ಪುನರ್ಜೀವನ.

Share Button

ಅಶೋಕ ಮತ್ತು ಶಾರದಾ ದಂಪತಿಗಳಿಗೆ ತೋಟಗಾರಿಕೆ ಮಾಡುವುದರಲ್ಲಿ ತುಂಬ ಆಸಕ್ತಿ. ಅಶೋಕ ಪೋಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಹತ್ತಾರು ಊರುಗಳಲ್ಲು ಕೆಲಸ ನಿರ್ವಹಿಸಿ ವೈವಿಧ್ಯಮಯ ಅನುಭವಗಳನ್ನು ಪಡೆದಿದ್ದರು ನಿವೃತ್ತರಾಗುವಾಗ ಡಿ.ವೈಎಸ್‌ಪಿ., ಆಗಿದ್ದರು. ವಿಶ್ರಾಂತ ಜೀವನ ಕಳೆಯಲು ಮೈಸೂರನ್ನು ಆರಿಸಿಕೊಂಡಿದ್ದರು. ನಗರದಿಂದ ಸ್ವಲ್ಪ ದೂರದಲ್ಲಿ ಅರ್ಧ ಎಕರೆ ಜಾಗವನ್ನು ಖರೀದಿಸಿದ್ದರು. ಅದರಲ್ಲಿ ವಾಸಕ್ಕೊಂದು ಅನುಕೂಲವಾದ ಮನೆ ಮತ್ತು ಒಂದು ಮೂಲೆಯಲ್ಲಿ ಒಂದು ವಾಚ್‌ಮನ್ ಷೆಡ್ ಕಟ್ಟಿಸಿದ್ದರು ಷೆಡ್ಡೆಂದರೂ ಅಲ್ಲಿ ಕಾವಲಿನವರು ವಾಸ ಮಾಡಲು ಎಲ್ಲ ಅನುಕೂಲಗಳನ್ನೂ ಮಾಡಿದ್ದರು. ಉಳಿದ ಖಾಲಿ ಜಾಗದಲ್ಲಿ ಕೈತೋಟ ಮಾಡಿದ್ದರು. ಹಲವು ಜಾತಿಯ ಹಣ್ಣಿನ ಗಿಡಗಳು, ಹೂವಿನ ಗಿಡಗಳು, ಮಧ್ಯೆ ಮಧ್ಯೆ ತರಕಾರಿ, ಸೊಪ್ಪು ಇತ್ಯಾದಿಗಳನ್ನು ಬೆಳೆದಿದ್ದರು. ಇದರಿಂದ ಬಂದ ಫಲಗಳಲ್ಲಿ ತಮ್ಮ ಉಪಯೋಗಕ್ಕೆ ಸಾಕಾಗುವಷ್ಟನ್ನು ಇಟ್ಟುಕೊಂಡು ಉಳಿದದ್ದನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಕಳುಹಿಸಿ ಕೊಡುತ್ತಿದ್ದರು. ಅವರಿಗಿದ್ದ ಒಬ್ಬಳೇ ಮಗಳು ಭೂಮಿಕಾಳನ್ನು ವಿದ್ಯಾಭ್ಯಾಸದ ನಂತರ ವಿವಾಹ ಮಾಡಿಕೊಟ್ಟಿದ್ದರು. ಅಳಿಯ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿದ್ದರು. ಇಬ್ಬರು ಮೊಮ್ಮಕ್ಕಳೂ ಇದ್ದರು. ವಿಶ್ರಾಂತ ಜೀವನದಲ್ಲಿ ನೆಮ್ಮದಿಯಾಗಿದ್ದ ಕುಟುಂಬ.

ಸುತ್ತಮುತ್ತಲಿನವರ ಸಮಸ್ಯೆಗಳ ಬಗ್ಗೆ ಅವರೇನಾದರೂ ಸಲಹೆ ಕೇಳಿದರೆ ತಮಗೆ ತೋಚಿದಂತೆ ಮಾರ್ಗದರ್ಶನ ಮಾಡುತ್ತಲೂ ಇದ್ದರು. ಹೀಗಾಗಿ ಎಲ್ಲರಿಗೂ ಬೇಕಾದವರಾಗಿದ್ದರು. ಮೊದಲಿನಿಂದಲೂ ರೂಢಿಮಾಡಿಕೊಂಡಿದ್ದಂತೆ ಸರಳವಾಗಿ ಬದುಕುತ್ತಾ ಬಿಡುವಿನ ವೇಳೆಯಲ್ಲಿ ತೋಟಗಾರಿಕೆ ಮಾಡುತ್ತಾ ಕಾಲ ಹಾಕುತ್ತಿದ್ದರು.

ಒಂದು ದಿನ ಸಾಯಂಕಾಲ ದಂಪತಿಗಳಿಬ್ಬರೂ ತೋಟದಲ್ಲಿ ಅಡ್ಡಾಡುತ್ತಾ ಹಿಂದಿನ ದಿನ ಭೂದೇವಿ ನರ್ಸರಿಯಿಂದ ತಂದಿದ್ದ ಹೂ ಮತ್ತು ಹಣ್ಣಿನ ಸಸಿಗಳನ್ನು ಎಲ್ಲೆಲ್ಲಿ ಹಾಕಬೇಕೆಂದು ಮಾಲಿಗೆ ನಿರ್ದೇಶನ ಕೊಡುತ್ತಿದ್ದರು. ಅದೇ ವೇಳೆಗೆ ಯಾರೋ ಗೇಟಿನ ಬಳಿ “ಅಶೋಕಣ್ಣಾ, ಶಾರದಕ್ಕಾ” ಎಂದು ಕೂಗಿದರು. ಅವರಿಬ್ಬರೂ ಧ್ವನಿ ಬಂದತ್ತ ತಿರುಗಿದರು. ಬಂದವರ ಗುರುತು ಹತ್ತಿ “ ಓ ! ಮಾಲತಿ, ಗೋಪೂ ಇದೇನು ಇದ್ದಕ್ಕಿದ್ದಂತೆ ಪ್ರತ್ಯಕ್ಷ. ಬಹಳದಿನಗಳಿಂದ ಇತ್ತ ಬಂದೇ ಇಲ್ಲ. ಫೋನ್ ಕೂಡ ಮಾಡದೇ ಅಮ್ಮ ಮಗ ಹೀಗೆ ದಿಢೀರಂತ?” ಎಂದು ಪ್ರಶ್ನಿಸುತ್ತಲೇ ಅವರನ್ನು ಆತ್ಮೀಯತೆಯಿಂದ ಮನೆಯೊಳಗೆ ಕರೆದುಕೊಂಡು ಹೋದರು. ಒಳಗೆ ಬಂದ ಮಾಲತಿ, ಗೋಪಿಯನ್ನು ಸೋಫಾದಲ್ಲಿ ಕುಳಿತುಕೊಳ್ಳಲು ಹೇಳಿ ತಾವಿಬ್ಬರೂ ಅವರಿಗೆದುರಾಗಿದ್ದ ಖುರ್ಚಿಗಳಲ್ಲಿ ಆಸೀನರಾದರು.

ಹೊರಗಡೆ ಆಡುತ್ತಿದ್ದ ಮಾತುಗಳ ಸದ್ದಿನಿಂದ ಬಂದವರಾರೆಂದು ಅಡುಗೆಮನೆಯಲ್ಲಿದ್ದ ರಾಧಮ್ಮನಿಗೆ ತಿಳಿದು ಹೋಯಿತು. ಅಡುಗೆ ತಯಾರಿಗಾಗಿ ತರಕಾರಿ ತೆಗೆದಿಟ್ಟುಕೊಳ್ಳುತ್ತಿದ್ದ ಅವಳು ಅದನ್ನು ಅಲ್ಲಿಯೇ ಬಿಟ್ಟು ಎರಡು ಪ್ಲೇಟುಗಳಲ್ಲಿ ಅವಲಕ್ಕಿ ಚೂಡ, ಬಾಳೇಹಣ್ಣುಗಳನ್ನು ನೀರಿನ ಲೋಟಗಳೋಂದಿಗೆ ತೆಗೆದುಕೊಂಡು ಹಾಲಿಗೆ ಬಂದರು.

ಹಾಗೆ ಪ್ರವೇಶಿಸಿದ ರಾಧಮ್ಮನನ್ನು ನೋಡಿ ಶಾರದಾರವರು “ವಾ ! ನಾನು ಕೂಗಿ ಹೇಳುವುದರೊಳಗೆ ನೀವೇ ತಂದುಬಿಟ್ಟಿದ್ದೀರಿ, ಕೊಡಿ” ಎಂದರು. ಬಂದವರ ಯೋಗಕ್ಷೇಮವನ್ನು ವಿಚಾರಿಸುತ್ತಾ ರಾಧಮ್ಮ ತಿಂಡಿಯ ಪ್ಲೇಟುಗಳನ್ನು ಅವರ ಮುಂದಿಟ್ಟರು.

ಅವರೆಲ್ಲರ ಆತ್ಮೀಯತೆಯನ್ನು ಕಂಡು ತಾಯಿ ಮಗನಿಗೆ ಹೃದಯ ತುಂಬಿ ಬಂತು. “ಯಾವ ಜನ್ಮದ ಬಂಧುಗಳೋ. ನಿಮ್ಮೆಲ್ಲರ ಋಣ ತೀರಿಸಲು ನಾವಿಬ್ಬರೂ ಎಷ್ಟೋ ಜನ್ಮ ಎತ್ತಿ ಬರಬೇಕು ಎನ್ನಿಸುತ್ತದೆ” ಎಂದು ಭಾವುಕರಾದರು.

“ಸರಿಹೋಯ್ತು ಅದೆಲ್ಲ ಪಕ್ಕಕ್ಕಿರಲಿ ನೀವು ರಾತ್ರಿ ಊಟಕ್ಕೆ ನಿಲ್ಲುತ್ತೀರಲ್ವಾ? ನಾನು ಅಡುಗೆ ತಯಾರಿ ಮಾಡಿಕೊಳ್ಳಬೇಕು ಹೇಳಿ” ಎಂದು ಮಾತನ್ನು ಬದಲಾಯಿಸಿದರು. “ಇಲ್ಲ ರಾಧಮ್ಮ, ಇವತ್ತು ಎಷ್ಟೇ ಹೊತ್ತಾದರೂ ಊರಿಗೆ ಹಿಂದಿರುಗಲೇಬೇಕು.’ ಎಂದು ತಾಯಿ ಮಗ ಒಕ್ಕೊರಲಿನಿಂದ ಎಂದರು.
“ಏನು ಅಂತಹ ಅವಸರ?” ಎಂದು ಅಶೋಕ ಪ್ರಶ್ನಿಸಿದರು.

“ಹೌದು ಅಶೋಕಣ್ಣ, ಅದನ್ನು ಹೇಳಲೆಂದೇ ನಾವು ಬಂದದ್ದು” ಎನ್ನುತ್ತಾ ತಮ್ಮ ಚೀಲದಿಂದ ಎರಡು ಟ್ರೇಗಳನ್ನು ತೆಗೆದು ಟೀಪಾಯಿಯ ಮೇಲಿಟ್ಟರು. ಒಂದರಲ್ಲಿ ಅಕ್ಷತೆಯ ಬಟ್ಟಲನ್ನಿಟ್ಟು ಇನ್ನೊಂದರಲ್ಲಿ ಅರಿಶಿನ, ಕುಂಕುಮ, ಹೂವು, ಎಲೆ ಅಡಿಕೆ ತೆಂಗಿನಕಾಯಿ, ಜೊತೆಗೆ ಒಂದು ಪ್ಯಾಕೆಟ್ಟನ್ನೂ ಇಟ್ಟರು. ಅದೇ ರೀತಿ ಇನ್ನೊದು ತಟ್ಟೆಯಲ್ಲಿ ಇದೇರೀತಿ ವಸ್ತುಗಳನ್ನಿಟ್ಟು “ಗೋಪಿ ಇದನ್ನು ಅಶೋಕಣ್ಣ, ಶಾರದಕ್ಕನಿಗೆ ಕೊಟ್ಟು ನಮಸ್ಕಾರ ಮಾಡು, ಇನ್ನೊಂದನ್ನು ರಾಧಮ್ಮನಿಗೆ ಕೊಟ್ಟು ಕೈಮುಗಿ” ಎಂದು ಮಗನಿಗೆ ಆದೇಶಿಸಿದರು. ತಾಯಿ ಹೇಳಿದಂತೆ ಗೋಪಿ ಮಾಡಿದನು. “ ನಾವೆಲ್ಲರೂ ನನ್ನ ಮದುವೆಗೆ ಆಗಮಿಸಿ ಆಶೀರ್ವದಿಸಬೇಕು. ನಾನು ಅದ್ದೂರಿಯ ಮದುವೆಯಾಗುತ್ತಿಲ್ಲ. ನಮ್ಮೂರಿನ ದೇವಸ್ಥಾನದಲ್ಲಿ ದೇವರ ಸನ್ನಿಧಾನದಲ್ಲೇ ಮದುವೆ. ಮುಂದಿನ ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ. ಪತ್ರಿಕೆಯನ್ನೇನೂ ಮಾಡಿಸಿಲ್ಲ. ನಂತರ ಅಲ್ಲಿಯೇ ಊರೂಟದ ವ್ಯವಸ್ಥೆ ಮಾಡಲಾಗಿದೆ.” ಎಂದು ಹೇಳಿದ.

“ವ್ಹಾ ! ಬಪ್ಪರೆ ಮಗನೇ, ಇಷ್ಟೆಲ್ಲ ಒಡನಾಟ ನಮ್ಮೊಡನೆ ಇದ್ದರೂ ಇದರ ಬಗ್ಗೆ ನಮಗೆ ಗುಟ್ಟೇ ಬಿಟ್ಟುಕೊಡದೇ ಮಾಡಿದ್ದೀಯಲ್ಲಾ. ಹುಡುಗಿ ಯಾರಪ್ಪಾ?” ಎಂದು ಶಾರದೆ ಕೇಳಿದರು.
“ಅದು ಆಂಟಿ, ಅಪ್ಪನಿಗೆ ಗೊತ್ತಿದ್ದ ಹುಡುಗಿ. ಅವರೇ ತೋರಿಸಿದ್ದು.
“ನಿಮ್ಮಪ್ಪ ತೋರಿಸಿದ ಹುಡುಗಿಯನ್ನು ನೀನು ಒಪ್ಪಿದೆಯಾ?” ಅಚ್ಚರಿಯಿಂದ ಕೇಳಿದರು ಅಶೋಕ.
“ಅಪ್ಪಾ ಎಂದರೆ ನನ್ನ ಜನ್ಮಕೊಟ್ಟ ತಂದೆಯಲ್ಲ. ನನಗೆ ಪುನರ್ಜೀವನ ಕೊಟ್ಟವರು, ಭಾಸ್ಕರಪ್ಪನವರು.” ಎಂದು ಹೇಳಿದ ಗೋಪಿ.

“ಲೇ ಶಾರದಾ ಈಗ ಗೊತ್ತಾಯಿತು. ಡಾ.ಭಾಸ್ಕರ್ ಕ್ಲಿನಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದಳಲ್ಲ “ಸಿರಿ” ಅಂತ. ಅವಳೇ ಈ ಹುಡುಗಿ ಮದುವೆ ಹೆಣ್ಣು”.
“ಹೋ ! ಅದೇ ಹುಡುಗೀನಾ? ಅವಳನ್ನು ಕಂಡರೆ ಭಾಸ್ಕರನಿಗೆ ತುಂಬ ಅಕ್ಕರೆ. ಪಾಪ ಆಕೆ ಚಿಕ್ಕಂದಿನಲ್ಲೇ ಹೆತ್ತವರನ್ನು ಕಳೆದುಕೊಂಡು ಅಜ್ಜಿಯ ಮನೆಯಲ್ಲಿ ಆಶ್ರಯ ಪಡೆದವಳು. ಬಿ.ಎಸ್ಸಿ., ಓದಿ ಕಂಪ್ಯೂಟರ್ ಟ್ರೈನಿಂಗ್ ಮಾಡಿಕೊಂಡಿದ್ದರೂ ಆಕೆಗೆ ಎಲ್ಲಿಯೂ ಕೆಲಸ ಸಿಗದೇ ಪರದಾಡುತ್ತಿದ್ದಳು. ಯಾರೋ ಕರೆತಂದು ಭಾಸ್ಕರನಿಗೆ ಪರಿಚಯಿಸಿ ಅದ್ಯಕ್ಕೆ ಅವರಲ್ಲಿ ಸಹಾಯಕಳಾಗಿ ಕೆಲಸ ಮಾಡಲು ನೇಮಿಸಿದರಂತೆ. ಆಕೆ ಬೇರೆಲ್ಲೂ ಹೋಗದೇ ಅವರಲ್ಲಿಯೇ ಇದ್ದಾಳೆಂದು ಹೇಳಿದ್ದ. ಒಳ್ಳೆಯ ಹುಡುಗಿ, ಗುಣವಂತೆ. ಚೆನ್ನಾಗಿಯೂ ಇದ್ದಾಳೆ. ನಿನಗೆ ಅನುರೂಪಳಾದ ಜೋಡಿ. ಒಳ್ಳೆಯದಾಗಲಪ್ಪಾ” ಬಾಯಿತುಂಬ ಹರಸಿದರು ಶಾರದಾ.

“ಆಯ್ತು ಶಾರದಕ್ಕಾ ನಾವೇನು ನಿಮಗೆ ತಿಳಿಸದೇ ಇರಬೇಕೆಂದೇನೂ ಅಲ್ಲ. ನಾವಿದ್ದ ಪರಿಸ್ಥಿತಿಯಲ್ಲಿ ಈ ವಿಚಾರಗಳನ್ನು ಆದಷ್ಟು ಗುಟ್ಟಾಗಿಯೇ ಇಡಬೇಕೆಂದು ಭಾಸ್ಕರಪ್ಪನವರು ಎಚ್ಚರಿಸಿದ್ದರು. ಅದಕ್ಕೇ ಬರಲಿಲ್ಲ” ಎಂದರು ಮಾಲತಿ.
“ಆ ವಿಚಾರ ಬಿಡು. ಈ ಸಂಬಂಧವನ್ನು ನಿನ್ನ ಗೌಡರು ಒಪ್ಪಿಕೊಂಡರೇ?” ಎಂದು ಪೃಶ್ನಿಸಿದರು. ಶಾರದೆ.
“ಹೂಂ, ಯಾವ ಸಂಬಂಧ ಶಾರದಕ್ಕ. ತಂದೆ ಮಗನ ಸಂಬಂಧವೇ ಎಂದೋ ಹರಿದುಕೊಂಡಿದ್ದರು. ಈಗ ಉಳಿದಿರುವುದು ಹೊರಗಿನವರ ನೋಟಕ್ಕೆ ಮಾತ್ರ. ನಾವೇ ಹೀಗೀಗೆ ಎಂದು ಹೇಳಿದಾಗ ಕಮಕಿಮಕ್ಕೆನ್ನದೆ ಗೋಣಾಡಿಸಿದರು. ಮದುವೆ ಸರಳವಾದರೂ ಊರೂಟ ಹಾಕಿಸಬೇಕಲ್ಲಾ ಅದಕ್ಕೆ ಅವರದ್ದೇ ತಯಾರಿ. ಇನ್ನು ಮಗೆ ಬೇಕಾದವರನ್ನು ಕರೆಯೋದು ಇದ್ದೇ ಇದೆ. ಅದಕ್ಕೊಸ್ಕರವೇ ಎಷ್ಟೊತ್ತಾದರೂ ಊರಿಗೆ ಹಿಂದಿರುಗಲೇ ಬೇಕು. ನಾಳೆ ಮತ್ತೊಂದು ಕಡೆಗೆ ಹೋಗಬೇಕು.”ಎಂದಳು ಮಾಲತಿ.

ತಾಯಿ ಮಗನನ್ನು ಬೀಳ್ಕೊಂಡು ಒಳಬಂದರು ಶಾರದೆ, ಅಶೋಕ ದಂಪತಿಗಳು. ಶಾರದೆ ಟಿವಿ ಆನ್ ಮಾಡಿ ಸೀರಿಯಲ್ ನೋಡಲು ತೊಡಗಿದರು. ಅಶೋಕ ಬೆಳಗ್ಗೆ ಅರ್ಧ ಓದಿ ಇಟ್ಟಿದ್ದ ಪುಸ್ತಕವನ್ನು ಕೈಗೆತ್ತಿಕೊಂಡರು. ಒಂದು ಸಾಲೂ ಮುಂದುವರೆಯಲಿಲ್ಲ. ಕಾರಣ ಗೋಪಿ ಹೇಗಿದ್ದವನು ಹೇಗಾದ ಎಂಬ ಆಲೋಚನೆ. ಇಷ್ಟೊಂದು ಬದಲಾವಣೆಯನ್ನು ಅವರು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಕೇವಲ ಹದಿನೈದು ವರ್ಷಗಳ ಹಿಂದೆ ನಡೆದ ಘಟನೆಯತ್ತ ಮನಸ್ಸು ಓಡಿತು.

ಪೋಲೀಸ್ ಇಲಾಖೆಯಲ್ಲಿ ಅಶೋಕರು ಆಗ ಇನ್ಸ್ ಪೆಕ್ಟರ್ ಆಗಿದ್ದರು. ಬೆಳಗೊಳವೆಂಬ ಊರಿನಲ್ಲಿ ಅವರ ಕಛೇರಿಯಿತ್ತು. ಒಂದು ದಿನ ಅಪರೂಪಕ್ಕೆ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದರು. ಅದೇ ವೇಳೆಯಲ್ಲಿ ಅವರ ಪತ್ನಿಯ ಸೋದರ, ಮನೋವೈದ್ಯ ಡಾ. ಭಾಸ್ಕರ್ ಕೂಡ ಬಂದಿದ್ದರು. ಇಬ್ಬರೂ ಮಾತನಾಡುತ್ತಾ ಊಟ ಮುಗಿಸಿದರು. ಇನ್ನೇನು ಕಚೇರಿಗೆ ಹಿಂದಿರುಗುವುದರಲ್ಲಿದ್ದರು. ಮನೆಯ ಗೇಟಿನ ಬಳಿ ಏನೋ ಗಲಾಟೆ, ಕೂಗಾಟ ಕೇಳಿಸಿತು.

“ಏಯ್.. ಯಾರೋ ನೀನು? ಅಲ್ಲೇ ನಿಲ್ಲು. ಸಾರ್, ಮೇಡಂ ಬೇಗ ಬನ್ನಿ ಎಂಬ ಕೂಗು ಕೇಳಿಸಿತು. ಹೊರಗಿನ ಗೇಟನ್ನು ಯಾರೋ ಹೊಸಬರು ದಢಾರನೆ ತೆಗೆದ ಸದ್ದು ಕೇಳಿ ಅಶೋಕ, ಶಾರದೆ, ಭಾಸ್ಕರ್ ಮೂವರೂ ಹೊರಗೆ ಬಂದರು. ಒಳ ನುಗ್ಗಿದವನು ಒಬ್ಬ ದಷ್ಟಪುಷ್ಟ ಯುವಕ. ಲಕ್ಷಣವಾದ ಮುಖ. ಸ್ಫುರದ್ರೂಪಿಯಾದ ಅವನ ಕೈಯಲ್ಲಿ ಉದ್ದವಾದ ಚಾಕುವಿತ್ತು. ಅವನ ಮುಖದಲ್ಲಿ ಗಲಿಬಿಲಿ, ಆತಂಕ, ಗಾಭರಿ ಯಾವುದೂ ಇಲ್ಲ. ಬದಲಿಗೆ ಏನನ್ನೋ ಸಾಧಿಸಿ ಬಂದಿದ್ದೇನೆಂಬ ಹೆಮ್ಮೆ ಕಾಣಿಸುತ್ತಿತ್ತು. ಇದು ಅಶೋಕ, ಭಾಸ್ಕರರಿಗೆ ಅಚ್ಚರಿ ಮೂಡಿಸಿತು.

“ಇನಸ್ಪೆಕ್ಟರ್ ಸಾರ್, ನಾನು ಅವರನ್ನು ಕೊಂದುಬಿಟ್ಟೆ. ಅವರು ಖಂಡಿತ ಬದುಕುಳಿಯಲಾರರು. ಸುಮಾರು ಇಪ್ಪತ್ತು ಬಾರಿ ಚಾಕುವಿನಿಂದ ತಿವಿದಿದ್ದೇನೆ. ನನ್ನನ್ನು ನೀವು ಅರೆಸ್ಟ್ ಮಾಡಿ. ಇದೇ ಆ ಚಾಕು ಅವರನ್ನು ತಿವಿದಿದ್ದು. ಸಾಕ್ಷಿಗಾಗಿ ತಂದಿದ್ದೇನೆ” ಎಂದು ಯುವಕ ಹೇಳಿದನು.

ಯುವಕನ ಆವೇಶಭರಿತ ಮಾತುಗಳು, ಅವನ ಕೈಯಲ್ಲಿ ಹಿಡಿದಿದ್ದ ಚಾಕುವಿನತ್ತ ಕುತೂಹಲದಿಂದ ನೋಡಿದರು. ಅದರಲ್ಲಿ ಒಂದೂ ರಕ್ತದ ಕಲೆಯೇ ಇರಲಿಲ್ಲ. ಅವನ ಮೈಮೇಲಿನ ಉಡುಪಿನ ಮೇಲೂ ಯಾವುದೂ ರಕ್ತದ ಗುರುತಿಲ್ಲ. ಎಷ್ಟೋ ಕೇಸುಗಳನ್ನು ನೋಡಿ ಅನುಭವವಿದ್ದ ಅಶೋಕರಿಗೆ ಎಲ್ಲವೂ ಅಯೋಮಯವಾಯಿತು. “ ಭಾಸ್ಕರ್ ಹುಡುಗನ ಪೋಟೋ ತೆಗೆಯಿರಿ.” ಎಂದರು.

ಆ ಹುಡುಗ “ನಾನು ಪೊಲೀಸ್ ಸ್ಟೇಷನ್ನಿಗೇ ಹೋಗಬೇಕೆಂದಿದ್ದೆ. ಆದರೆ ಅಲ್ಲಿರುವವರೆಲ್ಲಾ ನಮ್ಮ ಮನೆಯವರಿಗೆ ಗೊತ್ತು. ನೀವು ಇಲ್ಲಿಗೆ ಹೊಸದಾಗಿ ಬಂದಿದ್ದೀರಿ. ತುಂಬ ಸ್ಟ್ರಿಕ್ಟ್ ಆಫೀಸರ್ ಎಂದು ಕೇಳಿದ್ದೇನೆ. ಅದಕ್ಕೆ ಮನೆಗೇ ಬಂದುಬಿಟ್ಟೆ. ದಯವಿಟ್ಟು ಬೇಗ ನನ್ನನ್ನು ಅರೆಸ್ಟ್ ಮಾಡಿರಿ”. ಎಂದು ಕೇಳಿಕೊಂಡ.

“ಹಾಂ ಈಗ ಅರೆಸ್ಟ್ ಮಾಡುತ್ತಾರೆ, ಫೋಟೋ ತೆಗೆಯುವವರೆಗೆ ಆ ಚಾಕುವನ್ನು ನಿನ್ನ ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೋ” ಎಂದರು ಆಶೋಕ. ಭಾಸ್ಕರ್ ಫೊಟೋ ತೆಗೆದರು. “ಈಗ ಹಾಗೇ ಒಳಕ್ಕೆ ಬಾ ನೀನು ಹಿಡಿದಿರುವ ಚಾಕುವನ್ನು ಇಲ್ಲಿರುವ ಬಟ್ಟೆಯ ಮೇಲೆ ನೀನೇ ಇಡು” ಎಂದರು ಭಾಸ್ಕರ್.

ಯುವಕ ಹಾಗೇ ಮಾಡಿದ. “ಈಗ ನಿನ್ನ ಹೆಸರು , ವಿಳಾಸ ಮತ್ತು ನೀನು ಯಾರನ್ನು ಕೊಲೆ ಮಾಡಿದೆ ಅವರ ಹೆಸರು, ವಿಳಾಸ. ಅವರು ಹೆಣ್ಣೋ ಗಂಡೋ ವಿವರಗಳನ್ನು ಬರೆ” ಎಂದು ಕಾಗದವೊಂದನ್ನು ಕೊಟ್ಟು ಆದೇಶಿಸುತ್ತಿರುವಾಗಲೇ ಹೊರಗಿನಿಂದ ದುಃಖತಪ್ತಳಾದ ಹೆಂಗಸೊಬ್ಬಳು ಓಡಿಬಂದು ಇನ್ಸ್ ಪೆಕ್ಟರ್ ರವರಿಗೆ ನಮಸ್ಕಾರ ಮಾಡಿದಳು, “ನಾನು ಇವನ ತಾಯಿ ಸಾರ್. ಇವನು ಯಾರನ್ನೂ ಕೊಲೆ ಮಾಡಿಲ್ಲಸಾರ್. ಅವನಿಗೆ ಎಂತಹುದೋ ಭ್ರಮೆ, ಆವೇಶ ಬಂದಿದೆ. ದಯವಿಟ್ಟು ಅವನನ್ನು ಅರೆಸ್ಟ್ ಮಾಡಬೇಡಿ ಸಾರ್” ಎಂದು ಬೇಡಿಕೊಂಡಳು. ಮುಖ ನೋಡಿದರೆ ಯುವಕನದ್ದೇ ಚಹರೆಯಿದ್ದ ಹೆಂಗಸು. “ನಿಮ್ಮ ಹೆಸರೇನಮ್ಮಾ” ಎಂದು ಕೇಳಿದರು ಇನ್‌ಸ್ಪೆಕ್ಟರ್. ಆಕೆ “ಮಾಲತಿ” ಎಂದು ಹೇಳಿ ದುಃಖಿಸುತ್ತಿದ್ದಳು. ಅಷ್ಟರಲ್ಲಿ ಯುವಕ ಮತ್ತೆ ಮಾತನಾಡಿ “ ನಾನು ಗೋಪಿ. ಇವರು ನನ್ನ ತಾಯಿ. ನಾನು ಇವರಿಗೋಸ್ಕರವೇ ಕೊಲೆ ಮಾಡಿದ್ದು. ಈಗ ನನ್ನ ಫೋಟೋ ತೆಗೆದಿದ್ದಾರೆ ಚಾಕು ಸಮೇತ. ನನ್ನನ್ನು ಅರೆಸ್ಟ್ ಮಾಡುತ್ತಾರೆ” ಎಂದ.

ತಾಯಿ ಮಕ್ಕಳ ಮಾತುಗಳನ್ನು ಕೇಳಿ ಬಹಳ ಗೊಂದಲವಾಯಿತು. ಭಾವ ಭಾವಮೈದುನ ಇಬ್ಬರೂ ಏನೋ ಆಲೋಚಿಸಿದರು. “ಭಾಸ್ಕರ್, ಈ ಹುಡುಗನನ್ನು ಒಳಗಿನ ಕೋಣೆಗೆ ಕರೆದುಕೊಂಡು ಹೋಗಿ ಕೂಡಿಸಿ. ನಾನು ಹೇಳುವವರೆಗೆ ಬಾಗಿಲು ತೆರೆಯಬೇಡಿ.” ಎಂದು ಕಾವಲುಗಾರನಿಗೂ ಮನೆಯೊಳಕ್ಕೆ ಯಾರನ್ನೂ ಬಿಡಬೇಡಿ” ಎಂದು ಆದೇಶಿಸಿದರು. ಗೋಪಿ ಖುಷಿಯಾಗಿ ಕೋಣೆಯೊಳಕ್ಕೆ ಹೋಗಿ ಕುಳಿತುಕೊಂಡ.

ಆಗ ಇನ್ಸೆಪೆಕ್ಟರ್ ಅಶೋಕ ಮಾಲತಿಯ ಕಡೆ ತಿರುಗಿ “ನೀವು ಇಲ್ಲಿಗೆ ಬಂದದ್ದು ಒಳ್ಳೆಯದೇ ಆಯಿತು. ನಿಮ್ಮ ಮಗನ ಮಾತು, ಅವನು ತಂದಿದ್ದ ಚಾಕು ಎಲ್ಲವನ್ನೂ ತಿಳಿಸಿವೆ. ಹೆದರಬೇಡಿ. ನೀವು ಧೈರ್ಯವಾಗಿರಿ. ಅವನು ಚಾಕು ಹಿಡಿದು ಓಡಿ ಬಂದದ್ದನ್ನು ನಿಮ್ಮ ಮನೆಯ ಆಸುಪಾಸಿನವರು ಯಾರಾದರೂ ನೋಡಿದರೇ?” ಎಂದು ಪೃಶ್ನಿಸಿದರು.

ಮಾಲತಿ “ಇಲ್ಲ ಸಾರ್. ಇಷ್ಟುಹೊತ್ತಿನಲ್ಲಿ ಎಲ್ಲರೂ ಹೊಲಗದ್ದೆಗಳಿಗೆ ಹೋಗಿರುತ್ತಾರೆ. ಮಕ್ಕಳು, ವಯಸ್ಸಾದವರು ಮಧ್ಯಾನ್ಹದ ನಿದ್ರೆಗೆ ಶರಣಾಗಿರುತ್ತಾರೆ. ಯಾರದ್ದೂ ಮನೆ ಬಾಗಿಲುಗಳು ಈ ಹೊತ್ತಿನಲ್ಲಿ ತೆರೆದಿರುವುದೇ ಇಲ್ಲ” ಎಂದಳು.

ಸಮಾಧಾನವಾಗಿ ಆಕೆಯನ್ನು ಕುಳಿತುಕೊಳ್ಳಲು ಹೇಳಿ “ಈ ಹುಡುಗನಿಗೆ ಈ ರೀತಿ ಭ್ರಮೆ ಯಾವಾಗಿನಿಂದ ಶುರುವಾಯಿತು? ಇದಕ್ಕೆ ಕಾರಣಗಳೇನು ಎಲ್ಲವನ್ನೂ ವಿವರವಾಗಿ ಹೇಳಿ” ಎಂದು ಆಕೆಗೆ ಕುಡಿಯಲು ತಣ್ಣನೆಯ ನೀರು ಕೊಟ್ಟರು.

ಆಕೆ ಸುಧಾರಿಸಿಕೊಂಡು. ನಾವು ಇಲ್ಲೇ ಬೆಳಗೊಳದಿಂದ ಹರದಾರಿ ದೂರದಲ್ಲಿರುವ ಸಣ್ಣಹಳ್ಳಿಯಲ್ಲಿದ್ದೆವು. ನಮ್ಮ ಮಾವನವರು ಸುತ್ತಮುತ್ತ ಎಲ್ಲರಿಗೂ ಪರಿಚಯ. ಹನುಮೇಗೌಡರು ಎಂದು ದೊಡ್ಡಕುಳ. ಹೊಲ ಗದ್ದೆ ತೋಟ ಮನೆ ಬೆಳಗೊಳದಲ್ಲಿ ಮತ್ತ್ತು ಹಳ್ಳಿಯಲ್ಲಿ ಎರಡೂ ಕಡೆಯಿವೆ. ಅಪಾರ ಆಸ್ತಿವಂತರಿಗೆ ಒಬ್ಬನೇ ಮಗ ಬಸವೇಗೌಡರು ಎಂದು. ಆತನ ಹೆಂಡತಿಯೇ ನಾನು. ನಮಗೆ ಮೂರುಜನ ಮಕ್ಕಳು. ಮೊದಲು ಅವಳಿಜವಳಿ ಹೆಣ್ಣುಮಕ್ಕಳು, ಅವರಾದ ಮೇಲೆ ಹತ್ತುವರ್ಷದ ನಂತರ ಇವನೊಬ್ಬನೇ ಗಂಡುಮಗ ಗೋಪಿ. ವಂಶೋದ್ಧಾರಕ ಹುಟ್ಟಿದನೆಂದು ಇವನು ಹುಟ್ಟಿದಾಗ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಆಳು ಕಾಳುಗಳಿಂದ ತುಂಬಿತ್ತು ನಮ್ಮ ಮನೆ. ಮಕ್ಕಳನ್ನು ಕಂಡರೆ ನಮ್ಮವರಿಗೆ ತುಂಬ ಪ್ರೀತಿ. ಅದೆಲ್ಲಾ ಈಗ ಹಳೆಯ ಕಥೆ ಅಷ್ಟೇ. ನಾವು ಸ್ಕೂಲು ಇಲ್ಲವೆಂಬ ಕಾರಣಕ್ಕಾಗಿ ಬೆಳಗೊಳಕ್ಕೆ ಬಂದೆವು. ಇಲ್ಲಿರುವ ಮನೆಯಲ್ಲಿದ್ದೇವೆ.

ನಮ್ಮೂರಿನ ಸ್ಕೂಲಿಗೆ ಟೀಚರಾಗಿ ಎಲ್ಲಿಂದಲೋ ಒಬ್ಬ ಹೆಣ್ಣುಮಗಳು ಬಂದಳು. ಅವಳು ಬಂದಿದ್ದರಿಂದ ನಮ್ಮ ಸಂಸಾರಕ್ಕೆ ಬೆಂಕಿಯೇ ಹೊತ್ತಿತು. ಅದಿನ್ನೂ ಆರಿಲ್ಲ. ವಿಶಾಲವಾಗಿದ್ದ ನಮ್ಮ ಮನೆಯಲ್ಲಿ ಆಕೆ ಪರವೂರಿನ ಹೆಣ್ಣುಮಗಳೆಂಬ ಕಾರಣದಿಂದ ಇರಲು ಆಶ್ರಯವನ್ನು ಕೊಟ್ಟರು. ಅದೇ ತಪ್ಪಾಯಿತು. ತೆಳ್ಳಗೆ ಬೆಳ್ಳಗಿದ್ದ ಆ ವೈಯ್ಯಾರಿ ಹೆಣ್ಣುಮಗಳೇ ನನ್ನವರನ್ನು ತನ್ನ ವಶಮಾಡಿಕೊಂಡಳು.” ಎಂದಳು.

“ಅಲ್ಲಮ್ಮಾ ಮೂರುಮಕ್ಕಳ ತಂದೆ ನಿಮ್ಮ ಯಜಮಾನ. ಊರಿಗೇ ಹಿರಿಯ ಮನೆ. ಎಚ್ಚರಿಕೆ ಇರಬೇಡವೇ?” ಎಂದು ಪ್ರಶ್ನಿಸದರು ಅಶೋಕ.
“ಆ ಪ್ರಜ್ಞೆ ಅವರಿಗಿದ್ದರೆ ನಮಗೀ ಪರಿಸ್ಥಿತಿ ಬರುತ್ತಿರಲಿಲ್ಲ. ಮಗನ ಬಗ್ಗೆ ಯಾರು ಏನೇ ಹೇಳಿದರೂ ನಂಬದ ನಮ್ಮ ಮಾವನವರಿಗೆ ನಿಧಾನವಾಗಿ ಅರಿವಾಯಿತು. ಆದರೆ ಅವರು ಏನಾದರೂ ಮಾಡುವುದರೊಳಗೆ ಅವರೇ ಕಾಲವಾಗಿಬಿಟ್ಟರು. ನಾವ್ಯಾರೂ ನನ್ನ ಗಂಡನಿಗೆ ಬುದ್ಧಿ ಹೇಳುವ ಸ್ವಾತಂತ್ರ್ಯವೇ ಇಲ್ಲದಂತೆ ಮಾಡಿದ್ದಾರೆ. ಚಿಕ್ಕವನಾದ ನನ್ನ ಮಗನ ಮನಸ್ಸಿನ ಮೇಲೆ ಇದು ಬಹಳ ಪರಿಣಾಮಬೀರಿತು. ಆ ಹೆಂಗಸನ್ನು ಕಂಡರೆ ಅವನಿಗೆ ಮೊದಲಿಂದಲೂ ಆಗುತ್ತಿರಲಿಲ್ಲ. ನಮ್ಮ ಅಮ್ಮನಿಂದ ಅಪ್ಪನನ್ನು ಅವಳು ಕಿತ್ತುಕೊಂಡಳು ಎಂಬುದು ಅವನ ಮನಸ್ಸಿನಲ್ಲಿ ಭದ್ರವಾಗಿ ಕುಳಿತುಬಿಟ್ಟಿದೆ. ಕೈಗೆ ಏನು ಸಿಕ್ಕಿದರೂ ಆಕೆಯನ್ನು ಹೊಡೆಯಲು ಹೋಗುತ್ತಿದ್ದ. ಇದನ್ನು ಕಂಡು ನನ್ನವರು ಮಗನನ್ನು ರೆಸಿಡೆನ್ಸಿಯಲ್ ಶಾಲೆಯೊಂದಕ್ಕೆ ಹಾಕಿ ಮೈಸೂರಿನಲ್ಲಿರಿಸಿದರು. ಅಲ್ಲಿಗೆ ಹೋದರೂ ನನ್ನ ಮಗ ರಜಾಕಾಲದಲ್ಲಿ ಮನೆಗೆ ಬಂದಾಗಲೆಲ್ಲ ಮೊದಲಿನಂತೆಯೇ ವರ್ತಿಸುತ್ತಿದ್ದ. ನಾನು ಅವನಿಗೆ ಸಾಕಷ್ಟು ಬುದ್ಧಿ ಹೇಳುತ್ತಿದ್ದೆ. ಯಾವುದೂ ಪ್ರಯೋಜನವಾಗಲಿಲ್ಲ. ಕಷ್ಟಪಟ್ಟು ಇವನು ಎಸ್.ಎಸ್.ಎಲ್.ಸಿ., ಪೂರೈಸಿದ. ಮುಂದಕ್ಕೆ ಓದಲು ನನಗಿಷ್ಟವಿಲ್ಲವೆಂದು ಊರಿಗೆ ಬಂದುಬಿಟ್ಟ. ಪರಿಸ್ಥಿತಿ ಕೈಮೀರಿ ಹೋದೀತೆಂಬ ದೃಷ್ಟಿಯಿಂದ ನಾನು ಹಳ್ಳಿಯಲ್ಲಿದ್ದ ಜಮೀನಿನ ವಹಿವಾಟು ನೋಡಿಕೊಳ್ಳಲು ಹೋಗುತ್ತೇನೆಂದು ಒಪ್ಪಿಸಿ ಮಗನನ್ನು ಕರೆದುಕೊಂಡು ಹಳ್ಳಿಗೇ ಹೊಟುಹೋದೆ.” ಎಂದಳು.

“ಒಂದು ನಿಮಿಷ, ಆಕೆ ಸ್ಕೂಲಿನ ಟೀಚರ್ ಎಂದಿರಿ. ಆಕೆಗೆ ವರ್ಗಾವಣೆಯಾಗಲಿಲ್ಲವೇ?”
“ಇಲ್ಲಾ ಸಾರ್ ಎಲ್ಲಿಗೆ ವರ್ಗಮಾಡಿದ್ದರೂ ನಮ್ಮವರು ಹೋಗಿ ಮತ್ತೆ ಮತ್ತೆ ಖರ್ಚುಮಾಡಿ ಕ್ಯಾನ್ಸಲ್ ಮಾಡಿಸಿಕೊಂಡು ಬರುತ್ತಿದ್ದರು. ಅವಳು ಅದೇನು ಮಾಯೆ ಮಾಡಿದ್ದಾಳೋ ತಿಳಿಯದು”
“ಆಕೆಗೆ ಹೆತ್ತವರು, ಬಂಧುಗಳು ಯಾರೂ ಇರಲಿಲ್ಲವೇ?”
“ಎಲ್ಲರೂ ಇದ್ದರು. ಅವರು ಒಂದುರೀತಿಯ ಸಮಯ ಸಾಧಕರು. ಮೊದಮೊದಲು ಪ್ರತಿಭಟಿಸಿದಂತೆ ಮಾಡಿ ಮಾನ ಮರ್ಯಾದೆ ಎಂದೆಲ್ಲ ಮಾತನಾಡಿದರು. ನಂತರ ನಮ್ಮವರಿಂದಲೇ ಒಂದಲ್ಲ ಒಂದು ರೀತಿಯಲ್ಲಿ ಹಣಕಾಸಿನ ಅನುಕೂಲ ಪಡೆಯುತ್ತಾ ಸುಮ್ಮನಾದರು”
“ನಿಮ್ಮವರಿಂದ ಅವರಿಗೇನಾದರೂ ಮಕ್ಕಳು ಮರಿ?”
“ಇಲ್ಲಾ ಸಾರ್, ನಮ್ಮ ಮನೆಯಲ್ಲಿನ ಎಲ್ಲ ಸುಖ ಸಂತೋಷಗಳನ್ನು ಆಕೆಯೇ ಕಿತ್ತುಕೊಂಡಿದ್ದಾಳೆ ಎಂದುಕೊಂಡಿರುವ ನನ್ನ ಮಗ ಆಕೆಯನ್ನು ಎಂದಿಗೂ ಬಿಡಲಾರೆ, ಕೊಂದು ಹಾಕುತ್ತೇನೆ ಎಂದು ಕೂಗಾಡುತ್ತಾ ಇರುತ್ತಾನೆ. ಆದರೆ ಹೊರಗೆಲ್ಲೂ ಈ ರೀತಿಯ ಮಾತುಗಳನ್ನಾಡಿರಲಿಲ್ಲ. ಇವತ್ತೇ ಹೀಗೆ..”

“ಮತ್ತೆ ಇವತ್ತು ಕೊಲೆಮಾಡಿದ್ದೇನೆ, ಚಾಕು, ರಕ್ತ ಎಂದೆಲ್ಲಾ ಹೇಳಿದನಲ್ಲಾ”
ಅದವನ ಭ್ರಮೆ ಸಾರ್. ಅವಳನ್ನು ಕೊಲೆಮಾಡಲು ಅವಳು ಈಗ ನಮ್ಮ ದೇಶದಲ್ಲೇ ಇಲ್ಲ. ನಮ್ಮವರು ಅವಳನ್ನು ಕರೆದುಕೊಂಡು ವಿದೇಶ ಪ್ರವಾಸ ಹೋಗಿದ್ದಾರೆ” ಎಂದಳು. “ಅವಳು ಹೋಗಿದ್ದು ತಿಳಿದು ನಮ್ಮ ಅಮ್ಮನಿಗಿಲ್ಲದ ಸವಲತ್ತು ಅವಳಿಗೆ ಸಿಗುತ್ತಿದೆ ಎಂಬ ಆಕ್ರೋಶಕ್ಕೆ ನಮ್ಮ ಹಳೆ ಮನೆಯಿಂದ ಅವಳ ಫೊಟೋ ಒಂದನ್ನು ತಂದು ಅದನ್ನು ಚಾಕುವಿನಿಂದ ಅದೆಷ್ಟೋ ಆವೇಶದಿಂದ ಚುಚ್ಚಿಚುಚ್ಚಿ ನಾನು ಕೊಂದಿದ್ದೇನೆ ಎಂದು ಕೂಗಾಡುತ್ತಾ ಇಲ್ಲಿಗೆ ಓಡಿಬಂದಿದ್ದಾನೆ ಸಾರ್” ಎಂದು ಆ ದಿನದ ಘಟನೆಯ ಬಗ್ಗೆ ವಿವರಣೆ ನೀಡಿದಳು.

“ಸಮಾಧಾನ ಮಾಡಿಕೊಳ್ಳಿ. ಏನಾದರೋ ಆಲೋಚಿಸೋಣ. ಅಂದಹಾಗೆ ನೀವು ಮಾತನಾಡಿದ ರೀತಿ ನೋಡಿದರೆ ನೀವು ವಿದ್ಯಾವಂತೆಯೆಂದು ತೋರುತ್ತದೆ. ಏನು ಓದಿದ್ದೀರಿ?”
ನಾನು ಎಸ್.ಎಸ್.ಎಲ್.ಸಿ., ವರೆಗೆ ಓದಿದ್ದೇನೆ. ನಮ್ಮ ತವರೂರು ಮೈಸೂರು. ನಮ್ಮ ತಂದೆ ತಾಯಿಗಳು ನನಗೆ ಕೃಷಿ ಮತ್ತು ಹೈನು ಸಾಕಾಣಿಕೆ ಬಗ್ಗೆ ತರಬೇತಿ ಕೊಡಿಸಿದ್ದರು. ಅವುಗಳ ನಂಟಿಲ್ಲದಿದ್ದರೆ ನಾನೆಂದೋ ಹುಚ್ಚಿಯಾಗಿಬಿಡುತ್ತಿದ್ದೆ. ದಯವಿಟ್ಟು ನನ್ನ ಸಂಕಟವನ್ನು ಪರಿಹಾರ ಮಾಡ್ತೀರೆಂಬ ಭರವಸೆಯಿದೆ. ನನ್ನನ್ನು ನಿಮ್ಮ ತಂಗಿಯಂತೆ ಭಾವಿಸಿಕೊಳ್ಳಿ ಕೈಮುಗಿಯುತ್ತೇನೆ” ಎಂದು ಪ್ರಾರ್ಥಿಸಿದಳು.

ಅದುವರೆಗೆ ಸುಮ್ಮನಿದ್ದ ಶಾರದೆ ಗಂಡನನ್ನು ಒಳಕೋಣೆಗೆ ಕರೆದು ಅವರ ಕೈ ಹಿಡಿದು “ರೀ ಎಂಥಹ ಜವಬ್ದಾರಿಯನ್ನು ಮೈಮೇಲೆ ಹಾಕಿಕೊಳ್ಳುತ್ತೀರಿ? ಏನಾದರೂ ಹೆಚ್ಚುಕಡಿಮೆಯಾದರೆ ಏನುಗತಿ?” ಎಂದು ಆತಂಕ ವ್ಯಕ್ತ ಪಡಿಸಿದಳು. ಅಷ್ಟರಲ್ಲಿ ಅಲ್ಲಿಗೆ ಬಂದ ಅವಳ ಅಣ್ಣ ಡಾ ಭಾಸ್ಕರ್ “ಅಂತಹುದೇನೂ ಆಗಲ್ಲ. ಅವನ ಮನಸ್ಸಿಗೆ ಮನೆಯಲ್ಲಿ ಹಾಳಾದ ಸಂಬಂಧಗಳಿಂದ ತೀವ್ರವಾದ ಆಘಾತವಾಗಿದೆ. ದ್ವೇಷ, ನಿರಾಶೆ, ಅಸಹಾಯಕತೆ ಎಲ್ಲವೂ ಗೊಂದಲಮಯವಾಗಿ ಅವನ ಮನಸ್ಸು ಅಸ್ಥವ್ಯಸ್ಥವಾಗಿದೆ. ಅವನನ್ನು ನನ್ನ ಸುಪರ್ದಿಗೆ ಒಪ್ಪಿಸಿ ನನ್ನೊಡನೆ ಸಹಕರಿಸಿ. ಅವನಿಗೆ ನಾನು ಸೂಕ್ತ ಚಿಕಿತ್ಸೆಯನ್ನು ಮಾಡುತ್ತೇನೆ. ಎಲ್ಲ ಸರಿಹೋಗುತ್ತದೆ. ಒಂದು ಕುಟುಂಬದ ನೊಂದ ಹೆಣ್ಣುಮಗಳಿಗೆ ಸಾಂತ್ವನ ನೀಡಿ ಒಬ್ಬಹುಡುಗನ ಬದುಕಿಗೆ ಮರುಹುಟ್ಟು ನೀಡಲು ನೆರವಾಗಿ. ಹುಡುಗನನ್ನು ನೋಡಿದ್ದು ನಿಮ್ಮ ವಾಚ್ಮನ್ ಮಾತ್ರ. ಆ ಹುಡುಗ ನನ್ನ ಪೇಷೆಂಟ್ ಎಂದು ಹೇಳಿ ಹೇಗೂ ನಾನು ಮನೋವೈದ್ಯ . ಹಾಗಾಗಿ ಯಾರಿಗೂ ಅನುಮಾನ ಬರುವುದಿಲ್ಲ. ಆ ಹುಡುಗನನ್ನು ಕೋಣೆಯಲ್ಲಿ ಕೂರಿಸಿ ಉಪಾಯವಾಗಿ ಅವನಿಗರಿವಾಗದಂತೆ ನಿದ್ರಾವಸ್ಥೆಗೆ ಹೋಗುವಂತೆ ಮಾಡಿದ್ದೇನೆ. ಮುಂದಿನದ್ದನ್ನು ನನಗೆ ಬಿಡಿ. ನಡೆಯರಿ ಹೊರಕ್ಕೆ. ಆಕೆಗೆ ಭರವಸೆ ಕೊಟ್ಟು ಕಳುಹಿಸೋಣ” ಎಂದು ಎಲ್ಲರೂ ಹೊರಗೆ ಬಂದರು.

ದಿಕ್ಕೆಟ್ಟು ಕುಳಿತಿದ್ದ ಆ ತಾಯಿಗೆ ತಾನು ಮನೋವೈದ್ಯನೆಂದು ಪರಿಚಯ ಹೇಳಿ “ಆತನು ನನ್ನ ಚಿಕಿತ್ಸೆಯಲ್ಲಿರುತ್ತಾನೆ. ನನ್ನ ಕ್ಲಿನಿಕ್ ಮತ್ತು ಮನೆ ಮೈಸೂರಿನಲ್ಲ್ಲಿದೆ. ನೀವು ನಿಮ್ಮ ಮನೆ ವಿಳಾಸ, ಫೋನ್ ನಂಬರನ್ನು ಕೊಡಿ. ಅವನನ್ನು ನಾನು ನನ್ನೊಡನೆ ಕರೆದುಕೊಂಡು ಹೋಗುತ್ತೇನೆ. ನೀವೇನೂ ಆತಂಕ ಪಡಬೇಡಿ. ನನ್ನೊಡನೆ ಸಂಪರ್ಕದಲ್ಲಿರಿ. ಕೇಳಿದವರಿಗೆ ಹುಡುಗ ಯಾವುದೋ ಊರಿಗೆ ಹೋಗಿದ್ದಾನೆ ಎಂದು ಹೇಳಿ ನಿಭಾಯಿಸಿ. ನನ್ನ ವಿಳಾಸ ಮತ್ತು ಫೋನ್ ನಂಬರಿರುವ ಕಾರ್ಡ್ ಇಟ್ಟುಕೊಳ್ಳಿ” ಎಂದು ಮಾಲತಿಗೆ ಧೈರ್ಯ ತುಂಬಿದರು.

ಕೆಲವೇ ತಿಂಗಳಲ್ಲಿ ಡಾ. ಭಾಸ್ಕರ್ ರವರ ಮುತುವರ್ಜಿಯ ಚಿಕಿತ್ಸೆಯಿಂದ ಗೋಪಿಯು ತನ್ನ ಮನೋಸ್ಥಿತಿಯನ್ನು ಬದಲಾಯಿಸಿಕೊಂಡ. ಅವನ್ನು ಆವರಿಸಿದ್ದ ಭ್ರಮೆಯು ಬಿಟ್ಟುಹೋಯಿತು. ಅವನು ಸಾಮಾನ್ಯ ಆರೋಗ್ಯವಂತ ಯುವಕನಾದ. ಅವನು ಪೂರ್ತಿ ಗುಣವಾಗಿ ಮನೆಗೆ ಹೊರಟುನಿಂತ ದಿನದ ದೃಶ್ಯ ಅಶೋಕ, ಶಾರದೆಗೆ ಕಣ್ಣಿಗೆ ಕಟ್ಟದಂತಿದೆ. ತಾಯಿ ಮಗ ಇಬ್ಬರೂ ಅವರಿಬ್ಬರಿಗೂ ನಮಸ್ಕರಿಸಿ ನಿಮ್ಮಿಂದ ಮತ್ತು ಭಾಸ್ಕರಣ್ಣನವರಿಂದ ನನ್ನ ಗೋಪಿಗೆ ಇಂದು ಪುನರ್ಜೀವನ ದೊರಕಿದೆ . ನನಗೆ ನೀವು ಮೂವರೂ ದೇವರ ಸಮಾನರಾಗಿದ್ದೀರಿ. ನಾನು ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ.” ಎಂದು ಬೀಳ್ಕೊಂಡರು. ಅವರಿಬ್ಬರ ಕಣ್ಣುಗಳಲ್ಲಿ ಕೃತಜ್ಞತೆಯ ಕಣ್ಣೀರು ಹರಿಯುತ್ತಿತ್ತು.

ವಿದೇಶ ಪ್ರವಾಸದಿಂದ ಹಿಂದಿರುಗಿದ ಬಸವೇಗೌಡ ಮಾತ್ರ ಏನೂ ಬದಲಾಗಿರಲಿಲ್ಲ. ತನ್ನ ಮಗನಲ್ಲಿ ಉಂಟಾಗಿದ್ದ ಬದಲಾವಣೆಯನ್ನು ಕಂಡು ಅವನ ಪ್ರತಿಕ್ರಿಯೆ “ ಓಹೋ ! ನಿನ್ನ ಮಗನಿಗೆ ಮೆಟ್ಟಿಕೊಂಡಿದ್ದ ದೆವ್ವ ಬಿಟ್ಟುಹೋಗಿದೆ” ಅಷ್ಟೇ ಆಗಿತ್ತು.
ಇದಾಗಿ ಎಷ್ಟೋ ವರ್ಷಗಳೇ ಉರುಳಿದರೂ ಮಾಲತಿ ಮತ್ತು ಗೋಪಿ ಅಶೋಕ ದಂಪತಿಗಳ ಸಂಪರ್ಕವಿಟ್ಟುಕೊಂಡು ಆಗಾಗ ಯೋಗಕ್ಷೇಮ ವಿಚಾರಿಸುತ್ತ ತಮ್ಮ ಸುದ್ಧಿಯನ್ನೂ ತಿಳಿಸುತ್ತಿದ್ದರು. ಯಾವಾಗಲಾದರೊಮ್ಮೆ ಇವರಿದ್ದಲ್ಲಿಗೇ ಬಂದು ಭೇಟಿಯಾಗುತ್ತಿದ್ದರು. ಹೀಗಾಗಿ ಒಡನಾಟ ನಂಟೆನ್ನುವಷ್ಟು ಬೆಳೆದಿತ್ತು.

“ರೀ..ಇದೇನು ಪುಸ್ತಕ ಕೈಯಲ್ಲಿಡಿದು ಕಣ್ಣುಮುಚ್ಚಿಕೊಂಡು ಎಲ್ಲಯೋ ಕಳೆದುಹೋದಂತಿದೆ” ಎಂಬ ಶಾರದೆಯ ಕರೆ ಅಶೋಕರನ್ನು ಎಚ್ಚರಿಸಿ ವಾಸ್ತವಕ್ಕೆ ಕರೆತಂದಿತು.
“ಏನಿಲ್ಲ, ಶಾರದೆ ಗೋಪಿ ಮತ್ತವನ ತಾಯಿ ನಮ್ಮ ಮನೆಗೆ ಮೊದಲು ಬಂದಾಗಿನ ಪ್ರಕರಣವನ್ನು ಮೆಲುಕು ಹಾಕುತ್ತಿದ್ದೆ” ಎಂದರು. “ಹೌದುರೀ, ನಮ್ಮ ಭಾಸ್ಕರ್ ಆದಿನ ನಮ್ಮ ಮನೆಗೆ ಬಂದಿರದಿದ್ದರೆ , ನೀವೇನಾದರೂ ಬೇರೆ ರೀತಿಯಲ್ಲಿ ಆಲೋಚಿಸಿದ್ದರೆ ಅನ್ಯಾಯವಾಗಿ ಒಂದು ಬದುಕೇ ನಷ್ಟವಾಗುತ್ತಿತ್ತು. ಆ ತಾಯಿಯ ಪಾಡು ನೋಡಲಾಗುತ್ತಿರಲಿಲ್ಲ. ದೇವರ ದಯೆ ಎಲ್ಲವೂ ಒಳ್ಳೆಯದಾಯಿತು. ಈಗ ಗೋಪಿ ಗೃಹಸ್ಥನೂ ಆಗುತ್ತಿದ್ದಾನೆ. ಅವನ ಬದುಕು ಸುಖವಾಗಿರಲಿ” ಎಂದು ಹಾರೈಸಿದರು. ಶಾರದೆಯ ಮಾತಿಗೆ ತಲೆದೂಗುತ್ತಾ ಅಶೋಕರು ಊಟದ ಮನೆಯತ್ತ ಹೆಜ್ಜೆ ಹಾಕಿದರು.

ಬಿ.ಆರ್.ನಾಗರತ್ನ, ಮೈಸೂರು

10 Responses

  1. ಕಾಳಿಹುಂಡಿ ಶಿವಕುಮಾರ್ ಮೈಸೂರು says:

    ಸೂಪರ್ ಮೇಡಂ ನಿಮ್ಮ ಪ್ರತಿಯೊಂದು ಸಾಲುಗಳು ಕೂಡ ಅರ್ಥಪೂರ್ಣವಾಗಿರುತ್ತವೆ, ಸರಾಗವಾಗಿ ಓದಿಸಿಕೊಂಡು ಕೂಡ ಹೋಗುವ ಶಕ್ತಿಯನ್ನು ಹೊಂದಿದೆ. ನಿಮ್ಮ ಲೇಖನ ಶೈಲಿ ನಿಜಕ್ಕೂ ನಮ್ಮಂತ ಕಿರಿಯರಿಗೆ ಮಾರ್ಗದರ್ಶನ.

  2. ಪ್ರಕಟಣೆಗಾಗಿ ಹೃತ್ಪೂರ್ವಕವಾದ ಧನ್ಯವಾದಗಳು ಗೆಳತಿ ಹೇಮಾ

  3. ನಯನ ಬಜಕೂಡ್ಲು says:

    ಬಹಳ ಸುಂದರವಾದ ಕಥೆ.

  4. ಧನ್ಯವಾದಗಳು ನಯನಮೇಡಂ

  5. ಪದ್ಮಾ ಆನಂದ್ says:

    ಒಂದು ಕುತೂಹಲಭರಿತ ಮನೋವೈಜ್ಞಾನಿಕ ಕಥೆ ಸುಖಾಂತವಾದುದು ಓದುವಾಗ ಉಂಟಾದ ಉದ್ವೇಗಕ್ಕೆ ನೆಮ್ಮದಿಯನ್ನು ನೀಡಿತು. ಅಭಿನಂದನೆಗಳು.

  6. ಶಂಕರಿ ಶರ್ಮ says:

    ವಿಭಿನ್ನ ರೀತಿಯ ಮನೋವೈಜ್ಞಾನಿಕ ಕಥೆ ಬಹಳ ಚೆನ್ನಾಗಿದೆ ನಾಗರತ್ನ ಮೇಡಂ.

  7. ವೆಂಕಟಾಚಲ says:

    ಒಳ್ಳೆಯ ಕಥೆ

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: