ಅವಿಸ್ಮರಣೀಯ ಅಮೆರಿಕ – ಎಳೆ 59
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಟೈಮ್ ಸ್ಕ್ವಾರ್(Time Square)
ಅಮೆರಿಕದ ನ್ಯೂಯಾರ್ಕ್ ನಗರದ ಮೇನ್ ಹಟನ್ ನಗರದ ಉತ್ತರ ಭಾಗಲ್ಲಿರುವ ಟೈಮ್ ಸ್ಕ್ವಾರ್ ಎಂಬುದೊಂದು ಅಲ್ಲಿಯ ಬಹುದೊಡ್ಡ ವಾಣಿಜ್ಯ ಕೇಂದ್ರ ಮಾತ್ರವಲ್ಲ, ಪ್ರವಾಸಿ ಕೇಂದ್ರದ ಜೊತೆಗೆ, ಅತ್ಯಂತ ಆಕರ್ಷಕ ಮನೋರಂಜನಾ ತಾಣವೂ ಹೌದು. ದೇಶದ ಪ್ರಸಿದ್ಧ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಮೊತ್ತ ಮೊದಲು ಪ್ರಾರಂಭವಾದಾಗ, ಅದರ ಪ್ರಧಾನ ಕಚೇರಿಯು ಇಲ್ಲಿದ್ದುದು ಇದರ ಹೆಗ್ಗಳಿಕೆ. 1904ರಲ್ಲಿ ಈ ಕಚೇರಿಯು ಇನ್ನೊಂದು ಹೊಸ ಕಟ್ಟಡಕ್ಕೆ ವರ್ಗಾವಣೆಗೊಂಡಾಗ; ನಗರದ ಜೀವನಾಡಿಯಾದ ಸಬ್ ವೇ ಭೂಗರ್ಭ ರೈಲು ಸಂಪರ್ಕದ ನಿಯಂತ್ರಣಾ ವಿಭಾಗವನ್ನು ಇದರ ಕೆಳಗಡೆಗೆ ನಿರ್ಮಿಸಲಾಯಿತು. ( ಈ ಭೂಗರ್ಭ ರೈಲು ಸುರಂಗಗಳಿಂದಾಗಿ ಅದರ ಮೇಲೆ ಕಟ್ಟಲಾದ ಬಹು ಅಂತಸ್ತಿನ ಕಟ್ಟಡಗಳಿಗೆ ಅಪಾಯವಿಲ್ಲವೇ ಎಂಬುದಾಗಿ ನನಗೆ ಇಲ್ಲೊಂದು ಸಂಶಯ ಕಾಡುತ್ತಿತ್ತು…. ಆದರೆ, ಈ ಸುರಂಗಗಳು ಮೇಲ್ಭಾಗದ ಭೂ ಸಮತಲದಿಂದ ಸುಮಾರು 173 ಅಡಿಗಳಷ್ಟು ಆಳದಲ್ಲಿ ಕೊರೆಯಲಾಗುವುದರಿಂದ ಹಾಗೂ ಕಟ್ಟಡಗಳ ಅಡಿಪಾಯಗಳು ಅತ್ಯಂತ ಕ್ರಮಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ರೂಪುಗೊಂಡಿರುವುದರಿಂದ ಅಪಾಯವು ಅತ್ಯಂತ ಕಡಿಮೆ ಎಂದು ತಿಳಿದು ಸಮಾಧಾನವೆನಿಸಿತು.) ಅದೇ ವರ್ಷ ಎಪ್ರಿಲ್ 8ಕ್ಕೆ ಪತ್ರಿಕೆಯ ಹೆಸರನ್ನು ಈ ಸ್ಥಳಕ್ಕೆ ಇರಿಸಲಾಯಿತು. ಈ ಪ್ರದೇಶದಲ್ಲಿ ಅನೇಕ ಸಿನಿಮಾ ಹಾಲ್ ಗಳು, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಸಭಾಗೃಹಗಳು, ಅದ್ಧೂರಿಯಾದ ಶ್ರೀಮಂತ ಹೋಟೇಲ್ ಗಳನ್ನು ಕಟ್ಟಲಾಯಿತು. ಇಲ್ಲಿ ಹೊಸ ವರ್ಷದ ದಿನ ಮಧ್ಯರಾತ್ರಿಯಲ್ಲಿ ಅದ್ಧೂರಿಯಾದ ಅತ್ಯದ್ಭುತ ಉತ್ಸವ ನಡೆಯುತ್ತದೆ. ಪ್ರತೀ ವರ್ಷ, ದಶಂಬರ 31ನೇ ತಾರೀಕಿನ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಆಚರಿಸುವ ಹೊಸವರ್ಷದ ಆಗಮನದ ಆಚರಣೆಯು ಜಗತ್ತಿನಲ್ಲೇ ಅತೀ ಪ್ರಸಿದ್ಧಿ ಹಾಗೂ ಅತೀ ಹೆಗ್ಗಳಿಕೆಗೆ ಪಾತ್ರವಾಗಿದೆ.
Ball Drop …ಅಂದರೆ, ಅಮೆರಿಕದಲ್ಲಿ ಅದರದೇ ಆದ ಗೌರವಕ್ಕೆ ಪಾತ್ರವಾದ ಈ ಕಾರ್ಯಕ್ರಮದಲ್ಲಿ; ಅಲ್ಲಿಯ ಪ್ರಸಿದ್ಧ One Time Square ಎಂಬ ಕಟ್ಟಡದ ತುದಿಯ ಧ್ವಜಸ್ತಂಭದಲ್ಲಿರುವ ವಿಶೇಷವಾದ ಚೆಂಡೊಂದು ಆ ದಿನ ರಾತ್ರಿ 11: 59ರ ಹೊತ್ತಿಗೆ ಕೆಳಗಡೆ ಚಲಿಸಲು ಆರಂಭಿಸಿ, ಸರಿಯಾಗಿ 12:00 ಗಂಟೆಗೆ ಕೆಳಭಾಗ ತಲಪುತ್ತದೆ… ಹೊಸವರುಷದ ಆಗಮನವನ್ನು ಸಾರುತ್ತದೆ! ಇಲ್ಲಿ ಈ ಪದ್ಧತಿಯು 1904ರಲ್ಲಿ ಪ್ರಾರಂಭವಾಯಿತು. ಈ ದಿನದಂದು; ಈ ಸುಂದರ, ಭಾವುಕ, ಉತ್ಸಾಹ ಸಮ್ಮಿಳಿತ ಕ್ಷಣವನ್ನು ಅಸ್ವಾದಿಸಲು, ಜಗತ್ತಿನಾದ್ಯಂತದಿಂದ ಲಕ್ಷಗಟ್ಟಲೆ ಜನರು ಬಂದು ಸೇರುವರು. ಆ ಸಮಯದಲ್ಲಿ ಪ್ರಪಂಚದ ಪ್ರಸಿದ್ಧ ಕಲಾತಂಡಗಳು ಇಲ್ಲಿ ಮೇಳೈಸಿ, ತಮ್ಮ ಅದ್ಭುತ ಪ್ರದರ್ಶನಗಳನ್ನು ಇಡೀ ರಾತ್ರಿ ನೀಡುವರು.
ಇಲ್ಲಿ ಎಲ್ಲವೂ ಚೆನ್ನಾಗಿದ್ದರೂ, ಬಹುದೊಡ್ದ ನಗರಗಳಲ್ಲಿ ಸಾಮಾನ್ಯವಾಗಿರುವ ಪಾತಕಿಗಳ ದರ್ಬಾರು, ದರೋಡೆಕೋರರ ಹಾವಳಿ ಅತೀ ಹೆಚ್ಚು ಎಂದು ಹೇಳಲಾಗುತ್ತದೆ. 1930ರಿಂದೀಚೆಗೆ ಇದು ಮಿತಿಮೀರಿ ಹೋಗಿದ್ದು; 1960ರಿಂದ ಅಪರಾಧಗಳ ಸಂಖ್ಯೆ ಬಹಳ ಹೆಚ್ಚಾಗಿದ್ದುದರಿಂದ, ಪ್ರವಾಸಿಗಳಿಗೆ ಅಸುರಕ್ಷಿತ ತಾಣವೆಂದು ನಂಬಲಾಗುತ್ತದೆ. ಇದು ಈ ನಗರದ ಪ್ರಸಿದ್ಧಿಗೆ ಒಂದು ಕಪ್ಪು ಚುಕ್ಕಿ ಎಂದು ಹೇಳಬಹುದು. ಈ ಜಾಗದಲ್ಲಿ ಪೂರ್ತಿ ಧೂಮಪಾನ ನಿಷೇಧವಿದೆ. ದಿನವೊಂದಕ್ಕೆ ಸುಮಾರು 3,60,000 ಜನರು ಹಾಗೂ ವರ್ಷದಲ್ಲಿ ಸುಮಾರು 131ಮಿಲಿಯ ಜನರು ಭೇಟಿ ನೀಡುತ್ತಿರುವುದು ಇದರ ಪ್ರಸಿದ್ಧಿಗೆ ಸಾಕ್ಷಿಯಾಗಿದೆ!
ಇನ್ನು ಈ ಕಡೆಗೆ ಏನಾಯ್ತು ನೋಡೋಣ…ಮಗಳು ಸಬ್ ವೇ ರೈಲಿನಲ್ಲಿ ಒಬ್ಬಳೇ ಮುಂದೆ ಹೋಗಿ; ನಾವು ಮಾತ್ರ ಟೈಮ್ ಸ್ಕ್ವಾರ್ ತಲಪಿದೆವು… ಆದರೆ ನನ್ನೆದುರಿಗೆ ಝಗಝಗಿಸುತ್ತಾ ತನ್ನೆಲ್ಲಾ ವೈಭವವನ್ನು ತೆರೆದು ತೋರಿಸುತ್ತಿರುವ ಟೈಮ್ ಸ್ಕ್ವಾರ್ ನ ವಿಶೇಷ ವೈಭವವನ್ನು ಸವಿಯದಾದೆ. ಆಗಾಗ ಫೋನಿನಲ್ಲೇ ಸಂಪರ್ಕಿಸುತ್ತಾ ಇದ್ದಂತೆಯೇ; ಒಂದರ್ಧ ತಾಸಿನಲ್ಲಿ ಮಗಳು ನಮ್ಮನ್ನು ಸೇರಿಕೊಂಡಳು…ನನ್ನೆದೆ ಭಾರ ಇಳಿಯಿತು. ಮುಂದಿನ ನಿಲ್ದಾಣದಲ್ಲಿ ಇಳಿದು,ಅಲ್ಲಿಯ ಪ್ರಯಾಣಿಕರ ಸಹಾಯದಿಂದ ಹಿಂತಿರುಗುವ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ, ಅಲ್ಲಿಂದ ಸಿಟಿ ಬಸ್ಸು ಹಿಡಿದು ಬಂದಿದ್ದಳು. ಆ ಬಳಿಕವೇ ನನ್ನ ಗಮನ ನಿಜವಾಗಿಯೂ ಟೈಮ್ ಸ್ಕ್ವಾರ್ ಮೇಲೆ ಬಿತ್ತು ನೋಡಿ!
46 ಮತ್ತು 47ನೇ ನಂಬರಿನ ಎರಡು ರಸ್ತೆಗಳ ಮಧ್ಯಭಾಗದಲ್ಲಿ ಸುಮಾರು 1037ಚ. ಅಡಿ ಪ್ರದೇಶದಲ್ಲಿ ಈ ಟೈಮ್ ಸ್ಕ್ವಾರ್ ನಾಮಾಂಕಿತ ಜಾಗವಿದೆ. ಆಹಾ..!! ಅಷ್ಟ ದಿಕ್ಕುಗಳಲ್ಲೂ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿರುವ ಕಟ್ಟಡಗಳು …ಜೊತೆಗೆ, ನೂರಾರು ತರೆಹೇವಾರಿ ಜಾಹೀರಾತುಗಳು! ನಮ್ಮ ಬೆಂಗಳೂರಿನಲ್ಲಿರುವಂತೆ ಬೀದಿ ಬದಿಯ ವ್ಯಾಪಾರಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು! ನಮ್ಮಲ್ಲಿಯ ನವರಾತ್ರಿ ವೇಷದಂತೆ, ಮುಖಕ್ಕೆ, ಮೈಕೈಗಳಿಗೆ ಬಣ್ಣ ಬಳಿದುಕೊಂಡು, ವಿಶೇಷ ವೇಷ ಧರಿಸಿಕೊಂಡು, ಕೆಲವರು ಅತ್ಯಂತ ಕಡಿಮೆ ಉಡುಗೆಯಲ್ಲಿ ಸ್ತ್ರೀ, ಪುರುಷರೆಂಬ ಭೇದವಿಲ್ಲದೆ ಓಡಾಡುತ್ತಿದ್ದುದೂ ಅಲ್ಲದೆ, ಕೆಲವರು ಹಣಕ್ಕಾಗಿ ಪೀಡಿಸುವುದು ನೋಡಿದಾಗ ಬಹಳ ಆಶ್ಚರ್ಯವಾಯಿತು! ಒಂದು ಕಡೆ, ಆಗಸದೆತ್ತರದ ಜಾಹೀರಾತಿನ ಫಲಕದಲ್ಲಿ ನಮ್ಮ ದೇಶದ ಕಂಪೆನಿಯೊಂದರ ಉತ್ಪನ್ನವು ಬೆಳಗುತ್ತಾ ಬಿತ್ತರವಾಗುವುದನ್ನು ಕಂಡು ಸಂತೋಷವಾಯಿತು. ರಸ್ತೆಯ ಇನ್ನೊಂದು ಮೂಲೆಯಲ್ಲಿರುವ ದೊಡ್ಡದಾದ ಅಂಗಡಿಯ ಮುಂದುಗಡೆಗೆ ಏನೋ ಪ್ರದರ್ಶನ ನಡೆಯುತ್ತಿತ್ತು…ಅಲ್ಲಿ ಜನರ ಗುಂಪು, ಗದ್ದಲ ಗಮನಸೆಳೆಯುವಂತಿತ್ತು. ಇವುಗಳೆಲ್ಲದರ ನಡುವೆ ಅಳಿಯ ಅವನ ಶೀರ್ಷಾಸನದ ಪ್ರಯೋಗ ಮಾಡತೊಡಗಿದಾಗ ಅವನ ಮುಂದೆ ಜನರು ದುಡ್ಡು ಹಾಕದಿದ್ದರೆ ಸಾಕು ಎಂದು ತಮಾಷೆ ಮಾಡತೊಡಗಿದೆವು! ದಟ್ಟ ಕತ್ತಲೆ ಆವರಿಸುತ್ತಿದ್ದಂತೆಯೇ, ನಾವು ಕುಳಿತಿದ್ದ, ಅಗಲವಾದ ಕಾಲುದಾರಿಯ ಬೆಂಚಿನ ಸನಿಹದಲ್ಲೇ; ಎಲ್ಲಿಂದಲೋ ಬಂದ ತಂಡದವರಿಂದ ಪಾಶ್ಚಾತ್ಯ ಸಂಗೀತ ಸಂಜೆಯ ಕಾರ್ಯಕ್ರಮವು ಆರಂಭವಾಯ್ತು. ಅವರೊಡನೆಯೇ ತಂದಿದ್ದ ವೇದಿಕೆ, ಸುಮಾರು ಮೂವತ್ತು ಜನರು ಕುಳಿತುಕೊಳ್ಳಬಹುದಾದಂತಹ ಗ್ಯಾಲರಿ ವ್ಯವಸ್ಥೆಯು ಅಲ್ಲಿಯೇ ಕ್ಷಣ ಮಾತ್ರದಲ್ಲಿ ಸಿದ್ಧವಾಯ್ತು! ಈ ಸಮಯದಲ್ಲಿ ಅಲ್ಲಿಯ ಎರಡು ರಸ್ತೆಗಳಲ್ಲಿ ವಾಹನಗಳು ಬಸವನ ಹುಳದ ವೇಗದಲ್ಲಿ ಚಲಿಸುತ್ತಿದ್ದವು! ದಿನ ನಿತ್ಯವೂ ಇಲ್ಲಿ ಹಗಲೇ ರಾತ್ರಿಯಾಗಿ, ರಾತ್ರಿಯೇ ಹಗಲಾಗಿ ಸ್ಥಿತ್ಯಂತರಗೊಂಡು, ಜನರು ಇಡೀ ರಾತ್ರಿ ಮೋಜಿನಲ್ಲಿ ಕಾಲ ಕಳೆಯುವುದು ನೋಡಿದಾಗ ನಮಗೆ ದಿಗ್ಭ್ರಮೆಯಾಗದಿರಲು ಹೇಗೆ ಸಾಧ್ಯ ಹೇಳಿ? ರಾತ್ರಿ ಒಂಭತ್ತು ಗಂಟೆಯ ವರೆಗೆ ಅಲ್ಲಿದ್ದು ಹಿಂತಿರುಗಿದೆವು. ಮರುದಿನ ನಮ್ಮ ನಡಿಗೆ ಪ್ರಸಿದ್ಧ Wall Streetನತ್ತ ಸಾಗುವುದಿತ್ತು…
ಮರುದಿನ ಜೂನ್ 18ನೇ ತಾರೀಕು…ಬೆಳಗ್ಗಿನ ಉಪಾಹಾರಕ್ಕೆ ನಮ್ಮೂರಿನ ಮಸಾಲೆದೋಸೆಯನ್ನು ನೆನಪಿಸಿ ಹೊಟ್ಟೆ ಉರಿಸಿಕೊಳ್ಳುತ್ತಾ, ಬ್ರೆಡ್ ಮತ್ತು ಬಾಳೆಹಣ್ಣಿನ ಮೊರೆ ಹೊಕ್ಕು, ನ್ಯೂಯಾರ್ಕ್ ನಗರವನ್ನು ಸುತ್ತಲು ಹೊರಟೆವು. ಆಹಾ…ಕಟ್ಟಡಗಳು… ತಲೆ ಮೇಲೆತ್ತಿ ನೋಡಿದರೆ ಬರೇ ಕತ್ತು ಮಾತ್ರ ನೋಯುವುದಲ್ಲದೆ, ಆ ಆಗಸದೆತ್ತರದ ಕಟ್ಟಡ ತುದಿಯ ವರೆಗೆ ಪೂರ್ತಿ ನೋಡಲಾಗುವುದಿಲ್ಲ !! ಪ್ರತಿಯೊಂದರ ವಿನ್ಯಾಸವೂ ಭಿನ್ನ. ಭಾಸ್ಕರನ ಬೆಳಕು ನೆಲದ ಮೇಲೆ ಬೀಳುವುದೇ ಕಷ್ಟದಲ್ಲಿ! ಆಕಾಶದೆತ್ತರ ಚಾಚಿ ನಿಂತ ಸುಂದರ ವೈವಿಧ್ಯಮಯ ಕಟ್ಟಡಗಳ ಅಂತಸ್ತುಗಳನ್ನು ಲೆಕ್ಕಹಾಕಲು ಪ್ರಯತ್ನಪಟ್ಟು ನಾನಂತೂ ಸೋತುಹೋದೆ! ಅವುಗಳ ಮುಂದೆ ಬರೇ ಇರುವೆಗಳಂತಿರುವ ನಾವು, ಆಶ್ಚರ್ಯದಿಂದ ಕಣ್ಣು ಬಾಯಿ ಬಿಟ್ಟು ನೋಡುತ್ತಾ ನಿಲ್ಲುವುದೇ ಸರಿ ಎನಿಸಿತು.
ಅವುಗಳು ಒಂದರ ಪಕ್ಕ ಇನ್ನೊಂದು ಮೈಸೂರುಪಾಕಿನ ತುಂಡುಗಳಂತೆ ಶಿಸ್ತಾಗಿ ನಿಂತಿರುವುದು ಕಾಣುವಾಗ ಅದ್ಭುತವೆನಿಸುತ್ತದೆ! ಅವುಗಳಲ್ಲಿ ಮುಖ್ಯವಾದ ಕೆಲವು ಗಮನ ಸೆಳೆಯುವಂತಿದ್ದವು. ಅವುಗಳೇ ಆಗಿನ ಅಧ್ಯಕ್ಷರಾದ ರೋನಾಲ್ಡ್ ಟ್ರಂಪ್ ಅವರ ಸ್ವಂತ ಕಟ್ಟಡಗಳು. ಅವರದೇ ಹೆಸರಿನಲ್ಲಿ ರಾರಾಜಿಸುತ್ತಿದ್ದ ಒಂದು ಬಹು ದೊಡ್ಡ ಹೋಟೆಲ್ ಒಳಗಡೆ ಹೋದೆವು… ಎಂತಹಾ ವೈಭವ!! ಮೂರು ಅಂತಸ್ತುಗಳನ್ನು ಹೊಂದಿದ್ದ ಅದರೊಳಗೆ ಎಲ್ಲೆಲ್ಲೂ ಬಂಗಾರದ ಬಣ್ಣದಲ್ಲಿ ಹೊಳೆಯುವ ಸಲಕರಣೆಗಳು!! ಮೇಲೇರುವ ಯಾಂತ್ರೀಕೃತ ಮೆಟ್ಟಲಿನಿಂದ ಹಿಡಿದು ಊಟದ ಮೇಜು ಕುರ್ಚಿಗಳೆಲ್ಲವೂ ಚಿನ್ನದಿಂದಲೇ ಮಾಡಿರುವಂತೆ ಭಾಸವಾಗುತ್ತವೆ! ಇಂದ್ರಲೋಕವೇ ಧರೆಗಿಳಿದ ಅನುಭವ! ನೋಡಲು ದುಡ್ಡೇನೂ ಕೊಡಬೇಕಾಗಿಲ್ಲದುದರಿಂದ ಬಚಾವ್… ಅಲ್ಲಿ ಏನನ್ನೂ… ಅಂದರೆ ಕೊನೇಪಕ್ಷ ಒಂದು ಲೋಟ ಕಾಫಿಯನ್ನೂ ಖರೀದಿಸುವ ಸಾಹಸ ಮಾಡಹೋಗಲಿಲ್ಲ…ಅಷ್ಟು ದುಬಾರಿ!! ಎಲ್ಲಾ ನೋಡಿ ಹೊರ ಬರುವಾಗ ವಾಚ್ ಮೇನ್ ನಮ್ಮನ್ನು ಒಂಥರಾ ನೋಡಿದನೆಂದು ನನ್ನೆಣಿಕೆ! ನಾವಂತೂ ಅದರ ಪಕ್ಕದಲ್ಲಿದ್ದ ಸಾದಾ ಹೋಟೇಲಿಗೆ ನುಗ್ಗಿ ಹೊಟ್ಟೆ ತುಂಬಿಸಿಕೊಂಡೆವೆನ್ನಿ.
ಮುಂದಕ್ಕೆ, ಜಗತ್ಪ್ರಸಿದ್ಧ Omega, Hublot ಇತ್ಯಾದಿ ವಾಚುಗಳು, Colgate Pamolive ಟೂತ್ ಪೇಸ್ಟ್ ಇತ್ಯಾದಿಗಳ ಉತ್ಪಾದನಾ ಮುಖ್ಯ ಕಚೇರಿಗಳನ್ನು ಹೊರಗಿನಿಂದಲೇ ನೋಡಿ ತೃಪ್ತಿ ಪಟ್ಟೆವು.
ವಾಲ್ ಸ್ಟ್ರೀಟ್ (Wall Street)
ಎಂಟು ಬ್ಲಾಕ್ ಗಳುಳ್ಳ ಉದ್ದನೆಯ ಈ ರಸ್ತೆಯ ಎರಡೂ ಪಕ್ಕಗಳಲ್ಲಿ ಗಗನಚುಂಬಿ ಬಹುಮಹಡಿ ಕಟ್ಟಡಗಳಿರುವ ಪ್ರದೇಶವು ಅಮೆರಿಕದ ಬಹುಮುಖ್ಯ ವಾಣಿಜ್ಯ ಕೇಂದ್ರವಾಗಿದೆ ಹಾಗೂ ಜಗತ್ತಿನ ಶೇರು ಮಾರುಕಟ್ಟೆಯ ಮುಖ್ಯತಾಣವಾಗಿದೆ. ಇಲ್ಲಿರುವ 40 Wall Street ಎಂಬ ಕಟ್ಟಡವು ಅದರ ನಿರ್ಮಾಣದ ಸಮಯದಲ್ಲಿ ಜಗತ್ತಿನ ಅತ್ಯಂತ ಎತ್ತರದ ಕಟ್ಟಡವೆಂದು ಖ್ಯಾತಿ ಪಡೆದಿತ್ತು. ಈ ಪ್ರದೇಶವು, ಇಲ್ಲಿಯ ಹಲವಾರು ಬಹುಮುಖ್ಯ ಬ್ಯಾಂಕುಗಳ ಪ್ರಧಾನ ಕಚೇರಿಗಳು ಇರುವಂತಹ ಸ್ಥಳವಾಗಿದೆ. ಮಾತ್ರವಲ್ಲದೆ, ಮೂರು ಭೂಗರ್ಭ ರೈಲು ನಿಲ್ದಾಣಗಳೂ ಇಲ್ಲಿವೆ. ವಾಲ್ ಸ್ಟ್ರೀಟ್ ರಸ್ತೆಗೆ ಕಾಲಿರಿಸಿದಾಗ, ಏನೋ ಒಂದು ಅವ್ಯಕ್ತ ಅನುಭವ! ಜಗತ್ತಿನೆಲ್ಲೆಡೆ ಆಗಾಗ ವೃತ್ತ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಶೇರು ಮಾರುಕಟ್ಟೆಯ ಏರಿಳಿತಗಳು, ಅದರೊಂದಿಗೆ ಶೇರು ಗೂಳಿಯ ಚಿತ್ರವನ್ನು ನಾವೆಲ್ಲರೂ ನೋಡಿರುತ್ತೇವೆ. ಅದೇ ಶೇರು ಮಾರುಕಟ್ಟೆಯ ವ್ಯವಹಾರಗಳು ನಡೆಯುವಂತಹ ಮುಖ್ಯ ಕಾರ್ಯಾಲಯದ ಬಹುಮಹಡಿ ಕಟ್ಟಡ ಮುಂದೆ ನಿಂತಾಗ ನಾನು ಊಹಿಸಿದಂತಹ ಅಭೂತಪೂರ್ವ ಕಟ್ಟಡವು ಅದಾಗಿರಲಿಲ್ಲ… ಹಾಗೆಯೇ ಸ್ವಲ್ಪ ಭ್ರಮನಿರಸನವಾದುದಂತೂ ಸತ್ಯ. ಆದರೆ ಅದರೊಳಗೆ ನಡೆಯುವಂತಹ; ಇಡೀ ಜಗತ್ತನ್ನೇ ತನ್ನ ತೋರು ಬೆರಳಲ್ಲಿ ಆಡಿಸುವಂತಹ ಕಾರ್ಯ ಚಟುವಟಿಕೆಗಳು ಮಾತ್ರ ಅದ್ಭುತ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು…ಅಲ್ಲವೇ? ಇಲ್ಲಿಯ ರಸ್ತೆಯು ಎಲ್ಲಾ ಸಾದಾ ರಸ್ತೆಯಂತೆಯೇ ಇದ್ದರೂ, ಅದರ ಎರಡೂ ಪಕ್ಕಗಳಲ್ಲಿರುವ ಸೊಗಸಾದ ಮರಗಳು, ಅವುಗಳ ನೆರಳು ಅದರ ಸೊಬಗನ್ನು ಹೆಚ್ಚಿಸಿವೆ. ಕಾಲುದಾರಿಯಲ್ಲಿ ನಡೆದಾಡುತ್ತಿರುವ ಕೇವಲ ಕೆಲವೇ ಜನರು, ಯಾವುದೇ ಧಾವಂತವಿಲ್ಲದ ನಿರ್ಲಿಪ್ತವೆನಿಸುವ ಸಮಾಧಾನಕರವಾದ ಜೀವನ ಶೈಲಿ ನೋಡುವಾಗ ಆಶ್ಚರ್ಯವೆನಿಸುತ್ತದೆ.
ಅಲ್ಲೇ ಸ್ವಲ್ಪ ಮುಂದಕ್ಕೆ ಸಾಗಿದಾಗ…ಅದೇನು?! ಬಹು ದೊಡ್ಡದಾದ ಗೂಳಿಯೊಂದು ನಮ್ಮತ್ತಲೇ ನೋಡುತ್ತಾ ಮುನ್ನುಗ್ಗಿ ಬರಲು ಸನ್ನದ್ಧವಾಗಿರುವಂತೆ ಕಾಣುತ್ತಿದೆಯಲ್ಲಾ…??! ಹೌದು, ನಮ್ಮ ಮುಂದಿತ್ತು ಜಗತ್ಪ್ರಸಿದ್ಧ ಶೇರು ಗೂಳಿ!! ಮಿಶ್ರ ಲೋಹದಿಂದ ತಯಾರಿಸಲ್ಪಟ್ಟ ಇದು ಥಳಥಳ ಹೊಳೆಯುತ್ತಿತ್ತು. ಅದರ ಕಾಲ ಎಡೆಯಿಂದ ಬಗ್ಗಿಕೊಂಡು ಸಾಗುತ್ತಿದ್ದ ಕೆಲವು ಮಕ್ಕಳು ಅಲ್ಲದೆ ದೊಡ್ಡವರನ್ನೂ ಕಂಡು ಆಶ್ಚರ್ಯವಾಯ್ತು! ಈ ತರಹ ಮಾಡುವುದರಿಂದ ಅದೃಷ್ಟ ಖುಲಾಯಿಸುತ್ತದೆ ಎಂಬ ನಂಬಿಕೆಯಿದೆಯಂತೆ! ನಾವ್ಯಾರೂ ಆ ತರಹ ಮಾಡಲು ಹೋಗಲಿಲ್ಲ ಬಿಡಿ. ಶೇರು ಮಾರುಕಟ್ಟೆಯು ಸಾಮಾನ್ಯವಾಗಿ ಏರುಗತಿಯಲ್ಲಿದ್ದಾಗ ಈ ಗೂಳಿ ಬುಸುಗುಟ್ಟುತ್ತಾ ಮುಂದೋಡುತ್ತದೆ ಹಾಗೂ ಅಧೋಗತಿಯಲ್ಲಿರುವಾಗ ಅದರ ಗತಿಯಲ್ಲಿ ಹಿನ್ನಡೆಯಾಗುತ್ತದೆ ಎಂಬುದನ್ನು ಈ ವಿಗ್ರಹವು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ ಎಂಬುದು ಲೋಕೋಕ್ತಿ. ಮುಂದಕ್ಕೆ ಸಾಗುತ್ತಿದ್ದಂತೆಯೇ, ರಸ್ತೆ ವಿಭಾಜಕದಲ್ಲಿ ಅರಳಿ ಕಂಪು ಬೀರುವ ಹೂಗೊಂಚಲುಗಳು, ದೀಪದ ಕಂಬಗಳಲ್ಲಿ ಸೊಗಸಾಗಿ ತೂಗಾಡುತ್ತಿರುವ ಹೂ ಬುಟ್ಟಿಗಳು ಕಣ್ಮನ ಸೆಳೆದವು…..
(ಮುಂದುವರಿಯುವುದು…..)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=38547
-ಶಂಕರಿ ಶರ್ಮ, ಪುತ್ತೂರು.
ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು ಶಂಕರಿ ಮೇಡಂ..
ಧನ್ಯವಾದಗಳು ಮೇಡಂ
ನಾನು ನೀಡಿದ ಎಳೆಗಳನ್ನು ಮುತುವರ್ಜಿಯಿಂದ ಬಹಳ ಸುಂದರವಾಗಿ ಪ್ರಕಟಿಸುತ್ತಿರುವ ಹೇಮಮಾಲಾ ಅವರಿಗೆ ಮನದಾಳದ ಕೃತಜ್ಞತೆಗಳು.
ತುಂಬಾ ಚೆನ್ನಾಗಿದೆ
ಧನ್ಯವಾದಗಳು ಮೇಡಂ
ಟೈಮ್ ಸ್ಕ್ವೇರ್ ಮತ್ತು ವಾಲ್ ಸ್ಟ್ರೀಟ್ ನ ವರ್ಣನೆ ಸೊಗಸಾಗಿ ಮೂಡಿ ಬಂದಿದೆ. ಎಂದಿನಂತೆ ಪ್ರವಾಸಿ ಕಥನ ಆಸಕ್ತಿದಾಯಕವಾಗಿ ಮೂಡಿದೆ.
ತುಂಬಾ ಚೆನ್ನಾಗಿದೆ ಮೇಡಂ