ನೋಡ ಬನ್ನಿ ಕರಾವಳಿಯ
ಇತ್ತೀಚೆಗೆ ನಾವೊಂದು ಕಿರು ಪ್ರವಾಸಕೈಗೊಂಡಿದ್ದೆವು. ಮಂಗಳೂರಿನಿಂದ ಉಡುಪಿ ಕುಂದಾಪುರ ಮಾರ್ಗವಾಗಿ ಮುರುಡೇಶ್ವರಕ್ಕೆ ಹೋಗಿ, ಮರುದಿನ ಹೊನ್ನಾವರ ಮಾರ್ಗವಾಗಿ ಪಯಣಿಸಿ ಮರವಂತೆ ಕಡೆಯಿಂದ ವಾಪಸ್‌ಆದೆವು. ಮಂಗಳೂರಿನಿಂದ ಮುರುಡೇಶ್ವರಕ್ಕೆ ಕಾರಿನಲ್ಲಿ ನಾಲ್ಕು ಗಂಟೆ. ದಾರಿಯಲ್ಲಿ ಕುಂಭಾಶಿಯ ಆನೆಗುಡ್ಡೆ ಗಣಪತಿ, ಕೊಲ್ಲೂರಿನ ಮೂಕಾಂಬಿಕೆಯ ದರ್ಶನ ಮಾಡಿದೆವು. ಆನೆಗುಡ್ಡೆ ಗಣಪತಿ ಕ್ಷೇತ್ರವು ಅಚ್ಚುಕಟ್ಟಾದ ಪರಿಸರದಲ್ಲಿದ್ದು ಅಲ್ಲಿನ ಹೂವಿನ ಅಂಗಡಿಗಳಲ್ಲಿ ಕರವೀರ ಎಲೆಗಳ ಹಾರ ನೋಡಿ ಅಚ್ಚರಿಯಾಯಿತು. ಅಯ್ಯಪ್ಪ ಭಕ್ತರು, ಪ್ರವಾಸಿಗಳು..ಹೀಗೆ ಇದೊಂದು ಪುಣ್ಯಕ್ಷೇತ್ರ. ಕೊಲ್ಲೂರಿನ ಮೂಕಾಂಬಿಕಾ ಕ್ಷೇತ್ರವಂತೂ ಆಸ್ತಿಕರು ಕಡ್ಡಾಯವಾಗಿ ಸಂದರ್ಶಿಸುವ ಸ್ಥಳ. ಕುತೂಹಲಕಾರಿಯಾಗಿ ಅಲ್ಲಿ ತಮಿಳು,ಮಲಯಾಳಿ ಭಾಷಿಕರೇ ಜಾಸ್ತಿ. ಸನಿಹದ ಅಂಗಡಿಗಳಲ್ಲಿ ಕಥಕ್ಕಳಿ ಮುಖವಾಡ, ಡೋಲು ಮೊದಲುಗೊಂಡು ಅನೇಕ ಕರಕುಶಲವಸ್ತುಗಳು ದೊರೆಯುತ್ತವೆ. ಮಧ್ಯಾಹ್ನದ ಭೋಜನ ಪ್ರಸಾದವಂತೂ ತನ್ನ ಶುಚಿರುಚಿಯಿಂದ ಧನ್ಯತೆಯ ಭಾವ ಸ್ಫುರಿಸುತ್ತದೆ. ಈ ದೇವಾಲಯದ ವಿಶಿಷ್ಟ ಸೇವೆಗಳು ( ವಡೆ ಪ್ರಸಾದ, ತುಪ್ಪ ದೀಪ ಹಚ್ಚಿ ಕೈಯಲ್ಲಿ ಹಿಡಿಯುವುದು).. ಅಲ್ಲದೆಅಲ್ಲಿ ಬರುವ ಅಚ್ಚ ಮಲಯಾಳಿಗಳ ಕ್ರೀಂ ಕಲರ್ ಸೀರೆ, ಎರೆದುಕೊಂಡ ಕೂದಲು, ಗಂಧದ ಅಡ್ಡ ನಾಮ, ತಮಿಳರ ಹಳದಿ ಬಣ್ಣದ ಸೀರೆ .. ಹೀಗೆಲ್ಲ ಅದೊಂದು ಚಿತ್ರಕ ವಾತಾವರಣವೂ ಹೌದು. ಅಲ್ಲದೆ ಅಲ್ಲಿನ ದೇವಾಲಯ ಕೂಡ ಕೇರಳದ ಶಿಲ್ಪ ಶೈಲಿಯನ್ನೇ ನೆನಪಿಸುವಂತಿದೆ.
ಕೊಲ್ಲೂರಿಂದ ಮುರುಡೇಶ್ವರಕ್ಕೆ ಹೆಚ್ಚುಕಡಿಮೆ ಎರಡು ಗಂಟೆ(ಕಾರಿನಲ್ಲಿ) . ಮಂಗಳೂರಿನಿಂದ ನಾಲ್ಕು ಗಂಟೆ ದೂರ ಇರುವ ತಾಣ. ಕಾರು, ಬಸ್ಸು ಹೀಗೆ ಸಂಚಾರ ಸೌಲಭ್ಯ ಇದೆ. ಉಳಿದುಕೊಳ್ಳಲು ಉತ್ತಮ ಲಾಡ್ಜಿಂಗ್ ವ್ಯವಸ್ಥೆ ಕೂಡಾ . ಮುರುಡೇಶ್ವರದಲ್ಲಿ ನಮ್ಮನ್ನು ಬಹುವಾಗಿ ಆಕರ್ಷಿಸುವುದು ಅಲಿನ ಎತ್ತರವಾದ ಗೋಪುರ ಹಾಗೂ ಬೃಹತ್ತಾದ, ಭಕ್ತಿ ಭಾವ ಸ್ಫುರಿಸುವ ಶಿವನ ಮೂರ್ತಿ. (75 ಮೀಟರ್ ಎತ್ತರದ ಗೋಪುರ ಹಾಗೂ 37 ಮೀಟರ್‌ಎತ್ತರದ ಶಿವನ ಮೂರ್ತಿ) ಗೋಪುರದ ಒಳಗೆ ಲಿಫ಼್ಟ್ ಮುಖಾಂತರ ಹೋಗಿ ಸಮುದ್ರದ ‘ವ್ಯೂ ‘ ಕ್ಲಿಕ್ಕಿಸಬಹುದು. ಇನ್ನುಳಿದಂತೆ ಶಿವನ ಮೂರ್ತಿಯ ಸನಿಹದ ಸರ್ಪಗಳ ಪ್ರತಿಕೃತಿಗಳು, ಭೂ ಕೈಲಾಸ ಎಂಬ ಗುಹೆ, ಅಲ್ಲಿನ ಪುರಾಣ ಪಾತ್ರಗಳ ಪ್ರತಿಕೃತಿಗಳು.. ಹೀಗೆ ಆಸ್ತಿಕರು ಕಣ್ತುಂಬಿಕೊಳ್ಳುತ್ತಾರೆ.
ಸುಂದರವಾದ ಪಾರ್ಕ್, ಆಳ ಕಡಲಿನ, ಆದರೆರಭಸ ಹೆಚ್ಚಿರದ ಶಾಂತ ಅಲೆಗಳು.. (ಮಂಗಳೂರಿಗೆ ಹೋಲಿಸಿದಲ್ಲಿ ಇದು ಶಾಂತಕಡಲು ಎನ್ನಬಹುದು). ಕಡಲಿನಲ್ಲಿ ‘ಸೀ ವಾಕ್’ (ಫ಼ೈಬರ್ ನಿಂದ ತಯಾರಿಸಿದ ಚಪ್ಪಡಿಗಳ ಮೇಲೆ ನಡೆಯುವುದು) ಸಾಹಸ, ಭಯ, ಕಡಲಲೆಗಳ ಅಬ್ಬರದೆದುರು ಮಾನವರು ಎಷ್ಟು ಕ್ಷುಲ್ಲಕ ಎಂಬ ಅರಿವು.. ಹೀಗೆ ಹಲವಾರು ಭಾವಗಳನ್ನು ಮೂಡಿಸುತ್ತದೆ. ಇನ್ನೂ ಧೈರ್ಯವಂತರು ಸನಿಹದಲ್ಲಿರುವ ‘ನೇತ್ರಾಣಿ’ದೀಪಕ್ಕೆ ಹೋಗಿ ಸ್ಕ್ಯೂಬಾಡೈವಿಂಗ್ ಮಾಡಬಹುದು. ಸಣ್ಣದಾಗಿ ಭಯ ಇರುವವರು ನೆಮ್ಮದಿಯಾಗಿ ಸ್ಪೀಡ್ ಬೋಟಿನಲ್ಲೋ , ಶಿಪ್ ನಲ್ಲಿಯೋ ತಮ್ಮ ಸಾಹಸದ ತವಕವನ್ನು ತಣಿಸಿಕೊಳ್ಳಬಹುದು .
ಇವಿಷ್ಟಲ್ಲದೆ ಮುರುಡೇಶ್ವರದಲ್ಲಿ ಹಲವಾರು ಚಿಪ್ಪಿನಿಂದ ತಯಾರಿಸಿದ ವಸ್ತುಗಳು ಲಭ್ಯ. ನಮ್ಮ ಮನೆಗಳಿಗೆ ಬೇಕಾದ ಅಲಂಕಾರಿಕ ವಸ್ತುಗಳು, ಕನ್ನಡಿ, ಪೆನ್ ಸ್ಟಾಂಡ್ ಮೊದಲುಗೊಂಡು ಶಂಖ, ಕೀ ಚೈನ್ ಗಳು, ಕವಡೆ ಸರ,.. ಹೀಗೆ ಹತ್ತು ಹಲವು ಸಾಮಗ್ರಿಗಳು, ಬೊಂಬೆಗಳು ಸಿಗುತ್ತವೆ. ಸಸ್ಯಾಹಾರಿ, ಮಾಂಸಾಹಾರಿ ಎರಡೂ ಹೋಟೆಲ್ಲುಗಳೂ ಸಾಕಷ್ಟಿವೆ.
ಎಲ್ಲಕ್ಕಿಂತ ಹೆಚ್ಚಾಗಿ ಮುರುಡೇಶ್ವರದ ಪರಿಸರದ ಬೀಚ್ ತಕ್ಕಮಟ್ಟಿಗೆ ಸ್ವಚ್ಚವಾಗಿದ್ದು, ಪ್ರವಾಸಿಗರು ಶಾಂತವಾಗಿ, ಹೆಚ್ಚಿನ ಗೌಜು ಗದ್ದಲಗಳಿಲ್ಲದೆ ಇದ್ದುದು ಸಮಾಧಾನ ತಂದಿತು( ಬಹುಶ: ವೀಕೆಂಡ್ ಗಳಲ್ಲಿ ಬೇರೆ ರೀತಿ ಇರಬಹುದೇನೋ). ಈ ಎಲ್ಲ ದೇಗುಲಗಳಲ್ಲಿನ ಬೆಳಗುವ ದೀಪಗಳು ಮನಸ್ಸಿಗೆ ಒಂದು ರೀತಿಯ ಶಾಂತಿ ಸಮಾಧಾನ ಕೊಡುವುದಂತೂ ಸತ್ಯ. ಇವಲ್ಲದೆ ಅತ್ಯಂತ ಸುಂದರ ಅನುಭೂತಿ ಕೊಡುವ ತಾಣ ಎಂದರೆ ಹೊನ್ನಾವರದ ಶರಾವತಿ ಹಿನ್ನೀರಿನ ಬೋಟ್ ವಿಹಾರ ( ಅಳಿವೆ ಅಂತಾರಲ್ಲ ಆದು). ಕಾಶ್ಮಿರದ ದಾಲ್ ಲೇಕ್ ಅನ್ನು ನೆನಪಿಸುವಂತೆ ಅಲಂಕೃತವಾದ ಬೋಟ್ ಗಳಲ್ಲಿ ಹೆಚ್ಚು ಕಡಿಮೆ ಒಂದು ಗಂಟೆ ವಿಹಾರಕ್ಕೆ ಸಮಯವಿದೆ. ನಮ್ಮ ಅಜ್ಜನ ಕಾಲದ ಸೀಮೆ ಎಣ್ಣೆ ಸುರಿದು ಸ್ಟಾರ್ಟ್ ಮಾಡುವ ಪಂಪು ಇಂಜಿನ್, ಹಳ್ಳಿ ಗಾಡಿನ ಮುಗ್ಧತೆಯೊಂದಿಗೆ ವಿವಿಧ ಭಂಗಿಗಳಲ್ಲಿ ನಮ್ಮ ಪಟ ತೆಗೆದುಕೊಡುವ ಬೋಟು ಚಾಲಕ, (ಅಲ್ಲೊಂದು ಟೈಟಾನಿಕ್‌ರೀತಿ ಪಟ ತೆಗೆಯುವ ಪಾಯಿಂಟ್ ಕೂಡ ಇದೆ) . ಅಲ್ಲಲ್ಲಿ ಕಂಡು ಬರುವ ತರಹೇವಾರಿ ನೀರು ಹಕ್ಕಿಗಳು, ವಿರಳವಾದ ಬೋಟುಗಳು, ಮೌನವಾದ ವಾತಾವರಣದಲ್ಲಿ ನೀರಿನ ಕಲರವ.. ಹೀಗೆ ಇದೊಂದು ಪ್ರವಾಸಿಗರಿಂದ ಹೆಚ್ಚು ಕಲುಷಿತ ಆಗದ ತಾಣ. ಸಮುದ್ರದ ಹತ್ತಿರವೇ ಆದ ಕಾರಣ ನೀರಿಗೆ ಬರವಿಲ್ಲ. ಭರತ ಇಳಿತಕ್ಕನುಗುಣವಾಗಿ ನೀರಿನ ಆಳದ ಏರಿಳಿತ ಇರುತ್ತದೆ. ಮನಸ್ಸಿಗೆ ತುಂಬ ಮುದಕೊಡುವ ತಾಣ ಇದು. ಅಲ್ಲದೆ ಹೊನ್ನಾವರದ ಇಕೋ ಬೀಚ್,ಪಾರ್ಕ್, ಮ್ಯಾಂಗ್ರೋವ್ ವನ.. ಹೀಗೆ ಆಕರ್ಷಣೆಗಳು. ಮ್ಯಾಂಗ್ರೋವ್ ಫ಼ಾರೆಸ್ಟ್ ಅಂದರೆ ಕಾಂಡ್ಲ ವನಗಳು. ಈ ಗಿಡಗಳು ಉಪ್ಪುನೀರಿನಲ್ಲಿ ಕೂಡ ಬೆಳೆಯುವ ಶಕ್ತಿ ಹೊಂದಿದ್ದು ಜೈವಿಕ ಚಕ್ರಕ್ಕೆ ಮಹತ್ತರ ಕೊಡುಗೆ ನೀಡುತ್ತವೆ. ಇವನ್ನು ‘ಮ್ಯಾಂಗ್ರೂವ್ ವಾಕ್” ಅಂದರೆ ಮರದ ಚಪ್ಪಡಿಗಳನ್ನು ಸೇರಿಸಿ ನಿರ್ಮಿಸಿದ ಸೇತುವೆ ಮೂಲಕ ವೀಕ್ಷಿಸಬಹುದು. ಈ ಕಾಂಡ್ಲ ವನಗಳು ಒಂದು ರೀತಿಯ ಪ್ರಾಕೃತಿಕ ವಿಸ್ಮಯ.ಪರಿಸರ ಸಂರಕ್ಷಣೆಗೆ ಇವೆಲ್ಲದರ ಅರಿವು ಅವಶ್ಯ.
ಹೊನ್ನಾವರದ ಸಮೀಪವೇ ಇರುವುದು ಇಡಗುಂಜಿಯ ಮಹಾಗಣಪತಿ ದೇವಸ್ಥಾನ. ಬಹಳ ಪ್ರಸಿದ್ಧ, ಕಾರಣಿಕ ಉಳ್ಳ ದೇವಾಲಯದಾಗಿದ್ದು ,ಜಾತ್ರೆಯ ಸಮಯವೂ ಆಗಿದ್ದ ಕಾರಣ ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಇನ್ನು ಉಡುಪಿ, ಕುಂದಾಪುರ, ಕಮಲಶಿಲೆ, ಮಂದರ್ತಿ, ಬಪ್ಪನಾಡು, ಪೊಳಲಿ, ಗುರುಪುರ.. ಹೀಗೆ ಕರಾವಳಿಯಲ್ಲಿ ಹತ್ತು ಹಲವು ದೇವಾಲಯಗಳಿವೆ. ಮಲ್ಪೆ, ಕಾಪು, ಸುರತ್ಕಲ್, ಪಡುಬಿದಿರೆ, ಪಣಂಬೂರಿನ ತಣ್ಣೀರುಬಾವಿ ಬೀಚ್ ಹೀಗೆ ಮಂಗಳೂರು ಸನಿಹವೇ ಹಲವಾರು ಬೀಚ್ ಗಳಿವೆ. ಇವಲ್ಲದೆ ಪಿಲಿಕುಳದ ನಿಸರ್ಗಧಾಮ, ಶರವು ದೇವಾಲಯ ಮೊದಲುಗೊಂಡು ಮಂಗಳಾ ದೇವಿ, ಕದ್ರಿ, ಕುದ್ರೋಳಿ.. ಹೀಗೆ ಮಂಗಳುರು ಸಿಟಿಯಲ್ಲೇ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ . ಹೀಗಾಗಿಯೇ ಈ ಬೇಸಿಗೆ ರಜೆಯಲ್ಲಿ ”ನೋಡ ಬನ್ನಿ ಕರಾವಳಿಯನು, ಕಡಲ ಕಿನಾರೆಯ ಸೊಬಗನು”.
-ಜಯಶ್ರೀ ಬಿ ಕದ್ರಿ, ಮಂಗಳೂರು
ಕರಾವಳಿಯ ಕಡಲ ಕಿನಾರೆ ಪರಿಚಯಾತ್ಮಕ ಲೇಖನ ಚೆನ್ನಾಗಿ ಮೂಡಿಬಂದಿದೆ… ತಾವು ಪ್ರವಾಸ ಹೋಗಿ ಅಲ್ಲಿನ ಸೊಬಗನ್ನು ಅನುಭವಿಸಿದ್ದನ್ನು ನಮಗೂ ಉಣಬಡಿಸಿದ್ದು..ಸಂತಸ ತಂದಿತು ಧನ್ಯವಾದಗಳು..ಜಯಶ್ರೀ ಮೇಡಂ
ಲೇಖನ, ಕಡಲ ಕಿನಾರೆಯ ಸೊಬಗಿನ ಕರಾವಳಿಯನ್ನು ಮತ್ತೊಮ್ಮೆ ನೋಡಲು ಈಗಿಂದೀಗಲೇ ಹೊರಡು ಬಿಡೋಣ ಎನ್ನುವಷ್ಟು ಮುದ ನೀಡುತ್ತಿದೆ.
Beautiful
ಪ್ರವಾಸದ ವಿವರಗಳು ಆಕರ್ಷಕವಾಗಿವೆ
ಹಲವಾರು ಬಾರಿ ನೋಡಿದ ನಮ್ಮೂರಿನ ಸೊಗಸಾದ ಚಿರಪರಿಚಿತ ಸ್ಥಳಗಳ ಕುರಿತ ವಿವರಣಾತ್ಮಕ ಲೇಖನವು ಖುಷಿಕೊಟ್ಟಿತು.
ಪ್ರತಿಕ್ರಿಯಿಸಿದ ಎಲ್ಲರಿಗೂ ಆತ್ಮೀಯ ಧನ್ಯವಾದಗಳು