ಗೋಪುರಗಳ ನಾಡಿನಲ್ಲಿ…ಹೆಜ್ಜೆ 10

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ರಾಮೇಶ್ವರಂ-5 ಶಿವಲಿಂಗಗಳ ದರ್ಶನ

ಬದುಕಿರುವಾಗ ಒಮ್ಮೆಯಾದರೂ ಕಾಶಿ-ರಾಮೇಶ್ವರಕ್ಕೆ ಭೇಟಿ ಕೊಟ್ಟು, ರಾಮೇಶ್ವರದ ಸಮುದ್ರದ ಮರಳನ್ನು ಕಾಶಿಯಲ್ಲಿರುವ ಗಂಗಾನದಿಗೆ ಹಾಗೂ ಗಂಗಾಜಲವನ್ನು ರಾಮೇಶ್ವರದ ಸಮುದ್ರದಲ್ಲಿ ವಿಲೀನಗೊಳಿಸಿದರೆ ಜೀವನ ಪಾವನವಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ. ಉತ್ತರದ ಬದರಿನಾಥ, ದಕ್ಷಿಣದ ರಾಮನಾಥ, ಪೂರ್ವದ ಪುರಿ ಜಗನ್ನಾಥ, ಪಶ್ಚಿಮದ ದ್ವಾರಕನಾಥ ಈ ನಾಲ್ಕು ಕ್ಷೇತ್ರಗಳಿಗೆ ಶ್ರೀ ಶಂಕರಾಚಾರ್ಯರು ಭೇಟಿ ಕೊಟ್ಟಿದ್ದರು ಹಾಗೂ ಇವುಗಳನ್ನು ಚತುರ್ಧಾಮಗಳೆಂದು ಕರೆಯುತ್ತಾರೆ.

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪಂಬನ್‌ ದ್ವೀಪದಲ್ಲಿರುವ ರಾಮೇಶ್ವರಂ ದೇವಾಲಯವು 12 ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಒಂದಾಗಿದೆ. ಸಮುದ್ರದಲ್ಲಿ, ನಿರ್ಮಿಸಲಾದ ಪಂಬನ್ ಸೇತುವೆಯ ಮೂಲಕ ರಾಮೇಶ್ವರಂ ತಲಪಬೇಕು. ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಪಂಬನ್ ಸೇತುವೆಯು, ಈಗಲೂ ಸುಸ್ಥಿತಿಯಲ್ಲಿದೆ. ಹಡಗುಗಳು ಬರುವಾಗ ಈ ಸೇತುವೆ ತೆರೆದು ದಾರಿ ಮಾಡಿಕೊಡುತ್ತದೆ. ಇದು ಅದ್ಭುತವಾದ ಸೇತುವೆ ನಿರ್ಮಾಣದ ಕೌಶಲ.

ರಾಮೇಶ್ವರಂನ ಪೌರಾಣಕ ಹಿನ್ನೆಲೆ
ಸೀತಾಪಹರಣದ ನಂತರ, ರಾಮನು ರಾವಣನನ್ನು ವಧಿಸುತ್ತಾನೆ. ರಾವಣನು ಬ್ರಾಹ್ಮಣನಾದ ಕಾರಣ ರಾಮನಿಗೆ ಬ್ರಹ್ಮಹತ್ಯಾ ದೋಷದ ಪಾಪ ಪ್ರಜ್ಞೆ ಕಾಡುತ್ತದೆ. ರಾಮನು, ಅಗಸ್ತ್ಯ ಮುನಿಗಳ ಸಲಹೆಯಂತೆ ರಾಮನು ಶಿವಲಿಂಗವನ್ನು ಸ್ಥಾಪಿಸಿ ಪೂಜಿಸುವ ಸಂಕಲ್ಪ ಮಾಡಿದನು. ದೋಷಗಳ ಪರಿಹಾರಕ್ಕೆ ಎಲ್ಲಾ ವಿಧಿ ವಿಧಾನಗಳನ್ನು ನಿರ್ದಿಷ್ಟ ಸಮಯದೊಳಗೆ ಮಾಡಬೇಕಿತ್ತು, ಹಾಗಾಗಿ ಶಿವಲಿಂಗವನ್ನು ತರಲು ಹನುಮಂತನನ್ನು ಕೈಲಾಸ ಪರ್ವತಕ್ಕೆ ಕಳುಹಿಸಿದಸು.

  1. ಹನುಮಂತನು ಶಿವಲಿಂಗವನ್ನು ತರುವಾಗ ವಿಳಂಬವಾಗಿತ್ತು. ಶ್ರೀರಾಮನ ಆದೇಶದಂತೆ ಸೀತಾದೇವಿಯು ಸಮುದ್ರ ತೀರದ ಮರಳಿನಿಂದ ಶಿವಲಿಂಗವನ್ನು ರಚಿಸಿ, ಪೂಜಿಸಿದರು. ಇದು ಗರ್ಭಗುಡಿಯಲ್ಲಿರುವ ‘ರಾಮಲಿಂಗ’.
  2. ಆಮೇಲೆ ಹನುಮಂತನು ಕೈಲಾಸದಿಂದ ಶಿವಲಿಂಗವನ್ನು ತಂದನು. ಈಗಾಗಲೇ ಪೂಜೆ ಆಗಿರುವುದನ್ನು ಕಂಡು ಕೋಪಗೊಂಡು, ತನ್ನ ಬಾಲವನ್ನು ಮರಳಿನ ಶಿವಲಿಂಗಕ್ಕೆ ಸುತ್ತಿ ಎಳೆಯಲು ಯತ್ನಿಸಿದನಾದರೂ ಸಫಲನಾಗಲಿಲ್ಲ. ಅವನನ್ನು ಸಮಾಧಾನಿಸಲು ರಾಮನು, ಕೈಲಾಸದಿಂದ ತಂದ ಶಿವಲಿಂಗವನ್ನೂ ಸ್ಥಾಪಿಸಿ, ಪೂಜಿಸಿದನು ಹಾಗೂ ಅದನ್ನು ‘ವಿಶ್ವಲಿಂಗ’ ಎಂಬ ಹೆಸರಿನಿಂದ ಕರೆದನು.
  3. ಆಮೇಲೆ ಹನುಮಂತನೂ ಪ್ರಾಯಶ್ಚಿತಕ್ಕಾಗಿ ಇನ್ನೊಂದು ಶಿವಲಿಂಗವನ್ನು ಸ್ಥಾಪಿಸಿ ಪೂಜಿಸಿದನು.
  4. ಶಂಕರಾಚಾರ್ಯರು ‘ಸ್ಪಟಿಕ ಶಿವಲಿಂಗ’ ವನ್ನು ರಾಮೇಶ್ವರಂ ದೇವಾಲಯಕ್ಕೆ ಕೊಟ್ಟಿದ್ದರು ಹಾಗೂ ಸೂರ್ಯನ ಬೆಳಕು ಮೂಡುವ ಮೊದಲು ಈ ಸ್ಪಟಿಕ ಲಿಂಗಕ್ಕೆ ಪೂಜೆ ಸಲ್ಲಬೇಕೆಂದು ಆದೇಶಿಸಿದ್ದರು. ಈಗಲೂ ಬೆಳಗಿನ ಜಾವ 0430 ಗಂಟೆಯಿಂದ ಬೆಳಕಾಗುವ ವರೆಗೆ ಮಾತ್ರ ಈ ಶಿವಲಿಂಗದ ದರ್ಶನ ಲಭ್ಯವಾಗುತ್ತದೆ.
  5. ಪಾಂಡ್ಯ ರಾಜರಲ್ಲೊಬ್ಬರಿಗೆ ಸಮುದ್ರದಲ್ಲಿ, ‘ಉಪ್ಪಿನ ಶಿವಲಿಂಗ’ ದೊರಕಿತ್ತು. ಇದನ್ನೂ ಪೂಜಿಸುತ್ತಾರೆ. ಹೀಗೆ ರಾಮೇಶ್ವರಂಗೆ ಭೇಟಿ ಕೊಟ್ಟವರು 5 ಶಿವಲಿಂಗಗಳ ದರ್ಶನ ಮಾಡಬಹುದು.

ರಾಮೇಶ್ವರಂನ ಐತಿಹಾಸಿಕ ಹಿನ್ನೆಲೆ:

ರಾಮೇಶ್ವರಂನಲ್ಲಿರುವ ಮೂಲ ದೇವಾಲಯವನ್ನು 12ನೇ ಶತಮಾನದಲ್ಲಿ ಶ್ರೀಲಂಕಾದ ರಾಜನಾದ ಪರಾಕ್ರಮಬಾಹು ನಿರ್ಮಿಸಿದನೆಂದು ಹೇಳಲಾಗಿದೆ. ತದನಂತರ ಮಧುರೈ ಅರಸರು, ಪಾಂಡ್ಯ ರಾಜರು , ಕೇರಳದ ತಿರುವಾಂಕೂರು ರಾಜರು ಹೀಗೆ ಹಲವರು ಅಭಿವೃದ್ಧಿ ಪಡಿಸಿದರು. ಬೇರೆ ಬೇರೆ ರಾಜವಂಶಗಳು ಕೈಜೋಡಿಸಿದರೂ, ಅದ್ಭುತವಾದ ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಮುಂದುವರಿಸಿಕೊಂಡು ಬಂದುದು ಕಾಣಿಸುತ್ತದೆ. ಈಗ ನಮಗೆ ಕಾಣುವ ದೇವಾಲಯವು ಅಂದಾಜು 15 ಎಕರೆ ವಿಸ್ತೀರ್ಣದಲ್ಲಿ ಕಟ್ಟಲಾಗಿದೆ. ರಾಜಗೋಪುರವು 126 ಅಡಿ ಎತ್ತರವಿದೆ. ದೇವಾಲಯದಲ್ಲಿ ಬೃಹತ್ತಾದ ನಂದಿಯ ವಿಗ್ರಹವಿದೆ. 30 ಅಡಿ ಎತ್ತರದ, ಶಿಲ್ಪವೈವಿಧ್ಯಗಳುಳ್ಳ 4000 ಕ್ಕೂ ಹೆಚ್ಚು ಸಂಖ್ಯೆಯ ಶಿಲಾ ಸ್ತಂಭಗಳಿವೆ. ಒಟ್ಟು 3850 ಅಡಿ ಉದ್ದದ ವಿವಿಧ ವಿನ್ಯಾಸದ ಕಾರಿಡಾರ್ ಗಳನ್ನು ಹೊಂದಿದ್ದು ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಕಾರಿಡಾರ್ ಇರುವ ದೇವಾಲಯ ಎಂಬ ಹೆಸರು ಪಡೆದಿದೆ.

ಆಧುನಿಕ ಕ್ರೇನ್ ನಂತಹ ಯಂತ್ರಗಳು ಇಲ್ಲದ ಅಕಾಲದಲ್ಲಿ, ಟನ್ ಗಟ್ಟಲೇ ಭಾರದ ಕಲ್ಲಿನ ರಚನೆಗಳನ್ನು ಅಂದಿನ ಕಾಲದಲ್ಲಿ ಹೇಗೆ ನಿರ್ಮಿಸುತ್ತಿದ್ದರೋ ಎಂದು ಅಚ್ಚರಿಯಾಗುತ್ತದೆ. ಈಗಲೂ ಶತಮಾನಗಳ ಹಿಂದಿನ ಶಿಲಾಕಟ್ಟಡಗಳು ಸುದೃಢವಾಗಿರುವುದು ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತವೆ.

ರಾಮೇಶ್ವರಂನಲ್ಲಿ ಹೋಟೆಲ್ ‘ಸೆಂತೂರ್ ರಾಜ’ ಎಂಬಲ್ಲಿ ನಮ್ಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ನಮ್ಮ ಟೂರ್‍ ಮ್ಯಾನೇಜರ್ ತಿಳಿಸಿದಂತೆ ಬೆಳಗ್ಗೆ 0500 ಗಂಟೆಗೆ ಸಿದ್ಧರಾದೆವು . ‘ಸ್ಪಟಿಕ ಶಿವಲಿಂಗ’ದ ದರ್ಶನ ಮಾಡಿ, ಆಮೇಲೆ ಸಮುದ್ರ ಸ್ನಾನ ಹಾಗೂ 22 ತೀರ್ಥ ಸ್ನಾನ ಮಾಡಿ ಬರಬೇಕಿತ್ತು. ದೇವಾಲಯದೊಳಗೆ ಮೊಬೈಲ್ ಒಯ್ಯುವಂತಿಲ್ಲ. ಟ್ರಾವೆಲ್4ಯು ನವರು ಕೊಟ್ಟಿದ್ದ ಸ್ನಾನದ ಟವೆಲ್ ಮಾತ್ರ ಹಿಡಿದುಕೊಂಡು ದೇವಾಲಯದತ್ತ ನಡೆದೆವು. ಅಷ್ಟಾಗಿ ಜನಜಂಗುಳಿ ಇದ್ದಿರಲಿಲ್ಲ. ‘ರಾಮಲಿಂಗ’ದ ಪಕ್ಕದಲ್ಲಿ ಇರಿಸಿದ್ದ ಪುಟ್ಟ ‘ಸ್ಪಟಿಕ ಲಿಂಗ’ದ ದರ್ಶನ ಸಂಪನ್ನವಾಯಿತು. ಆಮೇಲೆ ‘ಉಪ್ಪಿನ ಶಿವಲಿಂಗ’ವನ್ನೂ, ಹನುಮಾನ್ ಗುಡಿಯ ಪಕ್ಕದ ಶಿವಲಿಂಗವನ್ನೂ ನೋಡಿ ಸಮುದ್ರ ಸ್ನಾನಕ್ಕೆ ಹೊರಟೆವು.

ಈ ಪ್ರವಾಸಕಥನದ ಹಿಂದಿನ ಬರಹ ಇಲ್ಲಿದೆ: https://www.surahonne.com/?p=39493

(ಮುಂದುವರಿಯುವುದು)
-ಹೇಮಮಾಲಾ.ಬಿ, ಮೈಸೂರು

6 Responses

  1. ನಯನ ಬಜಕೂಡ್ಲು says:

    ಕಳೆದ ತಿಂಗಳು ನನ್ನ ಅತ್ತೆ ಮತ್ತು ಅತ್ತಿಗೆಯ ಫ್ಯಾಮಿಲಿ ದಕ್ಷಿಣ ಭಾರತ ಪ್ರವಾಸ ಹೋಗಿ ಬಂದ್ರು, ಅದರಲ್ಲಿ ರಾಮೇಶ್ವರವೂ ಇತ್ತು. ಆದ್ರೆ ಅವರಿಗೆ ಇಷ್ಟೊಂದು ವಿವರಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ನಿಮ್ಮ ಪ್ರವಾಸದ ಆಸಕ್ತಿಗೆ ಹ್ಯಾಟ್ಸ್ ಆಫ್ ಹೇಮಕ್ಕ. ನೀವು ಮಾಡಿದ ಪ್ರವಾಸದ ಕುರಿತು ವಿವರಿಸುವ ಪರಿ ಬಹಳ ಸುಂದರ.

    • Hema Mala says:

      ಪ್ರತಿ ವಾರವೂ ‘ಸುರಹೊನ್ನೆ’ಯ ಎಲ್ಲಾ ಬರಹಗಳನ್ನು ಓದಿ ಚೆಂದಕೆ ಪ್ರತಿಕ್ರಿಯಿಸುವ ನಿಮಗೆ ಅನಂತ ಧನ್ಯವಾದಗಳು ಗೆಳತಿ ನಯನಾ.

  2. ವಾವ್ ನಿಮ್ಮ ಪ್ರವಾಸ ಕಥನ ದ ನಿರೂಪಣೆ ಬೊಂಬಾಟ್ ಗೆಳತಿ ಹೇಮಾ..ನನಗಂತೂ ಆಸ್ಥಳಗಳ ಬಗ್ಗೆ ಇರುವ ಕಥೆಗಳು ಕೇಳಲು ತಿಳಿದುಕೊಳ್ಳಲು ತುಂಬಾ ಇಷ್ಟ..ನಿಮ್ಮ ಕಥನದಲ್ಲಿ… ಅವುಗಳು ಹಾಸುಹೊಕ್ಕಾಗಿ ರುತ್ತವೆ…ಧನ್ಯವಾದಗಳು.

  3. ಶಂಕರಿ ಶರ್ಮ says:

    ರಾಮೇಶ್ವರಂನಲ್ಲಿರುವ ವಿಶೇಷವಾದ ಐದು ಶಿವಲಿಂಗಗಳ ಬಗೆಗಿನ ಮಾಹಿತಿ ಬಹಳ ಕುತೂಹಲಪೂರ್ಣವಾಗಿದೆ. ಜಗತ್ತಿನಲ್ಲೇ ಅತೀ ಉದ್ದದ ಕಾರಿಡಾರ್ ನ ಚಿತ್ರವು ಬರಹದ ಅಂದವನ್ನು ಹೆಚ್ಚಿಸಿದೆ..ಧನ್ಯವಾದಗಳು ಮಾಲಾ ಅವರಿಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: