ಕೃತಿ ಪರಿಚಯ: ಶ್ರೀಮತಿ ಅನಿತಾ ಕೆ.ಆರ್.‌ ಅವರ ಕವನ ಸಂಕಲನ, ‘ನನ್ನೊಳಗಿನ ದನಿ’

Share Button

ವರುಣ್‌ರಾಜ್‌ ಜಿ.,


ವೃತ್ತಿಯಲ್ಲಿ ಶಿಕ್ಷಕರಾಗಿರುವ ಶ್ರೀಮತಿ ಅನಿತಾ ಕೆ.ಆರ್.‌ ಇವರು ಪ್ರವೃತ್ತಿಯಲ್ಲಿ ಸಾಹಿತಿ. ಇವರು ಬರೆದಿರುವ ಕೃತಿ ನನ್ನೊಳಗಿನ ದನಿ. ಇದೊಂದು 80 ಪುಟದ ಕೃತಿ. ಸು. 50 ಕವನಗಳು ಈ ಸಂಕಲನದಲ್ಲಿದೆ. ‘ನನ್ನೊಳಗಿನ ದನಿ’ ಎಂಬ ಶೀರ್ಷಿಕೆಯೇ, ಇಲ್ಲಿನ ಕವನಗಳು ಕವಿಯ ಹೃದಯಾಂತರಾಳದ ಅಭಿವ್ಯಕ್ತಿಗಳು ಎಂಬುದನ್ನು ಧ್ವನಿಸುತ್ತದೆ. ನನ್ನೊಳಗಿನ ದನಿ ಎಂಬುದು ಅರ್ಥಪೂರ್ಣವಾದ ಮತ್ತು ಅಷ್ಟೇ ಸೂಕ್ತವಾದ ಶೀರ್ಷಿಕೆ.

ಕೃತಿಯ ಮುಖಪುಟದಲ್ಲಿ, ಒಂದು ಮಾಸಿದ ಗೋಡೆ, ಅದರ ಮೇಲೆ ಕಲೆಗಳು, ಒಂದು ಕಿಟಕಿ, ಮತ್ತೊಂದು ಅರ್ಧ ಗೋಡೆ, ಒಂದು ಮಾನವ ರೂಪ (ಬಹುಶಃ ಒಬ್ಬ ಹೆಣ್ಣು ಅದರಲ್ಲಿಯೂ ಒಬ್ಬ ವೃದ್ಧೆ) ಇಷ್ಟು ಇವೆ. ಅಷ್ಟೊಂದು ವರ್ಣ ರಂಜಿತವಾಗಿಲ್ಲದಿದ್ದರೂ, ಈ ಮುಖಪುಟ ಅರ್ಥಪೂರ್ಣವಾದ ರೂಪಕಗಳಿಂದ ಕೂಡಿದೆ. ಇಲ್ಲಿ ಯಾವುದೇ ಬಾಗಿಲು ಇಲ್ಲ, ಕೇವಲ ಒಂದು ಸಣ್ಣ ಕಿಟಕಿ ಇದೆ. ಇದರ ಮೂಲಕವೇ ಅವಳು ಲೋಕವನ್ನ ನೋಡಬೇಕು. ಲೋಕ ಅವಳನ್ನು ನೋಡಲೂ ಸಹ ಈ ಕಿಟಕಿಯೇ ಮಾರ್ಗ. ಈ ಕೃತಿಯೂ ಸಹ ಈ ಸಣ್ಣ ಕಿಟಕಿಯ ಹಾಗೆ, ಓದುಗರು ಕವಿಯ ಮನಸನ್ನು ನೋಡಲು ಮತ್ತು ಕವಿ ಹೃದಯವು ಸಮಾಜವನ್ನು ನೋಡಲು ಎರಡಕ್ಕೂ ಈ ಸಣ್ಣ ಕಿಟಕಿಯೇ ಮಾಧ್ಯಮ. ಕಿಟಕಿ ಅಂದರೆ ಕೃತಿ ಸಣ್ಣದಿರಬಹುದು, ಆದರೆ ಇದರಲ್ಲಿ ಇಣುಕಿದಾಗ ಕೃಷ್ಣನ ಬಾಯಲ್ಲಿ ಯಶೋಧೆಗೆ ಬ್ರಹ್ಮಾಂಡವೇ ಕಂಡಹಾಗೇ ಕವಿ ಮನಸ್ಸಿನಾಳದ ಹಲವು ಲೋಕಗಳು ಓದುಗರ ಮುಂದೆ ತೆರೆದುಕೊಳ್ಳುತ್ತವೆ. ಇದೇ ಈ ಕೃತಿಯ ವೈಶಿಷ್ಟ್ಯ.

ಈ ಕೃತಿಗೆ ಬೆನ್ನುಡಿಯನ್ನು ಬರೆದಿರುವ ಶ್ರೀ ರಾಜು ಸೂಲೇನಹಳ್ಳಿಯವರು ಕವಯತ್ರಿಯ ಕುರಿತು “ವೃತ್ತಿಯ ಜೊತೆಗೆ ಬರವಣಿಗೆಯ ಪ್ರವೃತ್ತಿಯನ್ನು ರೂಢಿಸಿಕೊಂಡು ಸ್ವ-ಅನುಭವ ಹಾಗೂ ಜ್ಞಾನವನ್ನು ಒಗ್ಗೂಡಿಸಿಕೊಂಡು ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ…” ಎಂದು ಹೇಳುವರು. ರಾಜು ಕವಿಯವರು ಈ ಮಾತನ್ನು ಬಹಳ ಸೂಕ್ಷ್ಮವಾಗಿಯೇ ಆಲೋಚಿಸಿ ಹೇಳಿದಂತಿದೆ. ಏಕೆಂದರೆ ಜ್ಞಾನ ಮತ್ತು ಅನುಭವಗಳ ಸೂಕ್ತವಾದ ಮತ್ತು ಅಷ್ಟೇ ಸರಿಪ್ರಮಾಣದ ಮಿಶ್ರಣ ಈ ಕೃತಿಯಲ್ಲಿದೆ. ರಾಜುರವರ ಮಾತುಗಳು ಅನುಭವವಿಲ್ಲದ ಜ್ಞಾನದ ನಿಸ್ಸಾರತೆಯನ್ನು, ಸಂವೇದನಾ ಹೀನತೆಯನ್ನೂ ಅಣಕಿಸುವಂತೆ ಇವೆ. ಇಲ್ಲಿನ ಕವನಗಳಿಗೆ ಸೂಕ್ತವಾದ ರೇಖಾಚಿತ್ರಗಳನ್ನು ಅಳವಡಿಸಿರುವುದು ಕೃತಿಯ ಮತ್ತೊಂದು ವಿಶಿಷ್ಟತೆ.

ಈ ಕೃತಿಗೆ ಮುನ್ನುಡಿಯನ್ನು ಬರೆದಿರುವ ಪ್ರಾಧ್ಯಾಪಕರಾದ ಅಶೋಕ ನರೋಡೆಯವರು ‘ನನ್ನೊಳಗಿನ ದನಿ’ಗೊಂದು ಸುಂದರವಾದ ಚೌಕಟ್ಟನ್ನು ಹಾಕಿಕೊಟ್ಟಿರುವರು. ಇಂತಹ ಕ್ರಿಯೆಟಿವ್‌ ಬರಹಗಳನ್ನು ಓದುವಾದ ಮುನ್ನುಡಿ ಬೆನ್ನುಡಿಗಳನ್ನು ಓದದೆಯೇ ಕೃತಿಗೆ ಪ್ರವೇಶ ಮಾಡಬೇಕೆಂಬುದು ನನ್ನ ಸಾಮಾನ್ಯ ನಂಬಿಕೆ. ಆದರೆ, ಈ ಮುನ್ನುಡಿ ಓದುಗರಿಗೆ ಒಂದು ಉತ್ತಮ ಪ್ರವೇಶಿಕೆಯನ್ನು ಒದಗಿಸುತ್ತದೆ ಎನಿಸಿತು. ಇಲ್ಲಿ ಅಶೋಕ ನರೋಡೆಯವರು ಮಹಿಳೆಯರು ಸಾಹಿತ್ಯ ರಚನೆಗೆ ಹೆಚ್ಚು ಹೆಚ್ಚು ಮುಂದಾಗಬೇಕೆಂದು ಹೇಳುತ್ತಾ, ತನ್ನನ್ನು ತಾನು ಶೋಧಿಸಿಕೊಳ್ಳಲು ಕಾವ್ಯ ಒಂದು ಅತ್ಯುತ್ತಮ ಮಾಧ್ಯಮವಾಗುವ ಬಗೆಯನ್ನೂ ವಿವರಿಸುತ್ತಾರೆ. ಈ ಕಾವ್ಯ ಮಾಧ್ಯಮವನ್ನು ಅಷ್ಟೇ ಯಶಸ್ವಿಯಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಕವಯತ್ರಿ ಅನಿತಾರವರು ಮಾಡಿರುವರು.

ಕವಯತ್ರಿ ತಮ್ಮ ಕವನವನ್ನು ಪ್ರಾರಂಭಿಸುವುದೇ ಆನ್ನದಾತನಿಂದ. ಈ ಕೃತಿಯಲ್ಲಿ ದೇಶಕ್ಕೆ ಅನ್ನವನ್ನು ನೀಡುವ ರೈತರಿಗೆ ಮೊದಲ ಸ್ಮರಣೆ ದಕ್ಕಿರುವುದು ವಿಶೇಷವಾಗಿದ್ದು, ಇದು ಕವಿ ಮನಸ್ಸಿನ ವೈಚಾರಿಕ ಪ್ರಜ್ಞೆಯನ್ನು ಹಾಗೂ ಸಾಮಾಜಿಕ ಸಂವೇದನೆಯನ್ನು ನಮಗೆ ತಿಳಿಸುತ್ತದೆ. ಈ ಕವಿತೆಯಲ್ಲಿ ರೈತರ ತ್ಯಾಗ, ಕಾಯಕಗಳನ್ನು ವಿವರಿಸುತ್ತ,

“ಸ್ಮರಿಸು ಬಾ ಮನುಜ
ಗಾಂಧಿ ತಾತನಂತೆ ದುಡಿವ
ರೈತ ಯೋಗಿಯ
ನಮ್ಮ ರೈತ ಯೋಗಿಯ”

ಎಂದು ಹೇಳುತ್ತಾ, ರೈತನ ಅನ್ನದ ಕೃಷಿ, ಗಾಂಧಿಯ ಸ್ವತಂತ್ರ್ಯದ ಕೃಷಿ ಎರಡನ್ನೂ ಸಮೀಕರಿಸುತ್ತಾ, ರೈತರ ಆತ್ಮಹತ್ಯೆಗಳನ್ನು, ಗಾಂಧಿಯ ಹತ್ಯೆಯನ್ನು ನೆನಪಿಸಿ ಎರಡಕ್ಕೂ ವಿಷಾದ ವ್ಯಕ್ತಪಡಿಸುತ್ತದೆ. ಕೃತಿಯ ಮತ್ತೊಂದು ಕವಿತೆ ಮತದಾನದ ಕುರಿತದ್ದು, ‘ಮತದಾನ ಮಹಾದಾನ’ ಈ ಕವಿತೆಯ ಶೀರ್ಷಿಕೆ. ಮತದಾನಕ್ಕೆ ಪ್ರೇರಣೆ ನೀಡುವ ಆಶಯವನ್ನೊಳಗೊಂಡು ಪ್ರಾರಂಭವಾಗುವ ಈ ಕವಿತೆ ಮತವನ್ನು ಮಾರಿಕೊಳ್ಳಬೇಡಿ ಎಂದು ಹೇಳುತ್ತ, ಮತದಾನವನ್ನು ಪ್ರಜಾಪ್ರಭುತ್ವದ ಹಬ್ಬ ಎಂದು ಗುರುತಿಸುತ್ತದೆ.

ʼಕವಯತ್ರಿʼ ಎಂಬ ಮತ್ತೊಂದು ವಿಶೇಷವಾದ ಕವಿತೆಯಲ್ಲಿ ಬರುವ

“ಹೃದಯದೊಳಗಿನ ಭಾವನೆಗೆ
ಮನದ ಏಖಾಂತಕ್ಕೆ ಬೇಸರಕ್ಕೆ
ಬೇಕಿತ್ತೊಂದಾಸರೆ”
“ಕಾಗದ, ಲೇಖನ ದೊರಕ ತನಕ
ಚಿಮ್ಮಿತ್ತು ಭಾವನೆ
ಮೂಡಿಬಂದವು ಅಕ್ಷರಗಳು
ಹೊಮ್ಮಿದವು ಪದಗಳು
ಅನುಭವಗಳು, ಅನಿಸಿಕೆಗಳು….”

ಎಂಬ ಸಾಲುಗಳು ಒಂದು ರೀತಿಯ ಸ್ತ್ರೀವಾದಿ ಕಾವ್ಯಮೀಮಾಂಸೆಯ ದೃಷ್ಠಿಕೋನವನ್ನು ಒಳಗೊಂಡಂತೆ ಅನಿಸುವುದು. ಕವಿ ತನ್ನ ಬಿಡುಗಡೆಗಾಗಿ ಕಾವ್ಯ ರಚನೆಯನ್ನು ಮಾಡುತ್ತಾನೆ. ತನ್ನ ಅಭಿವ್ಯಕ್ತಿಯ ಒಂದು ಮಾಧ್ಯಮವಾಗಿ ಬರವಣಿಗೆಯನ್ನು ಆಯ್ದುಕೊಳ್ಳುವ ಕವಿ ಆ ಮೂಲಕವೇ ತನ್ನೆಲ್ಲ ಅನಿಸಿಕೆ ಅನುಭವಗಳನ್ನು ನೋವು-ನಲಿವುಗಳನ್ನು ಹೊರಹಾಕುತ್ತಾ ಹಗುರಾಗುವನು. ಇಂತಹ ಹಗುರಾಗುವಿಕೆ ಈ ಕವಿತೆಯಲ್ಲೂ ವ್ಯಕ್ತವಾಗಿದೆ. ಇದೇ ಕವಿತೆಯ ಮುಂದಿನ ಸಾಲುಗಳಲ್ಲಿ ನನ್ನ ಪದಗಳು ಖಾಲಿಯಾದರೆ ಹೇಗೆ ? ಎಂಬ ಭಯವನ್ನೂ ಉಳಿಸಿಕೊಳ್ಳುತ್ತಾ, ಕವಿಯೆಂಬ ಅಹಂಕಾರದ ಭಾವನೆ ತನ್ನಲಿ ಸುಳಿಯಬಾರದೆಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.

‘ಆರಾಧನೆ’ ಎಂಬ ಮತ್ತೊಂದು ಕವಿತೆಯಲ್ಲಿ,
“ಅಭಿಮಾನಿಸುತ್ತೇನೆ ಗೆಳೆಯಾ
ಗೆದ್ದು ಬೀಗುವಾಗ ಬೆನ್ತಟ್ಟಿದ್ದಕ್ಕಲ್ಲ
ಸೋತು ಕುಸಿದಾಗ ಕೈ ಹಿಡಿದದ್ದಕ್ಕೆ
ಸದ್ಗುಣಗಳ ಮೆಚ್ಚಿಕೊಂಡದ್ದಕ್ಕಲ್ಲ
ದುರ್ಗುಣಗಳ ಸಹಿಸಿಕೊಂಡದಕ್ಕೆ,
ಸಿರಿಯಿದ್ದಾಗ ಸನಿಹವಿದ್ದುದ್ದಕಲ್ಲ
ಸೂತಕವಿದ್ದಾಗ ಜೊತೆಯಾದುದಕ್ಕೆ.”

ಇಂತಹಾ ಒಬ್ಬ  ಗೆಳೆಯನನ್ನು ಆರಾಧಿಸುವೆ ಎನ್ನುತ್ತಾರೆ. ಇಂತಹ ಒಬ್ಬ ಸಂಗಾತಿಯ ನಿರೀಕ್ಷೆ ಎಲ್ಲ ಗಂಡು ಹೆಣ್ಣುಗಳಲ್ಲೂ ಸಾಮಾನ್ಯ. ಈ ನಿರೀಕ್ಷೆ ಸಫಲವಾದ ಸಾರ್ಥಕ ಭಾವ ಈ ಕವಿತೆಯಲ್ಲಿ ಕಂಡು ಬರುತ್ತದೆ.

ಮನಸ್ಸಿದೆಯಲ್ಲ” ಎಂಬ ಮತ್ತೊಂದು ಕವಿತೆಯನ್ನು ಗಮನಿಸುವುದಾದರೆ,

“ಮಿನುಗುವ ತಾರೆಗಳ
ಮುಟ್ಟಲಾಗದಿದ್ದರೇನಂತೆ?
ಅವುಗಳ ಬೆಳಕಲಿ ಸಾಗುವ
ಕನಸಿದೆಯಲ್ಲ?……………………
…………….ಮನಸ್ಸು ಎಂದಿಗೂ
ಬರಿದಾಗದು
ಜೀವ ಭಾವಗಳ ಮುನ್ನಡೆಸುವ
ಬಾಳಿನ ದೋಣಿಯಿದು”

ಎಂಬ ಸಾಲುಗಳು ಮಾನವನ ಮನಸ್ಸಿನಲ್ಲಿರುವ ಅಗಾಧ ಶಕ್ತಿಯನ್ನು ಮನವರಿಕೆ ಮಾಡಿಕೊಡುತ್ತಲೇ, ಸೋತ ಮನಸ್ಸುಗಳಿಗೆ ದೈರ್ಯ ತುಂಬುವ ಕೆಲಸವನ್ನು ಮಾಡುತ್ತವೆ. ಇರುವೆಗಳು ಎಂಬ ಮತ್ತೊಂದು ಕವಿತೆಯಲ್ಲಿ, “ನಾವು ಮಾಡಿದ್ದು ಸಾಧನೆಯಲ್ಲ, ಓದಿ, ಬರೆದು ಅಹಂಕಾರ ನಮ್ಮದೆಲ್ಲ” ಎಂಬ ಆತ್ಮ ನಿವೇದನೆ ಇದೆ. ಇರುವೆಗಳ ಒಗ್ಗಟ್ಟನ್ನು, ಛಲಬಿಡದ ಶ್ರಮವನ್ನು ಪ್ರಶಂಶಿಸುತ್ತಾ ಮಾನವನಿಗೆ ಇರುವೆಯೂ ಮಾದರಿಯಾಗಬಹುದು ಎಂಬುದನ್ನೂ ಕವಿ ಗುರುತಿಸುತ್ತಾರೆ.
ಮತ್ತೊಂದು ಕವಿತೆ ‘ಬದುಕಿನ ಸಾರ್ಥಕತೆ’ ಈ ಕವಿತೆಯಲ್ಲಿ,

“ಕಾನನದ ಬಿದುರುಗಳೆಲ್ಲವೂ
ಮಧುರ ಮುರಳಿಯಾಗಬಲ್ಲವೇ?
ಹೂ ಬನದ ಸುಮಗಳೆಲ್ಲವೂ
ದೇವರ ಮುಡಿಗೇರಬಲ್ಲವೇ?
ಬದುಕು ಬದಲಾಗಲು ಕಾಲಬೇಕು
ಹಸಿವು ಕಸುವಿನಲ್ಲಿ ಮೀಯಬೇಕು
ಒಲುಮೆ ಚೆಲುಮೆಯ ಜಾಲಬೇಕು
ಪರೀಕ್ಷೆ ನಿರೀಕ್ಷೆಯಲ್ಲಿ ಬೇಯಬೇಕು”

ಎನ್ನುತ್ತಾ ಬದುಕಿನ ಸಾರ್ಥಕತೆಯ ತತ್ತ್ವವನ್ನು ಬಹಳ ಸರಳವಾಗಿಯೇ ವಿವರಿಸಿರುವರು.

ʼಸಾಕೆನಿಸಿದೆ ಬದುಕುʼ ಎಂಬ ಕವಿತೆಯಲ್ಲಿ ಯಾವುದೋ ಸಂದರ್ಭದಲ್ಲಿ ತಾನು ಅನುಭವಿಸಿದ ನೋವು ಅಥವಾ ನಿರಾಶೆಯನ್ನು ವ್ಯಕ್ತ ಪಡಿಸುತ್ತಾ ಬದುಕು ಸಾಕೆನಿಸಿದೆ ಎಂದು ಕವಯತ್ರಿ ಬರೆಯುತ್ತಾರೆ. ಇಂತಹ ನಿರಾಶಾವಾದದ ಬೆನ್ನಿಗೇ, ‘ನಿತ್ಯ ಮಾರ್ಗದರ್ಶನ’ ಎಂಬ ಕವಿತೆಯಿದೆ. ಈ ಕವಿತೆ ತನ್ನನ್ನೂ ಒಳಗೊಂಡಂತೆ ನಾವು ಎಂದಿಗೂ ನಿರಾಶಾವಾದಿಗಳಾಗಬಾರದು ಎನ್ನುವ ಸಂದೇಶವನ್ನು ಕೊಡುತ್ತದೆ. ಎಲ್ಲಾ ಆಶೆಯ ಹಾದಿಗಳೂ ಮುಚ್ಚಿಕೊಂಡರೂ ನಮಗೆ ನಾವೇ ಮಾರ್ಗದರ್ಶಕರಾಗಿ ಬದುಕನ್ನು ಮುನ್ನಡೆಸಬೇಕೆಂಬ ಆಶಯ ಈ ಕವಿತೆಗಳಲ್ಲಿದೆ.

‘ವಿಮರ್ಶೆ’ ಈ ಕವಿತೆಯಲ್ಲಿ ಮಹಿಳೆಯ ಕಣ್ಣೀರಿನ ಪ್ರಶ್ನೆ ಇದೆ.

“ಉತ್ತರ ಇಲ್ಲದ
ವಿಮರ್ಶೆಯ ಸಂತೆಯಲ್ಲಿ
ಜೀವನ ಜಾತ್ರೆಯು ಸಾಗಿತು
ಬದುಕಿನ ಪರದೆಯು ಮುಚ್ಚಿತ್ತು
ವಿಮರ್ಶೆ ಕೂಟವು ಕೂಡಿತ್ತು.

ಇಲ್ಲಿ ವಿಮರ್ಶೆ ಅಂದರೆ ಸ್ತ್ರೀ ಎದುರಿಸುವ ನಿಂದನೆ ಆಪಾದನೆಗಳು ಅನ್ನುವ ಅರ್ಥದಲ್ಲಿ ಇವರು ವಿಮರ್ಶೆಯನ್ನ ಬಳಸಿದ್ದಾರೆ ಮತ್ತೊಂದು ಕಡೆ ವರದಕ್ಷಿಣೆಯ ಕುರಿತು ಮಾತನಾಡುತ್ತಾ,

“ವರನೆಂಬ ಭೂತ
ಮದುವೆ ಮಂಟಪದಲ್ಲಿ ಕೂತ
ವರದಕ್ಷಿಣೆ ಎಂಬುದಕ್ಕೆ ಸೋತ”

“ಗಂಡಾದರೇನಂತೆ, ಅವನು ಹುಟ್ಟಿರುವುದು ಹೆಣ್ಣಿನ ಗರ್ಭದಲ್ಲೇ!” ಎನ್ನುವ ಸಾಲುಗಳಲ್ಲಿ ವ್ಯಕ್ತವಾಗಿರುವ ಸಹಜ ಪ್ರಾಸ, ಮತ್ತು ವರದಕ್ಷಿಣೆ ಪಡೆಯುವ ವರನನ್ನು ಕುರಿತ ವ್ಯಂಗ್ಯ ಅರ್ಥಪೂರ್ಣವಾಗಿ ಮೂಡಿ ಬಂದಿವೆ.

ʼಮರಳಿನ ಗೂಡುʼ ಎಂಬ ಕವಿತೆಯು, ನಮ್ಮೆಲ್ಲರ ಬಾಲ್ಯವನ್ನು ನೆನಪಿಸುತ್ತಲೇ, ಆ ಮರಳಿನ ಗೂಡೇ ಅನಂತವಾಗುವ ಪರಿಯನ್ನು ಚಿತ್ರಿಸುತ್ತಾ ಮಾನವನ ಭವ ಬಂಧನಗಳ ಮತ್ತವುಗಳ ಕ್ಷಣಿಕತೆಯನ್ನು ಓದುಗರಿಗೆ ಮನದಟ್ಟು ಮಾಡಿಸುತ್ತದೆ.

ʼಚುನಾವಣೆʼ ಎಂಬ ಕವಿತೆಯಲ್ಲಿ “ಯಾರು ಅಧಿಕಾರ ಹಿಡಿದರೇನು, ಎಲ್ಲರೆಲ್ಲರೂ ದೃತರಾಷ್ಟ್ರ ಪುತ್ರರೇ, ಅಬ್ಬರ ಆಡಂಬರದ ಮಂಟಪದಲ್ಲಿ ಕುರಿಗಳೇ ಎಲ್ಲ(ನಾವೆಲ್ಲ)” ಎಂಬ ಸಾಲುಗಳು ಒಂದು ರೀತಿಯ ಬಂಡಾಯವನ್ನು ವ್ಯಕ್ತಪಡಿಸುತ್ತವೆ. ಇಂದಿನ ರಾಜಕೀಯ ವಿದ್ಯಮಾನಗಳನ್ನು ಕಂಡು ಬೇಸತ್ತಿರುವ ಕವಿ ಮನಸ್ಸಿನ ನೋವನ್ನು, ಆಕ್ರೋಶವನ್ನು ಈ ಕವಿತೆ ವ್ಯಕ್ತಪಡಿಸುತ್ತೆ. ಈ ಕವಿತೆಗೆ ಅಳವಡಿಸಿರುವ ರೇಖಾ ಚಿತ್ರವನ್ನು ಗಮನಿಸುವುದಾದರೆ, ಸಂವಿಧಾನನ್ನು ಮುಚ್ಚಿಟ್ಟು ಅದರ ಮೇಲೆ ಕುರ್ಜಿಯನ್ನು ಹಾಕಲಾಗಿದೆ, ಜೊತೆಗೆ ಪ್ರಶ್ನಿಸುವ, ದಿಕ್ಕಾರ ಕೂಗುವ ಕೈಗೆ ಹಗ್ಗ ಬಿಗಿಯಲಾಗಿದೆ. ಈ ರೇಖಾಚಿತ್ರವೂ ಸಹ ಕವಿತೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿ ಪ್ರತಿನಿಧಿಸುತ್ತದೆ.

ಇಷ್ಟೇ ಅಲ್ಲದೇ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಹಲವು ಪದ್ಯಗಳು ಈ ಕೃತಿಯಲ್ಲಿವೆ. ಪ್ರಮುಖವಾಗಿ, ಬಾ ಬಾಲೆ ಶಾಲೆಗೆ, ಕೂಲಿಯಿಂದ ಶಾಲೆಗೆ, ಶಾಲೆಗಾಗಿ ನಾವು ನೀವು, ನಲಿ-ಕಲಿ ಮುಂತಾದ ಕವಿತೆಗಳು ಶಾಲಾ ಶಿಕ್ಷಣದ ಮಹತ್ವವನ್ನು ಸರಳವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ನಮ್ಮ ಮುಂದಿಡುತ್ತವೆ. ಉಳಿದಂತೆ, ಮಡದಿಯ ವೇದನೆ, ಸತಿ-ಪತಿ ಕರ್ತವ್ಯ, ಇಳೆಯ ಮಳೆ, ಬಡತನದ ಬವಣೆ, ಮೌನ, ವಿರಹ ವೇದನೆ ಮುಂತಾದ ಕವಿತೆಗಳು ಅರ್ಥಪೂರ್ಣವಾಗಿವೆ.

ಒಟ್ಟಿನಲ್ಲಿ, ʼನನ್ನೊಳಗಿನ ದನಿʼ ಒಂದು ಯಶಸ್ವಿ ಪ್ರಯೋಗವಾಗಿದೆ. ಈ ಕೃತಿ ಸಂಪೂರ್ಣ ಪರಿಪೂರ್ಣವೆಂದು  ಹೇಳಲಾಗದು. ಹಾಗೆ ನೋಡಿದರೆ ಯಾವುದೋ ಪರಿಪೂರ್ಣವಲ್ಲ. ಅಕ್ಷರ ದೋಷಗಳು ಈ ಕೃತಿಯಲ್ಲಿ ಹೆಚ್ಚಾಗಿದ್ದು, ಬರಹಗಾರರು, ಪ್ರಕಾಶಕರು ಇಂತಹ ವಿಚಾರಗಳನ್ನು ಮುಖ್ಯವಾಗಿ ಗಮನಿಸಲೇಬೇಕು. ಕೆಲವು ಕಡೆ ಪ್ರಾಸ ಸಹಜವಾಗಿದ್ದು, ಕವಿತೆಯ ಸೌಂದರ್ಯವನ್ನು ಹೆಚ್ಚಿಸಿದ್ದರೇಮ ಹಲವು ಕಡೆ ಪ್ರಾಸವನ್ನು ಬಲವಂತವಾಗಿ ತಂದಂತಿದೆ. ಪ್ರಾಸಕ್ಕಿಂತ ಪದ ಮತ್ತು ಪದಾರ್ಥಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಿತ್ತು. ಕೆಲವು ಕಡೆಗಳಲ್ಲಿ ಪ್ರಾಸ ಬರಲೇಬೇಕೆಂಬ ಹಠ ಪದ್ಯದ ಅರ್ಥವ್ಯಾಪ್ತಿಯನ್ನು ಅನಂತ ವಿಸ್ತರಣಾ ಸಾಧ್ಯತೆಗಳನ್ನು ಮಿತಿಗೊಳಿದಂತೆ ಭಾಸವಾಗುತ್ತದೆ.

ಕೃತಿಯ ಕೆಲವು ಕವನಗಳ ಪದ ಬಳಕೆಯಲ್ಲಿ ಮತ್ತಷ್ಟು ಎಚ್ಚರಿಕೆ ಬೇಕಿತ್ತು ಎನಿಸುತ್ತದೆ. ಉದಾ: ʼಸೃಷ್ಠಿಯ ಅಸಮಾನತೆʼ ಎಂಬ ಕವಿತೆಯಲ್ಲಿ ಅಸಮಾನತೆ ಎಂಬ ಪದ ಸೂಕ್ತವೇ? ಸೃಷ್ಠಿಯಲ್ಲಿ ಅಸಮಾನತೆಯಿಲ್ಲ ಬದಲಾಗಿ ಬಹುತ್ವವಿದೆ. ಇದೇ ರೀತಿ ʼವಿಮರ್ಶೆʼ ಎನ್ನುವ ಪದ್ಯದಲ್ಲಿ ವಿಮರ್ಶೆ ಎಂಬ ಪದವನ್ನು ಸ್ತ್ರೀ ಎದುರಿಸುವ ನಿಂದನೆಗಳು ಎಂಬ ಅರ್ಥದಲ್ಲಿ ಬಳಸಲಾಗಿದೆ. ಈ ಪ್ರಯೋಗವೂ ಅಷ್ಟು ಸೂಕ್ತ ಎನಿಸುವುದಿಲ್ಲ. ಇಂತಹ ಪದ ಪ್ರಯೋಗಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಿತ್ತು.

ಕೆಲವು ಪದ್ಯಗಳಲ್ಲಿ ವಾಕ್ಯ ರಚನೆ ಹಾಗೂ ವ್ಯಾಕರಣ ನಿಯಮಗಳನ್ನು ಗಮನಿಸಬೇಕಿತ್ತು. ಉದಾ: ʼಭಾರತದ ಪರಿಸ್ಥಿತಿʼ ಎಂಬ ಕವಿತೆಯಲ್ಲಿ “ಅವರು ಧರಿಸುವುದೆಲ್ಲಾ ಬರೀ ಜೀನ್ಸ್‌ ಪ್ಯಾಂಟನ್ನು” ಎಂದಿದೆ. ಇಲ್ಲಿ ಬಹುವಚನದಲ್ಲಿ ಪ್ರಾರಂಭವಾಗುವ ವಾಕ್ಯ ಕೊನೆಗೆ ಏಕವಚನದಲ್ಲಿ ಮುಕ್ತಾಯವಾಗುವುದು. ಇಂತಹ ಪ್ರಯೋಗಗಳು ಕೃತಿಯ ಹಲವು ಕಡೆ ಇದ್ದು ಇವನ್ನು ಬರಹಗಾರರು ಮುಖ್ಯವಾಗಿ ಗಮನಿಸಬೇಕು.

ಶ್ರೀಮತಿ ಅನಿತಾ ಕೆ. ಆರ್.‌

ಇದು ಲೇಖಕಿಯ ಚೊಚ್ಚಲ ಕೃತಿಯಾದರಿಂದ ಈ ಎಲ್ಲಾ ಸಣ್ಣ ಪುಟ್ಟ ದೋಷಗಳಿಗೆ ರಿಯಾಯಿತಿ ಇದ್ದೆ ಇರುತ್ತದಾದರೂ ಇವನೆಲ್ಲಾ ಗಮನಿಸಿ ಅನುಸರಿಸಿದಲ್ಲಿ ಮುಂದಿನ ಬರಹ ಬಹಳ ಅರ್ಥಪೂರ್ಣವಾಗುವುದು ಎಂಬ ಸದಾಶಯ ನಮ್ಮದು.

ಉಳಿದಂತೆ, ಈ ಕೃತಿಯಲ್ಲಿ ಒಬ್ಬ ಬಂಡಾಯದ ಮನಸ್ಥಿತಿಯ ವ್ಯಕ್ತಿ, ಒಬ್ಬ ತಾಯಿ, ಸ್ತ್ರೀಪರ, ಜೀವಪರ ಚಿಂತನೆಯ ಮನಸ್ಸು, ಪ್ರಗತಿಪರ ಆಲೋಚನೆಯ ಮನಸ್ಸು ಹಾಗೂ ಮೌಢ್ಯವಿರೋಧಿ ಮನಸ್ಥತಿ, ಸಮಕಾಲೀನ ಚಿಂತನೆಗಳು, ಸಾಮಾಜಿಕ ಸಂವೇದನೆ, ಆತ್ಮನಿವೇದನೆ, ಇತ್ಯಾದಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಇನ್ನಷ್ಟು ಆಳದ ಆಲೋಚನೆಗಳನ್ನು, ನೋಟ ಕ್ರಮಗಳನ್ನು, ದರ್ಶನವನ್ನು ಕಾಣಿಸುವ ಪ್ರಯತ್ನವನ್ನು ಮುಂದಿನ ಬರಹಗಳಲ್ಲಿ ಮಾಡಬಹುದು.

ಕೊನೆಯದಾಗಿ, ಇಂತಹ ಮಹತ್ವದ ಪ್ರಯತ್ನಕ್ಕಾಗಿ ಶ್ರೀಮತಿ ಅನಿತಾ ಕೆ. ಆರ್.‌ ಇವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸುತ್ತಾ, ಇಂತಹಾ ಹತ್ತು ಹಲವು ಮಹತ್ವದ ಕೃತಿಗಳು ಇವರಿಂದ ಬರಲಿ ಎಂದು ಆಶಿಸುವೆ. ಓದುಗರ ಮಹಾಶಯರು ಕೃತಿಯನ್ನು ಕೊಂಡು-ಓದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಬರಹಗಾರರನ್ನು ಪ್ರೋತ್ಸಾಹಿಸಬೇಕೆಂದು ಕೋರುವೆ. ನಮಸ್ಕಾರಗಳು.

ನನ್ನೊಳಗಿನ ದನಿ ಕೃತಿಗಾಗಿ ಸಂಪರ್ಕಿಸಿ: 7259896840

– ವರುಣ್‌ರಾಜ್‌ ಜಿ., ವಿಚಾರ ಮಂಟಪ ಬಳಗ.

8 Responses

  1. ಅಚ್ಚುಕಟ್ಟಾದ ಪುಸ್ತಕ ಪರಿಚಯ…ಅಭಿನಂದನೆಗಳು ಸಾರ್.

  2. ಶಂಕರಿ ಶರ್ಮ says:

    ವಿಮರ್ಶಾತ್ಮಕ ಪುಸ್ತಕ ಪರಿಚಯ ಚೆನ್ನಾಗಿದೆ.

  3. ನಯನ ಬಜಕೂಡ್ಲು says:

    ನೈಸ್

  4. Sudhama S says:

    ತುಂಬಾ ಚೆನ್ನಾಗಿದೆ

  5. ಶೋಭಾ ಕಾಂತ್ says:

    ನೈಸ್

  6. Hema says:

    ಪುಸ್ತಕ ಪರಿಚಯ ಸೊಗಸಾಗಿ ಮೂಡಿ ಬಂದಿದೆ.ಪ್ರತಿ ಕವನವನ್ನು ಓದಿ ವಿಶ್ಲೇಷಿಸಿರುವ ಪರಿ ಚೆನ್ನಾಗಿದೆ.

  7. Padma Anand says:

    ಪುಸ್ತಕ ಪರಿಚಯ ಸೊಗಸಾಗಿದೆ.

  8. Varun Raj G says:

    ಬರಹವನ್ನು ಓದಿ, ಅಭಿಪ್ರಾಯ ಹಂಚಿಕೊಂಡವರಿಗೆಲ್ಲ ಅನಂತ ಪ್ರಣಾಮಗಳು.

    – ವರುಣ್ ರಾಜ್ ಜಿ.
    #9448241450

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: