ನಾಗಲ್ಯಾಂಡಿನ ಹಸಿರು ಗ್ರಾಮ ಖೊನೋಮಾ
ಹಿಂದೆ ರಣರಂಗವಾಗಿದ್ದ ಖೊನೋಮಾ ಇಂದು ಹಸಿರು ಗ್ರಾಮವಾಗಿ ಎಲ್ಲರ ಮನ ಗೆದ್ದಿದೆ. ಖೊನೋಮಾ ನಿಂತಿರುವುದು ನಾಲ್ಕು ತತ್ವಗಳ ಮೇಲೆ – ಪ್ರಾಮಾಣಿಕತೆ, ಸ್ವಚ್ಛತೆ, ನಿಸ್ವಾರ್ಥ ಮನೋಭಾವ ಹಾಗೂ ವಾತ್ಸಲ್ಯದ ಅನುಬಂಧ. ಇವರ ಗುರಿ – ತಮ್ಮ ನಾಡನ್ನು ಆದರ್ಶ ಗ್ರಾಮವನ್ನಾಗಿ ಮಾಡಬೇಕೆಂಬ ಹಂಬಲ. ನಾಗಾಲ್ಯಾಂಡಿನ ರಾಜಧಾನಿ ಕೊಹಿಮಾದಿಂದ ಇಪ್ಪತ್ತು ಕಿ.ಮೀ.ದೂರದಲ್ಲಿರುವ ಖೊನೋಮಾ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿತ್ತು. ನಾಲ್ಕು ದಶಕಗಳ ಕಾಲ ಬ್ರಿಟಿಷರೊಂದಿಗೆ ಹೋರಾಡಿದ ಕೆಚ್ಚೆದೆಯ ಶೂರರ ನಾಡಿದು. ಶತ್ರುಗಳಿಂದ ತಮ್ಮ ಗ್ರಾಮವನ್ನು ಸಂರಕ್ಷಿಸಲು ಸುತ್ತಲೂ ಕೋಟೆಯನ್ನು ಕಟ್ಟಿ, ಸದಾ ಕಾವಲು ಕಾಯುತ್ತಿದ್ದರು.
ನಾವು ಕೊಹಿಮಾದಿಂದ ಹೊರಟವರು, ಸುತ್ತಲಿನ ರಮಣೀಯವಾದ ನಿಸರ್ಗವನ್ನು ವೀಕ್ಷಿಸುತ್ತಾ ಖೊನೋಮಾ ತಲುಪಿದಾಗ ಮುಂಜಾನೆ ಒಂಭತ್ತು ಗಂಟೆಯಾಗಿತ್ತು. ಒಂದೆಡೆ ಬಂಗಾರದ ಬಣ್ಣ ಹೊತ್ತು ಕಂಗೊಳಿಸುತ್ತಿದ್ದ ಭತ್ತದ ಗದ್ದಗಳು, ಇನ್ನೊಂದೆಡೆ ಹಸಿರನ್ನು ಹೊದ್ದು ಮಲಗಿದ್ದ ಬೆಟ್ಟ ಗುಡ್ಡಗಳು, ಮತ್ತೊಂದೆಡೆ ಎಂಟು ದ್ವಾರಗಳನ್ನು ಹೊಂದಿದ್ದ ಕೋಟೆಯ ಮಧ್ಯೆ ಅಂಗಾಮಿ ಬುಡಕಟ್ಟು ಜನಾಂಗದವರು ಕಟ್ಟಿದ ಪುಟ್ಟ ಗ್ರಾಮ ಖೊನೋಮಾ. ಸಧೃಢ ಮೈಕಟ್ಟನ್ನು ಹೊಂದಿದ, ಧೈರ್ಯ, ಸಾಹಸ, ಶೌರ್ಯಕ್ಕೆ ಹೆಸರಾದ ಅಂಗಾಮಿ ಜನಾಂಗದವರು ಗೆರಿಲ್ಲಾ ಯುದ್ಧ ಕೌಶಲದಲ್ಲಿ ಪರಿಣಿತಿ ಪಡೆದಿದ್ದರು. ನಾವು ಪ್ರವೇಶಿಸಿದ ಮುಖ್ಯ ದ್ವಾರದ ಬಳಿ ಇವರ ರಾಷ್ಟ್ರೀಯ ಲಾಂಛನಗಳಾದ – ಗುಂಡಾದ ಎರಡು ಕಣ್ಣುಗಳು, ಮೇರುವಿನ (ಎತ್ತು) ಎರಡು ಕೊಂಬುಗಳು ಮತ್ತು ರಾಷ್ಟ್ರೀಯ ಪಕ್ಷಿಯಾದ ಟ್ರಾಗೋಪಾನ್ ಹಕ್ಕಿಯ ರೆಕ್ಕೆ ಪುಕ್ಕಗಳು. ಕಣ್ಣುಗಳು ಸೂರ್ಯ ಚಂದ್ರರನ್ನು ಬಿಂಬಿಸುವ ಜೊತೆಗೇ ಇವರ ತಾಯ್ನಾಡನ್ನು ಸದಾ ಎಚ್ಚರದಿಂದ ಕಾಯುವ ರೂಪಕಗಳಾದರೆ, ಎತ್ತಿನ ಕೊಂಬುಗಳು ಮತ್ತು ಹಕ್ಕಿಯ ಪುಕ್ಕಗಳು ಸಂಪತ್ತು, ಸಮೃದ್ಧಿಯ ಸಂಕೇತಗಳಾಗಿ ನಿಲ್ಲುತ್ತವೆ. ಇವರ ಶ್ರೀಮಂತಿಕೆಯನ್ನು ಅಳೆಯುವ ಸಾಧನ – ಗೋ ಸಂಪತ್ತು ಮತ್ತು ಕಣಜದಲ್ಲಿ ತುಂಬಿದ್ದ ದವಸ ಧಾನ್ಯವಾಗಿತ್ತು.
ಕೋಟೆಯ ಬಾಗಿಲ ಮುಂದಿದ್ದ ಸಾಲು ಸಾಲಾದ ನೂರಿನ್ನೂರು ಮೆಟ್ಟಿಲುಗಳು ನಮ್ಮ ತಂಡದಲ್ಲಿದ್ದ ಹಿರಿಯರಿಗೆ ಸವಾಲನ್ನು ಹಾಕುವಂತಿದ್ದವು. ನಮಗೆ ಮಾರ್ಗದರ್ಶಕರಾಗಿದ್ದ ಖೊನೋಮಾದ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಅಂಗಾಮಿಗಳ ಇತಿಹಾಸವನ್ನು ಸ್ವಾರಸ್ಯಕರವಾಗಿ ವಿವರಿಸುತ್ತಾ ಎಲ್ಲರನ್ನೂ ಕರೆದೊಯ್ಯುವಲ್ಲಿ ಸಫಲರಾದರು. ನಮ್ಮನ್ನು ಒಂದು ದಿಬ್ಬದ ಮೇಲಿದ್ದ ಕಟ್ಟಡವೊಂದಕ್ಕೆ ಕರೆದೊಯ್ದು, ಆ ಸ್ಥಳದ ರೋಚಕ ಘಟನೆಗಳನ್ನು ಹೇಳಿದರು. ಒಮ್ಮೆ ಬ್ರಿಟಿಷರು ಆಕ್ರಮಣ ಮಾಡಿದಾಗ, ನಾಗಾಗಳು ಬೆಟ್ಟದ ನೆತ್ತಿಯ ಮೇಲೆ ಒಂದು ಗುಂಡಿಯನ್ನು ಅಗೆದು, ತಮ್ಮ ಕುಟುಂಬದ ಎಲ್ಲಾ ಮಕ್ಕಳನ್ನೂ ಮತ್ತು ಸ್ತ್ರೀಯರನ್ನೂ ಅವಿಸಿಟ್ಟರಂತೆ. ಶತ್ರುಗಳು, ಆ ಬೆಟ್ಟಕ್ಕೆ ಬರದಂತೆ ತಡೆಯಲು, ಬಂಡೆಗಳನ್ನೂ ಮತ್ತು ಮರಗಳನ್ನೂ ಕಡಿದು ಮಾರ್ಗಮಧ್ಯೆ ಉರುಳಿಸಿದರಂತೆ. ನಾಗಾ ಯೋಧರು ನಾಲ್ಕು ತಿಂಗಳುಗಳ ಕಾಲ ಸುದೀರ್ಘವಾದ ಹೋರಾಟ ನಡೆಸಿದಾಗ ರೊಚ್ಚಿಗೆದ್ದ ಬ್ರಿಟಿಷರು, ಆ ಗ್ರಾಮಕ್ಕೆ ಬೆಂಕಿಯಿಟ್ಟು ಭಸ್ಮ ಮಾಡಿದರೂ, ನಾಗಾ ಯೋಧರು ಸೋತು ಶರಣಾಗಲಿಲ್ಲ. ಯುದ್ಧದಲ್ಲಿ ಸೆರೆ ಸಿಕ್ಕ ನಾಗಾ ಯೋಧರಿಗೆ ಬ್ರಿಟಿಷರು ನೀಡುತ್ತಿದ್ದ ಚಿತ್ರಹಿಂಸೆಯ ವಿವರವನ್ನು ಹೇಳುವಾಗ, ನಮ್ಮ ಗೈಡ್ ಗದ್ಗದಿತನಾಗಿದ್ದ. ಯುದ್ಧದಲ್ಲಿ ಸಾವು ನೋವುಗಳ ಲೆಕ್ಕವಿಟ್ಟವರಾರು? ಈ ಭೀಕರವಾದ ಕಾಳಗಕ್ಕೆ ಸಾಕ್ಷಿಯಾಗಿ ನಿಂತ ವಿಲ್ಲೋ ಮರಗಳು, ತಮ್ಮ ರೆಂಬೆ ಕೊಂಬೆಗಳನ್ನು ಬಾಗಿಸಿ ಮೌನವಾಗಿ ರೋಧಿಸುತ್ತಿದ್ದವು.
ಬ್ರಿಟಿಷರ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿದ್ದರೆ, ನಾಗಾಗಳ ಬಳಿ ಇದ್ದ ಆಯುಧಗಳು ಭರ್ಜಿ, ಬಿಲ್ಲು ಬಾಣಗಳು ಇತ್ಯಾದಿ. ಕೆಲವು ನಾಗಾ ಯೋಧರು ಬ್ರಿಟಿಷರ ಬಳಿಯಿದ್ದ ಬಂದೂಕುಗಳನ್ನು ಅಪಹರಿಸಿ, ಗುಂಡು ಹಾರಿಸುವುದನ್ನು ಕಲಿತರು. 1880 ರಲ್ಲಿ ನಡೆದ ಭೀಕರ ಕಾಳಗದಲ್ಲಿ ಶತ್ರು ಪಡೆಯ ಇಪ್ಪತ್ತೇಳು ಜನರನ್ನು ಹೊಡೆದುರುಳಿಸಿದರು. ಕೋಟೆಯ ಮೇಲ್ಭಾಗದಲ್ಲಿ ದಮಾಂತ್ ಎಂಬ ಬ್ರಿಟಿಷ್ ಸೇನಾಧಿಕಾರಿಯನ್ನು ಹೂಳಿದ್ದ ಸಮಾಧಿಯನ್ನು ಹೆಮ್ಮೆಯಿಂದ ತೋರಿಸಿದ ನಮ್ಮ ಗೈಡ್. ಗೆರಿಲ್ಲಾ ಯುದ್ಧದಲ್ಲಿ ನಿಷ್ಣಾತರಾಗಿದ್ದ ನಾಗಾಗಳನ್ನು ಸೋಲಿಸಲಾಗದೆ, ಬ್ರಿಟಿಷರು 1880 ರಲ್ಲಿ ಇವರೊಡನೆ ಶಾಂತಿ ಸಂಧಾನ ಮಾಡಿಕೊಂಡರು. 1890 ರಲ್ಲಿ ಸೈನಿಕರ ಬದಲಿಗೆ ಕ್ರಿಶ್ಚಿಯನ್ ಪಾದ್ರಿಗಳನ್ನು ಕಳುಹಿಸಿದ ಬ್ರಿಟಿಷರು ನಾಗಾಲ್ಯಾಂಡಿನ ಪ್ರಜೆಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಿದರು. ಇಂದು ನಾಗಾಲ್ಯಾಂಡಿನಲ್ಲಿರುವ ನಾಗರೀಕರಲ್ಲಿ 99 ಪ್ರತಿಶತ ಕ್ರಿಶ್ಚಿಯನ್ನರು. ಬ್ರಿಟಿಷರು ನಾಗಾಗಳನ್ನು ರಾಜಕೀಯವಾಗಿ ಸೋಲಿಸಲಾಗದಿದ್ದಾಗ ಧಾರ್ಮಿಕವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದರಲ್ಲಿ ಸಫಲರಾದರು.
ಖೊನೋಮಾದ ಕೋಟೆಯ ಮೇಲೇರಿ ನಿಂತಾಗ ಕಂಡ ದೃಶ್ಯ ಅದ್ಭುತವಾಗಿತ್ತು. ಎಲ್ಲೆಲ್ಲೂ ಬಣ್ಣ ಬಣ್ಣದ ಹೂಗಳನ್ನು ಹೊತ್ತ ಗಿಡಮರಗಳು, ಹೂಗಳು ಸೂಸುವ ಪರಿಮಳಕ್ಕೆ ಆಕರ್ಷಿಸಲ್ಪಟ್ಟ ದುಂಬಿಗಳು, ಪಕ್ಷಿಗಳು ಹೂವಿನಿಂದ ಹೂವಿಗೆ ಹಾರುತ್ತಿದ್ದವು. ಸುಂದರವಾದ ಪರಿಸರ ನೊಡುತ್ತಾ ನಿಧಾನವಾಗಿ ಮೆಟ್ಟಿಲುಗಳನ್ನು ಇಳಿಯತೊಡಗಿದೆವು. ಅಲ್ಲೊಂದು ಸಮತಟ್ಟಾದ ನೆಲದ ಮೇಲೆ ವೃತ್ತಾಕಾರದ ವೇದಿಕೆ. ಸುತ್ತಲೂ ಚೌಕಾಕಾರದ ಕಲ್ಲಿನ ಆಸನಗಳಿದ್ದವು. ದಾಹು (ನಮ್ಮಲ್ಲಿದ್ದ ಪಂಚಾಯಿತಿ ಕಟ್ಟೆಗಳು) ಎಂಬ ಹೆಸರಿನಿಂದ ಕರೆಯಲ್ಪಡುವ ಈ ಸ್ಥಳದಲ್ಲಿ, ತಪ್ಪು ಮಾಡಿದ ಜನರ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಲಾಗುತ್ತಿತ್ತು. ನ್ಯಾಯ ನೀಡುತ್ತಿದ್ದ ಪಂಚರ ನ್ಯಾಯಾಲಯವಾಗಿತ್ತು. ಹತ್ತಿರದಲ್ಲಿ ಸಮುದಾಯಕ್ಕೆ ಸೇರಿದ ಅಡುಗೆ ಕೋಣೆ ಇತ್ತು. ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಊಟ ಮಾಡುವ ವ್ಯವಸ್ಥೆ ಇತ್ತು. ಅಲ್ಲಿಂದ ಮುಂದೆ ಸಾಗಿದ ನಮಗೆ ಅಚ್ಚರಿಯೊಂದು ಕಾದಿತ್ತು. ಅವರ ಮನೆಗಳ ಪಕ್ಕದಲ್ಲಿ ಹಿರಿಯರ ಸಮಾಧಿಗಳು, ಅವುಗಳ ಮೇಲಿದ್ದ ಹೂಗುಚ್ಛಗಳನ್ನು ಕಂಡಾಗ ದಿಗ್ಭ್ರಾಂತರಾದೆವು. ಕುಟುಂಬದ ಹಿರಿಯರ ಮರಣಾನಂತರ ಅವರ ಸಮಾಧಿಗಳನ್ನು ಮನೆಯ ಸುತ್ತಮುತ್ತ ಕಟ್ಟುವರು, ಹಿರಿಯರ ಆತ್ಮಗಳು ತಮ್ಮ ಕುಟುಂಬಗಳನ್ನು ಕಾಪಾಡುವರು ಎಂಬ ಅಚಲವಾದ ನಂಬಿಕೆ ಇವರದು. ಸಮಾಧಿಗಳನ್ನು ಊರ ಹೊರ ವಲಯದಲ್ಲಿ ಕಟ್ಟುವ ನಾವು, ಇವರ ವಿಚಿತ್ರವಾದ ಸಂಪ್ರದಾಯವನ್ನು ನೋಡಿ ಬೆರಗಾದೆವು.
ರಣರಂಗವಾಗಿದ್ದ ಖೊನೋಮಾ ಏಷ್ಯಾದಲ್ಲಿಯೇ ಮೊಟ್ಟ ಮೊದಲ ಹಸಿರು ಗ್ರಾಮವಾಗಿದ್ದಾದರೂ ಹೇಗೆ? ನಮ್ಮ ಗೈಡ್ ಹೇಳಿದ ವಿವರಗಳನ್ನು ಕೇಳೋಣ ಬನ್ನಿ. ಇವರ ಮುಖ್ಯ ಕಸುಬು ವ್ಯವಸಾಯ ಮತ್ತು ಬೇಟೆಯಾಗಿತ್ತು. ಕಾಡಿನ ಒಂದು ಭಾಗಕ್ಕೆ ಬೆಂಕಿ ಹಾಕಿ, ಆ ಸ್ಥಳದಲ್ಲಿ ಎರಡು ಮೂರು ವರ್ಷ ವ್ಯವಸಾಯ ಮಾಡುತ್ತಿದ್ದರು. ನಂತರದಲ್ಲಿ, ಬೇರೆ ಸ್ಥಳಕ್ಕೆ ವಲಸೆ ಹೋಗಿ, ಪುನಃ ಕಾಡಿಗೆ ಬೆಂಕಿ ಹಾಕಿ ವ್ಯವಸಾಯ ಮುಂದುವರೆಸುತ್ತಿದ್ದರು. ವರ್ಷಗಳು ಉರುಳಿದಂತೆ ಅರಣ್ಯ ಬರಿದಾಗುತ್ತಾ ಬಂತು. ಇವರ ಬೇಟೆಗೆ ಬಲಿಯಾದ ಕಾಡು ಪ್ರಾಣಿಗಳ ಸಂಖ್ಯೆ ಕ್ಷೀಣಿಸುತ್ತಾ ಬಂತು. ಇದರಿಂದ ಎಚ್ಚೆತ್ತ ಪ್ರಜ್ಞಾವಂತರ ತಂಡ, ತಮಗೆ ಬದುಕು ಕಟ್ಟಿಕೊಟ್ಟಿರುವ ನಿಸರ್ಗವನ್ನು ಸಂರಕ್ಷಿಸಲು ಹಲವು ನಿರ್ಧಾರಗಳನ್ನು ಕೈಗೊಂಡಿತು. ಬೇಟೆಯಾಡುವುದನ್ನು ನಿಷೇಧಿಸಿದರು, ಜೂಮ್ ವ್ಯವಸಾಯ ಪದ್ಧತಿಯನ್ನು ಕೈ ಬಿಟ್ಟರು ಹಾಗೂ ಮರ ಕಡಿಯುವುದನ್ನು ನಿಲ್ಲಿಸಿದರು. ಬೇಟೆಯಾಡುವುದು ನಾಗಾಗಳ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ರಿಯೆಯಾಗಿತ್ತು. ಹಾಗಾಗಿ ಈ ನಿಯಮಗಳನ್ನು ಪಾಲಿಸಲು ಇವರಿಗೆ ಸುಮಾರು ಐದು ವರ್ಷಗಳ ಅವಧಿ ಬೇಕಾಯಿತು. ಇವರ ನಿರಂತರ ಪ್ರಯತ್ನದ ಫಲವೇ ಭಾರತದ ಮೊದಲ ಹಸಿರು ಗ್ರಾಮವಾಗಿ ನಮ್ಮ ಕಣ್ಣ ಮುಂದೆ ನಿಂತಿರುವ ಸುಂದರವಾದ ‘ಹಸಿರು ಗ್ರಾಮ’ ಖೊನೋಮಾ. ವೀರಯೋಧರ ನಾಡಾಗಿದ್ದ ಖೊನೋಮಾ ಇಂದು ಪರಿಸರ ಯೋಧರ ನಾಡಾಗಿ ಪರಿವರ್ತನೆಯಾಗಿದೆ. 1998 ರಲ್ಲಿ ಇಪ್ಪತ್ತು ಚದರ ಕಿ.ಮೀ. ವ್ಯಾಪ್ತಿಯಲ್ಲಿ ಖೊನೋಮಾ ಪ್ರಕೃತಿ ಸಂರಕ್ಷಣೆ ಮತ್ತು ಟ್ರಾಗೋಪಾನ್ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಲಾಯಿತು. ಇಂದು ಖೊನೋಮಾದಲ್ಲಿ ಎಂಭತ್ತು ಪ್ರತಿಶತ ಜನ ಅಕ್ಷರಸ್ಥರಾಗಿದ್ದಾರೆ. ತಮ್ಮ ಕುಲ ಕಸುಬಾದ ಬೇಟೆ ಮತ್ತು ಮರ ಕಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಇವರು ಕೈಮಗ್ಗಗಳಲ್ಲಿ ನೇಯ್ದ ಶಾಲು ಮತ್ತು ಸ್ವೆಟರ್‌ಗಳನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ಮಾರುವ ವ್ಯವಸ್ಥೆಯಿದೆ.
ಕಳಿಂಗ ಯುದ್ಧದಲ್ಲಿ ಜಯಶಾಲಿಯಾದ ಅಶೋಕನು, ಯುದ್ಧಭೂಮಿಯಲ್ಲಿ ಸಂಭವಿಸಿದ ಸಾವು ನೋವು ಕಂಡು ದಿಗ್ಭ್ರಾಂತನಾಗಿ, ಮುಂದೆ ಬೌದ್ಧ ಸನ್ಯಾಸಿಯಾಗಿ ಅಹಿಂಸೆ, ಸತ್ಯದ ಮಾರ್ಗ ಅನುಸರಿಸಿದ ಹಾಗೆ ಖೊನೋಮಾದ ನಾಗಾಗಳು ರಣರಂಗವಾಗಿದ್ದ ತಮ್ಮ ನಾಡನ್ನು ಹಸಿರು ಗ್ರಾಮವನ್ನಾಗಿ ಪರಿವರ್ತಿಸಿರುವುದು ಅದ್ಭುತವಾದ ಸಂಗತಿಯಲ್ಲವೇ? ಕೆ.ಎಸ್ ನರಸಿಂಹಸ್ವಾಮಿಯವರ ಭಾವಗೀತೆಯಲ್ಲಿ ಬರುವ ಸಾಲುಗಳು ನೆನಪಿಗೆ ಬರುತ್ತಿವೆ – ಅಲ್ಲಿ ರಣದುಂದುಭಿ ಇಲ್ಲೊಂದು ವೀಣೆ.. (ದೀಪವು ನಿನ್ನದೆ ಗಾಳಿಯು ನಿನ್ನದೆ). ವೀಣೆಯಂತೆ ಇಂಪಾದ ನಾದ ಹೊಮ್ಮುತ್ತಿರುವ ಈ ಹಸಿರು ಗ್ರಾಮವನ್ನು ನೋಡಲು ಮರೆಯದಿರಿ.
-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ಉತ್ತಮ ಪ್ರವಾಸಿ ಬರಹ.
ಹಸಿರು ಗ್ರಾಮದ ಸಚಿತ್ರ ವಿವರಣೆ ಮನಸ್ಸಿಗೆ ಮುದನೀಡಿತು ಲೇಖನ ದಮುಕ್ತಾಯ ಚೆನ್ನಾಗಿದೆ
ನಾಗಾಲ್ಯಾಂಡಿನ ಹಸಿರು ಗ್ರಾಮಖೋನಾಮ..ಪರಿಚಯ ಎಂದಿನಂತೆ ಸೊಗಸಾದ..ನಿರೂಪಣೆಯೊಂದಿಗೆ ಅನಾವರಣ ಗೊಂಡಿದೆ..
ಗಾಯತ್ರಿ ಮೇಡಂ
ನಾಗಾಲ್ಯಾಂಡಿನ ವೀರ, ಧೀರ ನಾಗಾಗಳ ಚರಿತ್ರೆಯೊಂದಿಗೆ ಬೆಸೆದಿರುವ ಅವರ ಖೊನೋಮಾ ಗ್ರಾಮವು ತನ್ನ ಹಸಿರುಕ್ರಾಂತಿಯಿಂದ ಜಗತ್ತಿನ ಗಮನ ಸೆಳೆದುದು ನಿಜಕ್ಕೂ ಅದ್ಭುತ! ಸೊಗಸಾದ ನಿರೂಪಣೆ ಮುದನೀಡಿತು ಮೇಡಂ.
ಚೆನ್ನಾಗಿದೆ
ಸಹೋದಯ ಓದುಗರಿಗೆ ಹೃದಯಪೂರ್ವಕ ವಂದನೆಗಳು
ಶ್ರೀಮಂತಿಕೆಯನ್ನು ಅಳೆಯುವುದು ಗೋ ಸಂಪತ್ತು ಮತ್ತು ಕಣಜದಲ್ಲಿ ತುಂಬಿರುವ ದವಸ, ಧಾನ್ಯಗಳು – ಎಂತಹ ಉದಾತ್ತ ಮಾನದಂಡ.
ಬದುಕುಳಿಯಲು ಸಂಪ್ರದಾಯವನ್ನು ಬದಲಾಯಿಸಿಕೊಂಡು ಎಲ್ಲರಿಗೂ ಮಾದರಿಯಾದ ಜನರ ಮನೋಜ್ಞವಾದ ನಿರೂಪಣೆ.
ತುಂಬು ಹೃದಯದ ಧನ್ಯವಾದಗಳು ಪದ್ಮ ಮೇಡಂ