ನಾದ ಬ್ರಹ್ಮನ ಓಂಕಾರನಾದ

Share Button


”ಭಾರತ ಭೂಷಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ


ಉಪಾಸನೆ ಸಿನೆಮಾದ ಈ ಗೀತೆಯನ್ನು ಕೇಳಿ ತಲೆದೂಗದವರಾರು? ದಕ್ಷಿಣ ಭಾರತದ ತುತ್ತ ತುದಿಯಲ್ಲಿರುವ ಕನ್ಯಾಕುಮಾರಿಯ ವಾವಾಥುರೈನ ಸಮುದ್ರ ತೀರದಿಂದ ಅರ್ಧ ಕಿ.ಮೀ. ದೂರದಲ್ಲಿರುವ ಸ್ವಾಮಿ ವಿವೇಕಾನಂದರ ಶಿಲಾ ಸ್ಮಾರಕಕ್ಕೆ ಭೇಟಿ ನೀಡೋಣ ಬನ್ನಿ. ಸೆಪ್ಟೆಂಬರ್ 17,2022 ರಂದು, ಕುಟುಂಬ ಸಮೇತ, ನಿರ್ಮಲಾ ಟ್ರಾವಲ್ಸ್‌ನಲ್ಲಿ ದಕ್ಷಿಣ ಭಾರತದ ಪ್ರವಾಸ ಹೊರಟವರು, ಅದೇ ತಿಂಗಳ 22 ರಂದು ಕನ್ಯಾಕುಮಾರಿಯ ವಿಶಾಲವಾದ ಸಾಗರಗಳ ಮುಂದೆ ನಿಂತಿದ್ದೆವು. ಒಂದೆಡೆ ನೀಲಮಣಿಯಂತೆ ಶೋಭಿಸುತ್ತಿದ್ದ ಬಂಗಾಳ ಕೊಲ್ಲಿ, ಇನ್ನೊಂದೆಡೆ ಹಸಿರು ಮಿಶ್ರಿತ ನೀಲ ವರ್ಣವನ್ನು ಹೊತ್ತ ಹಿಂದೂ ಮಹಾಸಾಗರ ಮತ್ತೊಂದೆಡೆ ಆಗಸದ ತಿಳಿನೀಲವರ್ಣವನ್ನು ಪ್ರತಿಫಲಿಸುತ್ತಿದ್ದ ಅರಬ್ಬೀ ಸಮುದ್ರ. ಈ ಸಾಗರಗಳು ಅಬ್ಬರಿಸಿ ಬೊಬ್ಬಿಡುತ್ತಾ ಶಿವ ತಾಂಡವನೃತ್ಯ ಮಾಡುತ್ತಾ, ಒಂದರಲ್ಲೊಂದು ಲೀನವಾಗುತ್ತಿದ್ದ ದೃಶ್ಯ ಅದ್ಭುತವಾಗಿತ್ತು. ಒಂದರ ವರ್ಣ ಒಂದರಂತಿಲ್ಲ, ಸಾಗರಗಳ ತೀರದ ಮರಳಿನ ಬಣ್ಣವೂ ಬೇರೆ ಬೇರೆಯೇ.

ಸಮುದ್ರ ತೀರದಲ್ಲಿ ಕಾಣುವ ಸುಂದರವಾದ ಸೂರ್ಯೋದಯವನ್ನು ಕಣ್ತುಂಬಿಕೊಳ್ಳಲು, ನಾವು ಬೆಳಗಿನ ಜಾವ ಐದು ಗಂಟೆಗೇ ಎದ್ದು ಸಮುದ್ರ ತೀರಕ್ಕೆ ಹೋದೆವು. ಕೆಲವೇ ಕ್ಷಣಗಳಲ್ಲಿ ಕಿತ್ತಲೆ ವರ್ಣದ ರವಿಯು, ನಿಧಾನವಾಗಿ ಸಮುದ್ರ ತೀರದಿಂದ ಮೇಲೇಳುವ ದೃಶ್ಯ ಮನೋಹರವಾಗಿತ್ತು. ಎಲ್ಲಿ ಮಲಗಿದ್ದನೋ ಮಹರಾಯ, ಲೋಕಕ್ಕೆ ಬೆಳಕನ್ನು ನೀಡಲು ಸಮಯಕ್ಕೆ ಸರಿಯಾಗಿ ಎದ್ದು ಹೊರಟೇಬಿಟ್ಟ. ಸ್ವಲ್ಪ ಸಮಯದಲ್ಲಿ, ಕಿತ್ತಳೆ ಬಣ್ಣ ತಿಳಿಯಾಗಿ ಹೊಂಬಣ್ಣವಾಗಿ, ನಂತರದಲ್ಲಿ ಬೆಳ್ಳನೆ ಬೆಳಕಾಯಿತು. ಮತ್ತೊಂದು ವಿಸ್ಮಯವೆಂದರೆ, ಈ ಸ್ಥಳದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ಎರಡನ್ನೂ ಕಾಣಬಹುದು. ನಾವು ಕನ್ಯಾಕುಮಾರಿಗೆ ಭೇಟಿ ನೀಡಿದ ದಿನ ಹುಣ್ಣಿಮೆಯಾಗಿತ್ತು. ಮುಸ್ಸಂಜೆ ಹೊತ್ತಿನಲ್ಲಿ, ತಿಂಗಳ ಬೆಳಕಿನಲ್ಲಿ ಮತ್ತೊಂದು ವಿಸ್ಮಯ ನಮಗಾಗೀ ಕಾಯುತ್ತಿತ್ತು. ಒಂದೆಡೆ ಕೆಂಡದುಂಡೆಯ ಹಾಗೆ ಪ್ರಜ್ವಲಿಸುತ್ತಿದ್ದ ಭಾಸ್ಕರನು ಪಡುವಣ ದಿಕ್ಕಿನಲ್ಲಿ ವಿಶ್ರಮಿಸಲು ತೆರಳುತ್ತಿದ್ದರೆ, ಚಿನ್ನದಂತೆ ಕಂಗೊಳಿಸುತ್ತಿದ್ದ ಚಂದ್ರನು ನಸುನಗುತ್ತಾ ಉದಯಿಸುತ್ತಿದ್ದ. ಅಬ್ಬಾ ಇವರಿಬ್ಬರಲ್ಲಿ, ಯಾರನ್ನು ನೋಡಲಿ, ಎಂದು ಗೊಂದಲವಾಗಿತು. ಇಬ್ಬರೂ ಚೆಲುವ ಚೆನ್ನಿಗರೇ – ಒಬ್ಬನು ಸೃಷ್ಟಿಗೆ ಕಾರಣಕರ್ತನಾದರೆ, ಮತ್ತೊಬ್ಬನು ಜೀವಿಗಳಲ್ಲಿ ಉತ್ಸಾಹ, ಲವಲವಿಕೆ, ಚೈತನ್ಯ ತುಂಬುವನು. ಸೃಷ್ಟಿಯ ವಿಚಿತ್ರಗಳನ್ನು ನೋಡುತ್ತಾ ಅಚ್ಚರಿ ಪಡುವ ಸರದಿ ನಮ್ಮದಾಗಿತ್ತು. ಈ ತ್ರಿವೇಣಿ ಸಂಗಮದಲ್ಲಿ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದ ಮಹಾ ಪುರುಷ ವಿವೇಕಾನಂದರ ಸ್ಮಾರಕವನ್ನು ತನ್ನ ಭುಜಗಳ ಮೇಲೆ ಹೊತ್ತು ನಿಂತ ಶಿಲೆಗಳೆರೆಡು ನಮ್ಮನ್ನು ಆಹ್ವಾನಿಸುತ್ತಿದ್ದವು.

ಕನ್ಯಾಕುಮಾರಿಯ ಪೌರಾಣಿಕ ಕಥೆಯನ್ನು ಕೇಳೋಣ ಬನ್ನಿ. ಪಾರ್ವತಿಯ ಅಂಶವುಳ್ಳ ದಕ್ಷಿಣ ಭಾರತದ ಕನ್ಯೆಯೊಬ್ಬಳು ಶಿವನನ್ನೇ ವರಿಸಬೇಕೆಂಬ ಸಂಕಲ್ಪ ಮಾಡಿ ಈ ತ್ರಿವೇಣಿ ಸಂಗಮದಲ್ಲಿರುವ ಬಂಡೆಗಳ ಮೇಲೆ ಕುಳಿತು ಘೋರ ತಪಸ್ಸನ್ನಾಚರಿಸುವಳು. ಅವಳ ಭಕ್ತಿಗೆ ಒಲಿದ ಶಿವನು ಕೈಲಾಸ ಪರ್ವತದಿಂದ ತನ್ನ ಗಣಂಗೊಳಡನೆ ಈ ಸ್ಥಳಕ್ಕೆ ಆಗಮಿಸುವನು. ಆದರೆ ಅದೃಷ್ಟ ದೇವತೆಯಂತಿದ್ದ ಕನ್ಯೆಯು ಶಿವನನ್ನು ವರಿಸಿ ಕೈಲಾಸಕ್ಕೆ ಹೋದರೆ ತಮ್ಮ ಊರಿನ ಭಾಗ್ಯ್ಟಲಕ್ಷ್ಮಿಯೇ ಹೊರಟು ಹೋಗುವಳೆಂಬ ಆತಂಕದಿಂದ, ಅಲ್ಲಿನ ಸ್ಥಳೀಯರು ಒಂದು ತಂತ್ರವನ್ನು ಮಾಡುವರು. ಬ್ರಾಹ್ಮೀ ಮುಹೂರ್ತದಲ್ಲಿಯೇ ಮದುವೆ ನಡೆಯಬೇಕು, ತಪ್ಪಿದಲ್ಲಿ ವಿವಾಹವನ್ನು ರದ್ದು ಮಾಡಲಾಗುವದೆಂಬ ಸಂದೇಶವನ್ನು ಶಿವನಿಗೆ ರವಾನಿಸುವರು. ದಿಬ್ಬಣ ಬರುವಾಗ ಗ್ರಾಮದ ಮಧ್ಯೆ ಒಂದು ಭಾರಿ ಕರ್ಪೂರದ ರಾಶಿಯನ್ನು ಉರಿಸುವರು. ವೆಲ್ಲಂಗಿರಿ ಬೆಟ್ಟದ ಆಚೆಯಿದ್ದ ವರನ ಕಡೆಯವರು, ಆ ಝಗಝಗಿಸುವ ಬೆಳಕನ್ನು ಕಂಡು, ಮುಹೂರ್ತದ ಸಮಯ ಮೀರಿ ಹೋಯಿತೆಂದು ಭಾವಿಸಿ ಹಿಂದಿರುಗುವರು. ಹತಾಶಳಾದ ವಧು, ಜೀವನವಿಡೀ ಮದುವೆಯಾಗದೇ ಅಲ್ಲಿಯೇ ಉಳಿಯುವಳು. ಇಂದು, ಈ ಕನ್ಯೆಯೇ ಕನ್ಯಾಕುಮಾರಿಯೆಂದು ಪೂಜಿಸಲ್ಪಡುತ್ತಿರುವಳು.
ನಾವು ದೋಣಿಯೊಂದಲ್ಲಿ ಕುಳಿತು ಈ ಸ್ಮಾರಕವನ್ನು ತಲುಪಿದೆವು. ಶಿಲೆಗಳಿಗೆ ರಭಸವಾಗಿ ಅಪ್ಪಳಿಸುತ್ತಿದ್ದ ಸಾಗರದ ಅಲೆಗಳ ಮಧ್ಯೆ, ಬಾಯಿ ತೆರೆದು ಬೇಟೆಗಾಗಿ ಕಾಯುತ್ತಿದ್ದ ಶಾರ್ಕ್ ಮೀನುಗಳ ನಡುವೆ, ಈ ತೇಜಸ್ವಿ ಯುವಕನು ಅಂಜದೆ ಅಳುಕದೆ ಈಜುತ್ತಾ ಕನ್ಯಾಕುಮಾರಿಯು ತಪಗೈದ ಸ್ಥಳವನ್ನು ಸೇರಿದನು. ಅನ್ನಾಹಾರಗಳನ್ನು ತ್ಯಜಿಸಿ, ಹಗಲಿರುಳೆನ್ನದೆ ಮೂರು ದಿನಗಳ ಕಾಲ ಧ್ಯಾನ ಮಾಡಿದ ಈ ಯುಗಪುರುಷನಿಗೆ ಜ್ಞಾನೋದಯವಾಗಿದ್ದು ಈ ಪುಣ್ಯ ಕ್ಷೇತ್ರದಲ್ಲಿಯೇ. ವಿವೇಕಾನಂದರು ಇಲ್ಲಿಂದ ನೇರವಾಗಿ ಅಮೆರಿಕಾದ ಚಿಕಾಗೋ ನಗರದಲ್ಲಿ ನಡೆದ ಪ್ರಪ್ರಥಮ ಅಂತರ್ ರಾಷ್ಟ್ರೀಯ ಧಾರ್ಮಿಕ ಸಮ್ಮೇಳನಕ್ಕೆ ತೆರಳಿದರು. ಡಿಸೆಂಬರ್ 24, 1892 ರಲ್ಲಿ ಜರುಗಿದ ಈ ಸಭೆಯಲ್ಲಿ ಸಭಿಕರನ್ನು ವಿವೇಕಾನಂದರು, ‘ಸೋದರ ಸೋದರಿಯರೇ’ ಎಂದು ಸಂಭೋಧಿಸಿದಾಗ, ಜನರು ಅಭೂತಪೂರ್ವ ಪ್ರತಿಕ್ರಿಯೆ ನೀಡಿದರು. ಅಂದು ಹಿಂದೂ ಧರ್ಮದ ಸಾರವಾದ ‘ವಸುದೈವ ಕುಟುಂಬ’ದ ಚಿಂತನೆಯನ್ನು ಪಾಚ್ಶಿಮಾತ್ಯರ ಮನದಲ್ಲಿ ಬಿತ್ತಿದರು. ಮುಂದೆ ಅಮೆರಿಕ, ಯೂರೋಪ್, ಇಂಗ್ಲೆಂಡ್ ಉದ್ದಗಲಕ್ಕೂ ಸಂಚರಿಸಿ ಹಿಂದೂ ವೇದಾಂತವನ್ನು ಬೋಧಿಸಿದರು. ನವಭಾರತದ ಕನಸನ್ನು ಹೊತ್ತ ವಿವೇಕಾನಂದರು ಅಖಂಡ ಬಾರತವನ್ನು ಕಟ್ಟುವುದರ ಜೊತೆಜೊತೆಗೇ ಭಾರತೀಯರನ್ನು ಶ್ರೇಷ್ಠ ಮಾನವರನ್ನಾಗಿ ರೂಪಿಸುವ ಸಂಕಲ್ಪವನ್ನು ಮಾಡಿದರು.

ಜನವರಿ 12, 1863 ರಂದು ಕಲ್ಕತ್ತಾದ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದ ಸ್ವಾಮಿ ವಿವೇಕಾನಂದರ ಪೂರ್ವಾಶ್ರಮದ ಹೆಸರು ‘ನರೇಂದ್ರನಾಥ ದತ್ತ’. ನರೇಂದ್ರನು ದಕ್ಷಿಣೇಶ್ವರದಲ್ಲಿದ್ದ ರಾಮಕೃಷ್ಣ ಪರಮಹಂಸರ ಶಿಷ್ಯನಾಗಿ, ವಿವೇಕಾನಂದ ಎಂಬ ಹೆಸರಿನಿಂದ ಪ್ರಸಿದ್ಧನಾಗುತ್ತಾನೆ. ಜನರಲ್ಲಿ ಮನೆಮಾಡಿದ್ದ ಅಸ್ಪೃಶ್ಯತೆ, ಮೌಢ್ಯ, ಕಂದಾಚಾರ, ಬಡತನ, ಅಜ್ಞಾನದ ವಿರುದ್ಧ ಹೋರಾಡಲು ಸಜ್ಜಾಗುತ್ತಾನೆ. ಪ್ರಾಪಂಚಿಕ ವ್ಯಾಮೋಹವನ್ನು ತ್ಯಜಿಸಿ ಮಾನವ ಜನಾಂಗದ ಸೇವೆ ಮಾಡಲು ಪಣ ತೊಡುತ್ತಾನೆ. ವಿವೇಕಾನಂದರು ಭಾರತೀಯ ಪರಂಪರೆ, ಸಂಸ್ಕೃತಿ, ಹಿಂದೂ ಧರ್ಮ, ರಾಷ್ಟ್ರೀಯತೆಯನ್ನು ಜಾಗೃತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಇವರ ನೂರೈವತ್ತನೇ ಜಯಂತಿಯನ್ನು ಜನವರಿ 12, 2013 ರಂದು ಆಚರಿಸಲಾಯಿತು.

ನಾವು ವಿವೇಕಾನಂದ ಶಿಲಾ ಸ್ಮಾರಕದ ಸಮಿತಿಯವರು ನೀಡಿದ ಸವಿಸ್ತಾರವಾದ ಮಾಹಿತಿಯನ್ನು ಆಲಿಸಿದೆವು. ಈ ಸ್ಮಾರಕದ ನಿರ್ಮಾಣಕ್ಕೆ ಕಾರಣಕರ್ತರಾದ ಏಕನಾಥ ರ್‍ಯಾನಡೆಯವರು, ಹಲವು ಅಡೆ ತಡೆಗಳ ಮಧ್ಯೆಯೂ, ಛಲ ಬಿಡದ ತ್ರಿವಿಕ್ರಮನಂತೆ ಹೋರಾಡಿದರು. ರಾಮಕೃಷ್ಣ ಆಶ್ರಮದವರ ಸಹಕಾರದೊಂದಿಗೆ, ಲಾಲ್ ಬಹಾದ್ದೂರ್ ಶಾಸ್ತ್ರಿಯವರ ನೆರವಿನೊಂದಿಗೆ ಸ್ಮಾರಕ ಕಟ್ಟುವುದರಲ್ಲಿ ಯಶಸ್ವಿಯಾದರು. ಈ ಸ್ಮಾರಕವನ್ನು ನಿರ್ಮಿಸಲು ಮೂರು ಮಿಲಿಯನ್ ಭಾರತೀಯರಿಂದ ಒಂದೊಂದು ರೂಪಾಯಿ ಚಂದಾ ಸಂಗ್ರಹಿಸಿ, ರಾಷ್ಟ್ರಪ್ರೇಮವನ್ನು ಜಾಗೃತಿಗೊಳಿಸಿದರು. ಈ ಸ್ಮಾರಕದ ಮತ್ತೊಂದು ವೈಶಿಷ್ಟ್ಯವೆಂದರೆ ದೇಶದ ಶಿಲ್ಪಕಲೆಯ ವಿವಿಧ ಪ್ರಾಕಾರಗಳ ಸಂಗಮವಾಗಿ ನಮ್ಮ ಮುಂದೆ ನಿಂತಿದೆ. ಸುಮಾರು 16,200 ಚದರಡಿ ವಿಸ್ತೀರ್ಣ ಹೊಂದಿರುವ ಈ ಸ್ಮಾರಕವನ್ನು 1970 ರಲ್ಲಿ ಅಂದಿನ ರಾಷ್ಟ್ರಪತಿವರಾಗಿದ್ದ ಸನ್ಮಾನ್ಯ ವಿ.ವಿ.ಗಿರಿಯವರು ನೆರವೇರಿಸಿದರು. ಈ ಸ್ಮಾರಕದಲ್ಲಿ – ಸಭಾ ಮಂಟಪ, ಶ್ರೀಪಾದ ಮಂಟಪ ಹಾಗೂ ಧ್ಯಾನಮಂದಿರಗಳು ಇದ್ದು, ಸಭಾ ಮಂಟಪದಲ್ಲಿ ಮೂವತ್ತೆಂಟು ಅಡಿ ಪೀಠದ ಮೇಲೆ ತೊಂಬತ್ತೈದು ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಮೂರ್ತಿ ಕಂಗೊಳಿಸುತ್ತಿದೆ. ಅವರ ಧೀರ, ಗಂಭೀರ ವ್ಯಕ್ತಿತ್ವ, ಕಣ್ಣುಗಳಲ್ಲಿನ ತೇಜಸ್ಸು ಎಲ್ಲರನ್ನೂ ಆಕರ್ಷಿಸುವಂತಿದೆ. ಅವರ ನೋಟ ಶ್ರೀಪಾದ ಮಂಟಪದಲ್ಲಿರುವ ದೇವಿಯ ಪಾದದೆಡೆ ಇರುವುದು ಗೋಚರವಾಗುತ್ತದೆ. ಸ್ವಾಮಿ ವಿವೇಕಾನಂದರ ಮುಂದೆ ತಲೆಬಾಗಿ ವಂದಿಸಿ, ಒಂದು ಕ್ಷಣ ಕಣ್ಣುಮುಚ್ಚಿ ಕುಳಿತೆ. ವಿವೇಕಾನಂದರ ಮಾತುಗಳು ಕಿವಿಯಲ್ಲಿ ಮೊಳಗಿದವು. –

ಏಳು, ಎದ್ದೇಳು, ಗುರಿ ಮುಟ್ಟುವ ತನಕ ನಿಲ್ಲದಿರು.
ಯಶಸ್ಸು ಆಕಸ್ಮಿಕವಲ್ಲ, ಸತತ ಪರಿಶ್ರಮದ ಫಲ.
ಅವಕಾಶಕ್ಕಾಗಿ ಕಾಯಬೇಡಿ, ನೀವೇ ಅದನ್ನು ಸೃಷ್ಟಿಸಿಕೊಳ್ಳಿ
ಸಹನೆ, ಪರಿಶುದ್ಧ ಮನಸ್ಸು, ಮುನ್ನೆಡುವ ಛಲ ಯಶಸ್ಸಿನ ರಹಸ್ಯ
ಪ್ರೀತಿಯೇ ಬದುಕು, ದ್ವೇಷವೇ ಸಾವು


ಈ ಭವ್ಯವಾದ ಮೂರ್ತಿಯ ಸುತ್ತಲೂ ಸಮುದ್ರ ಬೋರ್ಗರೆಯುತ್ತಿತ್ತು. ಉಪಾಸನೆ ಸಿನೆಮಾದ ಮತ್ತೆರೆಡು ಸಾಲುಗಳು ನೆನಪಾದವು – ‘ಶಿವತಾಂಡವದ ಢಮರು ನಿನಾದ / ನಾದ ಬ್ರಹ್ಮನ ಓಂಕಾರ ನಾದ’. ಅಲ್ಲಿದ್ದ ಮೂರು ಸಾಗರಗಳು ಶಿವತಾಂಡವ ನೃತ್ಯದಂತೆ ಬೋರ್ಗರೆಯುತ್ತಿದ್ದರೆ, ಧ್ಯಾನ ಮಂದಿರದಲ್ಲಿ ಓಂಕಾರದ ನಾದ ಅಲೆ‌ಅಲೆಯಾಗಿ ಹೊರಹೊಮ್ಮುತ್ತಿದ್ದವು. ಧ್ಯಾನ ಮಂದಿರದಲ್ಲಿ ನಸುಗತ್ತಲು, ಮುಂದಿರುವ ಗೋಡೆಯ ಮೇಲೆ ಚಿನ್ನದಂತೆ ಹೊಳೆಯುವ ಓಂಕಾರದ ಆಕೃತಿ, ಅದರ ಸುತ್ತಲೂ ಬೆಳಕಿನ ಕಿರಣಗಳು. ಕೆಲವರು ಪದ್ಮಾಸನದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರು. ನನ್ನ ಯೋಗ ಗುರುಗಳಾದ ರುದ್ರಾರಾಧ್ಯರು ಹೇಳಿದ್ದ ಮಾತುಗಳು ಮನದಲ್ಲಿ ಪ್ರತಿಧ್ವನಿಸಿದವು. ಓಂಕಾರದಲ್ಲಿ ಸೃಷ್ಟಿಯ ಮೂಲಭೂತ ರಹಸ್ಯ ಅಡಗಿದೆ. ‘ಅ’ಕಾರ, ‘ಉ’ಕಾರ ಮತ್ತು ‘ಮ’ಕಾರದಿಂದ ಓಂಕಾರವಾಗುವುದು. ಈ ಅಕ್ಷರಗಳು ಬ್ರಹ್ಮ, ವಿಷ್ಣು, ಮಹೇಶ್ವರರ ಸಂಕೇತವಾದರೆ ಓಂಕಾರವು ಪರಬ್ರಹ್ಮನ ಸಂಕೇತ. ಹಾಗೆಯೇ ಈ ಸ್ವರಗಳು – ತಮಸ್, ರಜಸ್, ಸತ್ವದ ಸಂಕೇತವಾದರೆ, ಓಂಕಾರವು ಗುಣಾತೀತವಾಗುವುದು. ಆಗಸದಲ್ಲಿರುವ ಆಕಾಶಕಾಯಗಳ ಮಧ್ಯೆ ಓಂಕಾರದ ನಾದ ಪ್ರತಿಧ್ವನಿಸುತ್ತಿದೆ ಎಂದೂ ಅಮೆರಿಕಾದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆ ನಾಸಾ ಪ್ರಕಟಿಸಿದೆ.
ಸ್ವಾಮಿ ವಿವೇಕಾನಂದರ ಮೂರ್ತಿಯ ಬಳಿ ನಿಂತು ತಲೆಬಾಗಿ ವಂದಿಸುವಾಗ, ತಟ್ಟನೆ ಮನದಲ್ಲಿ ಆಲೋಚನೆಯೊಂದು ಮೂಡಿತು. ದೇಗುಲಗಳಲ್ಲಿ ಕಂಡುಬರುವ ಜನಜಂಗುಳಿ ಇಲ್ಲಿಲ್ಲ, ಗಂಟೆ ಜಾಗಟೆಗಳ ಸದ್ದಿಲ್ಲ, ಕರ್ಪೂರದಾರತಿಗಳ ಸಂಭ್ರಮವಿಲ್ಲ, ಪುರೋಹಿತರ ಮಂತ್ರಘೋಷವಿಲ್ಲ. ನಾವು ತಲೆ ಬಾಗುವುದು ಕಾಣದ ದೈವಕ್ಕೆ, ನಮ್ಮ ಮುಂದೆ ಬಾಳಿ ಬದುಕಿ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದ ಸತ್ಪುರುಷರಿಗಲ್ಲ ಅಲ್ಲವೇ?

ಭಾರತದ ಆತ್ಮದಂತೆ ಪ್ರಜ್ವಲಿಸುವ ಸ್ವಾಮಿ ವಿವೇಕಾನಂದರು ನವಭಾರತದ ಕಲ್ಪನೆಯನ್ನು ನಮ್ಮ ಮುಂದಿಡುತ್ತಾರೆ. ಒಂದು ನೂರು ತೇಜಸ್ವಿ ತರುಣರನ್ನು ನನಗೆ ನೀಡಿ, ಇಡೀ ವಿಶ್ವದಲ್ಲಿಯೇ, ಮೊದಲನೆಯ ಸ್ಥಾನದಲ್ಲಿ ನಮ್ಮ ಮಾತೃಭೂಮಿಯನ್ನು ನಿಲ್ಲಿಸುತ್ತೇನೆ, ಎಂದು ಘೋಷಿಸುತ್ತಾರೆ. ಅಬ್ಬಾ, ಎಂತಹ ಆತ್ಮವಿಶ್ವಾಸ, ಎಂತಹ ದೇಶಭಕ್ತಿ!

-ಡಾ.ಗಾಯತ್ರಿದೇವಿ ಸಜ್ಜನ್

5 Responses

  1. ನಯನ ಬಜಕೂಡ್ಲು says:

    ಮಾಹಿತಿಪೂರ್ಣ.

  2. ಸೊಗಸಾದ ಮಾಹಿತಿ ಪೂರ್ಣ ಲೇಖನ… ಮನಸ್ಸಿಗೆ ಹಿತ ತಂದಿತು ಮೇಡಂ.. ಧನ್ಯವಾದಗಳು.

  3. Padma Anand says:

    ಭಾರತ ಭೂಶಿರ ಕನ್ಯಾಕುಮಾರಿಯ ರಮಣೀಯತೆಯ ವರ್ಣನೆ, ಅಲ್ಲಿ ಸ್ಥಳ ಪುರಾಣ ಮತ್ತು ನಮ್ಮ ದೇಶದ ಆದರ್ಶ ಪುರುಷ ಸ್ವಾಮಿ ವಿವೇಕಾನಂದರ ಕುರಿತಾದ ವಿವರಣೆಗಳೊಂದಿಗೆ ಲೇಖನ ಸೊಗಸಾಗಿ ಮೂಡಿ ಬಂದಿದೆ.

  4. ವಂದನೆಗಳು
    ನಯನ ನಾಗರತ್ನ ಹಾಗೂ ಪದ್ಮರವರಿಗೆ

  5. Dr Krishnaprabha M says:

    ಚಂದದ ಬರಹ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: