ಪ್ರವಾಸ

ಇಮಾ ಮಾರ್ಕೆಟ್, ನಾರೀ ಶಕ್ತಿ

Share Button


ಕೇವಲ ಮಹಿಳೆಯರಿಂದಲೇ ನಡೆಯುವ ಮಾರುಕಟ್ಟೆಯ ಬಗ್ಗೆ ಕೇಳಿದ್ದೀರಾ? ಅದೇ ಮಣಿಪುರದಲ್ಲಿರುವ ‘ಇಮಾ ಮಾರ್ಕೆಟ್’ ಮಣಿಪುರಿ ಅಥವಾ ಮೀಯ್ಟಿ ಭಾಷೆಯಲ್ಲಿ ‘ಇಮಾ’ ಎಂದರೆ ‘ಅಮ್ಮ’. ಅಮ್ಮಂದಿರೇ ನಡೆಸುವ ಮಾರುಕಟ್ಟೆ. ಮಣಿಪುರದ ಇಂಫಾಲ್‌ನಲ್ಲಿದೆ. ನಾವು ಈಶಾನ್ಯ ರಾಜ್ಯಗಳಿಗೆ ನವೆಂಬರ್ 2022 ರಲ್ಲಿ ಭೇಟಿ ಕೊಟ್ಟಾಗ ಈ ಮಾರುಕಟ್ಟೆಯನ್ನು ಕಾಣುವ ಯೋಗ ಒದಗಿತು. ಕಂಡು ನಿಜವಾಗಿಯೂ ಆಶ್ಚರ್ಯವಾಯಿತು. ಇಲ್ಲಿಯ ವ್ಯಾಪಾರ ವಹಿವಾಟನ್ನು ನಡೆಸುವವರೆಲ್ಲಾ ಮಹಿಳೆಯರೇ. ಗಂಡಸರಿಗೆ ಅವಕಾಶವಿಲ್ಲ. ಹಾಗೆ ಮಾಡಿದರೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ! ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ಮಹಿಳೆಯರ ಮಾರ್ಕೆಟ್ ಎನ್ನುವ ಹೆಗ್ಗಳಿಕೆ ಇಮಾ ಮಾರ್ಕೆಟ್ಟಿಗಿದೆ. ಬಹುಶಃ ಪ್ರಪಂಚದಲ್ಲಿಯೇ ಏಕೈಕ ಮಹಿಳಾ ಮಾರ್ಕೆಟ್ ಇದಾಗಿದೆ.

ಇಮಾ ಮಾರ್ಕೆಟ್ಟಿಗೆ ತನ್ನದೇ ಆದ ಇತಿಹಾಸವಿದೆ. ಹದಿನಾರನೆಯ ಶತಮಾನದಲ್ಲಿ ಇದು ಪ್ರಾರಂಭವಾಯಿತು. ಆಗ ಅಲ್ಲಿನ ಗಂಡಸರೆಲ್ಲಾ ಬೇರೆ ಸ್ಥಳಗಳ ದುಡಿಯಲು ಮತ್ತು ಸೇನೆಯಲ್ಲಿ ಕೆಲಸ ಮಾಡಲು ಬಲವಂತವಾಗಿ ಹೋಗಬೇಕಿತ್ತು. ಆದ್ದರಿಂದ ಊರಿನಲ್ಲಿ ಉಳಿದ ಹೆಂಗಸರು ಬೇಸಾಯ ಮತ್ತು ನೇಯ್ಗೆ ಮತ್ತಿತರ ಕೆಲಸಗಳಲ್ಲಿ ತೊಡಗಿಸಿಕೊಂಡರು. ಇವುಗಳಿಂದ ಬದುಕನ್ನು ನಡೆಸಲು ವ್ಯಾಪಾರಕ್ಕೆ ತೊಡಗಿದರು. ಆಗ ಮಹಿಳೆಯರ ಮಾರುಕಟ್ಟೆಯೂ ಶುರುವಾಯಿತು.

ಇಮಾ ಮಾರ್ಕೆಟ್ ಒಂದು ಪ್ರವಾಸೀ ಆಕರ್ಷಣೆಯೂ ಆಗಿದೆ. ಮೀಯ್ಟಿ ಜನಾಂಗದ ಮಹಿಳೆಯರು ಇದನ್ನು ನಡೆಸುತ್ತಾರೆ. ಇದು ಇಂಘಾಲದ ಮಧ್ಯದಲ್ಲಿದ್ದು, ಬೀರ್ ಟಿಕೇಂದ್ರಜಿತ್ ರಸ್ತೆಯಲ್ಲಿದೆ. ಈ ಮಾರುಕಟ್ಟೆಗೆ ನುಪಿ ಕೆಥೇಲ್ ಎಂದೂ ಹೆಸರಿದೆ. ಒಟ್ಟು 5000- 6000 ಮಹಿಳೆಯರು ಇಲ್ಲಿ ವ್ಯಾಪಾರಸ್ಥರಾಗಿದ್ದಾರೆ. ಬಟ್ಟೆಗಳು, ತರಕಾರಿ, ಹಣ್ಣುಗಳು, ಗೊಂಬೆಗಳು, ಮೀನು, ಸಂಬಾರ ಪದಾರ್ಥಗಳು ಮತ್ತು ಪಾತ್ರೆಗಳನ್ನು ಮಾರುತ್ತಾರೆ. ಮೂರು ದೊಡ್ಡ ಕಟ್ಟಡಗಳಿವೆ. ಮೇಲ್ಛಾವಣಿ ಪಗೋಡ ರೀತಿಯಲ್ಲಿದೆ. ದೊಡ್ಡ ರಸ್ತೆಯ ಎರಡು ಬದಿಯಲ್ಲಿಯೂ ಮಾರ್ಕೆಟ್ ಹರಡಿಕೊಂಡಿದೆ. ಬಟ್ಟೆಯ ಅಂಗಡಿಗಳು ಒಂದು ಬದಿಯಲ್ಲಿವೆ. ಕಿರಾಣಿ ವಸ್ತುಗಳು ಮತ್ತೊಂದು ಬದಿಯಲ್ಲಿವೆ. ತರಕಾರಿ, ಮೀನು ಮುಂತಾದವು ರಸ್ತೆಯ ಬದಿಯಲ್ಲೂ ಇದ್ದುವು.

ಇಮಾ ಮಾರ್ಕೆಟ್, ಇಂಘಾಲ

ನೋಡಲು ಆಕರ್ಷಕವಾದ ಮಾರುಕಟ್ಟೆ. ಎಲ್ಲೆಲ್ಲಿಯೂ ಜನ ತುಂಬಿದ್ದರು. ಎಲ್ಲಾ ರೀತಿಯ ಬಟ್ಟೆಗಳು, ಅಲ್ಲಿಯ ಸ್ಥಳೀಯ ದಿರಿಸುಗಳು, ಶಾಲುಗಳು ಇದ್ದುವು. ಸೀರೆ ಅಂಗಡಿ ಮಾತ್ರ ಅಷ್ಟಾಗಿ ಇರಲಿಲ್ಲ. ಅಲ್ಲಿಯ ಮಹಿಳೆಯರು ವ್ಯಾಪಾರದಲ್ಲಿ ಪಳಗಿದ್ದವರು. ಮಧ್ಯ ವಯಸ್ಸಿನಿಂದ ಹಿಡಿದು ಎಪ್ಪತ್ತರವರೆಗೂ ಇದ್ದ ಮಹಿಳೆಯರು ಸಾಲಾಗಿ ಕುಳಿತು ವ್ಯಾಪಾರ ಮಾಡುತ್ತಾರೆ. ಅಚ್ಚುಕಟ್ಟಾಗಿ ಎಲ್ಲರಿಗೂ ಮಳಿಗೆ ಮಾಡಿಕೊಡಲಾಗಿದೆ. ಇದು ಒಂದು ರೀತಿ ತೆರೆದಿರುವ ಮಳಿಗೆ, ಇವರೆಲ್ಲಾ ಸಂಘ ಕಟ್ಟಿಕೊಂಡಿದ್ದಾರೆ. ಮದುವೆಯಾದವರು ಮಾತ್ರ ವ್ಯಾಪಾರ ಮಾಡಬಹುದು, ವಿಚ್ಛೇದನ ಹೊಂದಿದ್ದರೂ ಪರವಾಗಿಲ್ಲ, ಅಂತಹವರು ಅಂಗಡಿ ಇಟ್ಟುಕೊಳ್ಳಬಹುದು. ಪ್ರತಿಯೊಬ್ಬರೂ ವರ್ಷದಲ್ಲಿ ರೂ. 73,000/- ರಿಂದ 2 ಲಕ್ಷದವರೆಗೂ ವ್ಯಾಪಾರ ಮಾಡುತ್ತಾರೆ. ಇಡೀ ಮಾರ್ಕೆಟ್‌ನ ವಹಿವಾಟು ವರ್ಷಕ್ಕೆ 40-50 ಕೋಟಿ ರೂ.ಗಳು. ಬೆಳಿಗ್ಗೆ 9.30 ಗೆ ಆರಂಭವಾಗುವ ಮಾರ್ಕೆಟ್ ಸಂಜೆ 5.30 ಗೆ ಮುಚ್ಚುತ್ತದೆ. ಇಲ್ಲಿ ಕತ್ತಲಾಗುವುದೂ ಬೇಗ, 6 ಗಂಟೆಗೇ ಕತ್ತಲಾವರಿಸುತ್ತದೆ. ನಮಗೆ ಈ ಮಾರುಕಟ್ಟೆ ಮಹಿಳಾ ಶಕ್ತಿಯ ಅಗಾಧತೆಯನ್ನು ಪರಿಚಯಿಸಿತು. ಆರ್ಥಿಕ ಬೆಳವಣಿಗೆಯನ್ನು ಸದೃಢಗೊಳಿಸುವ ನಾರೀಶಕ್ತಿ ‘ಇಮಾ ಮಾರ್ಕೆಟ್’.

-ಡಾ.ಎಸ್.ಸುಧಾ

17 Comments on “ಇಮಾ ಮಾರ್ಕೆಟ್, ನಾರೀ ಶಕ್ತಿ

  1. ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು. ಉತ್ತಮ ಲೇಖನ

  2. ಒಳ್ಳೆಯ ಮಾಹಿತಿಯನ್ನು ಒಳಗೊಂಡ…ಲೇಖನ ಮಾರ್ಚಿ ತಿಂಗಳ ಮಹಿಳಾ ಸಬಲೀಕರಣಕ್ಕೊಂದು ಉತ್ತಮ ನಿದರ್ಶನ…ಧನ್ಯವಾದಗಳು ಸುಧಾ ಮೇಡಂ

  3. ಮಹಿಳಾ ದಿನಾಚರಣೆಗಾಗಿ ಸಂದರ್ಭೋಚಿತ, ಮಾಹಿತಿಪೂರ್ಣ ಲೇಖನ. ನಾರೀಶಕ್ತಿಯ ಅಗಾಧತೆಗೆ ಹೆಮ್ಮೆ ಎನಿದುತ್ತದೆ.

  4. ವಿಶೇಷವಾದ ಮಹಿಳೆಯರ ಮಾರ್ಕೆಟ್ ಕುರಿತು ಓದಿ ಬಹಳ ಹೆಮ್ಮೆ ಅನಿಸಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *