ವಸುಧೇಂದ್ರ ಅವರ ‘ತೇಜೋತುಂಗಭದ್ರಾ’: ಚರಿತ್ರೆಯ ಮರುಸೃಷ್ಟಿ
‘ತೇಜೋತುಂಗಭದ್ರಾ’ ವಸುಧೇಂದ್ರ ಅವರ ಬಹುಚರ್ಚಿತ ಕೃತಿ. 2019 ರಂದು ಬಿಡುಗಡೆಯಾದ, 10 ಮರು ಮುದ್ರಣಗಳನ್ನು ಕಂಡ ಈ ಕೃತಿ ತನ್ನ ಚಾರಿತ್ರಿಕ ಒಳ ನೋಟಗಳಿಂದಲೂ ಹಿತಮಿತವಾದ ನಿರೂಪಣೆಯಿಂದಲೂ ಎಲ್ಲಕ್ಕಿಂತ ಮಿಗಿಲಾಗಿ ವಿಜಯನಗರ ಸಾಮ್ರಾಜ್ಯದ ವೈಭವ, ಪೋರ್ಚುಗೀಸರ ಆಕ್ರಮಣ ಇವುಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಕಥನ ಶೈಲಿಯಿಂದಲೂ ಒಂದು ಬೆರಗಿನ ಓದಿಗೆ ಕಾರಣವಾಗುತ್ತದೆ. ಓದಿನ ನಂತರವೂ ‘ತೇಜೋತುಂಗಭದ್ರಾ’ ಬಹು ಕಾಲ ನಮ್ಮನ್ನು ಕಾಡುತ್ತದೆ.
ಈ ಕೃತಿ ಎತ್ತುವ ಸಮಕಾಲೀನ ಪ್ರಶ್ನೆಗಳು ಹತ್ತು ಹಲವು. ಬಯಲು ಶೌಚಾಲಯ, ಭಾರತದ ಮೇಲೆ ಪರಕೀಯರ ದಬ್ಬಾಳಿಕೆ, ವಿದೇಶೀಯರು ನಮ್ಮನ್ನು ಆಳಲು ಅನುವು ಮಾಡಿ ಕೊಟ್ಟ ಕಾರಣಗಳು, ಹಿಂದೂಧರ್ಮದ ಸಾರ ಹಾಗೂ ನ್ಯೂನ್ಯತೆಗಳು, ಅವಕಾಶವಾದಿತನ, ಪ್ರಭುತ್ವದಲ್ಲಿ ಸಾಮ್ಯತೆಗಳು,ಎಂದಿಗೂ ಬದಲಾಗದ ಜನ ಸಾಮಾನ್ಯರ ಬವಣೆ..ಹೀಗೆ ಪ್ರಮುಖ ಪಾತ್ರವಾದ ಗೇಬ್ರಿಯೆಲ್ ನ ಕತೆ ನಮ್ಮಕತೆಯೂ ಆಗಿ ಪ್ರೇಮದ ಆರ್ದ್ರತೆ, ದೈನ್ಯ, ವಿಧಿಯ ನಿಷ್ಕರುಣತೆ ಹೀಗೆ ಹತ್ತು ಹಲವು ಆಯಾಮಗಳಲ್ಲಿ ಬದುಕಿನ ವಿಡಂಬನೆಗಳನ್ನು ಪ್ರತಿನಿಧಿಸುತ್ತದೆ. ಚರಿತ್ರೆ ಮತ್ತು ವರ್ತಮಾನಗಳೆರಡೂ ಒಂದಕ್ಕೊಂದು ತಳಕು ಹಾಕಿಕೊಂಡಿರುವವು. ಈ ಕಾದಂಬರಿ ಎತ್ತುವ ಪ್ರಶ್ನೆಗಳು ದೇಶವನ್ನು ಕಾಡುತ್ತಿರುವ ಹಲವಾರು ಜ್ವಲಂತ ಸಮಸ್ಯೆಗಳ ಮೂಲವನ್ನೂ ಧ್ವನಿಸುವಂತಿವೆ. ಹಲವು ಪದರಗಳಲ್ಲಿ ಸ್ತ್ರೀಯರ ಶೋಷಣೆ, ಮತಾಂತರದ ಸ್ವರೂಪ ಮತ್ತು ವ್ಯಾಪ್ತಿ, ಪ್ರಭುತ್ವ ಮತ್ತು ಸೈನ್ಯಗಳ ನಡುವಣ ಸಂಬಂಧ, ವ್ಯಾಪಾರ ಮತ್ ತುಜಾಗತೀಕರಣದ ವಿವಿಧ ಒಳ ಸುಳಿಗಳು.. ಹೀಗೆ.
ಚಾರಿತ್ರಿಕ ಹಿನ್ನೆಲೆಯಲ್ಲಿ ನೋಡುವುದಿದ್ದರೆ ಮೊತ್ತ ಮೊದಲು ಭಾರತಕ್ಕೆ ಸಮುದ್ರ ಮಾರ್ಗಕಂಡು ಹಿಡಿದ ವಾಸ್ಕೋಡಗಾಮನ ಸಮುದ್ರಯಾನ, ತದನಂತರ ಅಪಾರ ಸಂಪತ್ತನ್ನು ಹೇರಿಕೊಂಡು ಆತನ ಹಡಗುಗಳು ಪೋರ್ಚುಗಲ್ ಗೆ ಹಿಂದಿರುಗಿದ್ದು, ನಂತರದಲ್ಲಿ ಆಲ್ಬುಕರ್ಕ್ ಗೋವಾದ ಮೇಲೆ ಅಧಿಪತ್ಯ ಸಾಧಿಸಿದ್ದು , ಅದೇ ಸಮಯ ವಿಜಯನಗರದಲ್ಲಿ ಕೃಷ್ಣ ದೇವರಾಯ ಹಾಗೂ ಆದಿಲ್ ಷಾ ಇವರೊಳಗಿನ ಯುದ್ಧಗಳು, ಕೇರಳದ ಸಾಮೂದಿರಿ ಅರಸರು, ಪರ್ಶಿಯನ್ ಕುದುರೆಗಳು.. ಹೀಗೆ ಒಂದಿಡೀ ದೇಶದ ಭವಿತವ್ಯವನ್ನು ಆಳುವವರ ನಿರ್ಧಾರಗಳು ಹೇಗೆ ರೂಪಿಸಿದವು ಎಂದು ಯೋಚಿಸಿದರೆ ಅಚ್ಚರಿಯಾಗುತ್ತದೆ.
ಯುದ್ಧದ ಸಾವು ನೋವುಗಳು, ಹೆಣ್ಣಿನ ಮೇಲೆ ಅತ್ಯಾಚಾರ, ವ್ಯಾಪಕವಾಗಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ, ಅಲ್ಲದೆ ಇದಕ್ಕೆ ಸಮಾನಾಂತರವಾಗಿ ಜಾಗತಿಕವಾಗಿ ಯಹೊದ್ಯರ ಮೇಲೆ ನಡೆದ ದೌರ್ಜನ್ಯ, ಅವರು ಹೇಗೆ ತಮ್ಮದೇ ಆದ ನೆಲದಿಂದ ನಿರ್ಗತಿಕರಾಗಬೇಕಾಯಿತು ಎನ್ನುವುದನ್ನೆಲ್ಲ ಈ ಕಾದಂಬರಿ ಪ್ರೇಮ ಕಥಾನಕದ ಮೂಲಕ ನಿರೂಪಿಸುತ್ತ ಹೋಗುತ್ತದೆ. ಈ ಕಾದಂಬರಿ ಪ್ರತಿನಿಧಿಸುವ ಇನ್ನೊಂದು ಪ್ರಶ್ನೆ ‘ಮಹತ್ತಿನ’ ಸ್ವರೂಪ. ವೈಯಕ್ತಿಕ ಆಕಾಂಕ್ಷೆಗಳು, ಮಹತ್ತಾದುದನ್ನು ಸಾಧಿಸಲು ಪ್ರಯತ್ನ ಪಡುವುದರ ಅನಿವಾರ್ಯತೆ, ಅಗತ್ಯ, ಈ ಹಾದಿಯಲ್ಲಿನ ತಿರುವುಗಳು, ಸಂಕಷ್ಟಗಳು, ಬದುಕೆಂಬ ಅಗ್ನಿ ಪಥದಲ್ಲಿನ ದಾರುಣ ಘಟನೆಗಳು.. ಹೀಗೆ. ಇಲ್ಲಿನ ಗೇಬ್ರಿಯೆಲ್ ನ ಕತೆಎಲ್ಲ ಶೋಷಿತರ, ಅಂಚಿಗೆ ತಳ್ಳಲ್ಪಟ್ಟವರ ಕತೆ ಕೂಡಾ. ತನ್ನ ಪ್ರೇಯಸಿಯ ತಂದೆಯ ಅಂತಸ್ತಿಗೆ ಸಮಾನವಾಗಲೆಂದು , ಶ್ರೀಮಂತನಾಗಬೇಕೆಂಬ ಸವಾಲನ್ನು ಹೊತ್ತುಕೊಂಡು ಭಾರತಕ್ಕೆ ಲಿಪಿಕಾರನಾಗಿ ಬರುವ ಗೇಬ್ರಿಯೆಲ್ ಕೊನೆಗೆ ಎಲ್ಲರನ್ನೂ , ಎಲ್ಲವನ್ನೂ ಕೊನೆಗೆ ತನ್ನ ಕಿವಿ, ಮೂಗುಗಳನ್ನು ಕತ್ತರಿಸ್ಕೊಳ್ಳಲ್ಪಡಬೇಕಾಗಿ ಬರುವ ಈ ಕಥಾನಕ ನಮ್ಮಅಂತರಂಗವನ್ನು ಕಲಕಿ ಮನಸ್ಸನ್ನು ತಲ್ಲಣಗೊಳಿಸದಿರದು. ಶ್ರೀಮಂತ-ಬಡವ, ರಾಜರು, ಪ್ರಜೆಗಳು , ಶ್ರೇಣೀಕೃತ ಸಮಾಜ ವ್ಯವಸ್ಥೆ , ಅಂತರ್ ಕಲಹಗಳು, ಜಾತಿ ಅಥವಾ ಜನಾಂಗೀಯ ಮೇಲರಿಮೆ.. ಇವು ದೇಶ ಕಾಲವನ್ನು ಮೀರಿದ್ದು ಎನ್ನುವ ಸತ್ಯವನ್ನು ಈ ಕಾದಂಬರಿ ಪ್ರತಿಪಾದಿಸುತ್ತದೆ. ಅಂತೆಯೇ ಅವನ್ನು ಮೀರಿದ ಮಾನವೀಯತೆಯ ಆರ್ದ್ರತೆಯನ್ನು, ಕಟು ವಾಸ್ತವಗಳನ್ನೂ ಕೂಡ.
ಗೇಬ್ರಿಯೆಲ್ ನ ಪಾತ್ರಕ್ಕೆ ಸಂವಾದಿಯಾಗಿ ವಿಜಯ ನಗರಕ್ಕೆ ಬೇಲೂರಿನಿಂದ ವಲಸೆ ಬಂದು ಹಂಪಮ್ಮ ಎಂಬ ಚೆಲುವೆಯನ್ನು ಪ್ರೀತಿಸುವ ಕೇಶವನಿದ್ದಾನೆ. ಈತನೂ ಅಷ್ಟೆ. ಹಂಪಮ್ಮನನ್ನು ಗೆಲ್ಲಲು ತೆಂಬಕಪುರದ ಜಟ್ಟಿಯನ್ ನುಕೊಂದು ಆ ಪಶ್ಚಾತ್ತಾಪದ ಕ್ಷೋಭೆಯಲ್ಲಿ ಬದುಕಿನಿಂದಲೇ ವಿಮುಖನಾಗುವನು. ನಮ್ಮ ಸೋಲು, ಗೆಲುವುಗಳು, ಅಯಾಚಿತವಾಗಿ ನಮ್ಮಿಂದ ಸಂಭವಿಸಿರಬಹುದಾದ ತಪ್ಪುಗಳು, ಮಾನವ ಸಹಜ ದೌರ್ಬಲ್ಯಗಳ ಪ್ರತೀಕವಾಗಿ ಈ ಪಾತ್ರ. ಕೃಷ್ಣ ದೇವರಾಯನಿಗೆ ಗಂಡು ಮಗು ಹುಟ್ಟಿದರೆ ತಾನು ‘ಲೆಂಕ’ ನಾಗಬೇಕೆಂಬ ಶರತ್ತಿಗೆ ಬದ್ಧನಾಗಿದ್ದು ತನ್ನನ್ನು ತಾನೇ ಶಿರಚ್ಛೇದ ಮಾಡಿಕೊಂಡು ಜೀವತ್ಯಾಗ ಮಾಡುವ ಘಟನೆಯಂತೂ ದುರಂತ ನಾಯಕನೊಬ್ಬನು ತನ್ನ ಅಸ್ತಿತ್ವದ ಅರ್ಥ ಕಂಡುಕೊಳ್ಳುವ ಕಟ್ಟಕಡೆಯ ಪ್ರಯತ್ನದಂತೆ ಇದೆ.
ಭಾರತದೇಶದಲ್ಲಿರುವ ಅಸಂಖ್ಯಾತ ‘ಮಾಸ್ತಿ ಕಲ್ಲು’, ‘ವೀರ ಗಲ್ಲುಗಳು’, ‘ಸತಿ ಹೋದವರ’ ಕೈಯ ಅಚ್ಚುಗಳು ಇವನ್ನೆಲ್ಲ ನೋಡುವಾಗ ಸಂಪ್ರದಾಯದ ಹೆಸರಿನಲ್ಲಿ ಅದೆಷ್ಟು ಜೀವಗಳು ಬಲಿಯಾಗುತ್ತಿದ್ದವು ಎಂದು ನೆನೆಸಿಕೊಂಡರೆ ನಮ್ಮ ಹೃದಯ ಝಲ್ಲೆನ್ನುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಇವರನ್ನು ಮುನ್ನಡೆಸುವ ರಾಜರೂ ಇಂತಹ ಅಪಾಯಗಳಿಗೆ ಸನ್ನದ್ಧರಾಗಿಯೇ ಇರುತ್ತಿದ್ದರು ಹಾಗೂ ಅಧಿಕಾರ ಎನ್ನುವುದು ಕತ್ತಿ ಮೊನೆಯ ಭೋಗವೇ ಆಗಿತ್ತುಎನ್ನುವುದು. ಈ ರೀತಿಯ ಚಾರಿತ್ರಿಕ ಹಿನ್ನೆಲೆಯಲ್ಲಿ ಭಾರತದ ಹೆಣ್ಣು ಮಕ್ಕಳನ್ನು ನಮ್ಮ ಸಮಾಜ ನಡೆಸಿಕೊಂಡ ರೀತಿ ದಾರುಣವಾದುದು. ಹಂಪಮ್ಮನಂತಹ ರೂಪಸಿಯರಿಗೋಸ್ಕರ ಹೋರಾಡುವ ಜಟ್ಟಿಯರು, ಅಂತ;ಪುರದಲ್ಲಿನ ನಿಟ್ಟುಸಿರುಗಳು, ಕೊಳ್ಳೆ ಹೊಡೆಯುವ ಪೋರ್ಚುಗೀಸರ ಅನಾಚಾರಗಳು, ಆಸ್ತಿಗೊಸ್ಕರ ಸ್ವಂತ ತಂಗಿಯನ್ನೇ ‘ಸತಿ’ಯ ಹೆಸರಿನಲ್ಲಿ ಬಲಿ ಕೊಡಲು ತಯಾರಾಗುವ ಅಣ್ಣಂದಿರು.. ಹೀಗೆ. ಹಾಗೆ ನೋಡುವುದಿದ್ದರೆ ವಿಜಯ ನಗರ ಸಾಮ್ರಾಜ್ಯದಲ್ಲಿ ನೃತ್ಯ, ಸಾಹಿತ್ಯಎಂದೆಲ್ಲ ಗೌರವದಿಂದ ಬದುಕುತ್ತಿದ್ದುದು ಗಣಿಕೆಯರು ಮಾತ್ರ. ಕುಲೀನ ವರ್ಗದವರಿಗೆ ಕಟ್ಟುಪಾಡುಗಳು ಇರುತ್ತಿದ್ದವು ಎನ್ನುವುದೊಂದು ಅಣಕ.
ವಿಜಯ ನಗರ ಸಾಮ್ರಾಜ್ಯದ ವೈಭವದ ಉತ್ತುಂಗದಲ್ಲಿ ಹೆಣೆದ ಕತೆ ಇದು. ಮುತ್ತು ರತ್ನಗಳನ್ನು ಮಾರುತ್ತಿದ್ದ ವಿಜಯ ನಗರ ಸಾಮ್ರಾಜ್ಯದಲ್ಲಿ ಬಡವ ರುಇರಲಿಲ್ಲವೆಂದಲ್ಲ ಎಂಬ ಸತ್ಯವನ್ನುಇದು ಹೇಳುತ್ತದೆ. ಅದೇ ರೀತಿ ಸಂಪದ್ಭರಿತವಾದ ಭಾರತದೇಶವನ್ನು ಕೊಳ್ಳೆ ಹೊಡೆಯಲು ಪೋರ್ಚುಗೀಸರು ಹೇಗೆ ಅಡಿಪಾಯ ಹಾಕಿ ಕೊಟ್ಟರು ಎನ್ನುವುದನ್ನೂ ಈ ಕಾದಂಬರಿ ಸಶಕ್ತವಾಗಿ ಹೇಳುತ್ತದೆ. ಪ್ರವಾಸಿ ನೆಲೆಯಲ್ಲಿ ಹೇಳುವುದಿದ್ದರೆ ಹಂಪೆಗೆ ಹೋಗುವ ಮುನ್ನ ಈ ಕಾದಂಬರಿಯನ್ನುಓದಿಕೊಂಡು ಹೋದರೆ ನಮ್ಮಅರಿವಿನ ವಿಸ್ತಾರವಾಗುವುದಲ್ಲದೆ, ಅಲ್ಲಿನ ನಗರಗಳು, ವಿಗ್ರಹಗಳು, ಬಂಡೆಗಳು ಬೇರೆಯೇ ಕತೆಯನ್ನು ನಮಗೆ ಹೇಳಬಹುದು. ಇನ್ನು ಈ ಕತೆಯಲ್ಲಿ ಬರುವ ‘ತೇಜೋ’ ಹಾಗೂ ‘ತುಂಗಭದ್ರಾ’ ಎರಡೂ ನಾಗರಿಕತೆಯ ಹರಿವಿನ ಸಂಕೇತಗಳಾಗಿರುವಂತೆಯೇ ಜೀವನದ ನಿರಂತರತೆಯನ್ನು ಸೂಚಿಸುತ್ತದೆ. ಈ ಕೃತಿಯಲ್ಲಿನ ವಿಶಿಷ್ಟತೆ ಇದರಲ್ಲಿನ ಸರಳವಾದ ಆದರೆ ಮನೋಜ್ಞವಾದ ಭಾಷೆ. ಬಳ್ಳಾರಿ ಸೀಮೆಯ ಯಾವುದೇ ನುಡಿಗಟ್ಟುಗಳಾಗಲಿ, ಉತ್ತರ ಕರ್ನಾಟಕದ ‘ಲೋಕಲ್’ ಎನಿಸುವಂತಹ ಪಾರಿಭಾಷಿಕ ಪದಗಳು ಇರದಿರುವುದು ಆಶ್ಚರ್ಯ ತಂದಿತು.
ಅಪ್ಪಟ ಮಾನವೀಯ ನೆಲೆಯಲ್ಲಿ, ಎಲ್ಲೂ ನಿರೂಪಕರ ಸಿದ್ಧಾಂತಗಳ ಹೊರೆ ಆಗದಂತೆ ಚಾರಿತ್ರಿಕ ಘಟನೆಗಳನ್ನು ನಿರೂಪಿಸಿರುವುದು ಈ ಕಾದಂಬರಿಗೆ ಒಂದು ಘನತೆ ತಂದುಕೊಟ್ತಿದೆ. ‘ತೇಜೋ’ ಹಾಗೂ ‘ತುಂಗಭದ್ರಾ’ ನದಿಗಳಂತೆ ಈ ಕಾದಂಬರಿಯಲ್ಲಿ ಪ್ರತಿಪಾದಿಸಿದ ಮಾನವೀಯ ಮೌಲ್ಯಗಳು ಸದಾ ಹರಿಯುತ್ತಿರಬೇಕು.
-ಜಯಶ್ರೀ ಬಿ ಕದ್ರಿ
ಪುಸ್ತಕ ಪರಿಚಯ ಚೆನ್ನಾಗಿ ಮೂಡಿಬಂದಿದೆ…ನಾನೂ ಈ ಪುಸ್ತಕ ಓದಿರುವುದರಿಂದ ಇನ್ನೂ ಹೆಚ್ಚಿನ …ಆಪ್ತತೆ ತಂದಿತು..ಧನ್ಯವಾದಗಳು ಜಯಶ್ರೀ ಮೇಡಂ
ಸೊಗಸಾಗಿದೆ ಪುಸ್ತಕ ಪರಿಚಯ
ಧನ್ಯವಾದಗಳು ನಾಗರತ್ನ ಅವರೇ. ಹಾಗೂ ನಯನಾ ಅವರೇ. –ಜಯಶ್ರೀ ಕದ್ರಿ
ಪ್ರಬುದ್ಧ ಕಾದಂಬರಿಯೊಂದರ ವಿಮರ್ಶಾತ್ಮಕ ಪರಿಚಯವು ಅಷ್ಟೇ ಪ್ರಬುದ್ಧತೆಯಿಂದ ಕೂಡಿದೆ..ಧನ್ಯವಾದಗಳು ಜಯಶ್ರೀಯವರಿಗೆ.
ಓದುವ ಬಯಕೆ ಹುಟ್ಟಿಸುವಂತಹ ಒಂದೊಳ್ಳೆಯ ಪುಸ್ತಕಾವಲೋಕನ.
ಒಳ್ಳೆಯ ಪುಸ್ತಕ ಪರಿಚಯ
ಓದಲೇ ಬೇಕಾದ ಪುಸ್ತಕ