ಜೀವಿಗಳ ಹೃನ್ಮನಗಳನ್ನು ಬೆಸೆಯುವ ಅಪೂರ್ವ ಕೊಂಡಿ ಸ್ನೇಹ.
ಸ್ನೇಹ ಎಂಬ ಎರಡು ಅಕ್ಷರದ ಪದವು ವಿಶಾಲವಾಗಿ ಹರಡಿಕೊಂಡಿರುವ ಆತ್ಮೀಯ ಸಂಬಂಧಗಳನ್ನು ಪರಿಚಯಿಸುತ್ತದೆ. ವಿಜ್ಞಾನದ ಮಾಹಿತಿಯ ಪ್ರಕಾರ ಶುದ್ಧವಾದ ನೀರಿಗೆ ಬಣ್ಣವಿಲ್ಲ, ವಾಸನೆಯಿಲ್ಲ, ರುಚಿಯಿಲ್ಲ ಎಂದೆಲ್ಲ ಹೇಳಲಾಗುತ್ತದೆ. ಅದೇ ರೀತಿಯಲ್ಲಿ ಶುದ್ಧ ಸ್ನೇಹಸಂಬಂಧಕ್ಕೆ ಲಿಂಗಭೇದ, ವರ್ಣಭೇದ, ಸಿರಿತನ-ಬಡತನದ ಭೇದ, ಸಾಮಾಜಿಕ ಅಂತಸ್ಥುಗಳ ಭೇದ ಯಾವುವೂ ಇಲ್ಲ. ಅದಕ್ಕೆ ಬೇಕಾಗಿರುವುದು ಒಂದೇ, ಪರಸ್ಪರರೊಡನೆ ಪ್ರೀತಿ, ವಿಶ್ವಾಸಗಳನ್ನು ಬೆಳೆಸಿಕೊಳ್ಳುವ ಉತ್ಸಾಹ ಮತ್ತು ಸ್ನೇಹವನ್ನು ಸ್ಥಿರವಾಗಿ ಮುಂದುವರೆಸಿಕೊಳ್ಳುವ ಗುಣ ಮಾತ್ರ. ಈ ಸಂಬಂಧ ಮಾನಸಿಕ, ಭಾವನಾತ್ಮಕ, ಅಂತಃಕರಣಗಳ ಮಿಳಿತ. ಒಬ್ಬ ಸ್ನೇಹಶೀಲ ವ್ಯಕ್ತಿಯು ಇನ್ನೊಬ್ಬನಿಗಾಗಿ ಏನನ್ನಾದರೂ ಒಳಿತನ್ನೇ ಬಯಸುವ, ತನ್ನಿಂದ ಯಾವ ರೀತಿಯಲ್ಲಾದರೂ ನೆರವಾಗಲೆಂದು ನಿಸ್ವಾರ್ಥವಾಗಿ ಆಶಿಸುತ್ತಾನೆ. ಸ್ನೇಹಿತರು ಪರಸ್ಪರರಿಗೆ ನೆರವಾದಾಗ ಯಾವುದೇ ಪ್ರತಿಫಲವನ್ನು ನಿರೀಕ್ಷಿಸುವುದಿಲ್ಲ. ವ್ಯಕ್ತಿಯು ಕೆಲವು ಸಂದರ್ಭಗಳಲ್ಲಿ ತನ್ನ ಹೆತ್ತವರು, ಒಡಹುಟ್ಟಿದವರು, ಬಂಧುಗಳಲ್ಲಿ ಹಂಚಿಕೊಳ್ಳಲಾಗದ ವಿಷಯಗಳನ್ನು, ಅನಿಸಿಕೆಗಳನ್ನು, ಬಯಕೆಗಳನ್ನು ತನ್ನ ಆತ್ಮೀಯ ಸ್ನೇಹಿತರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವನು. ಇದೇ ಸ್ನೇಹಸಂಬಂಧದ ಶ್ರೇಷ್ಟಗುಣ. ಸ್ನೇಹಿತರೆಂದರೆ ವ್ಯಕ್ತಿಯ ಸಂಕಟ ಸಮಯದಲ್ಲಿ ಭಾಗಿಯಾಗುವವರು, ಆತ ಹತಾಶನಾಗಿದ್ದಾಗ ಅವನಿಗೆ ಧೈರ್ಯತುಂಬಿ ಭರವಸೆ ಮೂಡಿಸಿ ಮಾರ್ಗ ತೋರುವವರು, ತಮ್ಮ ತನುಮನಧನಗಳಿಂದ ವ್ಯಕ್ತಿಗೆ ಬೆನ್ನೆಲುಬಾಗಿ ನಿಂತು ನೆರವಾಗುವವರು. ಆಪತ್ಕಾಲದಲ್ಲಿ ಆದವನೇ ನೆಂಟ ಎಂಬ ನಾಣ್ನುಡಿಯಂತೆ ಸ್ನೇಹಿತರು ಬಂಧುವಿಗಿಂತ ಹಿರಿಯ ಸ್ಥಾನದಲ್ಲಿ ನಿಲ್ಲುತ್ತಾರೆ.
ಆದರೆ ಸಾಮಾಜಿಕ ನೆಲೆಯಲ್ಲಿ ಯಾವನಾದರೂ ಚೆನ್ನಾಗಿ ಸಂಪಾದಿಸಿ, ಸಿರಿವಂತನಾಗಿ, ಗಣ್ಯವ್ಯಕ್ತಿಯಾಗಿದ್ದರೆ ಅವನಲ್ಲಿಗೆ ಜೇನಿಗೆ ನೊಣ ಮುತ್ತುವಂತೆ ನಾಮುಂದು, ತಾಮುಂದು ಎಂದು, ಆತನಿಗೆ ತಾವೆಷ್ಟು ನಿಕಟ ಸ್ನೇಹಿತರಾಗಿದ್ದೆವು ಎಂದು ಹೇಳಿಕೊಳ್ಳುತ್ತಾ ಹತ್ತಿರವಾಗುತ್ತಾರೆ. ಆ ವ್ಯಕ್ತಿಯ ವರ್ಚಸ್ಸಿನಿಂದ ತಮಗೇನಾದರೂ ಸವಲತ್ತು, ಸಹಾಯ ಗಿಟ್ಟಿಸಿಕೊಳ್ಳುವುದೇ ಅವರೆಲ್ಲರ ಮುಖ್ಯ ಉದ್ದೇಶವಾಗಿರುತ್ತದೆ. ಒಂದುವೇಳೆ ಅದೇ ವ್ಯಕ್ತಿಗೆ ವ್ಯವಹಾರದಲ್ಲಿ ನಷ್ಟವಾಗಿ ಸಂಕಷ್ಟದಲ್ಲಿದ್ದಾಗ ಇವರೆಲ್ಲ ಮಂಜಿನಹನಿಗಳ ಹಾಗೆ ಕಾಣದಂತೆ ಮಾಯವಾಗಿಬಿಟ್ಟಿರುತ್ತಾರೆ. ಇಂತಹವರು ಒಳ್ಳೆಯ ಸ್ನೇಹಿತರಲ್ಲ. ಹಾಗಾದರೆ ಒಳ್ಳೆಯ ಸ್ನೇಹಿತರೆಂದರೆ ಯಾರು? ಒಳ್ಳೆಯ ಸ್ನೇಹವೆಂದರೆ ಯಾವುದು? ತನ್ನ ಸಂಕಟಕಾಲದಲ್ಲಿ ಬೆನ್ನಿಗೆ ನಿಂತು ಕಣ ರೊರೆಸಿ ಮುಂದಿನ ಪ್ರಯತ್ನಗಳಿಗೆ ಪ್ರೋತ್ಸಾಹನೀಡಿ ವ್ಯಕ್ತಿಯು ಒಂದು ಉತ್ತಮ ಸ್ಥಿತಿಗೆ ತಲುಪುವವರೆಗೂ ಕೈಹಿಡಿದು ನಡೆಸುವ, ಹೃದಯಕ್ಕೆ ಹತ್ತಿರವಾಗುವ ಗುಣವುಳ್ಳವರೇ ನಿಜವಾದ ಒಳ್ಳೆಯ ಸ್ನೇಹಿತರು.
ಇದಕ್ಕೆ ನಿದರ್ಶನವೆಂಬಂತೆ ಸುಮಾರು ಐದು ಶತಮಾನಗಳ ಹಿಂದೆಯೇ ಪ್ರಸಿದ್ಧ ನಾಟಕಕಾರ ವಿಲಿಯಂ ಶೇಕ್‌ಸ್ಪಿಯರ್ ತನ್ನ ಹ್ಯಾಮ್ಲೆಟ್ ನಾಟಕದಲ್ಲಿ ಒಂದು ಪಾತ್ರದ ಮೂಲಕ ಹೇಳಿಬಿಟ್ಟಿದ್ದಾನೆ. ಆಗಿನ ಕಾಲದ ಬುದ್ಧಿವಂತ ಮಂತ್ರಿಯಾಗಿದ್ದ ಪೊಲೋನಿಯಸ್ ಅವನ ಮಗ ಲಿಯಾರ್ಟಿಸ್ ಹೆಚ್ಚಿನ ಕಲಿಕೆಗಾಗಿ ಪ್ಯಾರಿಸ್ಸಿಗೆ ಹೊರಟ ಸಂದರ್ಭದಲ್ಲಿ ಹೇಳಿದ ಮಾತಿದು. ತಂದೆಯು ಮೊಟ್ಟಮೊದಲ ಬಾರಿಗೆ ತನ್ನ ಮಗನು ದೂರದೇಶವೊಂದಕ್ಕೆ ಹೋಗುತ್ತಿರುವುದರಿಂದ, ಹೊಸಸ್ಥಳ ವಿಭಿನ್ನ ಸಂಸ್ಕೃತಿಗೆ ಹೊಂದಿಕೊಳ್ಳಬೇಕಾದರೆ ಹೇಗಿರಬೇಕು ಎಂಬುದನ್ನು ಬುದ್ಧಿಮಾತುಗಳ ರೂಪದಲ್ಲಿ ಹೇಳಿ ಕಳುಹಿಸುತ್ತಾನೆ. ಅದೇ ಪೊಲೋನಿಯಸ್ ಅಡ್ವೈಸ್ ಟು ಹಿಸ್ ಸನ್ ಎಂಬ ಶೀರ್ಷಿಕೆಯೊಡನೆ ಇಂದಿಗೂ ಪ್ರಸಿದ್ಧವಾಗಿದೆ. ವಾಸ್ತವಿಕವಾದದ್ದಾಗಿದೆ. ಪೊಲೋನಿಯಸ್ ಮಗನಿಗೆ ಸ್ನೇಹಿತರನ್ನು ಗಳಿಸಿಕೊಳ್ಳುವ ಬಗ್ಗೆ ಹೀಗೆ ಹೇಳುತ್ತಾನೆ ಮಗೂ ನಿನ್ನ ಬಳಿ ಹಣವಿದ್ದಾಗ ಬಹಳ ಜನ ಸ್ನೇಹಿತರು ನಿನ್ನನ್ನು ಓಲೈಸುತ್ತಾರೆ. ನಿನ್ನಿಂದ ಸಹಾಯ ಅಪೇಕ್ಷಿಸುತ್ತಾರೆ. ನಿನ್ನ ಹಿಂದೆಮುಂದೆ ಸುತ್ತುತ್ತಾರೆ. ನಿನ್ನ ಜೇಬು ಖಾಲಿಯಾದಾಗ ಅವರ್‍ಯಾರೂ ನಿನ್ನ ಹತ್ತಿರಕ್ಕೆ ಬರುವುದೇ ಇಲ್ಲ. ಆದ್ದರಿಂದ ಮಗನೇ ನೀನು ಬೇರೆಯವರಿಂದ ಹಣವನ್ನು ಸಾಲವಾಗಿ ಪಡೆಯುವುದಾಗಲೀ, ಇತರರಿಗೆ ಸಾಲ ಕೊಡುವುದಾಗಲೀ ಮಾಡದಿರು. ಏಕೆಂದರೆ ಹಣವನ್ನು ಸಾಲಪಡೆದರೆ ನೀನದನ್ನು ಧಾರಾಳವಾಗಿ ಖರ್ಚು ಮಾಡಿಬಿಡುತ್ತೀಯೆ. ಹಣ ಸಂಪಾದನೆಯ ಶ್ರಮವೆಷ್ಟೆಂದು ನಿನಗೆ ಅರ್ಥವಾಗದು. ಇದರಿಂದ ನೀನು ಸೋಮಾರಿಯಾಗುತ್ತೀಯೆ. ಇನ್ನು ಹಣವನ್ನೇನಾದರೂ ಸಾಲವಾಗಿ ಕೊಟ್ಟೆಯೋ ಅದು ಹಿಂತಿರುಗಿ ಬಾರದಿದ್ದಾಗ ನಿನಗೆ ಚಿಂತೆಯಾಗುತ್ತದೆ. ಗೆಳೆತನದ ದಾಕ್ಷಿಣ್ಯದಿಂದ ಕಠಿಣವಾಗಿ ಅದನ್ನು ವಸೂಲು ಮಾಡಲಾಗದು. ಕೆಲವು ಕಾಲದ ನಂತರ ಹಣ ಪಡೆದ ಗೆಳೆಯ ನಿನ್ನ ಕಣ್ಣುತಪ್ಪಿಸಿ ಓಡಾಡುತ್ತಾನೆ. ಇದರಿಂದಾಗಿ ನಿನಗೆ ಹಣವೂ ನಷ್ಟವಾಗುವುದರೊಂದಿಗೆ ಸ್ನೇಹಸಂಬಂಧವೂ ಹಾಳಾಗುತ್ತದೆ. ಇವ್ಯಾವೂ ದುರ್ಗುಣಗಳಿಲ್ಲದ ನಿಜವಾದ ಸ್ನೇಹಿತರು ದೊರಕುವುದು ಸುಲಭವಲ್ಲ. ಅಪರೂಪಕ್ಕೆ ಸಿಗುತ್ತಾರೆ. ಅಂಥಹವರು ದೊರೆತಾಗ ಅವರನ್ನು ಯಾವುದೇ ಕಾರಣಕ್ಕೂ ನೀನು ಕಳೆದುಕೊಳ್ಳಬೇಡ. ಅವರನ್ನು ನಿನ್ನ ಹೃದಯಕ್ಕೆ ಹತ್ತಿರವಾಗಿರುವಂತೆ ಪ್ರೀತಿಯೆಂಬ ಉಕ್ಕಿನ ಸರಳುಗಳಿಂದ ಬಿಗಿಯಪ್ಪಿಕೋ. ಇದಕ್ಕಿಂಥ ಒಳ್ಳೆಯ ಬುದ್ಧಿಮಾತುಗಳನ್ನು ಯಾವ ಮಾತಾಪಿತೃಗಳು ತಮ್ಮ ಮಕ್ಕಳಿಗೆ ಹೇಳಲು ಸಾಧ್ಯ.
ನಮ್ಮ ಪುರಾಣಗಳಲ್ಲಿಯೂ ಇಂತಹ ಆದರ್ಶಸ್ನೇಹದ ಪುರಾವೆಗಳಿವೆ. ದ್ವಾಪರಯುಗದಲ್ಲಿ ಬಾಲ್ಯ ಸ್ನೇಹಿತರಾಗಿ ಬೆಳೆದು ದೀರ್ಘಕಾಲದ ಒಡನಾಡಿಗಳಾಗಿದ್ದ ಶ್ರೀಕೃಷ್ಣ-ಕುಚೇಲರ ಅಮರ ಸ್ನೇಹವನ್ನು ಮರೆಯುವಂತೆಯೇ ಇಲ್ಲ. ಹಲವಾರು ವರ್ಷಗಳ ನಂತರ ಕುಚೇಲನು ಗೆಳೆಯ ಶ್ರೀಕೃಷ್ಣನನ್ನು ಭೇಟಿಮಾಡಲು ದ್ವಾರಕೆಗೆ ಹೊರಟಿರುತ್ತಾನೆ. ಆಗ ಕುಚೇಲನ ಕಟುಂಬ ದಟ್ಟದಾರಿದ್ರ್ಯದ ದುರವಸ್ಥೆಯಲ್ಲಿರುತ್ತದೆ. ಆತನ ಹೆಂಡತಿ ಅವನಿಗೆ ಹೇಗೂ ನೀವು ಗೆಳೆಯ ಶ್ರೀಕೃಷ್ಣನ ಭೇಟಿಗೆ ಹೊರಟಿದ್ದೀರಿ. ಈಗ ನಿಮ್ಮ ಗೆಳೆಯ ಸಿರಿವಂತನಾಗಿದ್ದಾನೆ. ಅವನಿಂದ ಏನಾದರೂ ಹಣಕಾಸಿನ ನೆರವನ್ನು ಕೇಳಿ ಪಡೆದುಕೊಂಡು ಬನ್ನಿ ಎಂದು ಹೇಳುತ್ತಾಳೆ. ಆದರೆ ಕುಚೇಲನ ಮನಸ್ಸೇ ಬೇರೆ. ತಾನು ಗೆಳೆಯನ ಮನೆಗೆ ಬರಿಗೈಯಿಂದ ಹೋಗುವುದೇ. ಏನನ್ನಾದರೂ ಕೊಂಡೊಯ್ಯಬೇಕೆಂದು ಹೆಂಡತಿಯನ್ನು ಏನಾದರೂ ತಿಂಡಿಮಾಡಿಕೊಡಲು ಕೋರುತ್ತಾನೆ. ಆಕೆ ಮನೆಯಲ್ಲಿದ್ದ ಮೂರುಹಿಡಿ ಅವಲಕ್ಕಿಯನ್ನು ಬಟ್ಟೆಯಲ್ಲಿ ಗಂಟಿಕ್ಕಿ ಅವನ ಕೈಗೆ ಕೊಡುತ್ತಾಳೆ. ದೂರ ಪ್ರಯಾಣದ ನಂತರ ದ್ವಾರಕೆಯನ್ನು ತಲುಪಿ ಶ್ರೀಕೃಷ್ಣನ ಅರಮನೆಗೆ ಬರುತ್ತಾನೆ. ಅವನನ್ನು ಅತ್ಯಂತ ಸಂತೋಷದಿಂದ ಎದಿರುಗೊಂಡು ಸ್ವಾಗತಿಸುತ್ತಾನೆ. ಉಭಯಕುಶಲೋಪರಿಗಳಾದ ನಂತರ ಶ್ರೀಕೃಷ್ಣ ಗೆಳೆಯನನ್ನು ನನಗಾಗಿ ಏನು ತಂದಿರುವೆ? ಅತ್ತಿಗೆ ಏನಾದರೂ ಕೊಟ್ಟು ಕಳುಹಿಸಿರುತ್ತಾಳೆ ಎಂದು ಕೇಳುತ್ತಾನೆ. ಕುಚೇಲನು ಅತ್ಯಂತ ಸಂಕೋಚದಿಂದ ಗಂಟಿನಲ್ಲಿದ್ದ ಅವಲಕ್ಕಿಯನ್ನು ಕೊಡುತ್ತಾನೆ. ಕೃಷ್ಣನಿಗೆ ಎಲ್ಲವೂ ವೇದ್ಯವಾಗುತ್ತದೆ. ಆದರೆ ಅವನು ಗೆಳಯನು ತಂದಿದ್ದ ತಿನಿಸನ್ನು ಮೃಷ್ಟಾನ್ನವೆಂಬಂತೆ ಸವಿಯುವುದಲ್ಲದೆ ಪತ್ನಿ ರುಕ್ಮಿಣಿಗೂ ಕೊಟ್ಟು ಸಂತೋಷಪಡುತ್ತಾನೆ. ಕುಚೇಲನಿಗೆ ಶ್ರೀಕೃಷ್ಣನ ಸ್ನೇಹಭಾವವನ್ನು ಕಂಡು ಹೃದಯತುಂಬಿ ಆನಂದಭಾಷ್ಪಗಳು ಉದುರುತ್ತವೆ. ಇದನ್ನು ಕಂಡು ಶ್ರೀಕೃಷ್ಣ ಕುಚೇಲನನ್ನು ಬಿಗಿದಪ್ಪಿಕೊಳ್ಳುತ್ತಾನೆ. ಕುಚೇಲ ಕೃತಾರ್ಥನಾದೆನೆಂದು ಅಂದುಕೊಳ್ಳುತ್ತಾನೆ. ಭೇಟಿಯು ಮುಗಿದು ಹಿಂದಿರುಗುವ ಸಮಯದಲ್ಲಿ ಶ್ರೀಕೃಷ್ಣನು ಕುಚೇಲನನ್ನು ಏನು ಬೇಕೆಂದು ಕೇಳುತ್ತಾನೆ. ಆಗ ಕುಚೇಲನಿಗೆ ತನ್ನ ಹೆಂಡತಿಯ ಮಾತುಗಳು ನೆನಪಾದರೂ ಏನನ್ನೂ ಕೇಳುವುದಿಲ್ಲ. ಕೃಷ್ಣಾ ನಿನ್ನ ದರ್ಶನಭಾಗ್ಯ ದೊರಕಿತು. ನನಗದಕ್ಕಿಂತ ಹೆಚ್ಚಿನದು ಇನ್ನೇನೂ ಬೇಡ ಎನ್ನುತ್ತಾ ಅವನಿಂದ ಬೀಳ್ಕೊಳ್ಳುತ್ತಾನೆ. ಆದರೆ ಅವನು ಹಿಂತಿರುಗಿ ಮನೆ ಸೇರುವಷ್ಟರಲ್ಲಿ ಅವನ ಕುಟುಂಬದ ಸ್ಥಿತಿಗತಿಗಳೇ ಬದಲಾಯಿಸಿ ಹೋಗಿರುತ್ತವೆ. ಅವನು ಬಯಸದೇ ಅವನ ಸಂಸಾರಕ್ಕೆ ಅಗತ್ಯವಾದ ಸುಖಸೌಲಭ್ಯಗಳನ್ನು ಶ್ರೀಕೃಷ್ಣ ಕರುಣಿಸಿಬಿಟ್ಟಿರುತ್ತಾನೆ. ಇಲ್ಲಿ ವ್ಯಕ್ತಿಗಳಿಬ್ಬರೂ ಬಾಯಿಂದ ನುಡಿಯದಿದ್ದರೂ ಅವರಿಬ್ಬರ ಹೃದಯಗಳ ಭಾವನೆಗಳು ಪರಸ್ಪರ ವಿನಿಮಯವಾಗಿವೆ. ಇದೇ ನಿಜವಾದ ಸ್ನೇಹದ ಮಹತ್ವ.
ಮಹಾಭಾರತ ಕಾವ್ಯದಲ್ಲಿ ದುರ್ಯೋಧನ ಮತ್ತು ಕರ್ಣರ ಸ್ನೇಹಸಂಬಂಧಕ್ಕೆ ಸಾಟಿಯೇ ಇಲ್ಲವೆಂಬಂತೆ ಚಿತ್ರಿತವಾಗಿದೆ. ಕುರುಕ್ಷೇತ್ರ ಯುದ್ಧಕ್ಕೆ ಮೊದಲು ಶ್ರೀಕೃಷ್ಣನು ಭೇದೋಪಾಯದಿಂದ ಕರ್ಣನಿಗೆ ಅವನ ಜನ್ಮ ರಹಸ್ಯವನ್ನು ತಿಳಿಸುತ್ತಾನೆ. ಅವನೇ ಕುಂತಿದೇವಿಯ ಹಿರಿಯ ಪುತ್ರ. ಯುಧಿಷ್ಟಿರನಿಗೆ ಅಣ್ಣ ಎಂಬುದನ್ನು ಅರುಹುತ್ತಾನೆ. ಅವನು ಯುದ್ಧ ಮಾಡುತ್ತಿರುವುದು ಅವನ ತಮ್ಮಂದಿರ ವಿರುದ್ಧವೇ ಎಂದು ಹೇಳುತ್ತಾ ಕರ್ಣನ ಮನಸ್ಸನ್ನು ಪರಿವರ್ತಿಸುವ ಪ್ರಯತ್ನ ಮಾಡುತ್ತಾನೆ. ಅವನೇನಾದರೂ ಒಪ್ಪಿಕೊಂಡರೆ ಯುದ್ಧವನ್ನು ನಿಲ್ಲಿಸಿ ಹಸ್ತಿನಾವತಿಗೆ ಅವನನ್ನೇ ರಾಜನ್ನಾಗಿಸಿ ಕೌರವ, ಪಾಂಡವರೀರ್ವರೂ ಅವನ ಅಡಿಯಾಳಾಗಿ ಸೇವಿಸುವಂತೆ ಮಾಡುತ್ತೇನೆಂದು ಪ್ರಲೋಭನೆಯನ್ನು ಒಡ್ಡುತ್ತಾನೆ. ಆಗ ಕರ್ಣ ಹೇಳುವ ಮಾತುಗಳು ಚಿರಸ್ಮರಣ ಯವಾದವು. ಕೃಷ್ಣಾ ಇಂದಿನವರೆಗೂ ನನ್ನನ್ನು ಸೂತಪುತ್ರನೆಂದೇ ಗುರುತಿಸಿಕೊಳ್ಳುತ್ತಿದ್ದೆ. ಈಗ ನೀನು ನನ್ನ ಜನ್ಮ ರಹಸ್ಯವನ್ನು ಅರುಹಿ ನಾನು ಕ್ಷತ್ರಿಯಪುತ್ರ, ಹಿರಿಯ ಪಾಂಡವ ಎಂದು ಹೇಳಿ ನನ್ನ ಮನಸ್ಸನ್ನು ಕಲುಷಿತಗೊಳಿಸಿದೆ. ಇದರಿಂದಾಗಿ ವಾಸ್ತವದಲ್ಲಿ ಕೌರವನನ್ನು ಕೊಂದೆ. ಹಿಂದೆ ನಾನು ಯಾರೆಂಬ ಅಸ್ತಿತ್ವವೇ ಇಲ್ಲದವನಾಗಿದ್ದ ಸಂದರ್ಭದಲ್ಲಿ ನನ್ನ ಬಿಲ್ಗಾರಿಕೆಯನ್ನು ಮೆಚ್ಚಿ ನನ್ನನ್ನು ಆತ್ಮಬಂಧುವಿನಂತೆ ಆದರಿಸಿದ. ನನಗೆ ಅಂಗರಾಜ್ಯಾಭಿಷೇಕ ಮಾಡಿ ರಾಜನನ್ನಾಗಿ ಮಾಡಿ ಪ್ರತಿಷ್ಟೆಯನ್ನೊದಗಿಸಿದ. ಇದುವರೆಗೆ ನನಗೆ ವೈಯಕ್ತಿಕವಾಗಿ ಯಾವೊಂದು ಕೊರತೆಯೂ ಆಗದಂತೆ ನನಗಿಂತ ಮೊದಲು ಅವನೇ ನೀಡುತ್ತಾ ಬಂದಿದ್ದಾನೆ. ನನ್ನ ಪ್ರಾಣವನ್ನು ಆತನ ಸ್ನೇಹಕ್ಕಾಗಿ ಮೀಸಲಿಟ್ಟಿದ್ದೇನೆ. ಅವನ ಋಣ ತೀರಿಸುವ ಸಲುವಾಗಿ ಅವನ ಪರವಾಗಿಯೇ ಯುದ್ಧದಲ್ಲಿ ತೊಡಗುತ್ತೇನೆ. ನನ್ನ ಸಾಮರ್ಥ್ಯವನ್ನೂ ಫಣಕ್ಕಿಟ್ಟು ಹೋರಾಡುತ್ತೇನೆ. ವೀರನಂತೆ ಅವನಿಗಾಗಿ ನನ್ನ ದೇಹವನ್ನು ರಣರಂಗದಲ್ಲಿ ತ್ಯಾಗಮಾಡುತ್ತೇನೆ. ಯಾವ ರಾಜ್ಯದ ಆಮಿಷವೂ ನನ್ನ ನಿರ್ಧಾರವನ್ನು ಬದಲಾಯಿಸಲಾರದು. ನೀನು ಹೋಗಿಬಾ ಎಂದು ಕೃಷ್ಣನನ್ನು ಬೀಳ್ಕೊಡುತ್ತಾನೆ. ಕುರುಕ್ಷೇತ್ರ ಯುದ್ಧದಲ್ಲಿ ಎಲ್ಲರೂ ಮಡಿದು ದುರ್ಯೋಧನನೊಬ್ಬನೇ ಉಳಿದಾಗ ಅವನು ರಣರಂಗದಲ್ಲಿ ಬಿದ್ದಿದ್ದ ಕರ್ಣನ ಶವದ ಮುಂದೆ ಹೇಳುವ ಮಾತುಗಳು ಅಮೂಲ್ಯವಾದವು. ‘ಕರ್ಣಾ ಎಲ್ಲರೂ ಹೋದರೂ ಚಿಂತೆಯಿಲ್ಲ, ನೀನೊಬ್ಬನು ನನ್ನ ಜೊತೆಗಿದ್ದರೆ ನಾನು ಗೆಲ್ಲಬೇಕೆಂಬ ಆಸೆಯಿರುತ್ತಿತ್ತು. ಆದರೀಗ ನನ್ನ ಪ್ರಾಣಮಿತ್ರ, ಮಹಾವೀರ, ನೀನೇ ಇಲ್ಲದಿದ್ದರೆ ನಾನು ಯಾರಿಗಾಗಿ ಬದುಕಲಿ, ನೀನಿಲ್ಲದ ನನಗೆ ರಾಜ್ಯವೂ ಬೇಡ, ಜೀವವೂ ಬೇಡ. ಕಾದಾಡಿ ಮಡಿಯುತ್ತೇನೆ ‘ ಎಂದು ಕಣ್ಣೀರುಗರೆಯುತ್ತಾನೆ. ಮಹಾಕವಿ ರನ್ನನ ಗದಾಯುದ್ಧ ಕಾವ್ಯದ ಈ ಚಿತ್ರ ಓದುಗರ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಅವರಿಬ್ಬರ ಅವಿಭಾಜ್ಯ ಸ್ನೇಹದ ಶ್ರೇಷ್ಠತೆಯನ್ನು ಕಣ ಗೆ ಕಟ್ಟುವಂತೆ ಕವಿ ವರ್ಣಿಸಿದ್ದಾನೆ.
ಹೀಗೇ ಸ್ನೇಹದ ಹಲವಾರು ಆಯಾಮಗಳು ಹುಡುಕಿದರೆ ನಮಗೆ ದೊರೆಯುತ್ತಲೇ ಹೋಗುತ್ತವೆ. ಸ್ನೇಹವೊಂದು ನಿಷ್ಕಲ್ಮಷವಾದ ಸಂಬಂಧದ ದ್ಯೋತಕವಾಗಿದೆ. ಸ್ನೇಹದ ಸಂಕೇತವಾಗಿಯೇ ವಿಶ್ವದಾದ್ಯಂತ ಒಂದು ದಿನಾಚರಣೆ ಮಾಡಿ ಸಂಭ್ರಮಿಸುವುದು ಸೂಕ್ತವಾದುದು. ಇದನ್ನಾಚರಿಸುವವರು ನಿಜವಾದ ಸ್ನೇಹದ ಅರ್ಥವನ್ನು ಅರಿತು ಆಚರಣೆ ಮಾಡಿದರೆ ಇನ್ನೂ ಉತ್ತಮ.
-ಬಿ.ಆರ್.ನಾಗರತ್ನ. ಮೈಸೂರು.
ಪ್ರಕಟಣೆಮಾಡಿದಕ್ಕಾಗಿ…ಧನ್ಯವಾದಗಳು ಹೇಮಾಮೇಡಂ
ಸೊಗಸಾದ ಬರಹ. ನಿಷ್ಕಲ್ಮಶ, ಯಾವುದೇ ನಿರೀಕ್ಷೆಗಳಿಲ್ಲದ ಸ್ನೇಹ ಪಡೆದವರು ನಿಜಕ್ಕೂ ಅದೃಷ್ಟವಂತರು.
ಸ್ನೇಹದ ದೃಷ್ಟಾಂತ ತುಂಬಾ ಚೆನ್ನಾಗಿ ಕೊಟ್ಟಿದ್ದೀರಿ. .
ಸ್ನೇಹಿತರ ದಿನಾಚರಣೆಯ ಶುಭಾಶಯಗಳು.
ಪೊಲೊನಿಯಸ್ ಸರಿಯಾಗೇ ಹೇಳಿದ್ದಾನೆ, ಸ್ನೇಹ ಅತಿ ಮಧುರ, ಅದು ಅಮರ.ಲೇಖನ ಪುರಾಣದ ಸ್ನೇಹಗಳನು ಕಣ್ಣ ಮುಂದೆ ಬಂದಂತೆ ಆಯಿತು.
ಧನ್ಯವಾದಗಳು ಗೆಳತಿ ಭಾರತಿ
ಧನ್ಯವಾದಗಳು ನಯನಮೇಡಂ
ಧನ್ಯವಾದಗಳು ಗೆಳತಿ ಪದ್ಮಾ
ನಿಷ್ಕಲ್ಮಶ ಸ್ನೇಹದ ಹಲವು ಉದಾಹರಣೆ ಕೊಡುತ್ತಾ ಸ್ನೇಹಿತರ ದನಾಚರಣೆಯನ್ನು ಅರ್ಥಪೂರ್ಣವಾಗಿ ಮಾಡಿದ್ದೀರ ಧನ್ಯವಾದಗಳು…
ಧನ್ಯವಾದಗಳು ಗೆಳತಿ ವೀಣಾ
ಪರಿಶುದ್ಧ ಸ್ನೇಹವೆಂದರೇನು ಎಂಬುದನ್ನು ಉದಾಹರಣೆ ಸಹಿತ ಪ್ರಸ್ತುತ ಪಡಿಸಿದ ಲೇಖನ ಚೆನ್ನಾಗಿದೆ.
ಚೆನ್ನಾಗಿದೆ ಗೆಳತಿ.
ಸ್ನೇಹದ ಮಧ್ಯೆ ಹಣ ಬರಬಾರದು.ಪೋರ್ ಬಂದರ್ ನಲ್ಲಿ ಕುಚೇಲನ ದೇವಸ್ಥಾನವಿದೆ. ಅಲ್ಲಿ ಅವಲಕ್ಕಿಯೇ ಪ್ರಸಾದ.
ಧನ್ಯವಾದಗಳು ಶಂಕರಿ ಮೇಡಂ…ಹಾಗೂ… ಗೆಳತಿ ಸುಚೇತ
ಸ್ನೇಹದ ನಿರೂಪಣೆ ಚೆನ್ನಾಗಿದೆ.
ಧನ್ಯವಾದಗಳು ಪದ್ಮಿನಿ ಮೇಡಂ.