ಕಾದಂಬರಿ : ತಾಯಿ – ಪುಟ 15

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಗೋದಾಮಣಿ ತೆಗೆದು ನೋಡಿದರು.

  1. ಹೆಸರು 2. ವಯಸ್ಸು 3. ವಿದ್ಯಾಭ್ಯಾಸ 4. ಫೋನ್ ನಂಬರ್ 5. ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಬಹುದಾದ ವಿಳಾಸ, ಫೋನ್ ನಂಬರ್ 6. ಬಿ.ಪಿ. ಮತ್ತು ಸಕ್ಕರೆ ಖಾಯಿಲೆಗಳಿವೆಯಾ? 7. ನಿಮ್ಮ ದೈಹಿಕ ಸಮಸ್ಯೆಗಳು 8 ಸಹಿ, ದಿನಾಂಕ

“ಆಗಲಿ ಭಾಸ್ಕರ್ ನಾನು ಫಿಲಪ್ ಮಾಡಿ ತಂದು ಕೊಡ್ತೇನೆ.”
“ಥ್ಯಾಂಕ್ಸ್ ಮೇಡಂ.”


“ವಾಷಿಂಗ್ ಮಿಷನ್ ನಾಳೆ ಬರತ್ತಂತೆ.”
“ಹೌದು. ನೀವು ಅಡ್ಜಸ್ಟ್ ಮಾಡಿಕೊಂಡು ಬಟ್ಟೆ….”
“ಅದನ್ನು ನೀವು ಹೇಳಬೇಕಾ? ಡೋಂಟ್‌ವರಿ. ನಮ್ಮಲ್ಲಿ ಯಾವ ಸಮಸ್ಯೆಗಳೂ ಬರುವುದಿಲ್ಲ.”
ಎಲ್ಲರ ಊಟದ ನಂತರ ಸರಸಮ್ಮ, ರಾಜಲಕ್ಷ್ಮಿ, ಗೌರಮ್ಮ, ಭಾಸ್ಕರ, ಚಿನ್ಮಯಿಗೆ ಬಡಿಸಿದರು.
“ಅಮ್ಮಾ, ಗೋದಾಮಣಿ ಮೇಡಂ ಅವರ ಗ್ರೂಪ್‌ನ ಮಾಹಿತಿ ಸಂಗ್ರಹಿಸ್ತಾರೆ. ನಾಳೆ ಬಂದು ಮಹಡಿಯಲ್ಲಿರುವವರ ಮಾಹಿತಿ ಸಂಗ್ರಹಿಸ್ತೇನೆ.”
“ಹಾಗೇ ಮಾಡಪ್ಪ…” ಎಂದರು ರಾಜಲಕ್ಷ್ಮಿ.
ಅವನು ಹೊರಟಾಗ ಚಿನ್ಮಯಿ ಹಿಂದೆಯೇ ಬಂದಳು.

“ನಾನು ಮಹಡಿ ಮೇಲಿರುವವರ ಮಾಹಿತಿ ಸಂಗ್ರಹಿಸಲಾ?”
“ಹೇಗೆ ಸಂಗ್ರಹಿಸ್ತೀರಾ? ಅವರಿಗೆ ಓದು, ಬರಹ ಬರಲ್ವಲ್ಲಾ”
“ಏನ್ಮಾಡಲೀ…..?”
“ನಾವು ಹೋಗಿ ಅವರ ವಿವರಗಳನ್ನು ಒಂದು ಹಾಳೆಯಲ್ಲಿ ಬರೆದುಕೊಂಡು ಬನ್ನಿ. ಆಮೇಲೆ ಅವುಗಳನ್ನು ಪುಸ್ತಕದಲ್ಲಿ ದಾಖಲಿಸೋಣ.”
“ಕಾಲಂಗಳನ್ನು ಹಾಕಿಕೊಡ್ತೀರಾ?”
“ಭಾಸ್ಕರ ಹಾಕಿಕೊಟ್ಟು, ಹೇಳಿದ “ಎಚ್ಚರಿಕೆಯಿಂದ ವಿವರಗಳನ್ನು ನಮೂದಿಸಿ”
“ಓ.ಕೆ.” ಎಂದಳು ಚಿನ್ಮಯಿ.

ಮರುದಿನವೇ ವಾಷಿಂಗ್‌ಮಿಷನ್‌ಗಳು ಬಂದವು. ಈ ಮಧ್ಯೆ ಚಿನ್ಮಯಿ ಎಂ.ಎಸ್.ಸಿ.ಗೆ ಸೇರಬೇಕೆಂದಿರುವ ವಿಚಾರ ಭಾಸ್ಕರನಿಗೆ ತಿಳಿಯಿತು. ಅವನು ವಾರದಿಂದ ಗಮನಿಸುತ್ತಿದ್ದ “ಗೌರಮ್ಮನವರ ಕೆಲಸದ ಹೊರೆ ಹೆಚ್ಚಾಗಿತ್ತು. ಚಿನ್ಮಯಿ ಕಾಲೇಜಿಗೆ ಸೇರಿರಲಿಲ್ಲ. ಅವಳಿಗೆ ರಜವಿದ್ದುದರಿಂದ ತಾಯಿಗೆ ಬಡಿಸಲು ಸಹಾಯಮಾಡುತ್ತಿದ್ದಳು. ಅವಳು ಕಾಲೇಜ್‌ಗೆ ಹೋಗಲು ಶುರು ಮಾಡಿದ ಮೇಲೆ ಗೌರಮ್ಮನವರಿಗೆ ಕಷ್ಟವಾಗಬಹುದು ಅನ್ನಿಸಿತು. ಸಮಯ, ಸಂದರ್ಭನೋಡಿಕೊಂಡು ಈ ವಿಚಾರ ರಾಜಲಕ್ಷ್ಮಿಯವರಿಗೆ ಹೇಳಬೇಕು” ಎಂದುಕೊಂಡ.

ಒಂದು ವಾರದ ನಂತರ ಸಂದರ್ಭ ತಾನಾಗಿ ಒದಗಿತು. ಪ್ರೇಮಮ್ಮ ಒಂದು ದಿನ ತಲೆನೋವು, ಜ್ವರ ಎಂದು ಮಲಗಿದರು. ಹತ್ತಿರದ ಕ್ಲಿನಿಕ್‌ನಲ್ಲಿ ಔಷಧಿಕೊಡಿಸಲಾಯಿತು. ಮೂರು ದಿನಗಳಿಗೆ 1,500 ರೂ ಖರ್ಚಾಗಿತ್ತು.
“ಅಮ್ಮಾ, ಯಾರಾದರೂ ಸೇವಾ ಮನೋಭಾವ ಇರುವ ಡಾಕ್ಟರೊಬ್ಬರನ್ನು ಗೊತ್ತು ಮಾಡಿಕೊಳ್ಳಬೇಕು. ಅವರು ಪ್ರತಿವಾರ ಬಂದು ಉಚಿತ ತಪಾಸಣೆ ಮಾಡಬೇಕು.”
“ನನಗೂ ಹಾಗೆ ಅನ್ನಿಸ್ತಿದೆ….”
“ಅಷ್ಟೇ ಅಲ್ಲ. ಗೌರಮ್ಮನವರಿಗೆ ಯಾರ ಸಹಾಯವೂ ಇಲ್ಲದೆ ಅಡಿಗೆ, ತಿಂಡಿ ಮಾಡುವುದು ಕಷ್ಟವಾಗ್ತಿದೆ. ಒಬ್ಬರು ಅಸಿಸ್ಟೆಂಟ್ ಇದ್ದರೆ ಒಳ್ಳೆಯದು.”
“ಚಿನ್ಮಯಿ ಇದಾಳಲ್ಲಾ?”
“ಅವರು ಕಾಲೇಜಿಗೆ ಸೇರಿದ ಮೇಲೆ ಗೌರಮ್ಮನಿಗೆ ಯಾರು ಸಹಾಯ ಮಾಡ್ತಾರೆ?”
“ನೀನು ಹೇಳ್ತಿರೋದು ನಿಜ. ಆದರೆ ಯಾರೇ ಬಂದರೂ ಅವರಿಗೆ ಇರುವುದಕ್ಕೆ ಅವಕಾಶಕೊಡಕ್ಕಾಗಲ್ಲ. ಕೆಲಸದವಳೂ, ಪಾತ್ರೆ ಜಾಸ್ತೀಂತ ಗೊಣಗ್ತಾಳಂತೆ. ಅವಳಿಗೆ ‘ನೀನೇಯಾರನ್ನಾದರೂ ಕರೆದುಕೊಂಡು ಬಾ’ ಅಂತ ಹೇಳಿದ್ದೀನಿ.”

“ಡಾಕ್ಟರ್ ಬಗ್ಗೆ ಯೋಚನೆ ಮಾಡಿ ವಾಚ್‌ಮೆನ್‌ನ ಕೇಳಿದರೆ ಗೊತ್ತಾಗಬಹುದು.”
“ಆಗಲಪ್ಪ” ಎಂದರು ರಾಜಲಕ್ಷ್ಮಿ.
ಆ ರಾತ್ರಿ ಅವರಿಗೆ ನಿದ್ರೆ ಬರಲಿಲ್ಲ. ದೊಡ್ಡ ಜವಾಬ್ಧಾರಿ ವಹಿಸಿಕೊಂಡು ತಪ್ಪುಮಾಡಿದೆನೇನೋ?” ಎಂಬ ಭಯ ಕಾಡಿತು.

ಮರುದಿನ ತಿಂಡಿ ಕಾರ್ಯಕ್ರಮ ಮುಗಿಸಿ ಅವರು ಕುಳಿತಿದ್ದಾಗ ಭರತ್ ಫೋನ್ ಬಂತು. “ಅಮ್ಮಾ ಹೇಗಿದ್ದೀರಾ? ‘ವಾತ್ಸಲ್ಯ’ ಹೇಗೆ ನಡೆಯುತ್ತಿದೆ?”
“ಸದ್ಯಕ್ಕೆ ಚೆನ್ನಾಗಿದೆ. ಪ್ರತಿ ವಾರ ಡಾಕ್ಟರ್ ಬಂದು ಇಲ್ಲಿಯವರನ್ನು ನೋಡುವ ವ್ಯವಸ್ಥೆ ಆಗಬೇಕು. ‘ಉಚಿತಸೇವೆ’ ಅಂದರೆ ಇರ್ತಾರೋ ಇಲ್ಲವೋ ಅನುಮಾನ.”

“ಇಂದಿರಾ ಚಿಕ್ಕಮ್ಮ ನಿಮ್ಮ ಏರಿಯಾದಲ್ಲೇ ಕ್ಲಿನಿಕ್ ಇಟ್ಟಿದ್ದಾರೆ. ಅವರನ್ನು ಕೇಳಿ ಈ ವಾರದಲ್ಲಿ ನಿಮಗೆ ವಿಷಯ ತಿಳಿಸ್ತೀನಿ.”
“ಹಾಗೇ ಮಾಡಿ. ಯಾಕೋ ಒಂದೊಂದು ಸಲ ತುಂಬಾ ದೊಡ್ಡ ಜವಾಬ್ಧಾರಿ ತೆಗೆದುಕೊಂಡು ಬಿಟ್ಟಿದ್ದೀನಿ. ನಿರ್ವಹಿಸಕ್ಕಾಗತ್ತೋ ಇಲ್ಲವೋಂತ ಭಯವಾಗತ್ತೆ.”
“ನಾವೆಲ್ಲಾ ನಿಮ್ಮ ಜೊತೆಗಿದ್ದೇವೆ ಭಯಪಡಬೇಡಿ” ಎಂದರು ಭರತ್-ಇಂದಿರಾ.
ಅಂದು ಭಾಸ್ಕರ್ ಬರುವ ವೇಳೆಗೆ ಚಿನ್ಮಯಿ ವಿವರಗಳನ್ನು ಕಲೆಕ್ಟ್ ಮಾಡಿಟ್ಟಿದ್ದಳು.
“ಎಲ್ಲರೂ ವಿವರಗಳನ್ನು ಕೊಟ್ಟಿದ್ದಾರಾ?”
“ಕೆಲವರು ಸಂಪರ್ಕಿಸಬಹುದಾದ ವಿಳಾಸ, ದೂರವಾಣಿ ಸಂಖ್ಯೆ ಕೊಡಲಿಲ್ಲ. ನಮಗೆ ಯಾರೂ ಇಲ್ಲ” ಅಂದುಬಿಟ್ರು.
“ಸರಿ, ಇರುವ ವಿವರಗಳನ್ನು ಪುಸ್ತಕದಲ್ಲಿ ದಾಖಲಿಸೋಣ.”
“ಆ ಕೆಲಸ ನಾನು ಮಾಡ್ತೀನಿ. ಅಮ್ಮ ನಿಮ್ಮನ್ನು ಕರೆಯುತ್ತಿದ್ದಾರೆ…..”

“ಸರಿ ನಾನಿನ್ನು ಬರ‍್ತೀನಿ” ಎಂದು ಭಾಸ್ಕರ್ ಹೊರಟ. ರಾಜಲಕ್ಷ್ಮಿ ಭರತ್ ಫೋನ್ ಮಾಡಿದ್ದ ವಿಚಾರ ಹೇಳಿದರು.
“ಅಮ್ಮಾ ನೋಡೋಣ. ಆ ಡಾಕ್ಟರ್ ಒಪ್ಪಿಕೊಳ್ಳದಿದ್ದರೆ ಬೇರೆಯವರನ್ನು ಹುಡುಕೋಣ.”
“ಸರಿ ಭಾಸ್ಕರ. ಹತ್ತಿರದಲ್ಲಿ ಯಾವುದಾದರೂ ದೇವಸ್ಥಾನ ಇದೆಯಾ?”
“ನಡೆದುಹೋಗುವಷ್ಟು ದೂರದಲ್ಲಿ ಒಂದು ವಿನಾಯಕನ ದೇವಸ್ಥಾನ ಇದೆ. ಯಾಕಮ್ಮ?”
“ನಮ್ಮಲ್ಲಿ ಕೆಲವರು ಭಜನೆ ಕಾರ್ಯಕ್ರಮ ಆರಂಭಿಸಬೇಕೂಂತಿದ್ದಾರೆ. ಅವರನ್ನು ಆ ದೇವಸ್ಥಾನಕ್ಕೆ ಕಳಿಸೋಣಾಂತ.”
“ಇಲ್ಲೇ ಭಜನೆ ಮಾಡಬಹುದಲ್ಲಾ?”
“ಜಾಗ ಎಲ್ಲಿದೆ? ಕೆಳಗಡೆ ಹಾಲಿನಲ್ಲಿ ಚೇಂಬರ್ರ್ಸ್ ಮಾಡಿರುವುದರಿಂದ ಕುಳಿತು ಕೊಳ್ಳುವುದು ಕಷ್ಟ. ಮೇಲ್ಗಡೆ ಹಾಲ್‌ನಲ್ಲಿ ಈಗಾಗಲೇ ಸಾಕಷ್ಟು ವಸ್ತುಗಳನ್ನು ತುಂಬಿದ್ದೇವೆ.”
“ಭಜನೆ ಇರುವಾಗ ವೆರಾಂಡದ ಫರ್ನಿಚರ್ ಒಳಗೆ ಹಾಕೋಣ. ಆಗ ವೆರಾಂಡದಲ್ಲೇ ಕುಳಿತುಕೊಳ್ಳಬಹುದು.”
“ಸರಿ. ಈ ಗುರುವಾರದಿಂದ ಶುರುಮಾಡೋಣ.”

ಆ ರಾತ್ರಿ ಭಾಸ್ಕರನಿಗೆ ನಿದ್ರೆ ಮಾಡಲಾಗಲಿಲ್ಲ. ಅಮ್ಮಾ ವೃದ್ಧಾಶ್ರಮ ಆರಂಭಿಸಿ ತಪ್ಪು ಮಾಡಿದರೇನೋ?” ಅನ್ನಿಸಿತು. ಕೆಳಗಿನ ಕೋಣೆಗಳಲ್ಲಿದ್ದವರು ಶ್ರೀಮಂತರು. ತಮಗೇನು ಬೇಕೋ ಹಣಕೊಟ್ಟು ತರಿಸಿಕೊಳ್ಳುತ್ತಿದ್ದರು. ವಾಷಿಂಗ್ ಮಿಷನ್ ಕೂಡ ಟೈಂ ಟೇಬಲ್ ಪ್ರಕಾರ ಬಳಸುತ್ತಿದ್ದರು. ತಮಗಿಷ್ಟವಾದ ಪತ್ರಿಕೆ, ಮ್ಯಾಗಜೈಣ್ಸ್ ಕೊಂಡು ತರುತ್ತಿದ್ದರು. ತಮ್ಮಲ್ಲೇ ಗುಂಪು ಮಾಡಿಕೊಂಡು ವಾಕಿಂಗ್ ಹೋಗಿ ಬರುತ್ತಿದ್ದರು. ಆಟೋ ಮಾಡಿಕೊಂಡು ತಮಗೆ ಬೇಕಾದ ಕಡೆಗೆ ಹೋಗುತ್ತಿದ್ದರು.
“ಮೇಲಿನ ಕೋಣೆಗಳಲ್ಲಿದ್ದವರಿಗೆ ಶಿಸ್ತಿರಲಿಲ್ಲ. ಅವರಿಗೆ ನಯವಾಗಿ ಮಾತಾಡಿ ಗೊತ್ತಿರಲಿಲ್ಲ. ವಾಷಿಂಗ್ ಮಿಷನ್ ಬಳಸಲು ಅವರಲ್ಲಿ ಜಗಳವಾಗಬಹುದು” ಅನ್ನಿಸತೊಡಗಿತ್ತು.

ಗುರುವಾರ ಭಜನೆ ಕಾರ್ಯಕ್ರಮ ನಡೆಯಿತು. ಕೆಳಗಿನ ಕೋಣೆಯಲ್ಲಿದ್ದವರಲ್ಲಿ ಹಾಡುವವರು ಮಾತ್ರ ಬಂದರು. ಉಳಿದವರು ವಾಕಿಂಗ್ ಹೋದರು. ಮೇಲಿನವರೆಲ್ಲಾ ಬಂದು ಕುಳಿತು ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ರಾಜಲಕ್ಷ್ಮಿ ಅಲ್ಲೇ ಕುಳಿತಿದ್ದರಿಂದ ಅವರಿಗೆ ಮಾತಾಡಲಾಗಲಿಲ್ಲ. ಆದರೆ ಏಕಾಗ್ರತೆ ಕಂಡುಬರಲಿಲ್ಲ. 71/2 ಹೊತ್ತಿಗೆ ಭಜನೆ ಮುಗಿಯಿತು.
ರಾಜಲಕ್ಷ್ಮಿ ಒಳಗೆ ಹೋಗಲು ನಿಂತರು. ಆಗ ಪ್ರಶ್ನೆ ಕೇಳಿಸಿತು.
“ಗೌರಮ್ಮ ಚರುಪೇನೂ ಇಲ್ವಾ?”
“5 ಗಂಟೆಗೆ ಕಾಫಿ, ಅವಲಕ್ಕಿ ಆಗಿದೆ. 8 ಗಂಟೆಗೆ ಊಟ ಮಾಡ್ತೀರ. ಚರುಪು ಯಾಕೆ ಬೇಕು?” ಗೌರಮ್ಮ ಸಿಡುಕಿದರು. ಎಲ್ಲರೂ ಏನೂ ಮಾತನಾಡದೆ ತಮ್ಮ ಕೋಣೆ ಸೇರಿದರು.

ಒಂದು ವಾರ ಕಳೆಯಿತು. ಬೆಳಗಿನ ತಿಂಡಿ ಕಾರ್ಯಕ್ರಮ ಮುಗಿಯಿತು. ಮೇಲಿನಿಂದ ಗಲಾಟೆ ಕೇಳಿಸಿತು. ರಾಜಲಕ್ಷ್ಮಿ ಮೇಲಕ್ಕೆ ಹೋದರು. ಗೌರಮ್ಮ ಅವರನ್ನು ಹಿಂಬಾಲಿಸಿದರು. ಮೇಲ್ಗಡೆ ಚೆನ್ನಮ್ಮ, ರಾಧಮ್ಮ ಜಗಳವಾಡುತ್ತಿದ್ದರು.
“ಯಾಕೆ ಜಗಳವಾಡ್ತಿದ್ದೀರಿ?”
“ಅಮ್ಮಾ ವಾಷಿಂಗ್‌ಮಿಷನ್‌ಗೆ ನಾಳೆ ಬಟ್ಟೆ ಹಾಕು. ಇವತ್ತು ಬೇಡ ಅಂದಿದ್ದಕ್ಕೆ ಚೆನ್ನಮ್ಮ ಜಗಳ ತೆಗೆದಿದ್ದಾಳೆ” ರಾಧಮ್ಮ ಹೇಳಿದಳು.
“ಪ್ರತಿದಿನ ಇವರ ಜಗಳ ಇದ್ದಿದ್ದೇ. ದೊಡ್ಡ ವಾಷಿಂಗ್ ಮಿಷನ್ ಇಟ್ಟಿದ್ದಾರೆ. ಹೊಂದಿಕೊಂಡು, ಜಗಳವಿಲ್ಲದೆ ಕೆಲಸಮಾಡಬೇಕು ಅನ್ನುವುದೇ ಇಲ್ಲ” ಗೌರಮ್ಮ ಹೇಳಿದರು.
“ಗೌರಮ್ಮ ಒಂದು ಕೆಲಸ ಮಾಡಿ.”
“ಏನಮ್ಮ?”
“ಇವರೆಲ್ಲರಿಗೂ ಬಟ್ಟೆ ಒಗೆಯುವ ಸೋಪು ತಂದುಕೊಡಿ. ವಾಷಿಂಗ್‌ಮಿಷನ್ ತೆಗೆಸಿಬಿಡಿ. ಅನುಕೂಲ ಜಾಸ್ತಿಯಾದಾಗ ಕೆಲಸ ಕಡಿಮೇಯಾಗತ್ತೆ. ಜಗಳ ಜಾಸ್ತಿಯಾಗತ್ತೆ.”

“ಆಗಲಿ ಅಮ್ಮ. ಇವತ್ತೇ ವಾಷಿಂಗ್ ಮಿಷನ್ ತೆಗೆಸ್ತೇನೆ.”
“ಅವರು ಜಗಳವಾಡಿದ್ರೆ ನಮಗ್ಯಾಕೆ ಶಿಕ್ಷೆ? ಪ್ರೇಮಮ್ಮ ಕೇಳಿದರು.
“ಪ್ರೇಮಮ್ಮ ನೀವು ದೊಡ್ಡವರು. ಇವರನ್ನು ಕಂಟ್ರೋಲ್ ಮಾಡಬೇಕಲ್ವಾ? ಒಂದು ಟೈಂ ಟೇಬಲ್ ಮಾಡಿ ಅದರ ಪ್ರಕಾರ ಮಿಷನ್ ಉಪಯೋಗಿಸಕ್ಕಾಗಲ್ವಾ? ಪ್ರತಿಯೊಂದಕ್ಕೂ ನಾನು ತಲೆಕೆಡಿಸಿಕೊಳ್ಳಕ್ಕಾಗತ್ತದಾ? ಪುನಃ ಈ ವಿಚಾರದಲ್ಲಿ ಕಂಪ್ಲೇಂಟ್ ಬಂದರೆ ನಾನು ಹೇಳಿದಂತೆ ಮಾಡ್ತೀನಿ.”
“ಇಲ್ಲಮ್ಮ ಇನ್ನು ಮುಂದೆ ಹೀಗಾಗಲ್ಲ” ಎಂದರು ಪ್ರೇಮಮ್ಮ.

ಒಂದು ಸಾಯಂಕಾಲ ರಾಜಲಕ್ಷ್ಮಿ ಕಾಫಿ ಕುಡಿದು ಗೌರಮ್ಮನ ಜೊತೆ ಮಾತಾಡುತ್ತಿರುವಾಗ ಚಿನ್ಮಯಿ ಹೇಳಿದಳು. “ಅಮ್ಮಾ ನಿಮ್ಮನ್ನು ಹುಡುಕಿಕೊಂಡು ಯಾರೋ ದಂಪತಿಗಳು ಬಂದಿದ್ದಾರೆ. ವೆರಾಂಡದಲ್ಲಿ ಕೂಡಿಸಿದ್ದೇನೆ.”
ರಾಜಲಕ್ಷ್ಮಿ ವೆರಾಂಡಕ್ಕೆ ಬಂದರು.
“ನಮಸ್ಕಾರ ನಿಮ್ಮ ಪರಿಚಯವಾಗಲಿಲ್ಲ.”
“ನಾನು ಡಾ|| ಜಯಲಕ್ಷ್ಮಿ. ಇವರು ನನ್ನ ಪತಿ ಡಾ|| ಆದಿಶೇಷ್. ನಾವಿಬ್ಬರೂ ಮುಂದಿನ ರಸ್ತೆಯಲ್ಲಿದ್ದೇವೆ. ಭರತ್ ನಿಮ್ಮನ್ನು ಭೇಟಿಮಾಡಲು ಹೇಳಿದರು.”
“ನೀವು ಇಂದಿರಾ ಚಿಕ್ಕಮ್ಮನಾ?”

“ಹೌದು ಭರತ್ ನಿಮ್ಮ ಸಾಹಸದ ಬಗ್ಗೆ ತುಂಬಾ ಹೇಳಿದರು. ನಾವಿಬ್ಬರೂ ವಾರಕ್ಕೊಮ್ಮೆ ಬಂದು ಇಲ್ಲಿರುವವರ ಆರೋಗ್ಯ ತಪಾಸಣೆ ಮಾಡ್ತೀವಿ.”
“ತುಂಬಾ ಉಪಕಾರವಾಯ್ತು. ನಿಮಗೆ ಯಾವ ರೀತಿ ಥ್ಯಾಂಕ್ಸ್ ಹೇಳಬೇಕೋ ತಿಳಿಯುತ್ತಿಲ್ಲ.”
ಅಷ್ಟರಲ್ಲಿ ಗೌರಮ್ಮ ಹಾರ್ಲಿಕ್ಸ್ ತಂದರು.
“ನಾವು ನಿಮ್ಮ ವೃದ್ಧಾಶ್ರಮ ನೋಡಬಹುದಾ?”
“ಆಗಲಿ ಮೊದಲು ಹಾರ್ಲಿಕ್ಸ್ ತೆಗೆದುಕೊಳ್ಳಿ. ಗೌರಮ್ಮ ಕರೆದುಕೊಂಡು ಹೋಗಿ ತೋರಿಸ್ತಾರೆ.”
ಗೌರಮ್ಮ ಕರೆದುಕೊಂಡು ಹೋಗಿ ತೋರಿಸಿದರು.
“ಆದಷ್ಟೂ ಅನುಕೂಲವಾಡಿಕೊಟ್ಟಿದ್ದಾರೆ. ಪುಣ್ಯ ಮಾಡಿರಬೇಕು ಇಂತಹ ವೃದ್ಧಾಶ್ರಮದಲ್ಲಿರಲು” ಎಂದರು ಜಯಲಕ್ಷ್ಮಿ.

“ಕೆಳಗಿನ ರೂಂನಲ್ಲಿರುವವರು ವಿದ್ಯಾವಂತರು, ಶ್ರೀಮಂತರು. ತಿಂಗಳಿಗೆ 30,000 ರೂ. ಕೊಡ್ತಾರೆ. ಜೊತೆಗೆ ಬೇರೆಯವರ ಕಷ್ಟ ಸುಖಕ್ಕೆ ಸಹಾಯಮಾಡ್ತಾರೆ. ಆದರೆ ಮೇಲ್ಗಡೆ ರೂಮುಗಳಲ್ಲಿ ಇರುವವರದೇ ಸಮಸ್ಯೆ.”
“ನಿಮ್ಮ ಮೇಡಂ ಜೋರಾಗಬೇಕು. ಆಗ ಸರಿಹೋಗುತ್ತದೆ.”
ಅವರು ಕೆಳಗೆ ಬಂದಾಗ ವಾಕಿಂಗ್ ಮುಗಿಸಿಕೊಂಡು ಗೋದಾಮಣಿ, ಮಧುಮತಿ ಬಂದರು.
ಡಾ|| ಮಧುಮತಿ ಡಾ|| ಜಯಲಕ್ಷ್ಮಿಯವರನ್ನು ನೋಡಿ “ಮೇಡಂ ನೀವಿಲ್ಲಿ! ರಿಯಲಿ ಐ ಯಾಮ್ ಸರ್‌ ಪ್ರೈಸ್ಡ್ “
“ನಿನ್ನನ್ನು ನೋಡಿ ನನಗೂ ಆಶ್ಚರ್ಯವಾಗ್ತಿದೆ.”
“ನನ್ನ ಬಗ್ಗೆ ಆಮೇಲೆ ಹೇಳ್ತೀನಿ. ನೀವೇನಿಲ್ಲಿ?”
ಜಯಲಕ್ಷ್ಮಿ ತಾವು ಬಂದ ಉದ್ದೇಶ ಹೇಳಿದರು.

“ಮೇಡಂ, ನೀವು ಬರುವುದಾದರೆ ನಾನು ಎಲ್ಲಾ ರೀತಿಯ ಸಹಾಯ ಮಾಡ್ತೀನಿ.”
“ನೀನೇ ಈ ಕೆಲಸ ಮಾಡಬಹುದಿತ್ತು.”
“ನನ್ನ ಮಾತು ಯಾರೂ ಕೇಳಲ್ಲ.”
ಜಯ ಲಕ್ಷ್ಮಿ ಜೋರಾಗಿ ನಕ್ಕು ಮಧುಮತಿ ಬೆನ್ನು ತಟ್ಟಿದರು.
ಆ ಭಾನುವಾರ ಬೆಳಿಗ್ಗೆ ಒಂಭತ್ತು ಗಂಟೆಗೆ ತಾವು ಬರುವುದಾಗಿ ಡಾ|| ಜಯಲಕ್ಷ್ಮಿ ದಂಪತಿಗಳು ಹೇಳಿದರು.

“ಅಷ್ಟು ಬೇಗ ಇವರೆಲ್ಲರೂ ಸಿದ್ಧವಾಗಬೇಕಲ್ಲಾ?”
“ಆಗ್ತಾರೆ. ನೀವು ಅವರಿಗೆ ಹೇಳಿರಿ. ಡಾಕ್ಟರ್ ಬಂದಾಗ ನೀವು ತೋರಿಸಿಕೊಳ್ಳಬೇಕು. ನಿಮಗೋಸ್ಕರ ಅವರು ಪದೇ ಪದೇ ಬರಲ್ಲಾಂತ.”
ರಾಜಲಕ್ಷ್ಮಿ “ಆಗಲಿ ಡಾಕ್ಟರ್” ಎಂದರು.

(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : 
https://www.surahonne.com/?p=41896

-ಸಿ.ಎನ್. ಮುಕ್ತಾ

4 Responses

  1. ಯಾವುದೇ ಜವಾಬ್ದಾರಿ ತೆಗೆದುಕೊಂಡರೂ ಪ್ರಾರಂಭ ಎಷ್ಟು ಕಷ್ಟ ಎನ್ನುವುದರ.. ಝಲಕ್..ತುಂಬಾ ಚೆನ್ನಾಗಿ ಅನಾವರಣ ಗೊಳಿಸಿದ್ದೀರಾ ಮೇಡಂ… ಕುತೂಹಲವಂತೂ..ಮುಂದುವರೆದಿದೆ

  2. ನಯನ ಬಜಕೂಡ್ಲು says:

    ಸೊಗಸಾಗಿದೆ

  3. ಪದ್ಮಾ ಆನಂದ್ says:

    ಯಾವುದೇ ಒಂದು ಕೆಲಸ, ಅದರಲ್ಲೂ ಸಾಮಾಜಿಕ ಕೆಲಸ ಮಾಡಲು ಹೊರಟಾಗ ಎದುರಾಗುವ ಎಡರು ತೊಡರುಗಳೂ ಇಲ್ಲೂ ಬಂದದ್ದು ಕಾದಂಬರಿಯ ನೈಜತೆಯನ್ನು ಎತ್ತಿ ಹಿಡಿಯುವಲ್ಲಿ ಸಹಕಾರಿಯಾಗಿದೆ. ಅಭಿನಂದನೆಗಳು.

  4. ಶಂಕರಿ ಶರ್ಮ says:

    ಕಾದಂಬರಿಯ ಪ್ರತಿಯೊಂದು ಭಾಗವೂ ಕುತೂಹಲಕಾರಿಯಾಗಿ ಮೂಡಿಬರುತ್ತಿದೆ. ಧನ್ಯವಾದಗಳು ಮೇಡಂ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: