ಇವರು ನಮ್ಮ ಎನ್ ಆರ್ ಐಗಳು
ಬರ್ಮುಡಾ ನಿಕ್ಕರ್ ಧರಿಸಿ ಮೇಲೊಂದು ಟೀ ಶರ್ಟ್ ಹಾಕಿ. ಕಿವಿಗೊಂದು ಇಯರ್ ಫೋನ್ ಸಿಕ್ಕಿಸಿಕೊಂಡು ಜಾಗಿಂಗ್ ಮಾಡುವ ಹುಡುಗರು, ಬಿಗಿಯಾದ ಹರುಕಲು ಜೀನ್ಸ್ ಪ್ಯಾಂಟು, ಟೀ ಶರ್ಟ್ ಧರಿಸಿ, ಹರಡಿದ ಕೂದಲು, ಕಣ್ಣಿಗೊಂದು ಸುಲೋಚನ ಹಾಕಿ ಮೊಬೈಲ್ ನೋಡುತ್ತಾ ಹೊರಜಗತ್ತಿನ ಅರಿವೇ ಇಲ್ಲದೆ ತಿರುಗಾಡುವ ಹುಡುಗಿಯರು. ಇವರು ಯಾರು ಬಲ್ಲೆಯೇನು? ಇವರೇ ಎನ್ ಆರ್ ಐ ಗಳು, ಅಂದರೆ ನೆಲೆ ಇಲ್ಲದ ಭಾರತೀಯರು.
ಈಗಂತೂ ಎನ್ ಆರ್ ಐ ಗಳ ಗುಂಪು ದಿನೇ ದಿನೇ ದೊಡ್ಡದಾಗುತ್ತಿದೆ. ಮೊದಲಿಗೆ ಪ್ರತಿಭಾ ಪಲಾಯನ ಎಂಬ ಹಣೆ ಪಟ್ಟಿ ಹೊಂದಿದ್ದವರು ಈಗ ‘ಮಾನವ ಸಂಪನ್ಮೂಲ’ ಎಂದು ಪ್ರಖ್ಯಾತರಾಗುತ್ತಿದ್ದಾರೆ. ಇವರು ಉನ್ನತ ಶಿಕ್ಷಣ, ಉದ್ಯೋಗ ಅರಸಿ ಹೊರದೇಶಗಳಿಗೆ ಧಾವಿಸಿದವರು. ನಾಲ್ಕಾರು ವರ್ಷಗಳಲ್ಲಿ ಅಲ್ಲಿನ ಗ್ರೀನ್ ಕಾರ್ಡ್ ಮತ್ತು ಅಲ್ಲಿನ ಪ್ರಜೆಯ ಪಟ್ಟವನ್ನು ಅಲಂಕರಿಸಿ ಮಾತೃಭೂಮಿಯಲ್ಲಿ ಎನ್ ಆರ್ ಐ ಗಳಾಗಿ ನಿಲ್ಲುವರು. ಇವರ ಬೇರು ಒಳನಾಡಿನಲ್ಲಿ, ಆದರೆ ಮರದ ರೆಂಬೆ ಕೊಂಬೆಗಳು ಟಿಸಿಲು ಹೊಡೆದು ಹೂ ಅರಳಿ ಹಣ್ಣಾಗುವುದು ಹೊರನಾಡಿನಲ್ಲಿ. ಅಲ್ಲಿಯೂ ಸಲ್ಲದೆ, ಇಲ್ಲಿಯೂ ನಿಲ್ಲದೆ ಒಂದು ಬಗೆಯ ತ್ರಿಶಂಕು ಸ್ವರ್ಗ ಇವರದು ಅಲ್ಲವೇ? ಎರಡು ವರ್ಷಗಳಿಗೊಮ್ಮೆ ಇಳಿವಯಸ್ಸಿನ ತಂದೆ ತಾಯಿಯರನ್ನೂ ಬಂಧು ಬಾಂಧವರನ್ನೂ ತಪ್ಪದೇ ನೋಡಲು ಬರುವರು. ಇಂದ್ರಲೋಕದಿಂದಿಳಿದು ಬಂದವರಂತೆ ಇವರ ಹಾವಭಾವ ಮಾತುಕಥೆ ಎಲ್ಲಾ. ಪರಿಸರದ ಸ್ವಚ್ಛತೆಯ ಬಗ್ಗೆ, ಟ್ರಾಫಿಕ್ ನಿಯಮಗಳ ಬಗ್ಗೆ ಗಂಟೆಗಟ್ಟಲೇ ಭಾಷಣ ಬಿಗಿಯುವರು. ಇಲ್ಲಿನ ವಿದ್ಯಾಭ್ಯಾಸ ಪದ್ಧತಿಯ ಬಗ್ಗೆ ಕೊಂಕುನುಡಿಗಳನ್ನು ಮರೆಯದೆ ಆಡುತ್ತಲೇ ಪಾಶ್ಚಿಮಾತ್ಯರ ವಿದ್ಯಾಭ್ಯಾಸ ಪದ್ಧತಿಯನ್ನು ಹಾಡಿ ಹೊಗಳುವರು. ಪಾಶ್ಚಿಮಾತ್ಯ ಸಂಸ್ಕೃತಿಯ ಬಗ್ಗೆ ಇವರ ವಿಶೇಷ ಒಲವು. ನನಗೊಂದು ಸಂಶಯ ಮನದಲ್ಲಿ ಇಣುಕುತ್ತಿತ್ತು – ನಮ್ಮ ವಿದ್ಯಾಭ್ಯಾಸ ಪದ್ಧತಿ ಸರಿಯಿಲ್ಲ ಎಂದರೆ, ಸಾವಿರಾರು ಮಂದಿ ಭಾರತೀಯರು ವಿಶ್ವದೆಲ್ಲೆಡೆ ಹೇಗೆ ತಾನೆ ಉದ್ಯೋಗ ಪಡೆಯುತ್ತಿದ್ದಾರೆ? ಈ ಮಾತುಗಳನ್ನಾಡುವ ಎನ್ ಆರ್ ಐ ಗಳೂ ಇಲ್ಲಿಯೇ ಶಿಕ್ಷಣ ಪಡೆದವರಲ್ಲವೇ?
ಕ್ರಿಸ್‌ಮಸ್ ರಜೆಗೆಂದು ಇಂಗ್ಲೆಂಡಿನಿಂದ ಬಂದ ಮೊಮ್ಮಕ್ಕಳ ಜೊತೆ ಸೂಪರ್ ಮಾರ್ಕೆಟ್‌ಗೆ ಹೊರಟೆ. ಹಿರಿಯ ಮೊಮ್ಮಗಳಿಗೆ ಹಲ್ಲುಜ್ಜಲು ಪತಂಜಲಿಯವರ ದಂತಕಾಂತಿ ಟೂತ್‌ಪೇಸ್ಟೇ ಬೇಕು. ಅವಳು ಅಲ್ಲಿನ ಶೆಲ್ಫ್‌ನಲ್ಲಿ ಜೋಡಿಸಿದ್ದ ಎಲ್ಲಾ ದಂತಕಾಂತಿಗಳನ್ನೂ ಬಾಚಿ ತನ್ನ ಟ್ರಾಲಿಯಲ್ಲಿ ತುಂಬಿಸಿದಳು. ಕಿರಿಯವಳಿಗೆ ಕಚ್ಚಾಮ್ಯಾಂಗೋ ಚಾಕ್‌ಲೇಟ್ ಎಂದರೆ ಪಂಚಪ್ರಾಣ. ಅವಳೊಂದು ಕಚ್ಚಾಮ್ಯಾಂಗೋದ ದೊಡ್ಡ ಚೀಲವನ್ನೇ ತೆಗೆದುಕೊಂಡು ಟ್ರಾಲಿಯಲ್ಲಿ ಹಾಕಿದಳು. ಪಕ್ಕದ ಮನೆಯ ವಂದನಾ ಸಹ ಆಸ್ಟ್ರೇಲಿಯಾದಿಂದ ಬಂದಿದ್ದ ಮಗ ಸೊಸೆಯೊಂದಿಗೆ ಶಾಪಿಂಗ್‌ಗೆ ಬಂದಿದ್ದರು. ನಾವಿಬ್ಬರೂ ದೂರ ನಿಂತು ಎನ್ ಆರ್ ಐ ಗಳ ಮಾರ್ಕೆಟಿಂಗ್ ಭರಾಟೆಯನ್ನು ಲೇವಡಿ ಮಾಡುತ್ತಿದೆವು. ಎಮ್.ಟಿ.ಆರ್.ರವರ ರವೆ ಇಡ್ಲಿ ಮಿಕ್ಸ್, ರವೆ ದೋಸಾ ಮಿಕ್ಸ್, ಪುಳಿಯೋಗರೆ ಪುಡಿ, ಬಿಸಿಬೇಳೆಬಾತ್ ಪುಡಿ ಇತ್ಯಾದಿ ಮಸಾಲೆ ಪುಡಿಗಳನ್ನು ಆರಿಸಿಕೊಳ್ಳುತ್ತಿದ್ದರು. ಇದರಲ್ಲೇನು ವಿಶೇಷ ಅಂತೀರಾ? ಇವರು ಕೈಯಿಟ್ಟ ಕಡೆಯೆಲ್ಲಾ ಶೆಲ್ಫ್‌ಗಳು ಖಾಲಿ ಖಾಲಿ. ಬರಗಾಲ ಪೀಡಿತ ಪ್ರದೇಶದಿಂದ ಬಂದವರಂತೆ ಎಲ್ಲಾ ಮಸಾಲೆ ಪದಾರ್ಥಗಳನ್ನು ಬಾಚಿಕೊಳ್ಳುತ್ತಿದ್ದರು. ನಾನು ಅವರನ್ನು ಕೇಳಿದೆ – ‘ನಿಮ್ಮಲ್ಲಿ ಇಂಡಿಯನ್ ಅಂಗಡಿಗಳು ಇಲ್ವಾ?’ ಅವರು ಹೇಳಿದ್ದು – ‘ಇದೆ, ಆದ್ರೆ ಬೆಲೆ ನಾಲ್ಕು ಪಟ್ಟು, ಜೊತೆಗೆ ಹಳೆಯ ಸ್ಟಾಕ್. ಹಾಗಾಗಿ ನಾವು ಬಂದಾಗಲೆಲ್ಲಾ ಇಲ್ಲಿಂದಲೇ ಮಸಾಲೆ ಪುಡಿಗಳನ್ನು ಕೊಂಡೊಯ್ಯುತ್ತೇವೆ.’ ಅವರು ಕೊಂಡ ವಸ್ತುಗಳ ಬೆಲೆ ಹತ್ತು ಸಾವಿರ ರೂ ದಾಟಿತ್ತು. ಅವರ ಪಾಲಿಗೆ ಅದು ಕೇವಲ ನೂರಿಪ್ಪತ್ತು ಡಾಲರ್ ಮಾತ್ರ. ಅವರು ಸಂಪಾದಿಸುವ ಪೌಂಡ್ ಡಾಲರ್ ಗಳ ಮುಂದೆ ನಮ್ಮ ರೂಪಾಯಿ ಸೋತು ಸೊರಗಿತ್ತು. ಇನ್ನೂರು ವರ್ಷಗಳ ಕಾಲ ನಮ್ಮನ್ನಾಳಿದ ಬ್ರಿಟಿಷರು ತಮ್ಮ ಸಾರ್ವಭೌಮತ್ವವನ್ನು ಉಳಿಸಿಕೊಂಡಿರುವ ರೀತಿ ಅಚ್ಚರಿಯೆನಿಸಿತ್ತು. ಅವರ ಕರೆನ್ಸಿಯನ್ನು ಬಲ ಪಡಿಸಿಕೊಳ್ಳುವುದರ ಜೊತೆಜೊತೆಗೇ, ಅವರ ನಾಡು ನುಡಿಯ ಬಗ್ಗೆಯೂ ಎಲ್ಲರೂ ಉಘೇ ಉಘೇ ಎನ್ನುವ ಹಾಗೆ ಭ್ರಮೆ ಹುಟ್ಟಿಸಿರುವ ರೀತಿಯಂತೂ ಅದ್ಭುತ.
ಭಾರತೀಯರು ಎಲ್ಲೇ ಇರಲಿ, ಅವರ ಅಡುಗೆಮನೆ ಮಾತ್ರ ಅಪ್ಪಟ ಭಾರತದ್ದೇ ಆಗಿರುವುದು. ಮಸಾಲೆಗಳ ಪರಿಮಳ ಘಂ ಎಂದು ಮನಸ್ಸಿಗೆ ಮುದ ನೀಡುವುದು. ಇಡೀ ಭಾರತದೇಶವನ್ನೇ ತೆಕ್ಕೆಗೆ ತೆಗೆದುಕೊಂಡ ಬ್ರಿಟಿಷರು ನಮ್ಮ ಅಡುಗೆಮನೆಯೊಳಗೆ ಹೆಜ್ಜೆ ಇಡಲೂ ಸಾಧ್ಯವಾಗಲಿಲ್ಲ. ಇಡ್ಲಿ, ದೋಸೆ, ಪೊಂಗಲ್, ಪುಳಿಯೋಗರೆ ಚಪ್ಪರಿಸಿದವರಿಗೆ ಬ್ರೆಡ್, ಸ್ಯಾಂಡ್‌ವಿಚ್‌ಗೆ ಹೊಂದಿಕೊಳ್ಳಲಾಗಲಿಲ್ಲ. ಭಾರತೀಯ ಅಡುಗೆ ಮಾಡಲು ಬೇಕಾದ ಕುಕ್ಕರ್, ಮಿಕ್ಸಿ, ದೋಸೆ ಕಾವಲಿ, ಪಡ್ಡಿನ ಹೆಂಚು, ಚಪಾತಿ ಲಟ್ಟಿಸಲು ಮಣೆ, ಲತ್ತುಡಿ ಇತ್ಯಾದಿ ವಸ್ತುಗಳು ಸೂಟ್‌ಕೇಸುಗಳಲ್ಲಿ ಕುಳಿತು ಪಶ್ಚಿಮದತ್ತ ಸವಾರಿ ಹೊರಟುಬಿಡುವುವು.
ಮಗ ಬಂದ ಅಂತ, ನನ್ನ ಗೆಳತಿ ಸಾರಿನ ಪುಡಿ, ಮೆಣಸಿನ ಪುಡಿ, ಹುಳಿ ಪುಡಿ ಸಿದ್ಧ ಮಾಡಿಟ್ಟಿದ್ದಳು. ಮೊಮ್ಮಗಳಿಗೆ ಅರಳು ಸಂಡಿಗೆ ಇಷ್ಟ, ಸೊಸೆಗೆ ಬಾಳಕದ ಮೆಣಸು ಇಷ್ಟ, ಮಗನಿಗೆ ಉದ್ದಿನ ಹಪ್ಪಳ ಹೀಗೇ ಒಂದು ತಿಂಗಳಿನಿಂದ ಸಿದ್ಧತೆ ನಡೆಸಿದ್ದಳು. ನನ್ನ ತಂಗಿ ಮೈನಾ ಅಮೆರಿಕದಿಂದ ಬಂದಾಗಲೆಲ್ಲ ಹುಣಿಸೇಹಣ್ಣು, ಜೋಳದಹಿಟ್ಟು ಮರೆಯದೆ ತೆಗೆದುಕೊಂಡು ಹೋಗುತ್ತಿದ್ದಳು. ಅಲ್ಲಿ ಸಿಗುವ ಹುಣಿಸೇರಸ ಹಾಕಿ ಸಾಂಬಾರ್ ಮಾಡಿದರೆ ರುಚಿಯೇ ಇರುವುದಿಲ್ಲ ಎಂದು ಗೊಣಗುತ್ತಿದ್ದಳು. ಇನ್ನು ಜೋಳದ ಹಿಟ್ಟಂತೂ ಲಡ್ಡಾಗಿರುವುದು, ರೊಟ್ಟಿ ಮಾಡಲು ಹರಸಾಹಸ ಪಡಬೇಕಾಗುವುದು ಎನ್ನುವುದು ಅವಳ ಅನಿಸಿಕೆ.
ಜುಲೈ ತಿಂಗಳಿನಲ್ಲಿ, ಮಕ್ಕಳಿಗೆ ಬೇಸಿಗೆ ರಜೆಯಿತ್ತೆಂದು ಶಿವಮೊಗ್ಗಾಕ್ಕೆ ಬಂದಿದ್ದ ಮಗ ಡೆಂಟಿಸ್ಟನ್ನು, ಭೇಟಿ ಮಾಡಲು ಹೊರಟ. ಹಲ್ಲು ನೋವು, ಹುಳುಕಾದ ಭಾಗವನ್ನು ಕೊರೆಸಿ ಬೆಳ್ಳಿ ತುಂಬಿಸಬೇಕು ಎನ್ನುತ್ತಿದ್ದ. ಇಂಗ್ಲೆಂಡಿನಲ್ಲಿ ಎನ್.ಹೆಚ್.ಎಸ್. ಅಡಿಯಲ್ಲಿ (National Health Service) ಎಲ್ಲಾ ಬಗೆಯ ಚಿಕಿತ್ಸೆಗಳು ಉಚಿತವಾದರೂ, ಹಲ್ಲಿನ ಚಿಕಿತ್ಸೆ ಪಡೆಯಲು ವರ್ಷಗಟ್ಟಲೇ ಕಾಯಬೇಕಾಗುವುದಂತೆ, ಇಲ್ಲವಾದರೆ ಖಾಸಗಿ ಆಸ್ಪತ್ರೆಗೆ ಹೋಗಬೇಕು, ಅಲ್ಲಿ ದುಬಾರಿ ಶುಲ್ಕ ತೆರಬೇಕಾಗುವುದು ಎಂದ. ಇನ್ನು ತಲೆನೋವು ಎನ್ನುತ್ತಿದ್ದ ಮಗಳನ್ನು ಕಣ್ಣಿನ ವೈದ್ಯರ ಬಳಿ ಕರೆದೊಯ್ದು ಪರೀಕ್ಷೆ ಮಾಡಿಸಿ, ಕನ್ಣಡಕ ಕೊಡಿಸಿಕೊಂಡು ಬಂದ. ಕಣ್ಣಿನ ಪರೀಕ್ಷೆಗೂ ಸರತಿ ಸಾಲಿನಲ್ಲಿ ಕಾಯಬೇಕಂತೆ. ಹಾಗಾಗಿ ಹಲ್ಲಿನ ಮತ್ತು ಕಣ್ಣಿನ ಚಿಕಿತ್ಸೆಗೆ ನಮ್ಮೂರೇ ಸರಿ ಎಂದ. ಒಂದು ಕಾಲದಲ್ಲಿ ಗುಣಮಟ್ಟದ ಚಿಕಿತ್ಸೆಗೆ ಹೊರದೇಶಗಳಿಗೆ ಹೋಗುತ್ತಿದ್ದ ಹಣವಂತರ ತಂಡವಿತ್ತು, ಇಂದು ಭಾರತಕ್ಕೆ ಚಿಕಿತ್ಸೆಗೆ ಬರುವ ಹೊರದೇಶದವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದು ನಾವು ಹೆಮ್ಮೆ ಪಡುವ ವಿಷಯವಲ್ಲವೇ?
ಭಾರತೀಯ ಉಡುಗೆ ತೊಡುಗೆಯ ವಿಷಯವನ್ನು ಮರೆಯುವುದುಂಟೇ? ಸೊಸೆ ಬಂದಾಗಲೆಲ್ಲಾ ತನ್ನ ಇಬ್ಬರು ಹೆಣ್ಣ್ಣು ಮಕ್ಕಳಿಗೆ ಬಣ್ಣದ ಬಣ್ಣದ ಡ್ರೆಸ್‌ಗಳನ್ನು ಕೊಳ್ಳುವುದನ್ನು ಮರೆಯುತ್ತಿರಲಿಲ್ಲ. ಸದಾ ಇಲ್ಲಿನ ಉಡುಪುಗಳನ್ನು ವಾಷಿಂಗ್ ಮೆಷೀನ್‌ಗೆ ಹಾಕಲು ಬರಲ್ಲ, ಬಣ್ಣ ಬಿಡುತ್ತವೆ ಎನ್ನುತ್ತಲೇ ಕೊಳ್ಳುತ್ತಿದ್ದಳು. ಇಲ್ಲಿನ ಆಕರ್ಷಕ ಎಂಬ್ರಾಯಿಡರಿ ಇರುವ ಸಾಂಪ್ರದಾಯಿಕ ಉಡುಪುಗಳನ್ನು, ಹಬ್ಬದ ದಿನಗಳಲ್ಲಿ ಮಕ್ಕಳಿಗೆ ಹಾಕಿ ಸಂಭ್ರಮಿಸುತ್ತಿದ್ದರು. ಭಾರತೀಯರು ಹೊರದೇಶಗಳಲ್ಲಿಯೂ ದೇಗುಲಗಳನ್ನು ಕಟ್ಟಿಕೊಂಡು ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಟ್ಟಾಗಿ ಸಡಗರದಿಂದ ಹಬ್ಬಗಳನ್ನು ಆಚರಿಸುವ ಪರಿಪಾಠ ಇದೆ. ಇವರು ಸಂಕ್ರಾಂತಿ, ಯುಗಾದಿ, ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ ವಿಶೇಷವಾಗಿ ಆಚರಿಸುವ ಹಬ್ಬಗಳು. ಬಹಳಷ್ಟು ಎನ್.ಆರ್.ಐ. ಗಳು ತಮ್ಮ ಹೆಣ್ಣು ಮಕ್ಕಳಿಗೆ ಶಾಸ್ತ್ರೀಯ ಸಂಗೀತ, ಭರತನಾಟ್ಯ ಕಲಿಸುವರು. ಭರತನಾಟ್ಯಕ್ಕೆ ಬೇಕಾದ ಉಡುಗೆ ತೊಡುಗೆಯನ್ನು ತಾಯ್ನಾಡಿನಿಂದಲೇ ತರಿಸಿಕೊಳ್ಳುವರು. ಇನ್ನು ಹುಡುಗರಿಗೆ ತಪ್ಪದೇ ಕ್ರಿಕೆಟ್ ಆಟದ ತರಬೇತಿ ಕೊಡಿಸುವರು. ಭಾರತೀಯರ ಕ್ರಿಕೆಟ್ ಹುಚ್ಚು ಎಲ್ಲರಿಗೂ ತಿಳಿದಿರುವ ವಿಷಯವೇ ಅಲ್ಲವೇ?
ಬೇಸಿಗೆ ರಜೆಗೆಂದು ಬಂದ ಮೊಮ್ಮಗಳು ಕೂಗಿಕೊಂಡದ್ದು ಇನ್ನೂ ಮನದಲ್ಲಿ ಹಚ್ಚ ಹಸಿರಾಗಿದೆ. ಶೌಚಾಲಯಕ್ಕೆ ಹೋಗಿದ್ದವಳು – ‘ಅಜ್ಜೀ, ಇಲ್ಲಿ ಟಾಯ್ಲೆಟ್ ಪೇಪರ್ ಇಲ್ಲ’ ಎಂದು ಗಟ್ಟಿಯಾಗಿ ಕೂಗಿದಳು. ಅಡುಗೆ ಮನೆಯಲ್ಲಿ ಇದ್ದ ನಾನು, ಅಲ್ಲಿ ಜೆಟ್ ಇದೆ, ನೀರು ಇದೆ, ಉಪಯೋಗಿಸುವುದನ್ನು ಕಲಿ ಎಂದೆ.. ಗೊಣಗುತ್ತಾ ಹೊರಬಂದ ಮೊಮ್ಮಗಳು, ಅಂದೇ ಸಂಜೆ ಮಾಲ್‌ಗೆ ಹೋಗಿ ಟಾಯ್ಲೆಟ್ ಪೇಪರ್ ತಂದಳು. ಇವರಿಗೆ ಮುಖ ಒರೆಸಲು ವೆಟ್ ಟಿಶ್ಯೂ, ಕೈ ಒರೆಸಲು, ಅಡುಗೆ ಮನೆಯಲ್ಲಿ ಬಳಸಲು ಟಿಶ್ಯೂ ಬೇಕೇ ಬೇಕು. ಹೀಗೆ ಹೆಚ್ಚು ಕಸ ಉತ್ಪಾದಿಸುವವರು ಪಾಶ್ಚಿಮಾತ್ಯರೇ ಅಲ್ಲವೇ? ಎನ್.ಆರ್.ಐ.ಗಳ ಮತ್ತೊಬ್ಬ ಶತ್ರು ಸೊಳ್ಳೆಗಳು. ಅವರು ಮನೆಯಲ್ಲಿ ಹೆಜ್ಜೆಯಿಡುವ ಮೊದಲು ಕೊಳ್ಳುವ ವಸ್ತು ಎಂದರೆ ಸೊಳ್ಳೆ ಓಡಿಸುವ ‘ಓಡೊಮಸ್, ಕೈಗೆ ಸೊಳ್ಳೆ ನಿರೋಧಕ ಬೆಲ್ಟ್, ಹಲವು ಬಗೆಯ ಸ್ಪ್ರೇಗಳು ಇತ್ಯಾದಿ. ಸದಾ ಸ್ವಚ್ಛತೆ ಬಗ್ಗೆ ಮಾತಾಡುವ ಎನ್.ಆರ್.ಐ. ಗಳು, ಬೀದಿ ಬದಿಯ ಪಾನಿ ಪುರಿ, ಗೋಬಿ ಮಂಚೂರಿ ತಿನ್ನದೆ ಇರಲು ಸಾಧ್ಯವೇ? ಆದರೆ, ದೇಗುಲಗಳಲ್ಲಿ ಪುರೋಹಿತರು ತೀರ್ಥ ಪ್ರಸಾದ ನೀಡುವಾಗ, ಅದನ್ನು ಚೆಲ್ಲಿ ಬಿಡಲು ಮಕ್ಕಳಿಗೆ ಸಂಜ್ಞೆ ಮಾಡುವರು. ಮೊದಲನೆಯದಾಗಿ ನಮ್ಮ ಕೈ ತೊಳೆದಿಲ್ಲ, ಎರಡನೆಯದಾಗಿ ತೀರ್ಥ ಪ್ರಸಾದ ಸ್ವಚ್ಛವಾಗಿಲ್ಲ ಎಂಬ ಅಭಿಪ್ರಾಯ.
ಎನ್.ಆರ್.ಐ.ಗಳು ಮನಸ್ಥಿತಿ ತಾವು ತಾಯ್ನಾಡನ್ನು ಬಿಟ್ಟು ಹೋದ ಕಾಲಮಾನದ್ದೇ ಆಗಿ, ನಂತರದಲ್ಲಿ ಆಗಿರಬಹುದಾದ ಬದಲಾವಣೆಗಳು ಅವರ ಗಮನಕ್ಕೆ ಬರುವುದು ಅಪರೂಪ. ಅಮೆರಿಕಾದ ಬಂದ ತಂಗಿ ಮಾರ್ಕೆಟ್ಟಿಗೆ ಹೋದಾಗ ತರಕಾರಿ ಬೆಲೆ ಕೇಳಿ ದಂಗಾದಳು. ಇಲ್ಲಿನ ಯುವಜನಾಂಗದ ವೇಷ ಭೂಷಣಗಳನ್ನು ಕಂಡು ಟೀಕಿಸಿದಳು. ಅಮೆರಿಕಾದಲ್ಲಿ ಎನ್.ಆರ್.ಐ.ಗಳಿಗೆ ಒಂದು ಅಡ್ಡ ಹೆಸರಿಟ್ಟಿದ್ದಾರೆ – ಅದೇನು ಗೊತ್ತೆ? ‘ಕೋಕೋನಟ್’ ಯಾಕಿರಬಹುದು ಹೇಳಿ ನೋಡೋಣ? ಹೊರಗಿನ ಕವಚ ಭಾರತೀಯರ ಹಾಗೆ ಕಂದು ಬಣ್ಣ, ಒಳಗಿನ ನಡೆ ನುಡಿ ಪಾಶ್ಚಿಮಾತ್ಯರ ಹಾಗೆ ಬಿಳಿಯ ಬಣ್ಣ. ಹಾಗಿದ್ದಲ್ಲಿ ಈ ಎನ್.ಆರ್.ಐ.ಗಳು ತಮ್ಮ ನಾಡು ನುಡಿ, ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವುದನ್ನು ಕಲಿಸೋಣವೇ?
–ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ವಾಸ್ತವಿಕದ ಕೈಗನ್ನಡಿ ಉತ್ತಮ ನಿರೂಪಣೆ
ವಾಸ್ತವದಿಂದ ಕೂಡಿದ ಬರಹ.
ಹೌದು..ಇಂತಹ ಅನುಭವಗಳು ನನಗೂ ಆಗಿದೆ. ಚಂದದ ಲೇಖನ ಮೇಡಂ.
ಜಾಗತೀಕರಣದ ಪ್ರಭಾವದಿಂದಾಗಿ ಉಂಟಾಗುವ ತ್ರಿಶಂಕು ಸ್ಥಿತಿಯ ವಾಸ್ತವಿಕ ಚಿತ್ರಣದ ಸೊಗಸಾದ ನಿರೂಪಣೆ. ಒಳ್ಳೆಯ ಲೇಖನ.