ಚಾಮುಂಡಿ ಬೆಟ್ಟ..ಪಾಂಡವರ ಮೆಟ್ಟಿಲು
ನಿನ್ನೆ ಭಾನುವಾರ, ಮೈಸೂರಿನ ಯೂಥ್ ಹಾಸ್ಟೆಲ್ ಅಸೋಸಿಷನ್ ಗಂಗೋತ್ರಿ ( ಯೈ.ಎಚ್.ಎ.ಐ) ಘಟಕದ ಕೆಲವು ಆಸಕ್ತರು ಒಟ್ಟಾಗಿ ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತುವ ಕಾರ್ಯಕ್ರಮದಲ್ಲಿ ಭಾಗಿಯಾದೆವು. ಮೈಸೂರಿನವರಿಗೆ ಚಾಮುಂಡಿ ಬೆಟ್ಟ ಹೊಸತಲ್ಲ. ಹಾಗೆಯೇ,ಯೈ.ಎಚ್.ಎ.ಐ ಬಳಗಕ್ಕೆ ಚಾರಣ ಹೊಸತಲ್ಲ. ಆದರೂ ಪ್ರತಿ ಬಾರಿಯ ಚಾರಣದಲ್ಲೂ ಏನೋ ಒಂದು ಹೊಸತನ, ಹೊಸ ವಿಚಾರ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಶ್ರಾವಣದ ತಂಪಾದ ಹವೆಯಲ್ಲಿ, ಮಂಜು ಮುಸುಕಿದ ವಾತಾವರಣದಲ್ಲಿ, ಇಬ್ಬನಿಯಿಂದ ತೋಯ್ದ ಗಿಡಗಳನ್ನು ನೋಡುತ್ತ, ನಡುನಡುವೆ ಹಿಂತಿರುಗಿ, ಕೆಳಗೆ ಕಾಣಿಸುತಿದ್ದ ಮೈಸೂರು ನಗರವನ್ನು ನೋಡುತ್ತಾ, ಫೊಟೊ ಕ್ಲಿಕ್ಕಿಸುತ್ತಾ, ಪಕ್ಷಿಗಳ ಕೂಜನಕ್ಕೆ ಕಿವಿಗೊಡುತ್ತಾ, ದಾರಿಯಲ್ಲಿ ಕಾಣಸಿಕ್ಕಿದ ಕೆಲವು ಗಿಡ ಮೂಲಿಕೆಗಳ ಔಷಧೀಯ ಗುಣಗಳನ್ನು ತಿಳಿದುಕೊಳ್ಳುತ್ತಾ, ನಿಧಾನವೇ ಪ್ರಧಾನ ಎಂಬಂತೆ ಸಾಗಿತ್ತು ನಮ್ಮ ತಂಡದ ಚಾರಣ.
ಕೆಲವು ಮಂದಿ ಆಗಲೇ ಬೆಟ್ಟ ಹತ್ತಿ ಇಳಿಯುತ್ತಿದ್ದರು, ಇನ್ನು ಕೆಲವರು ಶತ್ರುಗಳು ಅಟ್ಟಿಸಿಕೊಂಡು ಬರುತ್ತಾರೋ ಎಂಬಂತೆ ಏದುಸಿರು ಬಿಟ್ಟುಕೊಂಡು ದಾಪುಗಾಲಿಡುತ್ತಿದ್ದರು. ಹೆಜ್ಜೆ ಹೆಜ್ಜೆಗೂ ಅರಿಷಿನ-ಕುಂಕುಮ ಹಚ್ಚಿ ಮೆಟ್ಟಲೇರುವವರು ಇನ್ನು ಕೆಲವರು. ದೇವಿಯ ಸಹಸ್ರನಾಮವನ್ನು ಬಾಯಲ್ಲಿ ಗುನುಗುತ್ತಾ ಅಥವಾ ಮೊಬೈಲ್ ಫೋನ್ ಮೂಲಕ ಕೇಳುತ್ತಾ ಹತ್ತುವವರು ಇನ್ನು ಕೆಲವರು. ಜಾಗಿಂಗ್ ಡ್ರೆಸ್ ಧರಿಸಿ ಜಿದ್ದಿಗೆ ಬಿದ್ದವರಂತೆ ಓಡುವವರು ಹಲವರು. ಮೊಬೈಲ್ ಫೋನ್ ನ ಹಾಡಿಗೆ ದನಿಗೂಡಿಸುತ್ತಾ ಮೆಟ್ಟಿಲು ಹತ್ತುವವರೂ ಇದ್ದರು.
ಸುಮಾರು 400 ಮೆಟ್ಟಲು ಹತ್ತಿರಬಹುದು. ಅಲ್ಲೊಂದು ಕಡೆ ಕಲ್ಲಿನಲ್ಲಿ ಕೆತ್ತಿದ ‘ಪಾಂಡವರ ಮೆಟ್ಟಿಲು’ ಎಂಬುದು ಗಮನ ಸೆಳೆಯಿತು. 700 ಮೆಟ್ಟಿಲುಗಳನ್ನು ಹತ್ತುವಷ್ಟರಲ್ಲಿ ಭವ್ಯ ‘ನಂದಿ’ ವಿಗ್ರಹ ಎದುರಾಗುತ್ತದೆ. ನಾವು ಅಲ್ಲಿಂದ ಇನ್ನೊಂದು ದಾರಿಯಲ್ಲಿ ಮುಂದುವರಿದು, ಮತ್ತಷ್ಟು ದೂರವನ್ನು ಕ್ರಮಿಸಿ, ಬೆಟ್ಟದ ತುದಿ ತಲಪಿದೆವು. ಅಲ್ಲಿ ತಿಂಡಿ ಸೇವಿಸಿ, ಮೆಟ್ಟಿಲುಗಳ ಮೂಲಕ ಕೆಳಗೆ ತಲಪಿದಾಗ ಸುಮಾರು 3 ಗಂಟೆಗಳ ಪುಟ್ಟ ಚಾರಣ ಸಂಪನ್ನಗೊಂಡಿತು.
p
– ಹೇಮಮಾಲಾ.ಬಿ
Liked this write up very much !! 🙂
ಚಾಮು೦ಡಿ ಬೆಟ್ಟ ಚಾರಣ ಸು೦ದರವಾಗಿತ್ತು