ಪುಸ್ತಕ ಪರಿಚಯ: ಒಂಟಿ ಪಯಣಿಗರು (ಕಥಾ ಸಂಕಲನ), ಲೇಖಕರು: ಗೀತಾ ಕುಂದಾಪುರ
ಪುಸ್ತಕ :- ಒಂಟಿ ಪಯಣಿಗರು (ಕಥಾ ಸಂಕಲನ)
ಲೇಖಕರು :-ಗೀತಾ ಕುಂದಾಪುರ
ಪ್ರಕಾಶಕರು :- ನಿವೇದಿತಾ ಪ್ರಕಾಶನ
ಬರಹದ ಸಾರ್ಥಕತೆ ಯಾವಾಗ ಅನ್ನುವುದನ್ನು ಗೀತಾ ಅವರು ವಿವರಿಸಿದ ರೀತಿ ಬಹಳ ಚಂದ. ಇವತ್ತು ಮೊಬೈಲ್, ಕಂಪ್ಯೂಟರ್ ಗಳು ಬಂದ ನಂತರ ಬಹಳಷ್ಟು ಮಂದಿಯ ಓದುವ ಹವ್ಯಾಸವೇ ಮರೆಯಾಗಿದೆ ಅನ್ನುವುದು ಸಾಮಾನ್ಯವಾಗಿ ಕೇಳಿಬರುವ ಮಾತು ಹಾಗೂ ವಾಸ್ತವ ಕೂಡಾ. ಆದರೂ ಇವುಗಳ ನಡುವೆಯೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡ ಮಂದಿಯದ್ದೇ ಒಂದು ಗುಂಪಿದೆ ಅನ್ನುವುದು ನನ್ನ ಅಭಿಪ್ರಾಯ. ಇವತ್ತು ಜಗತ್ತು ಎಷ್ಟೇ ಮುಂದುವರೆದಿದ್ದರೂ ಪುಸ್ತಕವನ್ನು ಕೈಯಲ್ಲಿ ಹಿಡಿದು ಪುಟಗಳನ್ನು ಮಗುಚುತ್ತಾ ಓದಿನ ಸಂಭ್ರಮವನ್ನು ಆಸ್ವಾದಿಸುವುದು ಇದೆಯಲ್ಲ ಆ ಮಜವೇ ಬೇರೆ. ಅದೂ ಕೂಡ ಒಂದು ನಶೆ. ಆ ಓದಿನ ಸುಖ ಗಹನವಾಗಿ ಅದರಲ್ಲೇ ಮುಳುಗಿದವರಿಗಷ್ಟೇ ಗೊತ್ತು.
2020-21 ರ ಅವಧಿ ಜಗತ್ತಿನಲ್ಲಿ ತಂದ ಬದಲಾವಣೆಗೆ ಏನನ್ನಬೇಕೊ ಇನ್ನೂ ಅರ್ಥವಾಗುತ್ತಿಲ್ಲ. ಕರೋನ ಮಹಾಮಾರಿಯ ಹಿಡಿತದಲ್ಲಿ ತತ್ತರಗೊಂಡ ಪ್ರಪಂಚ ಈಗಷ್ಟೇ ಚೇತರಿಸಿಕೊಂಡು ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಈ ಅವಧಿಯಲ್ಲಿ ಜಗತ್ತು ಪಟ್ಟ ಪಾಡು, ತತ್ತರಗೊಂಡ ಪರಿ, ಏರುಪೇರು ಊಹೆಗೆ ನಿಲುಕದ್ದು. ಎಲ್ಲಾ ಸಂಬಂಧಗಳ ನಿಜವಾದ ಬಣ್ಣವನ್ನು ಬಯಲುಗೊಳಿಸಿದ ಏಕೈಕ ದುಸ್ತರ ಪರಿಸ್ಥಿತಿ ಈ ಕೊರೋನಾ ಕಾಲ. ಮನುಷ್ಯ ಮನುಷ್ಯನನ್ನೇ ಮಾನವೀಯತೆ ಮರೆತು ನಿಕೃಷ್ಟವಾಗಿ ಕಂಡ ಸಮಯ. ಅತಿ ಆಪ್ತ ಸಂಬಂಧಗಳು ಮುಖವಾಡ ಕಳಚಿ ತಮ್ಮ ನೈಜ ರೂಪ ತೋರಿಸಿದ, ಎಲ್ಲರನ್ನೂ ಹೈರಾಣುಗೊಳಿಸಿದ, ಜೊತೆಗೆ ಎಲ್ಲರಲ್ಲೂ ಒಂದು ಜಾಗೃತಿ,ಎಚ್ಚರಿಕೆಯನ್ನು ತಂದ ಸಮಯದ ಕುರಿತಾದ ಸುಂದರ ಕಥೆ.
ಮದುವೆ, ಸಂಸಾರ, ಕುಟುಂಬ ಎಲ್ಲವೂ ಸುಂದರ ಅನುಬಂಧ ಯಾವಾಗ ಎಂದರೆ ಪರಸ್ಪರರಲ್ಲಿ ನಂಬಿಕೆ, ತಾಳ್ಮೆ, ಪ್ರೀತಿ, ಹೊಂದಾಣಿಕೆ, ತ್ಯಾಗ, ಇದ್ದಾಗ ಮಾತ್ರ. ಇವೆಲ್ಲ ಇಲ್ಲದೇ ಇದ್ದಾಗ ನಾನು ಎಂಬ ಸ್ವಾರ್ಥ ಮನಸ್ಸನ್ನು ಆವರಿಸಿದಾಗ ಈ ಅನುಬಂಧ ಗಟ್ಟಿಯಾಗದೆ ಅರ್ಧದಲ್ಲೇ ಮುರಿಯುವ ಹಂತ ತಲುಪುತ್ತದೆ. ಬಾಂಧವ್ಯವನ್ನು ನಿಭಾಯಿಸುವಲ್ಲಿ ಗಂಡು, ಹೆಣ್ಣು ಇಬ್ಬರಲ್ಲೂ ವಿವೇಚನೆ ಇರಬೇಕು. ನಾನು ಮೇಲು, ಅವಳು/ಅವನು ಕೀಳು ಈ ಭಾವನೆಗಳಿಗೆ ಮನಸ್ಸಿನಲ್ಲಿ ಅವಕಾಶ ಇರಬಾರದು. ಪರಸ್ಪರರನ್ನು ಅರ್ಥ ಮಾಡಿಕೊಂಡು, ಪ್ರೋತ್ಸಾಹಿಸುತ್ತ ಸಾಗಬೇಕಾದ ಪಯಣ ಇದು. ಹಿಂದೊಂದು ಕಾಲದಲ್ಲಿ ಹೆಣ್ಣಿಗೆ ಆಯ್ಕೆಗಳೇ ಇರಲಿಲ್ಲ. ಆದರೆ ಇವತ್ತು ಹೆಣ್ಣು ಮಕ್ಕಳಿಗೆ ಎಲ್ಲಾ ಕ್ಷೇತ್ರಗಳಲ್ಲೂ ಇರುವ ಗೌರವ, ಅವಕಾಶ ಕೆಲವರಲ್ಲಿ ಅಹಂಕಾರವನ್ನು ಮೂಡಿಸುವಷ್ಟಿದೆ, ಸ್ವೇಚ್ಛೆಗೆ ಕಡಿವಾಣವೇ ಇಲ್ಲದ ಪರಿಸ್ಥಿತಿಯು ನಿರ್ಮಾಣವಾದುದಿದೆ. ಇವೆಲ್ಲದರ ಪರಿಣಾಮ ಹೆಚ್ಚುತ್ತಿರುವ ವಿಚ್ಛೇದನಗಳು, ಛಿದ್ರಗೊಳ್ಳುತ್ತಿರುವ ಸಂಸಾರ. ಆದರೆ ತಾಳ್ಮೆ, ಸಂಯಮ, ಹೊಂದಾಣಿಕೆ ಅನ್ನುವ ಸೂತ್ರಗಳನ್ನು ಅನುಸರಿಸುತ್ತಾ ಸಾಗಿದಲ್ಲಿ ಬದುಕೊಂದು ಸುಂದರ ಉಡುಗೊರೆಯಾಗಿ ನಮ್ಮ ಮುಂದಿರುತ್ತದೆ.
ಜನರ ಧಾರ್ಮಿಕ ಭಾವನೆಯೊಡನೆ ಆಟ ಆಡುವುದು ತಪ್ಪೇ ಆದರೆ ಒಂದು ಸುಳ್ಳಿನಿಂದ ಒಂದು ಜೀವ ಉಳಿಯುತ್ತದೆ, ಬೆಳೆಯುತ್ತದೆ, ಆ ಜೀವಕ್ಕೆ ಹೊಸ ಜೀವನ ಸಿಗುತ್ತದೆ ಎಂದಾದರೆ ಧಾರ್ಮಿಕ ವಿಚಾರದಲ್ಲಿಯೂ, ಭಕ್ತಿಯಲ್ಲಿಯೂ ಸುಳ್ಳು ಹೇಳುವುದರಲ್ಲಿ ತಪ್ಪೇನೂ ಇಲ್ಲ. ಕೆಲವು ಮನಸ್ಸುಗಳು ಎಷ್ಟು ಕಠೋರವಾಗಿರುತ್ತವೆ ಎಂದರೆ ಶಾಸ್ತ್ರ ಸಂಪ್ರದಾಯದ ಹೆಸರಲ್ಲಿ ಏನೂ ಮಾಡಲೂ ಹೇಸಲಾರವು ಹೀಗಿರುವಾಗ ಒಂದು ಜೀವವನ್ನು ಉಳಿಸುವ ಸಲುವಾಗಿ ಸಣ್ಣದೊಂದು ಸುಳ್ಳು ಹೇಳುವುದರಿಂದ ನಷ್ಟವೇನೂ ಇಲ್ಲ. ಅಷ್ಟಕ್ಕೂ ಭಕ್ತಿ, ಧರ್ಮಗಳು ಇರುವುದು ಮನುಕುಲದ ಉದ್ಧಾರಕ್ಕಾಗಿಯೇ ಹೊರತು ಧರ್ಮದ ಹೆಸರಿನಲ್ಲಿ ದಾಂಧಲೆ ನಡೆಸಲು ಅಲ್ಲ.
ಮನುಷ್ಯರ ನಿಜರೂಪವನ್ನು ಬಯಲುಗೊಳಿಸುವುದು ಬದುಕಲ್ಲಿ ಅವನಿಗೆ ಬರುವ ಕಷ್ಟದ ಪರಿಸ್ಥಿತಿಗಳು, ಅದು ಆರ್ಥಿಕ ವಾಗಿರಬಹುದು ಅಥವಾ ಆರೋಗ್ಯ ಸಂಬಂಧಿಯೂ ಆಗಿರಬಹುದು. ಆರ್ಥಿಕ ಸಂಕಷ್ಟವನ್ನು ಹೇಗಾದರೂ ನಿಭಾಯಿಸಬಹುದು. ಆದರೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಬಂದಾಗ ಇನ್ನೊಬ್ಬರ ಆಸರೆ, ಅವರು ತೋರುವ ಕಾಳಜಿಯ ಅಗತ್ಯ ಬಹಳವಿರುತ್ತದೆ. ಎಲ್ಲರೂ ಇಂತಹ ಸಂದರ್ಭದಲ್ಲಿ ಒಳ್ಳೆಯವರಾಗಿ ಇರುವುದಿಲ್ಲ. ಹಾಗೆಯೇ ಕಷ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಒಂದಾದ ಮನಸ್ಸುಗಳು ಮುಂದೆ ಎಂತಹುದೇ ಕಷ್ಟದ ಪರಿಸ್ಥಿತಿಯಲ್ಲೂ ದೂರವಾಗುವುದಿಲ್ಲ, ಪರಸ್ಪರರನ್ನು ಬಿಟ್ಟುಕೊಡುವುದಿಲ್ಲ.
ಆಧುನಿಕತೆ ಹಾಗೂ ಸಂಪ್ರದಾಯಗಳ ನಡುವಿನ ತಿಕ್ಕಾಟ ಇವತ್ತು ನಿನ್ನೆಯದಲ್ಲ. ಜಗತ್ತು ಬದಲಾವಣೆಯತ್ತ ಹೆಜ್ಜೆ ಹಾಕಲು ಶುರು ಮಾಡಿದಾಗಿನಿಂದಲೂ ನಡೆಯುತ್ತಿರುವಂಥದ್ದು. ಅಷ್ಟಕ್ಕೂ ಯಾವುದೇ ಒಂದು ಸಂಪ್ರದಾಯ, ಪದ್ಧತಿಯನ್ನು ಅನುಸರಿಸುವುದು ಅವರವರ ಅನುಕೂಲ, ಅವರವರ ಇಚ್ಛೆಗೆ ಬಿಟ್ಟಿದ್ದು. ಯಾವುದೇ ಸಂಪ್ರದಾಯವಿರಲಿ ಅದನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳುವುದು ಕೂಡ ಕಷ್ಟ, ಹಾಗೆಂದು ಎಲ್ಲಾ ಸುಳ್ಳೆಂದು ಅಲ್ಲಗಳೆಯುವುದೂ ಕಷ್ಟ. ಪ್ರತಿಯೊಂದಕ್ಕೂ ಕಾರಣ, ರೀತಿನೀತಿ ಎಲ್ಲವೂ ಇದೆ. ಸಂಪ್ರದಾಯದ ಹೆಸರಿನಲ್ಲಿ ಹಲವಾರು ಬಾರಿ ಮೂಢನಂಬಿಕೆಗಳ ಅನುಕರಣೆ ನಡೆಯುವುದೂ ಉಂಟು. ಬದಲಾಗುತ್ತಿರುವ ದಿನಗಳಲ್ಲಿ ಎಲ್ಲವನ್ನೂ
ಅನುಸರಿಸಬೇಕು ಎಂದರೂ ಸುಲಭದ ಮಾತಲ್ಲ. ಆಯಾಯ ಕಾಲ, ಜಾಗ, ಪರಿಸ್ಥಿತಿಗಳಿಗೆ ಅನುಗುಣವಾಗಿ ಬದಲಾವಣೆಯೂ ಸಹಜ.
ಆಟಿ ಕಳಂಜ, ಕನ್ಯಪ್ಪು ಇವೆಲ್ಲ ತುಳುನಾಡಿನ ವಿಶಿಷ್ಟ ಜಾನಪದ ಆಚರಣೆಗಳು. ಇವತ್ತು ಇವು ಅಳಿವಿನ ಅಂಚಿನಲ್ಲಿರುವುದು ದುಃಖಕರ ಸಂಗತಿ. ಆಟಿ ಕಳಂಜ ಒಂದು ಆಕರ್ಷಕ ಹಾಗೂ ಸುಂದರ ಪದ್ದತಿ, ಜಾನಪದ ಕಲೆ. ಹಳ್ಳಿ ಸೊಗಡಿನ ಸುತ್ತ ಹೆಣೆಯಲ್ಪಟ್ಟ ರೋಚಕ ಹಾಗೂ ಸುಂದರಕಥಾವಸ್ತುವನ್ನು ಒಳಗೊಂಡ ಕಥೆ “ಆಟಿ ಕಳಂಜ”.
“ತರವಾಡು” – ಈ ಹೆಸರು ಕೇಳುವಾಗಲೇ ಏನೋ ರಹಸ್ಯ ತುಂಬಿರುವಂತದ್ದು ಅನ್ನುವ ಭಾವ ಆವರಿಸುತ್ತದೆ. ಈ ಹೆಸರು ಕಿವಿಗೆ ಬಿದ್ದಾಗ ಹಳೆಯ ಕಾಲದ ಮನೆ, ಕತ್ತಲು ತುಂಬಿದ ಕೋಣೆಗಳು, ಹಳೆಯ ಕಾಲದ ವಸ್ತುಗಳು, ಚಿನ್ನಾಭರಣಗಳು, ಉಪ್ಪರಿಗೆ , ತಾಳೆಗರಿಗಳ ಕಲ್ಪನೆಯೆ ಮೊದಲು ಮೂಡುವುದು ಮನಸ್ಸಿನಲ್ಲಿ. ಆದರೂ ಇವೆಲ್ಲದರಲ್ಲಿ ಏನೋ ಒಂದು ಸೆಳೆತ.
‘ಒಂಟಿ ಪಯಣಿಗರು’ 18 ಕಥೆಗಳನ್ನು ಒಳಗೊಂಡ ಕಥಾ ಸಂಕಲನ. ಇಲ್ಲಿನ 18 ಕಥೆಗಳು ಒಂದರಿಂದ ಒಂದು ಆಕರ್ಷಕ. ಪ್ರತಿಯೊಂದು ಕಥೆಯಲ್ಲೂ ಓದುಗರ ಮನಸ್ಸನ್ನು ಹಿಡಿದಿಡುವ ಸೆಳೆತವಿದೆ. ಇಲ್ಲಿನ ಕಥೆಗಳಲ್ಲಿ ಹೊಸ, ಹಳೆಯ ಎರಡೂ ರೀತಿಯ ಕಾಲ, ಸಂಪ್ರದಾಯ, ಜೀವನಶೈಲಿಯ ಉಲ್ಲೇಖವನ್ನು ಕಾಣಬಹುದು. ಓದಿ ಮುಗಿಸಿದ ಮೇಲೂ ಕೆಲವು ಕಥೆಗಳು ಸುಮ್ಮನೆ ಕುಳಿತಿರುವಾಗ ಯೋಚನೆಗೆ ಹಚ್ಚುತ್ತವೆ- ಇದು ನನಗಾದ ಅನುಭವ. ಇದು ಗತಕಾಲದ ಕಡೆಗಿನ ಆಕರ್ಷಣೆಯಿಂದಾಗಿಯೂ
ಇರಬಹುದು.
ಅಪ್ರಮೇಯ- ಕಥಾಸಂಕಲನ, ದ್ವೀಪಗಳತ್ತ ಯಾನ ಆಸ್ಟ್ರೇಲಿಯಾ ಮತ್ತು ಜಪಾನ್ ಪ್ರವಾಸ ಕಥನ, ಚಿತ್ತದಲ್ಲಿ ಮೂಡಿದ ಚಿತ್ತಾರ -ಕಥಾ ಸಂಕಲನ, ಕಡಲ್ಗಳ್ಳರ ಕಾಲುದಾರಿ ಪ್ರವಾಸ ಕಥನ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗೀತಾ ಅವರ ಇನ್ನೂ ಕೆಲವು ಕೊಡುಗೆಗಳು. ಸುಂದರ ಕಥೆಗಳನ್ನು ಹೆಣೆಯುವ, ಆಕರ್ಷಕ ಬರಹದ ಶೈಲಿಯನ್ನು ಹೊಂದಿರುವ ಗೀತಾ ಅವರಿಂದ ಇನ್ನಷ್ಟು ಕೃತಿಗಳು ಹೊರ
ಬರಲಿ ಅನ್ನುವ ಶುಭಾಶಯಗಳೊಂದಿಗೆ…..
– ನಯನ ಬಜಕೂಡ್ಲು
ಪುಸ್ತಕ ಪರಿಚಯ ಚೆನ್ನಾಗಿ ಮೂಡಿಬಂದಿದೆ.ಧನ್ಯವಾದಗಳು ನಯನ ಮೇಡಂ.
ಒಂಟಿ ಪಯಣಿಗರು ಕಥಾ ಸಂಕಲನದ ಪುಸ್ತಕ ಪರಿಚಯ ಬಹಳ ಚೆನ್ನಾಗಿ ಮೂಡಿಬಂದಿದೆ ..ಧನ್ಯವಾದಗಳು ಮೇಡಂ.
ಪುಸ್ತಕಾವಲೋಕನ ಸೊಗಸಾಗಿ ಮೂಡಿಬಂದಿದೆ.ಅಭಿನಂದನೆಗಳು.