ಕರ್ನಾಟಕ ತೋಟಗಾರಿಕೆಯ ಕನಸುಗಾರ

Share Button

ವಿಜ್ಞಾನಿ ಡಾ.ಎಂ.ಎಚ್.ಮರಿಗೌಡ

ಬೆಂಗಳೂರು ಒಂದು ಕಾಲದಲ್ಲಿ ಉದ್ಯಾನ ನಗರಿ ಎಂದೇ ಪ್ರಸಿದ್ಧವಾಗಿತ್ತು. ಪಿಂಚಣಿದಾರರ ಸ್ವರ್ಗ ಎನ್ನುವ ಬಿರುದಿಗೂ ಪಾತ್ರವಾಗಿದ್ದು, ಒಳ್ಳೆಯ ಹವಾಮಾನಕ್ಕೆ, ಆರೋಗ್ಯಕರವಾದ ವಾತಾವರಣಕ್ಕೆ ಹೆಸರುವಾಸಿಯಾಗಿತ್ತು. ಇದಕ್ಕೆಲ್ಲಾ ಕಾರಣ ಇಲ್ಲಿದ್ದ ಅಸಂಖ್ಯಾತ ಉದ್ಯಾನವನಗಳು. ಇಂದು ಬೆಂಗಳೂರನ್ನು ಮಾಹಿತಿ ತಂತ್ರಾಂಶದ ರಾಜಧಾನಿ, ಸಿಲಿಕಾನ್‍ ಸಿಟಿ ಎಂದು ಹೊಗಳುವ ಭರಾಟೆಯಲ್ಲಿ ಬೆಂಗಳೂರಿನ ಎಷ್ಟೋ ಹಳೆಯ ವಿಷಯಗಳು ಜನರ ಮನಸ್ಸಿನಿಂದ ಮರೆಯಾಗುತ್ತಿವೆ. ಆದರೆ ಲಾಲ್‍ಬಾಗ್‍ನ ಆಕರ್ಷಣೆಯನ್ನು ಎಂದಿಗೂ ಮರೆಯಲಾಗದು. ಲಾಲ್‍ಬಾಗ್‍ ಮತ್ತು ಕಬ್ಬನ್ ಪಾರ್ಕ್ ಉದ್ಯಾನವನಗಳು ವಿಶ್ವವಿಖ್ಯಾತವೆಂದೇ ಹೇಳಬಹುದು. ಡಾ.ಎಂ.ಎಚ್‍.ಮರಿಗೌಡ ರಸ್ತೆ ಮತ್ತು ವೃತ್ತವನ್ನು ಹಲವಾರು ಬೆಂಗಳೂರಿನ ಕೆಲವು ಕನ್ನಡಿಗರು ಗಮನಿಸಿರಬಹುದು. ಲಾಲ್‍ಬಾಗ್‍ ಉದ್ಯಾನವನವನ್ನು ಸಸ್ಯಕಾಶಿ ಎಂದು ಆದರಿಸುವುದಕ್ಕೆ ತೋಟಗಾರಿಕೆಯ (Horticulture) ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಡಾ.ಎಂ.ಎಚ್‍.ಮರಿಗೌಡರೇ ಕಾರಣವೆನ್ನುವುದೂ, ಡಾ.ಎಂ.ಎಚ್‍.ಮರಿಗೌಡರೆಂದರೆ ಯಾರು ಎನ್ನುವುದು ಮಾತ್ರ ಎಷ್ಟು ಜನರಿಗೆ ಗೊತ್ತು? ತೋಟಗಾರಿಕಾ ಕ್ಷೇತ್ರದ ಪಿತಾಮಹರೆಂದೇ ಖ್ಯಾತರಾಗಿರುವ ಡಾ.ಎಂ.ಎಚ್‍.ಮರಿಗೌಡರು ಯುಗಪುರುಷ. ಇಂದು ಮರಿಗೌಡರು ನಮ್ಮೊಡನಿಲ್ಲದಿದ್ದರೂ ಅಂತಹ ಅಪರೂಪದ, ಅಸಾದೃಶ ಮಹನೀಯರ ಪರಿಚಯ ಮಾಡಿಕೊಳ್ಳುವುದು ಕರ್ನಾಟಕದ ಜನರಿಗೆ ಅತ್ಯಗತ್ಯ.

ಮರಿಗೌಡರು ಆಗಸ್ಟ್‍ 8, 1916ರಂದು. ಮೈಸೂರಿನ ಬಳಿ ಇರುವ ತಿರಮಕೂಡಲು ನರಸೀಪುರ ತಾಲ್ಲೂಕಿನ ಬನ್ನೂರು ಹೋಬಳಿಯ ಮಾರಗೊಂಡನಹಳ್ಳಿಯಲ್ಲಿ ಜನಿಸಿದರು. ಬನ್ನೂರಿನಲ್ಲಿಯೇ ಮಾಧ್ಯಮಿಕ ಶಾಲೆಯವರೆಗೆ ಕಲಿತ ನಂತರ ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಕವಿ ಕುವೆಂಪುರವರು ಇವರ ಸಹಪಾಠಿಗಳಾಗಿದ್ದವರು. ಮುಂದೆ ಮರಿಗೌಡರು ಬೆಂಗಳೂರಿನ ಸೆಂಟ್ರಲ್‍ ಕಾಲೇಜಿನಲ್ಲಿ ಬಿ.ಎಸ್‍ಸಿ(ಸಸ್ಯವಿಜ್ಞಾನ) ಪದವಿ ಗಳಿಸಿ, ಲಕ್ನೋ ವಿಶ್ವವಿದ್ಯಾಲಯದ ಎಂ.ಎಸ್‍ಸಿ ಪದವೀಧರರಾದದ್ದು 1942ರಲ್ಲಿ. ಆ ಹೊತ್ತಿಗಾಗಲೇ ಇವರಿಗೆ ಸಸ್ಯವಿಜ್ಞಾನದಲ್ಲಿ ಅಪಾರ ಆಸಕ್ತಿ ಬೆಳೆದಿತ್ತು.

ಮೈಸೂರು ಸರ್ಕಾರದ ಉದ್ಯಾನವನಗಳ ಇಲಾಖೆಯಲ್ಲಿ ಸೂಪರಿಡೆಂಟ್‍ ಆಫ್‍ ಗಾರ್ಡನ್ಸ್‍ ಹುದ್ದೆಗೆ ಆಯ್ಕೆಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. 1947ರಲ್ಲಿ ಲಂಡನ್‍ನ ಕ್ಯೂ ರಾಯಲ್‍ ಬೊಟಾನಿಕಲ್‍ ಗಾರ್ಡನ್ಸ್‍ನಲ್ಲಿ ಸಸ್ಯೋದ್ಯಾನಗಳ ನಿರ್ವಹಣೆ ಮತ್ತು ಸುಂದರೀಕರಣದ ಬಗ್ಗೆ ಒಂದು ವರ್ಷದ ತರಬೇತಿ ಪಡೆದರು. ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ ಹಾರ್ವರ್ಡ್‍ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು, 1951 ರಲ್ಲಿ ಸಸ್ಯವಿಜ್ಞಾನದಲ್ಲಿ ಡಾಕ್ಟರೇಟ್‍ ಗಳಿಸಿದ್ದು ಒಂದು ಸಾಧನೆಯೇ ಸರಿ. ಅಂದಿನಿಂದ ಇಂದಿನವರೆಗೆ ತೋಟಗಾರಿಕೆಯಲ್ಲಿ ಡಾಕ್ಟರೇಟ್‍ ಪಡೆದವರು ಬೆರಳೆಣಿಕೆಯಷ್ಟೆ.

ಡಾ.ಎಂ.ಎಚ್‍. ಮರಿಗೌಡರು ಡಾಕ್ಟರೇಟ್ ಪಡೆಯುವುದಕ್ಕಾಗಿ ಅಧ್ಯಯನ ಮಾಡಲಿಲ್ಲ. ತಮ್ಮ ಅಧ್ಯಯನದ ಫಲವನ್ನು ಭಾರತದ ಬಡ ರೈತರಿಗೆ ಮುಟ್ಟಿಸಬೇಕೆನ್ನುವುದು ಅವರ ದೃಢ ನಿರ್ಧಾರವಾಗಿತ್ತು. ಅವರು ತಮ್ಮ ದಿನಚರಿ ಪುಸ್ತಕದಲ್ಲಿ ಬರೆದಿರುವ ‘ಪದವಿ ಗಳಿಸುವುದು ಕೇವಲ ಅಲಂಕಾರಕ್ಕಾಗಲ್ಲ. ‘serve the people without decoration.’ ಮಾತು ಅನುಕರಣೀಯ. ಆಗಿನ ಕಾಲದಲ್ಲಿ ತೋಟಗಾರಿಕೆ ಶ್ರೀಮಂತರ ಹವ್ಯಾಸವಾಗಿತ್ತು. ಆದರೆ ಮರಿಗೌಡರು ಬಡವರ ಕಷ್ಟಗಳನ್ನು ಕಣ್ಣಾರೆ ಕಂಡಿದ್ದರು. ಅವರು ತೋಟಗಾರಿಕೆ ಬಡವರ ಆರ್ಥಿಕ ಸ್ಥಿತಿ ಸುಧಾರಿಸುವ ಕಾಯಕವಾಗಬೇಕೆನ್ನುವ ಕನಸು ಕಾಣುತ್ತಿದ್ದರು. ಅಮೆರಿಕದಲ್ಲಿ ಉದ್ಯೋಗಾವಕಾಶಗಳಿದ್ದರೂ ಸ್ವೀಕರಿಸದೆ ಭಾರತಕ್ಕೆ ಮರಳಿದರು. ಆಗ ಅವರಿಗೆ ಲಾಲ್‍ಬಾಗ್‍ನಲ್ಲಿ ಒಂದು ಒಳ್ಳೆಯ ಹುದ್ದೆ ದೊರೆಯಿತು.

ಸರ್ಕಾರವು ಕೃಷಿ ಇಲಾಖೆಯಲ್ಲಿದ್ದ ತೋಟಗಾರಿಕೆ ವಿಭಾಗವನ್ನು ಬೇರ್ಪಡಿಸಿ 1963ರಲ್ಲಿ ಪ್ರತ್ಯೇಕ ಇಲಾಖೆಯನ್ನು ಪ್ರಾರಂಭಿಸಿತು. ಡಾ.ಮರಿಗೌಡರನ್ನು ತೋಟಗಾರಿಕೆ ಇಲಾಖೆಯ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಮರಿಗೌಡರ ಕನಸುಗಳು ಗರಿಗೆದರಿದವು. ಇಲಾಖೆಯ ಸರ್ವತೋಮುಖ ಬೆಳವಣಿಗೆಗಾಗಿ ಕಾಯಾ, ವಾಚಾ, ಮನಸಾ ಶ್ರಮಿಸಿದರು. ಸಾಮಾನ್ಯ ಜನರಿಗೂ ತೋಟಗಾರಿಕೆಯ ಫಲ ದೊರೆಯುವಂತೆ ಮಾಡಿದರು. ತೋಟಗಾರಿಕೆ ಎಂದರೆ ಕೇವಲ ಆಲಂಕಾರಿಕ ಪುಷ್ಪಗಳನ್ನು ಬೆಳಸುವುದಲ್ಲ: ಹಣ್ಣು, ತರಕಾರಿಗಳನ್ನು ಬೆಳಸಿ ಅವು ಜನರಿಗೆ ಸಿಕ್ಕುವಂತೆ ಹಾಗೂ ಅದನ್ನು ಬೆಳೆದ ರೈತರಿಗೆ ಲಾಭವಾಗುವಂತೆ ಮಾರಾಟಮಾಡುವುದು ಅಗತ್ಯ ಎಂದು ದುಡಿದರು. ತೋಟಗಾರಿಕೆಯನ್ನು ಒಂದು ಉದ್ಯಮವಾಗಿ ಬೆಳೆಸಿದರು. ವಿಜ್ಞಾನಿಗಳು ಪ್ರಯೋಗಾಲಯಗಳಲ್ಲಿ ಕೆಲಸ ಮಾಡುವುದು ಸಾಮಾನ್ಯ. ಆದರೆ ಇಡೀ ಲಾಲ್‍ಬಾಗ್‍ ಹಾಗೂ ಬೆಂಗಳೂರಿನ ಉದ್ಯಾನವನಗಳೇ ಈ ಉದ್ಯಾನವಿಜ್ಞಾನಿಯ ಪ್ರಯೋಗಾಲಯವಾಗಿತ್ತು. 188 ಎಕರೆ ಇದ್ದ ಲಾಲ್‍ಬಾಗನ್ನು 240 ಎಕರೆಗಳಿಗೆ ವಿಸ್ತರಿಸಿದರು. ಕೆಮ್ಮಣ್ಣುಗುಂಡಿ, ನಂದಿ, ಕೃಷ್ಣರಾಜಸಾಗರಗಳ ಉದ್ಯಾನವನಗಳನ್ನು ರೂಪಿಸಿದರು. ಪಶ್ಚಿಮ ಘಟ್ಟದಲ್ಲಿಯೂ ಅಲ್ಲಿಯ ವಾತಾವರಣಕ್ಕೆ ಹೊಂದುವ ಗಿಡಗಳನ್ನು ಬೆಳೆಸಲು ಮುಂದಾದರು. ವಿವಿಧ ಬೀಜಗಳ ಉತ್ಪಾದನೆ, ಹೊಸ ತಳಿಗಳ ಸಂಶೋಧನೆ ಎಲ್ಲವನ್ನೂ ಕೈಗೊಂಡರು. ಮಹಾರಾಷ್ಟ್ರ ಮತ್ತು ದೆಹಲಿಯಿಂದ ರೊಬಸ್ಟಾ ಬಾಳೆಹಣ್ಣು, ಕೇರಳದಿಂದ ಹೊಸ ನಮೂನೆಯ ತೆಂಗು ಮತ್ತು ಕಿತ್ತಳೆ, ಕೋಲ್ಕತ್ತಾದಿಂದ ಸಪೋಟ ತಳಿಗಳನ್ನು ತರಿಸಿ ಬೆಳೆಸಿದರು. ಇವರ ಸಂಗ್ರಹ ಬೆಳೆಯುತ್ತಾ ಹೋಯಿತು. ಹೊರದೇಶಗಳ ತರಕಾರಿಗಳೂ ಭಾರತಕ್ಕೆ ಬಂದವು. ಶ್ರೀಲಂಕಾದಿಂದ ಬಂದ ‘ಚೌ ಚೌ’ ಅಂದರೆ ಸೀಮೆಬದನೆಕಾಯಿ ಭಾರತದಲ್ಲಿ ಸಮೃದ್ಧವಾಗಿ ಬೆಳೆದವು.

ಈ ಪ್ರಯೋಗಗಳ ಫಲ ಉಂಡವರಲ್ಲಿ ಬೆಂಗಳೂರಿನ ಸುತ್ತಮುತ್ತ ಹಾಗೂ ಕರ್ನಾಟಕದ ಉದ್ದಗಲಗಳಲ್ಲಿ ವಾಸಿಸುತ್ತಿದ್ದ ಬಡರೈತರೂ ಸೇರಿದ್ದುದು ವಿಶೇಷ. ಅಷ್ಟೇ ಅಲ್ಲ ರೈತರಿಗೂ ಪೌಷ್ಠಿಕ ಆಹಾರ ಸಿಗಬೇಕು ಎನ್ನುವ ಉದ್ದೇಶದಿಂದ ಬೆಳೆದ ತರಕಾರಿ, ಹಣ್ಣುಗಳನ್ನು ಎತ್ತಿನ ಗಾಡಿಗಳಲ್ಲಿ ಹಾಕಿಕೊಂಡು ಹಳ್ಳಿಹಳ್ಳಿಗಳಿಗೆ ಹೋಗಿ ತಲುಪಿಸುತ್ತಿದ್ದರು. ಹೊಸ ಸೊಪ್ಪಿನ ಬೀಜಗಳನ್ನೂ, ಗಿಡಗಳನ್ನೂ ರೈತರಿಗೆ ಉಚಿತವಾಗಿ ದೊರೆಯುವಂತೆ ವ್ಯವಸ್ಥೆ ಮಾಡಿದರು. ಚಕ್ರಮುನಿ ಸೊಪ್ಪಿನ ಗುಣ ಅರಿತಿದ್ದ ಮರಿಗೌಡರು ಅದನ್ನು ಬೆಳಸಿ ಜನರಿಗೆ ಮುಟ್ಟಿಸಲು ಬಹಳ ಶ್ರಮಿಸಿದರಂತೆ. ಹಲವಾರು ರೈತರು ಇದರಿಂದ ಲಾಭ ಪಡೆದುಕೊಂಡರು. ಸರ್ಕಾರಿ ಜಮೀನು ಎಲ್ಲಿ ಕಂಡರೂ ಅದರಲ್ಲಿ ಯೋಗ್ಯವಾದ ಗಿಡ ನೆಡೆಸಿ ಪೋಷಿಸುತ್ತಿದ್ದರಂತೆ.

ಡಾ.ಎಂ.ಎಚ್‍. ಮರಿಗೌಡ

ತೋಟಗಾರಿಕೆ ಬೆಳೆಗೆ ಹೊಸ ಆಯಾಮ ನೀಡಲೆಂದೇ ಮರಿಗೌಡರು ‘ತೋಟಗಾರಿಕೆಯ ನಾಲ್ಕು ಅಂಗಗಳ ಅಭಿವೃದ್ಧಿ’ ಯೋಜನೆಯನ್ನು ರೂಪಿಸಿದರು. ಇದು ಅವರ ಕಲ್ಪನೆಯ ಕೂಸು. ತೋಟಗಾರಿಕೆ ಎಂದರೆ ಆಂಗ್ಲಭಾಷೆಯಲ್ಲಿ ‘Horticulture’. ಇಲ್ಲಿನ ‘H’ ಅಕ್ಷರದ ನಾಲ್ಕು ಕವಲುಗಳನ್ನು ಗಣನೆಗೆ ತೆಗೆದುಕೊಂಡು ‘Four limbed concept’ ಎನ್ನುವ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ಮೊದಲನೇ ಕವಲು ತೋಟಗಾರಿಕೆ ಅಭಿವೃದ್ಧಿ ಮತ್ತು ವಿಸ್ತರಣೆ. ಎರಡನೇ ಕವಲು ಉದ್ಯಾನಕಲಾ ಸಂಘಗಳ ಮೂಲಕ ತೋಟಗಾರಿಕೆ ಪ್ರದರ್ಶನಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಏರ್ಪಡಿಸಿ ಉತ್ತೇಜನ ನೀಡುವುದು. ಮೂರನೆಯ ಕವಲು ತೋಟಗಾರಿಕೆಗೆ ಮಾರುಕಟ್ಟೆ ನಿರ್ಮಾಣ. ಇದರ ಭಾಗವಾಗಿ ಹಾಪ್ಕಾಮ್ಸ್‍ ಮಳಿಗೆಗಳು ಪ್ರಾರಂಭವಾದವು. ನಾಲ್ಕನೆಯ ಕವಲಿನ ಅಂಗವಾಗಿ ನರ್ಸರಿ ಮೆನ್ಸ್ ಕೋಆಪರೇಟೀವ್ ಸೊಸೈಟಿ ಲಿಮಿಟೆಡ್ ಸ್ಥಾಪಿಸಿದರು. ಇದರ ಮೂಲಕ ತೋಟಗಾರಿಕೆಗೆ ಅಗತ್ಯವಾದ ಬಿತ್ತನೆ ಬೀಜ, ಸಸ್ಯ ಮತ್ತಿತರ ಸಾಮಗ್ರಿಗಳನ್ನು ಒದಗಿಸುವುದು.

ಇಂತಹ ಯೋಜನೆಯ ಮೂಲಕ ಇವರು 357 ತೋಟ ಮತ್ತು ಸಸ್ಯೋದ್ಯಾನಗಳನ್ನು ಅಭಿವೃದ್ಧಿಸಿದರು. ಅಷ್ಟೇ ಅಲ್ಲದೆ ಕೋಲಾರ, ತುಮಕೂರು, ಚಿತ್ರದುರ್ಗ ಮುಂತಾದ ಕಡೆಗಳಲ್ಲಿ ಒಣ ಭೂಮಿ ವ್ಯವಸಾಯ ಪದ್ಧತಿ ಜಾರಿಗೆ ತಂದರು. ಇದರಿಂದ ರೈತರು ಹಲಸು, ಹುಣಸೆ, ನಲ್ಲಿಕಾಯಿ ಮುಂತಾದ ಮರಗಳನ್ನು ಬೆಳೆದು ಸಂತುಷ್ಟರಾದರು. ಇಳಿಜಾರಿನಲ್ಲಿ ನೀರು ಸೋರಿಹೋಗದಂತೆ ರಕ್ಷಿಸಲು ಚಿಕ್ಕಚಿಕ್ಕ ಅಣೆಕಟ್ಟುಗಳನ್ನು ಕಟ್ಟಿದರೆ, ಮಣ್ಣಿನ ಸಂರಕ್ಷಣೆಗೆ ಮರಗಳನ್ನು ನೆಡಸಿದರು. ಡಾ.ಮರಿಗೌಡರ ಉತ್ಸಾಹ ಇಲ್ಲಿಗೇ ನಿಲ್ಲಲಿಲ್ಲ. ಹನಿ ನೀರಾವರಿ ಪದ್ಧತಿ ಅಂದರೆ ನೀರು ತುಂಬಿದ ಮಡಿಕೆಗೆ ತೂತು ಮಾಡಿ, ಆ ತೂತನ್ನು ಹತ್ತಿಯಿಂದ ಮುಚ್ಚಿ, ಚಿಕ್ಕ ಸಸಿಯ ಪಕ್ಕದಲ್ಲಿಯೇ ಹೂತು, ಅದರಿಂದ ಚಿಕ್ಕ ಸಸಿಗೆ ಹನಿಹನಿಯಾಗಿ ನೀರು ಸಿಗುವ ಹಾಗೆ ವ್ಯವಸ್ಥೆ ಮಾಡಿದರು. ಇದರಿಂದ ಸಸಿಯ ಅಗತ್ಯಕ್ಕೆ ತಕ್ಕಷ್ಟು ನೀರು ಸಿಕ್ಕಿ ಅದು ಚೆನ್ನಾಗಿ ಬೆಳೆಯಲು ಸಹಾಯಕವಾಯ್ತು. ಒಂದೇ ಫಲ ನೀಡುವ ಬೇರೆ ಬೇರೆ ಜಾತಿಯ ಮರಗಳನ್ನು ಒಂದೇ ತೋಪಿನಲ್ಲಿ ಬೆಳೆಯುವುದರಿಂದ ಉತ್ತಮ ಫಲ ದೊರೆಯುವುದೆಂದು ಸಾಬೀತು ಮಾಡಿದರು. ಮೈಸೂರಿನ ಕೃಷ್ಣರಾಜಸಾಗರದ ಹಣ್ಣಿನ ತೋಟವನ್ನು ಅಭಿವೃದ್ಧಿಪಡಿಸಿದವರೂ ಮರಿಗೌಡರೇ. ಇದೇ ಜಾಗದಲ್ಲಿ ತೆಂಗಿನ ಸಂಕರ ತಳಿಗಳನ್ನು ಉತ್ಪಾದನೆ ಮಾಡಲು ತಾಕುಗಳನ್ನು ನಿರ್ಮಿಸಿದರು. ಹಲವು ಸಂಶೋಧನಾ ಕೇಂದ್ರಗಳ ಜೊತೆ ನಿಕಟ ಸಂಪರ್ಕಹೊಂದಿದ್ದು, ಸಂಶೋಧನೆಯ ಲಾಭವನ್ನು ರೈತರಿಗೆ ಮುಟ್ಟಿಸಿ ಯಶಸ್ವಿಯಾದರು. ಬೆಳೆದ ಫಸಲನ್ನು ಸಂರಕ್ಷಿಸಲು ವೈಜ್ಞಾನಿಕ ವಿಧಾನದಲ್ಲಿ ಲಾಲ್‍ಬಾಗ್‍ನಲ್ಲಿಯೇ ಸಸ್ಯಸಂರಕ್ಷಣೆ ವಿಭಾಗ, ಕೃತಕ ಒಣಗಿಸುವ ಘಟಕ, ಮಣ್ಣು-ನೀರು ಪರೀಕ್ಷಾ ಪ್ರಯೋಗಾಲಯ ಇತ್ಯಾದಿಗಳನ್ನು ಪ್ರಾರಂಭಿಸಿದರು. ಹಲವು ಬಗೆಯ ತರಬೇತಿಗಳನ್ನು ನೀಡುವ ಪದ್ಧತಿಯೂ ಪ್ರಾರಂಭವಾಯಿತು. ಇದರಿಂದ ಉತ್ತೇಜಿತರಾಗಿ ಹಲವು ಖಾಸಗೀ ಸಂಸ್ಥೆಗಳೂ ಹಣ್ಣು-ತರಕಾರಿಗಳ ಪರಿಷ್ಕರಣಾ ಘಟಕಗಳನ್ನು ಸ್ಥಾಪಿಸಿದರು. ಉದ್ಯೋಗಾವಕಾಶಗಳು ಹುಟ್ಟಿಕೊಂಡವು.

ಒಂದು ದಿನವೂ ರಜ ಹಾಕದೆ ತಮ್ಮ ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ, ನಿಸ್ವಾರ್ಥವಾಗಿ ಮಾಡಿದ ಡಾ.ಎಂ.ಎಚ್‍. ಮರಿಗೌಡರು 1977ರಲ್ಲಿ ನಿವೃತ್ತರಾದರು. ಬೆಂಗಳೂರನ್ನು ‘ಭಾರತದ ತೋಟಗಾರಿಕೆ ರಾಜ್ಯ’ ಎನ್ನುವ ಖ್ಯಾತಿಗೇರಿಸಿದ್ದು ಇವರೇ. ಇವರ ಸೇವೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರ 1993, ಏಪ್ರಿಲ್‍ 24ರಂದು ಅವರಿಗೆ  ‘ತೋಟಗಾರಿಕಾ ರತ್ನ’ ಪ್ರಶಸ್ತಿ ನೀಡಿದೆ. ಅವರ ಹುಟ್ಟುಹಬ್ಬದ ದಿನವಾದ ಆಗಸ್ಟ್‍ 8ನೆಯ ದಿನಾಂಕವನ್ನು ‘ತೋಟಗಾರಿಕಾ ದಿನ’ ಎಂದು ಆಚರಿಸುವುದಾಗಿ ಘೋಷಿಸಿದೆ. ನಿವೃತ್ತಿಯ ನಂತರವೂ ತೋಟಗಾರಿಕೆಯೇ ತಮ್ಮ ಉಸಿರು ಎಂದು ಬದುಕಿದ ಡಾ.ಎಂ.ಎಚ್‍. ಮರಿಗೌಡರು 1993ರ ಅಕ್ಟೋಬರ್‍ 12ರಂದು ವಿಧಿವಶರಾದರು. ಅವರ ನಂತರ ಕರ್ನಾಟಕದ ತೋಟಗಾರಿಕೆ ಇಲಾಖೆ ಯಾವುದೇ ಮಹತ್ತರವಾದ ಮುನ್ನಡೆಯನ್ನು ಸಾಧಿಸಿಲ್ಲ ಎನ್ನುವುದು ವಿಷಾದಕರ ಸಂಗತಿ.

ಮರಿಗೌಡರ ಸಹೋದರರೂ ಉನ್ನತ ವ್ಯಾಸಂಗ ಮಾಡಿ ಹೆಸರು ಗಳಿಸಿದವರೇ. ಅವರ ಸಹೋದರ ಎಂ.ಎಚ್‍. ಹೊಂಬೇಗೌಡರು ಮೈಸೂರು ಸರ್ಕಾರದ ಮುಖ್ಯ ನ್ಯಾಯಾಧೀಶರಾಗಿದ್ದರು. ಇವರ ಮಕ್ಕಳು ಇವರ ಆದರ್ಶವನ್ನು ಬಹಳ ಮೆಚ್ಚುತ್ತಿದ್ದರು. ಸ್ವತಃ ಮರಿಗೌಡರು ಲಂಡನ್‍ ಮತ್ತು ಹಾರ್ವರ್ಡ್‍ಗಳಲ್ಲಿ ಅಧ್ಯಯನ ಮಾಡಿದ್ದರು. ಅವರ ಮಗಳು ಸುನೀತರವರು ಹೇಳುವಂತೆ ತಮ್ಮ ಮಕ್ಕಳಿಗೂ ಜೈಮಿನಿ ಭಾರತದಿಂದ ಶೇಕ್ಸ್‍ಪಿಯರ್‍ವರೆಗೆ ಎಲ್ಲ ಬಗೆಯ ಉತ್ಕೃಷ್ಟ ಸಾಹಿತ್ಯವನ್ನು ಓದುವಂತೆ ಪ್ರೇರೇಪಿಸುತ್ತಿದ್ದರಂತೆ. ಇವರ ಆದರ್ಶಗಳಿಂದ ಪ್ರಭಾವಿತರಾದವರಲ್ಲಿ ಭಾರತದ ವಾಣಿಜ್ಯ ಪುಷ್ಪೋದ್ಯಮದ ಪಿತಾಮಹ ಇಂಡೋ-ಅಮೆರಿಕನ್‌ ಹೈಬ್ರೀಡ್‌ ಸೀಡ್ಸ್‌ ಕಂಪನಿಯ ಸಂಸ್ಥಾಪಕ ಪದ್ಮಶ್ರೀ ಮನಮೋಹನ್‍ ಮುತ್ತಪ್ಪ ಅತ್ತಾವರ್‍ರವರೂ ಒಬ್ಬರು.

ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ ಮರಿಗೌಡರು ಬಹಳ ಸರಳ ವ್ಯಕ್ತಿ. ಬಡ ಜನರೊಂದಿಗೆ ಬೆರೆತು ಅವರ ಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಇವರ ಮತ್ತೊಂದು ಪ್ರಸಿದ್ಧ ಘೋಷವಾಕ್ಯ ‘No man-made rules came in my way. The law of nature of plants was only beacon of light and guide’. ಹೀಗೆ ತಮ್ಮ ಸೇವಾವಧಿಯಲ್ಲಿ ಬೆಂಗಳೂರಿನ ಹೆಸರನ್ನು ಪ್ರಪಂಚದಾದ್ಯಂತ ಪಸರಿಸಿದರು. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಜಗತ್ಪ್ರಸಿದ್ಧ ಸುಂದರ ಉದ್ಯಾನ ನಗರಿಯಾಗಿ ಮಾರ್ಪಡಿಸಿದ ಡಾ.ಎಂ.ಎಚ್. ಮರಿಗೌಡರಿಗೆ ಇಡೀ ಕರ್ನಾಟಕದ ಜನತೆ ಎಂದೆಂದಿಗೂ ಋಣಿಯಾಗಿರಬೇಕು.

-ಜಿ.ವಿ.ನಿರ್ಮಲ

13 Responses

  1. ವಿಜ್ಞಾನಿಗಳ ಪರಿಚಯ ಮಾಲಿಕೆ ಬಹಳ ಉಪಯುಕ್ತ ಕೆಲಸ ಮೇಡಂ..ನಿಮ್ಮ ಹಾಗೂ ಸುಧಾ ಮೇಡಂ ಅವರ ಈ ಪ್ರಯತ್ನ ಕ್ಕೆ ನನ್ನ ದೊಂದು ನಮನ.. ಅಭಿನಂದನೆಗಳು..

    • Nirmala G V says:

      ನಾನು ಇದೀಗ ತಾನೆ ತಮ್ಮೆಲ್ಲರ ಸ್ಪಂದನೆಗಳನ್ನು ಗಮನಿಸುತ್ತಿದ್ದೇನೆ. ನನ್ನ ಪ್ರಯತ್ನ ಸಾರ್ಥಕವೆಂದು ಸಂತಸವಾಗುತ್ತಿದೆ. ತಮ್ಮ ಸ್ಪಂದನೆಗೆ ವಂದನೆಗಳು

  2. ಮುಕ್ತ c. N says:

    ಶ್ರೀಯುತ ಮರೀಗೌಡರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ತಮಗೆ ಧನ್ಯವಾದಗಳು.

    • Nirmala G V says:

      ಮಾನ್ಯರೇ
      ಇದೀಗ ತಾನೆ ತಮ್ಮೆಲ್ಲರ ಸ್ಪಂದನೆಗಳನ್ನು ಗಮನಿಸುತ್ತಿದ್ದೇನೆ. ನನ್ನ ಪ್ರಯತ್ನ ಸಾರ್ಥಕವೆಂದು ಸಂತಸವಾಗುತ್ತಿದೆ. ತಮ್ಮ ಸ್ಪಂದನೆಗೆ ವಂದನೆಗಳು

  3. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಲೇಖನ

  4. ವೆಂಕಟಾಚಲ says:

    ಕರ್ನಾಟಕದ ಶ್ರೇಷ್ಠ ವಿಜ್ಞಾನಿ, ತೋಟಗಾರಿಕೆಯ ಪಿತಾಮಹ ಮರೀಗೌಡರ ಬಗೆಗಿನ ಆಪ್ತ ಬರೆಹ ಖುಷಿ ನೀಡಿತು…..

  5. ಪದ್ಮಾ ಆನಂದ್ says:

    ಡಾ.ಎಂ.ಎಚ್.ಮರಿಗೌಡರ ಸಾಧನೆ ಮತ್ತು ಸರಳತೆಗಳ ಬಗ್ಗೆ ಮಾಹಿತಿಯನ್ನು ನೀಡುವ ಲೇಖನಕ್ಕಾಗಿ ಅಭಿನಂದನೆಗಳು.

    • Nirmala G V says:

      ಡಾ.ಎಂ.ಎಚ್.‌ ಮರಿಗೌಡರದ್ದು ಸದಾ ನೆನಪು ಮಾಡಿಕೊಳ್ಳುವ ವ್ಯಕ್ತಿತ್ವ. ತಾವು ಓದಿ ಸ್ಪಂದಿಸಿದ್ದಕ್ಕಾಗಿ ವಂದನೆಗಳು.

  6. ಶಂಕರಿ ಶರ್ಮ says:

    ತೋಟಗಾರಿಕಾ ಕ್ಷೇತ್ರದ ಪಿತಾಮಹರೆಂದೇ ಖ್ಯಾತರಾಗಿರುವ ಡಾ.ಎಂ.ಎಚ್.ಮರಿಗೌಡರ ಕುರಿತು ವಿಸ್ತೃತ ಮಾಹಿತಿಯನ್ನು ಒಳಗೊಂಡ ಅಪರೂಪದ ಲೇಖನ.

    • Nirmala G V says:

      ಬಹಳ ಜನರಿಗೆ ಮರಿಗೌಡರ ಬಗ್ಗೆ ತಿಳಿದಿಲ್ಲ. ನಿಮ್ಮ ಸ್ಪಂದನೆಗೆ ಧನ್ಯವಾದಗಳು

  7. HOSAHALLI Padmesh says:

    Well written, thank you

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: