ಯಾರ ದೂರುವೆ ? ನಿನ್ನ ಯಾನ ಶೂನ್ಯನಾವೆ !

Share Button

ಎಲ್ಲರನು ನೀ ತೂಗುವ ತಕ್ಕಡಿ
ಇನ್ನಾದರೂ ಖಾಲಿಯಿರಲಿ!

ನಿನಗೆ ನೀನೇ ದೊರೆ;
ನೀನೇ ಹೊರೆ!!- ರಾಜ್ಮಂಜು

ಒಮ್ಮೆ ಗೌತಮ ಬುದ್ಧರು ತಮ್ಮ ಪ್ರವಚನದ ನಡುವೆ ಒಂದು ಸಂಗತಿಯನ್ನು ಅರುಹಿದರು: ‘ನಾನೊಮ್ಮೆ ನಡೆದು ಹೋಗುತ್ತಿದ್ದಾಗ ಮರದ ರೆಂಬೆಯೊಂದು ಮುರಿದು ನನ್ನ ಮೇಲೆ ಬಿತ್ತು. ನಾನಾಗ ಗಾಯಗೊಂಡೆ. ಆ ಮರಕ್ಕೆ ನನ್ನನ್ನು ಗಾಯಗೊಳಿಸುವ ಉದ್ದೇಶವಿತ್ತು ಎಂದು ನಾನಂದುಕೊಂಡರೆ ಅದು ಪೂರ್ವ ನಿಯೋಜಿತವನ್ನು ಒಪ್ಪಿಕೊಂಡಂತೆ. ಇನ್ನು ನಾನು ಸಿಟ್ಟು ಮಾಡಿಕೊಂಡು ಮರಕ್ಕೆ ಏನಾದರೂ ಹಾನಿ ಮಾಡಿದರೆ ಅದು ನನ್ನ ಮೂರ್ಖತನವನ್ನು ಒಪ್ಪಿಕೊಂಡಂತೆ! ಇದನ್ನೊಂದು ನೈಸರ್ಗಿಕ ಪ್ರಕ್ರಿಯೆಯನ್ನಾಗಿ ತೆಗೆದುಕೊಂಡರೆ ನನ್ನೊಳಗೆ ಅರಿವು ಮತ್ತು ವಿವೇಕ ವಿಸ್ತೃತವಾದಂತೆ!! ಈ ಅಪಘಾತವು ಆಕಸ್ಮಿಕ. ಆ ಮರದ ಕೊಂಬೆಯು ಮುರಿದು ಬೀಳುವ ಸಂದರ್ಭದಲ್ಲಿ ನಾನು ಆ ಮರದ ಕೆಳಗೆ ನಡೆದು ಹೋಗುತ್ತಿದ್ದುದು ಬರೀ ಆಕಸ್ಮಿಕ. ‘ಬದುಕಿನ ಎಲ್ಲವನ್ನೂ ಹೀಗೆಯೇ ತೆಗೆದುಕೊಳ್ಳಬೇಕು.

ಬುದ್ಧರ ಈ ಮಾತು ಹಲವು ಅರ್ಥಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಘಟಿಸಿದ್ದೆಲ್ಲವೂ ಆಕಸ್ಮಿಕವೇ! ಅದು ಒಳಿತಿರಲಿ, ಕೆಡುಕಿರಲಿ ಏನೆಲ್ಲವೂ ನಮಗೆ ಆಕಸ್ಮಿಕವೇ!! ನನ್ನ ಹುಟ್ಟು, ತಾಯ್ತಂದೆಯರು, ಜಾತಿ, ಮತ, ಪಂಥ, ಭಾಷೆ, ವೃತ್ತಿ, ಸ್ಥಿತಿಗತಿ ಎಲ್ಲವೂ ಆಕಸ್ಮಿಕ. ನನ್ನ ತಾಯ್ತಂದೆಯರಿಗೆ ನಾನೇ ಏಕೆ ಮಗುವಾದೆ? ಲಕ್ಷಾಂತರ ವೀರ್ಯಾಣುಗಳಲ್ಲಿ ಅದೇ ಏಕೆ ಓಡಿ ಹೋಗಿ ಅಂಡಾಣುವನ್ನು ಸೇರಿ ಗರ್ಭ ಕಚ್ಚಲು ಕಾರಣೀಭೂತವಾಯಿತು? ಹೀಗೆ ಕೇಳಿಕೊಳ್ಳುತ್ತಾ ಹೋದರೆ ಅದಕ್ಕೆ ಕೊನೆ ಮೊದಲಿದೆಯೇ? ಜನ್ಮಾಂತರದ ನಂಟನ್ನು ಎಳೆದು ತಂದು ಬಾಯಿ ಮುಚ್ಚಿಸುವುದು ಕಷ್ಟದ ಕೆಲಸವಲ್ಲ! ಅದೇ ಎಲ್ಲಕೂ ಸೂಕ್ತ ಸಮರ್ಥನೆಯೇ? ಹಾಗಾದಾಗ ನನ್ನೊಳಗೆ ಸದ್ಭಾವವೋ ದುರ್ಭಾವವೋ ಜನಿಸಿ ನನ್ನನ್ನು ಪೂರ್ವಗೃಹೀತವನ್ನಾಗಿಸುವುದಿಲ್ಲವೆ? ನಿರ್ವಿಕಾರವೂ ನಿರ್ಲಿಪ್ತವೂ ಆದ ಚಿತ್ತಸಮಸ್ಥಿತಿಯನ್ನು ಹೊಂದಲು ಹೀಗೆ ಗೌತಮ ಬುದ್ಧರು ಬೇಕೆಂತಲೇ ಆಕಸ್ಮಿಕವನ್ನು ಎಳೆದು ತಂದು ಮನದ ಶಾಂತಿಗೆ ಇಂಬು ಎರೆದರು.

ಚೀನಾದ ತತ್ತ್ವಜ್ಞಾನಿ ಲಾವೋತ್ಸೆಯ ಶಿಷ್ಯರಾದ ಚಾಂಗ್ತ್ಸು ಹೇಳಿದ ‘ಶೂನ್ಯನಾವೆ’ಯ ಪರಿಕಲ್ಪನೆಯನ್ನು ಇದು ಹೋಲುತ್ತದೆ. ‘ಯಾರೂ ಇಲ್ಲದ ದೋಣಿಯೊಂದು ಬಂದು ನಾ ಕುಳಿತ ದೋಣಿಗೆ ಢಿಕ್ಕಿ ಹೊಡೆದಾಗ ಯಾರನ್ನು ಬಯ್ಯುವುದು?’ ಮನದಲುದಿಸಿದ ರೋಷಾಕ್ರೋಶಗಳು ಅಲ್ಲಿಯೇ ಸಮಾಧಿಯಾಗುತ್ತದಲ್ಲವೆ? ಅಥವಾ ಢೀ ಕೊಟ್ಟ ದೋಣಿಯನು ಚಿಂದಿ ಚಿಂದಿ ಮಾಡಲು ಪ್ರಯತ್ನಿಸಿ, ನಾ ಕುಳಿತ ದೋಣಿಯನೂ ಮಗುಚಿಸಿ, ಸಾವನ್ನು ಆಹ್ವಾನಿಸುವೆನೇ? ಹಾಗೇನಾದರೂ ನಾನು ಮಾಡಿದೆನೆಂದರೆ ಅದು ನನ್ನ ಅಲ್ಪತನ ಮತ್ತು ತಕ್ಷಣದ ಮೂರ್ಖತನ ; ಪ್ರಬುದ್ಧತೆಯಂತೂ ಅಲ್ಲ.

ಯಾರೋ ನಮ್ಮನ್ನು ದುರುಗುಟ್ಟಿ ನೋಡಿದರೆ, ಬಯ್ದರೆ, ಮನಸಿಗೆ ನೋವು ಮಾಡಿದರೆ, ಕೆಟ್ಟದ್ದನ್ನು ಬಯಸಿದರೆ ಕೋಪ ಮಾಡಿಕೊಳ್ಳುವುದು ಅವಿವೇಕ, ಏಕೆಂದರೆ ನಾನು ಅದನ್ನು ಕೇವಲ ಆಕಸ್ಮಿಕ ಎಂದು ಭಾವಿಸಬೇಕು. ಅವರಿಗೆ ಸಿಟ್ಟು ಬಂದಾಗ, ನಾನು ಅವರ ಎದುರಿಗಿದ್ದುದು ಕೇವಲ ಆಕಸ್ಮಿಕ ಅಷ್ಟೇ! ಹೀಗೆ ನಾವು ಭಾವಿಸದೆ ಹೋದರೆ ಜೀವನದಲ್ಲಿ ಹಲವು ದುರಂತಗಳು ಸಂಭವಿಸುತ್ತವೆ; ಮನದ ನೆಮ್ಮದಿ ಕಣ್ಮರೆಯಾಗುತ್ತದೆ. ‘ಎಲ್ಲಕೂ ಕಾರ್ಯ ಕಾರಣ ಸಂಬಂಧವಿದೆ; ಜಗತ್ತಿನಲ್ಲಿ ಏನೊಂದೂ ಆಕಸ್ಮಿಕವಾಗಿ ಸಂಭವಿಸುವುದಿಲ್ಲ’ ಎಂಬ ಮಾತನು ಇಲ್ಲಿಗೆ ಜೋಡಿಸಿಕೊಂಡು ಕಳವಳ ಪಡಬೇಕಿಲ್ಲ! ಇದು ತತ್ತ್ವಜ್ಞಾನದ ಮಾತು. ಇದನ್ನು ನಿಜ ಮಾಡಲು ಅಥವಾ ಸುಳ್ಳು ಮಾಡಲು ನಾನು ಬದುಕುತ್ತಿಲ್ಲ; ನನ್ನ ಅನುಭವದ ಬೆಳಕಿನಲ್ಲಿ ಕಂಡು ಕೊಳ್ಳಬೇಕಾದದ್ದು ಏನನ್ನು? ಎಂದು ತಿಳಿದುಕೊಂಡಿರಬೇಕು. ಇದು ಆಯ್ಕೆಯ ಸಂಗತಿ; ವಾದಿಸುವ ವಿಚಾರವಲ್ಲ. ಇಡೀ ಲೋಕವೇ ನನ್ನನ್ನು ಕೊಲ್ಲಲು ಸಂಚು ಹೂಡಿ ಒಂದಾದಮೇಲೊಂದರಂತೆ ಪ್ರಕೃತಿಯು ಚಿತಾವಣೆ ಮಾಡುತ್ತಿದೆ ಎಂದು ಆಲೋಚಿಸ ಹತ್ತಿದರೆ ಅದರಂಥ ಮನೋವ್ಯಾಧಿ ಇನ್ನೊಂದಿಲ್ಲ. ಏಕೆಂದರೆ ನನ್ನದೊಂದೇ ಬದುಕು. ಅದನ್ನು ಸಮರ್ಥವಾಗಿ ಮತ್ತು ಪೂರ್ಣತೆಯಿಂದ ಜೀವಿಸಲು ಬದುಕಬೇಕು ಅಲ್ಲವೇ? ಯಾರನ್ನೋ ಮೆಚ್ಚಿಸಲು ನಾನು ಬದುಕಬೇಕಿಲ್ಲ, ಯಾರನ್ನೋ ದೂರಲು, ಬಯ್ಯಲು, ಅಸಹ್ಯಿಸಲು, ‘ಸರಿ’ ಮಾಡಲು ನಾನು ಬಂದಿಲ್ಲ. ಈ ಭೂಮಿಯ ಮೇಲಿನ ನನ್ನ ಕೆಲಸವೇ ಬೇರೆ. ನನ್ನ ದಾರಿಯೇ ಬೇರೆ ಆಗಬೇಕಲ್ಲವೆ? ಇದನ್ನೇ ಪರ್ಷಿಯಾದ ಕವಿ ಜಲಾಲುದ್ದೀನ್ ರೂಮಿಯು ಹೇಳುವನು: ‘ಲೋಕ ಬದಲಿಸಲು ಹೊರಟೆ; ಏಕೆಂದರೆ ನಿನ್ನೆ ನಾನು ದಡ್ಡನಾಗಿದ್ದೆ. ನನ್ನ ನಾ ಬದಲಿಸಿಕೊಂಡೆ; ಈ ದಿನ ಬುದ್ಧಿವಂತನಾದೆ.’ ಎಲ್ಲರೂ ಹೀಗೆಂದುಕೊಂಡರೆ ತನ್ನಿಂದ ತಾನೇ ಲೋಕ ಬದಲಾಗುವುದು ನಿಶ್ಚಿತ.

ಓಶೋ ರಜನೀಶರು ತಮ್ಮೊಂದು ಪ್ರವಚನದಲ್ಲಿ ‘ತಥಾಗತ’ ಎಂಬ ಪದವನ್ನು ಕುರಿತು ವಿಶ್ಲೇಷಣೆ ಮಾಡುತ್ತಾರೆ. ಯಾರಿಗೆ ಈ ಪದದ ಅರ್ಥವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿದೆಯೋ ಅವರು ಯಾವ ಕಾರಣಕ್ಕೂ ಯಾವ ಸಂದರ್ಭದಲ್ಲಿಯೂ ವಿಚಲಿತರಾಗುವುದಿಲ್ಲ. ಯಾರನ್ನು ಡಿಸ್ಟರ್ಬಿಸಲು ಸಾಧ್ಯವಿಲ್ಲವೋ ಅವರೇ ತಥಾಗತರು! ಬುದ್ಧರ ಹದಿನೆಂಟು ಹೆಸರುಗಳಲ್ಲಿ ಇದೂ ಒಂದು ಹೌದಾದರೂ ಈ ಗುಣವಾಚಕದ ಅರ್ಥವೇ ವಿಶೇಷವಾಗಿದೆ. ಪಾಲಿ ಭಾಷೆಯಿಂದ ಸಂಸ್ಕೃತಕ್ಕೆ ಬಂದ ಶಬ್ದವಿದು. ಸಂಪೂರ್ಣ ಜ್ಞಾನೋದಯಗೊಂಡ ವ್ಯಕ್ತಿ ಎಂದರ್ಥ. ತಥಾ = ಹೀಗೆ. ಗತ = ಹೋದವನು. ಆಗತ = ಬಂದವನು. ಪದಶಃ ಅರ್ಥವಿದು. ತಥಾಗತ ಎಂಬುದರ ಒಟ್ಟು ಶಬ್ದದ ಅರ್ಥ: ತನ್ನ ಪ್ರಕೃತಿಗೆ ಅನುಗುಣವಾಗಿ ಪ್ರತಿ ಕ್ಷಣದಲ್ಲಿ ಜೀವಿಸುತ್ತಿರುವವನು; ಹಾಗೆಯೇ ಬೇರಾವ ಪ್ರಕೃತಿಗೂ ವಿಚಲಿತನಾಗದೇ ಇರುವವನು ಎಂದು! ಡಿಸ್ಟರ್ಬ್ ಮಾಡುವುದೇ ಎದುರು ನಿಂತು ವಾದಿಸುವವರ ವೈಖರಿ ಎಂಬುದನ್ನು ಅರಿಯದೇ ಹೋದರೆ ಅದರಂಥ ಮರೆವು ಇನ್ನೊಂದಿಲ್ಲ! ಡಿಸ್ಟರ್ಬ್ ಮಾಡುವುದು ಮತ್ತು ಡಿಸ್ಟರ್ಬ್ ಆಗದೇ ಇರುವುದು ಎರಡೂ ಸೈಕಾಲಜಿಯ ಆಟಗಳೇ! ‘The best fighter is never angry’ ಎಂದು ಲಾವೋತ್ಸು ಹೇಳಿದ್ದು ಇದೇ ಅರ್ಥದಲ್ಲಿ. ಎದುರಿನವನು ಎಷ್ಟೇ ನಿಂದಿಸುತ್ತಿದ್ದರೂ ಬುದ್ಧರು ಚಲಿಸಲಿಲ್ಲ. ನೆಗಟೀವಾಗಲಿಲ್ಲ. ಅವನ ಬಯ್ಗುಳಕೆ ವಿಚಲಿತಗೊಳ್ಳದೇ ಅವನು ಕೊಟ್ಟ ಬೈಗುಳ ಸೇವೆಯನ್ನು ಸ್ವೀಕರಿಸದೇ ನಕ್ಕು ಹೊರಟರು. ಶಿಷ್ಯರು ಮಾತ್ರವೇ ವಿಚಲಿತರಾದರು ಮತ್ತು ಕ್ರೋಧಿತರಾದರು. ಗುರುಗಳನ್ನು ಝಂಕಿಸಿ ಕೇಳಿದ್ದಕ್ಕೆ ‘ಅವನೊಂದು ವಸ್ತುವನ್ನು ಕೊಡಲು ಬಂದನು, ನಾನದನ್ನು ಸ್ವೀಕರಿಸದೇ ಹೋದೆ ಅಷ್ಟೇ’ ಎಂದರು. ಇದೇ ಬುದ್ಧತ್ವ. ಗೌತಮರು ಇಷ್ಟು ಹೇಳಿ ಸುಮ್ಮನಾಗಲಿಲ್ಲ, ಮುಂದುವರೆದು ಹೇಳಿದರು: ‘ಸಿಟ್ಟು ಅವನ ಪ್ರಕೃತಿ; ಪ್ರಶಾಂತತೆ ನನ್ನ ಪ್ರಕೃತಿ. ನಾವಿಬ್ಬರೂ ಬೇರೆ ಬೇರೆ ಪ್ರಕೃತಿಗಳಲ್ಲಿ ಬದುಕುತ್ತಿದ್ದೇವೆ. ಇದನ್ನು ಹೋಲಿಸಬಾರದು. ನನ್ನದು ಶ್ರೇಷ್ಠ ಅಲ್ಲ; ಅವನದು ಕನಿಷ್ಟ ಅಲ್ಲ! ನಾನು ಆ ಹಾದಿಯನ್ನು ಕ್ರಮಿಸಿ ಬಂದಿದ್ದೇನೆ; ಆತನಿನ್ನೂ ಈ ಹಾದಿಯನ್ನು ತುಳಿದಿಲ್ಲ ಅಷ್ಟೇ.’ ಎಂಥ ಮಾತು!

ನಾವಾಗಿದ್ದರೆ ಜಂಭ ಕೊಚ್ಚಿಕೊಳ್ಳುತ್ತಿದ್ದೆವು. ಹತ್ತಾರು ಮಂದಿಗೆ ಇದನ್ನು ಉಸುರಿ ಅವನೆಷ್ಟೇ ಕೆಣಕಿದರೂ ನಾನು ಅಲ್ಲಾಡಲಿಲ್ಲ ಎನ್ನುತ್ತಿದ್ದೆವು. ಇದು ನಿಜವಾದ ಅಜ್ಞಾನೋದಯ. ಜ್ಞಾನೋದಯಗೊಂಡವರು ಹೀಗೆ ವರ್ತಿಸುವುದಿಲ್ಲ. ನಡೆಯುವ ಪ್ರತಿ ಸನ್ನಿವೇಶ, ಸಂದರ್ಭದಲ್ಲೂ ತನ್ನ ಅಹಮನ್ನು ಸೇರಿಸದೇ ವಿಶ್ಲೇಷಿಸುವರು. ಇದು ಕೇವಲ ಆಕಸ್ಮಿಕ! ಅವನು ಬಯ್ಯುವ ಸಂದರ್ಭದಲ್ಲಿ ನಾನು ಅವನೆದುರಿಗೆ ಇದ್ದೆ ಅಥವಾ ನಾನು ಎದುರಾದ ಹೊತ್ತಲ್ಲಿ ಅವನು ಬಯ್ಯಲು ಶುರುವಿಟ್ಟ! ಹೀಗೆ ನಿರ್ಧರಿಸಿದ ಹೊತ್ತೇ ಅಮೃತಘಳಿಗೆ. ಇದು ಕೇವಲ ಜ್ಞಾನೋದಯ ಮಾತ್ರವಲ್ಲ, ಹೃದಯೋದಯ ಕೂಡ!!

ಪ್ರಕೃತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ನಮ್ಮೆಲ್ಲ ವರ್ತನೆಗಳಿಗೆ ಕಾರಣ ಲಭಿಸುವುದು. ಸುಡುವುದು ಬೆಂಕಿಯ ಪ್ರಕೃತಿ. ಇದನ್ನು ಧರ್ಮ ಎಂದೂ ಕರೆಯುವರು. ಬೀಸುವುದು ಗಾಳಿಯ ಧರ್ಮ. ಹಾಗೆಯೇ ಕೋಟ್ಯಂತರ ಜೀವಕೋಶ ಮತ್ತು ಭಾವಕೋಶಗಳಿಂದ ಆದ ಮತ್ತು ಅವುಗಳಿಂದ ನಿಯಂತ್ರಿಸಲ್ಪಡುತ್ತಿರುವ ನಮ್ಮ ಶರೀರ ಮತ್ತು ಮನಸ್ಸುಗಳ ಧರ್ಮವೇ ಇದು. ಈ ಜಗತ್ತು ಕೇವಲ ಪ್ರಾಕೃತಿಕವಾದುದು. ಶುದ್ಧ ನೈಸರ್ಗಿಕವಾದುದು. ಮಿತ್ರರು ಶತ್ರುಗಳಾಗುವುದು, ಶತ್ರುಗಳು ಮಿತ್ರರಾಗುವುದು ಕೇವಲ ಆಕಸ್ಮಿಕ. ನಾವು ಯಾವುದನ್ನು ಕಾರಣಗಳೆಂದುಕೊಳ್ಳುತ್ತೇವೆಯೋ ಅವು ಕೇವಲ ನೆಪಗಳಾಗಿರುತ್ತವೆ; ಮನಸಿನ ಆಟಹೂಟವದು. ನಡೆದ ಎಲ್ಲಕೂ ಕಾರಣಗಳನ್ನೂ ಸಮಜಾಯಿಷಿಗಳನ್ನೂ ಮನಸ್ಸು ಕೊಟ್ಟುಕೊಂಡು ತನಗೆ ತಾನೇ ಸಮಾಧಾನಗೊಳ್ಳುತ್ತದೆ. ಇದರಿಂದ ವಿಚಲಿತರಾಗಬಾರದು. ಅವನು ಬಯ್ದಾಗ ಬುದ್ಧರು ಭಾವಕೋಶದಿಂದ ಜೀವಕೋಶವನ್ನು ಕೆರಳಿಸದೇ ಕೇವಲ ಸಾಕ್ಷಿತ್ವದಿಂದ ನೋಡಲು ಸಾಧ್ಯವಾಗಿದ್ದು ನಿರಂತರ ಎಚ್ಚರ ಮತ್ತು ಎಚ್ಚರಿಕೆಗಳಿಂದ; ತಥಾಗತರಾಗಿ ಇದ್ದುದರಿಂದ. ಸಾಕ್ಷೀಭಾವ ಮತ್ತು ವಿ-ರಾಗಗಳಿಂದ ಆ ಕ್ಷಣವನ್ನು ಅನುಭವಿಸಿದ್ದರಿಂದ! ಆ ಕ್ಷಣದಲ್ಲಿ ಜೀವಿಸುತ್ತಾ ಸಾಕ್ಷಿಯಾಗಿದ್ದುದರಿಂದ. ಒಂದು ನಿರ್ದಿಷ್ಟ ಅಂತರವನ್ನು ಕಾಯ್ದುಕೊಂಡು ಪ್ರಸಂಗವನ್ನು ವಿಶ್ಲೇಷಿಸಿದ್ದರಿಂದ!

ಇದಷ್ಟು ಸುಲಭವಲ್ಲ. ಹಾಗಂತ ಅಸಾಧ್ಯವೂ ಅಲ್ಲ. ಪ್ರಯತ್ನ ಪಡುತ್ತಾ ಇದ್ದರೆ ಒಂದು ದಿನ ಈ ಸಾಧನೆ ಸಾಧ್ಯ. ಅದಕ್ಕೆ ಬೇಕಿರುವುದು ಅಂತರ್ಯಾತ್ರೆ. ಹೊರಗಿನದಲ್ಲ; ಒಳಗಿನ ಲೋಕದ ಪಯಣ. ನಿರಂತರ ಗಮನಿಸುವಿಕೆ. ಆತ್ಮಶೋಧನೆ. ಸ್ವವಿಮರ್ಶೆ, ಸಾನುಕಂಪ ಮತ್ತು ಕ್ಷಮಾಗುಣ. ಎಲ್ಲಕಿಂತ ಮಿಗಿಲಾಗಿ ನಮ್ಮ ಬಗ್ಗೆ ನಾವಿಟ್ಟುಕೊಂಡಿರುವ ಸ್ವಪ್ರತೀಕದ ಅಹಮನ್ನು ಬಿಡುವಿಕೆ. ಇದನ್ನು ಇಂಗ್ಲಿಷಿನಲ್ಲಿ ಬಹಳ ಡೀಸೆಂಟಾಗಿ ‘ಸೆಲ್ಫ್ ಇಮೇಜು’ ಎಂದು ಕರೆದು ಬಹು ದೊಡ್ಡ ಸ್ಥಾನಮಾನ ನೀಡಿದ್ದಾರೆ. ಸೆಲ್ಫ್ ರೆಸ್ಪೆಕ್ಟ್ ಅಂತ ಬಡಬಡಿಸುತಾ ನನಗೆ ಹರ್ಟಾಯಿತು ಅಂತ ಅಳಲುಪಡುತ ನೊಂದುಕೊಳ್ಳುತ್ತಾರೆ. ಇದೊಂದು ಆಧುನಿಕ ಅಹಂಕಾರ. ಅವನು ಬಯ್ದಾಗ ನೊಂದುಕೊಂಡಿದ್ದು ನೀನು! ನೊಂದುಕೊಳ್ಳದಿರುವ ಆಯ್ಕೆಯೂ ನಿನಗಿತ್ತು ಅಲ್ಲವೇ? ಅಂಥ ಸಾಧ್ಯತೆಯನ್ನು ಬುದ್ಧರು ಆವಿಷ್ಕರಿಸಿ ನಮಗೆ ಬಳುವಳಿಯಾಗಿ ನೀಡಿದ್ದಾರೆ. ಬುದ್ಧರು ಹೇಳುವುದನ್ನು ಇನ್ನೊಮ್ಮೆ ನೆನಪಿಸಿಕೊಳ್ಳೋಣ: ‘ಪ್ರಶಾಂತತೆ ನನ್ನ ಪ್ರಕೃತಿ; ಕ್ರೋಧಿತನಾಗಿದ್ದು ಅವನ ಪ್ರಕೃತಿ. ಇದರಲ್ಲಿ ಯಾವುದೂ ಮೇಲು ಕೀಳಲ್ಲ; ಒಳ್ಳೆಯದು ಕೆಟ್ಟದ್ದಿಲ್ಲ!’ ನಾನು ಪ್ರಸಂಗವನ್ನು ನಿಭಾಯಿಸಿದೆ, ಕ್ರೋಧಿತನಾಗಲಿಲ್ಲ. ನನ್ನ ದಾರಿಯೇ ಸರಿ ಎಂದುಕೊಂಡ ತಕ್ಷಣ ನನ್ನೊಳಗೆ ಅಹಂ ಅಡರಿಕೊಳ್ಳುತ್ತದೆ. ಆಗ ಅದು ಅಜ್ಞಾನೋದಯ ಅಷ್ಟೇ. ‘ನನಗೆ ಮನದ ಶಾಂತಿ ಮುಖ್ಯವಾಗಿದ್ದರಿಂದ ಪ್ರಶಾಂತನಾಗಿದ್ದೆ. ಅವನಿಗೆ ಕ್ರೋಧವು ತಕ್ಷಣ ಸುಖ ಕೊಡುವುದರಿಂದ ಬಯ್ಗುಳದ ನೆರವಿನಲ್ಲಿ ಬದುಕಿದ್ದ ಅಷ್ಟೇ.’ ಕೊನೆಯ ಅಂಶ ಗಮನಾರ್ಹ: ವಿಶ್ಲೇಷಣೆಯಲ್ಲಿ ಅಹಂ ಇರಬಾರದು, ಪ್ರಕೃತಿ ತತ್ತ್ವವನ್ನು ಪ್ರಾಕೃತಿಕವಾಗಿಯೇ ಅಂದರೆ ನನ್ನ ಭಾವಗಳನ್ನು ಬೆರೆಸದೇ ವಿಚಕ್ಷಿಸಬೇಕು. ಆ ಮೂಲಕ ಪ್ರಪಂಚವನ್ನು ಹೊಸ ರೀತಿಯಲ್ಲಿ ಅರಿಯಬೇಕು. ನನ್ನ ಸ್ವಂತ ಭಾವ ವಿಭಾವ ಸಂಭಾವಗಳನ್ನು ಬೆರೆಸುವೆನೋ ಆಗಲೇ ಅರಿಷಡುವರ್ಗಗಳು ವಿಜೃಂಭಿಸಿ ದುಃಖ ದುಮ್ಮಾನಕ್ಕೆ ಕಾರಣವಾಗುವುದು. ಇದನ್ನೇ ಗುರುನಾನಕರು ಬಹು ಚೆಂದವಾಗಿ ಹೇಳಿದ್ದಾರೆ: ‘ನೀರು ಎಷ್ಟೇ ಬಿಸಿಯಿದ್ದು ಕುದಿಯುತಿದ್ದರೂ, ಅದು ಬೆಂಕಿಯನ್ನು ಆರಿಸಬಲ್ಲದು!’ ಹಾಗೆಯೇ ನಮ್ಮ ವ್ಯಕ್ತಿತ್ವ ಮತ್ತು ವರ್ತನೆ. ಇನ್ನೊಂದು ಸೊಗಸಾದ ಬುದ್ಧಿಮಾತಿದೆ: ‘ಕದನಕ್ಕೆ ಇಬ್ಬರ ಅಗತ್ಯವಿದೆ; ಇಬ್ಬರಲ್ಲಿ ನೀವೊಬ್ಬರಾಗದಿರಿ!’ ಅಂದರೆ ಅಂತಿಮವಾಗಿ ನನ್ನ ಆಯ್ಕೆಯೇ ನನ್ನ ಸುಮ್ಮಾನಕೂ ದುಮ್ಮಾನಕೂ ಕಾರಣ ಎಂದಾಯಿತು. ಲೋಕ ಬಹು ಸರಳ; ಸಂಕೀರ್ಣ ಮಾಡಿಕೊಂಡದ್ದು ನಾವು ಮತ್ತು ನಮ್ಮ ಆಯ್ಕೆಗಳು ಅಷ್ಟೇ.

-ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

12 Responses

  1. ನಯನ ಬಜಕೂಡ್ಲು says:

    Nice

  2. ಹೌದು ಆಯ್ಕೆ ನಮ್ಮದಾದಾಗ …ಬದುಕು ಸಹಜ ಸುಂದರವಾಗುತ್ತದೆ..ಹಾಗೇ…ಹೆಚ್ಚು ಹೆಚ್ಚು..ಹೊರಗಡೆಯ ಜನರೊಡನೆ ಬೆರೆಯಬಹುದು..ಸಾರ್..ಚಂದದ ಬರೆಹ..

  3. ಮಹೇಶ್ವರಿ ಯು says:

    ಮನಮುಟ್ಟುವ, ಮುಟ್ಟ ಬೇಕಾದ ಬರಹ

  4. ಶಂಕರಿ ಶರ್ಮ says:

    ಮನಸ್ಸಿನ ಮೇಲಿನ ಹಿಡಿತದ ಪ್ರಾಮುಖ್ಯತೆಯನ್ನು ಹಲವು ಉದಾಹರಣೆಗಳೊಂದಿಗೆ ಪ್ರಸ್ತುತ ಪಡಿಸಿದ ಉತ್ತಮ ಲೇಖನ.

  5. ಪದ್ಮಾ ಆನಂದ್ says:

    ಜೀವನದಲ್ಲಿ ಜ್ಞಾನೋದಯದಷ್ಟೇ ಹೃದಯೀದಯಕ್ಕೂ ಇರುವ ಮಹತ್ವವನ್ನು ಮನ ಮುಟ್ಟುವ ಉದಾಹರಣೆಗಳೊಂದಿಗೆ ಸರಳವಾಗಿ ತಿಳಿಯಪಡಿಸಿದ ಚಂದದ ಲೇಖನ.

  6. ವಿಜಯ says:

    ತುಂಬಾ ಚೆನ್ನಾಗಿದೆ ಗುರುಗಳೇ

  7. ವಿಜಯ says:

    ಜೀವನದ ಸುಂದರತೆ ಸತ್ಯವಾಗಿ ಬದುಕುವುದರಲ್ಲಿದೆ ಸಹನೆಯಿಂದ ಕಲಿಯುವುದರಲ್ಲಿದೆ ಅನುಭವಗಳಿಂದ ವೇದ್ಯವಾಗುತ್ತದೆ ಎಂಬ ಸಾರ್ವತ್ರಿಕ ಸತ್ಯವನ್ನು ತಮ್ಮ ಲೇಖನ ಅದ್ಭುತವಾಗಿ ಹಿಡಿದಿಟ್ಟಿದೆ ಧನ್ಯವಾದಗಳು ಗುರೂಜಿ

  8. Prabhushankar k. P. says:

    ಅರ್ಥಪೂರ್ಣ

  9. MANJURAJ says:

    ಕಮೆಂಟಿಸುವ ಮೂಲಕ ಮೆಚ್ಚು ಮಾತಾಡಿದ ಎಲ್ಲ ಸಹೃದಯರಿಗೂ ಧನ್ಯವಾದಗಳು

  10. ಉಷಾ ನರಸಿಂಹನ್ says:

    ಬುದ್ಧತ್ವದ ಅರಿವು ತುಂಬ ಸರಳ.ಆದರೆ ಆನುಸರಣೆ ಅಷ್ಟು ಸುಲಭವಲ್ಲ.ಮನುಷ್ಯ ಪದೇ ಪದೇ ರಾಗದ್ವೇಷಗಳಿಗೆ ಪಕ್ಕಾಗುವ ಹುಂಬತನ ಅವನನ್ನೇ ಘಾಸಿಗೊಳಿಸುವ ಪ್ರಕ್ರಿಯೆ ಕುರಿತು ಗಮನ ಸೆಳೆದಿದ್ದೀರಿ.ಪ್ರತಿಕ್ರಿಯೆ ಕೊಡದಿರುವುದೇ ಸಿಟ್ಟು,ಹತಾಶೆಗೆ ಮದ್ದು ಎನ್ನುವುದು ನಿಜವೇ ಆದರು ಆ ಮನೋಧರ್ಮವನ್ನು ಮೀರಲು ತುಂಬ ಮಾನಸಿಕ ತಯಾರಿ ಮತ್ತು ವ್ಯವಧಾನ ಬೇಕು! ಸರಳ ಸುಂದರಬದುಕಿನ ಬುದ್ಧಸೂತ್ರವನ್ನು ಮನಮುಟ್ಟುವಂತೆ ವಿವರಿಸಿದ್ದೀರಿ.ಅಭಿನಂದನೆಗಳು ಸರ್.

  11. ಎನ್ ನಾಗರಾಜು says:

    ಸ್ಥಿತ ಪ್ರಜ್ಞೆ ಇವಾಲ್ವಡ್ ಸೆಲ್ಫ್ ನಲ್ಲಿ ಮಾತ್ರ ಕಾಣಬಹುದು. ಅದಕ್ಕೆ ತಾವು ಆಯ್ದ ಬುದ್ಧ ಲಾವೋತ್ಸೆ ರಜನೀಶ್ ಟ್ರಾಂಜಾಕ್ಷನ್ ವಿಶ್ಸ್ಲೇಷಣೆ ಸ್ಪಷ್ಟಪಡಿಸುತ್ತವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: