ಬಸವ ಬೆಳಗನ್ನು ಅರಸುತ್ತಾ.. ಪುಟ 4

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಬಸವ ಕಲ್ಯಾಣದಲ್ಲಿ ಪ್ರಖರವಾದ ಸೂರ್ಯನಂತೆ ಅನುಭವ ಮಂಟಪ ಬೆಳಗತೊಡಗಿತ್ತು, ಆದರೆ ನಿಧಾನವಾಗಿ ಕರಿಮೋಡಗಳು ಮುಸುಕತೊಡಗಿದ್ದವು. ಬಸವ ಕಲ್ಯಾಣದಲ್ಲಿ ಕಂಡ ಎರಡು ದೃಶ್ಯಗಳು ಪದೇ ಪದೇ ಕಣ್ಣ ಮುಂದೆ ಬರುತ್ತಿದ್ದವು. ಮಡಿವಾಳ ಮಾಚಿದೇವನು ಆನೆಯೊಂದಿಗೆ ಸೆಣಸುವ ದೃಶ್ಯ. ಈ ದೃಶ್ಯದ ಹಿಂದಿರುವ ಕಥೆ ಕೇಳೋಣ ಬನ್ನಿ. ಮಡಿವಾಳ ಮಾಚಿದೇವನು ಶರಣರ ವಸ್ತ್ರಗಳನ್ನು ಮಾತ್ರ ಮಡಿ ಮಾಡುತ್ತಿರುತ್ತಾನೆ. ಇದನ್ನು ಕಂಡು ಕೆರಳಿದ ಬಿಜ್ಜಳನು ತನ್ನ ಬಟ್ಟೆಗಳನ್ನು ಮಡಿ ಮಾಡಲು ಆದೇಶಿಸಿದಾಗ, ಮಾಚಿದೇವನು, ‘ನಾನು ಭವಿಯ ವಸ್ತ್ರಗಳನ್ನು ಮಡಿ ಮಾಡಲಾರೆ’ ಎಂದು ನಯವಾಗಿ ತಿರಸ್ಕರಿಸುತ್ತಾನೆ. ಆಗ ಬಿಜ್ಜಳನು ಮದವೇರಿದ ಆನೆಯೊಂದನ್ನು ಮಾಚಿದೇವನ ಮೇಲೆ ಆಕ್ರಮಣ ಮಾಡಲು ಬಿಟ್ಟಾಗ, ಮಾಚಿದೇವನು ಆ ಆನೆಯೊಂದಿಗೆ ಸೆಣಸಿ ಯಶಸ್ವಿಯಾಗುವನು.

ಮತ್ತೊಂದು ಹೃದಯವಿದ್ರಾವಕ ದೃಶ್ಯ – ಹರಳಯ್ಯ ಮತ್ತು ಮಧುವರಸ ಹಾಗೂ ಅವರ ಮಕ್ಕಳಾದ ಶೀಲವಂತ ಮತ್ತು ಲಾವಣ್ಯ ಇವರನ್ನು ಆನೆಗಳ ಕಾಲಿಗೆ ಕಟ್ಟಿ ಎಳೆಸುತ್ತಿರುವ ದೃಶ್ಯ. ವಿಪ್ರನಾಗಿದ್ದ ಮಧುವರಸನ ಮಗಳು ಲಾವಣ್ಯವತಿ ಹೊಲೆಯನಾಗಿದ್ದ ಹರಳಯ್ಯನ ಮಗ ಶೀಲವಂತ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಇವರ ವಿವಾಹವನ್ನು ಬಸವಣ್ಣನವರು ಶರಣರ ಸಮ್ಮುಖದಲ್ಲಿ ನೆರವೇರಿಸಿ, ಶರಣರು ಕುಲವನರಸಬಾರದು ಎಂಬ ಭಾಷ್ಯವನ್ನೇ ಬರೆದರು. ಇದರಿಂದ ಆಕ್ರೋಶಗೊಂಡ ಮೇಲು ಜಾತಿಯವರು ಇಂತಹ ವಿಲೋಮ ಪದ್ಧತಿಯ ವಿವಾಹ ಶಾಸ್ತ್ರ ಸಮ್ಮತವಲ್ಲವೆಂದೂ, ವರ್ಣಸಂಕುರದ ಮಹಾಪರಾಧವೆಂದೂ, ಇದನ್ನು ತಡೆಯಬೇಕೆಂದೂ ಬಿಜ್ಜಳನಿಗೆ ದೂರು ನೀಡುವರು. ದೊರೆಯು ಹರಳಯ್ಯ ಮತ್ತು ಮಧುವರಸ ಇವರನ್ನು ಅಪರಾಧಿಗಳೆಂದು ಪರಿಗಣಿಸಿ, ಅವರಿಗೆ ‘ಎಳೆಹೊಟ್ಟೆ’ ಶಿಕ್ಷೆ ವಿಧಿಸಿ, ಅವರ ಕಣ್ಣುಗಳನ್ನು ಕೀಳಿಸಿ, ಆನೆಯ ಕಾಲಿಗೆ ಕಟ್ಟಿ ಎಳೆಸುತ್ತಾನೆ.

ಸಂಪ್ರದಾಯಬದ್ಧ ಜನರಿಗೆ ಬಸವಣ್ಣನವರು ಮಾಡುತ್ತಿದ್ದ ಕ್ಷಿಪ್ರ ಸಾಮಾಜಿಕ ಬದಲಾವಣೆಗಳನ್ನು ಅರಗಿಸಿಕೊಳ್ಳಲಾಗಲಿಲ್ಲ. ಹೊಲೆ ಮಾದಿಗರಿಗೂ ಲಿಂಗದೀಕ್ಷೆ ಮಾಡಿ, ಅವರನ್ನು ಅನುಭವ ಮಂಟಪದಲ್ಲಿ ಜೊತೆಯಲ್ಲಿ ಕೂರಿಸಿಕೊಳ್ಳುವುದು, ದಾಸೋಹ ಕೇಂದ್ರಗಳಲ್ಲಿ ಒಟ್ಟಿಗೇ ಕುಳಿತು ಊಟ ಮಾಡುವುದನ್ನು ಕಂಡಾಗ ಅಸಹನೆಯಿಂದ ಕೆರಳಿ ಕೆಂಡವಾದರು. ಬಿಜ್ಜಳನ ಕಿವಿಯಲ್ಲಿ ಬಸವಣ್ಣನ ವಿರುದ್ಧ ಹಲವಾರು ದೂರುಗಳನ್ನು ಹೇಳಿದರು. ಸಮಾಜದಲ್ಲಿ ಪ್ರಚಲಿತವಾಗಿರುವ ಹಲವಾರು ಕಾನೂನು ಕಟ್ಟಲೆಗಳನ್ನು, ನೀತಿ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಬಸವಣ್ಣ್ಣನಿಗೆ ತಕ್ಷಣ ಕಡಿವಾಣ ಹಾಕದಿದ್ದಲ್ಲಿ ದೊಡ್ಡ ಅನಾಹುತವೇ ಜರುಗುವುದೆಂದು ಕೂಗಾಡಿದರು. ತಮ್ಮ ಮುಂದೆ ನಡು ಬಾಗಿಸಿ, ದೂರ ನಿಂತು ಮಾತಾಡುತ್ತಿದ್ದ ಹೊಲೆಯರು ಇಂದು ತಮಗೆ ಸರಿಸಮವಾಗಿ ನಿಂತು ಮಾತಾಡುವುದನ್ನು ಸೈರಿಸದಾದರು. ಅರಸನ ಖಜಾನೆಯನ್ನೆಲ್ಲಾ ಬರಿದು ಮಾಡಿ ಈ ಸೋಮಾರಿಗಳಾದ ಜಂಗಮರಿಗೆ ಉಣಬಡಿಸುತ್ತಿರುವ ಮುಖ್ಯಮಂತ್ರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯ ಮಾಡಿದರು. ಆಗ ಮುಖ್ಯ ಮಂತ್ರಿಯಾಗಿದ್ದ ಬಸವಣ್ಣನವರು ಅರಸನ ಖಜಾನೆಯ ಲೆಕ್ಕ ಪತ್ರವನ್ನು ಎಲ್ಲರ ಸಮಕ್ಷಮದಲ್ಲಿಟ್ಟು, ಅಲ್ಲಿಂದ ಒಂದು ಪೈಸೆಯನ್ನೂ ಅನುಭವ ಮಂಟಪದ ಕಾರ್ಯಕಲಾಪಗಳಿಗೆ ಬಳಸಿಲ್ಲ ಎಂದು ಸಾಬೀತು ಪಡಿಸುತ್ತಾರೆ. ಬದಲಿಗೆ ಶರಣರ ಸತ್ಯಶುದ್ಧ ಕಾಯಕದಿಂದಲೇ ಅನುಭವ ಮಂಟಪವನ್ನು ನಡೆಸಲಾಗುತ್ತಿದೆ ಎಂದೂ ತುಂಬಿದ ರಾಜಸಭೆಯಲ್ಲಿ ಘೋಷಿಸುವರು. ಕೆಲವರು ಬಸವಣ್ಣನವರು ಅನುಭವ ಮಂಟಪ ಎಂಬ ಸಂಘಟನೆಯನ್ನು ಕಟ್ಟಿ, ದೊರೆಯ ವಿರುದ್ಧವೇ ಸಂಚು ಮಾಡಿ, ರಾಜ ಗದ್ದುಗೆಯನ್ನೇರುವ ಹುನ್ನಾರವನ್ನು ಮಾಡುತ್ತಿದ್ದಾನೆ ಎಂದೂ ರಾಜನ ಕಿವಿಯೂದಿದರು. ಇಂತಹ ಹತ್ತು ಹಲವು ಚಾಡಿಕೋರರ ಮಾತುಗಳನ್ನು ಕೇಳಿ ಬಿಜ್ಜಳನು ಶರಣರ ಮೇಲೆ ಧಾಳಿ ಮಾಡಲು ಸಜ್ಜಾಗುವನು.

ಕಲ್ಯಾಣ ಕ್ರಾಂತಿಯ ಸುಳಿವು ಬಸವಣ್ಣನವರಿಗೆ ಸಿಕ್ಕಾಗ, ಅನುಭವ ಮಂಟಪದಲ್ಲಿ ಶರಣರ ಒಂದು ತುರ್ತು ಸಭೆಯನ್ನು ಕರೆದು, ಎಲ್ಲರೂ ಜ್ಞಾನ ದೀವಿಗೆಗಳಂತಿರುವ ವಚನ ಸಂಪುಟಗಳನ್ನು ಕಾಪಾಡಲು ಅಲ್ಲಿಂದ ತಕ್ಷಣವೇ ಹೊರಡಬೇಕೆಂದು ಕರೆ ನೀಡುವರು. ನಿರಪರಾಧಿಗಳಾದ ಶರಣರು ತಮ್ಮಿಂದ ಅಪಾಯಕ್ಕೆ ಒಳಗಾಗಬಾರದೆಂಬ ಕಾಳಜಿಯಿಂದ ಬಸವಣ್ಣನವರು ತಮ್ಮ ಪದವಿಗೆ ರಾಜೀನಾಮೆ ನೀಡಿ, ಬಾಲ್ಯದಲ್ಲಿ ತಮಗೆ ವಿದ್ಯೆ ನೀಡಿದ್ದ ಕೂಡಲಸಂಗಮಕ್ಕೆ ತೆರಳುವರು. ಹರಳಯ್ಯ ಮತ್ತು ಮಧುವರಸರ ಕಗ್ಗೊಲೆಯನ್ನು ಕಂಡ ಶರಣರು ಕೆರಳುತ್ತಾರೆ. ಆದರೆ ನಿರಾಯುಧರಾಗಿದ್ದ ಶರಣರು ಸೈನಿಕರ ಸಶಸ್ತ್ರಪಡೆಯನ್ನು ಎದುರಿಸಲು ಹೇಗೆ ತಾನೆ ಸಾಧ್ಯ? ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವನ್ನು ನಿರ್ನಾಮ ಮಾಡಲು ಶರಣರ ಕಗ್ಗೊಲೆ ಮಾಡಲಾಯಿತು. ಈ ಕಲ್ಯಾಣ ಕ್ರಾಂತಿಯಲ್ಲಿ ಕೆಲವರು ಷಡ್ಯಂತ್ರವೊಂದನ್ನು ರಚಿಸಿ ಬಿಜ್ಜಳನ ಕೊಲೆಯನ್ನು ಮಾಡಿ, ಅಂತಹ ದುಷ್ಕೃತ್ಯವನ್ನು ಶರಣರೇ ಮಾಡಿರುವುರೆಂಬ ಆರೋಪವನ್ನೂ ಹೊರಿಸುತ್ತಾರೆ. ಮಡಿವಾಳ ಮಾಚಿದೇವರು, ಚನ್ನಬಸವಣ್ಣನವರು ಮುಂತಾದವರು ಬಿಜ್ಜಳನ ಸೈನಿಕರೊಂದಿಗೆ ಹೋರಾಡುತ್ತಾ ಶರಣರನ್ನು ಕಾಪಾಡಲು ಯತ್ನಿಸುತ್ತಾರೆ. ಶರಣೆ ಗಂಗಾಬಿಕೆ ಕುದುರೆಯನ್ನೇರಿ ಕತ್ತಿ ಹಿಡಿದು ಬಿಜ್ಜಳನ ಸೈನಿಕರೊಂದಿಗೆ ಹೋರಾಡುತ್ತಾ, ಹಲವು ಶರಣರನ್ನು ರಕ್ಷಿಸುತ್ತಾ ಕೊನೆಯಲ್ಲಿ ತಾನೇ ಸೈನಿಕರಿಗೆ ಬಲಿಯಾದಳು. ಹೀಗೆ ಕಲ್ಯಾಣ ಕ್ರಾಂತಿಯಲ್ಲಿ ಶರಣರು ದಿಕ್ಕಾಪಾಲಾಗಿ ಚದುರಿಹೋದರು. ಕೆಲವರು ಅಕ್ಕ ನಾಗಮ್ಮನೊಂದಿಗೆ ವಚನ ಸಂಪುಟಗಳನ್ನು ಹೊತ್ತು ಉಳವಿಗೆ ತೆರಳಿದರು. ಬಸವಣ್ಣನವರು ಕೃಷ್ಣ ಮತ್ತು ಮಲಪ್ರಭಾನದಿಗಳ ಸಂಗಮವಾದ ಕೂಡಲಸಂಗಮದಲ್ಲಿ ಬಯಲಾದರು. ಜಗತ್ತಿಗೇ ಬೆಳಕನ್ನು ನೀಡಿದ ಜಗಜ್ಯೋತಿ ಬಸವೇಶ್ವರರು ಧೃವತಾರೆಯಂತೆ ಆಗಸದಲ್ಲಿ ಮಿನುಗುತ್ತಿರುವರು.

ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲಸಂಗಮ ಶ್ರೀ ಕ್ಷೇತ್ರವು ಬಸವಣ್ಣನವರ ವಿದ್ಯಾ ಭೂಮಿ, ತಪೋಭೂಮಿ ಹಾಗೂ ಐಕ್ಯವಾದ ಸ್ಥಳವೂ ಆಗಿದೆ. ಹದಿಮೂರನೆಯ ಶತಮಾನದಲ್ಲಿ ಚಾಲುಕ್ಯರ ಆಳ್ವಿಕೆಯಲ್ಲಿ ಸುಂದರವಾದ ಸಂಗಮನಾಥನ ದೇಗುಲವನ್ನು ಕಟ್ಟಲಾಗಿದೆ. ಹಿಂದೆ ಕಪ್ಪಡಿ ಸಂಗಮ ಎಂದು ಕರೆಸಿಕೊಳ್ಳುತ್ತಿದ್ದ ಕೂಡಲಸಂಗಮವು, ಲಿಂಗಾಯಿತರ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಕೃಷ್ಣ ಹಾಗೂ ಮಲಪ್ರಭಾ ನದಿಗಳ ಸಂಗಮವೂ ಆಗಿದ್ದು, ಬಸವಣ್ಣನವರು ಐಕ್ಯವಾದ ಸ್ಥಳದಲ್ಲಿ ಒಂದು ಮಂಟಪವಿದ್ದು, ಅಲ್ಲಿ ಒಂದು ಲಿಂಗ ಹಾಗೂ ಬಸವಣ್ಣನ ಪ್ರತಿಷ್ಠಾಪನೆ ಮಾಡಲಾಗಿದೆ. ಆಲಮಟ್ಟಿ ಜಲಾಶಯದ ನಿರ್ಮಾಣವಾದ ನಂತರ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತಿದ್ದ ಈ ಸ್ಥಳವನ್ನು ಸಂರಕ್ಷಿಸಲಾಗಿದೆ. ನದಿಯ ನೀರಿನ ಮೇಲೆ ನಿರ್ಮಿಸಲಾಗಿರುವ ಮೇಲು ಸೇತುವೆ ನೂರಾ‌ಐವತ್ತು ಅಡಿ ಎತ್ತರದಲ್ಲಿದ್ದು ಎಂಭತ್ತು ಅಡಿ ಆಳದಲ್ಲಿರುವ ಬಸವಣ್ಣನವರ ಸಮಾಧಿ ಸ್ಥಳಕ್ಕೆ ಭಾವಿಯಾಕಾರದ ಹಾದಿಯನ್ನು ಮಾಡಿ ಕೆಳಗಿಳಿಯಲು ಮೆಟ್ಟಿಲುಗಳನ್ನು ಕಟ್ಟಲಾಗಿದೆ. ಸಂಗಮನಾಥನ ದೇಗುಲದ ಪಕ್ಕದಲ್ಲಿ ಬಸವ ಮಹಾಮನೆ, ಪೂಜಾವನ, ಸಭಾಭವನ ಹಾಗೂ ಬಸವಣ್ಣನವರ ಕಾಲದ ಐತಿಹಾಸಿಕ ಹಾಗೂ ಧಾರ್ಮಿಕ ವಿವರಗಳನ್ನು ತಿಳಿಸುವ ಸಂಗ್ರಹಾಲಯವೂ ಇವೆ.

ಬಸನಬೆಳಗನ್ನು ಅರಸುತ್ತಾ ಬಂದವಳು – ಕಲ್ಯಾಣ ಕ್ರಾಂತಿ ಯಾವುದು ಎಂಬ ಜಿಜ್ಞಾಸೆಯಲ್ಲಿ ಮುಳುಗಿದ್ದೆ – ಶೋಷಿತರನ್ನು, ದಮನಿತರನ್ನು ತಲೆ ಎತ್ತಿ ಬಾಳುವಂತೆ ಮಾಡಿದ ಸಾಮಾಜಿಕ ಕ್ರಾಂತಿಯೇ, ಸಮಾಜ ಕಟ್ಟುವಲ್ಲಿ ನೆರವಾಗುವ ಎಲ್ಲರ ದುಡಿಮೆಯೂ ಅಷ್ಟೇ ಮುಖ್ಯ ಎಂಬ ಆರ್ಥಿಕ ಕ್ರಾಂತಿಯೇ, ಪುರೋಹಿತಶಾಹಿಯ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಇಷ್ಟಲಿಂಗದ ಸಿದ್ಧಾಂತವನ್ನು ಪ್ರಚುರ ಪಡಿಸಿದ ಆಧ್ಯಾತ್ಮಿಕ ಕ್ರಾಂತಿಯೇ, ನೈತಿಕತೆಯನ್ನು ಆಧ್ಯಾತ್ಮಿಕತೆಯೊಂದಿಗೆ ಬೆಸೆದ ಧಾರ್ಮಿಕ ಕ್ರಾಂತಿಯೇ ಅಥವಾ ಶರಣರ ಮಾರಣಹೋಮ ಮಾಡಿದ ಬಿಜ್ಜಳನ ಸೈನಿಕರು ನಡೆಸಿದ್ದು ಕಲ್ಯಾಣ ಕ್ರಾಂತಿಯೇ?

ಹೊತ್ತು ಮುಳುಗಿದರೇನು, ಕತ್ತಲಾದರೇನು ಬಸವಣ್ಣನವರು ಹಚ್ಚಿಟ್ಟ ಹಣತೆಗಳು ಬೆಳಗುತ್ತಲೇ ಇವೆ. ಸಕಲ ಜೀವಾತ್ಮರಿಗೆ ಲೇಸ ಬಯಸುವ ಸಂಸ್ಕೃತಿಯೇ ಅನುಭವ ಮಂಟಪದ ಸಂಸ್ಕೃತಿಯಾಗಿದೆ. ಜಾತಿ, ಮತ, ವರ್ಗ, ವರ್ಣ, ಲಿಂಗ ಯಾವುದೇ ಬೇಧಭಾವವಿಲ್ಲದೆ ಎಲ್ಲರನ್ನೂ ಒಪ್ಪಿ ಅಪ್ಪಿಕೊಳ್ಳುವ ವಿಶೇಷ ಸಂಸ್ಕೃತಿಯಿದು. ಶಿಕ್ಷಣದ ಜೊತೆ ಸಂಸ್ಕಾರ, ಆಧುನಿಕತೆಯ ಜೊತೆ ಆಧ್ಯಾತ್ಮ, ಭಾಷೆಯ ಜೊತೆ ಭಾವನೆಗಳು, ಕಾಯಕದ ಜೊತೆ ದಾಸೋಹ, ಧರ್ಮದ ಜೊತೆ ಮಾನವೀಯತೆ ಹಾಗೂ ರಾಷ್ಟ್ರೀಯತೆ ಜೊತೆ ವಿಶ್ವ ಬಂಧುತ್ವವನ್ನು ಬೋಧಿಸುವುದೇ ಅನುಭವ ಮಂಟಪದ ಜೀವಾಳ (ವಿಶ್ವ ಬಸವ ಧರ್ಮ ಟ್ರಸ್ಟ್, ಬಸವ ಕಲ್ಯಾಣ)

ಭಕ್ತಿ ಬಂಢಾರಿ ಬಸವಣ್ಣನವರು ತಮ್ಮ ಸುತ್ತಮುತ್ತಲಿನ ಸಮಾಜವನ್ನು ಉದ್ದರಿಸಲು ತೋರಿದ ತನ್ಮಯತೆ, ಪ್ರೀತಿ ಹಾಗೂ ಪರಿಶ್ರಮವನ್ನು ನೆನೆಯುತ್ತಾ ಮುಂದೆ ಸಾಗಿದೆವು. ಬುದ್ಧನ ವೈಚಾರಿಕತೆ, ಮಾಹಾವೀರನ ಸಿದ್ಧಾಂತಗಳಾದ ದಯೆ, ಅಹಿಂಸೆ, ಏಸುವಿನ ತತ್ವಗಳಾದ ಕ್ಷಮೆ, ಶಾಂತಿ, ಪೈಗಂಬರರ ಧೈರ್‍ಯ, ಸಾಹಸ ಬಸವಣ್ಣನವರಲ್ಲಿ ಏಕತ್ರಗೊಂಡಿವೆ. (ಅರಿವು ಆಚಾರ – ಎಂ ಮಹಾದೇವಪ್ಪ) ಬಸವಣ್ಣನವರು ಅಕ್ಷರ ಸಂಸ್ಕೃತಿಯ ಮೂಲಕ ಜ್ಞಾನ ಜ್ಯೋತಿಯನ್ನು ಬೆಳಗಿಸಿದ ಧೀಮಂತರು. ತಮ್ಮ ಹೊಸ ಚಿಂತನೆಗಳ ಮೂಲಕ ಸಮಾಜಕ್ಕೆ ವೈಚಾರಿಕ ಕಿಡಿ ಹೊತ್ತಿಸಿದ ಮಹಾಮಹಿಮರು. ಬುದ್ಧನ ನಂತರ ಜನಿಸಿದ ಶ್ರೇಷ್ಠ ದಾರ್ಶನಿಕರು.

ಸಿದ್ಧಯ್ಯ ಪುರಾಣಿಕರು ರಚಿಸಿದ ಕವನ ‘ಜಗವೇ ಕೂಡಲಸಂಗಮ‘ದಲ್ಲಿ ಬರುವ ಸಾಲುಗಳು ನೆನಪಾದವು ”ಪ್ರಕೃತಿಯೇ ಗುರು ಗಗನ ಲಿಂಗವು / ಜಗವೆ ಕೂಡಲಸಂಗಮ / ಹುಡಿಯೇ ಭಸ್ಮವು, ಹುಲ್ಲೆ ಪತ್ರಿಯು / ಜಡವಿದಲ್ಲವು ಜಂಗಮ / ಕುಡಿವ ನೀರೆ ತೀರ್ಥ ತಿನ್ನುವ / ರೊಟ್ಟಿ ಶಿವನ ಪ್ರಸಾದವು / ಶ್ರಮದ ಬೆವರೇ ಸ್ನಾನ ದುಡಿತದ ಹಾಡೆ ಮಂತ್ರ ನಿನಾದವು

(ಮುಗಿಯಿತು)

ಈ ಬರಹದ ಹಿಂದಿನ ಪುಟ ಇಲ್ಲಿದೆ :  https://www.surahonne.com/?p=39891

-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

5 Responses

  1. ಬಸವಣ್ಣ ನವರ …ಚಿಂತನೆ ಅಂದಿಗಿಂತ ಇಂದು..ಬೇಕಾಗಿದೆ …ಅಂತಹ.. ಸಮಾಜ ಸುಧಾರಕ.. ಮತ್ತೆ ಹುಟ್ಟಿ ಬರಲೆಂದು ಹಾರೈಸುತ್ತೇನೆ..ಉತ್ತಮ ಲೇಖನ ಮೇಡಂ… ಧನ್ಯವಾದಗಳು.

  2. ನಯನ ಬಜಕೂಡ್ಲು says:

    ಬಹಳ ಚೆನ್ನಾಗಿತ್ತು ಬಸವ ಬೆಳಗನ್ನು ಅರಸುತ್ತ.

  3. Padmini Hegde says:

    ಕಲ್ಯಾಣ ಕ್ರಾಂತಿಯ ಕುರಿತ ಜಿಜ್ಞಾಸೆಯೊಂದಿಗೆ ಬಸವಣ್ಣನವರ ಮಹಿಮೆಯ ವಿಶ್ಲೇಷಣೆ ಚೆನ್ನಾಗಿದೆ.

  4. ಶಂಕರಿ ಶರ್ಮ says:

    ಬಿಜ್ಜಳ ದೊರೆಯು ಸಾಧು ಶರಣರ ಮೇಲೆ ಎಸಗಿದ ಮನಕಲಕುವ ಕ್ರೂರ ಅನಾಚಾರ ಕೃತ್ಯವು ನಿಜಕ್ಕೂ ತಲೆ ತಗ್ಗಿಸುವಂತೆ ಮಾಡುತ್ತದೆ. “ಬಸವ ಬೆಳಕನ್ನು ಅರಸುತ್ತಾ…” ಲೇಖನಮಾಲೆಯು ಅತ್ಯಪೂರ್ವ ಅನುಭವವನ್ನು ನೀಡಿತು. ಧನ್ಯವಾದಗಳು, ಗಾಯತ್ರಿ ಮೇಡಂ.

  5. Padma Anand says:

    ಲೇಖನ ಮಾಲಿಕೆ ಬಹಳ ಚೆನ್ನಾಗಿ ಮೂಡಿಬಂತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: