನ್ನಷ್ಟು ಲೇಖನಗಳು ಹರಿದುಬರಲಿ.ಶುಭ ಹಾರೈಕೆಗಳು
ಮುತ್ತುಲಕ್ಷ್ಮಿಯ ಪರಿಚಯಾತ್ಮಕ ಲೇಖನ ಚೆನ್ನಾಗಿ ಪಡಿಮೂಡಿಸಿದ್ದೀರಾ ಸುಧಾ ಮೇಡಂ.. ಧನ್ಯವಾದಗಳು
ನಾಗರತ್ನ ಪ್ರಶಂಸೆ ಗೆ ವಂದನೆಗಳು
ಸ್ತ್ರೀಯರಿಗೆ ಎಲ್ಲದರಲ್ಲೂ ಪ್ರತಿಬಂಧನೆ ಇದ್ದ ಕಾಲದಲ್ಲಿ ಇಷ್ಟೆಲ್ಲಾ ಸಾಧನೆಗಳನ್ನು ಮಾಡುವ ಧೀಶಕ್ತಿಯನ್ನು ಹೊಂದಿದ್ದ ಮುತ್ತುಲಕ್ಶ್ಮಿಯವರ ಅಪರೂಪದ ಜೀವನಗಾಥೆಯನ್ನು ಪ್ರಸ್ತುತಪಡಿಸಿದ ಲೇಖನವು ಅಮೂಲ್ಯವೆನಿಸಿದೆ…ಧನ್ಯವಾದಗಳು ಮೇಡಂ.
ಶಂಕರಿಯವರೇ ಧನ್ಯವಾದಗಳು. ಇಂತಹ ಹಲವಾರು ರತ್ನಗಳಿವೆ.
ಮಾಹಿತಿ ಪೂರ್ಣ ಲೇಖನ
ವಿ ಆರ್ ದೇವಿಕಾ ಮುತ್ತು ಲಕ್ಷ್ಮಿಯ ಬಗ್ಗೆ ಪುಸ್ತಕ ಬರೆದಿದ್ದಾರೆ. ಮೈಸೂರ್ ನಲ್ಲಿ ನಾನೇ ಅದನ್ನು ಬಿಡುಗಡೆ ಮಾಡಿದೆ. ಧನ್ಯವಾದಗಳು ನಯನ
ನಿಜಕ್ಕೂ ಡಾ.ಮುತ್ತುಲಕ್ಷ್ಮಿ ರೆಡ್ಡಿ, ಭಾರತೀಯರು, ಮಹಿಳೆ ಎಂಬುದು ಹೆಮ್ಮೆಯ ಸಂಗತಿ. ಮಾಹಿತಿ ಭರಿತ ಲೇಖನ.
ಧನ್ಯವಾದಗಳು ಪದ್ಮ. ಎಲ್ಲ ಭಾರತೀಯ ಮಹಿಳೆಯರು ಹೆಮ್ಮೆ ಪಡಬೇಕು.