ಕಾದಂಬರಿ : ತಾಯಿ – ಪುಟ 17
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಒಂದು ವಾರ ಕಳೆಯಿತು. ವೃದ್ಧಾಶ್ರಮದಲ್ಲಿದ್ದ ಮೂವರಿಗೆ ಗೋಡೌನ್‌ನಲ್ಲಿ ಪ್ಯಾಕಿಂಗ್ ಕೆಲಸ ಸಿಕ್ಕಿತು. ಉಳಿದವರಲ್ಲಿ ಕೆಲಸದ ಭೇಟೆಯಲ್ಲಿದ್ದರು.
ಆ ತಿಂಗಳು ಉರುಳಿತು. ಒಂದು ಭಾನುವಾರ ಮಧ್ಯಾಹ್ನ ಊಟದ ವೇಳೆಯಲ್ಲಿ ಭವಾನಿ ಹೇಳಿದರು. “ಯಾರೋ ದಂಪತಿಗಳು ನಿಮ್ಮನ್ನು ಹುಡುಕಿಕೊಂಡು ಬಂದಿದ್ದಾರೆ ರಾಜಮ್ಮ.”
“ಊಟ ಮಾಡಿಲ್ಲದಿದ್ದರೆ ಊಟಕ್ಕೆಬ್ಬಿಸಿ. ನಾನು ಆಮೇಲೆ ಮೀಟ್ ಮಾಡ್ತೀನಿ.”
ಗೌರಮ್ಮ ಅವರಿಬ್ಬರಿಗೆ ಬಡಿಸಿದರು.
“ನಾವು ವೃದ್ಧಾಶ್ರಮ ನೋಡಬಹುದಾ?” ಊಟದ ನಂತರ ಅವರು ಕೇಳಿದರು. ಸೌಭಾಗ್ಯ ಕರೆದುಕೊಂಡು ಹೋಗಿ ತೋರಿಸಿದರು. ಗೌರಮ್ಮ ರಾಜಲಕ್ಷ್ಮಿಯ ಬಳಿ ಬಂದು ಹೇಳಿದರು. “ಬಂದಿರುವವರು ನಿಮ್ಮ ಮಗ ಸೊಸೆ ಅಮ್ಮಾ.”
“ಗೊತ್ತು. ಅವರು ಊಟ ಮಾಡುವಾಗ ಬಂದು ನೋಡಿದೆ. ಅವರು ನನ್ನನ್ನು ಗಮನಿಸಲಿಲ್ಲ.”
“ಅವರನ್ನು ನಿಮ್ಮ ರೂಂಗೇ ಕಳಿಸಲಾ?”
“ಹಾಗೆ ಮಾಡಿ ಗೌರಮ್ಮ.”
ರಾಜಲಕ್ಷ್ಮಿ ತಮ್ಮ ಕೋಣೆಗೆ 2 ಕುರ್ಚಿ ತರಿಸಿ ಹಾಕಿಸಿ ತಾವು ಸೋಫಾದಲ್ಲಿ ಕುಳಿತರು.
ರಾಹುಲ್, ಅವನ ಹೆಂಡತಿ ಒಳಗೆ ಬಂದರು.
“ಕೂತ್ಕೊಳ್ಳಿ.”
“ನಿನಗೆ ಮಗ-ಸೊಸೆ ಇರುವುದು ಮರೆತುಹೋಗಿದೆಯಾ ಅಮ್ಮ?”
“ನೀನೇ ತಾನೆ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದು? ನಿನ್ನನ್ನು ಮರೆಯಲು ಸಾಧ್ಯಾನಾ?”
“ನನಗೆ ಹೊರಗೆ ಹಾಕಲು ಕಾರಣವಿತ್ತು.”
“ನನ್ನನ್ನು ಹೊರಗೆ ಹಾಕಿ ಅತ್ತೆ-ಮಾವನ್ನ ಜೊತೆಯಲ್ಲಿಟ್ಟುಕೊಳ್ಳಲು ಏನು ಕಾರಣವಿತ್ತು?”
“ಅಮ್ಮ ವಾದ ಮಾಡಬೇಡ. ರಜನಿ-ಭರತ್ ನಿನಗೆ ಹಣ ಕೊಟ್ಟ ವಿಚಾರ ನನಗೆ ಯಾಕೆ ಹೇಳಲಿಲ್ಲ?”
“ಅವರು ನನ್ನ ಮಗಳು-ಅಳಿಯ. ನಿನಗೆ ಸಂಬಂಧವಿಲ್ಲದವರು.”
“ಯಾಕೆ ಹೀಗಂತೀಯ?”
“ನೀನು ನಿನ್ನ ಹೆಂಡತಿ ನಿಮ್ಮತ್ತೆ ಮಾವಂಗೆ ಏನು ಸಹಾಯ ಮಾಡ್ತಿದ್ದೀರಿ, ಅವರು ನಿಮಗೆ ಏನು ಕೊಟ್ಟಿದ್ದಾರೇಂತ ನಾನು ನಿಮ್ಮನ್ನು ಕೇಳಿದ್ದೀನಾ? ನನ್ನ ಅಳಿಯಾ-ಮಗಳ ವಿಚಾರ ನಾನು ಯಾಕೆ ನಿನಗೆ ಹೇಳಬೇಕು?”
“ಅಮ್ಮಾ, ನನಗೆ ಹೇಳದೆ ನಂಜನಗೂಡಿನ ಮನೆ ಯಾಕೆ ಮಾರಿದೆ?”
“ಒಂಟಿಕೊಪ್ಪಲ್ ಮನೆ ಮಾರುವಾಗ ನೀನು ನನಗೆ ಹೇಳಿದ್ದೆಯಾ?”
“ಅಮ್ಮಾ….”
“ನೀನು ಏನೂ ಹೇಳಲಿಲ್ಲ. ಆದರೆ ನಾನು ಹೇಳ್ತಿನಿ ಕೇಳು. ರಜನಿ ನನಗೆ 11/2ಕೋಟಿ ಗಿಫ್ಟ್ ಕೊಟ್ಟಳು. ಅದು ಮನೆ ಮಾರಿದ ಹಣ ಸೇರಿಸಿ ವೃದ್ಧಾಶ್ರಮ ಶುರುಮಾಡಿದೆ. ಯಾಕೇಂದ್ರೆ ಇತ್ತೀಚೆಗೆ ಹೆತ್ತ ಅಪ್ಪ-ಅಮ್ಮನ್ನ ಹೊರಗೆ ಹಾಕುವ ಮಕ್ಕಳು ಹೆಚ್ಚಾಗುತ್ತಿದ್ದಾರೆ. ಗತಿಯಿಲ್ಲದ ಅಮ್ಮಂದಿರಿಗೆ ಆಶ್ರಯ ಕೊಡೋಣಾಂತ ಈ ವೃದ್ಧಾಶ್ರಮ ತೆಗೆದೆ.”
“ಈ ವೃದ್ಧಾಶ್ರಮ ತೆಗೆಯುವ ಬದಲು ಒಂದು ಸ್ಕೂಲು ತೆಗೆದಿದ್ರೂ ಹಣ ಮಾಡಬಹುದಿತ್ತು” ಮೈತ್ರಿ ಹೇಳಿದಳು.
“ನನಗೆ ಲಾಭ ತರುವ ಸಂಸ್ಥೆ ಬೇಡ.”
“ಆದರೆ ಇದರಿಂದ ನಮಗೇನು ಲಾಭವಾಯ್ತು?” ರಾಹುಲ್ ಕೇಳಿದ.
ರಾಜಲಕ್ಷ್ಮಿ ನಗುತ್ತಾ ಹೇಳಿದರು. “ರಾಹುಲ್, ನೀನು ನಮ್ಮ ಹತ್ತಿರ ಬೆಳೆದವನು. ಚಿಕ್ಕವಯಸ್ಸಿನಲ್ಲಿ ಅಜ್ಜಿ-ತಾತನ ಪ್ರೀತಿ ಸವಿದವನು. ನಿನ್ನ ತಂದೆ ನಿನ್ನನ್ನು ಹೆಗಲಮೇಲೆ ಕೂಡಿಸಿಕೊಂಡು ಹಳ್ಳಿಯ ಸಂತೆಗೆ ರ‍್ಕೊಂಡು ಹೋಗ್ತಿದ್ರು. ನಿನಗೆ ನಾನು ಚಂದ್ರನ್ನ ತೋರಿಸಿ ಊಟ ಮಾಡಿಸ್ತಿದ್ದೆ.”
“ಈಗ ಅದೆಲ್ಲಾ ಯಾಕಮ್ಮಾ?”
“ನಮ್ಮಂತಹ ಅಪ್ಪ-ಅಮ್ಮನ ಹತ್ತಿರ ಬೆಳೆದ ನೀನೇ ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಿದೆ. ನಿನ್ನಂತಹವರ ಕೈಯಲ್ಲಿ ಬೆಳೆದ ನಿನ್ನನ್ನು ನಿನ್ನ ಮಕ್ಕಳು ಇಟ್ಟುಕೊಳ್ತಾರಾ? ನಾನು ಯಾರಿಗೇ ಈ ವೃದ್ಧಾಶ್ರಮ ಬರೆದರೂ, ನಿಮ್ಮನ್ನು ಉಚಿತವಾಗಿ ವೃದ್ಧಾಶ್ರಮದಲ್ಲಿ ಇಟ್ಟುಕೊಳ್ಳಬೇಕೂಂತ ವಿಲ್ ಮಾಡ್ತೀನಿ” ರಾಜಲಕ್ಷ್ಮಿ ಶಾಂತವಾಗೇ ಹೇಳಿದರು. ಆದರೆ ಅವರ ಮನಸ್ಸು ಅಳುತ್ತಿತ್ತು.
“ಅಮ್ಮಾ ಇಂತಹ ಮಾತು ನೀವು ಆಡಬಹುದಾ? ನಮಗೆ ಈ ಮಾತುಗಳಿಂದ ನೋವಾಗತ್ತೇಂತ ಗೊತ್ತಿಲ್ವಾ?”
“ಅಂತಹ ನೂರು ನೋವುಗಳನ್ನು ನೀನು ನನಗೆ ಕೊಟ್ಟಿದ್ದೀಯ. ನನಗೆ ತಿಳಿಯದೆ ಮನೆ ಮಾರಿದೆ. ನಿಮ್ಮನೇಲಿ ನಾನಿದ್ರೂ ನಿನ್ನ ಹೆಂಡತಿ, ಮಕ್ಕಳು ನನಗೆ ಅಪರಿಚಿತರಾಗೇ ಉಳಿದರು. ಮಕ್ಕಳು ಅಜ್ಜಿ ಅಂತ ಪ್ರೀತಿಯಿಂದ ಹತ್ತಿರ ಬರಲಿಲ್ಲ. ಬೆಂಗಳೂರಿಗೆ ಹೋಗುವಾಗ ಸುಳ್ಳುಹೇಳಿ ವೃದ್ಧಾಶ್ರಮಕ್ಕೆ ಸೇರಿಸಿದೆ. ಆದರೆ ನಿಮ್ಮತ್ತೆ-ಮಾವನ್ನ ನಿಮ್ಮ ಮನೆಯಲ್ಲಿ ಇಟ್ಟುಕೊಂಡೆ. ರಜಾ ಬಂದಾಗ ಹೆಂಡತಿ, ಮಕ್ಕಳ ಜೊತೆ ದುಬೈ, ಸಿಂಗಪೂರ್, ಯೂರೋಪ್ ಪ್ರವಾಸ ಮಾಡಿದೆ. ನಿನ್ನ ಅಕ್ಕ ಸತ್ತಾಗ ಅವಳನ್ನು ನೋಡಕ್ಕೆ ಹೋಗಲಿಲ್ಲ. ನಿನಗೆ ಅವಳು ಭರತ್ ಕೊಟ್ಟಿರುವ ಹಣ ಬಗ್ಗೆ ಕೇಳಲು, ನನ್ನನ್ನು ಪ್ರಶ್ನಿಸಲು ನಿನಗೆ ಯಾವ ನೈತಿಕ ಹಕ್ಕೂ ಇಲ್ಲ….”
“ಅತ್ತೆ ನಾವು ಚಿಕ್ಕವರು ತಪ್ಪು ಮಾಡಿದ್ದೇವೆ. ನಮ್ಮ ತಪ್ಪಿಗೆ ಕ್ಷಮೆ ಇಲ್ಲವಾ?” ಮೈತ್ರಿ ಕೇಳಿದಳು.
“ನನ್ನ ಒಂದು ಪ್ರಶ್ನೆಗೆ ಉತ್ತರ ಕೊಡ್ತೀರಾ?”
“ಏನಮ್ಮಾ ನಿನ್ನ ಪ್ರಶ್ನೆ?”
“ಒಂದು ವೇಳೆ ನಾನು ಈ ಬಿಲ್ಡಿಂಗ್ ಕೊಂಡುಕೊಂಡು ವೃದ್ಧಾಶ್ರಮ ಶುರುಮಾಡದಿದ್ದರೆ ನೀವು ಬಂದು ಕ್ಷಮೆ ಕೇಳ್ತಿದ್ರಾ/”
ಅವರು ಉತ್ತರಿಸಲಿಲ್ಲ.
“ನಿಮಗೆ ಈಗಲೂ ನಾನು ಬೇಡ. ನನ್ನ ಹಣ ಬೇಕು. ನಿಮ್ಮನ್ನು ಕ್ಷಮಿಸೋದುಂಟಾ? ನಿಮ್ಮ ಪ್ರೀತಿ, ಕಾಳಜಿಗೆ ಥ್ಯಾಂಕ್ಸ್ ಹೊರಡಿ.”
ರಾಹುಲ್-ಮೈತ್ರಿ ಬೇರೆ ದಾರಿ ಕಾಣದೆ ಹೊರಟರು.
ಮಗ-ಸೊಸೆ ಹೊರಟುಹೋದಮೇಲೆ ರಾಜಲಕ್ಷ್ಮಿ ಅಡಿಗೆ ಮನೆಗೆ ಬಂದು ಹೇಳಿದರು. “ಗೌರಮ್ಮ ನನಗೆ ಊಟ ತಂದುಕೊಡಿ.”
ಹೊಟ್ಟೆಯಲ್ಲಿ ಸಂಕಟವಿಟ್ಟುಕೊಂಡು ಮೌನವಾಗಿ ಶಂತವಾಗಿ ಊಟ ಮಾಡುತ್ತಿದ್ದ ರಾಜಲಕ್ಷ್ಮಿಯನ್ನು ನೋಡಿ ಗೌರಮ್ಮನವರ ಕಣ್ಣುಗಳು ತುಂಬಿಬಂದುವು.
ಒಂದು ತಿಂಗಳು ಉರುಳಿತು. ಈ ಅವಧಿಯಲ್ಲಿ ವೃದ್ಧಾಶ್ರಮದಲ್ಲಿ ಕೆಲವು ಬದಲಾವಣೆಗಳಾಗಿದ್ದವು. ಮುಖ್ಯವಾಗಿ ಮೇಲುಗಡೆ ಇದ್ದವರು ತಗ್ಗಿ-ಬಗ್ಗಿ ನಡೆಯುವುದು ಕಲಿತಿದ್ದರು. ಇಬ್ಬರಿಗೆ ದೊಡ್ಡ ಕಾಂಪ್ಲೆಕ್ಸ್ ನಲ್ಲಿ ಬಾಗಿಲು ಸಾರಿಸಿ, ರಂಗೋಲಿ ಹಾಕುವ ಕೆಲಸ ಸಿಕ್ಕಿತ್ತು. ತಿಂಗಳಿಗೆ 10,000 ರೂ. ಸಿಗುವಂತಾಗಿತ್ತು. ಇಬ್ಬರು ಎರಡು ಮನೆಗಳ ಕೆಲಸ ಒಪ್ಪಿಕೊಂಡಿದ್ದರು. ಒಂದಿಬ್ಬರು ಹೂ ಕಟ್ಟಿಕೊಡಲು ಒಪ್ಪಿದ್ದರು.
ರಾಜಲಕ್ಷ್ಮಿ, ಸರಸಮ್ಮ ಬೆಳಗಿನ ಹೊತ್ತು ವಾಕಿಂಗ್ ಹೋಗಲು ಆರಂಭಿಸಿದ್ದರು. ಪ್ರತಿ ಗುರುವಾರ, ಭಜನೆ ನಡೆಯುತ್ತಿತ್ತು. ಗೋದಾಮಣಿ, ನಾಗಮಣಿ ಸೇರಿ ಒಂದು ದೊಡ್ಡ ಟಿ.ವಿ. ತಂದು ವೆರಾಂಡಾದಲ್ಲಿ ಹಾಕಿದರು. ಇದರಿಂದ ಟಿ.ವಿ. ಪ್ರಿಯರಿಗೆ ಖುಷಿಯಾಯಿತು.
ಭಾಸ್ಕರ ಪ್ರತಿ ಭಾನುವಾರ ಬಂದು ಲೆಕ್ಕ ಬರೆಯುತ್ತಿದ್ದ. ಚಿನ್ಮಯಿ ಮ್ಯಾಥಮ್ಯಾಟಿಕ್ಸ್ ಎಂ.ಎಸ್.ಸಿ.ಗೆ ಸೇರಿದ್ದಳು. ಭಾಸ್ಕರ ಅಂಚೆ-ತೆರಚಿನ ಶಿಕ್ಷಣದ ಮೂಲಕ ಎಂ.ಎ.ಗೆ ಕಟ್ಟಿದ್ದ. ಡಾಕ್ಟರ್ ಜಯಲಕ್ಷ್ಮಿ ಅವರ ಪತಿ ಪ್ರತಿವಾರ ಚೆಕಪ್ ಮಾಡುತ್ತಿದ್ದರು. ಔಷಧಿ ಇಂಜೆಕ್ಷನ್‌ಗೆ ಹಣ ತೆಗೆದುಕೊಳ್ಳುತ್ತಿರಲಿಲ್ಲ. ಹೊರಗೆ ಕೆಲಸಕ್ಕೆ ಹೋಗಲಾರದ ಹೆಂಗಸರು ತರಕಾರಿ ಹೆಚ್ಚಲು, ಕಾಯಿ ತುರಿಯಲು ಸಹಾಯ ಮಾಡುತ್ತಿದ್ದರು. ಇದರಿಂದ ಗೌರಮ್ಮನಿಗೆ ಅವರ ಸಹಾಯಕಿಗೆ ತುಂಬಾ ಅನುಕೂಲವಾಗುತ್ತಿತ್ತು.
ಒಂದು ಶನಿವಾರ ಸಾಯಂಕಾಲ ಗೋದಾಮಣಿ ರಾಜಲಕ್ಷ್ಮಿಗೆ ಹೇಳಿದರು.
“ನಾಳೆ ನಾನು ಮಧುಮತಿ, ನಾಗಮಣಿ ಹೊರಗೆ ಹೋಗಿ ರಾತ್ರಿ ಇರ್ತೇವೆ. “
“ಬೆಂಗಳೂರಿಗೆ ಹೋಗ್ತಿದ್ದೀರಾ?”
“ಇಲ್ಲ. ನನ್ನ ಫ್ರೆಂಡ್ ವಸಂತ ಶ್ರೀರಂಗಪಟ್ಟಣದಲ್ಲಿದ್ದಾಳೆ. ಅವಳ ಜೊತೆ ಕರಿಘಟ್ಟಕ್ಕೆ ಹೋಗಿ ಬಂದು ಅವರ ಮನೆಯಲ್ಲೇ ಊಟ ಮಾಡಿ, ರೆಸ್ಟ್ ತೆಗೆದುಕೊಂಡು ಸಾಯಂಕಾಲ ಕೆ.ಆರ್.ಎಸ್.ಗೆ ಹೋಗಿ ಬರೋಣಾಂತಿದ್ದೇವೆ.”
“ಕರಿಘಟ್ಟ ಶ್ರೀರಂಗಪಟ್ಟಣಕ್ಕೆ ಹತ್ತಿರ ಅಲ್ವಾ?”
“ಮೂರು ಕಿ.ಮೀಟರ್. ಬೆಟ್ಟದ ಮೇಲೆ ವೆಂಕಟರಮಣ ಸ್ವಾಮಿ ದೇವಾಲಯವಿದೆ” ಎಂದರು ಗೋದಾಮಣಿ.
“ದೇವಸ್ಥಾನಕ್ಕೆ ಹೋಗಲು ಮೆಟ್ಟಲುಗಳೂ ಇವೆ. ರಸ್ತೆಯೂ ಇದೆ.”
“ಆ ಬೆಟ್ಟದ ಮೇಲೆ ನಿಂತರೆ ತುಂಬಾ ಒಳ್ಳೆಯ ಪ್ರಕೃತಿ ದೃಶ್ಯಗಳನ್ನು ನೋಡಬಹುದು.”
“ಹೋಗಿ ಬನ್ನಿ ಗೋದಾಮಣಿ. ಬೆಳಿಗ್ಗೆ ಎಷ್ಟು ಹೊತ್ತಿಗೆ ಹೊರಡ್ತೀರಾ?”
“ಏಳು ಗಂಟೆಗೆ ಕಾಫಿ ಕುಡಿದು ಹೊರಡ್ತೇವೆ.”
“ಚಿಕ್ಕವಳಿದ್ದಾಗ ನಾನು ಪ್ರತಿ ದಸರಾದಲ್ಲಿ ಕೆ.ಆರ್.ಎಸ್.ಗೆ ಹೋಗ್ತಿದ್ದೆ. ಅಲ್ಲಿ ನಮ್ಮ ದೊಡ್ಡಮ್ಮ ಇದ್ದರು. ಅವರ ಮಕ್ಕಳು ನಮ್ಮ ಓರಿಗೆಯವರು. ಆಗ ಡ್ಯಾಮ್ ಮೇಲೆ ನಡೆದುಕೊಂಡು ಹೋಗಿ ಬೃಂದಾವನ ಗಾರ್ಡನ್ಸ್ ತಲುಪುತ್ತಿದ್ದೆವು. ದೋಣಿಯಲ್ಲಿ ಆ ಕಡೆಗೆ ದಡಕ್ಕೆ ಹೋಗ್ತಿದ್ವಿ” ರಾಜಲಕ್ಷ್ಮಿ ಹೇಳಿದರು.
“ಹೌದಾ?”
“ವಿಜಯದಶಮಿಯ ದಿನ ಪ್ರವಾಸಿಗಳು ಜಂಬೂಸವಾರಿ ನೋಡಿಕೊಂಡು ಕಾರು ಬಸ್ಸುಗಳಲ್ಲಿ ಕೆ.ಆರ್.ಎಸ್.ಗೆ ಬರ್ತಿದ್ರು. ನಾನು ಮನೆ ಮುಂದೆ ಕುಳಿತು ಕಾರು, ಬಸ್ಸುಗಳ ಲೆಕ್ಕ ಹಾಕ್ತಿದ್ವಿ.”
“ಆಗೆಲ್ಲಾ ತುಂಬಾ ಸಿನಿಮಾ ಶೂಟಿಂಗ್ ನಡೆಯುತ್ತಿತ್ತಂತೆ….”
“ಹೌದು ನಾವು ಶೂಟಿಂಗ್ ನೋಡಕ್ಕೆ ಹೋಗ್ತಿದ್ವಿ. ನಾನು ಬಿ.ಸರೋಜಾದೇವಿ, ಮೀನಾಕುಮಾರಿ, ವೈಜಯಂತಿಮಾಲ, ಕಲ್ಪನಾ, ರಾಜೇಶ್-ಮುಂತಾದವರನ್ನು ನೋಡಿದ್ದೆ. ರಾಜಕಪೂರ್ ಒಂದು ತಿಂಗಳು ಅಲ್ಲಿದ್ದು ‘ಮೇರಾನಾಮ್ ಜೋಕರ್’ಗೆ ಒಂದು ಸೀನ್ ಶೂಟಿಂಗ್‌ಮಾಡಿದ್ದರು….”
“ಆ ದಿನಗಳೇ ಚೆನ್ನಾ ಅಲ್ವಾ ರಾಜಮ್ಮ?” ಎಂದರು ಗೌರಮ್ಮ.
“ಹೌದು ಗೌರಮ್ಮ. ಗೋದಾಮಣಿ ನೀವು ಮಲಗಿ ಹೋಗಿ. ಬೆಳಿಗ್ಗೆ ಬೇಗ ಏಳಬೇಕಲ್ಲಾ?”
“ಗೌರಮ್ಮ ಬೆಳಿಗ್ಗೆ ಕಾಫಿ ಕೊಡ್ತೀರಾ?”
“ಬೆಳಿಗ್ಗೆ 6 ಗಂಟೆಗೆ ಕಾಫಿ ಕುಡಿಯದಿದ್ರೆ ನನ್ನ ಕೆಲಸವೇ ಶುರುವಾಗಲ್ಲವಲ್ಲಾ….?”
ಗೌರಮ್ಮ ಅರ್ಧಗಂಟೆಗೊಮ್ಮೆ ಅರ್ಧಕಪ್ ಕಾಫಿ ಬೇಕು ಎನ್ನುತ್ತಿದ್ದರು. ಆ ವಿಚಾರ ಗೊತ್ತಿದ್ದರಿಂದ ಗೋದಾಮಣಿ ನಕ್ಕರು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=42080
-ಸಿ.ಎನ್. ಮುಕ್ತಾ
ಈ ಸಾರಿಯ ಧಾರಾವಾಹಿಯಲ್ಲಿ ರಾಜಲಕ್ಷ್ಮಿ ಯವರ ಅಂತರಂಗದ ಅನಾವರಣ ಹಾಗೂ ವಾಸ್ತವಿಕ ಬದುಕಿ ನ ಕಟು ಸತ್ಯ ಚೆನ್ನಾಗಿ ಮೂಡಿಬರುತ್ತಿದೆ ಮೇಡಂ
Beautiful
ರಾಜಲಕ್ಷ್ಮಿಯವರು ಮಗ ಸೊಸೆಯೊಂದಿಗೆ ನಡೆದುಕೊಂಡ ರೀತಿ ಇಷ್ಟವಾಯಿತು. ಕಷ್ಟಗಳು ಪರಿಹಾರವಾಗುತ್ತಾ ವೃದ್ಧಾಶ್ರಮ ಸ್ಥಿರತೆಯತ್ತ ಸಾಗುತ್ತಿರುವುದು ಸಮಾಧಾನ ತಂದಿತು.
ಅಭಿಪ್ರಾಯ ತಿಳಿಸಿರುವ ಆತ್ಮೀಯ ಗೆಳತಿಯರಿಗೆ ಹಾಗೂ ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಇವರಿಗೂ ಧನ್ಯವಾದಗಳು.
ರಾಜಮ್ಮನವರು ಮಗ ಮತ್ತು ಸೊಸೆಗೆ ಸರಿಯಾಗಿ ಪಾಠ ಕಲಿಸಿದರು….ಖುಷಿಯಾಯಿತು. ಕಥೆಯ ಓಘ ಮನಮುಟ್ಟುವಂತಿದೆ. ಧನ್ಯವಾದಗಳು ಮೇಡಂ.