ಕಾದಂಬರಿ : ತಾಯಿ – ಪುಟ 14

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಹೊಸ ವೃದ್ಧಾಶ್ರಮಕ್ಕೆ “ಆಶಿಯಾನ” ಎಂದು ಹೆಸರಿಡುವಂತೆ ಭಾಸ್ಕರ ಸೂಚಿಸಿದ್ದ. “ಆಶಿಯಾನ” ಎಂದರೆ “ಆಶ್ರಯ” ಹೆಸರು ಚೆನ್ನಾಗಿತ್ತು. ಆದರೆ ರಾಜಲಕ್ಷ್ಮಿಗೆ ಒಪ್ಪಿಗೆಯಾಗಿರಲಿಲ್ಲ. ಕೊನೆಗೆ ‘ವಾತ್ಸಲ್ಯ’ ಎಂದು ಹೆಸರಿಟ್ಟರು. ಆ ಹೆಸರು ಎಲ್ಲರಿಗೂ ಒಪ್ಪಿಗೆಯಾಯಿತು. ಇಪ್ಪತ್ತು ದಿನಗಳ ಅವಧಿಯಲ್ಲಿ ಭಾಸ್ಕರ ‘ವಾತ್ಸಲ್ಯ’ದ ಸ್ವರೂಪವನ್ನೇ ಬದಲಾಯಿಸಿದ್ದ. ತೆರಾಂಡದಲ್ಲಿ ಒಂದು ಸೋಫಾ, ಎರಡು ಕುರ್ಚಿಗಳನ್ನು ಹಾಕಿಸಿ, ಟೇಬಲ್ ಹಾಕಿಸಿ, ಫ್ಯಾನ್ ಹಾಕಿಸಿದ್ದ. ಕೆಳಗಿನ ಹಾಲನ್ನು ಛೇಂಬರ್‌ಗಳಾಗಿ ವಿಂಗಡಿಸಿದ್ದ. ಒಂದು ಆಫೀಸ್‌ರೂಂ, ಮತ್ತೊಂದು ವಿಸಿಟರ‍್ಸ್ ರೂಮ್. ಅಲ್ಲಿಗೆ ಸೂಕ್ತ ಫರ್ನೀಚರ್ ಹಾಕಿಸಿದ್ದ. ಕೆಳಗಿನ ರೂಮುಗಳಲ್ಲಿ ವಾರ್ಡ್ರೋಬ್‌ಗಳಿದ್ದವು. 5 ರೂಂಗಳಿಗೆ ಎರಡೆರಡು ಮಂಚ ಒಂದು ಟೇಬಲ್, ಎರಡು ಚೇರ್ ಹಾಕಿಸಿದ್ದ. ಅಟ್ಯಾಚ್ ಬಾತ್‌ರೂಂಗಳಿಗೆ ಗೀಸರ್ ಹಾಕಿಸಿ 2 ಬಕೆಟ್‌ಗಳು, 2 ಮಗ್ ಇಟ್ಟಿದ್ದ.
ರಾಜಲಕ್ಷಿö್ಮಯವರ ರೂಂಗೆ 2 ಮಂಚ, ಒಂದು ಸೋಫಾ, 2 ಕುರ್ಚಿ, ಒಂದು ಟೇಬಲ್ ಹಾಕಿಸಿದ್ದ. ಪ್ರತಿ ರೂಂಗಳಿಗೂ ಫ್ಯಾನ್, ಬೆಡ್‌ಲೈಟ್ ಹಾಕಿಸಿದ್ದ.

ಡೈನಿಂಗ್ ಹಾಲ್‌ನಲ್ಲಿ ದೊಡ್ಡ ಟೇಬಲ್ ಹಾಕಿಸಿ 12 ಮಂದಿ ಒಟ್ಟಿಗೆ ಕುಳಿತು ಊಟ ಮಾಡುವಂತೆ ಮಾಡಿದ್ದ. ಅಲ್ಲಿಗೂ ಒಂದು ಫ್ಯಾನ್, ಕೈತೊಳೆಯಲು ಸಿಂಕ್ ಹಾಕಿಸಿದ್ದ.
ಮಹಡಿಯ ಮೇಲೆ ಪ್ರತಿರೂಂನಲ್ಲೂ 5 ಮಂಚ, ಎರಡು ಕುರ್ಚಿ ಹಾಕಿಸಿ, 2 ಚೇರ್‌ಗಳನ್ನು ಹಾಕಿಸಿದ್ದ. ಪ್ರತಿರೂಂಗೂ 2 ಫ್ಯಾನ್‌ಗಳಿದ್ದವು. ವಾರ್ಡ್ರೋಬ್ ಇದ್ದುದರಿಂದ ಬೀರುವಿನ ಅವಶ್ಯಕತೆ ಇರಲಿಲ್ಲ.
ಬಾಲ್ಕನಿಯಲ್ಲಿ ನಾಲ್ಕು ಟೇಬಲ್ ಹಾಕಿಸಿ ಕುರ್ಚಿಗಳನ್ನಿರಿಸಿದ. ಹಾಲ್ ದೊಡ್ಡದಿರಲಿಲ್ಲ. ಅಲ್ಲಿ 15 ಪ್ಲಾಸ್ಟಿಕ್ ಚೇರ್‌ಗಳನ್ನು ಇಡಿಸಿದ. ಎಲ್ಲಾ ರೂಂಗಳಿಗೂ ಕಿಟಕಿಗಳಿಗೂ ಕರ್ಟನ್‌ಗಳು ಬಂದವು. ಆಫೀಸ್‌ರೂಂನಲ್ಲಿ ಟೇಬಲ್ ಮೇಲೆ ರಾಜಲಕ್ಷಿö್ಮಯ ಹೆಸರಿನ ನಾಮ ಫಲಕ ಇಡುವ ಆಸಕ್ತಿಯಿತ್ತು. ಆದರೆ ರಾಜಲಕ್ಷಿö್ಮ ಒಪ್ಪಲಿಲ್ಲ. ರಾಜಲಕ್ಷ್ಮಿ ವಾರಕ್ಕೆ 3 ದಿನಗಳಾದರೂ ಹೋಗಿ ಕೆಲಸಗಳು ಹೇಗೆ ನಡೆಯುತ್ತದೆಂದು ಗಮನಿಸುತ್ತಿದ್ದರು.

“ಅಮ್ಮಾ, ತುಂಬಾ ಹಣ ಖರ್ಚಾಗ್ತಿದೆ. ನೀವೇನೂ ಹೇಳ್ತಿಲ್ಲ.”
“ಸಮಯಾಂದ್ರೆ ನನಗೆ ತಿಳಿಸಿ. ನಾನು ದಾನಿಗಳ ಪರಿಚಯ ಮಾಡಿಸ್ತೀನೀಂತ ಚಂದ್ರಮೋಹನ್‌ದಾಸ್ ಹೇಳಿದ್ದಾರೆ. ಆಶ್ರಮ ಶುರುಮಾಡುವಾಗ ಎಲ್ಲಾ ವ್ಯವಸ್ಥೆ ಮಾಡಿಕೊಂಡರೆ ಒಳ್ಳೆಯದು ಅಲ್ಲವಾ?”
“ಅಮ್ಮಾ ನೀವು ಅಡಿಗೆಯವರಿಗೆ, ವಾಚ್‌ಮೆನ್‌ಗೆ, ಕೆಲಸದವರಿಗೆ ತಿಂಗಳಿಗೆ ಕೊಡುವ ಸಂಬಳಾನೇ 40,000 ಆಗಬಹುದು. ಊಟ-ತಿಂಡಿಗೆ ತುಂಬಾ ಖರ್ಚಾಗುತ್ತದಲ್ವಾ?”
“11 ಮಂದಿ ತಿಂಗಳಿಗೆ 30,000ರೂ. ಕೊಡ್ತಾರೆ. ಅದರಿಂದ ಊಟದ ಖರ್ಚು ಕಳೆಯುತ್ತದೆ. ಗೌರಮ್ಮ ಮತ್ತು ಅವರ ದತ್ತು ಮಗಳು ಆಶ್ರಮದಲ್ಲೇ ಇರೋದ್ರಿಂದ ಹೆಚ್ಚಿನ ಸಂಬಳ ಕೊಡುವಹಾಗಿಲ್ಲ. ನೋಡೋಣ ಮುಂದೇನಾಗುತ್ತದೋ?” ಎಂದರು ರಾಜಲಕ್ಷ್ಮಿ.

ಮೋಹನ ಹೆಚ್ಚುಕಡಿಮೆ ದಿನಾ ಬರುತ್ತಿದ್ದ. ‘ವಾತ್ಸಲ್ಯ’ದಲ್ಲಿ ಎಲ್ಲಾ ವ್ಯವಸ್ಥೆ ಆದಮೇಲೆ ರಾಜಲಕ್ಷ್ಮಿ ಹೇಳಿದರು. “ಮೋಹನ ನಿಮ್ಮ ತಂದೆಯನ್ನು ಕೇಳಿ ಒಳ್ಳೆಯ ದಿನ ಇದ್ದರೆ ತಿಳಿಸಲು ಹೇಳು. ಆ ದಿನ ಹಾಲು ಉಕ್ಕಿಸಿಬಿಡೋಣ. ಒಂದನೇ ತಾರೀಕು ಹೊತ್ತಿಗೆ ಷಿಫ್ಟ್ ಆಗಲು ಸರಿಹೋಗತ್ತೆ.”
“ಆಗಲೀಮ್ಮ” ಎಂದ ಮೋಹನ.
27ನೇ ತಾರೀಕು ಶುಕ್ರವಾರ ಹಾಲು ಉಕ್ಕಿಸಬಹುದೆಂದು ಮೋಹನ ಹೇಳಿದ. ಗೋದಾಮಣಿ, ಗೌರಮ್ಮ, ರಾಜಲಕ್ಷ್ಮಿ, ಭುವನೇಶ್ವರಿ ಹೋಗಿ ಹಾಲು ಉಕ್ಕಿಸಿ ಬಂದರು.
ಭುವನೇಶ್ವರಿ ಗೋದಾಮಣಿ, ಭಾಸ್ಕರನನ್ನು ತುಂಬಾ ಹೊಗಳಿದರು.

“ತುಂಬಾ ಚೆನ್ನಾಗಿ ಎಲ್ಲಾ ಅನುಕೂಲ ಮಾಡಿಸಿದ್ದೀರಾ? ಈಗ ನಮ್ಮ ‘ವೃದ್ಧಾಶ್ರಮ’ ತುಂಬಾ ಚೆನ್ನಾಗಿ ಕಾಣುತ್ತದೆ” ಎಂದರು.
ಒಂದನೇ ತಾರೀಕು ತಾವೆಲ್ಲರೂ ಹೊಸ ಆಶ್ರಮಕ್ಕೆ ಷಿಫ್ಟ್ ಆಗುವುದಾಗಿ ಚಂದ್ರಮೋಹನ್ ದಂಪತಿಗಳಿಗೆ ಫೋನ್ ಮಾಡಿ ತಿಳಿಸಲಾಯಿತು.
“ನಾವು 29ನೇ ತಾರೀಕು ಬರ‍್ತಿದ್ದೇವೆ. ನಮ್ಮ ಆಶ್ರಮ ಮುಚ್ಚಬೇಕಲ್ಲಾ….”
“ಏನಾದರೂ ಸಮಾರಂಭ ಇಟ್ಕೊಂಡಿದ್ದೀರ?”
“ಊಟ ಇಟ್ಟುಕೊಂಡಿದ್ದೇನೆ. ಆದಿನ ನಿಮ್ಮ ಆಶ್ರಮದಿಂದ ನೀವು, ಗೋದಾಮಣಿಯವರು ಬಂದರೆ ಚೆನ್ನಾಗಿರತ್ತೆ.”
“ಖಂಡಿತಾ ಬರ‍್ತೀವಿ.”
“29ನೇ ತಾರೀಕು ಮುಂಚೆ ನಮ್ಮ ವೃದ್ಧಾಶ್ರಮದವರಿಗೆ ನಿಮ್ಮ ‘ವಾತ್ಸಲ್ಯ’ ತೋರಿಸಕ್ಕಾಗತ್ತಾ?”
“ಖಂಡಿತಾ ವ್ಯವಸ್ಥೆ ಮಾಡ್ತೀನಿ.”

ಇಪ್ಪತ್ತೈದನೇ ತಾರೀಕು ಒಂದು ವ್ಯಾನ್ ಗೊತ್ತು ಮಾಡಿ ಮೋಹನ ಚಂದ್ರಮೋಹನ್ ನಡೆಸುತ್ತಿದ್ದ ವೃದ್ಧಾಶ್ರಮದವರಿಗೆ ‘ವಾತ್ಸಲ್ಯ’ ತೋರಿಸಿದ. ಅವರೆಲ್ಲರಿಗೂ ತುಂಬಾ ಖುಷಿಯಾಯಿತು.
29ನೇ ತಾರೀಕು ಒಂದು ಗಂಟೆಗೆ ಗೋದಾಮಣಿ, ರಾಜಲಕ್ಷ್ಮಿ ವೃದ್ಧಾಶ್ರಮಕ್ಕೆ ಹೊರಟರು. ಚಂದ್ರಮೋಹನ್ ದಂಪತಿಗಳ ಜೊತೆ ಊಟವಾಯಿತು.
ನಂತರ ಎಲ್ಲರನ್ನೂ ಸೇರಿಸಿ ಚಂದ್ರಮೋಹನ್ ಮಾತನಾಡಿದರು.
“ಆತ್ಮೀಯರೆ, ನನಗೆ ವೃದ್ಧಾಶ್ರಮ ಮುಚ್ಚುವುದಕ್ಕೆ ಬಹಳ ಬೇಸರವಾಗುತ್ತದೆ. ನಮಗೆ ಪದೇಪದೇ ಬರಲಾಗುವುದಿಲ್ಲ. ನಮಗೆ ನಡೆಸಲು ಕಷ್ಟವಾದಾಗ ಬೇರೆಯವರಿಗೆ ವಹಿಸುವುದು ಒಳ್ಳೆಯದು ಅನ್ನಿಸಿತು. ಹೀಗಾಗಿ ‘ವಾತ್ಸಲ್ಯ’ ವೃದ್ಧಾಶ್ರಮದವರಿಗೆ ನಿಮ್ಮನ್ನು ವಹಿಸುತ್ತಿದ್ದೇನೆ. ರಾಜಲಕ್ಷ್ಮಿಯವರು ನಿಮಗೆ ಆಶ್ರಯ ಕೊಡಲು ಒಪ್ಪಿದ್ದಾರೆ. ನೀವು, ಅವರ ನೆರಳಿನಲ್ಲಿ ಆರಾಮವಾಗರ‍್ತೀರಾ ಅನ್ನುವ ನಂಬಿಕೆ ನನಗಿದೆ.”

“ಚಂದ್ರಮೋಹನ್ ಸರ್, ನಾನೆರಡು ಮಾತುಗಳನ್ನು ಆಡಬಹುದಾ?”
“ಖಂಡಿತಾ ಮಾತನಾಡಿ.”

ರಾಜಲಕ್ಷ್ಮಿ ಎದ್ದುನಿಂತು ಹೇಳಿದರು. “ಎಲ್ಲರಿಗೂ ನಮಸ್ಕಾರ. ಇಳಿವಯಸ್ಸಿನಲ್ಲಿ ಮಕ್ಕಳಿಗೆ ಬೇಡವಾದ ಮಹಿಳೆಯರಿಗೆ ಆಸರೆ ನೀಡಬೇಕು” ಎನ್ನುವುದೇ ನನ್ನ ಉದ್ದೇಶ. “ನನ್ನ ಅಳಿಯ ಮನಸ್ಸು ಮಾಡಿದ್ದರಿಂದ ನಾನು ಈ ಆಶ್ರಮ ಆರಂಭಿಸುವ ಯೋಚನೆ ಮಾಡಿದೆ. ನನಗೆ ನಮ್ಮ ವೃದ್ಧಾಶ್ರಮದವರು ತುಂಬಾ ಸಹಕಾರ ನೀಡಿದರು. ನೀವೆಲ್ಲಾ ನಮಗೆ ಹೊಸಬರು. ಎಲ್ಲರಿಗೂ ಆದಷ್ಟು ಒಳ್ಳೆಯ ಸೌಲಭ್ಯಗಳನ್ನು ಒದಗಿಸಬೇಕೆನ್ನುವುದೇ ನಮ್ಮ ಉದ್ದೇಶ.”

“ನೂರು ಜುಟ್ಟು ಸೇರಿದರೂ ಮೂರು ಜಡೆ ಸೇರಲ್ಲ” ಎನ್ನುವ ಗಾದೆ ಮಾತಿದೆ. ಅದನ್ನು ನಾವು ಸುಳ್ಳುಮಾಡಬೇಕು. ನೀವು ಹೊಂದಿಕೊಂಡು ಹೋಗಬೇಕು. ಒಬ್ಬರ ಮೇಲೆ ಮತ್ತೊಬ್ಬರು ಪೈಪೋಟಿ ಮಾಡಬಾರದು. ನಿಮಗೆ ತೊಂದರೆಯಾದರೆ ನನ್ನ ಬಳಿ ಬಂದು ಹೇಳಬೇಕು. ನಿಮ್ಮ ನಡವಳಿಕೆ ನನಗಿಷ್ಟವಾಗಿಲ್ಲದಿದ್ದರೆ ನಿಮ್ಮನ್ನು ನಮ್ಮ ವೃದ್ಧಾಶ್ರಮದಿಂದ ಹೊರಗೆ ಕಳಿಸುವ ಅಧಿಕಾರ ನನಗಿರುತ್ತದೆ. ಆಗ ನೀವು ನಿಮಗಿಷ್ಟವಾದ ವೃದ್ಧಾಶ್ರಮಕ್ಕೆ ಹೋಗಬಹುದು.”
ಗೋದಾಮಣಿಗೆ ರಾಜಲಕ್ಷ್ಮಿಯ ನೇರನುಡಿಗಳು ತುಂಬಾ ಮೆಚ್ಚುಗೆಯಾದವು.
ಚಂದ್ರಮೋಹನ್ 5 ಲಕ್ಷ ರೂ. ಚಕ್ ರಾಜಲಕ್ಷ್ಮಿಗೆ ನೀಡಿದರು.
“ಇದು ಯಾವ ಹಣ?”
“ನೀಲಕಂಠ ನಮ್ಮ ಆಶ್ರಮದಿಂದ ಹೊಡೆದಿದ್ದ ಹಣ. ದಯವಿಟ್ಟು ಇದನ್ನು ನೀವು ಉಪಯೋಗಿಸಿಕೊಳ್ಳಿ.”
“ಸರ್, ಈಗಾಗಲೇ ಕೊಟ್ಟಿದ್ದೀರಾ. ಈ ಹಣ ಯಾಕೆ?”
“ಇದು ವೃದ್ಧಾಶ್ರಮದ ಹಣ. ವೃದ್ಧಾಶ್ರಮಕ್ಕೆ ಸೇರಬೇಕು. ದಯವಿಟ್ಟು ಬೇಡ ಎನ್ನಬೇಡಿ” ಎಂದರು ಚಂದ್ರಮೋಹನ್.

ನೀಲಕಂಠ ಆ ಕಡೆ ಸುಳಿಯಲಿಲ್ಲ. ಆದರೆ ಅವನಿಗೆ ರಾಜಲಕ್ಷ್ಮಿಯವರು ಹೊಸ ವೃದ್ಧಾಶ್ರಮ ತೆರೆಯುತ್ತಿರುವ ವಿಚಾರ ಗೊತ್ತಾಗ್ತಿತ್ತು. ರಾಜಲಕ್ಷ್ಮಿಯನ್ನು ಭೇಟಿಯಾಗಿ ಕೆಲಸಕೇಳಲು ಅವನು ತಯಾರಿರಲಿಲ್ಲ.
ಒಂದನೇ ತಾರೀಕು ಬೆಳಿಗ್ಗೆ 6 ಗಂಟೆಗೇ ಗೌರಮ್ಮ, ಸರಸಮ್ಮ ಹೊರಟರು. ಮೋಹನ್ ಗೊತ್ತು ಮಾಡಿದ್ದ ವ್ಯಾನ್‌ನಲ್ಲಿ ಮೊದಲು ಸಾಯಿವೃದ್ಧಾಶ್ರಮದವರು 9 ಗಂಟೆಗೆ ಹೊರಟರು. ಮೋಹನ್ ಎರಡು ಟ್ರಿಪ್‌ನಲ್ಲಿ ಚಂದ್ರಮೋಹನ್ ಆಶ್ರಮದವರನ್ನು ವಾತ್ಸಲ್ಯಕ್ಕೆ ತಲುಪಿಸಿದ.

ಎಲ್ಲರೂ ಕೋಣೆಗಳನ್ನು ಆರಿಸಿಕೊಂಡು ತಮ್ಮ ತಮ್ಮ ವಸ್ತುಗಳನ್ನು ವಾರ್ಡ್ರೋಬ್‌ನಲ್ಲಿ ಇಟ್ಟುಕೊಂಡರು. ಮಾಧುರಿ ಮೋಹನ್ ತಮ್ಮ ಆಶ್ರಮದವರೆಲ್ಲರಿಗೂ ಒಳ ಉಡುಪುಗಳು, ಎರಡೆರಡು ಟವಲ್, ಎರಡೆರಡು ಸೀರೆ ತಂದು ಕೊಟ್ಟಿದ್ದರು.
ಅಂದು ಬೆಳಿಗ್ಗೆ ಗೌರಮ್ಮ, ಸರಸಮ್ಮ ಸೇರಿ ಉಪ್ಪಿಟ್ಟು, ಸಜ್ಜಿಗೆ ಮಾಡಿದ್ದರು. ಮಧ್ಯಾಹ್ನ ಊಟಕ್ಕೆ ಅನ್ನ, ಸಾಂಬಾರು, ತಿಳಿಸಾರು, ಮೊಸರುಬಜ್ಜಿ ಮಾಡಿದ್ದರು.
“ಗೌರಮ್ಮ ಯಾಕೆ ಚಿನ್ಮಯಿ ಕಾಣಿಸ್ತಿಲ್ಲ?”
“ಅವಳ ಪರೀಕ್ಷೆ ಮುಗಿದ ದಿನವೇ ಅವಳು ಶ್ರೀರಂಗಪಟ್ಟಣಕ್ಕೆ ಹೋದಳು. ಅವಳ ತಂದೆಗೆ ಹುಷಾರಿಲ್ಲ. ಅವರನ್ನು ನೋಡಿಕೊಂಡು ಅಲ್ಲೇ ಇದ್ದಾಳೆ.”
“ಅವಳು ಮುಂದೆ ಓದಲ್ವಾ?”
“ಎಂ.ಎಸ್.ಸಿ. ಮಾಡ್ತೀನಿ” ಅಂತಿದ್ದಾಳೆ ನೋಡಬೇಕು.
ಅಂದು ರಾತ್ರಿ ಚಪಾತಿ ಬೇಕಾದವರಿಗೆ ಚಪಾತಿ ಕೊಟ್ಟು, ಉಳಿದವರಿಗೆ ಅನ್ನ, ಸಾಂಬಾರ್ ಮಾಡಿದರು ಗೌರಮ್ಮ.

ಭಾಸ್ಕರ ಅಂದು ಒಂದು ಗಂಟೆಗೆ ಸರಿಯಾಗಿ ಆಶ್ರಮಕ್ಕೆ ಬಂದ. ರಾಜಲಕ್ಷ್ಮಿಯವರನ್ನು ಭೇಟಿಮಾಡಿ
“ಅಮ್ಮಾ ಲೆಕ್ಕ ಬರೆಯಲು ಶುರು ಮಾಡ್ತೀನಿ. ಗೌರಮ್ಮನವರು ದಿನಸಿ, ಹಾಲು, ಮೊಸರು, ತರಕಾರಿಗೆ ಏನು ಖರ್ಚುಮಾಡಿದ್ದಾರೇಂತ ಗೊತ್ತಿದೆಯಾ?”
“ಅವರನ್ನೇ ಕೇಳು ಹೇಳ್ತಾರೆ.”
“ಆಯಿತಮ್ಮ. ಒಂದನೇ ತಾರೀಕು 3 ಟ್ರಿಪ್ ವ್ಯಾನ್ ಬಳಸಲಾಯಿತು. ಅದರ ಬಾಬ್ತು 1200 ರೂ. ಆಗಿದೇಂತ ಮೋಹನ್‌ಸರ್ ಹೇಳಿದರು.”
“ಆ ಲೆಕ್ಕಾನೂ ಸೇರಿಸು.”
“ಅಮ್ಮಾ ಎರಡು ಲಾಂಗ್‌ಬುಕ್, ಒಂದು ದಸ್ತು, ವೈಟ್ ಪೇಪರ್ ತಂದಿದ್ದೇನೆ. ಆಶ್ರಮದಲ್ಲಿರುವವರ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಒಳ್ಳೆಯದು ಅನ್ನಿಸತ್ತೆ.”
“ಹಾಗೇ ಮಾಡೋಣ. ಮೊದಲು ನೀನೊಂದು ಕೆಲಸ ಮಾಡಬೇಕು.”
“ಏನು ಮಾಡಬೇಕು ಹೇಳಿ.”
“ಎರಡು ವಾಷಿಂಗ್ ಮಿಷನ್ ತರಬೇಕು. ಕೆಳಗಿನ ರೂಂನವರಿಗೊಂದು ಮೇಲಿನ ರೂನವರಿಗಳಿಗೊಂದು.”
“ಮೇಲ್ಗಡೆ ರೂಮ್‌ನವರಿಗೆ ದೊಡ್ಡದು ಬೇಕಾಗತ್ತೆ. ಕೆಳಗಿನವರಿಗೆ ಮಾಮೂಲು ಸೈಜ್ ಸಾಕು.”
“ಹಾಗೇ ಮಾಡು.”

ಅವನು ಹಣ ತೆಗೆದುಕೊಂಡು ಹೊರಟ. ಅವನು ವಾಪಸ್ಸು ಬರುವ ವೇಳೆಗೆ ಒಬ್ಬ 20-21ರ ಅಂಚಿನಲ್ಲಿದ್ದ ಹುಡುಗಿ ಕುಳಿತಿದ್ದಳು. ಅವಳು ಒಂದು ಬಿಳಿಹಾಳೆಯಲ್ಲಿ ಏನೋ ಬರೆಯುತ್ತಿದ್ದಳು. ಭಾಸ್ಕರ ಅವಳ ಮುಂದೆ ಹೋಗಿ ನಿಂತುಕೊಂಡ.
“ಓ ನೀವ್ಯಾರು? ಏನಾಗಬೇಕಿತ್ತು?”
“ನಾನು….”
“ನಿಮ್ಮ ತಾಯೀನ್ನ ವೃದ್ಧಾಶ್ರಮಕ್ಕೆ ಸೇರಿಸಕ್ಕೆ ಬಂದಿದ್ದೀರಾ? ಹೆತ್ತತಾಯಿ ಬಗ್ಗೆ ನಿಮಗೆ ಪ್ರೀತೀನೇ ಇಲ್ಲವಾ? ನಿಮ್ಮನ್ನು ಹೊತ್ತು ಹೆತ್ತು ಸಾಕಿ ಸಲುಹಿ ನೆಲೆ ಮುಟ್ಟಿಸಲು ನಿಮಗೆ ತಾಯಿಬೇಕು. ಆದರೆ ಅವರಿಗೆ ವಯಸ್ಸಾದಾಗ ಅವರು ಭಾರ ಅನ್ನಿಸಿಬಿಡ್ತಾರೆ ಅಲ್ವಾ?”
ಅಷ್ಟರಲ್ಲಿ ರಾಜಲಕ್ಷ್ಮಿ ಅಲ್ಲಿಗೆ ಬಂದರು.

PC: Internet

“ಅಮ್ಮಾ, ವಾಷಿಂಗ್‌ಮಿಷನ್ ಬುಕ್ ಮಾಡಿ ಬಂದಿದ್ದೇನೆ. ನಾಳೆ ಮಧ್ಯಾಹ್ನ ಒಂದು ಘಂಟೆಗೆ ಬಂದು ಫಿಕ್ಸ್ ಮಾಡ್ತಾರಂತೆ. ನಾನೂ ಅಷ್ಟು ಹೊತ್ತಿಗೆ ಇರ‍್ತೇನೆ.”
“ಹಾಗೇ ಮಾಡು ಭಾಸ್ಕರ. ನೀನು ಒಂದು ಲಾಂಗ್ ಬುಕ್ ಗೋದಾಮಣಿಯವರಿಗೆ ಕೊಡು. ಅವರು ವಿವರಗಳನ್ನು ತುಂಬಿಕೊಡ್ತಾರೆ. ಆದರೆ ಮೇಲ್ಗಡೆ ಇರುವ ಬಹಳ ಮಂದಿಗೆ ಓದು, ಬರಹ ಬರಲ್ಲ.”
“ವಿವರಗಳನ್ನು ಕೇಳಿ ಬರೆದುಕೊಂಡರಾಯ್ತು ಬಿಡಿ ಅಮ್ಮಾ.”
“ನೀನು, ಚಿನ್ಮಯಿ ಸಹಾಯ ತೊಗೋ. ಕೆಲಸ ಬೇಗ ಆಗುತ್ತದೆ.”
“ಚಿನ್ಮಯಿ ಯಾರು?”
“ಓ, ನಿನಗೆ ಚಿನ್ಮಯಿ ಪರಿಚಯ ಇಲ್ಲ ಅಲ್ವಾ? ಇವಳೇ ಚಿನ್ಮಯಿ. ನಮ್ಮ ಗೌರಮ್ಮನ ಮಗಳು ಚಿನ್ಮಯಿ. ಇವನು ಭಾಸ್ಕರ ನನ್ನ ಸಾಕು ಮಗ.”
ಚಿನ್ಮಯಿ ‘ನಮಸ್ಕಾರ’ ಎಂದಳು. ಭಾಸ್ಕರ ಕೂಡ ನಮಸ್ಕಾರ ಹೇಳಿದ.

ರಾಜಲಕ್ಷ್ಮಿ ಹೊರಟುಹೋದಮೇಲೆ ಚಿನ್ಮಯಿ ಮೆಲ್ಲನೆ ಹೇಳಿದಳು.
“ಸಾರಿ. ನೀವು ಯಾರೂಂತ ಗೊತ್ತಿಲ್ಲದೆ ಏನೇನೋ ಮಾತಾಡಿಬಿಟ್ಟೆ.”
“ಪರವಾಗಿಲ್ಲ ಬಿಡಿ. ಆತುರಗಾರರಿಗೆ ಬುದ್ಧಿಮಟ್ಟ ಅನ್ನೋದು ನನಗೆ ಗೊತ್ತು.”
“ನನಗೆ ಬುದ್ಧಿ ಸರಿಯಾಗಿಲ್ವಾ?”
“ಆತುರ ಜಾಸ್ತೀಂತ ಹೇಳಿದೆ ಅಷ್ಟೆ.”

ಅವಳು ಮುಖ ಸೊಟ್ಟ ಮಾಡಿದಳು. ಅಷ್ಟರಲ್ಲಿ ಗೌರಮ್ಮ ಕೂಗಿದರು. “ಚಿನ್ಮಯಿ, ಊಟದ ಸಮಯವಾಯ್ತು. ತಟ್ಟೆಹಾಕು ಬಾ.” ಚಿನ್ಮಯಿ ಅಡಿಗೆಮನೆಗೆ ಓಡಿದಳು. ಭಾಸ್ಕರ ಮಹಡಿ ಹತ್ತಿದ. ಅಲ್ಲಿರುವವರು ಹರಟುತ್ತಾ ಕುಳಿತಿದ್ದರು.
“ಓ ಭಾಸ್ಕರಪ್ಪ ಬನ್ನಿ ಬನ್ನಿ.”
“ನೀವೇನು ಮಾಡ್ತಿದ್ದೀರಾ? ಊಟದ ಸಮಯವಾಯ್ತು. ನಿಮ್ಮ ತಟ್ಟೆಗಳನ್ನು ತೊಳೆದು ಇಟ್ಟುಕೊಳ್ಳಕ್ಕಾಗಲ್ವಾ? ಒಬ್ಬರು ಲೋಟಗಳಿಗೆಲ್ಲಾ ನೀರು ಹಾಕಿ ರೆಡಿ ಮಾಡಿದರೆ, ಗೌರಮ್ಮನಿಗೆ ಸಹಾಯ ಮಾಡಿದಂತಾಗಲ್ವಾ?”
“ನೀವು ಹೇಳ್ತಿರೋದು ಸರಿ. ನಾವು ತಟ್ಟೆ, ಲೋಟ ಸಿದ್ಧ ಮಾಡ್ತೀವಿ.”
“ನಾಳೆ ಮಧ್ಯಾಹ್ನ ವಾಷಿಂಗ್‌ಮಿಷನ್ ಬರತ್ತೆ. ನಿಮ್ಮ ಬಟ್ಟೆಗಳನ್ನು ಹಾಕಬಹುದು. ಸೋಮವಾರ 5 ಜನರ ಬಟ್ಟೆ ಹಾಕಿ. ಮಂಗಳವಾರ 5 ಜನ ಹೀಗೆ ಟೈಂ ಟೇಬಲ್ ಹಾಕಿಕೊಳ್ಳಿ.”
“ಆಯ್ತು ಭಾಸ್ಕರಪ್ಪ.”

ಅಷ್ಟರಲ್ಲಿ ಲಿಫ್ಟ್ ಮೂಲಕ ಅನ್ನ, ಹುಳಿ, ತಿಳಿಸಾರು ಪಾತ್ರೆಗಳಿಗೆ ಹಾಕಿ ತಂದಳು ಚಿನ್ಮಯಿ. ಅವಳ ಹಿಂದೆ ಉಪ್ಪಿನಕಾಯಿ, ಮಜ್ಜಿಗೆ ಹಿಡಿದು ಬಂದರು ಗೌರಮ್ಮ.
“ಭಾಸ್ಕರ ಕೆಳಗಿನವರಿಗೆ ಊಟ ಕೊಟ್ಟಿದ್ದೇನೆ. ನೀವು ಅಲ್ಲಿದ್ದು ಅವರ ಬೇಕು ಬೇಡ ಗಮನಿಸ್ತೀರಾ?”
“ಆಗಲಿ ಗೌರಮ್ಮನವರೇ” ಎಂದು ಭಾಸ್ಕರ ಮೆಟ್ಟಿಲಿಳಿದ.
ಹನ್ನೆರಡು ಜನರೂ ಊಟಕ್ಕೆ ಕುಳಿತಿದ್ದರು. ರಾಜಲಕ್ಷ್ಮಿ ಒಂದು ಚೇರ್‌ನಲ್ಲಿ ಕುಳಿತಿದ್ದರು.
ಭಾಸ್ಕರ ಹೋಗಿ ಬಡಿಸಿದ. ಊಟದ ನಂತರ ಎಲ್ಲರೂ ತಮ್ಮ ತಟ್ಟೆ, ಲೋಟಗಳನ್ನು ಸಿಂಕ್‌ನಲ್ಲಿ ಹಾಕಿದರು. ಕೆಲಸದವಳು ಅವಳ ಓರಗಿತ್ತಿ, ಟೇಬಲ್ ಕ್ಲೀನ್ ಮಾಡಿ, ತಟ್ಟೆ, ಲೋಟಗಳನ್ನು ತೊಳೆದಿಟ್ಟರು. ಭಾಸ್ಕರ ಲಾಂಗ್‌ಬುಕ್ ತಂದು ಗೋದಾಮಣಿಗೆ ಕೊಟ್ಟು ಹೇಳಿದ – “ಇಲ್ಲಿರುವ ಕಾಲಂಗಳನ್ನು ಭರ್ತಿ ಮಾಡಿಸಿಕೊಡಿ ಮೇಡಂ.”

(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : 
  https://www.surahonne.com/?p=41894

-ಸಿ.ಎನ್. ಮುಕ್ತಾ

5 Responses

  1. ನಯನ ಬಜಕೂಡ್ಲು says:

    ಚಂದದ ಕಾದಂಬರಿ

  2. ತಾಯಿ ಕಾದಂಬರಿ ಯಲ್ಲಿ ಹೊಸ ವೃದ್ಧಾಶ್ರಮದ ವ್ಯವಸ್ಥೆಯ ಅನಾವರಣ ಚೆನ್ನಾಗಿ ಬಂದಿದೆ…ಕುತುಹಲವಂತೂ ಉಳಿಸಿಕೊಂಡು ಹೋಗುತ್ತಿದೆ..ಮೇಡಂ

  3. ಮುಕ್ತ c. N says:

    ಧನ್ಯವಾದಗಳು. ಒಂದು ಹೊಸ ಕೆಲಸ ಆರಂಭಿಸುವಾಗ ಎದುರಾಗುವ ಎಡರು ತೊಡರುಗಳನ್ನು ಒಬ್ಬ ಇಳಿವಯಸ್ಸಿನ ಮಹಿಳೆ ಹೇಗೆ ಎದುರಿಸಿದರು ಎನ್ನುವ ವಿಚಾರ ಅರ್ಥ ಮಾಡಿಸುವ ಪ್ರಯತ್ನ ಅಷ್ಟೇ.

  4. ಶಂಕರಿ ಶರ್ಮ says:

    ಕುತೂಹಲವನ್ನು ಉಳಿಸಿಕೊಂಡು ಮುಂದುವರಿಯುತ್ತಿರುವ ಕಾದಂಬರಿ ಬಹಳ ಚೆನ್ನಾಗಿದೆ ಮೇಡಂ.

  5. ಪದ್ಮಾ ಆನಂದ್ says:

    ರಾಜಲಕ್ಷ್ಮಿಯವರು ಎದುರಾದ ಎಡರು ತೊಡರುಗಳನ್ನು ನಿವಾರಿಸಿಕೊಂಡು ತಾವಂದುಕೊಂಡದ್ದನ್ನು ಸಾಧಿಸಿದ್ದು ಸಂತಸ ತಂದಿತು.

Leave a Reply to ಮುಕ್ತ c. N Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: