ಪ್ರಾಣದೇವ (ಒಂದು ಅಂತರ್ಯಾತ್ರೆಯ ಕಥನ)

Share Button

ಗುರುಗಳನ್ನು ಕಾಣಲು ಯಾಕಿಷ್ಟು ಧಾವಂತ? ಎಂದು ನನ್ನನ್ನೇ ಕೇಳಿಕೊಂಡೆ. ಗುಡ್ಡ ಹತ್ತುವಾಗ ಏದುಸಿರು. ಕೇವಲ ಬಿಸಿಲು; ಮೈಯ್ಯಲ್ಲಿ ಬೆವರು. ಆದರೂ ಜೀವಾತ್ಮದಲಿ ಏನೋ ಪವರು! ಒಂಥರಾ ತುಡಿತಮಿಡಿತವದು. ನಲ್ಲನೊಬ್ಬ ತನಗಾಗಿ ಕಾದಿರುವ ನಲ್ಲೆಗಾಗಿ ಏನನೂ ಲೆಕ್ಕಿಸದೇ ಬಿಲ್ಲಿನಿಂದ ಬಿಟ್ಟ ಬಾಣದ ತೆರದಿ ಸುಯ್ಯನೆ ಹೊರಟು ಬಿಡುತ್ತಾನಲ್ಲ! ಅಂಥ ಸೆಳೆತ. ಬಿಸಿಲನೂ ಬೆವರನೂ ಪಕ್ಕಕಿಟ್ಟು ಹೊರಟ ಯಾನದಲಿ ದೇಹಕೆ ಆಯಾಸವಾದರೂ ಮನಸು ಕನವರಿಸುತ್ತಿದೆ; ಗುರುವನ್ನು ಕಾಣಲು ಜೀವ ಹಾತೊರೆಯುತ್ತಿದೆ. ಇದನ್ನು ಅನುಭವಿಸುತ್ತಿರುವ ನನಗೇ ನನ್ನ ಬಗ್ಗೆ ಅಚ್ಚರಿಯಾಗುತ್ತಿದೆ. ಯಾವುದರ ಬಗ್ಗೆಯೂ ಮೋಹ ಮಮಕಾರಗಳನ್ನು ಬೆಳೆಸಿಕೊಂಡಿಲ್ಲವೆಂಬ ನನ್ನ ಅಹಮು ನಿಧಾನವಾಗಿ ಕರಗುತ್ತಿದೆ. ಆ ಆಲೋಚನೆಯ ಹಿಂದೆಯೇ ಮತ್ತೊಂದು ಅನಿಸಿಕೆ ಬೆಳೆಯುತ್ತಿದೆ: ‘ಈ ಮಮತ್ವ ಖುಷಿ ಕೊಡುತ್ತಿದೆ. ಆಚರಿಸು’ ಎಂದು ತನಗೆ ತಾನೇ ಆದೇಶ ನೀಡುತ್ತಿದೆ. ನನ್ನನು ನಾನೇ ತೀವ್ರವಾಗಿ ಎಂದೂ ಈ ತೆರದಲ್ಲಿ ಗಮನಿಸಿಕೊಂಡಿರಲಿಲ್ಲ ಎಂಬುದೂ ಮನದಟ್ಟಾಗಿ ವಾಸ್ತವಕ್ಕೆ ತೆರೆದುಕೊಂಡೆ. ಗುಡ್ಡ ಹತ್ತುವಾಗ ಹಾಗೆಯೇ ಕಡಿದಾದ ಕಣಿವೆಯೊಳಕ್ಕೆ ಕಾಲಿಟ್ಟು ಇಳಿಯುವಾಗ ಬೇರೇನೂ ಯೋಚಿಸದೇ ಎಚ್ಚರವನ್ನು ಕಾಯ್ದುಕೊಳ್ಳಬೇಕು ಎಂಬುದು ಹೊಳೆಯಿತು. ‘ಆತುರದಲ್ಲಿ ಆತ್ಮ ಕಳೆದುಕೊಂಡರು’ ಎಂಬ ಗಾದೆ ನೆನಪಾಗಿ ನಗು ಬಂತು. ಇಷ್ಟು ವಯಸಾದರೂ ಬುದ್ಧಿ ಬಂದಿಲ್ಲ ಅಂತ ಬಯ್ದುಕೊಂಡೆ. ಏಕೆಂದರೆ ಹೀಗೆ ಬಯ್ಯಲು ಜೊತೆಗೆ ಯಾರೂ ಇರಲಿಲ್ಲ.

ಒಂದೇ ಸಮನೆ ಓಡುನಡಿಗೆಯಿಂದ ಹೋಗಿದ್ದರಿಂದ ಮುಂಚಿಗಿಂತ ಬೇಗನೇ ಕುಟೀರ ಎದುರಾಯಿತು. ಅದನು ಕಂಡೊಡನೆ ಎಲ್ಲ ಆಯಾಸವೂ ಮರೆತೇ ಹೋಯಿತು. ತನ್ನ ಮಗುವ ಬಾಚಿ ತಬ್ಬಿದ ತಾಯಂತೆ ನನಗೆ ಆ ಆಶ್ರಮ ಆಹ್ವಾನಿಸಿದಂತೆ ಆಯಿತು. ಅದರ ಮುಂದೆ ಸಾಲಾಗಿ ಬೆಳೆದಿದ್ದ ಗಿಡಮರಗಳು ಕೈ ಬೀಸಿ ಕರೆದಂತೆ ಭಾಸವಾಯಿತು. ಇನ್ನೂ ಜೀವನದಲ್ಲಿ ಇಂಥ ಅಚ್ಚರಿ ಮತ್ತು ಬೆರಗುಗಳನ್ನು ನಾನು ಉಳಿಸಿಕೊಂಡಿದ್ದೇನೆ ಎಂಬುದಕಿಂತ ಇಂಥ ಅನಿರ್ವಚನೀಯ ಆನಂದವನ್ನು ಅನುಭವಿಸುವ ಆಕಾಂಕ್ಷೆಯು ಇನ್ನೂ ನನ್ನಲ್ಲಿದೆಯಲ್ಲ! ಎಂದು ಸೋಜಿಗವಾಯಿತು. ಕುಳಿತಲ್ಲೇ ಪರಪಂಚವನ್ನು ಒಳಗಣ್ಣಿಂದ ಕಂಡು ಆಖ್ಯಾನಿಸುವ ಕಲೆಯನ್ನು ಗುರುಗಳಿಂದ ಕಲಿತ ಮೇಲೆ ಯಾವುದರ ಬಗ್ಗೆಯೂ ನನಗೆ ಆಸಕ್ತಿ ಮೊಳೆಯುತ್ತಿರಲಿಲ್ಲ. ಅವುಗಳು ಇರುವ ಕಡೆಗೇ ಹೋಗಿ ನೋಡಬೇಕೆಂಬ ಲೌಕಿಕ ತಹತಹ ನನ್ನಲ್ಲಿ ಎಂದೋ ಸತ್ತು ಹೋಗಿತ್ತು ಅಥವಾ ಅವರು ಅದನ್ನು ಇಲ್ಲವಾಗಿಸಿ ಕೊಟ್ಟಿದ್ದರು.

ಹೋದವನೇ ಕೈ ಕಾಲು ತೊಳೆದು ಅತಿಥಿ ಅಭ್ಯಾಗತರಿಗಾಗಿ ಕಾಯ್ದಿರಿಸಿದ ಕೊಠಡಿಯಲ್ಲಿ ಉಟ್ಟ ಬಟ್ಟೆ ಬದಲಿಸಿ, ತಂದಿದ್ದ ಪಂಚೆ ಮತ್ತು ಬಿಳಿಯ ಶರಟು ತೊಟ್ಟು, ಧ್ಯಾನಮಂದಿರಕ್ಕೆ ತೆರಳಿದೆ. ಅದಾಗಲೇ ನನ್ನಂಥ ಎಷ್ಟೋ ನೂರಾರು ಮಂದಿ ಗುರುಗಳ ಬರುವಿಕೆಗಾಗಿ ಕಾಯ್ದಿದ್ದರು. ಅವರಲ್ಲಿ ನನಗೆ ಪರಿಚಯವಿದ್ದ ಕೆಲವರನ್ನು ಮಾತಾಡಿಸಿದೆ. ನನ್ನಲ್ಲಿ ಅದೇನು ವಿಶೇಷವನ್ನು ಕಂಡರೋ ಅಲ್ಲಿದ್ದ ಎಲ್ಲರೂ ನನ್ನನ್ನು ವಿಚಾರಿಸಿದರು. ಕೆಲವರು ಕಣ್ಣಲ್ಲಿ ಮಾತಾಡಿದರು, ಇನ್ನು ಕೆಲವರು ಹೃದಯದ ಮೂಲಕ. ಈ ಹೃದಯದ ಭಾಷೆಯನ್ನು ಗುರುತಿಸುವ ಮತ್ತು ಸಂವಾದಿಸುವ ಕಲೆಯನ್ನು ಸಹ ಗುರುಗಳಿಂದಲೇ ಕಲಿತವರಾಗಿದ್ದರು. ಗುರುಗಳು ಬಂದರು. ಎಲ್ಲರನ್ನೂ ವೀಕ್ಷಿಸಿದರು. ಕಣ್ಣಿನಲ್ಲೇ ಸಂವಾದಿಸಿದರು. ಏಕಾಗ್ರತೆ ಮತ್ತು ತನ್ಮಯತೆಗಳನ್ನು ಸಂಪಾದಿಸಲು ಹತ್ತು ನಿಮಿಷ ಸಾಮೂಹಿಕ ಧ್ಯಾನವನ್ನು ಕೈಗೊಂಡರು. ನಾವೆಲ್ಲ ಕಣ್ಣು ಮುಚ್ಚಿ ಕುಳಿತರೂ ಮನಸು ಎಲ್ಲೆಲ್ಲೋ ಅಲೆಯುತ್ತಿತ್ತು. ನಾನು ಹಾದು ಬಂದ ಹಾದಿಯ ಕಲ್ಲುಗುಡ್ಡಗಳೇ ಕಣ್ಮುಂದೆ ಮತ್ತೆ ತೆರೆದುಕೊಂಡಿತು. ಅದೇನು ಬರುತ್ತದೆಯೋ, ಕಾಣುತ್ತದೆಯೋ ಅವಕ್ಕೆ ಒಂದು ಸದೂರವನ್ನು ನಿರ್ಮಿಸಿಕೊಂಡು ನಿರ್ಲಿಪ್ತನಾಗಲು ಪ್ರಯತ್ನಿಸಿದೆ. ನನ್ನ ಕಣ್ಣ ಕನ್ನಡಿಯ ಬಿಂಬದಲ್ಲಿ ತೋರುವ ನನ್ನನ್ನೇ ನಾನು ಬೇರೆ ವ್ಯಕ್ತಿಯಂತೆ ವೀಕ್ಷಿಸಿದೆ.

ಧ್ಯಾನ ಮುಗಿದ ಗಂಟೆ ನಿನದಿಸಿತು. ಮೌನವೇ ಎಲ್ಲೆಲ್ಲೂ, ಆದರೂ ಆತ್ಮಸಂವಾದದ ಧ್ವನಿಸಂಗೀತ ಮಾತ್ರ ಎಲ್ಲೋ ಅಲೆಯಲೆಯಾಗಿ ತೇಲಿಬರುವಂತೆ ಕಿವಿಯನ್ನು ಹೊಕ್ಕು, ಒಟ್ಟೂ ವಾತಾವರಣಕ್ಕೆ ಪೂರಕವಾಗಿತ್ತು. ಆ ದಿನ ಅಲ್ಲಿ ಏರ್ಪಟ್ಟ ಸಂವಾದದ ಹೆಸರು ‘ಶೂನ್ಯಸಮಯ.’ ಗುರುಗಳು ಒಂದು ಪ್ರಶ್ನೆಯನ್ನು ಕೇಳುವುದು, ನಾವು ನಮಗೆ ತೋಚಿದ ಉತ್ತರ ನೀಡುವುದು. ಅದಾದ ಮೇಲೆ ನಮ್ಮ ಉತ್ತರಗಳಲ್ಲಿ ಅಡಗಿರುವ ಅಜ್ಞಾನವನ್ನು ಗುರುವು ಹೋಗಲಾಡಿಸುವುದು- ಇದು ಈ ಚಟುವಟಿಕೆಯ ಸ್ವರೂಪ. ಇಂಥ ಶೂನ್ಯದಲ್ಲೇ ಎಲ್ಲವನೂ ಅರಿಯುವ ಆನಂದ ಅಡಗಿರುತ್ತದೆ.

‘ಪ್ರಪಂಚದಲ್ಲಿ ಎಲ್ಲರೂ ನಿರ್ಲಕ್ಷಿಸುವ ಆದರೆ ತುಂಬ ಮಹತ್ವದ ಸಂಗತಿ ಯಾವುದು?’ ಗುರುಗಳು ಒಬ್ಬೊಬ್ಬರನ್ನೇ ಕೇಳಿದರು. ಒಬ್ಬೊಬ್ಬರದು ಒಂದೊಂದು ಉತ್ತರವಾಗಿತ್ತು: ಅಜ್ಞಾನ, ಅಹಂಕಾರ, ಅಧಿಕಾರ, ಪ್ರೇಮ, ಭಕ್ತಿ, ದೈವ, ನೀರು, ಬಾಳ್ವೆ, ಮುಕ್ತಿ ಹೀಗೆ ಹೇಳತೊಡಗಿದರು. ಮಹಾತ್ಮರು ಸುಮ್ಮನೆ ಕೇಳಿಸಿಕೊಳ್ಳುತಿದ್ದರು. ನಾನು ಹೆಚ್ಚು ಯೋಚಿಸದೆ ಅವರ ವಿಚಾರಲಹರಿಯನು ಗಮನಿಸಿ, ‘ಶರೀರ’ ಎಂದೆ. ಗುರುವು ನನ್ನತ್ತಲೇ ನೋಡುತ್ತ, ಇನ್ನೂ ಸ್ವಲ್ಪ ಒಳಗೆ ಹೋಗು ಎಂದರು. ‘ಆತ್ಮ’ ಎಂದೆ. ಅಷ್ಟೊಂದು ಆಳಕಿಳಿಯಬೇಡ ಎಂದರು. ತಲೆ ಕೆರೆದುಕೊಂಡೆ. ಹೊಳೆಯಲಿಲ್ಲ. ಅವರೇ ಬಾಯ್ಬಿಟ್ಟರು. ನಮ್ಮೆಲ್ಲ ಚೈತನ್ಯಕೆ ಕಾರಣವಾಗಿರುವ ‘ಉಸಿರು’ ಎಂದರು. ನಾವೆಲ್ಲ ಉಸಿರು ಬಿಗಿ ಹಿಡಿದು ಆಲೋಚಿಸಹತ್ತಿದೆವು.

ಹುಟ್ಟಿನಿಂದ ಸಾಯುವವರೆಗೂ ಉಸಿರಾಡುತ್ತೇವೆ; ಆದರೆ ಆ ಶ್ವಾಸೋಚ್ಛ್ವಾಸದ ಸ್ವರೂಪವನು ಅರಿಯದೇ ಬೆಪ್ಪರಾಗಿದ್ದೇವೆ. ನಮ್ಮ ಉಸಿರಾಟಕೂ ಆಲೋಚನೆಗೂ ನೇರ ಸಂಬಂಧವಿದೆ. ಇದನ್ನು ಜಗತ್ತಿನಲ್ಲಿ ಮೊದಲು ತಿಳಿಸಿದ ವಿಜ್ಞಾನಿ ಪತಂಜಲಿ; ತರುವಾಯ ಗೌತಮ ಬುದ್ಧರು ವಿವರಿಸಿದರು ಎಂದರು. ಅಷ್ಟರಲ್ಲಿ ನಾನು ಕಳೆದು ಹೋಗಿದ್ದೆ. ಗುಡ್ಡ ಹತ್ತುವಾಗಿನ ನನ್ನ ಏದುಸಿರು ನೆನಪಾಗಿ ಮತ್ತೆ ಗುಡ್ಡ ಹತ್ತುವ ಕಾಯಕವನ್ನು ಮಾಡತೊಡಗಿದೆ. ಇದನ್ನು ಗಮನಿಸಿದರೇನೋ ಎಂಬಂತೆ ಅವರು, ‘ನೀವೆಲ್ಲರೂ ನಿಂನಿಮ್ಮ ಮಿದುಳನ್ನು ಖಾಲಿ ಮಾಡಿಕೊಳ್ಳಿ. ಉಸಿರಿನ ಹಲವು ಅನುಭವದ ನೆನಪುಗಳನ್ನು ಮೆಲುಕು ಹಾಕಿಕೊಂಡು ವರ್ತಮಾನವನ್ನು ಕಳೆದುಕೊಳ್ಳಬೇಡಿ’ ಎಂದು ಎಚ್ಚರಿಸಿದರು. ನಮ್ಮ ಲೋಪಗಳು ಗೊತ್ತಾಗಿ, ವಾಸ್ತವಕ್ಕೆ ಎದುರಾದೆವು.



ಗುರುಗಳು ಮಾತು ಮುಂದುವರಿಸಿದರು: ನಮ್ಮ ಆಲೋಚನೆ ಮತ್ತು ಸಂವೇದನೆಗಳ ಮೂಲ ಮಿದುಳು ಮತ್ತು ಹೃದಯವಾದರೂ ನಿರ್ವಹಣೆ ಮಾಡುವುದು ಶ್ವಾಸಕೋಶ ! ನಿಧಾನವಾಗಿ ಏಕಲಯದಲ್ಲಿ ಉಸಿರಾಡುತಿದ್ದರೆ ನಾವು ಶಾಂತವಾಗಿರುತ್ತೇವೆ; ಅದಕ್ಕೇನೆ ಅಷ್ಟಾಂಗಯೋಗದಲಿ ಅದರಲೂ ಪ್ರಾಣಾಯಾಮ ಮತ್ತು ಧ್ಯಾನದಲಿ ಶ್ವಾಸೋಚ್ಛ್ವಾಸ ನಿಯಂತ್ರಣದ್ದೇ ಪ್ರಮುಖ ಪಾತ್ರ. ವೇಗೋದ್ವೇಗದಲ್ಲಿ ನಮ್ಮದು ತ್ವರಿತ; ಹೃದಯಕ್ಕೆ ಆಯಾಸ; ಮನಸ್ಸಿಗೆ ಅಸ್ವಸ್ಥತೆ; ಬುದ್ಧಿಗೆ ಮಂಕು, ವಿವೇಕ ನಾಪತ್ತೆ! ಜಗಳದಲ್ಲಿ, ವಾಗ್ವಾದದಲ್ಲಿ ಆವೇಶ, ಆಕ್ರೋಶ ಹೆಚ್ಚಾಗಿ ಹುಚ್ಚುಚ್ಚಾರ. ಏದುಸಿರು, ಕೈಕಾಲು ನಡುಕ, ಅಹಮಿನ ವೈಭವ. ದರ್ಪ ದೌಲತ್ತು; ಸ್ವಸಮರ್ಥನೆಯ ಅಸಹಾಯ-ಕತೆ; ರಕ್ತಕಣ್ಣೀರು, ಒಟ್ಟಾರೆ ಸಂಬಂಧಗಳ ಸಾವು, ಪ್ರೀತಿ – ಅಂತಃಕರಣಗಳಿಗೆ ಶ್ರಾದ್ಧ……..ಇಷ್ಟೆಲ್ಲ ಯಾವುದರಿಂದ? ನಾವು ಉಸಿರಾಟವನು ಗಮನಿಸದೇ ಇರುವುದರಿಂದ ! ಶಿಷ್ಯರೇ, ಹೆಸರಲ್ಲ ಮುಖ್ಯ; ಉಸಿರು ಅಂದರೆ ಶ್ವಾಸ. ಇದೇ ವಿಶ್ವ ಮತ್ತು ವಿಶ್ವಾಸ !! ಎಂದುಸುರಿದರು.

ನಾನು ‘ಹರಿ ಸರ್ವೋತ್ತಮ ; ವಾಯು ಜೀವೋತ್ತಮ’ ಎಂಬ ಕಮಲೇಶ ವಿಠಲರ ಕೀರ್ತನೆಯನು ನೆನಪಿಸಿಕೊಂಡೆ. ಏನಾಶ್ಚರ್ಯವೆಂದರೆ ‘ನಿರುತ ನೀ ಗುರು ಪದ ಭಜನೆಯ ಮಾಡೆ ದುರಿತಗಳೆಲ್ಲವು ಓಡಿ ಪೋಗುವುದು’ ಎಂಬ ಅದರ ಚರಣವು ಆಯಾಚಿತವಾಗಿ ಜ್ಞಾಪಕಕ್ಕೆ ಬಂತು. ಈ ಸಾಲುಗಳು ನನಗೆ ಗೊತ್ತಿದ್ದವೆಂಬುದೇ ನನಗೆ ಗೊತ್ತಿರಲಿಲ್ಲ. ಎಂದೋ ರಿಜಿಸ್ಟರಾಗಿದ್ದ ಇವು ಇಂದು ಧುತ್ತನೆ ಮುನ್ನಲೆಗೆ ಬಂದದ್ದು ಈ ಚಕಿತಕ್ಕೆ ಕಾರಣ. ನಮ್ಮಜ್ಜಿಯು ಮಾತು ಮಾತಿಗೆ ‘ಪ್ರಾಣದೇವರು’ ಎಂದು ಹೇಳುತ್ತಿದ್ದುದು ಸಹ ನೆನಪಾಯಿತು. ಮುಖ್ಯಪ್ರಾಣ ಎಂದು ಯಾವುದೋ ಕೀರ್ತನೆಯಲ್ಲಿ ಬಳಕೆಯಾಗಿದೆ. ಅನ್ನದೇವರಿಗಿಂತ ಪ್ರಾಣದೇವರು ಮುಖ್ಯ ಎಂದು ಗುರುಗಳು ಹೇಳಿದ್ದು ಹಾಗೂ ಸಲ್ಲೇಖನದಲ್ಲಿ ಗಾಳಿಯನ್ನು ಸೇವಿಸಿಯೇ ಜೀವಿಸುವ ಕೊನೆಯ ಘಟ್ಟ ಎಂಬ ವಿಚಾರಗಳು ನೆನಪಾದವು. ಮನಸೆಂದರೆ ಬರೀ ನೆನಪು ಎಂಬಷ್ಟರಮಟ್ಟಿಗೆ ನಾನು ನನ್ನನ್ನು ಗಮನಿಸುತ್ತಾ ನನ್ನೊಳಗೆ ಸೇರಿ ಹೋದೆ. ಈ ಅಟ್ಯಾಚ್ಮೆಂಟ್ ಮತ್ತು ಡಿಟ್ಯಾಚ್ಮೆಂಟ್ಗಳನ್ನು ಸರಾಗವಾಗಿ ಶ್ವಾಸ ಮತ್ತು ಉಚ್ಛ್ವಾಸದ ಮೂಲಕ ನಿರ್ವಹಿಸಬಹುದೆಂಬುದನ್ನು ಕಲಿತೆ. ಅಳಿಯುವ ಕಲೆಯೇ ಅರಿಯುವ ಬೆಲೆ ಎಂಬುದು ಇನ್ನಷ್ಟು ವೇದ್ಯವಾಯಿತು.

ಸುಮ್ಮನೆ ಕುಂತು ಉಸಿರಾಟವನ್ನು ಗಮನಿಸುವುದೇ ನಿಜಧ್ಯಾನ. ಸುಮ್ಮನೆ ಕುಳಿತುಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನು ಅರಿಯಲು ಸುಮ್ಮನೆ ಕುಳಿತುಕೊಳ್ಳಬೇಕು. ಇದಕ್ಕೆ ಬೇರೆ ಯಾವುದೇ ಶಾರ್ಟ್ಕಟ್ ಇಲ್ಲ! ಇನ್ನು ಉಸಿರಾಟವನ್ನು ಗಮನಿಸುವುದು ತುಂಬ ತ್ರಾಸದ ಕೆಲಸ; ಗಮನಿಸುವ ತನಕ! ಗಮನಿಸುತ್ತಿದ್ದೇವೆ ಎಂದುಕೊಳ್ಳುತ್ತೇವೆ. ಆದರೆ ನಮ್ಮ ಗಮನ ಬೇರೆಡೆಗೆ ಹೋಗಿರುತ್ತದೆ. ‘ಅದನ್ನೇನು ಗಮನಿಸುವುದು? ಅದು ಅನೈಚ್ಛಿಕ ಕ್ರಿಯೆ’ ಎಂದು ವಿಜ್ಞಾನ ಮಾತಾಡುವವರಿಗೆ ಧ್ಯಾನಮಾರ್ಗವು ಅರ್ಥಹೀನ ಕೆಲಸ ಎಂದೆನಿಸಬಹುದು. ‘ಇದರಲ್ಲೊಂದು ವಿಜ್ಞಾನ ಅಡಗಿದೆ!’ ಎಂಬುದನ್ನು ಅರ್ಥೈಸುವ ಬಗೆ ಹೇಗೆ? ಯಾರಾದರೂ ನಮ್ಮನ್ನು ಟಾರ್ಗೆಟ್ ಮಾಡಿದಾಗ, ಬಯ್ದಾಗ, ವಿಡಂಬಿಸಿದಾಗ, ಮೂದಲಿಸಿದಾಗ, ಡೀಗ್ರೇಡ್ ಮಾಡಿದಾಗ, ಕದನಕ್ಕೆ ಆಹ್ವಾನಿಸಿದಾಗ ಮೊದಲು ನಾವು ನಮ್ಮ ಉಸಿರಾಟವನ್ನು ಗಮನಿಸಬೇಕು; ಅದನ್ನು ತಹಬಂದಿಗೆ ತೆಗೆದುಕೊಳ್ಳಬೇಕು! ಆದರೆ ನಾವು ಮಾಡುವುದೇ ಬೇರೆ! ಅವರ ಮಾತುಗಳಲ್ಲಿರುವ ಬೈಗುಳವನ್ನು ನಾವೇ ನಮ್ಮ ಮರ್ಮಕ್ಕೆ ಮುಟ್ಟಿಸಿಕೊಂಡು, ಅದರಿಂದಾಗಿ ಕೆರಳಿದ ನನ್ನ ಮನಸ್ಥಿತಿಯನ್ನು ಪರಿಸ್ಥಿತಿಯ ಕೈಗಿತ್ತು ಅಸಹಾಯಕರಾಗಿ ನಾವೂ ಕೂಗಾಡುತ್ತೇವೆ, ನಮಗೆ ಗೊತ್ತಿರುವ ಬೈಗುಳವು ಆಯಾಚಿತವಾಗಿ ಹೊರಗೆ ಬರುತ್ತವೆ. ಕೌಂಟರ್ ಕೊಡದಿದ್ದರೆ ನಮ್ಮನ್ನು ಬಲಹೀನ ಮತ್ತು ಹೇಡಿ ಎಂದು ತಿಳಿಯುವರೆಂಬ ಭಯ ನಮ್ಮಲ್ಲುಂಟಾಗಿ, ಅದರ ಕೀಳರಿಮೆಯಿಂದ ಈಚೆ ಬರಲು ಹವಣಿಸುತ್ತೇವೆ. ಮಾತಾಡಲು ಬರದವರು ಕಿರುಚುತ್ತಾರೆಂಬ ಸತ್ಯವನ್ನು ಮರೆಯುತ್ತೇವೆ. ಆರೋಪಗಳನ್ನು ಅಲ್ಲಗಳೆಯದಿದ್ದರೆ ನಾವು ಅಪರಾಧಿಯಾಗುತ್ತೇವೆ ಎಂದು ಭಾವಿಸುತ್ತೇವೆ. ಆಗ ತರ್ಕ, ವಾದ ಮತ್ತು ಸಮರ್ಥನೆಗಳು ಮೇಲಾಗುತ್ತವೆ. ಶುದ್ಧ ಲೌಕಿಕರಾಗಿ ಪ್ರತಿಕ್ರಿಯಿಸಿ, ಮನೋಶರೀರದ ಆರೋಗ್ಯ ಕೆಡಿಸಿಕೊಂಡು, ಹಾರ್ಮೋನುಗಳ ವೈಪರೀತ್ಯಕ್ಕೆ ಆಸ್ಪದ ಕೊಡುತ್ತೇವೆ. ಇದನ್ನೇ ಧೃತಿಗೆಡುವುದು ಎನ್ನುವುದು. ಉಸಿರಾಟವನ್ನು ಗಮನಿಸಿ, ಏದುಸಿರನ್ನು ನಿಯಂತ್ರಿಸಿ, ಶುದ್ಧ ಎಚ್ಚರ ಮತ್ತು ಎಚ್ಚರಿಕೆಗಳಿಂದ ನಮ್ಮನ್ನು ಆ ಸಂದರ್ಭದಲ್ಲಿ ಗೆಲ್ಲಬೇಕು. ಇದೇ ಧ್ಯಾನದ ತರಬೇತಿ; ಇಲ್ಲದಿದ್ದರೆ ಬರೀ ಪಜೀತಿ! ಕೂಗಾಡಿದ ಮೇಲೆ ನಮ್ಮೊಳಗೆ ಗಿಲ್ಟು ಕಾಡುತ್ತದೆ. ಈ ಗಿಲ್ಟು ನಮ್ಮ ಅಪ್ರಬುದ್ಧತೆಯ ಸಂಕೇತ. ಕೂಗಾಡಿ ಆ ಕ್ಷಣದಲ್ಲಿ ನಾವು ಗೆಲ್ಲಬಹುದು; ಆದರೆ ಕೂಗಾಡದೇ ನಮ್ಮನ್ನು ನಿ-ಯಂತ್ರಿಸಿಕೊಂಡರೆ ನಮ್ಮನ್ನೇ ಗೆಲ್ಲಬಹುದು! ನಾವು ಗೆಲ್ಲವುದಕ್ಕೂ ನಮ್ಮನ್ನು ಗೆಲ್ಲುವುದಕ್ಕೂ ವ್ಯತ್ಯಾಸವಿದೆ. ಒಂದು ಲೌಕಿಕ; ಇನ್ನೊಂದು ಲೋಕೋತ್ತರ. ಇದರ ರುಚಿ ಕಂಡವರು ನಸು ನಗುತ್ತಾರೆ; ಸದಾ ಹಸನ್ಮುಖರಾಗಿರುತ್ತಾರೆ! ನಮ್ಮಲ್ಲಿ ಮನೋಬಲವಿದ್ದರೆ ಇನ್ನೊಬ್ಬರಿಂದ, ಇನ್ನೊಬ್ಬರ ಮಾತಿನಿಂದ ನಾವು ಡಿಸ್ಟರ್ಬಿತರಾಗಲಾರೆವು. ನಾವು ಡಿಸ್ಟರ್ಬ್ ಆದೆವೆಂದರೆ ಅದು ಇನ್ನೊಬ್ಬರ ಗೆಲುವು! ಇದೊಂದು ಮೈಂಡ್ ಗೇಮು. ದಿನನಿತ್ಯ ನಾವಿರುವೆಡೆ ನಮ್ಮನ್ನು ಬೇಕೆಂದೇ ಕೆಣಕುವವರು, ಮಜಾ ತೆಗೆದುಕೊಳ್ಳಲು ಹವಣಿಸುವವರು ಇದ್ದೇ ಇರುತ್ತಾರೆ. ನಾವು ಕೆಟ್ಟದಾಗಿ ಪ್ರತಿಕ್ರಿಯಿಸಲೆಂದೇ ಕಾಯುತ್ತಾರೆ. ಅಂಥ ಸನ್ನಿವೇಶದ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಹನಿಟ್ರ್ಯಾಪ್ ಇದ್ದಂತೆ ಇದು ಮೈಂಡ್ಟ್ರ್ಯಾಪ್! ಕ್ರಿಯೆಯೆಂಬುದು ಕ್ರಿಯೆಯಲ್ಲ; ಪ್ರತಿಕ್ರಿಯೆಯೆಂಬುದು ನಿಜದ ಕ್ರಿಯೆ! ಕ್ರಿಯೆ ಏನೇ ಇರಲಿ, ನನ್ನ ಪ್ರತಿಕ್ರಿಯೆ ಅತಿ ಮುಖ್ಯ. ಕ್ರಿಯೆಯು ನಾನಲ್ಲ; ನನ್ನ ಕೈಯಳತೆಯಲ್ಲಿಲ್ಲ. ಪ್ರತಿಕ್ರಿಯೆ ಮಾತ್ರ ನಾನೇ. ಅದರ ಪರಿಣಾಮವೂ ನನ್ನಿಂದಲೇ!!

ಗುರುಗಳ ಮಾತು ಅವ್ಯಾಹತವಾಗಿ ಸಾಗುತ್ತಿತ್ತು. ಅವನ್ನು ಜೀರ್ಣಿಸಿಕೊಳ್ಳಲು ನನಗೆ ಕಷ್ಟವಾಗಿತ್ತು. ಅಂತೂ ಏನೋ ಲಭಿಸಿತೆಂಬುದು ತಿಳಿಯುತ್ತಿತ್ತು. ಇದಾಗುವ ಹೊತ್ತಿಗೆ ಸಂಜೆ ಆಗಿದ್ದೇ ಗೊತ್ತಾಗಲಿಲ್ಲ. ಶರೀರದ ಶಕ್ತಿ ವ್ಯಯವಾಗಿತ್ತು. ಅದರ ಪರಿಣಾಮ ಹೊಟ್ಟೆಯ ಹಸಿವು. ಒಂಚೂರು ಏನಾದರೂ ತಿಂದು ಕತ್ತಲಾಗುವುದರೊಳಗೆ ಮನೆ ಸೇರಬೇಕೆಂದುಕೊಂಡು, ಭೋಜನಶಾಲೆಯ ಕಡೆ ಹೆಜ್ಜೆ ಹಾಕಿದೆ. ಇದೆಲ್ಲವನ್ನೂ ಅರಿತವರಂತೆ, ಅಲ್ಲೆಲ್ಲೋ ಇದ್ದ ಗುರುಗಳು ಪ್ರತ್ಯಕ್ಷರಾಗಿ, ನನ್ನ ಬೆನ್ನನ್ನು ಮೃದುವಾಗಿ ತಟ್ಟಿ, ಕಣ್ಣಲ್ಲಿ ಕಣ್ಣಿಟ್ಟು ನೋಡಿದರು. ಕಣ್ಣೋಟ ಮಾತ್ರದಿಂದಲೇ ಮನವನ್ನು ಓದಿಕೊಂಡವರಂತೆ, ‘ಈ ನಿರಾಳತೆ ಮತ್ತು ಪ್ರಸನ್ನತೆಗಳನ್ನು ಸದಾ ಕಾಯ್ದುಕೋ’ ಎಂದು ಸಲಹಿಸಿ, ಮತ್ತೆ ಕಣ್ಮರೆಯಾದರು.

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ

18 Responses

  1. Manjuraj H N says:

    ಪ್ರಕಟಿಸಿದ ಸಂಪಾದಕರಿಗೂ ಓದಿ ಪ್ರತಿಕ್ರಿಯಿಸುವ ಸಹೃದಯಿಗಳಿಗೂ

    ನನ್ನ ಹೃನ್ಮನಪೂರ್ವಕ ಧನ್ಯವಾದಗಳು. ಸುರಹೊನ್ನೆಗೆ ಶುಭವಾಗಲಿ.

  2. ಮಹೇಶ್ವರಿ ಯು says:

    ಚೆನ್ನಾಗಿ ದೆ

  3. Hema Mala says:

    ಬಹಳ ಮಾಹಿತಿಯುಕ್ತವಾದ, ಪ್ರಬುದ್ಧ ಶೈಲಿಯ ಬರಹ.

    • Manjuraj H N says:

      ನಿಮ್ಮ ಮೆಚ್ಚುಗೆಗೆ ನನ್ನ ವಂದನೆ.

      ನಿಮ್ಮ ಕ್ರಿಯಾಶೀಲತೆ ನನಗೆ ಬೆರಗು!

  4. Padma Anand says:

    ಸರಾಗ ಜೀವನಕ್ಕೆಮಾರ್ಗದರ್ಶನವಾದ ಲೇಖನ. ಧ್ಯಾನದ ತರಗತಿಯಲ್ಲಿ ಕೂತಂತಾಯಿತು‌ ಈಗ ಅದನ್ನು ತರಬೇತಿಯನ್ನಾಗಿಸಿಕೊಳ್ಳದಿದ್ದರೆ ಫಜೀತಿ ಗ್ಯಾರಂಟಿ.
    ಚಿಂತನೆಗೆ ಹಚ್ಚಿ ಮನಸ್ಸನ್ನು ನಿರಾಳಗಿಳಿಸುವ ಲೇಖನ.

    • Manjuraj H N says:

      ಧನ್ಯವಾದಗಳು ಮೇಡಂ……..

      ಪತಂಜಲಿ ಮತ್ತು ಬುದ್ಧರನ್ನು ಒಂದೇ ಗುರುವಿನ ಮುಖೇನ ಕಂಡ ನನ್ನ ಕಲ್ಪನೆಯ ಬರೆಹ.

      ಇಂಥ ಗುರು ಸಿಕ್ಕರೆ ಯಾರು ಬೇಡವೆನ್ನುವರು!? ಸಿಗಬೇಕಲ್ಲ ನಾನಿರುವ ತಾಣದಲ್ಲಿ!

      ಹೀಗೇ ಬರೆಯುತ್ತಾ ಹೋದೆ; ಕತೆಯಂತಾಯಿತು. ನಾನು ನೆಪ; ಬರೆಸಿಕೊಂಡದ್ದು ಅದಾಗಲೇ ಅದಕಿದ್ದ ಸ್ವ – ರೂಪ!!

      ನಿಮ್ಮ ಪ್ರತಿಕ್ರಿಯೆಗೆ ನಾನು ಆಭಾರಿ. ವಂದನೆಗಳು.

  5. ವಾವ್…ಬಹಳಷ್ಟು ಚಿಂತನೆಗೆ ಹಚ್ಚವಂತೆ…ಮಾಡಿದೆ ಸಾರ್….ಸೊಗಸಾದ ನಿರೂಪಣೆಯಲ್ಲಿ ಮೂಡಿಬಂದಿದೆ..
    ಧನ್ಯವಾದಗಳು ಸಾರ್. ..

    • Manjuraj H N says:

      ಧನ್ಯವಾದಗಳು ಮೇಡಂ. ನಿಮ್ಮ ಬರೆಹವೂ ಸಾರ್ಥಕವಾಗಿದೆ; ಅರ್ಥಪೂರ್ಣ ಆಗಿದೆ.
      ದಾಖಲಿಸಿದ್ದೇನೆ ಕೂಡ.

  6. Anonymous says:

    ಒಂದೇ ಉಸಿರಂತೆ ನಾನು ನೀನು ಅನ್ನೋ ಸಿನಿಮಾ ಹಾಡನ್ನು ಉಸಿರು ಕಟ್ಟಿ ಹಾಡಿರುವಂತೆ ಓತ ಪ್ರೋತವಾಗಿ ಲೇಖನ ಚನ್ನಾಗಿ ಓಡಿ ನಿಂತಿದೆ
    -ಕುಂದಣ ನಾಗೇಂದ್ರ

    • Manjuraj H N says:

      ಧನ್ಯವಾದಗಳು ಪ್ರಿಯ ಬಂಧುಗಳೇ…………….

      ನಿಮ್ಮ ಉಪಮೆ

      ಬರೆಹಕೆ ಸದಾರಮೆ !

      ಓಡಿ ನಿಂತಿದೆ ಎಂಬ ಮುಕ್ತಾಯದ ನುಡಿ

      ವಿಮರ್ಶೆಗೆ ಹಿಡಿದ ಕನ್ನಡಿ !!

      ಪ್ರತಿಸ್ಪಂದನಕೆ ನಾನು ಆಭಾರಿ. ದಯಮಾಡಿ ನಿಮ್ಮ ಲೇಖನ /ಬರೆಹಗಳೂ ಸುರಹೊನ್ನೆಯಲಿ ಕಾಣುವಂಥಾಗಲಿ.

  7. ಡಾ:ನಾಗರಾಜ್ says:

    ಉಸಿರು ಉಸಿರಾಗಿರಬೇಕಾದರೆ ಅನ್ನ ಪ್ರಮುಖವೇ? ಯಾ ಶರೀರದ ಸ್ವಾಸ್ಥ್ಯಕ್ಕೆ ಅನ್ನ ಪ್ರಮುಖವೇ? ಶಾರೀರಿಕ ಸ್ವಾಸ್ಥ್ಯ ಇಲ್ಲದಿದ್ದರೆ ಮಿದುಳು ಮಿಸುಕಾಡುತ್ತೆ. ಅಂತರಂಗ ದರ್ಶನ ಅಸಾಧ್ಯ ಅಲ್ಲವೇ?
    ತುಂಬಾ ವೈಚಾರಿಕ ಲೇಖನ
    ಶುಭವಾಗಲಿ

    • Manjuraj H N says:

      ನಿಮ್ಮ ಮಾತೂ ವೈಚಾರಿಕ ದರ್ಶನದ ಕುರುಹು………ಇತ್ತ ಯೋಚಿಸುವಂತೆ ಮಾಡಿದೆ.

      ಧನ್ಯವಾದಗಳು ಸರ್‌, ನಿಮ್ಮ ಪ್ರತಿಕ್ರಿಯೆಗೆ

  8. Shailaja says:

    ಏಕಚಿತ್ತದಿಂದ ಒಂದು ಜಾಗದಲ್ಲಿ ಕುಳಿತು ದ್ಯಾನ ಮಾಡುವುದು ಎಷ್ಟು ಕಷ್ಟಸಾಧ್ಯ ಎಂದು ನಿಮ್ಮ ಲೇಖನದಿಂದ ತಿಳಿದುಬರುತ್ತದೆ. ಅದರ ಅನುಭವವನ್ನು ರಸವತ್ತಾಗಿ ವಿವರಿಸಿದ್ದೀರಿ. ಧನ್ಯವಾದಗಳು.

    • Manjuraj H N says:

      ನೀವು ಸರಿಯಾಗಿ ಗ್ರಹಿಸಿದ್ದೀರಿ.

      ಬಹುಶಃ ನಾನು ಬರೆಯುವಾಗ ಇದೇ ತಲೆಯಲ್ಲಿತ್ತೇನೋ, ಗೊತ್ತಿಲ್ಲ.

      ಯಾವ ಕೊನೆಯೂ ನನ್ನದಲ್ಲ; ಅದೇ ಬರೆದುಕೊಂಡು ಹೋಯ್ತು. ನಾನು ನೆಪ; ಗುರು ನನ್ನ ನೆನಪ!

      ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದ. ಈ ಥರ ಬರೆದದ್ದು ನನಗೂ ಹೊಸದು.

  9. ನಯನ ಬಜಕೂಡ್ಲು says:

    ಮಾಹಿತಿಪೂರ್ಣ

  10. ಶಂಕರಿ ಶರ್ಮ says:

    ಹೌದು…ಧ್ಯಾನ ಮಾಡುವುದು, ಉಸಿರಾಟವನ್ನು ಗಮನಿಸುವುದು ಇತ್ಯಾದಿಗಳು, ಸದಾ ನಮ್ಮನ್ನು ಪರೀಕ್ಷೆಗೆ ಒಡ್ಡುವಂತಹ ಕ್ರಿಯೆಗಳು. ಮರ್ಕಟ ಮನಸ್ಸು ಒಂದರೆಘಳಿಗೆಯೂ ಸುಮ್ಮನಿರದೆ ಓಡುತ್ತಿರುತ್ತದೆ! ಲೇಖನವು ಓದುಗರನ್ನು ಚಿಂತನೆಗೆ ಹಚ್ಚಿರುವುದಂತೂ ನಿಜ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: