ಪುಸ್ತಕ-ನೋಟ

ಪುಸ್ತಕ :- ಕೇಳಿಸದ ಸದ್ದುಗಳು (ಕವನ ಸಂಕಲನ)

Share Button

ಪುಸ್ತಕ :- ಕೇಳಿಸದ ಸದ್ದುಗಳು (ಕವನ ಸಂಕಲನ)
ಕವಯಿತ್ರಿ :- ಜಯಶ್ರೀ. ಬಿ. ಕದ್ರಿ
ಪ್ರಕಾಶಕರು:- ಸುಮಾ ಪ್ರಕಾಶನ
ಪುಟಗಳು :- 102+2
ಬೆಲೆ :-110/-

ಜಯಶ್ರೀ. ಬಿ. ಕದ್ರಿಯವರು ಲೇಖನ ಬರಹಗಳಿಗೆ ಹೆಸರುವಾಸಿ ಅಂದುಕೊಂಡಿದ್ದೆ, ಆದರೆ ಅಲ್ಲ ಕವನಗಳನ್ನು ರಚಿಸುವುದರಲ್ಲೂ ಇವರು ಸೈ. ಇವರ ‘ತೆರೆದಂತೆ ಹಾದಿ‘ ಹಾಗೂ ‘ಬೆಳಕು ಬಳ್ಳಿ’ ಅಂಕಣ ಬರಹಗಳ ಕೃತಿ ಬಹಳ ಸೊಗಸಾಗಿದೆ. ಇವೆರಡರಲ್ಲೂ ಬದುಕಿನ ಮಜಲುಗಳು, ಬದುಕಿನ ಹಲವು ಹಂತಗಳು, ಎದುರಾಗುವ ಸವಾಲುಗಳು, ಅವನ್ನು ಎದುರಿಸುವ ರೀತಿ ಅಚ್ಚಾಗಿ ಓದುಗರ ಮನಸ್ಸನ್ನು ಸೆರೆ ಹಿಡಿಯುತ್ತದೆ. ಈಗ ಈ ಕವನ ಸಂಕಲನ. ಇಲ್ಲಿ ಒಂದರಿಂದ ಒಂದು ಸುಂದರ ಕವನಗಳು ಮನಸೂರೆಗೊಳ್ಳುತ್ತಾ ಸಾಗುತ್ತದೆ. ಮನಸಿನ ಭಾವನೆಗಳನ್ನು ಅರುಹುವ, ಅನಾವರಣಗೊಳಿಸುವ ಶಕ್ತಿ ಇರುವುದು ಕವನಗಳಿಗೆ. ಹಾಗಾಗಿ ಕವನಗಳು ಆಪ್ತವಾಗುತ್ತವೆ.

ಪಾರಿಜಾತದ ಸುವಾಸನೆಯ ಕುರಿತಾದ ಒಂದು ಕವನ. ಬಹಳ ನಾಜೂಕಾದ, ದೂರ ದೂರದವರೆಗೂ ತನ್ನ ಘಮವನ್ನು ಹಬ್ಬಿ ಸೆಳೆಯುವ ಪುಷ್ಪ ಪಾರಿಜಾತ. ಕವಯಿತ್ರಿ ಆ ಹೂವಿನ ಜೊತೆ ಮಾಡಿ ಕೊಳ್ಳುವ ಬಿನ್ನಹ ಬಹಳ ಆಕರ್ಷಕ. ಜೀವನವನ್ನು ಅರಳಿಸು ಅನ್ನುವಂತಹ ವಿನಂತಿಯನ್ನು ನಾವಿಲ್ಲಿ ಕಾಣಬಹುದು.
” ಪಾರಿಜಾತದ ಗಂಧ,
ಅದರೊಳಗೊಂದು ಅನುಪಮ ಪ್ರೇಮ ಬಂಧ (ಕೃಷ್ಣ -ಸತ್ಯಭಾಮೆ),
ಹೃನ್ಮನ ಬೆಸೆಯುವ ಈ ಅನುಬಂಧ,
ಆವರಿಸುವ ಪರಿಯೇ ಚಂದ”.

ಬದುಕು ತನ್ನ ಮಗ್ಗುಲು ಬದಲಿಸುವ ಹಂತವನ್ನು ಮೌನವಾಗಿಯೇ ಮುಗಿಸುತ್ತದೆ. ಗೊತ್ತೇ ಆಗುವುದಿಲ್ಲ ಅನ್ನುವುದನ್ನು ಅರುಹುವ ಸಾಲುಗಳು- ಕೇಳಿಸದ ಸದ್ದುಗಳು. ಅವೆಷ್ಟೋ ನೋವುಗಳು ಮೌನದೊಳಗೆ ತಮ್ಮ ಪ್ರಭಾವ ಬೀರುವುದನ್ನು ಬೀರಿ ಸದ್ದು ಮಾಡದೆಯೇ ಕರಗುತ್ತವೆ.

ಕವಿತೆಯೊಳಗೆ ಮೌನ ಮಾತಾಗುತ್ತದೆ, ಭಾವ ನದಿಯಂತೆ ಭೋರ್ಗರೆದು ಹರಿಯುತ್ತದೆ, ನೋವು ನಿರಾಳವಾಗುತ್ತದೆ, ಆ ನಿರಾಳತೆಯ ಕ್ಷಣ ನಗು ತುಟಿಯ ಅಂಚನ್ನಷ್ಟೇ ಅಲ್ಲದೆ ಮನಸ್ಸನ್ನು ಆವರಿಸುತ್ತದೆ. ಹೆಪ್ಪುಗಟ್ಟಿದ ಕಣ್ಣೀರು ಕಣ್ಣಂಚನ್ನು ತೇವಗೊಳಿಸುವಂತೆ ಮಾಡುತ್ತದೆ ಕವಿತೆ. ನಾವು ಬಾಯಿ ಬಿಟ್ಟು ಹೇಳಲಾಗದ ಎಲ್ಲಾ ಭಾವನೆಗಳನ್ನು ಅನಾವರಣಗೊಳಿಸುವ ಶಕ್ತಿ ಕವಿತೆಗೆ ಇದೆ.

ಮಳೆ ಎಂದರೆ ಯಾರಿಗೆ ಇಷ್ಟವಿಲ್ಲ? ಅದು ಹಿತಮಿತವಾಗಿ ಸುರಿದಾಗಷ್ಟೇ ಚಂದ. ಆ ಮಳೆ ಸುರಿವಾಗ ಭುವಿ ಮೇಲೆ ಆಗುವ ಬದಲಾವಣೆ, ಪ್ರಕೃತಿಯಲ್ಲಿ ಘಟಿಸುವ ಅದ್ಭುತಗಳನ್ನು ಸೆರೆ ಹಿಡಿದ ಒಂದು ಕವಿತೆ – ಮಳೆ ಬರುವ ಕಾಲ.

ಈ ಕವನ ಸಂಕಲನದಲ್ಲಿ ಇರುವ ಎಲ್ಲಾ ಕವನಗಳು ಅರ್ಥಗರ್ಭಿತ. ಒಂಟಿತನದ ಸತ್ಯ, ಸೀತೆ, ಶಾಕುಂತಲೆಯರಿಗಾಗಿಯೇ ಕಾಯುವಿಕೆಯ ಶಿಕ್ಷೆ ಏಕೆ ಎಂದು ಪ್ರಶ್ನೆ ಹುಟ್ಟು ಹಾಕುವ, ಯೋಚನೆಗೆ ತಳ್ಳುವ ಸಾಲುಗಳು, ಜಗದ ಮುಚ್ಚಿದ ಬಾಗಿಲುಗಳ ಹಿಂದಿನ ವಾಸ್ತವ, ಕೀಲಿ ಕೈ ಹಾಗೂ ನೆನಪಿನ ನಡುವಿನ ತಳಕು, ಸುಂದರ ಪ್ರಕೃತಿಯ ಬಣ್ಣನೆ, ಹೀಗೆ ಸುಂದರ ಕವನಗಳ ಗುಚ್ಚದಲ್ಲಿ ಕೇಳಿಸದ ಸದ್ದುಗಳ ಗದ್ದಲ ಸಾಗಿದೆ.

“ನನ್ನ ಕನಸಿನ ದೇಶ” ಅನ್ನುವ ಕವನದಲ್ಲಿ ಪರಸ್ಪರ ಸಾಮರಸ್ಯ, ವಿಜ್ಞಾನದಲ್ಲಿ ಸಾಧನೆ, ಸಮೃದ್ಧ ಹಸಿರು, ಜಲದಿಂದಾವೃತ ಸ್ವಚ್ಛ ಪ್ರಕೃತಿ, ಯುದ್ಧ, ಸಾವು ನೋವುಗಳಿಲ್ಲದೆ ಆವರಿಸಿರುವ ನೆಮ್ಮದಿ, ರಾಜಕೀಯ ಕುತಂತ್ರದಿಂದ ಹೊರತಾದ, ಕಷ್ಟಪಟ್ಟು ದುಡಿದು ಬದುಕು ಕಟ್ಟುವ ಜನರು, ಜಾತಿ ಮತದ ಆಧಾರದಲ್ಲಿ ದ್ವೇಷ ಅಸೂಯೆ ಹೊಂದದೆ ಶಾಂತಿಯಿಂದ ಬಾಳುವ ಸುಂದರ ದೇಶದ ಪರಿಕಲ್ಪನೆಯನ್ನು ಒಳಗೊಂಡ ಕವನ ಸೊಗಸಾಗಿದೆ.

ಕವನಗಳೆಂದರೆ ಭಾವದ ಅನಾವರಣ. ಮನಸ್ಸಿನಲ್ಲಿ ಮಡುಗಟ್ಟಿದ ನೋವು, ನಲಿವು, ದುಃಖ, ಸಂತೋಷ ಎಲ್ಲವೂ ಲಹರಿಯ ರೂಪದಲ್ಲಿ. ಹರಿಯ ತೊಡಗಿದಾಗ ಇವನ್ನೆಲ್ಲ ತನ್ನೊಳಗೆ ಕಾಪಿಟ್ಟ ಮನಸು ನಿರಾಳ, ಸ್ವಚ್ಛಂದ, ಹಗುರ.

ತೆರೆದಂತೆ ಹಾದಿ, ಬೆಳಕು ಬಳ್ಳಿ ಅನ್ನುವ ಅಂಕಣ ಬರಹಗಳು ಜಯಶ್ರೀ ಬಿ ಕದ್ರಿಯವರ ಇನ್ನೆರಡು ಕೃತಿಗಳು.

-ನಯನ ಬಜಕೂಡ್ಲು

9 Comments on “ಪುಸ್ತಕ :- ಕೇಳಿಸದ ಸದ್ದುಗಳು (ಕವನ ಸಂಕಲನ)

  1. ಆಪ್ತವಾದ ಪುಸ್ತಕ ಪರಿಚಯ ಸೊಗಸಾಗಿ ಮೂಡಿ ಬಂದಿದೆ.

  2. ಕೇಳಿಸದ ಸದ್ದು ಸಹ ಕೇಳಿತು ನಿಮ್ಮ ಪುಸ್ತಕ ಪರಿಚಯದಿಂದ…….
    ಕವಿತೆಗಳ ತುಂಬ ಆವರಿಸಿದ ಬಂಧ ಮನಕೆ ಮುಟ್ಟಿತು
    ಧನ್ಯವಾದಗಳು

  3. ಸೊಗಸಾದ ಕವನ ಸಂಕಲನದ ವಿಮರ್ಶಾತ್ಮಕ ಕಿರುಪರಿಚಯವು ಚೆನ್ನಾಗಿ ಮೂಡಿಬಂದಿದೆ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *