ಕಲ್ಲರಳಿ ಹೂವಾದ ನಾಗಾಲ್ಯಾಂಡ್‌ನಲ್ಲಿರುವ ಕಛಾರಿ ಕಂಬಗಳು
ಎಲ್ಲಿ ನೋಡಿದರೂ ಗುಡ್ಡ ಗಾಡುಗಳು, ಒಂದೊಂದು ರಾಜ್ಯದಲ್ಲೂ ನಾಲ್ಕಾರು ಬುಡಕಟ್ಟು ಜನಾಂಗಗಳು, ಅವರ ಭಾಷೆ, ಧರ್ಮ, ಬದುಕುವ ರೀತಿ ನೀತಿಗಳೆಲ್ಲಾ ಬೇರೆ ಬೇರೆಯೇ. ಸದಾ ಒಬ್ಬರ ಮೇಲೊಬ್ಬರು ಆಕ್ರಮಣ ಮಾಡುತ್ತಾ ತಮ್ಮ ತಮ್ಮ ಪ್ರಾಂತ್ಯದ ಎಲ್ಲೆಯನ್ನು ವಿಸ್ತರಿಸಿಕೊಳ್ಳುತ್ತಾ ಬದುಕುತ್ತಿದ್ದ ಇವರ ಮಧ್ಯೆ ‘ತಲೆಬೇಟೆಯ ನಾಗಾಗಳೆಂಬ’ ಹೆಸರು ಹೊಂದಿದ್ದ ಬುಡಕಟ್ಟಿನ ಜನಾಂಗದವರು ಇದ್ದರಂತೆ. ಹೋರಾಟ ಮಾಡುವಾಗ ತಾವು ಹತ್ಯೆ ಮಾಡಿದ ಶತ್ರುಗಳ ತಲೆಬುರುಡೆಗಳನ್ನು ಮನೆಯ ಮುಂದೆ ತೋರಣ ಮಾಡಿ ಅಲಂಕರಿಸುತ್ತಿದ್ದರಂತೆ. ಹೆಚ್ಚು ತಲೆಬೇಟೆಯಾಡಿದವನೇ ಗುಂಪಿನ ನಾಯಕನೆಂದು ಪರಿಗಣಿಸಲ್ಪಡುತ್ತಿತ್ತು. ಅಬ್ಬಾ, ಇಂತಹ ಅಮಾನುಷ ಕ್ರೌರ್ಯಕ್ಕೆ ಸಾಟಿಯೆಲ್ಲಿದೆ? ಇದು ನಾಗಾಲ್ಯಾಂಡಿನ ಕಥೆ. ಇಂತಹ ನಾಡಿಗೆ ಭೇಟಿ ನೀಡಲು ಒಂದು ಬಗೆಯ ಕುತೂಹಲ, ಭಯ ಕಾಡಿತ್ತು. ಜೊತೆಗೆ ನಮ್ಮ ಪ್ರವಾಸೀ ತಂಡದ ಮ್ಯಾನೇಜರ್ ನಮ್ಮನ್ನು ಮೊದಲೇ ಎಚ್ಚರಿಸಿದ್ದರು – ಹೊಟೇಲಿನಿಂದ ಹೊರಗೆ ಒಂಟಿಯಾಗಿ ತಿರುಗಾಡಲು ಎಲ್ಲಿಯೂ ಹೋಗಬೇಡಿ.
ನಾವು ಬೆಂಗಳೂರಿನಿಂದ ದಿಮಾಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಗಂಟೆ ಹನ್ನೆರಡಾಗಿತ್ತು. ನೇರವಾಗಿ ನಾವು ‘ಕಛಾರಿ ಶಿಲೆಗಳನ್ನು’ ನೋಡಲು ಹೊರಟೆವು. ಬಯಲಲ್ಲಿ ಸಾಲು ಸಾಲಾಗಿ ನಿಲ್ಲಿಸಿದ್ದ ಅಣಬೆ ಆಕಾರದ ಕಂಬಗಳನ್ನು ನೋಡಿ ಬೆರಗಾದೆವು. ಕೆಲವು ಕಂಬಗಳು ಕಾಲನ ತುಳಿತಕ್ಕೆ ಸಿಕ್ಕು ಕೆಳಗುರುಳಿದ್ದವು. ಈ ಕಂಬಗಳ ಇತಿಹಾಸ ನಿಖರವಾಗಿ ತಿಳಿದು ಬಂದಿಲ್ಲ. ಕೆಲವು ಕಂಬಗಳು ಹನ್ನೆರೆಡು ಅಡಿಯಷ್ಟು ಎತ್ತರವಾಗಿದ್ದರೆ ಮತ್ತೆ ಕೆಲವು ಎಂಟು, ಒಂಭತ್ತು ಅಡಿಯಷ್ಟಿವೆ. ಈ ಕಂಬಗಳನ್ನು ಸ್ಯಾಂಡ್‌ಸ್ಟೋನ್‌ನಿಂದ ನಿರ್ಮಿಸಲಾಗಿದ್ದು, ಕಂಬಗಳ ಮೇಲೆಲ್ಲಾ ಹಲವು ಬಗೆಯ ಕೆತ್ತನೆಗಳನ್ನು ಮಾಡಲಾಗಿತ್ತು. ಕಂಬಗಳ ಮೇಲೆ ಕಮಲದ ಹೂ, ಕುದುರೆಗಳು, ನವಿಲುಗಳು, ಬಗೆ ಬಗೆಯ ಪಕ್ಷಿಗಳು ಹಾಗೂ ಹಲವು ಬಗೆಯ ರೇಖಾ ಗಣಿತದ ಆಕೃತಿಗಳನ್ನು ಬಿಡಿಸಲಾಗಿತ್ತು. ಸುಮಾರು ನೂರು ಕಂಬಗಳನ್ನು ಮೂರು ಸಾಲಿನಲ್ಲಿ ನಿಲ್ಲಿಸಲಾಗಿದ್ದು, ಕೆಲವು ಸುಸ್ಥಿತಿಯಲ್ಲಿದ್ದರೆ, ಮತ್ತೆ ಕೆಲವು ದುಃಸ್ಥಿತಿಯಲ್ಲಿವೆ.
ಪುರಾತತ್ವಶಾಸ್ತ್ರಜ್ಞರ ಪ್ರಕಾರ – ಸುಮಾರು ಎಂಟು ಅಥವಾ ಹತ್ತನೆಯ ಶತಮಾನದಲ್ಲಿ ಈ ಪ್ರದೇಶವನ್ನು ಆಳಿದ ದಿಮಾಸ ಕಛಾರಿ ರಾಜವಂಶಸ್ಥರು ಈ ಶಿಲಾಕೃತಿಗಳನ್ನು ರಚಿಸಿರಬಹುದು. ಧನಸಿರಿ ಎಂಬ ನದಿಯ ದಡದಲ್ಲಿ ತಮ್ಮ ನಾಡನ್ನು ಕಟ್ಟಿದ ಅರಸರು, ತಮ್ಮ ರಾಜ್ಯವನ್ನು ಶತ್ರುಗಳಿಂದ ಸಂರಕ್ಷಿಸಲು ಮೂರು ಕಡೆ ಕೋಟೆಯನ್ನು ಕಟ್ಟಿದರು, ಈಗ ಉಳಿದಿರುವುದು ಒಂದು ಬದಿಯಲ್ಲಿರುವ ಕೋಟೆ ಗೋಡೆ ಮಾತ್ರ, ಚಪ್ಪಟೆ ಕಲ್ಲುಗಳನ್ನು ಗಾರೆಯ ಸಹಾಯವಿಲ್ಲದೆ ಜೋಡಿಸಲಾಗಿರುವ ಗೋಡೆಯಿದು. ಇಂದಿಗೂ ಭದ್ರವಾಗಿ ನಿಂತಿರುವ ಕೋಟೆಯನ್ನು ನೋಡಿದಾಗ ಅಚ್ಚರಿಯಾಗುವುದು ಸಹಜ. ದಿಮಾಪುರ್ ಎಂದರೆ – ದಿ ಎಂದರೆ ನದಿ, ಮಾ ಎಂದರೆ ದೊಡ್ಡದಾದ, ಪುರ್ ಎಂದರೆ ನಗರ. ಈ ಕಂಬಗಳ ನಿರ್ಮಾಣದ ಹಿಂದಿನ ರಹಸ್ಯವಾದರೂ ಏನು? ಈ ಪ್ರಶ್ನೆಗೆ ಹಲವು ಉತ್ತರಗಳನ್ನು ಪ್ರವಾಸಿಗರ ಮುಂದೆ ಇಡಲಾಗಿದೆ. ಉತ್ತರಗಳನ್ನು ಒಂದೊಂದಾಗಿ ಪರಿಶೀಲಿಸೋಣ ಬನ್ನಿ. ನಾಡಿನ ದೊರೆಗಳು ಯುದ್ಧಗಳಲ್ಲಿ ಜಯಶಾಲಿಗಳಾದಾಗ ತಮ್ಮ ಗೆಲುವಿನ ಸಂಕೇತವಾಗಿ ಈ ಶಿಲ್ಪ ಕಲಾಕೃತಿಗಳನ್ನು ನಿಲ್ಲಿಸಿರಬಹುದು. ಮತ್ತೆ ಕೆಲವರ ವಾದ ಹೀಗಿದೆ – ನಾಡಿನ ದೊರೆಗಳು ನಿಧನರಾದಾಗ ಅವರ ನೆನೆಪಿಗಾಗಿ ರಚಿಸಲ್ಪಟ್ಟ ಸ್ಮಾರಕಗಳು. ಈ ಕಂಬಗಳ ಗಾತ್ರ ಆಯಾ ರಾಜರ ಸಾಧನೆಯ ಅಳತೆಗೋಲಾಗಿರಬಹುದು. ಇನ್ನೊಂದು ಕಥೆ ಹೀಗಿದೆ – ದೊರೆಗಳು ಚೆಸ್ ಆಟವನ್ನು ಹೋಲುವಂತಹ ಕ್ರೀಡೆಯನ್ನು ಈ ಕಂಬಗಳ ನೆರವಿನಿಂದ ಆಡುತ್ತಿದ್ದರಂತೆ. ಹಾಗಾಗಿ ಈ ಕಂಬಗಳಿಗೆ ಚೆಸ್‌ಮೆನ್ ಪಿಲ್ಲರ್‍ಸ್ ಎಂಬ ಹೆಸರೂ ಪ್ರಚಲಿತವಾಗಿದೆ. ಮತ್ತೊಂದೆರಡು ಕಥೆಗಳು ಧರ್ಮದ ಆಧಾರದ ಮೇಲೆ ನಿಂತಿದೆ – ಪ್ರಾಚೀನ ಕಾಲದಲ್ಲಿ, ಈ ಪ್ರದೇಶದಲ್ಲಿ ಬೌದ್ಧ ಧರ್ಮವು ಪ್ರಚಲಿತವಾಗಿದ್ದುದರಿಂದ, ಈ ಕಂಬಗಳು ಬೌದ್ಧಸ್ತೂಪಗಳಾಗಿರಬಹುದೆಂಬ ವಿವರಣೆಯೂ ಲಭ್ಯ. ಮತ್ತೆ ಕೆಲವರು ಹೇಳುವಂತೆ – ಹಿಂದೆ ಇಲ್ಲಿ ಶೈವಪಂಥದ ಅನುಯಾಯಿಗಳು ಇದ್ದರಂತೆ. ಶೈವರು ನಿರ್ಮಿಸಿರುವ ಶಿವಲಿಂಗದ ಆಕೃತಿಗಳು ಎಂದು ಕೆಲವು ತಜ್ಞರು ಅಭಿಪ್ರಾಯ ಪಡುತ್ತಾರೆ. ಇನ್ನೂ ಕೆಲವರು, ಈ ಕಂಬಗಳು ಪುರುಷ ಜನನೇಂದ್ರಿಯವನ್ನು ಹೋಲುವುದರಿಂದ, ಫಲವತ್ತತೆಯ ಪ್ರತೀಕವೆಂಬ ಸಿದ್ಧಾಂತವನ್ನೂ ಮಂಡಿಸುತ್ತಾರೆ.
ಕಛಾರಿ ಕಂಬಗಳ ಐತಿಹಾಸಿಕ ವಿವರಗಳು, ಜಾನಪದ ಕಥೆಗಳು, ಪುರಾತತ್ವಶಾಸ್ತ್ರಜ್ಞರ ಸಿದ್ಧಾಂತಗಳೇನೇ ಇರಲಿ, ಈ ಕಂಬಗಳು ಈಶಾನ್ಯ ರಾಜ್ಯಗಳನ್ನಾಳಿದ ಅರಸರ ಭವ್ಯವಾದ ಚರಿತ್ರೆಯನ್ನು ನಮ್ಮ ಮುಂದೆ ತೆರೆದಿಡುತ್ತವೆ. ಇಂತಹ ಅದ್ಭುತವಾದ ಶಿಲ್ಪ ಕಲೆ ನಾಗಾ ಬುಡಕಟ್ಟು ಜನರ ಕೊಡುಗೆಯಂತೂ ಅಲ್ಲ, ಹಾಗಿದ್ದಲ್ಲಿ ಈ ಕಂಬಗಳನ್ನು ಕೆತ್ತಿದ ಶಿಲ್ಪಿಗಳನ್ನು ಎಲ್ಲಿಂದ ಕರೆತಂದಿರಬಹುದು, ಬಹುಶಃ ಒಡಿಶಾ ರಾಜ್ಯದಿಂದ ಬಂದ ಶಿಲ್ಪಿಗಳಿರಬಹುದೆಂಬ ಅಭಿಪ್ರಾಯ ವಿದ್ವಾಂಸರದು. ಕಛಾರಿ ಕಂಬಗಳು ಈ ನಾಡಿನ ಚಾರಿತ್ರಿಕ ಹಾಗೂ ಶಿಲ್ಪ ಕಲೆಯು, ಗತಕಾಲದ ವೈಭವಕ್ಕೆ ಸಾಕ್ಷಿಯಾಗಿ ಕಲ್ಲರಳಿ ಹೂವಾದಂತೆ ನಿಂತಿವೆ.
– ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ಕುತೂಹಲಕಾರಿ ವಿಷಯ. ಧನ್ಯವಾದಗಳು ಮೇಡಂ
ಕುತೂಹಲ ಕಾರಿ ಮಾಹಿತಿಯುಳ್ಳ ಲೇಖನ ಮೇಡಂ
Thank you friends
ಕಛಾರಿ ಶಿಲೆಗಳ ಕುರಿತಾದ ವಿವರಗಳೊಂದಿಗೆ ಎಷ್ಟೊಂದು ಸಾಧ್ಯತೆಗಳ ಕುರಿತಾದ ವಿವರಣೆ ನೀಡುವ ಕುತೂಹಲಭರಿತ ಲೇಖನ
ನಾಗಾಲ್ಯಾಂಡಿನಲ್ಲಿರುವ ಮರಳು ಕಲ್ಲಿನ ವಿಚಿತ್ರ ಕಛಾರಿ ಕಂಬಗಳ ಕುರಿತ ಲೇಖನ ಬಹಳ ಕುತೂಹಲಕಾರಿಯಾಗಿದೆ ಮೇಡಂ… ಧನ್ಯವಾದಗಳು.
Beautiful