ಓಂ ನಮಃ ಶಿವಾಯ

Share Button


ಶಿವರಾತ್ರಿ ಬಂದಿದೆ ಬನ್ನಿ, ಆ ಶಿವನ ನೆನೆಯೋಣ
ಎಲ್ಲರ ಆತ್ಮದಿ, ಈಶ್ವರ ತತ್ವವ, ನಿತ್ಯ ಕಾಣೋಣ
ಭಕ್ತಿ ಪ್ರಿಯನು, ಭಕ್ರರ ಪ್ರಿಯನು, ಈತ ಸದಾಶಿವ
ಬೇಡಿಕೊಂಡರೆ ಶ್ರದ್ಧೆಯಿಂದ, ಹರಿವುದು ಈ ಭª
ರಾಗ ದ್ವೇಷ ಅಳಿದರೆ, ಉದ್ಧಾರ ಈ ಜೀವ
ಏಕಾಗ್ರತೆಯಿಂದ ಭಜಿಸಿದರೆ, ಧನ್ಯ ಶುದ್ಧ ಭಾವ


ಮಾಘ ಮಾಸ ಕೃಷ್ಣ ಪಕ್ಷದ ಚತುದರ್ಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭದಿನ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ ಮುತ್ತೆöÊದೆಯರು ಪತಿಯ ಶ್ರೇಯೋಭಿವೃದ್ದಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ ಸುಖ, ಶಾಂತಿ ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು.

ಶಿವರಾತ್ರಿ ಆಚರಣೆಯ ಕುರಿತಾಗಿ ಪ್ರಚಲಿತದಲ್ಲಿರುವ ಕತೆಯಿದು. ಹಿಂದೆ ಬೇಡನೊಬ್ಬ ಕಾಡಿನಲ್ಲಿ ಬೇಟೆಗಾಗಿ ತೆರಳಿದ್ದ. ದಿನವಿಡಿ ಅಲೆದರೂ ಆತನಿಗೆ ಯಾವುದೇ ಬೇಟೆ ಸಿಗಲಿಲ್ಲ. ಬೇಟೆ ಅರಸಿ ಹೊಡ ಬೇಡ ದಾರಿ ತಪ್ಪಿ ಅರಣ್ಯದಲ್ಲೇ ಅಲೆಯತೊಡಗಿದ. ಅದಾಗಲೇ ಸಂಜೆಯಾಗಿತ್ತು. ಕ್ರೂರ ಪ್ರಾಣಿಗಳು ಆತನನ್ನು ಸುತ್ತುವರೆಯತೊಡಗಿದವು. ಭಯಗ್ರಸ್ತನಾದ ಬೇಡ ಮರವೇರಿದ ಮನದಲ್ಲೇ ಶಿವನನ್ನು ಧ್ಯಾನಿಸುತ್ತಾ ಮರದ ಎಲೆಗಳನ್ನು ಕಿತ್ತು ಕೆಳಗಡೆ ಹಾಕತೊಡಗಿದ. ಆ ಎಲೆಗಳು ಅವನಿಗರಿವಿಲ್ಲದಂತೆಯೇ ಕೆಳಗಡೆಯಿದ್ದ ಶಿವಲಿಂಗದ ಎಲೆ ಬೀಳತೊಡಗಿದವು. ಕಾಕತಾಳೀಯವೆಂದರೆ ಆತ ಏರಿದ್ದ ಮರ ಬಿಲ್ವಮರವಾಗಿತ್ತು. ಶಿವರಾತ್ರಿಯಂದು ಪೂರ್ತಿ ಜಾಗರಣೆಯಿದ್ದು. ಬಿಲ್ಪಪತ್ರೆಯನ್ನು ಶಿವನಿಗೆ ಅರ್ಪಿಸಿದ ಬೇಡನಿಗೆ ಶಿವ ಅಭಯ ನೀಡಿದ. ಶಿವನೇ ಆತನನ್ನು ರಕ್ಷಿಸಿದ ಎಂಬ ಸುದ್ದಿ ಹರಡಿ ಭಕ್ತರು ಶಿವರಾತ್ರಿಯಂದು ಶಿವನನ್ನು ಪೂಜಿಸಲು ಆರಂಭಿಸಿದರು. ಪುಣ್ಯದ ಫಲವಾಗಿ ಬೇಡ ಮುಂದಿನ ಜನ್ಮದಲ್ಲಿ ರಾಜಾ ಚಿತ್ರಭಾನುವಾಗಿ ಜನಿಸಿದ ಎಂಬುದು ಕಥೆ. ಮಹಾಭಾರತದಲ್ಲಿ ಬರುವ ಈ ಕಥೆಯನ್ನು ಮರಣಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಹೇಳಿದನೆಂಬುದು ಪ್ರತೀತಿ. ತ್ರಯೋದಶಿಯ ಚತುರ್ದಶಿಯಲ್ಲಿ ಅಂತರ್ಗತವಾಗಿದ್ದರೆ ಅದು ಶಿವಶಕ್ತಿಯೋಗವಾಗುತ್ತದೆ. ಅದು ಶಿವಶಕ್ತಿಯೋಗವಾಗುತ್ತದೆ. ಅದೇ ಶಿವರಾತ್ರಿಯ ಸಮಯವೆಂದು ಉಕ್ತಿಯೊಂದರಲ್ಲಿ ಉಲ್ಲೇಖವಿದೆ. ಈ ಶುಭ ಪುಣ್ಯದಿನದಂದು ಬ್ರಹ್ಮ, ವಿಷ್ಣು ಆದಿಯಾಗಿ ಶಿವನನ್ನು ಪೂಜಿಸಿದ್ದು ಶಿವನೇ ತನಗೆ ಶಿವರಾತ್ರಿ ಪ್ರಿಯವಾದ ದಿನವೆಂದು ಹೇಳಿರುವನೆಂದು ಪ್ರತೀತಿ ಇದೆ,
ಶಿವಪುರಾಣದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆ— ಸ್ಕಂದ ಪುರಾಣದ ಬೇಡ ಚಂದನದ ಕಥೆ— ಗರುಡ ಮತ್ತು ಅಗ್ನಿ ಪುರಾಣಗಳ ಬೇಡ ಸುಂದರ ಸೇನನ ಕಥೆ— ಈ ಎಲ್ಲ ಕಥೆಗಳಲ್ಲೂ ಒಂದು ವಿಶೇಷವಾದ ಸಾಮ್ಯತೆಯನ್ನು ಕಾಣಬಹುದು. ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಅವರೆಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು.

ದೇವತೆಗಳು ಮತ್ತು ಅಸರರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡ್ತಿರಬೇಕಾದ್ರೆ ಮೊದಲು ಮಡಿಕೆ ತುಂಬ ಹಾಲಾಹಲ ಉತ್ಪತ್ತಿಯಾಯಿತು. ಆದರೆ ದೇವತೆಗಳು ಅಸುರರು ಯಾರೂ ಆ ಹಾಲಾಹಲವನ್ನು ಕುಡಿಯೋಕೆ ಮುಂದಾಗಲಿಲ್ಲ. ಆ ಹಾಲಹಲ ಇಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮರ್ಥ್ಯವನ್ನು ಹೊಂದಿತ್ತು. ಹೀಗಾಗಿ ಲೋಕ ಕಲ್ಯಾಣಕ್ಕಾಗಿ ಪರಶಿವನೇ ಆ ಹಾಲಹಲವನ್ನು ಕುಡಿದುಬಿಟ್ಟು. ಅದೇ ಸಮಯಕ್ಕೆ ಪತ್ನಿ ಪಾರ್ವತಿ ದೇವಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು.ನಿದ್ರಿಸುತ್ತಿದ್ದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ. ಹೀಗಾಗಿ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು. ಹೀಗಾಗಿ ಈ ಪವಿತ್ರ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ.



ಯಮಪಾಶದಿಂದ, ಮಾರ್ಕಂಡೇೆಯನ ಕಾಪಾಡಿದವ
ಕಣ್ಣನು ಪಡೆದು ದಿಣ್ಣನ ನಾ, ಕಣ್ಣಪ್ಪನಾಗಿ ಮಾಡಿದವ
ಕೋಲೂರ ಕೊಡಗೂಸ ಮುಗ್ಧತೆ ಮೆಚ್ಚಿ, ಹಾಲನು ಕುಡಿದನಿವ
ರಾವಣ ಮಿಡಿದ ಕರುಳ ವಾದ್ಯಕೆ, ಕೊಟ್ಟನು ಆತ್ಮಲಿಂಗವ


ವೈಜ್ಞಾನಿಕವಾಗಿ ಶಿವರಾತ್ರಿಯ ಆಚರಣೆ:- ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಎಲ್ಲಾ ಕಾಲ ವ್ಯತ್ಯಾಸಕ್ಕೆ ಈ ನಮ್ಮ ದೇಹ ಹೊಂದಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಬಹು ಮುಖ್ಯ. ಈ ಸಮಯದಲ್ಲಿ ಚಳಿಗಾಲವು ಪ್ರಾರಂಭಗೊಳ್ಳುವುದು ಅಂದರೆ ಈ ದಿನದಂದು ಚಳಿಗಾಲ ಉತ್ತುಂಗದಲ್ಲಿದ್ದು. ಅಂದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತದೆ. ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ (ನೆಗಡಿ, ಕೆಮ್ಮು ಶೀತ ಮತ್ತಿತರೆ) ಬರುವುದು. ಈ ದಿನದಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ ಅಂದು ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ. ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ. ಪೂಜಿಸುವ ದೇಗುಲವನ್ನು ವಾಸ್ತುವಿನ ಪ್ರಕಾರ ಕಟ್ಟಿರುತ್ತಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಗುರುತ್ವಾಕರ್ಷಣವಿದ್ದು ಅದನ್ನು ಶಿವ ಶಕ್ತಿಯೆಂದು ಕರೆಯುವರು. ಇಲ್ಲಿ ಮಂತ್ರಗಳನ್ನು ಪಠಿಸುತ್ತಾ ವಿಶಿಷ್ಟ. ಕಲ್ಲಿನಿಂದ ಕೆತ್ತಿರುವ ಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದರಿಂದ ಸುತ್ತ ಮುತ್ತಲಿಗೆಲ್ಲ ಹೆಚ್ಚಿನ ಶಕ್ತಿ ಬರುವುದೆಂಬ ನಂಬಿಕೆ ಇದೆ. ಈ ಹಿಂದೆ ನಾನು ಬರೆದ ಪೂಜಾವಿಧಾನದಂತೆ ಷೋಡಶಾಂಗ ಪೂಜೆ ಮಾಡುವುದು ವಾಡಿಕೆ.

ವೇದೋಕ್ತ ಪೂಜೆ ಮತ್ತು ಆಚರಣೆ:- ರಾತ್ರಿಯು ಅಜ್ಞಾನದ ಸಂಕೇತ ಮತ್ತು ಆ ವೇಳೆಯಲ್ಲಿ ನಿದ್ರೆ ಮಾಡದೇ ಎಚ್ಚರವಾಗಿರುವುದು ತಿಳುವಳಿಕೆಯ ಕಡೆಗೆ ಹೋಗುತ್ತಿರುವ ಸಂಕೇತ ಹೀಗೆ ಶಿವರಾತ್ರಿಯ ರಾತ್ರಿ ಜಾಗರಣೆ ಮಾಡುವುದು ಮೋಕ್ಷದ ಕಡೆಗೆ ಹೋಗುವುದು ಎಂದು ತತ್ವಗಳು ತಿಳಿಸುತ್ತದೆ. ಉಪವಾಸ ಮಾಡುವುದು ಎಂದರೆ ದೇವರಿಗೆ ಹತ್ತಿರವಾಗಿರುವುದು ದೇವತೆ ಬಗ್ಗೆ ಚಿಂತಿಸುತ್ತಿರುವುದು ಎಂದು ಅರ್ಥ. ಹೀಗೆ ಆತನ ಧ್ಯಾನದಲ್ಲಿ ಇರುವಾಗ ಊಟ ತಿಂಡಿಯ ಕಡೆ ಗಮನ ಹೋಗುವುದಿಲ್ಲ. ಜಾಗರಣೆ ಎಂದರೆ ಜಾಗ್ಯತರಾಗಿರೋದು ಎಂದು ರಾತ್ರಿಯಲ್ಲಿ ಜಾಗರಣೆ ಮಾಡುವುದರ ಅರ್ಥವೇನು? ರಾತ್ರಿ ಎನ್ನುವುದು ತಮೋ ಗುಣದ ಪ್ರತೀಕ, ಆಲಸ್ಯ, ನಿದ್ರೆ, ಅಹಂಕಾರ ಅಜ್ಞಾನಗಳ ದ್ಯೋತಕ ನಿಶೆ. ಆ ಸಮಯದಲ್ಲಿ ಜಾಗೃತವಾಗಿರಬೇಕು ಎಂದರೆ ಅವುಗಳಿಂದ ಜಾಗೃತರಾರಬೇಕು ಎಂಬರ್ಥ. ಹಾಗೆ ಜಾಗೃತರಾಗಿರುವುದಕ್ಕೆ ನಮಗೆ ಸಹಾಯವನ್ನು ಮಾಡುವವನು ದೇವರು. ಆ ದೇವರನ್ನು ಸ್ಮರಿಸುತ್ತ ಈ ತಪೋ ಗುಣಗಳಿಂದ ಜಾಗೃತರಾಗಿರಬೇಕು ಎನ್ನುವುದರ ಪ್ರತೀಕ ಶಿವರಾತ್ರಿಯ ಜಾಗರಣೆ. ಆ ದಿನ ಬೆಳಗ್ಗೆ ಬೇಗ ಎದ್ದು ಅಭ್ಯಂಜನ ಮಾಡಿ ಶಿವನಿಗೆ ಅಭಿಷೇಕ ಮಾಡುವುದು ರೂಢಿ, ಇಲ್ಲಿ ದಿನವನ್ನು ಮೂರು ಭಾಗಗಳನ್ನಾಗಿ ಮಾಡಿ ರುದ್ರಾಭಿಷೇಕಯುಕ್ತ ಪೂಜೆಯನ್ನು ಮಾಡುವುದು ವಾಡಿಕೆ. ರುದ್ರ ನಮಕ ಚಮಕಗಳನ್ನ ಉಚ್ಚರಿಸುವುದರಿಂದ ಉಸಿರಾಟಕ್ಕೂ ಹೆಚ್ಚಿನ ಶಕ್ತಿ ಬರುವುದು ಮತ್ತು ಬಾಯಿಯಿಂದ ಹೊರಹೊಮ್ಮುವ ತರಂಗಗಳಿಂದ ಸುತ್ತ ಮುತ್ತಲಿನ ಪರಿಸರ ಶಕ್ತಿಯುತವಾಗುವುದು.

ಮೊದಲಿಗೆ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕವನ್ನೂ ಮಾಡುವರು. ಇದಕ್ಕೆಂದೇ ಮಹಾನ್ಯಾಸವೆಂಬ ಪ್ರಕಾರವಿದೆ. ನಂತರ ನೀರಿನ ಅಭಿಷೇಕವನ್ನು ನಿರಂತರವಾಗಿ ಮಾಡುವರು. ಅಭಿಷೇಕ್ಕಾಗಿಯೇ ಪ್ರತ್ಯೇಕವಾದ ಪಾತೆ ಇರುವುದು. ಅದರ ತಳಭಾಗದಲ್ಲಿ ರಂಧ್ರವಿದ್ದು ಅದನ್ನು ಲಿಂಗದ ಮೇಲೆ ತೂಗು ಬಿಟ್ಟಿರುವರು. ಅದರೊಳಗೆ ನೀರು ತುಂಬಿಸಿದರೆ ಸಣ್ಣದಾಗಿ ನೀರು ಲಿಂಗದ ಮೇಲೆ ಬೀಳುವುದು. ಕೃಷ್ಣ ಯಜುರ್ವೇದದ ಪ್ರಕಾರವಾದ ರುದ್ರ ನಮಕ ಮತ್ತು ಚಮಕಗಳನ್ನು ಅಭಿಷೇಕದ ಸಂದರ್ಭದಲ್ಲಿ ಪಠಿಸುತ್ತಾರೆ. ಹನ್ನೊಂದು ಬಾರಿ ನಮಕ ಚಮಕಗಳನ್ನು ಹನ್ನೊಂದು ಜನ ಋತ್ವಿಕರು ಪಠಣ ಮಾಡುವುದಕ್ಕೆ ಏಕಾದಶವಾದ ರುದ್ರಾಭಿಷೇಕ ಎಂದು ಕರೆಯುವರು. ಮೊದಲಿಗೆ ಚಮಕದ ಮೂರನೆಯ ಭಾಗವನ್ನು ಉಚ್ಚರಿಸಿ. ನಂತರ ಒಂದು ನಮಕದ ಭಾಗವನ್ನೂ ನಂತರ ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ತದನಂತರ ಎರಡನೆಯ ನಮಕದ ಭಾಗವನ್ನೂ ಮತ್ತು ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ಹೀಗೆ ನಮಕಗಳ ಹನ್ನೊಂದೂ ಭಾಗವನ್ನು ಪಠಿಸಿ ಅಭಿಷೇಕ ಮಾಡುವರು. ಇದಕ್ಕೆ ಒಂದು ರುದ್ರವೆಂದು ಕರೆಯುತ್ತಾರೆ. ಬೆಳಗ್ಗೆ ಮತ್ತು ರಾತ್ರಿ ಹೀಗೆ 24 ಗಂಟೆಗಳೂ ಭಗವನ್ನಾಮಸ್ಮರಣೆ ಮಾಡುತ್ತಾ ಜಾಗರಣೆ ಮಾಡುವುದು ಪರಿಪಾಠ, ಅಂದು ಊಟ ಮಾಡದೆ ಅಲ್ಪಾಹಾರ ಸೇವನೆ ಮಾಡುವರು.

ಅಭಿಷೇಕಪ್ರಿಯ ಎಂದೇ ಖ್ಯಾತನಾದ ಶಿವನಿಗೆ ದಿನವಿಡಿ ಹಾಲು, ಜೇನುತುಪ್ಪ ಹಾಗೂ ನೀರಿನ ಅಭಿಷೇಕ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ಬಿಲ್ಪಪತ್ರೆ, ತುಳಸಿ, ಶ್ರೀಗಂಧ, ಹಾಲು, ಜೇನುತುಪ್ಪಗಳಿಂದ ಅಭಿಷೇಕ ನಡೆಯುತ್ತದೆ. ಶಿವ ಪಂಚಾಕ್ಷರಿ ಮಂತ್ರ “ಓ ನಮಃ ಶಿವಾಯ” ಹರ ಹರ ಮಹಾದೇವ ಶಂಭೋ ಶಂಕರ ಶಿವದೇವಾಲಯಗಳಲ್ಲಿ ಮಾರ್ದನಿಸುತ್ತದೆ. 4 ಆಯಾಮಗಳ ರುದ್ರಪಠಣ ಶಿವರಾತ್ರಿ ಪೂಜೆಯ ವಿಶೇಷ ಶಿವಪುರಾಣದ ಪ್ರಕಾರ ರುದ್ರ ಹಾಗೂ ಚಮೆಗಳ ಪಠಣ ಶಿವನಿಗೆ ಅಚ್ಚುಮೆಚ್ಚು ದೇವಾಲಯಗಳಲ್ಲಿ ಸಂಜೆ 6 ಗಂಟೆಯಿಂದ ಮೊದಲ್ಗೊಂಡು ಮುಂಜಾನೆ 6 ಗಂಟೆಯವರೆಗೆ ರುದ್ರಪಠಣದ ಮೂಲಕ ಶಿವ ಸ್ತುತಿ ಜಾಗರಣೆ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಮಂಗಳಾರತಿ ಮಾಡಲಾಗುತ್ತದೆ. ಬೆಳಗ್ಗೆ 6 ಗಂಟೆಗೆ ಮಹಾಮಂಗಳಾರತಿ ಆಚರಣೆ ಮೂಲಕ ಜಾಗರಣೆ ಮುಕ್ತಾಯಗೊಳ್ಳುತ್ತದೆ. ಮೊದಲನೆಯ ಆಯಾಮದಲ್ಲಿ ಹಾಲು, ಎರಡನೆಯ ಆಯಾಮದಲ್ಲಿ ಮೊಸರು, ಮೂರನೆಯ ಆಯಾಮದಲ್ಲಿ ತುಪ್ಪ ಹಾಗೂ 4ನೆಯ ಆಯಾಮದಲ್ಲಿ ಜೇನುತುಪ್ಪಗಳಿಂದ ಶಿವನಿಗೆ ಅಭಿಷೇಕ ಮಾಡುವ ಪದ್ಧತಿಯೂ ಕೆಲವೆಡೆ ಇದೆ.ಶಿವನ ಸ್ಮರಣೆ, ಪ್ರಾರ್ಥನೆ, ಉಪವಾಸ ಇವುಗಳ ಮೂಲಕ ಭಕ್ತರು ಈ ರಾತ್ರಿಯಿಡೀ ಜಾಗರಣೆ ಮಾಡುತ್ತಾರೆ. ಆಚರಿಸುತ್ತಾರೆ. ಇತರರು ಜ್ಯೋತಿರ್ಲಿಂಗಗಳಿಗೆ ತೀರ್ಥಯಾತ್ರೆ ಮಾಡುತ್ತಾರೆ ಈ ಹಬ್ಬವು 5ನೇ ಶತಮಾನದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಈ ಹಬ್ಬವನ್ನು ಕಾಶ್ಮೀರ ಪ್ರದೇಶದ ಶಿವ ಭಕ್ಕತು ಹರ-ರಾತ್ರಿ ಅಥವಾ ಉಚ್ಚಾರಣಾನುಗುಣವಾಗಿ ಸರಳವಾದ ಹೇರತ್ ಎಂದು ಕರೆಯುತ್ತಾರೆ.

ಚಿಂತನೆಯ ಹಬ್ಬ. ಶಿವನ ಜಾಗರಣೆ ರಾತ್ರಿ,ಮಹಾಶಿವರಾತ್ರಿಯ ಸಮಯದಲ್ಲಿ ನಾವು ವಿನಾಶ ಮತ್ತು ಪುನರುತ್ಪಾದನೆಯ ನಡುವಿನ ಮಧ್ಯಂತರದ ಕ್ಷಣಕ್ಕೆ ತರಲ್ಪಡುತ್ತೇನೆ. ಹೆಚ್ಚಿನ ಹಿಂದೂ ಹಬ್ಬಗಳಿಗಿಂತ ಭಿನ್ನವಾಗಿ ಮಹಾಶಿವರಾತ್ರಿಯನ್ನು ರಾತ್ರಿಯಲ್ಲಿ ಆಚರಿಸಲಾಗುತ್ತೆ. ಮಹಾ ಶಿವರಾತ್ರಿಯು ಆತ್ಮಾಲೋಕನ ಗಮನ, ಉಪವಾಸ, ಉಪಾವಸ, ಶಿವನ ಧ್ಯಾನ, ಸ್ವಯಂ ಅಧ್ಯಯನ, ಸಾಮಾಜಿಕ ಸಾಮರಸ್ಯ ಮತ್ತು ಶಿವ ದೇವಾಲಯಗಳಲ್ಲಿ ರಾತ್ರಿಯಿಡೀ ಜಾಗರಣೆ ಮಾಡುವುದಕ್ಕೆ ಗಮನಾರ್ಹವಾದ ಗಂಭೀರ ಘಟನೆಯಾಗಿದೆ.

ಶೈವ ಸಂಪ್ರದಾಯದ ಒಂದು ದಂತಕಥೆಯ ಪ್ರಕಾರ, ಶಿವನು ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಸ್ವರ್ಗೀಯ ನೃತ್ಯವನ್ನು ಪ್ರದರ್ಶಿಸುವ ರಾತ್ರಿ ಇದು. ಸ್ತುತಿಗೀತೆಗಳ ಪಠಣ. ಶಿವನು ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಸ್ವರ್ಗೀಯ ನೃತ್ಯವನ್ನು ಪ್ರದರ್ಶಿಸುವ ರಾತ್ರಿ ಇದು. ಸ್ತುತಿಗೀತೆಗಳ ಪಠಣ, ಶಿವ ಶಾಸ್ತ್ರಗಳ ಪಠಣ ಮತ್ತು ಭಕ್ತರ ಸಮೂಹಗಾಯನವು ಈ ವಿಶ್ವ ನೃತ್ಯದೊಂದಿಗೆ ಸೇರುತ್ತದೆ. ಮತ್ತು ಎಲ್ಲೆಡೆ ಶಿವನ ಉಪಸ್ಥಿತಿಯನ್ನು ನೆನಪಿಸಿಕೊಳ್ಳುತ್ತದೆ. ಮತ್ತೊಂದು ದಂತಕಥೆಯ ಪ್ರಕಾರ, ಶಿವ ಮತ್ತು ಪಾರ್ವತಿ ವಿವಾಹವಾದ ರಾತ್ರಿ ಇದು. ಲಿಂಗದಂತಹ ಶಿವ ಪ್ರತಿಮೆಗಳಿಗೆ ಅರ್ಪಣೆ ಮಾಡುವುದು. ಯಾವುದೇ ಹಿಂದಿನ ಪಾಪಗಳನ್ನು ನಿವಾರಿಸಲು ಈ ದಿನದಂದು, ಶಿವನು ಸಮುದ್ರ ಮಂಥನದ ಸಮಯದಲ್ಲಿ ಉತ್ಪತ್ತಿಯಾದ ಹಾಲಾಹಲವನ್ನು ನುಂಗಿದಾಗ ಪಾರ್ವತಿ ಅವರ ಕಂಠದಲ್ಲಿ ಹಿಡಿದಳಂತೆ. ಆಗ ಶಿವ ನೀಲಕಂಠ ಎಂಬ ವಿಶೇಷಣವನ್ನು ಪಡೆದು ಈ ಉತ್ಸವಕ್ಕೆ ನೃತ್ಯ ಸಂಪ್ರದಾಯದ ಮಹತ್ವವು ಐತಿಹಾಸಿಕ ಬೇರುಗಳನ್ನು ಹೊಂದಿದೆ. ಮಹಾಶಿವರಾತ್ರಿಯು ಕೋನಾರ್ಕ್, ಖಜುರಾಹೋ, ಪಟ್ಟದಕಲ್ಲು, ಮೊದೇರಾ ಮತ್ತು ಚಿದಂಬರಂನಂತಹ ಪ್ರಮುಖ ಹಿಂದೂ ದೇವಾಲಯಗಳಲ್ಲಿ ವಾರ್ಷಿಕ ನೃತ್ಯ ಉತ್ಸವಗಳಿಗೆ ಕಲಾವಿದರ ಐತಿಹಾಸಿಕ ಸಂಗಮವಾಗಿ ಕಾರ್ಯ ನಿರ್ವಹಿಸಿದೆ. ಖಜುರಾಹೊ ಶಿವ ದೇವಾಲಯಗಳಲ್ಲಿ ದೇವಾಲಯ ಸಂಕೀರ್ಣದ ಸುತ್ತಲೂ ಮೈಲುಗಟ್ಟಲೆ ಬೀಡುಬಿಟ್ಟಿದ್ದ ಶೈವ ಯಾತ್ರಿಕರನ್ನು ಒಳಗೊಂಡ ಮಹಾ ಶಿವರಾತ್ರಿಯ ಪ್ರಮುಖ ಜಾತ್ರೆ ಮತ್ತು ನೃತ್ಯ ಉತ್ಸವವನ್ನು 1864 ರಲ್ಲಿ ಅಲೆಕ್ಷಾಂಡರ್ ಕನ್ನಿಂಗ್ಯಾಮ್ ದಾಖಲಿಸಿದ್ದಾರೆ.

ಕರಗುವ ಮಂಜಿನ ಪರ್ವತದಲ್ಲೇ, ನಿಶ್ಚಲ ಕೈಲಾಸ
ನೆನೆದರೆ ಧೈರ್ಯ, ಭೂತನಾಥನ ಸ್ಮಶಾನವಾಸ
ಶಿವ ಪುಷ್ಪಕೆ ಹೃದಯ ತುಂಬಿ, ಶುದ್ದತೆಗೆ ಉಪವಾಸ
ಶರಣರ ವಚನಕೆ, ದಾಸರ ಹಾಡಿಗೆ, ಈತನ ಮಂದಹಾಸ

ಎನ್.ವ್ಹಿ ರಮೇಶ್

4 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ

  2. ಮಾಹಿತಿ ಪೂರ್ಣ ಲೇಖನ ಚೆನ್ನಾಗಿದೆ.. ಸಾರ್..

  3. ಶಂಕರಿ ಶರ್ಮ says:

    ಶಿವರಾತ್ರಿಯ ಕುರಿತು ಸೊಗಸಾಗಿ ಮೂಡಿಬಂದ ಸಕಾಲಿಕ ಲೇಖನವು ವಿಚಾರಪೂರ್ಣವಾಗಿದ್ದು ಬಹಳಷ್ಟು ಮಾಹಿತಿಗಳನ್ನು ಒಳಗೊಂಡಿದೆ.

  4. ಪದ್ಮಾ ಆನಂದ್ says:

    ಶಿವರಾತ್ರಿಯ ಮಹತ್ವವನ್ನು ಸಾರುವ ಲೇಖನ ಚೆನ್ನಾಗಿ ಮೂಡಿ ಬಂದಿದೆ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: