ಆನೆ ಬಂತೊಂದಾನೆ,ನೋಡ ಬನ್ನಿ ಆನೆ…

Share Button

(ಆಗಸ್ಟ್ 12 “ವಿಶ್ವ ಆನೆ ದಿನ” ಈ ಪ್ರಯುಕ್ತ ಲೇಖನ.)

“ಆನೆ” ಎಂಬ ಎರಡಕ್ಷರ ನೋಡಿದೊಡನೆ ನಮಗೆ ಅದರ ಸಾಂಸ್ಕೃತಿಕ ವೈಭವ ಒಮ್ಮೆಲೇ ನೆನಪಾಗುತ್ತದೆ. ಹಲವು ವಿಷಯಗಳಿಗೆ ಆನೆ ಅತ್ಯುತ್ತಮ ಉದಾಹರಣೆಯಾಗಿದೆ.ಇತ್ತೀಚೆಗೆ ತಾನೇ ಹುಲಿಗಣತಿಯಲ್ಲಿ ನಮ್ಮ ಕರ್ನಾಟಕ ಭಾರತದಲ್ಲಿ ಎರಡನೇ ಸ್ಥಾನ ಪಡೆದಿತ್ತು. ಈಗ ಮತ್ತೊಂದು ಹೆಮ್ಮೆಯ ವಿಷಯವೆಂದರೆ ಆನೆಗಣತಿಯಲ್ಲೂ ಭಾರತ ದೇಶದಲ್ಲೇ ನಮ್ಮ ಕರ್ನಾಟಕ ಮೊದಲು ಎನ್ನುವುದು!. “ವಿಶ್ವ ಆನೆ ದಿನ”ದ ಸಂದರ್ಭದಲ್ಲಿ ಇದೊಂದು ಸಂತಸದ ಸಂಗತಿ.ನಮಗೆ ಬಾಲ್ಯದಲ್ಲಿ ಅಜ್ಜ- ಅಜ್ಜಿ ಅಥವಾ ನಮ್ಮ ಶಿಕ್ಷಕರು ಕಥೆಯನ್ನು ಹೇಳುವಾಗ “ಆನೆಕತೆ” ಇದ್ದೇ ಇರುತ್ತಿತ್ತು. ಜೊತೆಗೆ ಆನೆ ಕುರಿತಾಗಿ ಹಾಡುಗಳು, ಜಾನಪದ ಕಥೆಗಳು, ಪೌರಾಣಿಕ ಕಥೆಗಳು ಹೀಗೆ ಒಂದಕ್ಕೊಂದು ಬೆಸೆದುಕೊಂಡಿದ್ದವು.

ಇನ್ನು “ಆನೆ ಬಂತೊಂದಾನೆ, ಯಾವೂರಾನೆ, ಸಿದ್ದಾಪುರದಾನೆ, ಇಲ್ಲಿಗೇಕೆ ಬಂತು?, ದಾರಿ ತಪ್ಪಿ ಬಂತು………! ಬಹುಶಃ ಈ ಗೀತೆ ಎಲ್ಲರಿಗೂ ನೆನಪಾಗುತ್ತಿರಬಹುದು. ನಾವು ಬಾಲ್ಯದಲ್ಲಿ ಇವನ್ನೆಲ್ಲ ಓದಿದ್ದೇವೆ. ಆನೆಯ ಸುತ್ತಮುತ್ತ ಯಾವುದೇ ವಿಷಯ ಪ್ರಸ್ತಾಪವಾದರೂ ಕೂಡ ಅದನ್ನು ಕೇಳುವುದೇ ಒಂದು ರೀತಿಯಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ದಟ್ಟವಾದ ಕಾಡುಗಳಲ್ಲಿ ಅಪರೂಪಕ್ಕೆ ಆನೆಗಳು ನಮಗೆ ದರ್ಶನ ನೀಡುತ್ತಿದ್ದವು. ಈಗ ಕಾಲ ಬದಲಾದಂತೆ ಆನೆಗಳು, ಕಾಡಿನಿಂದ ನಾಡಿಗೆ ದಾಳಿ ಮಾಡುತ್ತಿವೆ .ದಾಳಿ ಮಾಡುತ್ತಿವೆ ಎನ್ನುವುದಕ್ಕಿಂತ ತಮ್ಮ ವಾಸಸ್ಥಾನ ಹುಡುಕುತ್ತಿವೆ ಎನ್ನುವುದೇ ಮುಖ್ಯವಾಗುತ್ತದೆ!. ಕಾರಣ ಮಾನವ ಕಾಡನ್ನು ನಿರಂತರವಾಗಿ ಕಡಿದು, ಅವುಗಳ ವಾಸಸ್ಥಾನಕ್ಕೆ ಧಕ್ಕೆಯನುಂಟು ಮಾಡಿ, ಈಗ ತಾನೇ ಹಲವು ಸಮಸ್ಯೆಗಳನ್ನು ಎದುರಿಸುತ್ತಾ ಬರುತ್ತಿದ್ದಾನೆ.

2017ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 350 ಆನೆಗಳು ಹೆಚ್ಚಿವೆ. ಆವಾಗ ಆನೆಗಣತಿ ಮಾಡಿದಾಗ 6049 ಆನೆಗಳಿದ್ದವು. ಪ್ರಸ್ತುತ 6395 ಆನೆಗಳು ಇವೆ. ಐದು ವರ್ಷಕ್ಕೊಮ್ಮೆ ನಡೆಯುವ ಆನೆಗಣತಿಯಲ್ಲಿ ಆನೆಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತಸ ತಂದಿದೆ. ಈ ವಿಷಯದ ಬಗ್ಗೆ ಅರಣ್ಯ ಸಚಿವರು ಮಾಧ್ಯಮಗಳಲ್ಲಿ ಪ್ರಸ್ತಾಪಿಸಿದ್ದಾರೆ.ಆನೆಗಳು ಬಂಡೀಪುರ ಹುಲಿ ಸಂರಕ್ಷಣ ಪ್ರದೇಶದಲ್ಲಿ 1116, ನಾಗರಹೊಳೆ ಹುಲಿ ಸಂರಕ್ಷಣ ಪ್ರದೇಶದಲ್ಲಿ 831, ನಂತರ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ವಿಭಾಗದಲ್ಲಿ 706 ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 619 ಆನೆಗಳು ಇರುವುದರೊಂದಿಗೆ ಇಲ್ಲಿ 500ರ ಗಡಿ ದಾಟಿವೆ. ಇನ್ನುಳಿದಂತೆ ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಕಾವೇರಿ ವನ್ಯಜೀವಿ ವಿಭಾಗ, ಮಡಿಕೇರಿ ಪ್ರಾದೇಶಿಕ ವಿಭಾಗ, ಕೊಪ್ಪ ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಶಿವಮೊಗ್ಗ ವನ್ಯಜೀವಿ ವಿಭಾಗ, ಮಡಿಕೇರಿ ವನ್ಯಜೀವಿ ವಿಭಾಗ, ಹಾಸನ ವಿಭಾಗ, ಮೈಸೂರು ಪ್ರಾದೇಶಿಕ ವಿಭಾಗ, ವಿರಾಜಪೇಟೆ ವಿಭಾಗ, ಮಂಗಳೂರು ವಿಭಾಗ, ಕಾಳಿಹುಲಿ ಸಂರಕ್ಷಿತ ಪ್ರದೇಶ, ರಾಮನಗರ ವಿಭಾಗ, ಚಿಕ್ಕಮಗಳೂರು ವಿಭಾಗ, ಕೋಲಾರ ವಿಭಾಗ, ಭದ್ರಾವತಿ ವಿಭಾಗ, ಕುದುರೆಮುಖ, ಹಳಿಯಾಳ ವಿಭಾಗ, ಯಲ್ಲಾಪುರ ವಿಭಾಗ……. ಇಂತಹ ಪ್ರದೇಶಗಳಲ್ಲೂ ಕೂಡ ಆನೆಗಳು ಹೆಚ್ಚುತ್ತಿವೆ.

ನಾನು ಮೊದಲೇ ಹೇಳಿದಂತೆ ಆನೆಗಳ ಬಗ್ಗೆ ತಿಳಿದುಕೊಳ್ಳುವುದೇ ಒಂದು ರೀತಿಯಲ್ಲಿ ಕುತೂಹಲ ನಮ್ಮಲ್ಲಿ ಮೂಡುತ್ತದೆ. ಪ್ರಾಣಿ ಶಾಸ್ತ್ರದ ಪ್ರಕಾರ ಆನೆ ಸಸ್ತನಿಗಳ ವರ್ಗಕ್ಕೆ ಸೇರಿದೆ. ಇಂದು ಮೂರು ತಳಿಗಳ ಆನೆಗಳು ಭೂಮಿಯ ಮೇಲೆ ಇವೆ.ಆಫ್ರಿಕಾದ ಪೊದೆಗಳ ಆನೆ, ಆಫ್ರಿಕಾದ ಅರಣ್ಯ ಆನೆ, ಮತ್ತು ಏಷ್ಯಾದ ಆನೆ. ವಿಶ್ವದಲ್ಲಿಯೇ ಅತಿ ದೊಡ್ಡದಾದ ಮತ್ತು ಶಕ್ತಿಯುತವಾದ ಜೀವಿಗಳಲ್ಲಿ ಇದು ಮೊದಲಿಗೆ ನಿಲ್ಲುತ್ತದೆ. ಜೊತೆಗೆ ಬುದ್ಧಿವಂತಿಕೆ ಪ್ರಾಣಿ ಕೂಡ. ಪ್ರಾಚೀನ ಕಾಲದಿಂದಲೂ ಆನೆಗೆ ಒಂದಲ್ಲ ಒಂದು ರೀತಿಯ ಮಹತ್ವ ಇದ್ದೇ ಇದೆ. ದೇವರುಗಳು ಮತ್ತು ರಾಜರುಗಳು ಆನೆಗಳನ್ನು ಸವಾರಿ ಮಾಡಲು ಬಳಸುತ್ತಿದ್ದರು. ಹೆಣ್ಣು ಆನೆಗಳು ಗುಂಪು ಗುಂಪಾಗಿ ಇರುತ್ತವೆ. ಗಂಡು ಆನೆ ಹೆಚ್ಚು ಒಂಟಿಯಾಗಿ ಇರುತ್ತದೆ. ತನ್ನ ಮರಿ ಆನೆ ಕಾಪಾಡಲು ದೊಡ್ದ ದಾಳಿ ಮಾಡೇ ಮಾಡುತ್ತವೆ. ಆನೆ ಮುಖ್ಯವಾಗಿ ಸಾರಿಗೆ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಮನರಂಜನೆಗೂ ಕೂಡ ಬಳಸುತ್ತಾರೆ. ಸರ್ಕಸ್ ಗಳಲ್ಲೂ ಕೂಡ ಆನೆಯೂ ತನ್ನ ಕರಾಮತ್ತಿನಿಂದಾಗಿ, ಪ್ರೇಕ್ಷಕರನ್ನು ಮನಸ್ಸಂತೋಷ ಪಡಿಸುತ್ತದೆ. ಆನೆಯೂ ಕೂಡ ಕ್ರೀಡೆಗಳಲ್ಲೂ ಭಾಗವಹಿಸಿದ ಚಿತ್ರಣಗಳು ನಮ್ಮ ಕಣ್ಮುಂದೆ ಬರುತ್ತವೆ. ಆನೆ ಫುಟ್ಬಾಲ್ ಕ್ರಿಕೆಟ್ ಆಡುವುದನ್ನು ನೀವು ನೋಡಿರಬಹುದು.

ಅತಿ ದೊಡ್ಡ ಮತ್ತು ಭಾರವಾದ ಪ್ರಾಣಿ ಇದಾಗಿದ್ದು, ತಿಳಿ ಬೂದಿ ಬಣ್ಣದಿಂದ ಕೂಡಿದೆ. ಆನೆಯ ಎತ್ತರ 10 ರಿಂದ 13 ಅಡಿ. ಅದರ ತೂಕ 5000 ಕೆ ಜಿ ಯಿಂದ 6000 ಕೆ ಜಿ ವರೆಗೂ ಇದೆ. ಎರಡು ದೊಡ್ಡದಾದ ಕಿವಿಗಳು, ಚಿಕ್ಕ ಹಾಗೂ ತೀಕ್ಷ್ಣ ಕಣ್ಣು, ಚಿಕ್ಕದಾದ ಬಾಲ, ಇವುಗಳ ಪಾದಗಳು ದಪ್ಪವಾಗಿದ್ದು, ಅದು ದೀರ್ಘಕಾಲದವರೆಗೂ ನಿಲ್ಲಲು ಇದು ಸಹಕಾರಿಯಾಗಿದೆ. ಆನೆಯ ಚರ್ಮ ತುಂಬಾ ಸೂಕ್ಷ್ಮವಾದದ್ದು, ಉದ್ದವಾದ ಸೊಂಡಿಲನ್ನು ಹೊಂದಿದ್ದು ಅದರಲ್ಲಿ ನೀರು ಮತ್ತು ಆಹಾರ ತೆಗೆದುಕೊಳ್ಳಲು ಬಳಸುತ್ತದೆ. ಆನೆ ಕಾಡಿನಲ್ಲಿ ವಿಹರಿಸುವವಾಗಿನ ಚಿತ್ರ……. ಮದಗಜಗಳ ಗುದ್ದಾಟದ ಚಿತ್ರ……. ಅಲ್ಲದೆ, ಆನೆ ನೀರಿನಲ್ಲಿ ಮತ್ತು ಧೂಳಿನಲ್ಲಿ ಚಿನ್ನಾಟವಾಡುವುದನ್ನು ನೋಡುವುದೇ ಒಂದು ರೀತಿಯಲ್ಲಿ ಸೊಗಸು!. ಹಲವು ಪತ್ರಕರ್ತರು, ಹವ್ಯಾಸಿ ಫೋಟೋಗ್ರಾಫರ್ ಗಳು ಆನೆಗಳ ಸುಂದರ ಭಾವಚಿತ್ರ ತೆಗೆದು ಪತ್ರಿಕೆಗಳಲ್ಲಿ ಇತರೆ ಮಾಧ್ಯಮಗಳಲ್ಲಿ ಹಾಕುತ್ತಾರೆ. ಶಾಲಾ ಕಾಲೇಜುಗಳಲ್ಲಿ ಆನೆ ಚಿತ್ರ, ಆನೆ ಕುರಿತು ಪ್ರಬಂಧ ಸ್ಪರ್ಧೆ ಆಯೋಜನೆ ಮಾಡುವುದು ಉಂಟು. ಇದರಿಂದಾಗಿ ಅವರುಗಳಲ್ಲಿ ಅರಿವು ಮೂಡಿಸಲು ಇದು ನೆರವಾಗುತ್ತದೆ.

“ಅಡಿಕೇಲಿ ಹೋದ ಮಾನ ಆನೆ ಕೊಟ್ಟರೂ ಬಾರದು”, “ಆನೆ ಸತ್ತರೂ ಸಾವಿರ ಬದುಕಿದ್ದರೂ ಸಾವಿರ…,” “ಲೋಕಸರ ಗುಂಪಾದರೆ ಆನೆ ಕೂಡ ದಾಟುವುದಿಲ್ಲ”, “ಆನೆ ಹೊಟ್ಟಿಗೆ ಆರು ಕಾಸು ಮಜ್ಜಿಗೆ” ಈ ರೀತಿಯ ಗಾದೆ, ಒಗಟು, ನುಡಿಗಟ್ಟು ಮೂಲಕ ನಮ್ಮ ಕನ್ನಡ ಪದ ಬಳಕೆ ಸಂಪತ್ತು ಅಗಾಧವಾಗಿದೆ. “ಅಜಗಜಾಂತರ” ವ್ಯತ್ಯಾಸದ ಹೋಲಿಕೆ. ಯಾವುದಾದರೂ ಕೆಲಸ ಕಾರ್ಯಗಳು ದೀರ್ಘ ಸಮಯ ತೆಗೆದುಕೊಂಡರೆ, ತೊಂದರೆಯಾಗುತ್ತಿದ್ದರೆ “ಗಜ ಪ್ರಸವ” ಪದಬಳಕೆ ಇದ್ದೇ ಇರುತ್ತದೆ. ಮುಂದುವರೆದಂತೆ ಆನೆ “ಗಜಗಾಂಭೀರ್ಯ”ಕ್ಕೆ ಹೆಸರುವಾಸಿ. “ಆನೆ ನಡೆದಿದ್ದೇ ದಾರಿ” ಇದೂ ಕೂಡ. ಆನೆ ಇಳಿಜಾರಿನಲ್ಲಿ ನಿಧಾನವಾಗಿ ಚಲಿಸುತ್ತದೆ. ಆದರೆ ಏರುದಾರಿಯಲ್ಲಿ ವೇಗವಾಗಿ ಚಲಿಸುತ್ತದೆ.


ಗಣಪತಿ ಹಬ್ಬದಂದು ಆನೆಗಳ ಬಗ್ಗೆ ಪೂಜ್ಯ ಭಾವನೆ ಮೂಡುತ್ತದೆ. ಗಣಪತಿಯ ಮುಖವೇ ಆನೆಯದ್ದು. ಅದರಿಂದಲೇ “ಗಜಮುಖ” ಎಂದು ಪ್ರಸಿದ್ಧಿಯಾಗಿದೆ. ಇದರೊಂದಿಗೆ ಗಣಪತಿ ಗಜಮುಖ ದೊಂದಿಗೆ ಎಲ್ಲರನ್ನು ಸೆಳೆದುಬಿಡುತ್ತಾನೆ. ಹಲವು ಕಡೆ ಗಜ ಉತ್ಸವ ಕೂಡ ಮಾಡುತ್ತಾರೆ. ಅಂದು ಗಜ ಗಳಿಗೆ ಹಣ್ಣು ಹಂಪಲ ಹೆಚ್ಚಿನ ತಿಂಡಿ ತಿನಿಸು ಕೊಟ್ಟು ಅನೇಕ ಮನೋರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ.

ಆನೆಯನ್ನು ಪಳಗಿಸಲು ಒಂದು ಸಣ್ಣ ಅಂಕುಶ ಸಾಕು. ಬುದ್ಧಿವಂತಿಕೆ ಪ್ರಾಣಿಯನ್ನು ಮಾನವ ಹಿಡಿದು, ಪಳುಗಿಸಿ ಅದರಿಂದ ಅನೇಕ ಪ್ರಯೋಜನ ಪಡೆದುಕೊಳ್ಳುತ್ತಿದ್ದಾನೆ. ದಟ್ಟ ಅರಣ್ಯದಲ್ಲಿ ದೊಡ್ಡ ದೊಡ್ಡ ಮರಗಳನ್ನು ಸಾಗಿಸುವಲ್ಲಿ…… ಜೊತೆಗೆ ಅರಣ್ಯ ಇಲಾಖೆಯಲ್ಲಿ ಯಾವುದಾದರೂ ಕಾರ್ಯಾಚರಣೆ ಮಾಡುವಾಗ…… ನಾಡಿಗೆ ಆಗಮಿಸಿರುವ ಹುಲಿ, ಚಿರತೆ ಸೆರೆ ಸಂದರ್ಭದಲ್ಲಿ…… ಆನೆಯನ್ನು ಬಳಸುತ್ತಾರೆ.

ಇನ್ನೇನು ವಿಶ್ವವಿಖ್ಯಾತ ಮೈಸೂರು ದಸರಾ ಬರುತ್ತಿದೆ. “ಮೈಸೂರು ದಸರಾ” ಎಂದರೆ ಆನೆ, “ಆನೆ” ಎಂದರೆ ಮೈಸೂರು ದಸರಾ ಎನ್ನುವಂತಾಗಿದೆ. ದಸರಾದ ಇತಿಹಾಸದಲ್ಲಿ ಚಿನ್ನದ “ಅಂಬಾರಿ” ಹೊತ್ತಿರುವ ಆನೆಗಳು ಸಹ ಇತಿಹಾಸದ ಪುಟಗಳಿಂದಲೂ ಪ್ರಸಿದ್ಧಿ ಪಡೆದಿವೆ. ಈ ಸಂದರ್ಭದಲ್ಲಿ ದ್ರೋಣ, ಬಲರಾಮ ಮುಂತಾದ ಆನೆಗಳು ನೆನಪಿಗೆ ಬರುತ್ತವೆ. ಇನ್ನು ಚಲನಚಿತ್ರಗಳಲ್ಲೂ ಕೂಡ ಆನೆಯ ಬಳಕೆ ಇರುವುದನ್ನು ನಾವು ನೋಡಿದ್ದೇವೆ. “ಗಂಧದಗುಡಿ” ಚಿತ್ರದಲ್ಲಿ “ನಾವಾಡುವ ನುಡಿಯೇ ಕನ್ನಡ ನುಡಿ” ಎನ್ನುವ ಗೀತೆಯನ್ನು ಹಾಡುವುದರ ಮೂಲಕ ಆನೆಯ ಮೇಲೆ ಕುಳಿತು ಬರುವ ಡಾ ರಾಜಕುಮಾರ್ ರವರ ಚಿತ್ರಣ…… ಇದೇ ರೀತಿ ವಿಷ್ಣುವರ್ಧನ್….. ಇನ್ನಿತರ ನಟರು ಕೂಡ ತಮ್ಮ ಚಿತ್ರಗಳಲ್ಲಿ ಆನೆಯೊಂದಿಗೆ ನಟಿಸಿರುವುದು ಕಾಣಸಿಗುತ್ತದೆ.

ದೈತ್ಯ ಪ್ರಾಣಿಯಾದ ಆನೆಗೆ ಸಣ್ಣದೊಂದು ಇರುವೆ, ಚಿಟ್ಟೆ ಕಚ್ಚಿದರೂ ಪರದಾಡುತ್ತದೆ!. ಆನೆಯ ಚರ್ಮ ಅತ್ಯಂತ ಸೂಕ್ಷ್ಮವಾದದ್ದು. ಆನೆ ಸಸ್ಯಾಹಾರಿ ಯಾಗಿರುವುದರಿಂದ ಕಾಡಿನಲ್ಲಿ ದಟ್ಟವಾಗಿ ಸಿಗುವ ಸೊಪ್ಪುಗಳನ್ನು ತಿಂದು ಬದುಕುತ್ತದೆ. ಕಾಡಿನಲ್ಲಿ ಹೆಚ್ಚು ಆನೆಗಳಿದ್ದರೆ ಕಳ್ಳ ಕಾಕರಿಗೆ ಒಂದು ರೀತಿಯಲ್ಲಿ ಭಯ ಹುಟ್ಟಿಸಿ, ಕಾಡನ್ನು ರಕ್ಷಣೆ ಮಾಡುವಲ್ಲೂ ಕೂಡ ಆನೆ ತನ್ನ ಕೆಲಸ ಮಾಡುತ್ತವೆ. ಒಂದೆಡೆ ಆನೆಗಳ ಸಂಖ್ಯೆ ಹೆಚ್ಚಳವಾಗಿದ್ದರೆ, ಮತ್ತೊಂದೆಡೆ ಆನೆಗಳು ಮಾನವ ಸಂಘರ್ಷಕ್ಕೂ ಕಾರಣವಾಗಿವೆ.ಇನ್ನು ಕಾಡುಗಳ್ಳ ವೀರಪ್ಪನ್ ಕತೆ ಎಲ್ಲರಿಗೂ ಗೊತ್ತಿದೆ!. ಹಲವು ವರ್ಷಗಳವರೆಗೆ ವೀರಪ್ಪನ್ ದಂತದ ಆಸೆ ಗಾಗಿ ಅನೇಕ ಆನೆಗಳನ್ನು ಹತ್ಯೆ ಮಾಡಿ ಅರಣ್ಯ ಇಲಾಖೆಗೆ ಒಂದು ಕಂಠಕವಾಗಿದ್ದ. ಅವನ ಅವನತಿಯ ನಂತರ ಆನೆಗಳು ನಿಟ್ಟಿಸಿರು ಬಿಟ್ಟಿವೆ. ಅಲ್ಲದೆ ಆನೆಯ ಚರ್ಮ, ಬಾಲದ ಕೂದಲು ಹೆಚ್ಚು ಬೆಲೆ ಇರುವುದರಿಂದ ಇವೆಲ್ಲದರ ಮಾರಾಟಕ್ಕೆ ಆನೆಗಳು ಬಲಿಯಾಗುತ್ತಿವೆ. ಅರಣ್ಯ ಇಲಾಖೆ ಈಗ ಕೊಟ್ಟುನಿಟ್ಟಿನ ಕಾಯ್ದೆಗಳನ್ನು ಜಾರಿಗೆ ತಂದು, ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶ ಮಾಡುವವರ ವಿರುದ್ಧ ಕ್ರಮ ಜರುಗಿಸುತ್ತಿದೆ. ಜೊತೆಗೆ ದಂತ ಕಳ್ಳ ಸಾಗಾಣಿಕೆ ಮಾಡುವವರ ವಿರುದ್ಧ ಎಚ್ಚೆತ್ತುಕೊಂಡು ಕಾಡುಗಳ್ಳರನ್ನು ಹಿಡಿದು ಶಿಕ್ಷೆ ಮಾಡುವುದರ ಮೂಲಕ ಆನೆ ಸಂತತಿಯನ್ನು ವೃದ್ಧಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯದ ಅಧಿಕಾರಿಗಳಿಗೆಲ್ಲ ಅಭಿನಂದನೆಗಳನ್ನು ಸಲ್ಲಿಸಲೇಬೇಕು. ಇನ್ನು ಅನೇಕ ದೇವಸ್ಥಾನಗಳಲ್ಲಿ…… ಜೂ ಗಳಲ್ಲೂ ಕೂಡ ಆನೆಗಳನ್ನು ನೋಡಬಹುದು. ಜೊತೆಗೆ ಮೈಸೂರು ಮಹಾರಾಜರಿಗೆ ಸೇರಿದ ಆನೆಗಳು ಇವತ್ತಿಗೂ ಕೂಡ ಮೈಸೂರು ಅರಮನೆಯ ಆವರಣದಲ್ಲಿ ಇವೆ. ಜೂಗಳಲ್ಲಿ ಆನೆಗಳನ್ನು ಅನೇಕರು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ.

ಕಾಡುಗಳಿಗೆ ಸಫಾರಿ ಹೋಗುವ ಸಂದರ್ಭದಲ್ಲಿ ವೀಕ್ಷಣೆಗಾರರು ಆನೆಗಳನ್ನು ಕೆರಳಿಸುವುದು ಉಂಟು. ಇದರಿಂದಾಗಿ ರೊಚ್ಚಿಗೆದ್ದ ಆನೆಗಳು ಅನೇಕ ದುರಂತ ಮಾಡಿವೆ. ಊರಂಚಿಗೆ ಬರುವ ಆನೆಗಳ ಜೊತೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಅನೇಕರು ತಮ್ಮ ಅಂತ್ಯವನ್ನು ತಾವೇ ಕಂಡುಕೊಳ್ಳುತ್ತಿದ್ದಾರೆ. ಇದು ನಮ್ಮ ಯುವಜನತೆಯಲ್ಲಿಯೇ ಹೆಚ್ಚು. ಇದು ಮೊದಲು ನಿಲ್ಲಬೇಕು.

ಒಟ್ಟಿನಲ್ಲಿ ಈ ಸಾಂಸ್ಕೃತಿಕ ಹೆಸರಿನ ಆನೆಯ ಬಗ್ಗೆ ಎಷ್ಟು ಹೇಳಿದರು ಸಾಲದು. ಆಗಸ್ಟ್ 12 ರಂದು “ವಿಶ್ವ ಆನೆ ದಿನ”ವನ್ನಾಗಿ ಆಚರಿಸುವ ಸಂದರ್ಭದಲ್ಲಿ ಆನೆಯ ಬಗ್ಗೆ ನಾವೆಲ್ಲ ತಿಳಿದುಕೊಳ್ಳಲೇಬೇಕು. ಎಲ್ಲರಿಗೂ “ವಿಶ್ವ ಆನೆ ದಿನಾಚರಣೆ” ಹಾರ್ದಿಕ ಶುಭಾಶಯಗಳು.

ಕಾಳಿಹುಂಡಿ ಶಿವಕುಮಾರ್ ಮೈಸೂರು.

4 Responses

  1. ಉತ್ತಮ ಮಾಹಿಯುಳ್ಳ ಲೇಖನ.. ಧನ್ಯವಾದಗಳು ಸಾರ್

  2. ನಯನ ಬಜಕೂಡ್ಲು says:

    ವಿಸ್ತೃತ, ಮಾಹಿತಿ ಪೂರ್ಣ ಬರಹ.

  3. S.sudha says:

    Very nice

  4. ಶಂಕರಿ ಶರ್ಮ says:

    ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಎಲ್ಲರಿಗೂ ಇಷ್ಟವಾಗುವ ಆನೆ ಕುರಿತು ವಿಶ್ವ ಆನೆ ದಿನಾಚರಣೆಯ ಪ್ರಯುಕ್ತ ಬರೆದ ಲೇಖನ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: