ಅವಿಸ್ಮರಣೀಯ ಅಮೆರಿಕ – ಎಳೆ 76

Share Button

PC: Internet

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಹಿಮನಾಯಿಗಳ ತರಬೇತಿ ಕೇಂದ್ರದತ್ತ….

ಹಿಮ ಪ್ರದೇಶದಲ್ಲಿ ಸಾಗಾಣಿಕೆಗಾಗಿ ಉಪಯೋಗಿಸುವ ಚಕ್ರವಿಲ್ಲದ ಬಂಡಿಯನ್ನು (Sled) ಎಳೆಯುವ ಹಿಮನಾಯಿಗಳ ಸಾಕುತಾಣ ಹಾಗೂ ತರಬೇತಿ ಕೇಂದ್ರಕ್ಕೆ ತಲಪಿದೆವು. ಈ ಬಂಡಿಯ ತಳಭಾಗವು ದೋಣಿಯ ತಳಭಾಗದಂತಿದ್ದು, ಹಿಮದಲ್ಲಿ ಎಳೆಯಲು ಅನುಕೂಲವಾಗುವಂತೆ ರಚಿಸಲಾಗಿದೆ. ನನಗಂತೂ ಇದು ಸಣ್ಣ ದೋಣಿಯಂತೆಯೇ ಗೋಚರಿಸಿತು!

ವಿಶೇಷ ತಳಿಯ ಈ ಹಿಮನಾಯಿಗಳು (Sled dogs) ಹಿಮ ಪ್ರದೇಶದ ಚಳಿಯಲ್ಲಿ ಜೀವಿಸಲು ಅನುಕೂಲವಾದಂತಹ ಶಾರೀರಿಕ ರಚನೆಯನ್ನು ಹೊಂದಿವೆ. ಮೈ ತುಂಬಾ ಅತ್ಯಂತ ನುಣ್ಣಗಾದ, ಉದ್ದನೆಯ ಹಾಗೂ ದಪ್ಪನೆಯ ತುಪ್ಪಳದಂತಹ ರೋಮವನ್ನು ಹೊಂದಿರುವ ಈ ನಾಯಿಗಳು, ಬಹಳ ಬಲಿಷ್ಠವಾಗಿವೆ.  ಇವುಗಳಲ್ಲಿ, ಸೈಬೀರಿಯನ್ ಹಸ್ಕಿ(Siberian Husky) ಮತ್ತು ಅಲಾಸ್ಕನ್ ಮಾಲಮುಟ್(Alaskan Malamute) ಜಾತಿಯ ನಾಯಿಗಳು ಅತ್ಯಂತ ಹೆಚ್ಚು ಬಳಕೆಯಲ್ಲಿವೆ. ಇವುಗಳಲ್ಲಿ  ಅಲಾಸ್ಕನ್ ಮಾಲಮುಟ್  ನಾಯಿಗಳು ಬಹು ಪ್ರಾಚೀನ ಕಾಲದಿಂದಲೂ ಬಳಸಲ್ಪಟ್ಟ ಉಲ್ಲೇಖಗಳು ಲಭ್ಯವಿವೆ. ಅವುಗಳು ಬೊಗಳುವುದು ಬಹಳ ಕಡಿಮೆ. ಆದರೆ, ಗಟ್ಟಿಯಾಗಿ ಕೂಗುವುದೇ ಹೆಚ್ಚು. ಆದ್ದರಿಂದ, ಅತ್ಯಂತ ನಿರ್ಜನವಾದ ಹಿಮ ಪ್ರದೇಶಗಳಲ್ಲಿ ಅಪಾಯದಲ್ಲಿರುವ ಮನುಷ್ಯರು ಅಥವಾ ಪ್ರಾಣಿಗಳನ್ನು ಪಾರುಮಾಡುವ ಕೆಲಸಗಳಲ್ಲಿ ಮಾತ್ರವಲ್ಲದೆ, ಭಾರವಾದ ಸ್ಲೆಡ್ ಗಳನ್ನು ಎಳೆಯಲು, ಬೇಟೆಯನ್ನು ಹಿಡಿಯಲು, ಕರಡಿಗಳನ್ನು ಹುಡುಕಲು, ಇತರ ಯಾವುದೇ ವಾಹನಗಳು ತಲಪಲು ಅಸಾಧ್ಯವಾದ, ಹಿಮಪಾತವಿರುವ ಕಡೆಗಳಲ್ಲಿ ಸಂಚರಿಸಲು, ಹಿಮಪ್ರದೇಶಗಳಲ್ಲಿ ಸಾಮಾನುಗಳನ್ನು ಸಾಗಿಸಲು ಇತ್ಯಾದಿ ಕೆಲಸಗಳಿಗೆ ಇವುಗಳನ್ನು ಬಳಸಲಾಗುತ್ತವೆ.

ಈ ಬಂಡಿಯನ್ನು ಎಳೆಯಲು ಸಾಮಾನ್ಯವಾಗಿ, ಬಲಿಷ್ಠವಾದ 6 ನಾಯಿಗಳನ್ನು ಬಳಸಲಾಗುತ್ತದೆ. ಮುಂಭಾಗದಲ್ಲಿರುವ ಎರಡು ನಾಯಿಗಳು ಗಾಡಿಯ ಚಕ್ರದಂತೆ ಮುಂದಕ್ಕೆ ಉರುಳುವ (ಎಳೆಯುವ) ಕೆಲಸ ಮಾಡುವುದರಿಂದ ಅವುಗಳಿಗೆ ವ್ಹೀಲ್ ಡಾಗ್ಸ್(Wheel Dogs) ಎಂದು ಕರೆಯಲಾಗುತ್ತದೆ. ಇವುಗಳು ಬಂಡಿಯನ್ನು ನಿಜವಾಗಿ ಎಳೆಯುವ ಸ್ಥಾನದಲ್ಲಿ ಇರುವುದರಿಂದ ಇವುಗಳು ಅತ್ಯಂತ ಬಲಿಷ್ಠವಾಗಿರಬೇಕಾಗುವುದು ಅತೀ ಅಗತ್ಯ. ಅವುಗಳಿಗೆ ಬೆಂಬಲವಾಗಿ ಮಧ್ಯದಲ್ಲಿ ಇರುವ ಎರಡು ನಾಯಿಗಳು ಟೀಮ್ ಡಾಗ್ಸ್ (Team Dogs) ಹಾಗೂ ಹಿಂದೆ ಇರುವವು ಸ್ವಿಂಗ್ ಡಾಗ್ಸ್ (Swing Dogs). ಇವುಗಳೆಲ್ಲವೂ ತಮ್ಮ ನಾಯಕನ (Musher) ಅಣತಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತವೆ. ಅವನೇ ಅವುಗಳ ತರಬೇತುದಾರನಾಗಿದ್ದು, ಅತ್ಯಂತ ಪ್ರೀತಿಯಿಂದ ಅವುಗಳ ಚಲನವಲನಗಳ ಕಡೆಗೆ ಸೂಕ್ಷ್ಮವಾದ ಗಮನವನ್ನಿರಿಸುತ್ತಾ, ಅವುಗಳ ಆರೋಗ್ಯ ಹಾಗೂ ಇತರ ಸಮಸ್ಯೆಗಳಿಗೆ ಕಾಲ ಕಾಲಕ್ಕೆ ಸ್ಪಂದಿಸುತ್ತಿರಬೇಕಾಗುತ್ತದೆ.

ನಾವು ಇಲ್ಲಿಗೆ ತಲಪಿದಾಗ ಮಧ್ಯಾಹ್ನ 1ಗಂಟೆ. ನಾಯಿಗಳ ಪ್ರದರ್ಶನಕ್ಕಾಗಿ ಇನ್ನೂ ಅರ್ಧ ಗಂಟೆ ಕಾಯಬೇಕಿತ್ತು. ಎತ್ತರದ ಹಸಿರು ಮರಗಳು ತುಂಬಿದ ಪ್ರಶಾಂತವಾದ ಜಾಗ… ತಂಪಾದ ಅಹ್ಲಾದಕರ ವಾತಾವರಣ.  ಅಲ್ಲಲ್ಲಿ ಒಂದೆರಡು ಹಳೆಯ ಕಟ್ಟಡಗಳಿದ್ದವು. ತೆರೆದ ಪುಟ್ಟ ಬಯಲಿನಲ್ಲಿ ತಂತಿ ಬೇಲಿಯ ಒಳಗೆ ತರೆಹೇವಾರು ನಾಯಿಗಳನ್ನು ಕಟ್ಟಿ ಹಾಕಲಾಗಿತ್ತು. ಅವುಗಳ ಬಗ್ಗೆ ಎಲ್ಲಾ ವಿವರಗಳನ್ನು ಅವುಗಳ ಮುಂಭಾಗದಲ್ಲಿ ಇರುವ ಚೀಟಿಯಲ್ಲಿ ನಮೂದಿಸಲಾಗಿತ್ತು. ಕೆಲವು ನಾಯಿಗಳು ಅತ್ತಿತ್ತ ಸುಳಿಯುತ್ತಿದ್ದವು. ಅಲ್ಲೇ ಪಕ್ಕದ ಲ್ಲಿ ಬೇಲಿಯ ಹೊರಗಡೆಗೆ ಕಟ್ಟಿ ಹಾಕಿದ್ದ ಬೃಹದಾಕಾರದ ನಾಯಿಯನ್ನು ನೋಡಿ ಬೆಚ್ಚಿ ಬೀಳುವಂತಾಯಿತು. ಒಂದು ಕಟ್ಟಡದ ಒಳಗಡೆಗೆ ಮುಚ್ಚಿದ ಕೋಣೆಗಳಲ್ಲಿ ಇಂತಹುದೇ ನಾಯಿಗಳನ್ನು ಬಿಡಲಾಗಿತ್ತು. ಅವುಗಳ ತೀಕ್ಷ್ಣವಾದ ಕೆಂಪನೆಯ ಕಣ್ಣುಗಳು, ದಪ್ಪಗಿನ ರೋಮಭರಿತ ದಷ್ಟಪುಷ್ಟವಾದ ಶರೀರ ನಮ್ಮಲ್ಲಿ ಕೌತುಕವನ್ನುಂಟು ಮಾಡಿದ್ದಂತೂ ನಿಜ.

ಅಷ್ಟರಲ್ಲಿ ಪ್ರದರ್ಶನ ಆರಂಭವಾಗುವ ಸಮಯ ಸನ್ನಿಹಿತವಾದಂತೆ, ಅಲ್ಲಿಯ ತರಬೇತುದಾರ ಮಹಿಳೆಯೊಬ್ಬಳು ಅಲ್ಲೇ ಪಕ್ಕದಲ್ಲಿರುವ ಗ್ಯಾಲರಿಯಲ್ಲಿ ಪ್ರವಾಸಿಗರೆಲ್ಲರನ್ನೂ ಆಸೀನರಾಗಲು ಸೂಚಿಸಿದರು. ಯಾರೂ ಮಾತನಾಡದೆ, ಗದ್ದಲವನ್ನುಂಟುಮಾಡದೆ ನಿಶ್ಶಬ್ದವಾಗಿರಲು ಮನವಿ ಮಾಡಿದರು. ಎಲ್ಲರೂ ಕಾತರದಿಂದ ನಿರೀಕ್ಷಿಸುತ್ತಿದ್ದ ಕ್ಷಣ… ನಮ್ಮ ಎಡಭಾಗದಿಂದ ತೋಳ ಗಾತ್ರದ ಎರಡು ನಾಯಿಗಳನ್ನು ಮಹಿಳೆಯು ಸರಪಣಿಯಲ್ಲಿ ಬಿಗಿದು ನಮ್ಮೆಡೆಗೆ ತರುತ್ತಿದ್ದಂತೆ ಭಯವಾಗತೊಡಗಿತು. ಅವಳು ನಮ್ಮ ಮುಂಭಾಗದಿಂದ ಮುಂದಕ್ಕೆ ಸರಿಯುತ್ತಿದ್ದಂತೆ, ಹಿಂಬದಿಯಲ್ಲೇ  ಪುರುಷ ತರಬೇತುದಾರನೊಬ್ಬನು, ಆರು ನಾಯಿಗಳಿಂದ ಎಳೆಯಲ್ಪಡುವ ಬಂಡಿಯೊಂದಿಗೆ ನಮ್ಮ ಮುಂಭಾಗದ ರಸ್ತೆಯಲ್ಲಿ ರಭಸದಿಂದ ಹಾಯ್ದು ಮುಂದಕ್ಕೆ ಒಂದು ಸುತ್ತು ಬಂದು ಪುನ: ನಮ್ಮೆದುರಿಗೆ ಬಂಡಿಯನ್ನು ನಿಲ್ಲಿಸಿದ. ಆಯಾಸಗೊಂಡಿದ್ದ ಹಿಮನಾಯಿಗಳ ಬೆನ್ನು ಸವರುತ್ತಾ ಅವುಗಳ ಪರಿಚಯವನ್ನೂ ಮಾಡಿದ ಬಗೆ ಬಹಳ ಮೆಚ್ಚುಗೆಯಾಯಿತು. …ಸ್ನೇಹಪರತೆ ಇಷ್ಟವಾಯಿತು.

ನದಿ ತೀರದಲ್ಲಿ….

ಅಲ್ಲಿಂದ ಬೀಳ್ಕೊಂಡು, ಮುಂದೆ ಸುಮಾರು ಅರ್ಧ ಗಂಟೆ ಪಯಣದ ಬಳಿಕ ನಾವು ಡೆನಾಲಿ ನ್ಯಾಶನಲ್ ಪಾರ್ಕಿನಲ್ಲಿ ಯೈಲಿ(Eiely) ಎಂಬ ಜಾಗಕ್ಕೆ ತಲಪಿದೆವು. ಮರಳು, ಮಣ್ಣು ಮಿಶ್ರಿತ ನೀರು ಹರಿಯುವ, ವಿಸ್ತಾರವಾದ ಆದರೆ ಕೆಲವು ಕಡೆಗಳಲ್ಲಿ ಆಳವಿಲ್ಲದ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಯ ಬಳಿ ನಮ್ಮ ಬಸ್ಸು ನಿಂತಿತು. Nenana ಎಂಬ ಈ ನದಿಯ ಇನ್ನೊಂದು ದಡಕ್ಕೆ ಸೇತುವೆಯ ಮೂಲಕ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ನಮ್ಮಂತೆ ಅದಾಗಲೇ ಅಲ್ಲಿ ಹತ್ತಾರು ವಾಹನಗಳಲ್ಲಿ ಬಂದ ಯಾತ್ರಿಗಳು ಅಡ್ಡಾಡುತ್ತಿದ್ದರು. ನದಿಯಲ್ಲಿ ಆಟವಾಡಲು ಮಕ್ಕಳು ಉತ್ಸುಕರಾಗಿದ್ದರೂ ನೀರಿಗಿಳಿಯುವುದು ನಿಷೇಧವೆಂಬ  ಫಲಕ ಅವರನ್ನು ತಡೆಹಿಡಿದಿತ್ತು. ಆದರೂ ಕೆಲವರು ನೀರಿನಾಟ ಆಡುವುದರಲ್ಲಿ ಸಫಲರಾದರೆನ್ನಿ! ಹದಿಹರೆಯದವರು ಪಕ್ಕದಲ್ಲಿರುವ ಬೆಟ್ಟವೇರಿ ಮಜಾ ಮಾಡಿದರು. ಅಲ್ಲಿಯೇ, ರಭಸದಿಂದ ನೀರು ಹರಿಯುತ್ತಿರುವ ತೊರೆಯೊಂದು ನದಿಗೆ ಸೇರಿತ್ತು. ಅದರ ಪಕ್ಕದಲ್ಲೇ ಇರುವ ಸೊಗಸಾದ ದಾರಿಯಲ್ಲಿ(Trail) ನಡೆಯುತ್ತಾ ಕಾಲಕಳೆದೆವು. ಈ ನೀರು ಪರ್ವತದ ಮೇಲಿನ ಹಿಮವು ಕರಗಿ ಹರಿಯುವುದಾದ್ದರಿಂದ ತಣ್ಣಗೆ ಕೊರೆಯುತ್ತಿತ್ತು. ಅಂತೂ ಸುಮಾರು ಎರಡು ಕಿ.ಮೀ.ನಷ್ಟು ನಡೆದ ನಮಗೆ ಸಾಕಷ್ಟು ಆಯಾಸವಾಗಿದ್ದರೂ; ಸುತ್ತಲಿನ ಪ್ರಕೃತಿ ಸೌಂದರ್ಯ ಅದನ್ನು ಮರೆಯುವಂತೆ ಮಾಡಿತ್ತು!

ನಮ್ಮೆಲ್ಲರನ್ನೂ ಒಗ್ಗೂಡಿಸಿ, ಅಲ್ಲಿಂದ ನಮ್ಮ RV ನಿಲುಗಡೆ ತಾಣಕ್ಕೆ ಬಸ್ಸು ಹಿಂತಿರುಗುತ್ತಿದ್ದಂತೆ, ರಸ್ತೆ ಪಕ್ಕದ ಗುಡ್ಡಗಳ ತಪ್ಪಲಲ್ಲಿ ಬಹು ದೂರದಲ್ಲಿ ಒಂದೆರಡು ಕಂದು ಕರಡಿಗಳು ಕಂಡವು. ಇದೇ ಮಹಾಭಾಗ್ಯವೆಂದು ಸಂಭ್ರಮದಿಂದ ಕಿಟಿಕಿಯಿಂದ ಬಗ್ಗಿ, ಇಣುಕಿ ನೋಡಿದ್ದೇ ನೋಡಿದ್ದು. … ಆದರೂ ಕೆಲವರ ಕಣ್ಣಿಗೆ ಅದೂ ಬೀಳಲಿಲ್ಲ ಬಿಡಿ. ಅಂತೂ ಎಲ್ಲಾ ಮುಗಿಸಿ ಹಿಂತಿರುಗಿ ಬಂದಾಗ, ನಮ್ಮ RV ಪಕ್ಕದಲ್ಲಿಯೇ ದೊಡ್ಡದಾದೊಂದು Moose ನಿಂತು ಮರದೆಲೆ ಮೇಯುತ್ತಿರುವುದನ್ನು ಕಂಡು ಗಾಬರಿ ಮತ್ತು ಖುಷಿ ಎರಡೂ ಉಂಟಾದುದು ಸುಳ್ಳಲ್ಲ. ಮುಸು ಮುಸು ನಗುತ್ತ ಅದು ಅಲ್ಲಿಂದ ಹಿಂತಿರುಗುವಷ್ಟು ಹೊತ್ತು ನೋಡುತ್ತಾ ನಿಂತೆವು…

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: https://www.surahonne.com/?p=39190

-ಶಂಕರಿ ಶರ್ಮ, ಪುತ್ತೂರು

7 Responses

  1. ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು.. ಅದಕ್ಕೆ ಪೂರಕವಾದ ಚಿತ್ರಗಳು..ಸೊಗಸಾದ ನಿರೂಪಣೆ ಮನಕ್ಕೆ ಮುದ ತಂದಿತು ಶಂಕರಿ ಮೇಡಂ

  2. ನಯನ ಬಜಕೂಡ್ಲು says:

    ಇಂತಹ ಅದ್ಭುತ ಪ್ರವಾಸವನ್ನು ಕೈಗೊಳ್ಳುವುದು ಕನಸಿನ ಮಾತೇ ಸರಿ. ಶಂಕರಿ ಮೇಡಂ, ನಿಮ್ಮ ಲೇಖನದ ಮೂಲಕವೇ ನಮ್ಮನ್ನೆಲ್ಲ ಸುಂದರ ಸ್ಥಳಗಳಲ್ಲಿ ಸುತ್ತಾಡಿಸುತ್ತ ಇದ್ದೀರಿ, ಧನ್ಯವಾದಗಳು ನಿಮಗೆ.

  3. Anonymous says:

    ಓಹ್. ಚೆನ್ನಾಗಿದೆ ನಿಮ್ಮ ಪ್ರವಾಸ ಕಥನ. ವಿಶೇಷತೆಗಳಿಗೆ ಅಭಿನಂದನೆಗಳು.

  4. ಪದ್ಮಾ ಆನಂದ್ says:

    ಹಿಮನಾಯಿಗಳ ವಿವರಣೆಯೊಂದಿಗೆ ಎಂದಿನಂತೆ ಪ್ರವಾಸೀ ಕಥನ ಆಸಕ್ತಿದಾಯಕವಾಗಿ ಓದಿಸಿಕೊಂಡಿತು.

  5. Padmini Hegde says:

    ಕಥನ ಆಸಕ್ತಿದಾಯಕವಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: