ಮರುಭೂಮಿಯಲ್ಲಿನ ಓಯಸಿಸ್ ಅಲ್‌ಐನ್

Share Button


ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಅನ್‌ಐನ್ ಎನ್ನುವ ಸ್ಥಳ ನಿಜಕ್ಕೂ ಸುಂದರವಾಗಿದೆ. ಅಬುದಾಭಿಯಿಂದ ನೂರೈವತ್ತು ಕಿ.ಮೀ. ದೂರ ಇರುವ ಅಲ್‌ಐನ್‌ಗೆ ನಾವು ಭೇಟಿಕೊಟ್ಟೆವು. ಬೆಳಿಗ್ಗೆ ಒಂಭತ್ತು ಗಂಟೆಗೆ ಹೊರಟ ನಾವು ಒಂದೂವರೆ ಗಂಟೆಗಳ ಕಾಲ ಕಾರಿನಲ್ಲಿ ಪ್ರಯಾಣಿಸಿ ಅಲ್‌ಐನ್ ತಲುಪಿದೆವು. ದಾರಿ ಸವೆದದ್ದೇ ಗೊತ್ತಾಗುವುದಿಲ್ಲ. ಅಷ್ಟು ಉನ್ನತ ಮಟ್ಟದ ರಸ್ತೆಗಳು ಇಲ್ಲಿಯ ರಸ್ತೆಗಳಲ್ಲಿ ಎಲ್ಲಿಯೂ ಚಿಕ್ಕದೊಂದು ಹಳ್ಳವಿಲ್ಲ, ಉಬ್ಬುತಗ್ಗುಗಳಿಲ್ಲ, ರಸ್ತೆ ಡುಬ್ಬಗಳಂತೂ ಇಲ್ಲವೇ ಇಲ್ಲ. ಎರಡೂ ಕಡೆ ಮರುಭೂಮಿ ಅಲ್ಲಲ್ಲಿ ಚಿಕ್ಕ ಕುರುಚಲು ಗಿಡಗಳು. ರಸ್ತೆಯ ಎರಡೂ ಕಡೆ ನೆಟ್ಟು ಬೆಳೆಸಿರುವ ಖರ್ಜೂರದ ಮರಗಳು. ದೂರದಲ್ಲಿ ಒಂಟೆಗಳು ಮೇಯುತ್ತಿರುವುದನ್ನು ಅಲ್ಲಲ್ಲಿ ಕಾಣಬಹುದು. ಅವು ರಸ್ತೆಗೆ ಬರದಂತೆ ಬೇಲಿ ಹಾಕಿದ್ದಾರೆ. ನಮ್ಮ ಕಾರಿನ ಡ್ರೈವರ್ ಒಂಟೆ ಅಕಸ್ಮಾತ್ ರಸ್ತೆಗೆ ಬಂದು ಕಾರು ಅದಕ್ಕೆ ಅಪ್ಪಳಿಸಿದರೆ ಒಳಗಿದ್ದವರಿಗೆ ಪ್ರಾಣಾಪಾಯ ಎಂದು ಹೇಳಿದರು. ಅದು ಬಹಳ ಎತ್ತರದ ಪ್ರಾಣಿಯಾದ್ದರಿಂದ ಡಿಕ್ಕಿ ಹೊಡೆದಾಗ ಅದರ ದೇಹ ಕಾರಿನ ಮೇಲೆ ಅಪ್ಪಳಿಸಿ ಒಳಗಿದ್ದವರು ನುಜ್ಜು ಗುಜ್ಜಾಗುತ್ತಾರೆ ಎಂದರು. ಅಲ್ಲಲ್ಲೇ ಮರಳಿನ ಬೆಟ್ಟಗಳು (Sand Dunes) ಕಾಣಿಸುತ್ತವೆ. ದೂರದಿಂದ ನೋಡಲು ನುಣುಪಾದ ಮರಳಿನಿಂದ ಆಗಿದೆ ಎನ್ನಿಸುತ್ತದೆ. ನನಗಂತೂ ‘Lawrence of Arabia’ ಚಿತ್ರವೇ ನೆನಪಿಗೆ ಬರುತ್ತಿತ್ತು. ಸೂರ್ಯನ ಪ್ರಖರತೆ ಕಾರಿನಿಂದಿಳಿಸಿದ ಕೂಡಲೇ ತಿಳಿಯುತ್ತಿತ್ತು.

ಅಲ್‌ಏನ್ ಹಸಿರಾಗಿರುವ ಪ್ರದೇಶ, ಅರಬ್ ರಾಷ್ಟ್ರದಲ್ಲಿ ಇಷ್ಟು ಹಸಿರು ಇನ್ನೆಲ್ಲೂ ಇಲ್ಲವಂತೆ. ಇಲ್ಲಿ ನೀರಿನ ಬುಗ್ಗೆಗಳು ಮತ್ತು ಓಯಸಿಸ್‌ಗಳಿವೆ. ಆದ್ದರಿಂದ ಹಸಿರಾಗಿದೆ. ಆಲ್‌ಐನ್ ರಾಜ್ಯವನ್ನು ‘ಓಯಸಿಸ್ ನಗರ’ ಎಂದು ಕರೆಯುತ್ತಾರೆ. ಅರಬ್ ಸಂಸ್ಕೃತಿಯನ್ನು ಕಾಣಬಹುದಾದ ಪ್ರಪಂಚದ ಅತ್ಯಂತ ಹಳೆಯದಾದ ಒಂದು ಊರು. ಶುರುವಾದ ಸಮಯದಿಂದಲೂ ಮಾನವ ತನ್ನ ಇರುವನ್ನು ಉಳಿಸಿಕೊಂಡಿರುವ ಒಂದು ಸ್ಥಳ. ಮೊದಲು ನಾವು ಜಬೆಲ್‌ಹಫೀತ್ ಎನ್ನುವ ಸ್ಥಳವನ್ನು ನೋಡಿದೆವು. ಜಬೆಲ್ ಎಂದರೆ ಬೆಟ್ಟ ಎನ್ನುವ ಅರ್ಥ. ಇದೊಂದು ನೈಸರ್ಗಿಕ ಅದ್ಭುತ. ಈ ಬೆಟ್ಟದಲ್ಲಿ ಯಾವುದೇ ಗಿಡಮರಗಳಿಲ್ಲ. ಬರೀ ಕಲ್ಲು ಮತ್ತು ಬಂಡೆಗಳು ಮಾತ್ರ. ಈ ಸ್ಥಳ ಅಬುಧಾಬಿಯಲ್ಲೇ ಎತ್ತರದ ಪ್ರದೇಶ. ಮಿಲಿಯನ್‌ಗಟ್ಟಲೆ ವರ್ಷಗಳಿಂದ ಈ ಬಂಡೆಗಳ ಮೇಲೆ ಬೀಸುವ ಉಪ್ಪು ಮಿಶ್ರಿತ ಗಾಳಿ ನಿಧಾನವಾಗಿ ಶಿಥಿಲ weathering ಮಾಡಿದೆ. ಸವೆದು ಹೋಗಿರುವ ಬಂಡೆಗಳು ಚಿತ್ರ ವಿಚಿತ್ರ ಆಕಾರಗಳಲ್ಲಿವೆ. ಬಂಡೆಯ ಆಕಾರ ಮತ್ತು ಸವೆತ ಗಾಳಿ ಬೀಸುವ ದಿಕ್ಕನ್ನು ಸೂಚಿಸುತ್ತದೆ. ಜಬೆಲ್ ಹಫೀತ್‌ಗೆ ಹೋಗಲು ಮಾಡಿರುವ ರಸ್ತೆ ಬಹಳ ಚೆನ್ನಾಗಿದೆ. ಪ್ರಪಂಚದಲ್ಲಿಯೇ ಉತ್ತಮವಾಗಿರುವ ಒಂದು ರಸ್ತೆ ಎಂದು ಹೇಳುತ್ತಾರೆ. ಜಬೆಲ್ ಹಫೀತ್ 1240 ಮೀ ಎತ್ತರ ಇದೆ. ಸಂಯುಕ್ತ ಅರಬ್ ರಾಷ್ಟçಗಳಲ್ಲಿರುವ ಎತ್ತರದ ಜಾಗ (ಶಿಖರ)ಗಳಲ್ಲಿ ಇದು ಎರಡನೆಯದು. ಇಲ್ಲಿರುವ ಕಲ್ಲು ಒಂದು ರೀತಿಯ ಒರಟಾದ ಸುಣ್ಣದ ಕಲ್ಲಾಗಿದ್ದು ತಿಳಿ ಕಂದು ಬಣ್ಣದಲ್ಲಿದೆ. ಪಳೆಯುಳಿಕೆಗಳೂ ಇಲ್ಲಿ ದೊರೆತಿವೆ. ಬೆಟ್ಟದ ಬುಡದಲ್ಲಿ ಸುಮಾರು 500 ಹಳೆಯ ಗೋರಿಗಳನ್ನೂ (Burial Tombs) ಗುರುತಿಸಲಾಗಿದೆ. ಇವುಗಳು 5000 ವರ್ಷಗಳಷ್ಟು ಹಳೆಯದಾಗಿದೆ. ಬೆಟ್ಟದ ಕೆಳಭಾಗದಲ್ಲಿ ಒಂದು ಬಿಸಿನೀರಿನ ಬುಗ್ಗೆ ಇದೆ. ಇದರ ಹೆಸರು ‘ಹಸಿರು ಮುಬಾಜûರಾ’ ಬೆಟ್ಟದ ಕೆಳಗೆ ಮತ್ತು ರಪಕಿಗಳಲ್ಲಿ ಸುಂದರವಾದ ಹುಲ್ಲಿನ ಹಾಸನ್ನು ಮಾಡಿದ್ದಾರೆ.

ಅಲ್‌ಐನ್ ಪ್ಯಾರಡೈಸ್ ಗಾರ್ಡನ್ : ಇದೊಂದು ಬಹಳ ಸುಂದರವಾದ ಉದ್ಯಾನವನ. ಕೇವಲ 90 ದಿನಗಳಲ್ಲಿ ಈ ಉದ್ಯಾನವನವನ್ನು ನಿರ್ಮಿಸಲಾಗಿದೆ. ಪ್ರಪಂಚದಲ್ಲಿಯೇ ಅತಿ ಹೆಚ್ಚು ಸಂಖ್ಯೆಯ 2968 ಹೂ ಗಿಡಗಳ ತೂಗುಬುಟ್ಟಿಗಳನ್ನು ವಿವಿಧ ಆಕಾರ ಮತ್ತು ವಿನ್ಯಾಸಗಳಲ್ಲಿ ಜೋಡಿಸಲಾಗಿದೆ. ಇದನ್ನು ಅಹರ್ ಎನ್ನುವ landscaping ಮಾಡುವ ಸಂಸ್ಥೆ 28ನೇ ಫೆಬ್ರವರಿ 2011 ರಂದು ನಿರ್ಮಿಸಿತು. ಇದಕ್ಕೆ ಗಿನ್ನೆಸ್ ಜಾಗತಿಕ ದಾಖಲೆ ಆಗಿದೆ. ನೀವು ಕಣ್ಣು ಹಾಯಿಸಿದಲ್ಲೆಲ್ಲಾ ಹೂಗಳ ರಾಶಿಯೇ ರಾಶಿ, ಗೋಲಾಕಾರದಲ್ಲಿ ಅರ್ಧ ಚಂದ್ರನಂತೆ ಲತಾ ಮಂಟಪದಂತೆ, ಬಾಳೆಯ ದಿಂಡಿನಂತೆ ನೆಲದ ಮೇಲೆ ಬಣ್ಣಬಣ್ಣದ ಚಿತ್ತಾರದಂತೆ, ಕಾರಂಜಿಯಂತೆ, ಪಿರಮಿಡ್, ಮರದಂತೆ ಹೀಗೆ ಎಲ್ಲಿ ನೋಡಿದರೂ ಪುಷ್ಪರಾಶಿ ಮತ್ತು ಪುಷ್ಪಕಾಶಿ. ಗೋಡೆಗಳೂ ಇಳಿಜಾರಿನಲ್ಲಿಯೂ ಪುಷ್ಪಗಳ ರತ್ನಗಂಬಳಿಯನ್ನೇ ಹೊದ್ದು ಕೊಂಡಿವೆ. ಮಧ್ಯದಲ್ಲಿ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್‌ನಂತೆ ಒಂದು ಮಾದರಿಯನ್ನು ಮಾಡಿಟ್ಟಿದ್ದಾರೆ. ಇಲ್ಲಿ ಪೆಟೂನಿಯ ಹೂಗಳದ್ದೇ ಸಾಮ್ರಾಜ್ಯ ಈ ಹೂವಿನ ಅಷ್ಟು ವಿಧದ ಬಣ್ಣಗಳನ್ನು ನಾನು ಇಲ್ಲಿಯೇ ನೋಡಿದ್ದು. ಜೊತೆಗೆ ವಿವಿಧ ಬಣ್ಣಗಳ ಸೇವಂತಿ ಮತ್ತು ಜೆರೇನಿಯಂ ಕೂಡ ಇದ್ದುವು. ಪ್ರಸ್ತುತ ಈ ಉದ್ಯಾನವನ ಅನ್‌ಐನ್‌ನಲ್ಲಿಲ್ಲ. ಬೇರೆ ಕಡೆಗೆ ಸ್ಥಳಾಂತರಗೊಂಡಿದೆ.

Al Ain Paradise Garden, Pc: Internet

ಅಲ್‌ಐನ್ ನ್ಯಾಷನಲ್ ಮ್ಯೂಸಿಯಂ : ಇದೊಂದು ರಾಷ್ಟ್ರೀಯ ಸಂಗ್ರಹಾಲಯ, ಬಹಳ ದೊಡ್ಡದಲ್ಲದಿದ್ದರೂ ಎಲ್ಲವನ್ನೂ ಅಂದವಾಗಿ ಜೋಡಿಸಿಟ್ಟಿದ್ದಾರೆ. 1971 ನೆಯ ಇಸವಿಯಲ್ಲಿ ಇದು ಪ್ರಾರಂಭವಾಯಿತು. ಅಲ್‌ಐನ್ ಒಯಸಿಸ್‌ನ ಒಂದು ಅಂಚಿನಲ್ಲಿದೆ. ಈ ಸಂಗ್ರಹಾಲಯ ಇರುವುದು ಸುಲ್ತಾನ್ ಬಿನ್ ಜಾಯೆದ್ ಕೋಟೆಯ ಕ್ಯಾಂಪಸ್‌ನಲ್ಲಿ. ಈ ಕೋಟೆಯನ್ನು 1910 ರಲ್ಲಿ ಕಟ್ಟಲಾಯಿತು. ಸಂಗ್ರಹಾಲಯದಲ್ಲಿ ಮೂರು ವಿಭಾಗಗಳಿವೆ; ಮೊದಲನೆಯದು ಪ್ರಾಚ್ಯವಸ್ತು ವಿಭಾಗ, ಮನುಕುಲ ವರ್ಣನೆ (ethnography)) ಮತ್ತು ಮಹಾರಾಜರಿಗೆ ಬಂದ ಬಳುವಳಿಗಳು. ಮಾದರಿಗಳಲ್ಲಿ ಈ ದೇಶದ ಜೀವನ ಶೈಲಿ ಮತ್ತು ಸಂಸ್ಕೃತಿಯನ್ನು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ. ಬೆಡೊಯಿನ್ ಆಭರಣಗಳನ್ನು ತೊಟ್ಟ ಹೆಂಗಸರ ಮಾದರಿಗಳಿವೆ. ಅರಬ್ ದೇಶದ ಸಂಗೀತ ವಾದ್ಯಗಳಿವೆ. ಇಲ್ಲಿಯ ಆಯುಧಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದ್ದಾರೆ. ಸಾಂಪ್ರದಾಯಿಕ ಮಜ್ಲಿಸ್ ಕೂಡ ಇದೆ. ಪ್ರಾಚ್ಯವಸ್ತು ವಿಭಾಗದಲ್ಲಿ ದೊಡ್ಡ ಮಣ್ಣಿನ ಪಾತ್ರೆಗಳು ಇವೆ. ಇನ್ನಿತರ ವಸ್ತುಗಳು ಹತ್ತಿರದಲ್ಲಿಯೇ ಸಿಕ್ಕಿರುವಂತಹವು. ಬಳುವಳಿಗಳು ಷೇಕ್ ಜಾ಼ಯೆದ್ ಬಿನ್ ಸುಲ್ತಾನ್ ಆಲ್‌ನಹ್ಯಾನ ಅವರಿಗೆ ಬಂದಿರುವವು. ಇವುಗಳಲ್ಲಿ ಚಿನ್ನದ ಕತ್ತಿಗಳು, ಬೆಳ್ಳಿಯ ಖಡ್ಗಗಳು ಮತ್ತು ಚಿನ್ನದ ಖರ್ಜೂರ ಮರ ನೋಡಲು ಆಕರ್ಷಕವಾಗಿವೆ.

ಅಲ್‌ಐನ್ ಪ್ಯಾಲೇಸ್ ಮ್ಯೂಸಿಯಂ : ಇಲ್ಲಿ ಷೇಕ್ ಅಲ್‌ನಹ್ಯಾನ್ ಕುಟುಂಬದ ಸಂತಾನ ವೃಕ್ಷವನ್ನು ಫೋಟೋಗಳ ಮೂಲಕ ಪ್ರದರ್ಶಿಸಲಾಗಿದೆ. ಇಲ್ಲಿಯ ಗೋಡೆಗಳ ಮೇಲೆ ಸುಂದರವಾದ ಚದರ ಬಿಲ್ಲೆಗಳು ಇವೆ. ಇವು ಹಡಗು ಇನ್ನಿತರ ರೀತಿಯಲ್ಲಿ ಮಾಡಿದ್ದಾರೆ.

ಅನ್ ಐನ್ ಓಯಸಿಸ್ : ಇದು ಬಹಳ ದೊಡ್ಡ ಸ್ಥಳ. ಊರಿನ ಮಧ್ಯದಲ್ಲಿದೆ. ಇದರೊಳಗೆ ಬರೀ ಖರ್ಜೂರದ ರೀತಿಯ ಮರಗಳೇ ತುಂಬಿ ಹಸಿರಾಗಿದೆ. ನೀವು ಇದರೊಳಗೆ ಹೋದರೆ ದಾರಿ ತಪ್ಪುವುದು ನಿಶ್ಚಿತ. ಒಟ್ಟು ಎಂಟು ಪ್ರವೇಶದ್ವಾರಗಳಿವೆ. ಹಾವಿನಂತೆ ಸುತ್ತಿಕೊಂಡು ಹೋಗುವ ಹಲವಾರು ರಸ್ತೆಗಳಿವೆ ಎಲ್ಲವೂ ಒಂದೇ ರೀತಿ ಕಾಣುತ್ತವೆ. ನಾವೂ ಸ್ವಲ್ಪ ದಾರಿ ತಪ್ಪಿದೆವೆನ್ನಿ. ಒಳಗೆ ತಂಪಾಗಿದೆ. ಇಲ್ಲಿ ಅರಬರ ಫಲಾಜ್ ಎನ್ನುವ ಪಾರಂಪರಿಕ ರೀತಿಯ ನೀರಾವರಿ ಇದೆ. ಭೂಮಿಯ ತಳಭಾಗದಲ್ಲಿರುವ ನೀರನ್ನು ಇದಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ. ಮರುಭೂಮಿಯ ಮಧ್ಯೆ ಓಯಸಿಸ್ ಎನ್ನುವ ಮಾತನ್ನು ಇಲ್ಲಿ ನೋಡಿ ಅನುಭವಿಸಿದೆವು. ಇಲ್ಲಿ ಊಟಕ್ಕೆ ನಮಗೆ ಒಂದು ಸಸ್ಯಾಹಾರಿ ಹೋಟೆಲ್ ಸಿಕ್ಕಿತು. ದಕ್ಷಿಣ ಕನ್ನಡದವರು ನಡೆಸುವಂತದ್ದು. ಊಟದ ಜೊತೆಗೆ ಸವಿಯಲು ಸವಿಗನ್ನಡವೂ ಇತ್ತು!

ಅನ್ ಐನ್ ಪ್ರಾಣಿ ಸಂಗ್ರಹಾಲಯ : ನಂತರ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದೆವು. ಈ ಬಿಸಿಲಿನಲ್ಲಿ ಯಾವ ಪ್ರಾಣಿಗಳು ತಾನೇ ಇದ್ದಾವು? ಮರುಭೂಮಿಯಲ್ಲಿ ಮತ್ತು ಉಷ್ಣ ಪ್ರದೇಶಗಳಲ್ಲಿ ಇರುವ ಕೆಲವು ಪ್ರಾಣಿ ಪಕ್ಷಿಗಳಿದ್ದುವು. ಜೆರ್ಬಿಲ್ ಎನ್ನುವ ಇಲಿಯ ರೀತಿಯ ಪ್ರಾಣಿ, ಹಲ್ಲಿ ರೀತಿಯ ಹಾರುವ ಓತಿ (ತೇಜಸ್ವಿಯವರ ಕರ್ವಾಲೋ ನೆನಪಿಗೆ ಬರುತ್ತದೆ). ಮರಳುಗಾಡಿನಲ್ಲಿ ಇರುವ ಬೆಕ್ಕು, ನರಿ, ಒಂಟೆ, ಮೇಕೆ, ಮೊಲ ಇತ್ಯಾದಿ. ನಮ್ಮ ಮೈಸೂರಿನ ಪ್ರಾಣಿ ಸಂಗ್ರಹಾಲಯ ಪ್ರಪಂಚದಲ್ಲಿಯೇ ಒಂದು ಉತ್ತಮವಾದದ್ದು ಎಂದು ನನ್ನ ಅನಿಸಿಕೆ. ಇಲ್ಲಿಯ ವಿಶೇಷ ಪ್ರಾಣಿಗಳಾದ ಆರಿಕ್ಸ್ ಮತ್ತು ಐಬೆಕ್ಸ್ ನೋಡಿದೆವು. ಇವು ಮೇಕೆ ಜಾತಿಗೆ ಸೇರಿದವು. ಒಟ್ಟಾರೆ ಸಂಗ್ರಹಾಲಯ ನೋಡಲು ಚೆನ್ನಾಗಿದ್ದು ಶುಚಿಯಾಗಿತ್ತು.

ಒಂದು ವಿಶೇಷವನ್ನು ನಿಮಗೆ ಹೇಳಲೇಬೇಕು. ಪ್ರಾಣಿಸಂಗ್ರಹಾಲಯಕ್ಕೆ ಹೋಗಲು ಬಸ್ಸಿಗೆ ಕಾಯುತ್ತಿದ್ದೆವು. ನಾನು ಕ್ಯಾಮೆರಾ ಕೈಯಲ್ಲಿಟ್ಟುಕೊಂಡು ಅದರ ಕವರ್‌ನ್ನು ಬೆಂಚಿನ ಮೇಲೆ ಇಟ್ಟಿದ್ದೆ. ಮರೆತು ಹಾಗೆಯೇ ಹೊರಟುಬಿಟ್ಟೆವು. ಪುನಃ ಬಂದು ನೋಡಿದಾಗ ಕ್ಯಾಮೆರಾ ಕವರ್ ಬೆಂಚಿನ ಮೇಲೆ ಒಂದಿಂಚೂ ಆಚೆ ಈಚೆ ಹೋಗದೆ ಅಲ್ಲಿಯೇ ಬೆಚ್ಚಗೆ ಕುಳಿತಿತ್ತು. ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ ಕಳ್ಳತನ ಇಲ್ಲ. ಏಕೆಂದರೆ ಶಿಕ್ಷೆ ಬಲು ಘೋರ ಮತ್ತು ಕಠಿಣ.

ಡಾ. ಎಸ್. ಸುಧಾ, ಮೈಸೂರು

10 Responses

  1. ನಯನ ಬಜಕೂಡ್ಲು says:

    Nice

  2. ಸುಧಾ ಮೇಡಂ ನೀವು ಪ್ರವಾಸವನ್ನು ಮಾಡುತ್ತಿರಿ ನಮಗೆ ಅದರ ಅನುಭವ ವನ್ನು …ಉಣಬಡಿಸುತ್ತಿರು ಎಂದು ಹಾರೈಸುತ್ತೇನೆ..

  3. ಶಂಕರಿ ಶರ್ಮ says:

    ಅರಬ್ ರಾಷ್ಟ್ರದ ಪ್ರವಾಸಿ ಸ್ಥಳಗಳ ಅಂದ ಚಂದದ ವರ್ಣನೆ ಓದಿ ನಮಗೂ ನಿಮ್ಮೊಂದಿಗೆ ಓಡಾಡಿ ವೀಕ್ಷಿಸಿದ ಅನುಭವವಾಯಿತು …ಧನ್ಯವಾದಗಳು

  4. Nirmala G V says:

    ಸುಂದರ ನಗರದ ಸೊಗಸಾದ ವಿವರಣೆ. ಅಭಿನಂದನೆಗಳು ಸುಧಾ

  5. ಪುಷ್ಪಲತಾ says:

    ಉತ್ತಮ ವಾದ ಪ್ರವಾಸ ಲೇಖನ ಸುಧಾ!
    ನಾವು ನಾಲ್ಕು ಜನ ಸಹ್ಯಾದ್ರಿ ಗೆಳತಿಯರು ದುಬೈ ಮತ್ತು ಅಬುಧಾಬಿ ಗೆ ಹೋಗಿದ್ದೆವು.ದುಬೈನಲ್ಲಿ ಮಿರಕಲ್ ಗಾರ್ಡನ್, ಅದ್ಭುತವಾಗಿದೆ ! ಇದು ನೀವು ಹೇಳಿದ ಹಾಗೆ, ಶಿಫ್ಟ್ ಆಗಿರಬಹುದೇ?

  6. S.sudha says:

    ವಂದನೆ ಗಳು. ಹೌದು. ದುಬೈ ಗೆ ಶಿಫ್ಟಾಗಿದೆಯಂತೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: