ಲೇಖಕಿ ಪದ್ಮಾ ಆನಂದ್ ಅವರ ಎರಡು ಕೃತಿಗಳ ಲೋಕಾರ್ಪಣೆ
ಸುಕುಮಾರ ಭಾವಗಳ ಅನಾವರಣಕ್ಕೊಂದು ವೇದಿಕೆಯಾಗಿ, ನೂರಕ್ಕೂ ಹೆಚ್ಚಿನ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆ ಮಾತಾಗಿರುವ ಮೈಸೂರು ಸಾಹಿತ್ಯ ದಾಸೋಹದ ಅಡಿಯಲ್ಲಿ ಈ ವೇದಿಕೆಯ ನಿರ್ವಾಹಕರಲ್ಲಿ ಒಬ್ಬರಾದ ಶ್ರೀಮತಿ ಪದ್ಮಾ ಆನಂದ್ ಅವರ ಎರಡು ಪುಸ್ತಕಗಳು ಇದೇ ತಿಂಗಳು 16 ರ ಭಾನುವಾರದಂದು ಮೈಸೂರಿನ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡವು.
ಕನ್ನಡ ಪುಸ್ತಕ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಕಾರ್ಯಭಾರ ವಹಿಸಿಕೊಂಡಿರುವ ಶ್ರೀ ಮಾನಸ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಹಿತ್ಯಾಭ್ಯಾಸ ಮತ್ತು ಪುಸ್ತಕಗಳನ್ನು ಕೊಂಡು ಓದುವುದರಿಂದ ಹೇಗೆ ಜೀವನವನ್ನು ಹಸನುಗೊಳಿಸಿಕೊಳ್ಳಬಹುದೆಂಬುದನ್ನು ಹಲವು ನಿದರ್ಶನಗಳ ಮೂಲಕ ಮನವರಿಕೆ ಮಾಡಿದರು. ವೃತ್ತಿಯಿಂದ ನಿವೃತ್ತರಾದರೂ ಸಾಹಿತ್ಯ ಕುಸುಮದ ಪರಿಮಳವನ್ನು ಪಸರಿಸುತ್ತಾ ಪ್ರವೃತ್ತರಾಗಿ, ಸಾರ್ಥಕವಾಗಿರುವ ಶ್ರೀಮತಿ ಪದ್ಮಾ ಮತ್ತು ಶ್ರೀ ಎಂ ಆರ್ ಆನಂದ್ ದಂಪತಿಯನ್ನು ಶ್ಲಾಘಿಸಿದರು. ಒಂದು ಕಾಲದ ನನ್ನ ಪುಸ್ತಕಮೈತ್ರಿಯೇ ಇಂದು ಇಂಥ ಪ್ರಾಧಿಕಾರದ ಅಧ್ಯಕ್ಷಸ್ಥಾನವನ್ನು ತಂದುಕೊಟ್ಟಿದೆಯೆಂದು ವಿನೀತವಾದರು. ಮುಂದುವರೆದು ಉತ್ಸಾಹದಿಂದ ಸಂವಾದಿಸುತ್ತಾ, ಅನಾರೋಗ್ಯಕ್ಕೆ ಮಾತ್ರೆಗಳನ್ನು ಖರೀದಿಸುವ ಬದಲು ಮಾನಸಿಕ ಆರೋಗ್ಯ ಮತ್ತು ನೆಮ್ಮದಿಗಾಗಿ ಪುಸ್ತಕಗಳನ್ನು ಖರೀದಿಸಿ ಎಂದು ಕರೆ ಕೊಟ್ಟರು. ಓದುವ ದಿನಮಾನದಿಂದಲೂ ನಾನು ಪುಸ್ತಕಗಳನ್ನು ಕೊಂಡು ಕೊಳ್ಳುವ ಮತ್ತು ಓದುವ ಅಭಿರುಚಿಯನ್ನು ಬೆಳೆಸಿಕೊಂಡಿರುವುದಕ್ಕೆ ಹೆಮ್ಮೆಯಿದೆ ಎಂದರು.
ಹಿರಿಯ ವಿದ್ವಾಂಸರೂ ಸೃಜನಶೀಲ ಸಾಹಿತಿಗಳೂ ಅಷ್ಟಾವಧಾನಿಗಳೂ ಆದ ಡಾ. ಕಬ್ಬಿನಾಲೆ ವಸಂತಭಾರದ್ವಾಜ ಅವರು ಪದ್ಮಾ ಆನಂದ್ ಅವರ ‘‘ಬದುಕು ಬಿಂಬ” ಎಂಬ ಕಥಾಸಂಕಲನವನ್ನೂ ‘ತಂಗಾಳಿಯಲ್ಲಿ ವಾಕಿಂಗ್‘ ಎಂಬ ಲಲಿತ ಪ್ರಬಂಧಗಳ ಸಂಕಲನವನ್ನೂ ಬಿಡುಗಡೆ ಮಾಡಿದರು. ಶಿಕ್ಷಣ ಕ್ಷೇತ್ರೇತರ ವಲಯಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ಬಂದು, ತಮ್ಮ ಅಮೂಲ್ಯವೂ ವೈವಿಧ್ಯಮಯವೂ ಆದ ಅನುಭವಗಳ ಹಿನ್ನೆಲೆಯಲ್ಲಿ ಬರೆಯುತ್ತಿರುವ ಅಪಾರ ಬರೆಹಗಾರರ ವರ್ಗವೇ ನಮ್ಮಲ್ಲಿದೆ. ಇಂಥವರು ಕನ್ನಡ ಸಾಹಿತ್ಯ ನಡೆದು ಬಂದ ದಾರಿಯತ್ತ ಒಮ್ಮೆ ಕಣ್ಣು ಹಾಯಿಸಿ, ಸಾಹಿತ್ಯ ಸಿರಿವಂತಿಕೆಯನ್ನು ಅರ್ಥೈಸಿಕೊಂಡು ಬರೆದರೆ ಇನ್ನೂ ಹೆಚ್ಚಿನ ಗುಣಮಟ್ಟ ಲಭಿಸೀತು ಎಂದು ತಮ್ಮ ಮನದಾಳದ ಮಾತನ್ನರುಹಿದರು.
ಜಾನಪದ ವಿದ್ವಾಂಸರೂ ಕನ್ನಡ ಪ್ರಾಧ್ಯಾಪಕರೂ ಆಗಿರುವ ಡಾ. ಮೈಸೂರು ಕೃಷ್ಣಮೂರ್ತಿ ಅವರು ಬದುಕು ಬಿಂಬ ಕೃತಿಯನ್ನು ಕುರಿತು ವಿಸ್ತಾರವಾಗಿ ಮಾತನಾಡಿ, ಕುತೂಹಲಕಾರೀ ಝಲಕ್‌ಗಳನ್ನು ಪ್ರಸ್ತಾಪಿಸಿದರು. ಶಿಕ್ಷಣ ಇಲಾಖೆಯ ಸಹಾಯಕ ಸಮಗ್ರ ಯೋಜನಾಧಿಕಾರಿಗಳಾಗಿರುವ ಶ್ರೀ ಜಿ ವೆಂಕಟಾಚಲ ಅವರು ಒಂದೊಂದೂ ಲಲಿತ ಪ್ರಬಂಧಗಳ ಒಳ ಹೊಕ್ಕು ವಿಶ್ಲೇಷಣೆ ಮಾಡತೊಡಗಿದರು. ಹಾಗಾಗಿ, ಓದುಗರಿಗೆ ಎರಡೂ ಕೃತಿಗಳ ಸಮಗ್ರ ದರ್ಶನವನ್ನೇ ಈ ಇಬ್ಬರು ಮಾಡಿಸಿದರು. ಪದ್ಮಾ ಆನಂದ್ ದಂಪತಿಯನ್ನು ಹಲವಾರು ಅಭಿಮಾನಿಗಳೂ ಸಾಹಿತ್ಯಕ ಸಂಘಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಡ್ಡೀಕೆರೆ ಗೋಪಾಲ್, ಈ ಹಿಂದೆ ಅಧ್ಯಕ್ಷರಾಗಿದ್ದ ಮೈಸೂರು ಚಂದ್ರಶೇಖರ್, ಹೊಯ್ಸಳ ಕನ್ನಡ ಸಂಘದ ರಂಗನಾಥ್ ಮೊದಲಾದವರು ಪ್ರಮುಖರು. ಜೊತೆಗೆ ಪದ್ಮಾ ಮತ್ತು ಆನಂದರ ಬರೆವಣಿಗೆಯ ಓದುಗರೂ ಸಾಹಿತ್ಯ ದಾಸೋಹದ ಸಕ್ರಿಯ ಕಾರ್ಯಕರ್ತರೂ ಬರೆಹಗಾರರೂ ಉತ್ತಮ ಶ್ರೋತೃಗಳಾಗಿ ಕಾರ್ಯಕ್ರಮದ ಕೊನೆಯವರೆಗೂ ಇದ್ದು, ಕಣ್ತುಂಬಿಕೊಂಡರು. ಅವರುಗಳಲ್ಲಿ ಶ್ರೀಮತಿಯರಾದ ಉಷಾನರಸಿಂಹನ್, ಪದ್ಮಿನಿ ಹೆಗಡೆ, ಬಿ ಆರ್ ನಾಗರತ್ನ, ಬಿ ಕೆ ಮೀನಾಕ್ಷಿ, ಲತಾ ಮೋಹನ್, ಸುಧಾ ರಮೇಶ್, ಸುರಹೊನ್ನೆಯ ಬಿ ಹೇಮಮಾಲಾ, ಕವಯಿತ್ರಿ ಕೆ ಜಿ ನಂದಿನಿ, ವಿದ್ವಾಂಸರಾದ ಗಜಾನನ ಈಶ್ವರ ಹೆಗಡೆ, ಬಿ ಪಿ ಅಶ್ವತ್ಥನಾರಾಯಣ, ಆರ್ ಎ ಕುಮಾರ್ ಮೊದಲಾದವರಿದ್ದರು.
ಖ್ಯಾತ ಚುಕ್ಕಿ ಚಿತ್ರ ಕಲಾವಿದರೂ ಸಾಹಿತಿಗಳೂ ಆಗಿರುವ ಶ್ರೀ ಮೋಹನ್ ವರ್ಣೇಕರ್, ಹಿರಿಯ ಲೇಖಕಿ ಶ್ರೀಮತಿ ಕೆರೋಡಿ ಎಂ ಲೋಲಾಕ್ಷಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಾಹಿತ್ಯ ದಾಸೋಹದ ಸಂಸ್ಥಾಪಕರಾದ ಶ್ರೀ ಎಂ ಆರ್ ಆನಂದ ಅವರು ಎಲ್ಲರನ್ನೂ ಸ್ವಾಗತಿಸಿದರು. ಹಿರಿಯ ವಿಜ್ಞಾನ ಲೇಖಕರೂ ವಿದ್ವಾಂಸರೂ ಆದ ಶ್ರೀ ಎಸ್ ರಾಮಪ್ರಸಾದ್ ಅವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಕೃತಿಗಳ ಲೇಖಕಿ ಶ್ರೀಮತಿ ಪದ್ಮಾ ಅವರು ಕೃತಿ ರಚನೆಯ ಹಿಂದಿನ ಆಗುಹೋಗುಗಳನ್ನು ಮೆಲುಕು ಹಾಕಿದರು. ಇವರ ಸಕುಟುಂಬ ಪರಿವಾರದ ಎಲ್ಲರೂ ಆಗಮಿಸಿ, ಕಾರ್ಯಕ್ರಮಕ್ಕೆ ಆಪ್ತತೆಯನ್ನೂ ಆರ್ದ್ರತೆಯನ್ನೂ ತಂದದ್ದು ವಿಶೇಷವಾಗಿತ್ತು. ಸಾಹಿತ್ಯ ದಾಸೋಹದ ಎಲ್ಲ ಸದಸ್ಯರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ತಮ್ಮ ಮನೆಯ ಖಾಸಗೀ ಕಾರ್ಯಕ್ರಮವೇನೋ ಎನ್ನುವ ಹಾಗೆ ನೆರವಿತ್ತು, ಸಹಕರಿಸಿ, ಸಂತಸ ಮತ್ತು ಸಂಭ್ರಮಗಳನ್ನು ದುಪ್ಪಟ್ಟು ಮಾಡಿದರು. ಪತ್ರಕರ್ತರೂ ಸವಿಗನ್ನಡ ಪತ್ರಿಕೆಯ ಸಂಪಾದಕರೂ ಲೇಖಕರೂ ಆಗಿರುವ ಮೈಸೂರು ರಂಗನಾಥ್ ಅವರ ಕಾರ್ಯಕ್ರಮ ನಿರೂಪಣೆ ಮತ್ತು ನಿರ್ವಹಣೆಗಳಿಂದಾಗಿ ಒಟ್ಟೂ ಈವೆಂಟು ಅಚ್ಚುಕಟ್ಟಾಗಿ ನಡೆಯಿತು. ನಡು ನಡುವೆ ಗೀತಗಾಯನ ಕಾರ್ಯಕ್ರಮವೂ ಇದ್ದು ಸಹೃದಯರಿಗೆ ಸಂಗೀತವನ್ನೂ ಉಣಬಡಿಸಲಾಯಿತು. ಕೊನೆಯಲ್ಲಿ ಹೋಳಿಗೆ, ಬಿಸಿಬೇಳೆಬಾತ್, ಸಿಹಿಪೊಂಗಲ್, ಮಸಾಲೆವಡೆ, ಮೊಸರನ್ನಗಳಿಂದ ಸಿಂಗಾರಗೊಂಡ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹೆಸರೇ ಹೇಳುವಂತೆ, ನೆರೆದ ಎಲ್ಲರಿಗೂ ಸಾಹಿತ್ಯದಿಂದ ಹೃದಯವೂ ಶ್ರೀಮಂತವಾಯಿತು; ದಾಸೋಹದಿಂದ ಹೊಟ್ಟೆಯ ಹಸಿವೂ ತಣಿಯಿತು. ತಣಿದೂ ದಣಿದೂ ತೃಪ್ತರಾದ ಸಾಹಿತ್ಯ ಬಂಧುಗಳು ಈ ಕಾರ್ಯಕ್ರಮದಿಂದ ಆತ್ಮೀಯರನ್ನು ಕಂಡು ಮಾತಾಡುವ, ಕುಶಲ ವಿಚಾರಿಸುವ ಅವಕಾಶ ಲಭಿಸಿದ್ದಕ್ಕೆ ಸಾಹಿತ್ಯ ದಾಸೋಹ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಪದ್ಮಾ ಆನಂದ್ ಅವರ ಈ ಎರಡೂ ಕೃತಿಗಳನ್ನು ಕುರಿತು ಮುಂದಿನ ದಿನಗಳಲ್ಲಿ ವಿಶ್ಲೇಷಣೆ ನಡೆಸಿ, ಬರೆಹವನ್ನು ಪ್ರಕಟಿಸುವ ಇರಾದೆ ನನಗಿದೆ. ನೋಡುವಾ.
–ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ಸುರಹೊನ್ನೆಗೆ ಧನ್ಯವಾದಗಳು
ಸಾಹಿತ್ಯ ದಾಸೋಹದ ಬಗ್ಗೆ ಒಂದು ಜಲಕ್ ಹಾಗೇ..ಶ್ರೀ ಮತಿ ಪದ್ಮಾ ಆನಂದ್ ಅವರ ಪುಸ್ತಕ ಬಿಡುಗಡೆಯ ಸಮಾರಂಭ ವನ್ನು..ಕಣ್ಣಿಗೆ ಕಟ್ಟುವಂತೆ… ವಿವರಿಸಿ..ಹಾರೈಸಿರುವ…ನಿಮಗೊಂದು..ಶರಣು ಮಂಜುಸಾರ್
thank you madam
Very nice
thanks for your reply
ನಮ್ಮ ಹೆಮ್ಮೆಯ ಪದ್ಮಾ ಮೇಡಂ ಅವರ ಎರಡು ಸುಂದರ ಕೃತಿಗಳ ಬಿಡುಗಡೆಯ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ಅಷ್ಟೇ ಸುಂದರವಾಗಿ ನಿರೂಪಿಸಿದ ಲೇಖನ ಚೆನ್ನಾಗಿದೆ.
ಧನ್ಯವಾದಗಳು ಮೇಡಂ, ನಿಮ್ಮಭಿಮಾನಕ್ಕೆ.
ಕಾರ್ಯಕ್ರಮದ ಕುರಿತಾಗಿ ಅಂತಃಕರಣಪೂರಿತ ಲೇಖನ ಬರೆದ ಡಾ. ಮಂಜುರಾಜ್ ಸರ್ ಅವರಿಗೂ ಪ್ರಕಟಿಸಿದ ಸಂಪಾದಕಿ ಆತ್ಮೀಯ ಹೇಮಮಾಲಾ ಅವರಿಗೂ ಲೇಖನವನ್ನು ಮೆಚ್ಚಿದ ಆತ್ಮೀರಾದ ನಾಗರತ್ನ ಬಿ. ಆರ್. ಮತ್ತು ನಯನ ಬಜ್ಲಗೂಡು ಅವರಿಗೂ ಹೃನ್ಮನಪೂರ್ವಕ ವಂದನೆಗಳು.