ಕಾದಂಬರಿ : ‘ಸುಮನ್’ – ಅಧ್ಯಾಯ 11
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಸುಮನ್ : ಗ್ರಹಣ
ಅಂದು ಸಂಜೆಯಾದರೂ ಸುಮನ್ ಅವಳ ಕನಸಿನಿಂದ ಹೊರ ಬಂದಿರಲಿಲ್ಲ. ಅದನ್ನು ಮೆಲಕು ಹಾಕಿ ಸಂತೋಷಪಡುತ್ತಿದ್ದಳು. ಇಲ್ಲಿಯವರೆಗೂ ದೂರ ಓಡುತ್ತಿದ್ದ ಕಂದ ಅಂದಿನ ಕನಸಿನಲ್ಲಿ ಅವಳ ಕೈಗೆ ಸಿಕ್ಕಿ ಬಿದ್ದಿದ್ದ. ಮಗುವನ್ನು ಮುದ್ದಾಡಿದ್ದಳು ಕನಸಿನಲ್ಲಿ.
ಫೋನ್ ಟ್ರಿನ್‍ಗುಟ್ಟಿತು. ಎತ್ತಿ “ಹಲೋ” ಎಂದಳು. “ಹಲೋ ಅಮ್ ಐ ಸ್ಪೀಕಿಂಗ್ ಟು ಮಿಸ್ಸೆಸ್ ಗಿರೀಶ?” ಆ ಕಡೆಯ ಧ್ವನಿ ಕೇಳಿತು.
“ಎಸ್.”
“ಮ್ಯಾಮ್ ನಾನು ಮಾಥೇರಾನ್ ರಿಸಾರ್ಟ್‍ನಿಂದ ಮಾತಾಡ್ತಾಯಿದೀನಿ. ನೀವು ಹೋದ ವಾರ ಇಲ್ಲಿದ್ದಾಗ ತೆಗೆಸಿಕೊಂಡ ಫೋಟೋಗಳನ್ನ ಕಳುಹಿಸಿದಿವಿ. ತಲುಪಿದ್ಯಾ ಮ್ಯಾಮ್?”
“ಯಾವ ಫೋಟೋ?”
“ಒಂದು ಹಳದಿ ಕವರಿನಲ್ಲಿ ಕಳುಹಿಸಿದ್ದೆ. ಬಂತಾ?”
ಮಧ್ಯಾಹ್ನ ಅಂಚೆಯವನು ಒಂದು ಮಿಸೆಸ್ಸ್ ಗಿರೀಶಗೆ ಸಂಬೋಧಿಸಿದ ಹಳದಿ ದೊಡ್ಡ ಕವರ್ ಕೊಟ್ಟಿದ್ದು ಜ್ಞಾಪಕವಾಗಿ
“ಹೂಂ ಬಂದಿದೆ” ಉತ್ತರಿಸಿದಳು ಸುಮನ್.
“ಥ್ಯಾಂಕ್ ಯು ಮ್ಯಾಮ್. ಹ್ಯಾವ್ ಎ ನೈಸ್ ಡೇ” ಫೋನ್ ಕಟ್ ಆಯಿತು.
ಮಿ.ಗಿರೀಶ ಇರಬೇಕಾದ್ದು ಮಿಸ್ಸೆಸ್ ಗಿರೀಶ ಆಗಿದೆ ಎಂದು ತಿಳಿದು ಇಟ್ಟ ಕವರ್ ಕೈಗೆತ್ತಿಕೊಂಡಳು. ಕವರ್ ಒಡೆದು ಅದರೊಳೆಗಿದ್ದ ಫೋಟೋಗಳನ್ನು ಹೊರ ತೆಗೆದಳು. ಅವನ್ನು ನೋಡಿ ಅವಳ ಮುಖ ಬಿಳಿಚಿಕೊಂಡಿತು. ಸರಸರನೆ ಎಲ್ಲಾ ಫೋಟೋಗಳನ್ನು ನೋಡಿದಳು. ಒಂದಿಷ್ಟು ಏನೋ ಮೀಟಿಂಗ್ ಸಂಬಂಧಿಸಿದ ಫೋಟೋಗಳು. ಎಲ್ಲದರಲ್ಲೂ ಗಿರೀಶ ಇದ್ದ. ಇನ್ನೊಂದಷ್ಟರಲ್ಲಿ ಗಿರೀಶ ಯಾವುದೋ ಹೆಂಗಸಿನ ಜೊತೆ ತೆಗೆಸಿಕೊಂಡ ಫೋಟೋಗಳು. ಫೋಟೋಗಳಲ್ಲಿ ಇನ್ಯಾರೂ ಇಲ್ಲ. ಹಾಗಾದರೆ ಅದು ಪಾರ್ಟಿಯಲ್ಲಿ ತೆಗೆದ ಫೋಟೋಗಳು ಅಲ್ಲ. ಯಾವುದೋ ಪಂಚ ತಾರಾ ಹೋಟೆಲಿನಲ್ಲಿ ಗಿರೀಶ ಹಾಗೂ ಆ ಹೆಂಗಸು ನರ್ತಿಸುತ್ತಿದ್ದರು, ಊಟ ಮಾಡುತ್ತಿದ್ದರು, ಆ ಹೆಂಗಸು ಗಿರೀಶಗೆ ಏನೋ ತಿನ್ನಿಸುತ್ತಿದ್ದಳು, ಗಿರೀಶ ಅವಳ ಸೊಂಟವನ್ನು ಬಳಸಿ ನಿಂತಿದ್ದ. ಹೀಗೇ, ತರಾವರಿ. ಒಳ್ಳೆ ಮಧುಚಂದ್ರದ ಫೋಟೋಗಳು. ಸುಮನ್ ಗರಬಡಿದವಳಂತೆ ಕುಳಿತ್ತಿದ್ದಳು. ಮತ್ತೆ ಓದಿದಳು. ಸರಿಯಾಗೇ ಇತ್ತು ಅಡ್ರೆಸ್ಸು. ಅದಿರಲಿ ಫೋಟೋಗಳಲ್ಲಿ ಗಿರೀಶೇ.
ವಾರದ ಹಿಂದೆ ಗಿರೀಶ ಮಾಥೇರಾನ್‍ಗೆ ಹೋಗಿರಲಿಲ್ಲ. ಮುಂಬೈಗೆ ಹೋಗಿದ್ದ. ಓ ಮಾಥೇರಾನ್ ಅದರ ಹತ್ತಿರ ಇರೋದು. ಅಲ್ಲಿಗೆ ಹೋಗಿದ್ದು ನನಗೆ ಹೇಳಲೇ ಇಲ್ಲಾ. ತಲೆ ಕೆಟ್ಟಿದ್ಯಾ ಸುಮನ್ ನಿಂಗೆ. ಅವನು ನಿಂಗೆ ಮೋಸ ಮಾಡಿದಾನೆ. ಅವಳ ಒಳ ಮನಸ್ಸು ಚೀರಲಾರಂಭಿಸಿತು. ಒಂದೇ ಒಂದು ಫೋಟೋ ಗಿರೀಶನ ಕೋಣೆಯಲ್ಲಿಟ್ಟು ಮಿಕ್ಕಿದನ್ನು ಕವರ್ ಗೆ ಹಾಕಿ ಪರ್ಸಿನಲ್ಲಿಟ್ಟಳು. ಅವಳು ಊರಿಗೆ ತೆಗೆದುಕೊಂಡು ಹೋಗುತ್ತಿದ್ದ ಕಿಟ್ ಬ್ಯಾಗ್ ಹೊರ ತೆಗೆದು ಅದರೊಳಗೆ ಒಂದಿಷ್ಟು ಬಟ್ಟೆ ಇಟ್ಟಳು. ಹಿಂದೆ ಮುಂದೆ ನಲಿಯುತ್ತಿದ್ದ ಟಾಮಿಯನ್ನು ಎತ್ತಿ ಬಿಗಿದಪ್ಪಿ ಅದರ ತಲೆಗೆ ತುಟಿ ಒತ್ತಿದಳು. ತಲೆ ನೇವರಿಸಿ ಕೆಳಗಿಳಿದು ಮುಂದಿನ ಬಾಗಿಲು ತೆರದು ಹೊರ ನಡೆದಳು. ಟಾಮಿಯನ್ನು ಅದರ ಮನೆಯಲ್ಲಿ ಕೂಡು ಹಾಕಿ ಗೇಟಾಚೆ ನಡೆದು ಬಿಟ್ಟಳು. ರಂಗಪ್ಪ ವಿಸ್ಮಯದಿಂದ ನೋಡುತ್ತ ನಿಂತಿದ್ದ.
**
ಆಟೋ ಹಿಡಿದು ಮೆಜೆಸ್ಟಿಕ್‍ಗೆ ಬಂದು ಊರಿನ ಬಸ್ ಹತ್ತಿದಳು. ಒಂದು ಗೊಂಬೆಯಂತೆ ಪ್ರತಿಕ್ರಿಯಿಸುತ್ತಿದ್ದಳು. ಅವಳ ಮನಸ್ಸಿಗೆ ಎಷ್ಟು ಘಾಸಿಯಾಗಿತ್ತು ಅಂದರೆ ಅದು ಆ ಘಟನೆಯ ಬಗ್ಗೆ ಯೋಚಿಸಲು, ವಿರ್ಮಶಿಸಲು ತಯಾರಿರಲಿಲ್ಲ. ಅದನ್ನು ಒಂದು ಮೂಲೆಗೆ ನೂಕಿತು. ಕಡಲೆಕಾಯಿ ಮಾರುವನಿಗೆ ಕೈಯಿಲ್ಲ, ಕಂಡಕ್ಟರ್ ಒಬ್ಬ ಮಹಿಳೆ, ಡ್ರೈವರ್ ಬಸ್ ಸ್ಟಾರ್ಟ್ ಮಾಡಿದ. ಬಸ್ ನಂ ಕೆಎ 02-xx379. ಮುಂದಿನ ಸೀಟಿನಲ್ಲಿ ಅಮ್ಮ ಮಗ. ಹಿಂದಿನ ಸೀಟಿನ ಹುಡುಗಿ ಮೊಬೈಲ್ ಮೇಲೆ ಎಷ್ಟು ಜೋರಾಗಿ ಮಾತಾಡ್ತಾಯಿದಾಳೆ. ಬಸ್ಸಿನಲ್ಲಿ ಒಂದು, ಎರಡು, ಮೂರು…….. ಮೂವತ್ತು…. ಮೂವ್ತೈದು ಜನ ಮಾತ್ರ. ಸ್ಯಾಟಿಲೈಟ್ ಬಸ್ ನಿಲ್ದಾಣ ದಾಟಿದೆ. ನೈಸ್ ರಸ್ತೆ ಎಷ್ಟು ಚಿನ್ನಾಗಿದೆ. ಮೋಡ ಕವಿದಿದೆ. ಮಳೆ ಬರುತ್ತೆನೋ. ಹೀಗೆ ಯೋಚಿಸುತ್ತಿತ್ತು ಅವಳ ಮನಸ್ಸು.
ಮೆಲ್ಲಗೆ ಒಂದೊಂದಾಗಿ ಘಟನೆಗಳು ಕಣ್ಣು ಮುಂದೆ ತೇಲಲಾರಂಭಿಸಿದವು. ಅವನ್ನು ನಿರ್ಲಕ್ಷಿಸುವ ಪ್ರಯತ್ನ ಮಾಡಿದಳು. ಉಹೂಂ ಮತ್ತೆ ಮತ್ತೆ ತೇಲಿ ಬಂದವು. ಹೊರಗಡೆ ಗುಡುಗು. ಮಿಂಚಿನ ಜೊತೆ ಮಳೆ. ಹನಿಗಳು ಬಹಳ ರಭಸದಿಂದ ಕಿಟಕಿ ಗಾಜಿನ ಮೇಲೆ ಪಟಪಟನೆ ಹೊಡೆಯತೊಡಗಿದವು. ಕಿಟಕಿ ಹಾಕಿದಳು. ಕಣ್ಣೀರ ಕಟ್ಟೆ ಒಡೆದು ಹರಿಯತೊಡಗಿತು. ಮಳೆಯ ಆರ್ಭಟದಲ್ಲಿ ಸುಮನ್ ಬಿಕ್ಕುವುದು ಯಾರಿಗೂ ಕೇಳಿಸಲಿಲ್ಲ. ಹೊರಗಿನ ಕತ್ತಲೆಯ ಜೊತೆ ಅವಳ ಮನಸ್ಸಿನ ಕತ್ತಲೆ ಪೈಪೋಟಿ ನಡೆಸಿತ್ತು. ಅಳು ಹೊರ ಬರದ ಹಾಗಿ ಅವಳು ಬಾಯಿಗೆ ಒತ್ತಿ ಹಿಡಿದ ಕರವಸ್ತ್ರ ಕತ್ತಲೆಯಲ್ಲಿ ಯಾರಿಗೂ ಕಾಣಿಸಲಿಲ್ಲ. ಅವಳಗಾದ ಅನ್ಯಾಯಕ್ಕೆ ಆಕಾಶವೇ ಕಣ್ಣೀರು ಸುರಿಸಿತು. ಘರ್ಜಿಸಿತು. ಬುಸುಗುಟ್ಟಿತು. ಆಕ್ರೋಶದಿಂದ ಘೀಳಿಟ್ಟಿತು. ತನ್ನ ಬಿಸಿ ಒಡಲಿನಲ್ಲಿದ್ದ ನೋವನ್ನು ನೀರಾಗಿ ಭೂತಾಯಿಯ ಮೇಲೆ ಅಪ್ಪಳಿಸಿತು. ಧೋ ಎನ್ನುವ ಮಳೆ, ಆಕಾಶದಲ್ಲಿ ಅಷ್ಟೊಂದು ನೀರು ಹೇಗೆ ಸೇರಿತ್ತು? ಎಲ್ಲಾ ದುಃಖವನ್ನು ಅಂದೇ ಹರಸಿಬಿಡುವುದೋ ಆಥವಾ ಈ ಪರಿಯ ದುಃಖವನ್ನು ಈ ಜನ್ಮದಲ್ಲಿ ಭರಿಸಲು ಸಾಧ್ಯವೋ? ಒಂದೇ ಸಮನೆ ಮಳೆ ಬರುತ್ತಿತ್ತು. ಒಂದೇ ಸಮನೆ ಸುಮನ್ ಅಳುತ್ತಿದ್ದಳು.
ಬಸ್ಸು ಊರು ತಲುಪಿ ನಿಲ್ದಾಣದಲ್ಲಿ ನಿಂತಿತು. ಊರಲ್ಲೂ ಭರ್ಜರಿ ಮಳೆ. ಬ್ಯಾಗು ಹೊತ್ತ ಸುಮನ್ ಆಟೋ ಹತ್ತಿರ ಬರುವಷ್ಟರಲ್ಲಿ ತೊಯ್ದು ತೊಪ್ಪೆಯಾದಳು. ಆಟೋ ಮನೆ ಮುಂದೆ ನಿಂತಾಯಿತು. ಸುಮನ್ ದುಡ್ಡು ಕೊಟ್ಟು ಗೇಟ್ ದಾಟಿ ಬಾಗಿಲು ಮುಂದೆ ನಿಂತು ಬೆಲ್ ಅದುಮಿದಳು. ರಾತ್ರಿಯ ಕತ್ತಲಲ್ಲಿ ಯಾರು ಬಂದರು ಎಂದುಕೊಳ್ಳುತ್ತಾ ರಾಜಲಕ್ಷ್ಮಿ ಬಾಗಿಲು ತೆರೆದರು. ಮಳೆಯಲ್ಲಿ ನೆಂದ ಮಗಳು ಕಣ್ಣೀರಿಡುತ್ತ ನಿಂತಿದ್ದನ್ನು ನೋಡಿ ಹೌಹಾರಿದರು “ಸುಮನ್ ಏನು ಇಷ್ಟು ಹೊತ್ತಿನಲ್ಲಿ?” ಅವಳ ಕಿಟ್ ಬ್ಯಾಗ್ ತೆಗೆದುಕೊಂಡು ಬಾಗಿಲನ್ನು ಇನ್ನಷ್ಟು ತೆಗೆದು ಮಗಳನ್ನು ಒಳಗೆ ಎಳೆದು ಬಾಗಿಲು ಹಾಕಿದರು. ಹೆಂಡತಿಯ ಧ್ವನಿಯಲ್ಲಿದ್ದ ಗಾಬರಿಗೆ ಅಶ್ವತನಾರಾಯಣರು ರೂಮಿನಿಂದ ಆಚೆ ಬಂದು ಮಗಳನ್ನು ನೋಡಿ ದಂಗಾದರು. ಅಸ್ತವ್ಯಸ್ತವಾದ ಕೂದಲು, ಕೆಂಪಾದ ಕಣ್ಣುಗಳಿಂದ ಹರಿಯುತ್ತಿರುವ ಕಂಬನಿ. ಒದ್ದೆ ಬಟ್ಟೆಯಿಂದ ನಿಂತಲ್ಲೆ ನೀರು ಮಡುವಾಗಿತ್ತು. “ಯಾಕಮ್ಮ ಅಲ್ಲೆ ನಿಂತಿದಿ. ನೀನಗೂ ತಲೆ ಇಲ್ಲ. ಬಾಮ್ಮಾ ಸುಮನ್. ಮೊದ್ಲು ಬಟ್ಟೆ ಬದಲಾಯಿಸು” ಕಕ್ಕುಲತೆಯಿಂದ ಸುಮನ್ ಬಳಿ ಹೋದರು. ಆ ಧ್ವನಿಯಲ್ಲಿದ್ದ ಪ್ರೀತಿಗೆ ದುಃಖ ಇಮ್ಮಡಿಯಾಯಿತು. ತನಗಾದ ಅನ್ಯಾಯ ಅದರಿಂದಾಗುತ್ತಿರುವ ದುಃಖ, ಆಕ್ರೋಶ ಎಲ್ಲಾ ಹೊರ ಹಾಕುವಂತೆ ಪರ್ಸಿನಿಂದ ಫೋಟೋಗಳನ್ನು ತೆಗೆದು ಮೇಜಿನ ಮೇಲೆ ಇಟ್ಟಳು. ಕೈಯಿಂದ ಜಾರಿ ಅವು ಹರಡಿಕೊಂಡವು. ಅಶ್ವತನಾರಾಯಣರು ಕನ್ನಡಕ ಸರಿ ಮಾಡಿಕೊಳ್ಳುತ್ತ ಒಂದು ಫೋಟೋ ನೋಡಿದವರೇ ಸೆಟೆದು ನಿಂತರು. ಕನ್ನಡಕ ತೆಗೆದು ಅದನ್ನು ಕಣ್ಣಿನ ಹತ್ತಿರ ಹಿಡಿದು ಒಂದೊಂದೇ ಎತ್ತಿ ಅದರಲ್ಲಿರುವುದು ಗಿರೀಶ ಎಂದೇ ಖಚಿತ ಪಡಿಸಿಕೊಂಡರು. ರಾಜಲಕ್ಷ್ಮಿ ಒಂದು ಫೋಟೋ ನೋಡಿಯೇ ನೆಲಕ್ಕೆ ಕುಸಿದಿದ್ದರು. ಬಾಯಿಗೆ ಸೆರಗು ಒತ್ತಿದರೂ ಕಣ್ಣುಗಳು ಕಿಡಿ ಕಾರುತ್ತಿದ್ದವು. ಅವರ ತಲೆಯಲ್ಲಿ ಒಂದೇ ವಿಚಾರ ಮುದ್ದಿನಿಂದ ಸಾಕಿದ ಗಿಳಿಯನ್ನು ಗಿಡುಗನ ಕೈಗೆ ಕೊಟ್ಟೆವು. ಸುಮನ್ ಈಗ ಜೋರಾಗಿ ಅಳುತ್ತಿದ್ದಳು.
**
ಮೂರು ದಿನ ರಪ ರಪ ಮಳೆ ಹೊಡಿಯಿತು. ಸುಮನ್ ರಚ್ಚೆ ಹಿಡಿದ ಮಗುವಿನಂತೆ ಮೂರು ದಿನ ಒಂದೇ ಸಮನೆ ಅತ್ತಳು. ಆಕಾಶದಲ್ಲಿ ಎಲ್ಲಿ ಅಡಗಿತ್ತೋ ಅಷ್ಟು ನೀರು? ಸುಮನಳ ಕಣ್ಣಿನಲ್ಲಿ ಅಷ್ಟು ನೀರು ಎಲ್ಲಿ ಸೇರಿತ್ತೋ? ಮನೆಯಲ್ಲಿ ಮಂಕು ಬಡಿದ ವಾತಾವರ್ಣ. ಅಶ್ವತನಾರಾಯಣರಿಗೆ ದಿಕ್ಕೇ ತೋಚದು. ಅಯ್ಯೋ ಕಂದ, ಮನಸ್ಸು ಅಳುತ್ತಿತ್ತು. ಕುಳಿತಲ್ಲೇ ಕಂಬನಿಗರೆದರು. ಮೂರು ದಿನದ ಪತ್ರಿಕೆ ಗರಿ ಗರಿಯಾಗಿ ಹಾಗೇ ಇತ್ತು. ಅದನ್ನು ಕಣ್ಣೆತ್ತಿ ನೋಡಿರಲಿಲ್ಲ. ರಾಜಲಕ್ಷ್ಮಿ ತಮ್ಮ ನೋವನ್ನು ಮರೆ ಮಾಚದೆ ಕೂತಲ್ಲಿ ನಿಂತಲ್ಲಿ ಅಳುತ್ತಿದ್ದರು. ಕಣ್ಣೊರೆಸಿ ಸೀರೆಯಲ್ಲಾ ಒದ್ದೆ. ಹುಳಿ, ಸಾರು ಎಲ್ಲದರಲ್ಲೂ ಅವರ ಕಣ್ಣೀರು. ಹಾಲಿನವನಿಗೆ, ಕೆಲಸದವಳಿಗೆ ಮಾತ್ರ ಬಾಗಿಲು ತೆರೆಯುತ್ತಿದ್ದರು. ಕತ್ತಲೆಯಲ್ಲಿ ಸಾಮಾನು ಕೈ ಕಾಲಿಗೆ ತಾಕುವುದು ಎಂದು ದೀಪ ಹಾಕುತ್ತಿದ್ದರು. ಮನಸ್ಸಿನ ಕತ್ತಲೆಯನ್ನು ಸೂರ್ಯನೂ ಓಡಿಸಲಾರ.
ಅಮ್ಮ ಕರೆದಾಗ ಹೋಗಿ ತಟ್ಟೆಯ ಮುಂದೆ ಕೂರುತ್ತಿದ್ದಳು ಸುಮನ್. ಬಾಯಿಗೆ ಅನ್ನ ಇಡಲಾರದೆ ಬಿಕ್ಕುತ್ತಿದ್ದಳು. ದಪ್ಪ ದಪ್ಪ ಕಣ್ಣೀರು ಅನ್ನದಲ್ಲಿ ಬೆರೆತು ಹೋಗುತ್ತಿತ್ತು, “ಎರಡು ತುತ್ತು ತಿನ್ನು ಮರಿ” ಅವರಮ್ಮ ತಮ್ಮ ದುಃಖವನ್ನು ಬದಿಗೊತ್ತಿ ಮಗಳಿಗೆ ಹೇಳುವರು. ಅವರ ಸರದಿ ಬಂದಾಗ ಅವರಿಗೂ ಒಂದು ತುತ್ತೂ ಗಂಟಲು ಒಳಗೆ ಹೋಗದು. ಎಲ್ಲರು ಎದ್ದು ಕೈ ತೊಳೆದು ಮತ್ತೆ ಅಳುತ್ತ ಕೂರುವರು. ಅಶ್ವತನಾರಾಯಣ ಹಾಗೂ ರಾಜಲಕ್ಷ್ಮಿಗೆ ಮಗಳನ್ನು ಹೇಗೆ ಸಂತೈಸುವುದು ಅದೇ ತಿಳಿಯದೆ ಹೋಯಿತು.
ಸುಮನ್ ಎಡೆಬಿಡದೇ ತನ್ನ ಒಂದೂವರೆ ವರ್ಷದ ಮದುವೆಯ ಘಟನೆಗಳನ್ನು ಮೆಲಕು ಹಾಕಿ ಅದರಲ್ಲಿ ತನ್ನ ತಪ್ಪನ್ನು ಹುಡುಕಿ ಸೋತಳು. ಅವುಗಳನ್ನು ಯಾವ ಆಯಾಮದಿಂದ ನೋಡಿದರೂ ಅವಳ ತಪ್ಪು ಅರಿವಾಗಲಿಲ್ಲ. ಕೊನೆಗೆ ಗಿರೀಶ ಈಸ್ ಆಲ್ ಸ್ಟೈಲ್ ಆಂಡ್ ನೋ ಸಬ್ಸ್ಟೆನ್ಸ್ ಎಂದು ಅವನನ್ನು ಮನಸ್ಸಿನಿಂದ ಕಿತ್ತೊಗೆದಳು. ಅದೇ ಕೊನೆ ಇನ್ನೆಂದೂ ಅವಳು ಗಿರೀಶ ಬಗ್ಗೆ ತಲೆ ಕೆಡಸಿಕೊಳ್ಳಲಿಲ್ಲ. ಅವನ ಪ್ರೀತಿಗಾಗಿ ಹಂಬಲಿಸಲಿಲ್ಲ. ಅವನ ಸಾಮಿಪ್ಯವನ್ನು ಬಯಸಲಿಲ್ಲ. ಅವಳ ಪ್ರಕಾರ ಅವನು ಅವಳ ಜೀವನದಲ್ಲಿ ಒಂದು ಕೆಟ್ಟ ಕನಸು.
ಮೂರು ದಿನದ ನಂತರ ತಲೆ ನೋವು ಬಂದು ನೆಗಡಿ ಜ್ವರ ಸುಮನಳನ್ನು ಬಾಧಿಸಿತು. ಎಂದೂ ಬಂದಿರದ ಜೋರು ಜ್ವರ, ಹಾಸಿಗೆಯಿಂದ ತಲೆ ಎತ್ತಲಾರದಷ್ಟು ತಲೆ ಭಾರ. ಮನೆಗೆ ಡಾಕ್ಟ್ರು ಬಂದರು. ಆಂಟಿಬಯೋಟಿಕ್ ದಕ್ಕಲಿಲ್ಲ. ಮೈಯಲ್ಲಿ ಅಷ್ಟು ನಿತ್ರಾಣ. ಮಗಳ ಕೋಣೆಯನ್ನು ಬಿಟ್ಟು ಹೊರ ಬರಲಿಲ್ಲ ಅವಳಮ್ಮ ಅಪ್ಪ. ಹೇಗೋ ಚೇತರಿಸಿಕೊಂಡಳು ಸುಮನ್.
ದುಃಖದ ನಂತರ ಅವಳಲ್ಲಿ ಹುಟಿದ್ದು ಆಕ್ರೋಶ. ದೇವರ ಮೇಲೆ ಅಸಾಧ್ಯ ಸಿಟ್ಟು. ಅವನೇ ಅವಳ ಮೇಲೆ ಅಕ್ಷಮ್ಯ ಅನ್ಯಾಯವೆಸಗಿದ್ದ. ನನ್ನ ಯಾವ ತಪ್ಪಿಗೆ ಈ ಘೋರ ಶಿಕ್ಷೆ? ನಾನೇನೂ ರಾಜ್ಯ ಕೇಳಿದ್ನಾ? ನಾನು ಕೇಳಿದ್ದು ಪ್ರೀತಿಸುವ ಗಂಡ ಮುದ್ದಾದ ಮಕ್ಕಳನ್ನು. ಅದು ಯಾವ ದೊಡ್ಡ ವರ? ನೀನು ನನಗೆ ಒಂದು ಮಗು ಕೊಡಲಿಲ್ಲ. ಅಷ್ಟು ಕಷ್ಟಾನಾ ಕೊಡೋದು ನೀನಗೆ ನಾನು ಕೇಳಿದ್ದು? ಬೆಳಗ್ಗೆ ಸಂಜೆ ದೇವರಲ್ಲಿ ಕೇಳಿ ಕೇಳಿ ಸುಸ್ತಾದಳು. ಉತ್ತರ ಮಾತ್ರ ಸಿಕ್ಕಲಿಲ್ಲ.
ಅವಳಿಗೆ ಅರಿವು ಮೂಡಿದಾಗಿನಿಂದ ಪ್ರೀತಿಸುವ ಗಂಡ ಮುದ್ದಾದ ಮಕ್ಕಳು ಇದೇ ಅವಳ ಬಯಕೆಯಾಗಿತ್ತು. ಅದೇ ಅವಳ ಕನಸು. ಅದಕ್ಕೆ ಎಷ್ಟು ಅಲಂಕಾರ ಮಾಡಿ ಆನಂದಿಸಿದ್ದಳು. ಎಷ್ಟು ಬಗೆಬಗೆಯ ಬಣ್ಣ ಹಾಕಿದ್ದಳು. ಮದುವೆಯಾದಾಗ ಅದಕ್ಕೆ ರೆಕ್ಕೆ ಬಂದಿತ್ತು. ಕನಸು ನನಸಾಗುವದೇನೋ ಎಂಬ ಆಸೆ. ಕೈಗೆ ಬಂದ ತ್ತುತ್ತು ಬಾಯಿಗೆ ಬಂದಿರಲಿಲ್ಲ. ಮರೀಚಿಕೆ ಆಗಿತ್ತು. ಆ ಕನಸು ಅವಳನ್ನು ಎಷ್ಟು ಆವರಿಸಿಕೊಂಡಿತ್ತು ಎಂದರೆ ಅವಳು ಇಂಜಿನಿಯರಿಂಗ್ ಓದಿದವಳು, ವಿಧ್ಯಾರ್ಥಿಗಳು ಗೌರವಿಸುವ ಪ್ರೀತಿಸುವ ಒಬ್ಬ ಶಿಕ್ಷಕಿ ಎಂಬುದನ್ನು ಮರೆತು ಆ ಕನಸಿನ ಹಿಂದೆ ನಡೆದಿದ್ದಳು. ಅವಳಲ್ಲಿದ್ದ ವಿದ್ಯೆ ಹಾಗೂ ಕೆಲಸದ ಬಗ್ಗೆಯ ಶ್ರದ್ದೆ ಅವಳನ್ನು ತುಂಬ ಎತ್ತರಕ್ಕೆ ಒಯ್ಯಬಹುದು ಎಂಬ ವ್ಯವಹಾರ ಜ್ಞಾನವಿಲ್ಲ. ಎಲ್ಲವನ್ನು ಆ ಕನಸ್ಸನ್ನು ನನಸಾಗಿಸಲು ಮುಡುಪಾಗಿಟ್ಟಳು. ಈಗ ಒಮ್ಮೆಲೆ ಖಾಲಿ ಕೈ. ಧಸ್ ಎಂದು ಆ ಸೌಧ ಕುಸಿದಿತ್ತು. ಕನಸು ಚಿದ್ರ ಚಿದ್ರವಾಗಿತ್ತು. ನೆಲ ಕಚ್ಚಿತ್ತು. ಇನ್ನೆಂದೂ ಅದು ಬೆಳಕು ಕಾಣದು. ಆ ಯೋಚನೆಯೇ ಅವಳನ್ನು ಹಿಂಡಿ ಹಿಪ್ಪೆ ಮಾಡಿತು. ಕೊರಗಿ ಕೊರಗಿ ಬಡವಾದಳು. ಮಗಳಿಗೆ ಇಷ್ಟವಾದುದನ್ನೆ ಅಡುಗೆ ಮಾಡುತ್ತಿದ್ದರು ರಾಜಲಕ್ಷ್ಮಿ. ಒಂದೂವರೆ ವರ್ಷದಿಂದ ಅಷ್ಟು ರುಚಿಯಾದ ಅಡುಗೆ ತಿಂದಿರಲಿಲ್ಲ ಸುಮನ್. ಆದರೆ ಈಗ ಅದನ್ನು ಆಸ್ವಾದಿಸಲು ಮನಸ್ಸೇ ಇಲ್ಲಾ. ತಿನ್ನ ಬೇಕು ಅದಕ್ಕೆ ತಿನ್ನುವುದು. ಅವಳ ಜೀವನದ ಏಕೈಕ ಕನಸು, ಧ್ಯೇಯ ಕುಸಿದು ಅದು ಅವಳಲ್ಲಿ ಬಿಟ್ಟ ಶೂನ್ಯ ಅವಳನ್ನು ಅಧೀರಳನಾಗಿ ಮಾಡಿತು. ಅವಳ ಜೀವನ ಒಂದು ದಿನ ಇಂತಹ ಕವಲು ದಾರಿಯಲ್ಲಿ ಬಂದು ನಿಲ್ಲುವುದು ಎಂದು ಅವಳು ಯಾವತ್ತೂ ಯೋಚಿಸಿರಲಿಲ್ಲ. ಅದಕ್ಕೆ ಮುಂದಾಲೋಚನೆ ಮಾಡಿರಲಿಲ್ಲ. ಗಾಜಿನ ಮನೆಯಷ್ಟು ನಾಜುಕಾಗಿತ್ತು ಅವಳ ಜೀವನದ ಉದ್ದೇಶ. ಗಾಳಿಯ ಒಂದೇ ಒಂದು ರಭಸಕ್ಕೆ ಪುಡಿ ಪುಡಿಯಾಗಿತ್ತು.
ಕೆಲಸದ ಲಕ್ಷ್ಮಿ ಸುಮನ್ ಊರಿಗೆ ಹೋಗಲ್ವೆ ಎಂದು ಕೇಳಿಯಾಗಿತ್ತು. ಅಕ್ಕ ಪಕ್ಕದಲ್ಲಿ ಗುಸುಗುಸು ಶುರುವಾಗಿತ್ತು. ತಮ್ಮಂದಿರು ದಿನಾಲು ಕರೆ ಮಾಡಿ ತಮ್ಮ ರೋಷವನ್ನು ವ್ಯಕ್ತ ಪಡಿಸಿದ್ದಾಯಿತು. ಆದರೂ ಬಾಗಿಲ ಹಿಂದೆ ಮೂರು ಜನರಿಗೂ ದಿಕ್ಕೇ ತೋಚದು.
**
ಮೂರು ತಿಂಗಳು ಹೀಗೇ ಕಳೆಯಿತು. ಅಂದು ಬೆಳಗ್ಗೆ ಸುಮನ್ ದಿಂಬಿಗೆ ವರಗಿ ಕಣ್ಣೀರಿಡುತ್ತಿದ್ದಳು. ಮಗು ದೂರ ದೂರ ಓಡುತ್ತಿತ್ತು ಒಮ್ಮೆಯೂ ಹಿಂತಿರುಗಿ ನೋಡಲಿಲ್ಲ. ಅವಳು ಎಷ್ಟು ಓಡಿದರೂ ಅದು ಅವಳ ಕೈಗೆ ಎಟುಕದಷ್ಟು ದೂರ. ಆ ಕನಸಿನಂದ ಅಳುತ್ತ ಎದ್ದು ಮತ್ತೆ ನಿದ್ರೆಗೆ ಜಾರಿದ್ದಳು. ಈಗ ಇನ್ನೊಂದು ಕನಸು ಆಕಾಶದಿಂದ ದೊಡ್ಡ ದೊಡ್ಡ ಬಂಡೆಗಳು ನೆಲಕ್ಕೆ ಬೀಳುತ್ತಿದ್ದವು. ಬಿದ್ದ ಕಡೆಯಲ್ಲಾ ಭೂಮಿ ಜ್ವಾಲಾಮುಖಿಯಂತೆ ಬೆಂಕಿ ಕಾರುತ್ತಿತ್ತು. ಸುಮನ್ ಅವಳ ಅಮ್ಮ ಅಪ್ಪನ ಕೈ ಹಿಡಿದು ಆ ಬಂಡೆಗಳಿಂದ ತಪ್ಪಿಸಿಕೊಳ್ಳಲು ಎಲ್ಲೆಲೋ ಓಡುತ್ತಿದ್ದರು. ಒಂದು ರಾತ್ರಿ ಮಗುವಿನ ಕನಸು, ಅದರ ಮಾರನೆಯ ರಾತ್ರಿ ಜಗತ್ತು ಅಂತ್ಯಗೊಳ್ಳುತ್ತಿರುವ ಕನಸು ಬಿದ್ದೆ ಬೀಳುತ್ತಿತ್ತು. ಆದರೆ ಇಂದೇ ಒಂದರ ಹಿಂದೆ ಒಂದು ಕನಸು. ಅವಳ ವೈಯಕ್ತಿಕ ಜೀವನ ಕೊನೆಗೊಂಡದನ್ನು ಹೀಗೆ ಸೂಚಿಸಿತ್ತು.
ಎದ್ದು ಹೊರಗೆ ನಡೆದಳು. ಅಮ್ಮನ ಅಳು ಕೇಳಿ ಕಿಟಕಿಯಾಚೆ ನೋಡಿದಳು. ರಾಜಲಕ್ಷ್ಮಿ ಇನ್ನು ತಡೆಯಲಾರದೆ ಪಕ್ಕದ ಮನೆ ಗಿರಿಜಮ್ಮನಿಗೆ ತಮ್ಮ ಸಂಕಟ ಹೇಳಿ ಗೊಳೋ ಅಂತ ಅಳುತ್ತಿದ್ದರು. ಗೋಡೆ ಮೇಲಿಟ್ಟ ಡಬ್ಬದಲ್ಲಿ ರಂಗೋಲಿ ತೊಯ್ದು ತೊಪ್ಪೆಯಾಗುತ್ತಿತ್ತು. ಗಿರಿಜಮ್ಮ ಕೊಡ ಕಣ್ಣು ಒರೆಸಿಕೊಳ್ಳುತ್ತಿದ್ದರು. ಸುಮನ್ ಅವರ ಮುಂದೆ ಆಡಿ ಬೆಳೆದ ಹುಡುಗಿ. ತಮ್ಮ ಮಗಳ ಸಮಾನ. ಕೋಣೆಯಲ್ಲಿ ಬಗ್ಗಿ ನೋಡಿದಳು. ಅವಳಪ್ಪ ಕೂಡ ಹೆಂಡತಿಯ ಕಣ್ಣೀರ ಜೊತೆ ತಮ್ಮ ಕಣ್ಣೀರನ್ನು ಸೇರಿಸಿದ್ದರು ಒಬ್ಬರೇ ಕತ್ತಲೆ ಕೋಣೆಯಲ್ಲಿ. ಸುಮನಳ ಕರುಳು ಕಿತ್ತು ಹೋಯಿತು. ತನ್ನಿಂದಾಗಿ ಅವರಿಗೆ ಎಷ್ಟು ನೋವು. ತಡೆಯಲಾರದೆ ಕೋಣೆಗೆ ಹೋಗಿ ಗೊಳೋ ಅಂತ ಅತ್ತು ಬಿಟ್ಟಳು.
ಎಷ್ಟೋ ಹೊತ್ತು ಮುಸುಕೆಳೆದು ಅಳುತ್ತ ಮಲಗಿದ್ದಳು. ರಾಜಲಕ್ಷ್ಮಿ ಒಳಗೆ ಬಂದು ಹಂಡೆ ತುಂಬಿಸಿ ಒಲೆ ಹಚ್ಚಿದರು. ಕಾಫಿ ಮಾಡಿ ಅಶ್ವತನಾರಾಯಣರಿಗೆ ಕೊಟ್ಟು ಅವರನ್ನು ವಾಕಿಂಗ್‍ಗೆ ಕಳುಹಿಸಿದರು. ಸುಮನ್ ಮಲಗೇ ಇದ್ದಳು. ಏಳು ಸುಮನ್ ಅತ್ತಿದ್ದು ಸಾಕು. ನೀನೇ ಧೈರ್ಯ ತೊಗೋಬೇಕು ಈಗ. ನಿನ್ನಮ್ಮ ಅಪ್ಪ ಈ ಏಟಿನಿಂದ ಕುಗ್ಗಿ ಹೋಗಿದ್ದಾರೆ ಅವರಿಗೆ ನೀನೇ ಧೈರ್ಯ ಹೇಳಬೇಕು. ಅವರಿಗೆ ನೀನೇ ಇನ್ನು ಆಸರೆ. ಅವರು ಇನ್ನು ನಿನಗೆ ಆಸರೆ ಆಗಲಾರರು. ವಿದ್ಯಾವಂತೆ ನೀನು ಹೊಸ ಜೀವನ ನಿರ್ಮಾಣ ಮಾಡು ಏಳು ಸುಮನ್. ಒಳ ಮನಸ್ಸು ಸುಮನಳನ್ನು ರಮಿಸಿ ಧೈರ್ಯ ಹೇಳಿತು. ಈ ಹೊಸ ಯೋಚನೆಯ ಬೆನ್ನು ಹತ್ತಿದಳು. ಅದೇ ಕೊನೆ ಅವರಮ್ಮ ಅಪ್ಪ ಅವಳು ಅಳುವುದನ್ನು ನೋಡುವುದು. ಇನ್ನು ಮುಂದೆ ಅವಳ ದುಃಖ ರಾತ್ರಿಯ ಕತ್ತಲಿಗೆ ಮಾತ್ರ ಗೊತ್ತು. ಅವಳ ಕಣ್ಣೀರು ಅವಳ ದಿಂಬಿಗೆ ಮಾತ್ರ ಮೀಸಲು. ಮೈ ಕೊಡವಿ ಕೋಣೆಯಾಚೆ ನಡೆದಳು.
ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://surahonne.com/?p=38380
(ಮುಂದುವರಿಯುವುದು)
-ಸುಚೇತಾ ಗೌತಮ್.
ಕಥಾನಾಯಕಿಯ ಕನಸಿನ ಗೂಡು ನೆಲ ಕಚ್ಚಿದೆ..ಆಕೆ ತೆಗೆದುಕೊಂಡ ನಿರ್ಧಾರ..ಗಟ್ಟಿಯಾಗಿ ನಿಲ್ಲುವುದೋ..ಕಾದು ನೋಡಬೇಕಾಗಿದೆ…ಅಂತೂ ಧಾರಾವಾಹಿ..ಕುತೂಹಲ ದಿಂದ ಸಾಗುತ್ತಿದೆ…ಗೆಳತಿ
ಧನ್ಯವಾದಗಳು ಮೇಡಂ
ಬದುಕಿನ ಪಯಣದಲ್ಲಿ ಭವಿಷ್ಯ ದ ಸಲುವಾಗಿ, ಹೊಸ ಹಾಗೂ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ನಮ್ಮ ನಾಯಕಿ. ಅಳುತ್ತಾ ಕೂರುವುದೇ ಜೀವನವಲ್ಲ. ಸೊಗಸಾಗಿದೆ ಕಾದಂಬರಿ.
ಧನ್ಯವಾದಗಳು ಮೇಡಂ
ಕೊನೆಗೂ ಸುಮನ್ ಗಟ್ಟಿ ನಿರ್ಧಾರ ತೆಗೆದುಕೊಂಡು ತನ್ನ ಭವಿಷ್ಯ ರೂಪಿಸಿಕೊಳ್ಳಲು ತಯಾರಾದುದು ನೆಮ್ಮದಿ ಎನಿಸಿತು. ಚಂದದ ಕಥಾಹಂದರ.
ಧನ್ಯವಾದಗಳು ಮೇಡಂ .