ಗೋಪುರಗಳ ನಾಡಿನಲ್ಲಿ…ಹೆಜ್ಜೆ 18

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ತ್ರಿಚ್ಚಿಯಿಂದ ಕೊಡೈಕೆನಾಲ್

08/10/2023 ರಂದು ತ್ರಿಚ್ಚಿಯಲ್ಲಿ ಉಪಾಹಾರ ಸೇವಿಸಿದ ನಂತರ, 200 ಕಿಮೀ ದೂರದಲ್ಲಿರುವ ಕೊಡೈಕೆನಾಲ್ ನತ್ತ ಪ್ರಯಾಣಿಸಿದೆವು. ನಗರದ ದಟ್ಟಣೆ ಕಡಿಮೆಯಾಗುತ್ತಾ ಹಸಿರು ದಾರಿಯಲ್ಲಿ ನಿಧಾನಗತಿಯಲ್ಲಿ ಬಸ್ಸು ಬೆಟ್ಟವನ್ನೇರತೊಡಗಿತು. ಕೊಡೈಕೆನಾಲ್ ತಮಿಳುನಾಡು ರಾಜ್ಯದ ದಿಂಡಿಗಲ್ ಜಿಲ್ಲೆಯಲ್ಲಿರುವ ಗಿರಿಧಾಮ. ಇಲ್ಲಿ ತಂಪಾದ ವಾತಾವರಣವಿದ್ದು, ಮೋಡಗಳು ಆಗಾಗ್ಗೆ ನಮ್ಮನ್ನು ಸವರಿಕೊಂಡು ಹೋಗುವುದರಿಂದ ಬೇಸಗೆ ಸಮಯದಲ್ಲಿ ಭೇಟಿ ಕೊಡಲು ಪ್ರಶಸ್ತವಾದ ತಾಣ. ಇದು ಬ್ರಿಟಿಷರಿಗೆ ಪ್ರಿಯವಾದ ಗಿರಿಧಾಮವಾಗಿತ್ತು.

ಪ್ರಕೃತಿ ಸೌಂದರ್ಯದ ನೆಲೆವೀಡಾಗಿರುವ ಕೊಡೈಕೆನಾಲ್ ನಲ್ಲಿ ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ದಿಪಡಿಸಲಾದ ಹಲವಾರು ಆಕರ್ಷಣೆಗಳಿವೆ.ಇವುಗಳಲ್ಲಿ ಪ್ರಮುಖವಾದುವುಗಳು ಹೀಗಿವೆ;

  1. ಕೊಡೈಕೆನಾಲ್ ಸರೋವರ : ನಕ್ಷತ್ರದ ಆಕಾರದ ವಿಶಾಲವಾದ ಮಾನವ ನಿರ್ಮಿತ ಸರೋವರದಲ್ಲಿ ಪ್ರವಾಸಿಗರು ದೋಣಿವಿಹಾರ ಮಾಡಲು ಸಾಧ್ಯವಾಗುತ್ತದೆ. ನಾವು ‘ದೋಣಿ ಸಾಗಲಿ ಮುಂದೆ ಹೋಗಲಿ..‘ ಹಾಡನ್ನು ಗುನುಗುತ್ತಾ, ಸುಮಾರು ಅರ್ಧಗಂಟೆ ದೋಣಿಯಾನ ಮಾಡಿದೆವು.
  2. ‘ಪಿಲ್ಲರ್ ರಾಕ್’ ಎಂಬ ಬೃಹತ್ತಾದ ಬಂಡೆ ಹಾಗೂ ಪಕ್ಕದ ಕಣಿವೆಯ ನೋಟ
  3. ‘ಡಾಲ್ಫಿನ್ಸ್ ನೋಸ್’ ಎಂಬ ಹೆಸರಿನ ರಮಣೀಯ ತಾಣ
  4. ‘ಕಾಕರ್ಸ್ ವಾಕ್’ ಎಂಬ ಚೆಂದದ ಕಾಲುದಾರಿ
  5. ಖ್ಯಾತ ಕನ್ನಡ ಚಲನಚಿತ್ರ ‘ಅಮೃತವರ್ಷಿಣಿ’ಯಲ್ಲಿ ಕಾಣಿಸಿಕೊಂಡ ನಾಯಕ-ನಾಯಕಿಯ ಮನೆ (ಗೋಲ್ಫ್ ಕ್ಲಬ್ ಕಟ್ಟಡ)
  6. ಪ್ರಸಿದ್ದ ಚಲನಚಿತ್ರದ ಹಾಡು ‘ನೀ ಮೀಟಿದಾ ನೆನಪೆಲ್ಲವೂ ಎದೆ ತುಂಬಿ ಹಾಡಾಗಿದೆ’ ಚಿತ್ರೀಕರಣವಾದ ಸೂಚಿಪರ್ಣ/ಪೈನ್ ಮರಗಳ ಕಾಡು
  7. ಮನೆಯಲ್ಲಿ ತಯಾರಿಸಿದ ಚಾಕ್ಲೇಟ್ ಗಳು, ತರಾವರಿ ಕರಕುಶಲ ವಸ್ತುಗಳು, ಕಾಡಿನ ಹಣ್ಣುಗಳು, ಸ್ಥಳೀಯ ಚಹಾಪುಡಿ, ಸ್ವೆಟರ್‍, ಟಿ-ಶರ್ಟ್ ಇತ್ಯಾದಿಗಳ ಮಾರಾಟ

ಇನ್ನೂ ಹಲವಾರು ವ್ಯೂ ಪಾಯಿಂಟ್ ಗಳು, ಜಲಪಾತಗಳು, ಮಂದಿರಗಳು ಇವೆಯಾದರೂ, ನಮಗೆ ಅಂದು ಮತ್ತು ಮರುದಿನ ಬೆಳಗ್ಗೆ ಸಿಕ್ಕಿದ ಸಮಯಾವಕಾಶದಲ್ಲಿ ಸಾಧ್ಯವಾದಷ್ಟು ಮಾತ್ರ ನೋಡಲು ಸಾಧ್ಯವಾಯಿತು. ‘ಹೋಟೇಲ್ ಗ್ರ್ಯಾಡ್ ಪ್ಯಾಲೇಸ್’ ಎಂಬಲ್ಲಿ ನಮ್ಮ ವಾಸ್ತವ್ಯವಿತ್ತು.

09/10/2023 ರಂದು ಮಧ್ಯಾಹ್ನ ಮೂರು ಗಂಟೆಗೆ ಎಲ್ಲರೂ ಹೊರಡಬೇಕಿತ್ತು. ಬೆಳಗ್ಗೆ ಸ್ವಲ್ಪ ಸ್ಥಳೀಯ ವೀಕ್ಷಣೆ ಮಾಡಿ ಬಂದು, ಲಗುಬಗೆಯಿಂದ ಊಟ ಮುಗಿಸಿ, ಚಿಕ್ಕದಾದ ಸಭಾಕಾರ್ಯಕ್ರಮ ಮಾಡಲಾಯಿತು. ಟ್ರಾವೆಲ್ಸ್4ಯುನವರು ಯಶಸ್ವಿಯಾಗಿ ಪ್ರವಾಸ ಮುಗಿಸಿದ ನಮಗೆಲ್ಲರಿಗೂ ಅಭಿನಂದನೆ ತಿಳಿಸಿದರು. 70 ಜನರಿದ್ದ ನಮ್ಮ ತಂಡದ ಸಕಲ ಹಿತಾಸಕ್ತಿಯನ್ನು ಬಹಳ ಶ್ರದ್ಧೆಯಿಂದ ನಿರ್ವಹಿಸಿ, ನಮ್ಮನ್ನು ತಾಳ್ಮೆಯಿಂದ ತೀರ್ಥಕ್ಷೇತ್ರಗಳಿಗೆ ಕರೆದೊಯ್ದು ನಾವು ಪುಣ್ಯ ಸಂಪಾದಿಸಲು ಪ್ರೇರೇಪಿಸುತ್ತಾ ತಾವೂ ಪುಣ್ಯ ಸಂಪಾದಿಸುತ್ತಿರುವ ಟ್ರಾವೆಲ್ 4ಯು ತಂಡದ ಶ್ರೀ ಬಾಲಕೃಷ್ಣ, ಶ್ರೀ ಪ್ರಶಾಂತ್, ಶ್ರೀಮತಿ ಅಂಬಿಕಾ ಹಾಗೂ ಶ್ರೀ ಚೇತನ್ ಅವರಿಗೆ ನಮ್ಮೆಲ್ಲರ ಪರವಾಗಿ ಕೃತಜ್ಞತೆ ತಿಳಿಸಿದೆವು. ಹಾಗೆಯೇ ನಮ್ಮನ್ನು ಸುರಕ್ಷಿತವಾಗಿ ಗುರಿ ಮುಟ್ಟಿಸಿದ ಎರಡೂ ಬಸ್ಸುಗಳ ಸಾರಥಿ ಮತ್ತು ಸಹಾಯಕರಿಗೆ ಧನ್ಯವಾದ ಅರ್ಪಿಸಿದೆವು.

ತಂಡದ ಎಲ್ಲಾ ಸದಸ್ಯರು ಪರಸ್ಪರ ಅಭಿನಂದಿಸುತ್ತಾ ವಿದಾಯ ಹೇಳುವ ಸಮಯ ಬಂದೇ ಬಿಟ್ಟಿತು. ಮೊದಲೇ ನಿಗದಿಯಾದಂತೆ ಹೆಚ್ಚಿನವರು ಕೇರಳದ ಫಾಲ್ಘಾಟ್ ಮೂಲಕ ಪುತ್ತೂರು ತಲಪುವವರಿದ್ದರು. ನಾವು ಕೆಲವರು ಬೆಂಗಳೂರು ಮೂಲಕ ಮೈಸೂರು ತಲಪಿದೆವು.

ಗುಂಪಾಗಿ ಪ್ರಯಾಣ ಮಾಡುವಾಗ ಕೆಲವೊಂದು ಆಕಸ್ಮಿಕ, ಅನಾನುಕೂಲಕರವಾದ ಸನ್ನಿವೇಶಗಳು, ಅಪಘಾತಗಳು,ಅನಾರೋಗ್ಯ ಇತ್ಯಾದಿ ಆಗುವುದಿದೆ. ನಮ್ಮ ತಂಡದಲ್ಲಿ ಯಾರಿಗೂ ದೊಡ್ಡ ಸಮಸ್ಯೆಯಾಗಿಲ್ಲ ಎಂಬುದು ಖುಷಿಯ ವಿಚಾರ. ಸಣ್ಣ-ಪುಟ್ಟ ಕಹಿಅನುಭವಗಳೇನಾದರೂ ಆಗಿದ್ದರೂ, ಅದನ್ನು ಅಲ್ಲಿಯೇ ಬಿಟ್ಟು ‘ಮುಂದಿನ ಪ್ರಯಾಣ ಯಾವಾಗ’ ಎಂದು ಲೆಕ್ಕಾಚಾರ ಹಾಕುತ್ತದೆ ನಮ್ಮ ‘ಅಲೆಮಾರಿ ಮನಸ್ಸು’. ಸವಿನೆನಪುಗಳು ಮಾತ್ರ ಜೊತೆಗಿರಲಿ, ಸವಿಯಲೀ ಬದುಕು ಅಲ್ಲವೇ?

ಈ ಯಾತ್ರೆಯ ಯಶಸ್ಸಿಗೆ ಕಾರಣದ ಎಲ್ಲರಿಗೂ ಅಭಿನಂದನೆಗಳು. ಹೆಚ್ಚೇನೂ ಶ್ರಮವಹಿಸದೆ. ಎಡಿಟಿಂಗ್ ಬಗ್ಗೆ ಗಮನ ಕೊಡಲು ಸಮಯವಿಲ್ಲದೆ ‘ತೋಚಿದಂತೆ ಗೀಚಿದ್ದೇನೆ’. ತಪ್ಪುಗಳನ್ನು ಮನ್ನಿಸಿ, ಒಪ್ಪುಗಳ ಸ್ವೀಕರಿಸಿ, ಸಂದರ್ಭ ಅವಕಾಶ ಸಿಕ್ಕಿದರೆ ಇನ್ನೊಂದು ಪ್ರವಾಸದಲ್ಲಿ ಭೇಟಿಯಾಗೋಣ. ಈ ಪ್ರವಾಸಕಥನವನ್ನು ತಾಳ್ಮೆಯಿಂದ ಓದಿದ, ಮೆಚ್ಚಿದ, ಪ್ರತಿಕ್ರಿಯಿಸಿದ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು.

ಈ ಪ್ರವಾಸಕಥನದ ಹಿಂದಿನ ಬರಹ ಇಲ್ಲಿದೆ : https://www.surahonne.com/?p=39774

(ಮುಗಿಯಿತು)
ಹೇಮಮಾಲಾ.ಬಿ, ಮೈಸೂರು

7 Responses

  1. ಅಯ್ಯೋ…ಗೋಪುರಗಳ ನಾಡಿನಲ್ಲಿ..ಪ್ರವಾಸ ಕಥನ..ಮುಗಿದೇಹೋಯಿತೇ..ಎನ್ನುವಂತಾಯಿತು ಗೆಳತಿ ಹೇಮಾ ನಿಮ್ಮ ಪ್ರವಾಸ ದ ಅನುಭವದ ಅಭಿವ್ಯಕ್ತಿ ಗೊಂದು ನನ್ನ ನಮನ..ಸೊಗಸಾಗಿ ಮೂಡಿಬಂತು… ಧನ್ಯವಾದಗಳು

  2. ನಯನ ಬಜಕೂಡ್ಲು says:

    ಬಹಳ ಸೊಗಸಾಗಿ ಮೂಡಿ ಬಂತು ಪ್ರವಾಸ ಕಥನ. ಪ್ರತಿಯೊಂದು ಭಾಗ ಓದುವಾಗಲೂ ಸ್ವತಃ ನಾವೇ ಹೋಗಿ ನೋಡಿ ಅನುಭವಿಸಿದ ಭಾವ ನೀಡಿದಂತಹ ಬರಹ ಗುಚ್ಛ.

  3. Padma Anand says:

    ಗೋಪುರಗಳ ನಾಡಿನ ವಿಹಾರ ಮುಗಿದೇ ಹೋಯಿತೇ? ಇರಲಿ, ಇದು ಇನ್ನೊಂದು ಪ್ರವಾಸಕ್ಕೆ, ಪ್ರವಾಸ ಕಥನಕ್ಕೆ ದಾರಿಯಾಗಲಿ.
    ಚಂದದ ನಿರೂಪಣೆಯ ಸೊಗಸಾದ ಪ್ರವಾಸ ಕಥನ ಇದಾಗಿತ್ತು.

  4. ನಾಗರಾಜ ಬಿ.ನಾಯ್ಕ says:

    ಚೆಂದದ ಪ್ರವಾಸ ಕಥನ. ಓದುತ್ತಾ ಹೋದಂತೆ ನಾವೇ ಹೋಗಿ ಬಂದ ಅನುಭವ ಸಿಕ್ಕಿತು. ಲೇಖನ ಓದಲು ಆಪ್ತವೆನಿಸುವ ಸಾಲುಗಳ ಜೊತೆಗೆ ನೋಡಿದ ಸ್ಥಳಗಳ ವಿವರಣೆ ಚೆನ್ನಾಗಿದೆ. ಸಂಗ್ರಹ ಯೋಗ್ಯ ಲೇಖನ ಎನಿಸುತ್ತದೆ……. ತುಂಬಾ ಚೆನ್ನಾಗಿದೆ.

  5. ಶಂಕರಿ ಶರ್ಮ says:

    ಗೋಪುರಗಳ ನಾಡಿನಲ್ಲಿ ನಮ್ಮನ್ನು ಖರ್ಚಿಲ್ಲದೆ ಸುತ್ತಿಸಿದ ಹೇಮಮಾಲಾ ಅವರಿಗೆ ಹಾರ್ದಿಕ ನಮನಗಳು. ಇನ್ನೊಂದು ಪ್ರವಾಸದಲ್ಲಿ ಭೇಟಿಯಾಗೋಣ…ಆದಷ್ಟು ಬೇಗನೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: