ಗೋಪುರಗಳ ನಾಡಿನಲ್ಲಿ…ಹೆಜ್ಜೆ 5

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಶುಚೀಂದ್ರಂ

ಮಧ್ಯಾಹ್ನದ ಊಟದ ನಂತರ ಕನ್ಯಾಕುಮಾರಿಯಲ್ಲಿರುವ ತ್ರಿವೇಣಿ ಸಂಗಮಕ್ಕೆ ಹೋಗಿ, ಮೂರು ಸಮುದ್ರಗಳ ಸಮ್ಮಿಶ್ರ ನೀರನ್ನು ತಲೆಗೆ ಪ್ರೋಕ್ಷಿಸಿಕೊಂಡೆವು. ಭಾರತದ ತುತ್ತತುದಿ ಎಂದು ಸೂಚಿಸಲು ಅಲ್ಲಿ ಒಂದು ಕಲ್ಲು ಮಂಟಪವನ್ನು ನಿರ್ಮಿಸಿದ್ದಾರೆ. ಸಮೀಪದಲ್ಲಿ ಗಾಂಧೀಜಿಯವರ ಸ್ಮಾರಕವಿದೆ. ಗಾಂಧೀಜಿಯವರ ಮರಣದ ನಂತರ ಚಿತಾಭಸ್ಮವನ್ನು ಇಲ್ಲಿ ವಿಸರ್ಜಿಸಿದ ನೆನಪಿಗಾಗಿ ಇಲ್ಲಿ ಮ್ಯೂಸಿಯಂ ಅನ್ನು ನಿರ್ಮಿಸಿದ್ದಾರೆ.

ನಮ್ಮ ಮುಂದಿನ ಪ್ರಯಾಣ ಕನ್ಯಾಕುಮಾರಿಯಿಂದ  12 ಕಿಮೀ ದೂರದಲ್ಲಿರುವ  ”ಶುಚೀಂದ್ರಂ” ಕಡೆಗೆ ಆಗಿತ್ತು. ಗೌತಮ ಮುನಿಯ ಪತ್ನಿಯಾದ ಅಹಲ್ಯೆಯನ್ನು ಮೋಹಿಸಿದ ಇಂದ್ರನು ಗೌತಮರಿಂದ  ಮೈಯಲ್ಲಾ ಕಣ್ಣೇ ತುಂದಿರುವ  ‘ಸಹಸ್ರಾಕ್ಷನಾಗು’  ಎಂಬ ಶಾಪಕ್ಕೊಳಗಾಗುತ್ತಾನೆ. ಈ ಶಾಪದ ಪರಿಹಾರಕ್ಕಾಗಿ ಸ್ವತ: ಇಂದ್ರನೇ ಇಲ್ಲಿ  ಬ್ರಹ್ಮ, ವಿಷ್ಣು ಹಾಗೂ ಶಿವ – ಮೂವರೂ ಏಕಶಿಲೆಯಲ್ಲಿ ಕಾಣಿಸುವ ಲಿಂಗವನ್ನು ಸ್ಥಾಪಿಸಿ ಪೂಜಿಸಿದನೆಂಬ ನಂಬಿಕೆಯಿದೆ. 

ಶುಚೀಂದ್ರಂ ದೇವಾಲಯವು 134 ಅಡಿ ಎತ್ತರದ ಬಹಳ ಸುಂದರವಾದ ವಾಸ್ತುಶಿಲ್ಪವಿರುವ ಗೋಪುರವನ್ನು ಹೊಂದಿದೆ. ದೇವಾಲಯದ ಪ್ರಾಕಾರದಲ್ಲಿರುವ ಕೆಲವು ಕಂಬಗಳನ್ನು ಲಯವಾಗಿ ಬಡಿದಾಗ ಸ-ರಿ-ಗ-ಮ-ಪ-ದನಿ ಎಂಬ ಸಂಗೀತ ಹೊಮ್ಮುವುದನ್ನು ಅಲ್ಲಿಯ ಅರ್ಚಕರು ತೋರಿಸಿದರು. ಇನ್ನೊಂದು ಕಂಬದಲ್ಲಿ ಜಲತರಂಗದ ಮಾದರಿಯ ಸಂಗೀತ ಕೇಳುತ್ತದೆ. ಹೀಗೆ ಇಲ್ಲಿ , ಶಿಲೆಗಳು ಸಂಗೀತವನ್ನು ಹಾಡುತ್ತವೆ. ಕೇಳುವ ಕಿವಿ, ತಾಳ್ಮೆ, ಸಮಯ ನಮಗೆ ಇರಬೇಕು ಅಷ್ಟೆ. 

ಸಂಗೀತ ಹೊಮ್ಮಿಸುವ ಕಂಬಗಳು PC: Internet

ಇಲ್ಲಿರುವ  18 ಅಡಿ  ಎತ್ತರದ ಆಂಜನೇಯನ ವಿಗ್ರಹಕ್ಕೆ ಹರಕೆಯ ರೂಪವಾಗಿ  ವೀಳ್ಯದೆಲೆಯ ಹಾರ, ಉದ್ದಿನ ವಡೆಯ ಹಾರ ಇತ್ಯಾದಿ ಅರ್ಪಿಸುವುದು ವಿಶೇಷ. ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿ ಗಣಪತಿಯು ಮೊದಲು ಕಾಣಿಸಿಕೊಳ್ಳುತ್ತಾನೆ, ಆದ್ರೆ ಶುಚೀಂದ್ರನಲ್ಲಿ ನಾವು ದಕ್ಷಿಣೆ ಮುಗಿಸಿ ಹೊರಡುವಾಗ ಕೊನೆಯಲ್ಲಿ ಗಣಪತಿ ಗುಡಿ ಕಾಣಿಸುತ್ತದೆ. ಇಲ್ಲಿ- ನನಗೆ ಅನಿಸಿದ್ದೇನೆಂದರೆ, ಇಷ್ಟೊಂದು ಅದ್ಭುತ ಶಿಲ್ಪವೈಭವವನ್ನು  ಕಣ್ತುಂಬಿಕೊಳ್ಳಲು  ಹೆಚ್ಚು ಸಮಯಾವಕಾಶ ಬೇಕಿತ್ತು.


ಶುಚೀಂದ್ರಂ ದೇವಾಲಯ PC: Internet

ಶುಚೀಂದ್ರಂನಲ್ಲಿ ದರ್ಶನವಾದ ಮೇಲೆ ಪುನ: ಬಸ್ಸನ್ನೇರಿ ರಾಮೇಶ್ವರ ಕಡೆಗೆ ಪ್ರಯಾಣಿಸಿದೆವು. ದಾರಿಯಲ್ಲಿ ಒಂದೆರಡು ಕಡೆ ಸ್ಥಳೀಯ ಜಾತ್ರೆ /ಮೆರವಣಿಗೆ ಕಾಣಸಿಕ್ಕಿತು. ಸಾಸಿವೆ ಗಿಡಗಳನ್ನು ಕಲಶದ ರೀತಿ ತಲೆಯಲ್ಲಿ ಹೊತ್ತೊಯ್ಯುವ ಮಹಿಳೆಯರ ತಂಡವನ್ನು ನೋಡಿದೆವು. 

ರಾಮೇಶ್ವರಂ ತಲಪಿದಾಗ ರಾತ್ರಿಯಾಗಿತ್ತು. ‘ಈಗ ದೇವಾಲಯದಲ್ಲಿ ರಾತ್ರಿ ಪೂಜೆಯ ಸಮಯ. ಇನ್ನು ಕಾಲು ಗಂಟೆಯಲ್ಲಿ ದೇವಾಲಯದ ಬಾಗಿಲು ಮುಚ್ಚುತ್ತಾರೆ. ನಿಮ್ಮ ಚಪ್ಪಲಿ ಬ್ಯಾಗ್ ಇತ್ಯಾದಿ ಬಸ್ಸಿನಲ್ಲಿಯೇ ಬಿಟ್ಟು, ಎಲ್ಲರೂ ಬೇಗನೇ ನಡೆದರೆ ಈಗ ರಾತ್ರಿಯ ಪೂಜೆಯನ್ನು ನೋಡಬಹುದು, ನಾಳೆ ಹೇಗೂ ಪುನ: ದರ್ಶನ ಮಾಡಲಿದ್ದೇವೆ’ ಎಂದರು ನಮ್ಮ ಮಾರ್ಗದರ್ಶಕರು. ನಾವೆಲ್ಲರೂ ತರಾತುರಿಯಲ್ಲಿ ಅಲ್ಲಿಯ ವಿಶಾಲವಾದ ಪ್ರಾಂಗಣದಲ್ಲಿ ಓಡೋಡಿ, ಸರದಿ ಸಾಲಿನಲ್ಲಿ ನಿಂತು ಒಂದು ಬಾರಿ ದರ್ಶನ ಮಾಡಿ ಖುಷಿಪಟ್ಟೆವು. ದೇವಸ್ಥಾನದಲ್ಲಿ ಒಂದು ದರ್ಶನವನ್ನೂ ಮುಗಿಸಿ,  ರಾತ್ರಿಯ ತಿಂಡಿ ಮಾಡಿ ಹೋಟೆಲ್ ನೇರಿದೆವು.

ತಮಿಳುನಾಡಿನ ಹೋಟೆಲ್ ಗಳಲ್ಲಿ ರಾತ್ರಿ ಊಟ ಸಿಗುವುದಿಲ್ಲ, ಆದರೆ ಇಡ್ಲಿ, ದೋಸೆ, ಉಪ್ಪಿಟ್ಟು ಮೊದಲಾದ ತರಾವರಿ  ತಿಂಡಿಗಳು ಸದಾ ಸಿಗುತ್ತವೆ. ರುಚಿಯೂ ಚೆನ್ನಾಗಿರುತ್ತದೆ.

ಈ ಬರಹದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=39202

ಮುಂದುವರಿಯುವುದು
ಹೇಮಮಾಲಾ.ಬಿ, ಮೈಸೂರು

6 Responses

  1. ನಯನ ಬಜಕೂಡ್ಲು says:

    ತುಂಬಾ ಚಂದ. ಏನೋ ಒಂದು ಆಕರ್ಷಣೆ ನೀವು ಬರೆಯುವ ಪ್ರವಾಸ ಕಥನದಲ್ಲಿ

  2. ಚಿತ್ರ ಸಮೇತ ಪ್ರವಾಸ ಕಥನ.. ಓದಿದಾಗ ಅಲ್ಲಿ ನಾವು ಇದ್ದವೆನೋ ಎನ್ನುವ.. ಭಾವನಾಲೋಕಕ್ಕೆ ಹೋಗುತ್ತೇವೆ..ಹಾಗೆ ಮಾಡುವ ನಿಮ್ಮ ಬರಹಕ್ಕೆನನ್ನದೊಂದು ನಮನ ಗೆಳತಿ ಹೇಮಾ

  3. ಶಂಕರಿ ಶರ್ಮ says:

    ಸೊಗಸಾದ ಪ್ರವಾಸ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: