ವರ್ತುಲದೊಳಗೆ…..ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು….)

ರಾಘವ ದಂಪತಿಗಳು ಹೇಳಿದ ಎಲ್ಲಾ ವಿವರಗಳನ್ನು ತಾಳೆಹಾಕಿದಾಗ ಲಲಿತಾರವರಿಗೆ ಭಾರತದಲ್ಲೂ ಇಂತಹ ಕೆಲವು ಅಧ್ಯಾತ್ಮ ಸಂಸ್ಥೆಗಳ ಬಗ್ಗೆ ಓದಿದ್ದು ನೆನಪಾಯಿತು. ಧರ್ಮಗುರುಗಳೆಂದು ಅಧ್ಯಾತ್ಮ ಬೋಧನೆಯ ಮುಖವಾಡವಿಟ್ಟುಕೊಂಡು ಜನರಿಂದ ಅಪಾರವಾದ ಧನಸಂಗ್ರಹಿಸಿ ಐಷಾರಾಮಿ ಆಶ್ರಮಗಳನ್ನು ನಿರ್ಮಿಸಿಕೊಂಡಿದ್ದ ಕೆಲವರ ಹೆಸರುಗಳು ಕಣ್ಮುಂದೆ ಬಂದವು. ಧನವೊಂದಿಗರ ಪೋಷಣೆಯಲ್ಲಿ ನಿರ್ಮಿಸಿದ ಇಂತಹ ರಕ್ಷಿತ ಆವರಣಗಳಲ್ಲಿ ಎಷ್ಟೋ ಗುಪ್ತ ಕಾರ್ಯಾಚರಣೆಗಳು ನಡೆಯುತ್ತಿದ್ದವು. ಸರ್ಕಾರ ಕೂಡ ಇವುಗಳ ನಿಗೂಢತೆಯನ್ನು ಭೇದಿಸಲು ಸಾಧ್ಯವಾಗುತ್ತಿಲ್ಲ. ಇಂತಹುದೇ ಒಂದು ಅಧ್ಯಾತ್ಮ ಸಂಘ ಈ ‘ಹರಿ ಓಂ’ ಆಶ್ರಮವಿರಬಹುದೆಂದು ಊಹೆ ಮಾಡಿದರು. ಇದರ ರಹಸ್ಯವೇನಿರಬಹುದೆಂದು ಆಲೋಚಿಸುವಷ್ಟರಲ್ಲಿ ಅವರು ಇಳಿಯಬೇಕಾದ ನಿಲ್ದಾಣ ಬಂದುಬಿಟ್ಟಿತ್ತು. ಕೆಳಗಿಳಿಯುತ್ತಿದ್ದಂತೆ ದೂರದಲ್ಲಿ ವಾಹನದೊಂದಿಗೆ ಕಾಯುತ್ತಿದ್ದ ರಾಘವ ದಂಪತಿಗಳು ಕಣ್ಣಿಗೆ ಬಿದ್ದರು.

ಮುಂದಿನ ರಸ್ತೆ ದುರ್ಗಮವಾಗಿ ಕಂಡಿತು. ಏಕೆಂದರೆ ಅದು ಪೂರ್ಣವಾಗಿ ಕಾಡೊಂದರೊಳಗಿನ ಪ್ರಯಾಣವಾಗಿತ್ತು. ಸುಮಾರು ಹತ್ತು ಮೈಲಿಯಷ್ಟು ಕ್ರಮಿಸಿದಾಗ ದೂರದಲ್ಲಿ ಬೃಹದಾಕಾರದ ಒಂದು ಕಟ್ಟಡಸಂಚಯ ಕಾಣಿಸಿತು. “ಲಲಿತಾರವರೇ, ಅದೋ ನೋಡಿ ಆಶ್ರಮದ ಕಟ್ಟಡ” ಎಂದು ಕೈ ತೋರಿದರು. ಇನ್ನೇನು ಕಟ್ಟಡ ಐವತ್ತು ಹೆಜ್ಜೆಗಳಷ್ಟಿದೆ ಎನ್ನುವಾಗ ಕಾರು ನಿಲ್ಲಿಸಿ “ಇಲ್ಲಿಂದ ನೀವೊಬ್ಬರೇ ಹೋಗಬೇಕು. ನಾವು ನಿಮ್ಮೊಟ್ಟಿಗೆ ಬಂದರೆ ಸಿಂಧು ನಿಮ್ಮನ್ನೂ ಭೇಟಿ ಮಾಡಲು ನಿರಾಕರಿಸಬಹುದು” ಎಂದರು ರಾಘವ. “ಯಾವಾಗ ಅಗತ್ಯ ಬಿದ್ದರೂ ನಮಗೆ ದೂರವಾಣಿ ಕರೆ ಮಾಡಿ. ನಾವು ಇಲ್ಲ್ಲಿಗೆ ಸಮೀಪದಲ್ಲೇ ಇರುವ ಹೋಟೆಲೊಂದರಲ್ಲಿ ವಾಸ್ತವ್ಯ ಮಾಡಿದ್ದೇವೆ” ಎಂದರು.

ಕೆಳಗಿಳಿದು ತಮ್ಮ ಬ್ರೀಫ್‌ಕೇಸ್ ಮತ್ತು ಹ್ಯಾಂಡ್ ಬ್ಯಾಗುಗಳನ್ನೆತ್ತಿಕೊಂಡು ಲಲಿತಾ ಆಶ್ರಮದ ಮುಖ್ಯದ್ವಾರದತ್ತ ಮುಂದುವರೆದರು. ಆಶ್ರಮದ ಪ್ರವೇಶದಲ್ಲಿ ಎತ್ತರವಾದ ಕಬ್ಬಿಣದ ಗೇಟು, ಅದನ್ನು ಕಾಯುತ್ತಿದ್ದ ಒಬ್ಬ ಸೆಕ್ಯೂರಿಟಿ ಮನುಷ್ಯ ಕಾಣಿಸಿದ. ಇವರು ಹತ್ತಿರ ಹೋದ ತಕ್ಷಣ ಅವನು ಅವರನ್ನು ತಡೆದು ನಿಲ್ಲಿಸಿ “ನೀವು ಯಾರು? ಮೊದಲೇ ಅಪಾಯಿಂಟ್‌ಮೆಂಟೇನಾದರೂ ಪಡೆದುಕೊಂಡಿದ್ದೀರಾ?” ಎಂದು ಕೇಳಿದ. ಲಲಿತಾರವರು “ನಾನು ಇಲ್ಲಿನ ಅಕೌಂಟೆಂಟ್ ಸಿಂಧುರವರ ಆಂಟಿ. ಹೀಗೇ ಇಲ್ಲಿ ಹತ್ತಿರದಲ್ಲಿ ಕೆಲಸದ ಮೇಲೆ ಬಂದಿದ್ದೆ. ಸಿಂಧುವನ್ನು ಮಾತನಾಡಿಸಿಕೊಂಡು ಹೋಗೋಣವೆಂದು ಬಂದೆ” ಎಂದರು. “ನೀವು ಒಳಗೆ ಹೋಗುವಂತಿಲ್ಲ, ನಾನೇ ಸಿಂಧುಮೇಡಂಗೆ ಫೋನ್ ಮಾಡುತ್ತೇನೆ” ಎಂದು ಹೇಳಿದ. ಫೋನಿನಲ್ಲಿ ಲಲಿತಾ ಎನ್ನುವವರು ನಿಮ್ಮ ಆಂಟಿಯೆಂದು ಹೇಳಿ ನಿಮ್ಮನ್ನು ನೋಡಲು ಬಂದಿದ್ದಾರೆ ಎಂದು ತಿಳಿಸಿದ. ಆ ಕಡೆಯಿಂದ ನಾನೇ ಬರುತ್ತೇನೆ ಎಂದುತ್ತರ ಬಂತು. “ಅವರೇ ಇಲ್ಲಿಗೆ ಬರುತ್ತಾರೆ ಕಾಯಿರಿ” ಎಂದು ಹೇಳಿದ. ಕೆಲವೇ ಕ್ಷಣದಲ್ಲಿ ಸಿಂಧು ಅಲ್ಲಿಗೆ ಬಂದಳು. “ಬನ್ನಿ ಆಂಟಿ, ಇಲ್ಲಿನ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಅದಕ್ಕೇ ಈ ವಿಚಾರಣೆ.” ಎಂದು ತನ್ನೊಡನೆ ಲಲಿತಾರವರನ್ನು ಒಳಕ್ಕೆ ಕರೆದುಕೊಂಡು ಹೋದಳು. ತನ್ನ ಕೊಠಡಿಯೊಳಗೆ ಕರೆದು ಕೂಡಿಸಿ “ಆಫೀಸಿನಲ್ಲಿ ಸ್ವಲ್ಪ ಅರ್ಧಂಬರ್ಧ ಕೆಲಸಗಳಿವೆ. ಅವನ್ನು ಬೇಗ ಮುಗಿಸಿ ಬಂದು ಬಿಡುತ್ತೇನೆ. ನೀವು ಅಷ್ಟು ಹೊತ್ತಿಗೆ ಫ್ರೆಶ್ ಆಗಿ” ಎಂದು ಅವಸರದಿಂದ ಹೊರನಡೆದಳು ಸಿಂಧು.

ಲಲಿತಾರವರು ಕೈಕಾಲು ಮುಖ ತೊಳೆದು ಬರುವಷ್ಟರಲ್ಲಿ ಯಾರೋ ಒಬ್ಬರು ಕಾಫಿ ಮತ್ತು ಅಲ್ಪೋಪಹಾರಗಳನ್ನು ತಂದಿತ್ತರು. ಅವನ್ನು ಮುಗಿಸಿ ಸುತ್ತ ಕಣ್ಣಾಡಿಸಿದರು. ಅನುಕೂಲಕರವಾದ ಕೊಠಡಿ. ಮಂಚ, ಸೋಫಾ, ಟೇಬಲ್ ಕುರ್ಚಿಗಳ ಜೊತೆಗೆ ಒಂದು ಟಿ.ವಿ., ಎ.ಸಿ, ಎಲ್ಲವೂ ಇತ್ತು. ಕುತೂಹಲ ತಡೆಯಲಾರದೆ ಹೊರಗಡೆ ಬಂದು ವೆರಾಂಡಾದ ಉದ್ದಕ್ಕೂ ಕಣ್ಣಾಡಿಸಿದರು. ಸಾಲಾಗಿ ಕೊಠಡಿಗಳಿದ್ದವು. ಎದುರಿಗಿದ್ದ ಒಂದು ಅಂಗಳದಂಥಹ ದೊಡ್ಡ ಸಭಾಂಗಣವೊಂದಿತ್ತು. ಅಲ್ಲಿ ಶಬ್ಧಗಳನ್ನು ಕೇಳಿ ಮುಂದಕ್ಕೆ ಹೋಗಿ ಕಿಟಕಿಯೊಳಗಿಂದ ಒಳಗಿನ ನೋಟವನ್ನು ಗಮನಿಸಿದರು. ಒಳಗಡೆ ಹತ್ತಾರು ಜೋಡಿಗಳಿದ್ದವು. ಎಲ್ಲರೂ ಕೈಗಳನ್ನು ಮೇಲಕ್ಕೆತ್ತಿ ಭಜನೆಯೊಂದನ್ನು ಸಮೂಹ ನೃತ್ಯದ ರೀತಿಯಲ್ಲಿ ನಡೆಸಿದ್ದರು. ಮಧ್ಯೆಮಧ್ಯೆ ಪರಸ್ಪರ ಗಂಡುಹೆಣ್ಣು ಭೇದವಿಲ್ಲದೆ ಅಪ್ಪಿಕೊಳ್ಳುತ್ತಿದ್ದರು, ಮುಂದ್ದಾಡುತ್ತಿದ್ದರು. ಹೊರನೋಟಕ್ಕೇ ಅವರು ಯಾವುದೋ ಭ್ರಮಾಲೋಕದಲ್ಲಿ ತೇಲಾಡುತ್ತಿದ್ದಂತೆ ಭಾಸವಾಗುತ್ತಿತ್ತು. ಇವರಿಗೆ ತಕ್ಷಣ ಭಾರತದಲ್ಲಿನ ಕೆಲವು ಪ್ರಸಿದ್ಧ ದೇವಮಾನವರೆಂಬುವರ ಆಶ್ರಮಗಳ ಬಗ್ಗೆ ಓದಿದ್ದು ನೆನಪಿಗೆ ಬಂತು. ಅಲ್ಲೆಲ್ಲ ಭಕ್ತಾದಿಗಳು ಮಾದಕ ವಸ್ತುಗಳನ್ನು ಬಳಸಿ ಭ್ರಮಾಲೋಕದಲ್ಲಿ ವಿಹರಿಸುತ್ತಾರೆಂದೂ ಅವರಲ್ಲಿ ನೈತಿಕ ಅಡೆತಡೆಗಳ್ಯಾವುದೂ ಇಲ್ಲದೆ ಕೇಳಿಗಳನ್ನು ನಡೆಸುವರು ಎಂದು. ಇದೂ ಅಂತಹುದೇ ಒಂದು ಆಚರಣೆಯೆಂಬುದು ತಕ್ಷಣ ಅವರಿಗೆ ತಿಳಿದುಹೋಯಿತು.

ಅಷ್ಟರಲ್ಲಿ ಸಿಂಧು ಲಲಿತಾರನ್ನು ಹುಡುಕಿಕೊಂಡು ಅಲ್ಲಿಗೇ ಬಂದಳು “ನನ್ನ ಕೆಲಸ ಮುಗಿಯಿತು ಆಂಟಿ, ಬನ್ನಿ ಆರಾಮವಾಗಿ ಕುಳಿತು ಮಾತನಾಡೋಣ” ಅವರನ್ನು ಕೊಠಡಿಯೊಳಕ್ಕೆ ಕರೆದುಕೊಂಡು ಹೋದಳು. ಲಲಿತಾ ಅವಳನ್ನು ದಿಟ್ಟಿಸಿ ನೋಡಿದರು. ಅವರಿಗೆ ಆಕೆ ತುಂಬ ಬದಲಾದಂತೆ ಕಾಣಿಸಿದಳು. ನಮ್ಮ ಮನೆಗೆ ಬಂದು ಮಕ್ಕಳೊಡನೆ ಆಟವಾಡುತ್ತಿದ್ದ ಹುಡುಗಿ ಇವಳೇನೇ? ಎಂದು ಅಚ್ಚರಿಯಾಯಿತು. ಅವಳ ಉಡುಪೇ ಬದಲಾಯಿಸಿತ್ತು. ಹೆಚ್ಚಾಗಿ ನೆರಿಗೆಯುಳ್ಳ ಪೈಜಾಮ, ಅದರ ಮೇಲೆ ದೊಗಲೆ ದೊಗಲೆಯಾದ ಕುರ್ತಾ, ಕೊರಳಲ್ಲಿ ಸುತ್ತಿಕೊಂಡಿದ್ದ ವಸ್ತ್ರ, ನೀಳವಾದ ಕೂದಲನ್ನು ಪಕ್ಕದಿಂದ ತೆಗೆದು ಭದ್ರವಾಗಿ ಸೇರಿಸಿ ಹಾಕಿದ ಕ್ಲಿಪ್. ಹಣೆಯಮೇಲೆ ಉದ್ದನೆಯ ನಾಮ, ಕಿವಿಯಲ್ಲಿ ಬಂಡಿಗಾಲಿಯಂತ ರಿಂಗುಗಳು, ಬಣ್ಣಬಣ್ಣದ ಮಣಿಗಳನ್ನು ಪೋಣಿಸಿ ಹಾಕಿಕೊಂಡಿದ್ದ ಸರ, ಮತ್ತು ಒಂದು ಕೈಯಿಗೆ ಅಂತಹುದೇ ಬಳೆ, ಇಮ್ಮೊಂದು ಕೈಯಿಗೆ ವಾಚ್, ತುಂಬುನಗೆಯನ್ನು ಚೆಲ್ಲುತ್ತಾ ನಿಂತಿರುವ ಚೆಲುವೆ. ಇವಳನ್ನು ಈ ಕೂಪದಿಂದ ಹೇಗೆ ಬಿಡಿಸಿಕೊಂಡು ಹೋಗುವುದು ಎಂದಂದುಕೊಂಡರು. ಲಲಿತಾರವರಿಗೆ ಆಗಲೇ ಮನಸ್ಸು ಕಲಕಿಹೋಗಿತ್ತು. “ಈ ಹುಡುಗಿ ಎಂತಹ ಭ್ರಮಾಲೋಕದ ದಾರಿ ಹಿಡಿದಿದ್ದಾಳೆ. ಅವಳಿಗೆ ಮನೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸಿಗಲಿಲ್ಲ. ಸ್ವಾತಂತ್ರ್ಯವೂ ಸಿಗಲಿಲ್ಲ. ಹಾಗೆಂದು ತಡೆಬಡೆಯಿಲ್ಲದ ಸ್ವೇಚ್ಛಾಚಾರದ ಗುಂಪಿನಲ್ಲಿ ಸೇರುವುದೇ?” ಎಂದು ಆಲೋಚಿಸುತ್ತಿದ್ದಂತೆ ಸಿಂಧು “ ನೀವು ಒಬ್ಬರೇ ಕೆಲಸಕ್ಕಾಗಿ ಇಲ್ಲಿಗೆ ಬಂದಿಲ್ಲ. ನನಗೆ ತಿಳಿಯುತ್ತದೆ. ನನ್ನ ತಂದೆತಾಯಿಗಳು ನಿಮ್ಮನ್ನು ತಾವೇ ಕರೆದುಕೊಂಡು ಬಂದಿದ್ದಾರೆ. ಏಕೆಂದರೆ ನಾನು ಅವರೊಡನೆ ಮಾತನಾಡುವುದಿಲ್ಲ. ಹೇಗಾದರೂ ನನ್ನನ್ನು ಹಿಂದಕ್ಕೆ ಕರೆದುಕೊಂಡು ಬನ್ನಿ ಎಂದು ನಿಮಗೆ ಹೇಳಿದ್ದಾರೆ ಅಲ್ಲವೇ?” ಎಂದು ಪ್ರಶ್ನಿಸಿದಳು. ಇನ್ನು ಏನನ್ನೂ ಮುಚ್ಚಿಡುವುದು ಸರಿಯಲ್ಲವೆಂದು ಲಲಿತಾ “ಹೌದಮ್ಮಾ, ನಾನು ನಿನಗೋಸ್ಕರವೇ ಬಂದದ್ದು” ಎಂದರು.

“ನಾನಿನ್ನು ಆ ಪ್ರೀತಿಯೇ ಇಲ್ಲದವರ ಮನೆಗೆ ಕಾಲಿಡುವುದಿಲ್ಲ. ನನಗೆ ಆ ಬಂಧನದ ಬದುಕು ಬೇಡ. ಎಲ್ಲ ಅವರುಗಳು ಹೇಳಿದಂತೆಯೇ ನಡೆಯಬೇಕು. ನಮ್ಮ ಅಭಿಪ್ರಾಯಗಳಿಗೆ ಕೊಂಚವೂ ಬೆಲೆಯಿಲ್ಲ. ಇಲ್ಲಿ ನನ್ನನ್ನು ನಿಯಂತ್ರಿಸುವವರು ಯಾರೂ ಇಲ್ಲ. ನನಗೆ ಹೇಗೆ ಬೇಕೋ ಹಾಗೆ ಇದ್ದೇನೆ. ವ್ಯಕ್ತಿ ಸ್ವಾತಂತ್ರö್ಯವನ್ನು ಪೂರ್ಣವಾಗಿ ಅನುಭವಿಸುತ್ತಿದ್ದೇನೆ. ಬೇಸರ ಕಳೆಯಲು ಭಜನೆ, ಸತ್ಸಂಗಕೂಟ, ಧ್ಯಾನ, ಯೋಗ ಎಲ್ಲವೂ ಮುಕ್ತವಾಗಿದೆ. ಯಾವುದಕ್ಕೂ ಒತ್ತಾಯವಿಲ್ಲ. ನನ್ನ ಕೆಲಸ ಮುಗಿಸಿದ ಬಳಿಕ ನಾನು ನಿರಾಳವಾಗಿರಬಹುದು” ಎಂದುತ್ತರಿಸಿದಳು.

ಲಲಿತಾರವರಿಗೆ ತಮ್ಮ ಕಣ್ಣ ಮುಂದೆಯೇ ಬೆಳೆದ ಆ ಹುಡುಗಿಯ ಮಾತುಗಳನ್ನು ಅರಗಿಸಿಕೊಳ್ಳಲು ತುಸು ಸಮಯ ಬೇಕಾಯಿತು. “ ನೀನಂದುಕೊಂಡಂತೆ ನಿನ್ನ ತಂದೆತಾಯಿಗಳು ನಿನ್ನ ಶತೃಗಳಲ್ಲ. ನಿಜ ಅವರು ನಿನ್ನ ಮೇಲೆ ಕೆಲವು ಕಟ್ಟುಪಾಡುಗಳನ್ನು ಹೇರಿದ್ದರು. ಹಾಗೂ ಮಾತುಮಾತಿಗೂ ನಿನ್ನನ್ನು ಟೀಕಿಸುತ್ತಿದ್ದರು, ನಿನ್ನ ಉತ್ತಮ ಸಾಧನೆಗಳ ಬಗ್ಗೆ ಪ್ರಶಂಸೆಮಾಡುತ್ತಿರಲಿಲ್ಲ. ಅದೆಲ್ಲ ಅವರು ನೀನು ಓದುವಾಗ ಏಕಾಗ್ರತೆಯಿರಲಿ, ಚೆನ್ನಾಗಿ ಸಾಧನೆಮಾಡಲಿ, ಉತ್ತಮ ಸ್ಥಾನ ಗಳಿಸಲಿ ಎಂಬ ಉದ್ದೇಶದಿಂದಲೇ ಮಾಡಿದ್ದು. ಅಲ್ಲದೆ ಅಮೆರಿಕದ ಯುವಕ ಯುವತಿಯರಂತೆ ನೀನು ಅವರ ರೀತಿನೀತಿಗಳಿಗೆ ಮರುಳಾಗಬಾರದೆನ್ನುವ ಕಾಳಜಿ ಅಷ್ಟೆ. ಆದರೆ ಅವರು ಸ್ವಲ್ಪ ಮಟ್ಟಿಗೆ ತಾಳ್ಮೆಯಿಂದ ವರ್ತಿಸಬೇಕಾಗಿತ್ತು. ಅದರ ಬಗ್ಗೆ ನಾನೂ ಎಷ್ಟೋ ಸಾರಿ ಅವರನ್ನು ಎಚ್ಚರಿಸಿದ್ದೆ. ಆದರೂ ನನ್ನ ಮಾತನ್ನು ಅಂದು ಅವರು ಸರಿಯಾಗಿ ಗಮನಿಸದೇ ಹೋದರು. ನಿನ್ನ ಮನಸ್ಸು ಒಳಗಿಂದೊಳಗೇ ಅವರ ಬಗ್ಗೆ ತಿರಸ್ಕಾರ ಬೆಳೆಸಿಕೊಂಡಿತು. ಆದರೆ ಈಗ ಅವರಿಗೆ ತಮ್ಮ ನಡವಳಿಕೆಯ ಬಗ್ಗೆ ಸಂಪೂರ್ಣ ಪಶ್ಚಾತ್ತಾಪವಾಗಿದೆ. ಅದಕ್ಕಾಗಿ ನೀನು ಮನೆಯನ್ನೇ ತೊರೆಯುವ ನಿರ್ಧಾರ ಮಾಡಿ ನೀಡಿದ ಶಿಕ್ಷೆ ಅತ್ಯಂತ ಕ್ರೂರವಾದದ್ದು ಸಿಂಧು. ಅವರೆಂದೂ ನಿನ್ನ ಶತೃಗಳಲ್ಲಾ. ಅವರು ತಮ್ಮ ಕೃತ್ಯಗಳಿಗಾಗಿ ನೊಂದು ಬೆಂದಿದ್ದಾರೆ. ಅವರಿಗೆ ತಮ್ಮ ಮಗಳು ಬೇಕು. ಅವಳು ಎಂದೆಂದಿಗೂ ಅವರ ಕಂದನೇ. ತಪ್ಪಿಗಾಗಿ ಏನು ಮಾಡಲೂ ತಯಾರಾಗಿದ್ದಾರೆ. ಇಲ್ಲಿ ನಾನು ಕೊಂಚವೇ ಕಂಡ ದೃಶ್ಯಾವಳಿಗಳೇ ನನಗೆ ಸಾಕು. ಇದೂ ಒಂದು ಅಮಲಿನ ಪ್ರಪಂಚವೆಂದು ತಿಳಿಯಲು. ಇದು ಭಕ್ತಿಯ ಹೆಸರಿನಲ್ಲಿ ನಡೆಯುವ ಸಮ್ಮೋಹಿನಿ ಪ್ರಯೋಗವೇ ಹೊರತು ನಿಜವಾದ ಅರ್ಥದಲ್ಲಿ ಅಧ್ಯಾತ್ಮ ಸಾಧನಾ ಕೇಂದ್ರವಲ್ಲ. ಇಂತಹ ಹಲವಾರು ಕೇಂದ್ರಗಳು ಭಾರತದಲ್ಲೂ ಇವೆ. ಕೆಲವು ಇಂತಹ ಆಶ್ರಮಗಳ ಬಗ್ಗೆ ನಾನೂ ಓದಿ ತಿಳಿದಿದ್ದೇನೆ. ಇಂತಲ್ಲಿ ತಮ್ಮ ಹುಚ್ಚು ಮೋಹದಿಂದ ಸೇರಿಕೊಂಡು ಭ್ರಮಾಧೀನರಾದ ಕೆಲವು ಬುದ್ಧಿಜೀವಿಗಳೂ ಕೂಡ ಕೊನೆಗೆ ಭ್ರಮನಿರಸನ ಹೊಂದಿರುವುದು ಸಾಬೀತಾಗಿದೆ. ನೀನು ನಿನ್ನ ತಂದೆ ತಾಯಿಗಳ ಬಂಧನದಿಂದ ಬಿಡುಗಡೆ ಬಯಸಿ ಇಂತಲ್ಲಿ ಬಂದಿದ್ದೀಯೆ. ನಿಧಾನವಾಗಿ ಆಲೋಚಿಸು ಸಿಂಧು. ನಿನ್ನ ಮುಂದಿನ ದೀರ್ಘವಾದ ಬದುಕು ಇಲ್ಲಿಯೇ ವ್ಯರ್ಥವಾಗಿ ಭ್ರಮೆಯಲ್ಲಿಯೇ ಕೊನೆಗೊಳ್ಳಬೇಕೇ? ಅಥವಾ ಸಮಾಜದಲ್ಲಿ ಎಲ್ಲರಂತೆ ಸಾರ್ಥಕವಾಗಿ ನಿನ್ನಲ್ಲಿರುವ ಪ್ರತಿಭೆಯಿಂದ ಸೇವೆ ಸಲ್ಲಿಸುವ ಬದುಕು ಬೇಕೇ? ಆಯ್ಕೆ ನಿನ್ನದು. ಆವೇಶದಿಂದ ತೆಗೆದುಕೊಂಡ ತೀರ್ಮಾನ ಸರಿಯಾದುದಲ್ಲ. ವಿವೇಕಯುತವಾದ ತೀರ್ಮಾನಕ್ಕೆ ಬಾ. ಈಗಲೂ ಕಾಲ ಮಿಂಚಿಲ್ಲ. ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳಂತೆ. ರಾತ್ರಿಯೆಲ್ಲ ಆಲೋಚಿಸು ಒಂದು ನಿರ್ಧಾರಕ್ಕೆ ಬಾ. ನಿನ್ನ ತಂದೆತಾಯಿಗಳು ಇಲ್ಲಿಯೇ ಹತ್ತಿರದ ಹೋಟೆಲ್ಲಿನಲ್ಲಿ ತಂಗಿದ್ದಾರೆ.” ಎಂದು ತಮ್ಮ ವಿಚಾರಲಹರಿಯನ್ನು ಮನದಟ್ಟು ಮಾಡಿಕೊಟ್ಟಳು.

ಸಿಂಧು “ನಾನು ಬರಬೇಕೆಂದರೂ ಇಲ್ಲಿಂದ ಅನುಮತಿ ಸಿಗಬೇಕು. ಅದಕ್ಕಾಗಿ ಆಡಳಿತಾಧಿಕಾರಿಗಳ ಜೊತೆಗೆ ಮಾತನಾಡಬೇಕು. ಅವರು ಬಿಟ್ಟುಕೊಟ್ಟರೆ ನಾನು ನಿಮ್ಮೊಡನೆ ಬರಲು ಸಿದ್ಧ” ಎಂದಳು.
“ಆ ವಿಷಯ ನನಗೆ ಬಿಡು ನಾನು ಮಾತನಾಡಿ ಅನುಮತಿ ಕೊಡಿಸುತ್ತೇನೆ” ಎಂದರು ಲಲಿತಾ.
“ಅವರು ಊರಿನಲ್ಲಿಲ್ಲ. ನಾಳೆ ಬರುತ್ತಾರೆ. ನಾನೇ ಕರೆದುಕೊಂಡು ಹೋಗುತ್ತೇನೆ.” ಎಂದಳು.
ಇಬ್ಬರೂ ಊಟಮಾಡಲು ಭೋಜನಶಾಲೆಯತ್ತ ನಡೆದರು. ಊಟ ಮುಗಿಸಿ ಬಂದ ನಂತರ ಮಲಗಿ ನಿದ್ರೆ ಹೋದರು.

ಮಾರನೆಯ ಬೆಳಗ್ಗೆ ಸ್ನಾನಪಾನಾದಿಗಳು ಮುಗಿದ ನಂತರ ಸಿಂಧುವೇ ಅವರ ಮುಖ್ಯ ಆಡಳಿತಾಧಿಕಾರಿಗಳು ಬಂದಿದ್ದಾರೆ. ನೀವು ಅವರನ್ನು ಈಗ ಭೇಟಿಮಾಡಬಹುದು ಎಂದು ಹೇಳಿ ಲಲಿತಾರವರನ್ನು ಆಡಳಿತ ಕಛೇರಿಗೆ ಕರೆದುಕೊಂಡು ಹೋದಳು. ಅದೊಂದು ಆಧುನಿಕ ರೀತಿಯಲ್ಲಿ ಭವ್ಯವಾಗಿ ಸಜ್ಜುಗೊಳಿಸಿದ್ದ ವಿಶಾಲವಾದ ಕೊಠಡಿ. ಅದರ ಮಧ್ಯಭಾಗದಲ್ಲಿ ಆಡಳಿತಾಧಿಕಾರಿಗಳ ಮೇಜು, ಅದರ ಮುಂದೆ ಅತಿಥಿಗಳಿಗಾಗಿ ನಾಲ್ಕಾರು ಸುಖಾಸನಗಳು. ಆಧುನಿಕ ರೀತಿಯ ಸಂಪರ್ಕ ಸಾಧನಗಳಿದ್ದವು. ಜೊತೆಗೆ ಒಂದು ಸಿ.ಸಿ.ಟಿ.ವಿ. ಸ್ಕ್ರೀನ್ ಕೂಡ ಇತ್ತು. ಕಟ್ಟಡದ ಯಾವುದೇ ಕೊಠಡಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಅಲ್ಲಿಂದಲೇ ಗಮನಿಸಬಹುದಿತ್ತು. ಬಾಗಿಲಿನಲ್ಲಿ ಸೈಂಧವನಂತಿದ್ದ ಸೆಕ್ಯೂರಿಟಿ ಮನುಷ್ಯನಿದ್ದ. ಅವನ ಬಗಲಲ್ಲಿ ತೂಗುತ್ತಿದ್ದ ಮೆಷಿನ್ ಗನ್ ಕಂಡುಬರುತ್ತಿತ್ತು. ಇಷ್ಟೆಲ್ಲಾ ಎಚ್ಚರಿಕೆ ವಹಿಸಬೇಕಾದರೆ ಅಲ್ಲಿನ ಅಧಿಕಾರಿಗೆ ತುಂಬ ಬೆಲೆಯೆಂಬುದನ್ನು ಊಹಿಸಬಹುದಿತ್ತು. ಲಲಿತಾರವರನ್ನು ಆಡಳಿತಾಧಿಕಾರಿಗಳಿಗೆ ಪರಿಚಯಿಸಿದ ನಂತರ ಸಿಂಧು ತನ್ನ ಕೆಲಸಕ್ಕೆ ಹೊರಟುಹೋದಳು.

ಅಧಿಕಾರಿಯಾಗಿದ್ದವರು ಇನ್ನೂ ನಲವತ್ತರ ಆಸುಪಾಸಿನಲ್ಲಿದ್ದ ವ್ಯಕ್ತಿ. ಹೆಸರು ‘ಜಾನ್‌ಯದುನಂದನ್’ ಎದುರಿಗಿರಿಸಿದ್ದ ನೇಮ್‌ಪ್ಲೇಟ್‌ನಲ್ಲಿತ್ತು. ಪರಸ್ಪರ ವಂದನೆ ಪ್ರತಿವಂದನೆಗಳಾದ ಮೇಲೆ ಲಲಿತಾರವರು ನೇರವಾಗಿ ವಿಷಯವನ್ನು ಪ್ರಸ್ಥಾಪಿಸಿದರು. ಸಂಭಾಷಣೆಯೆಲ್ಲ ಇಂಗ್ಲಿಷಿನಲ್ಲಿ ನಡೆಯಿತು. “ನಾನು ಲಲಿತಾಶಂಕರ್ ಫ್ರಮ್ ಇಂಡಿಯಾ. ನಾನೊಬ್ಬ ಸಾಮಾಜಿಕ ಕಾರ್ಯಕರ್ತೆ ಮತ್ತು ಹವ್ಯಾಸಿ ಇನ್ವೆಸ್ಟಿಗೇಟಿವ್ ಪತ್ರಿಕೋದ್ಯಮಿ. ಅಮೆರಿಕದಲ್ಲಿ ಇಪ್ಪತ್ತೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಈ ಆಶ್ರಮದಲ್ಲಿ ನನ್ನ ‘ನೀಸ್’ ಸಿಂಧು ಕೆಲಸಮಾಡುತ್ತಿದ್ದಾಳೆ. ಅವಳು ತನ್ನ ಪೋಷಕರ ಬಗ್ಗೆ ಯಾವುದೋ ಒಂದು ತಪ್ಪು ತಿಳುವಳಿಕೆಯಿಂದ ತಾನು ಮಾಡುತ್ತಿದ್ದ ಕಂಪೆನಿಯ ಕೆಲಸ ಬಿಟ್ಟು ಇಲ್ಲಿಗೆ ಸೇರಿಕೊಂಡಿದ್ದಾಳೆ. ಮನೆಯ ಸಂಪರ್ಕವನ್ನು ಕಡಿದುಕೊಂಡಿದ್ದಾಳೆ. ಅವಳು ಮನೆ ತೊರೆದ ಬಗ್ಗೆ ತಂದೆ ತಾಯಿಗಳಿಗೆ ತೀವ್ರವಾದ ದುಃಖವಾಗಿದೆ. ಅವರು ಈಗ ಅನಾರೋಗ್ಯ ಪೀಡಿತರಾಗಿ ಕೊರಗುತ್ತಿದ್ದಾರೆ. ಆಕೆಯನ್ನು ಹಿಂದಕ್ಕೆ ಕರೆದುಕೊಂಡು ಹೋಗಲು ನಾನು ಬಂದಿದ್ದೇನೆ. ನೀವು ಅನುಮತಿ ನೀಡಬೇಕೆಂದು ಕೋರುತ್ತೇನೆ” ಎಂದು ಮನವಿ ಮಾಡಿಕೊಂಡರು.

ಅದಕ್ಕೆ ಆತ “ನೋಡಿ ಮೇಡಂ, ಅವಳನ್ನು ಭೇಟಿಮಾಡಲು ಹಿಂದೆ ಕೂಡ ಅನೇಕ ಬಾರಿ ಅವಳ ತಂದೆ ತಾಯಿಗಳು ಇಲ್ಲಿಗೆ ಬಂದಿದ್ದುಂಟು. ಮೊದಲನೆಯ ಬಾರಿ ಅವರನ್ನು ಭೇಟಿಮಾಡಿದ ಸಿಂಧು ನಂತರ ಅವರು ಬಂದರೆ ಮಾತನಾಡಲು ನಿರಾಕರಿಸಿ ಭೇಟಿ ಮಾಡಲೇ ಇಲ್ಲ. ಅವಳಿಗೆ ಇಷ್ಟವಿಲ್ಲದಿದ್ದರೆ ನೀವ್ಯಾಕೆ ಒತ್ತಾಯ ಮಾಡುತ್ತಿದ್ದೀರಿ?” ಎಂದರು.

“ಅದು ಅಂದಿನ ಕಥೆ, ಈಗ ಹಾಗಿಲ್ಲ, ಅವಳೊಡನೆ ನಾನು ಮಾತನಾಡಿದ್ದೇನೆ. ಅವಳ ಮನಸ್ಸು ಬದಲಾಗಿದೆ. ಅವಳು ಹಿಂತಿರುಗಲು ಒಪ್ಪಿದ್ದಾಳೆ. ನೀವು ಅವಳನ್ನು ಬಿಡುಗಡೆ ಮಾಡಬೇಕು ಅಷ್ಟೇ” ಎಂದುತ್ತರಿಸಿದರು,

“ನೋಡಿ ನೀವು ತಪ್ಪು ತಿಳಿದಿದ್ದೀರಿ, ಇಲ್ಲಿಗೆ ಯಾರನ್ನೂ ಸಂಸ್ಥೆಯು ಬಲವಂತಮಾಡಿ ಕರೆತರುವುದಿಲ್ಲ. ಕಾರ್ಯಕರ್ತರು ತಾವಾಗಿಯೇ ಇಷ್ಟಪಟ್ಟು ಇಲ್ಲಿಗೆ ಸೇರುತ್ತಾರೆ. ಇಲ್ಲಿನ ಚಟುವಟಿಕೆಗಳಲ್ಲಿ ಅವರು ತೃಪ್ತರಾಗಿದ್ದಾರೆ. ಅವರಿಗೆಲ್ಲಾ ಅನುಕೂಲಗಳೂ ಇಲ್ಲಿವೆ. ಸಾಂಸಾರಿಕ ಬಂಧನಗಳು ಬೇಡವೆಂದವರೇ ಇಲ್ಲಿನ ಅಧ್ಯಾತ್ಮ ಸಮಾಜದಲ್ಲಿ ಮನಸ್ಸು ತೊಡಗಿಸಿಕೊಂಡು ನೆಮ್ಮದಿ ಕಂಡುಕೊಂಡಿದ್ದಾರೆ. ಅಂದಮೇಲೆ ಅವರನ್ನು ನಾವು ಬಿಡುಗಡೆ ಮಾಡುವಂತಹ ಪ್ರಮೇಯವೇ ಬರುವುದಿಲ್ಲ.” ಎಂದರು.

“ನಾನು ಪತ್ರಕರ್ತೆಯಾಗಿ ನಿಮ್ಮ ಕೇಂದ್ರಗಳ ಬಗ್ಗೆ ಕುತೂಹಲದಿಂದ ಅನೇಕ ಮಾಹಿತಿಗಳನ್ನು ಕಲೆಹಾಕಿದ್ದೇನೆ. ಈ ಕೇಂದ್ರಗಳು ಸತ್ಸಂಗ, ಅಧ್ಯಾತ್ಮ ಸಾಧನೆ, ಉದ್ದೇಶಗಳಿಗಾಗಿಯೇ ಕೆಲಸ ಮಾಡುತ್ತಿವೆ ಎಂಬ ಹೆಸರಿನಲ್ಲಿ ಅಗಾಧವಾದ ಮೊತ್ತದ ಹಣವನ್ನು ಶ್ರೀಮಂತ ದಾನಿಗಳಿಂದ ಸಂಗ್ರಹಿಸುವುದು ಗೊತ್ತು. ಆದರಿಂದ ಇಂತಹ ದುರ್ಗಮ ಪ್ರದೇಶದಲ್ಲಿ ಐಶಾರಾಮಿ ಸೌಲಭ್ಯಗಳನ್ನು ಒದಗಿಸಿ ಆಶ್ರಮ ಸ್ಥಾಪಿಸಿ ನಡೆಸುತ್ತಿರುವ ಇತರೆ ಚಟುವಟಕೆಗಳ ಬಗ್ಗೆ ಕೂಡ ಮಾಹಿತಿಯನ್ನು ಸಂಗ್ರಹಿಸಿದ್ದೇನೆ. ನಾನು ಇಲ್ಲಿ ನಿಮ್ಮನ್ನು ಭೇಟಿ ಮಾಡಲು ಒಬ್ಬಳೇ ಬಂದಿದ್ದೇನೆ ಎಂದು ತಿಳಿಯಬೇಡಿ. ನನ್ನ ಬೆನ್ನಿಗೆ ಅನೇಕ ಕಾರ್ಯಕರ್ತರ ಪಡೆಯೇ ಸಜ್ಜಾಗಿದೆ. ಕೆಲವೇ ನಿಮಿಷಗಳಲ್ಲಿ ಅವರನ್ನು ಕರೆಸಬಲ್ಲೆ. ನಿಮ್ಮಲ್ಲಿ ನನ್ನದೊಂದೇ ವಿನಂತಿ ನಮ್ಮ ಹುಡುಗಿಯನ್ನು ಬಿಟ್ಟು ಕಳುಹಿಸಿ. ಉಳಿದೆಲ್ಲ ವ್ಯವಹಾರಗಳಲ್ಲಿ ನನಗೆ ಆಸಕ್ತಿಯಿಲ್ಲ. ಇಲ್ಲವೆಂದರೆ ಪೋಲೀಸಿನವರ ರಕ್ಷಣೆ ಕೂಡ ನಮ್ಮ ಕಾರ್ಯಕರ್ತರಿಗಿದೆ. ಇಲ್ಲಿ ನಡೆಯುತ್ತಿರುವ ಮುಕ್ತ ಆಚರಣೆಗಳು, ಒಳಗುಟ್ಟುಗಳ ಬಗ್ಗೆ ಪೂರ್ಣ ತನಿಖೆ ಮಾಡಿಸಬೇಕಾಗುತ್ತದೆ. ಅದಕ್ಕೂ ಸಿದ್ಧತೆ ಮಾಡಿಕೊಂಡೇ ಬಂದಿದ್ದೇನೆ. ಆಯ್ಕೆ ನಿಮಗೆ ಬಿಟ್ಟದ್ದು. ನಿಮ್ಮ ಉತ್ತರಕ್ಕಾಗಿ ಕಾಯ್ದಿದ್ದೇನೆ. ನನಗೆ ಬೇರೆ ತುರ್ತಾದ ಕೆಲಸವಿದೆ” ಎಂದು ಎಚ್ಚರಿಕೆಯ ಧ್ವನಿಯಲ್ಲಿ ಮಾತನಾಡಿದರು ಲಲಿತಾ.

ಇವರ ಮಾತಿನಿಂದ ವಿಚಲಿತರಾದಂತೆ ಕಂಡುಬಂದ ಆಡಳಿತಾಧಿಕಾರಿ “ನೋಡಿ ನಾವು ಶಾಂತಿಯನ್ನು ಬಯಸುವವರು. ಅನಾವಶ್ಯಕವಾಗಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಲು ಬಯಸುವುದಿಲ್ಲ. ಆದರೆ ಇಲ್ಲಿಂದ ಹೊರಗೆ ಕಾಲಿಟ್ಟ ನಂತರ ನಿಮ್ಮ ಹುಡುಗಿ ಆಶ್ರಮದ ಬಗ್ಗೆ ಯಾವುದೇ ವಿಷಯಗಳನ್ನೂ ಬಹಿರಂಗಗೊಳಿಸಬಾರದು. ಇದು ಇಲ್ಲಿನ ಕಟ್ಟುಪಾಡು. ಜೊತೆಗೆ ಅವಳು ಲೆಕ್ಕಪತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿರುವುದರಿಂದ ಅಲ್ಲಿನ ಯಾವುದೇ ಮಾಹಿತಿಯನ್ನು ಹೊರಗೆಡವಬಾರದು. ಅವಳು ಮಾಡುತ್ತಿರುವ ಕೆಲಸಗಳನ್ನು ಒಂದು ಹಂತಕ್ಕೆ ಪೂರ್ಣಗೊಳಿಸಿ ಹೋಗಬೇಕು. ನಾವು ಅವಳನ್ನು ಬಲವಂತವಾಗಿ ಇಲ್ಲಿರಿಸಿಕೊಂಡು ತೊಂದರೆಗೆ ಸಿಕ್ಕಿಹಾಕಿಕೊಳ್ಳಲು ಬಯಸುವುದಿಲ್ಲ.” ಎಂದರು.

“ನಮಗೆ ನಮ್ಮ ಹುಡುಗಿ ಸಿಂಧು ಮನೆಗೆ ಹಿಂದಿರುಗಬೇಕು. ಉಳಿದ ಯಾವುದೇ ವಿಷಯದ ಬಗ್ಗೆ ನಾವು ಏನನ್ನೂ ಮಾಡುವುದಿಲ್ಲವೆಂದು ಭರವಸೆ ಕೊಡುತ್ತೇವೆ. ಅವಳನ್ನು ಕರೆದುಕೊಂಡು ಹೋಗಲು ಅನುಮತಿ ಕೊಡಿ” ಎಂದು ಕೊನೆಯ ಮಾತನ್ನು ಹೇಳಿದರು.

ಇಂಟರ್ ಕಾಮ್ ಮೂಲಕ ಸಿಂಧುವನ್ನು ಅವಳು ಮಾಡುತ್ತಿರುವ ಕೆಲಸ ಒಂದು ಹಂತ ತಲುಪಿ ಅದನ್ನು ಬೇರೊಬ್ಬರಿಗೆ ವಹಿಸಲು ಎಷ್ಟು ಕಾಲ ಬೇಕಾಗುತ್ತದೆ? ಎಂದು ಆಡಳಿತಾಧಿಕಾರಿ ಪ್ರಶ್ನಿಸಿದರು. ಇನ್ನು ಕೊನೆಯ ಪಕ್ಷ ಒಂದು ವಾರ ಬೇಕು ಎಂದುತ್ತರ ಬಂತು. ಹಾಗಿದ್ದರೆ ಅದನ್ನು ಪೂರೈಸಿದ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಲು ವಾರದೊಳಗೆ ಸಿದ್ಧಳಾಗುವಂತೆಯೂ ನಂತರ ಅವಳು ಆಶ್ರಮದಿಂದ ಮುಕ್ತಳಾಗಿ ಮನೆಗೆ ಹೋಗಬಹುದೆಂದು ತಿಳಿಸಲಾಯಿತು. ಇದನ್ನು ಮಾಡಿದ ನಂತರ ಅಧಿಕಾರಿಯು “ಇದು ನಿಮಗೆ ಒಪ್ಪಿಗೆ ತಾನೇ” ಎಂದು ಕೇಳಿದರು.

ಲಲಿತಾರವರು “ಒಂದು ನಿಬಂಧನೆ, ಅಲ್ಲಿಯವರೆಗೆ ಸಿಂಧುವಿನ ತಂದೆತಾಯಿಗಳು ಇಲ್ಲಿಯೇ ಇರುತ್ತಾರೆ. ಅವರಿಗೆ ವ್ಯವಸ್ಥೆ ಮಾಡಿಕೊಡಬೇಕು. ವಾರದ ಕೊನೆಯಲ್ಲಿ ಅವರು ಅವರ ಮಗಳ ಜೊತೆಯಲ್ಲಿ ಸುರಕ್ಷಿತವಾಗಿ ಇಲ್ಲಿಂದ ತಮ್ಮೂರಿಗೆ ಹೊರಡುತ್ತಾರೆ. ನಮ್ಮಿಂದ ನಿಮಗೆ, ಆಶ್ರಮಕ್ಕೆ ಯಾವುದೇ ತೊಂದರೆಯಾಗದು. ಅದೇ ರೀತಿಯಲ್ಲಿ ನಮ್ಮ ಹುಡುಗಿಗೂ ಯಾವುದೇ ತೊಂದರೆಯಾಗಬಾರದು. ಅದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಅವಳ ತಂದೆತಾಯಿಗಳನ್ನು ಕರೆಸುವವರೆಗೂ ನಾನಿಲ್ಲಿದ್ದು ನಂತರ ಹೊರಡುತ್ತೇನೆ. ಒಪ್ಪಿಗೆಯೇ?” ಎಂದು ಕೇಳಿದರು.

“ಸಂಪೂರ್ಣ ಒಪ್ಪಿಗೆ. ನೀವು ಹೇಳಿದ ನಿಬಂಧನೆಯನ್ನು ಪಾಲಿಸಲಾಗುತ್ತದೆ. ಈ ಬಗ್ಗೆ ಚಿಂತೆ ಬಿಡಿ.” ಎಂದು ಬೀಳ್ಕೊಡಲು ಸಿದ್ಧರಾದಂತೆ ಯದುನಂದನ್ ಎದ್ದುನಿಂತರು. ಪರಸ್ಪರ ಹಸ್ತಲಾಘವಗೈದು ಲಲಿತಾರವರು ಸಿಂಧುವಿನ ಕೊಠಡಿಗೆ ಬಂದರು. ಸ್ವಲ್ಪ ಹೊತ್ತಿನಲ್ಲಿಯೇ ರಾಘವ ದಂಪತಿಗಳು ಆಶ್ರಮಕ್ಕೆ ಆಗಮಿಸಿದರು. ಅವರು ಉಳಿದುಕೊಳ್ಳಲು ಅತಿಥಿ ಕೊಠಡಿಯ ವ್ಯವಸ್ಥೆಯಾಗಿ ಅವರು ತಮ್ಮ ಲಗೇಜುಗಳನ್ನು ಇರಿಸಿ ಸಿಂಧುವಿನ ಕೊಠಡಿಗೇ ಬಂದರು. ಅಷ್ಟು ಹೊತ್ತಿಗೆ ಸಿಂಧು ಕೂಡ ಅಲ್ಲಿಗೆ ಬಂದಳು. ತಂದೆತಾಯಿಗಳೊಡನೆ ಅವಳ ಪುನರ್ಮಿಲನವಾಗಿ ಇಬ್ಬರ ಕಣ್ಣುಗಳಲ್ಲೂ ನೀರು ತುಂಬಿದವು. ಅವರಿಬ್ಬರನ್ನೂ ಸಮಾಧಾನಪಡಿಸಿ ಲಲಿತಾರವರು “ ನೋಡಿ ನೀವು ನನಗೊಪ್ಪಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ. ನಿಮ್ಮ ಮಗಳು ನಿಮ್ಮ ಮಡಿಲು ಸೇರಿದ್ದಾಳೆ. ಮುಂದಿನ ಕೆಲಸ ನಿಮ್ಮದು” ಎಂದರು.

ರಾಘವ ಮತ್ತು ಸುಶೀಲಾರವರು ಕೃತಜ್ಞತೆಯಿಂದ ಬಾಗಿ ಲಲಿತಾರವರಿಗೆ ನಮಿಸಿದರು. “ ನಮ್ಮ ಮಗಳಿಗೆ ಮರುಹುಟ್ಟು ನೀಡಿದ ಪುಣ್ಯಾತ್ಮರು ನೀವು. ನಿಮ್ಮ ಋಣವನ್ನು ನಾವು ಹೇಗೆ ತೀರಿಸಬಹುದೋ ತಿಳಿಯದು.” ಅವರ ಬಾಯಿಂದ ಮುಂದೆ ಮಾತುಗಳೇ ಹೊರಡಲಿಲ್ಲ. ಮೌನವಾಗಿ ಸುಶೀಲಾ, ಸಿಂಧು, ಲಲಿತಾ ಪರಸ್ಪರ ಅಪ್ಪಿಕೊಂಡರು.

“ನಾನಿನ್ನು ಹೊರಡಲು ಅಪ್ಪಣೆ ಕೊಡಿ” ಎಂದ ಲಲಿತಾರವರಿಗೆ ನಿಮಗೆ ಮೂರು ಗಂಟೆಯ ಫೈಟ್ ಗೆ ರಿಸರ್ವ್ ಮಾಡಿಸಲಾಗಿದೆ. ದಾರಿಯಲ್ಲಿ ಊಟ ಮುಗಿಸಿ ನಿಮ್ಮನ್ನು ಏರ್‌ಪೋರ್ಟಿಗೆ ಕರೆದುಕೊಂಡು ಹೋಗುತ್ತೇನೆ” ಎಂದು ರಾಘವ ಅವರ ಬ್ಯಾಗೇಜ್ ಎತ್ತಿಕೊಂಡರು. ಸಿಂಧು ಲಲಿತಾರ ಕಾಲಿಗೆ ನಮಸ್ಕರಿಸಿದಳು. ಅವಳಿಗೆ ಮನಃಪೂರ್ವಕವಾಗಿ ಆಶೀರ್ವದಿಸಿ ಆಶ್ರಮದಿಂದ ಹೊರಬಂದರು ಲಲಿತಾ. ಸುಶೀಲಾ ಇನ್ನೂ ಕಣ್ತುಂಬಿ ಮಗಳನ್ನು ನೋಡುತ್ತಲೇ ಇದ್ದರು.

ವಿಮಾನದಲ್ಲಿ ಕುಳಿತು ತಮ್ಮೂರಿನ ಕಡೆಗೆ ಪ್ರಯಾಣಿಸುತ್ತಾ ಲಲಿತಾ ಮನಸ್ಸಿನಲ್ಲಿ “ಅಂತೂ ಮುಗ್ಧ ಹುಡುಗಿಯೊಬ್ಬಳನ್ನು ವಿಷವರ್ತುಲದೊಳಗಿನಿಂದ ಪಾರು ಮಾಡಿದೆ” ಎಂಬ ಸಮಾಧಾನದಿಂದ ಕಣ್ಮುಚ್ಚಿ ಕೆಲಕ್ಷಣ ವಿಶ್ರಾಂತಿಗೆ ಮೊರೆಹೋದರು.

ಈ ಕತೆಯ ಹಿಂದಿನ ಭಾಗ ಇಲ್ಲಿದೆ :
(ಮುಗಿಯಿತು)

ಬಿ.ಆರ್.ನಾಗರತ್ನ, ಮೈಸೂರು

11 Responses

  1. MANJURAJ says:

    ಕಥಾಂತ್ಯ ಸುಖಕರ ಪ್ರಸವದಂತೆ ….

    ತಾಯಿ ಮತ್ತು ಮಗು ಇಬ್ಬರೂ ಆರೋಗ್ಯ ಎಂದಂತೆ …

    ಚೆನ್ನಾಗಿದೆ ಮೇಡಂ, ಓದಿದೆ, ಅಭಿನಂದನೆಗಳು

  2. ಕಥೆ ಸ್ವಾರಸ್ಯಕರವಾಗಿ ಮೂಡಿಬಂದಿದೆ
    ಕೊನೆಯಲ್ಲಿ ಅಬ್ಬ ಸದ್ಯ ಬಚಾವಾದಳು ಹುಡುಗಿ ಎಂಬ ಭಾವ ಮೂಡಿತು

  3. ಧನ್ಯವಾದಗಳು ಮಂಜು ಸರ್

  4. ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ

  5. ನಯನ ಬಜಕೂಡ್ಲು says:

    ಚಿಕ್ಕದಾದರೂ ಚೆನ್ನಾಗಿತ್ತು ಕಥೆ

  6. ಧನ್ಯವಾದಗಳು ನಯನ ಮೇಡಂ.. ಈ ಕಥೆ ಎರಡು ಕಂತಿನಲ್ಲಿ ಬಂತು ಮೇಡಂ.

  7. ಪದ್ಮಾ ಆನಂದ್ says:

    ಇಂದಿನ ದಿನಗಳಲ್ಲಿ ಯುವ ಜನಾಂಗವನ್ನು ಕಾಡುತ್ತಿರುವ ಕಥಾವಸ್ತುವನ್ನು ಚೆಂದದ ಹಂದರದಲ್ಲಿ ಕಟ್ಟಲ್ಪಟ್ಟ ಕಥೆ ಸುಖಾಂತವಾದದ್ದು ಸಂತಸ ನೀಡಿತು.

  8. ಧನ್ಯವಾದಗಳು ಪದ್ಮಾ ಮೇಡಂ

  9. ಶಂಕರಿ ಶರ್ಮ says:

    ಚಿಕ್ಕದಾದರೂ ಚೊಕ್ಕ ರೂಪವನ್ನು ಪಡೆದ ಕಥೆಯಿದು. ವಿಷವರ್ತುಲದಲ್ಲಿ ಸಿಲುಕಿದ್ದ ಸಿಂಧುವನ್ನು ಉಪಾಯದಿಂದ ಪಾರುಮಾಡಿ ಕಥೆಗೆ ಸುಖಾಂತ್ಯ ನೀಡಿದ ಲಲಿತಾ ಅವರಿಗೆ (ನಾಗರತ್ನ ಮೇಡಂ ಅವರಿಗೆ ) ಧನ್ಯವಾದಗಳು.

  10. ಧನ್ಯವಾದಗಳು ಶಂಕರಿ ಮೇಡಂ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: