ಪ್ರವಾಸ

ಜೂನ್ ನಲ್ಲಿ ಜೂಲೇ : ಹನಿ 4

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಹೋಟೆಲ್ ಗ್ಯಾಲಕ್ಸಿ’ ಲೇಹ್

ಅಲ್ಲಲ್ಲಿ ನಿಂತು ಸಾವರಿಸಿಕೊಳ್ಳುತ್ತಾ, ಬಹುಶ: ಒಂದು ಕಿಲೋಮೀಟರ್ ನಷ್ಟು ದೂರದಲ್ಲಿದ್ದ   ಹೋಟೆಲ್ ಗ್ಯಾಲಕ್ಸಿ ತಲಪುವಷ್ಟರಲ್ಲಿ ಸುಸ್ತಾಗಿದ್ದೆವು. ನಮ್ಮಿಂದ ನಂತರ ರಸ್ತೆಯ ತಿರುವಿಗೆ  ಬಂದ ಹೋಟೆಲ್ ನ ಸಿಬ್ಬಂದಿಯವರು ನಮ್ಮ ಲಗೇಜನ್ನು ಹೊತ್ತು ಆಗಲೇ ಅಲ್ಲಿಗೆ ತಲಪಿದ್ದರು. ಹೋಟೆಲ್ ಗ್ಯಾಲಕ್ಸಿ ತಲಪಿದಾದ ಹಾಯ್ ಎನಿಸುವಂತಹ ವಾತಾವರಣ.  ಸುಂದರವಾದ ಹೂದೋಟದಲ್ಲಿ ಗುಲಾಬಿ ಹೂಗಳು ನಳನಳಿಸುತ್ತಿದ್ದುವು. ನಾವು ಅಲ್ಲಿಗೆ ತಲಪುತಿದ್ದಂತೆ, ಹೋಟೆಲ್ ನ ಮಾಲೀಕರಾದ  ‘ಗುಲಾಂ  ಕದೀರ್ ಗಿರಿ’ ಮತ್ತು ಅವರ ಪತ್ನಿ ‘ ಝೋರಾ’ ಅವರು ನಮ್ಮನ್ನು ಬಹಳ ಆತ್ಮೀಯತೆಯಿಂದ, ನಗುಮುಖದಿಂದ ಸ್ವಾಗತಿಸಿದರು. ಬಹಳ ಪರಿಚಯದ ಆಪ್ತರು ಮನೆಗೆ ಬಂದಂತೆ ಉಪಚರಿಸಿ ಕರೆದೊಯ್ದು,   ‘ಲಗೇಜನ್ನು ಇಟ್ಟು ಬನ್ನಿ, ತಿಂಡಿ ತಿನ್ನುತ್ತಾ ಮಾತನಾಡೋಣ’ ಎಂದು ರೂಮ್ ತೋರಿಸಿದರು. ವಿಶಾಲವಾದ ರೂಮ್ ಚೆನ್ನಾಗಿತ್ತು. ಲೇಹ್ ನಂತಹ ಜಾಗದಲ್ಲಿ ಇಷ್ಟು ಅನುಕೂಲವಾದ, ಸುಸಜ್ಜಿತವಾದ ರೂಮ್ ಸಿಗಬಹುದೆಂದು ನಾವು ಊಹೆ ಮಾಡಿರಲಿಲ್ಲ.

ನಾವು ಫ್ರೆಶ್ ಆಗಿ ಬರುವಷ್ಟರಲ್ಲಿ ಬ್ರೆಡ್ ಟೋಸ್ಟ್, ಬೆಣ್ಣೆ, ಆಪ್ರಿಕಾಟ್ ಹಣ್ಣಿನ ಜಾಮ್ , ಬಿಸ್ಕತ್  ಮತ್ತು  ಚಹಾವನ್ನು ಸಿದ್ಧಪಡಿಸಿ ಹಾಲ್ ಗೆ ತಂದರು. ಅವರ ಹಾಲ್ ಚೆನ್ನಾಗಿತ್ತು. ಸೋಫಾ ಇದ್ದರೂ, ಸ್ಥಳೀಯರು ಸಾಮಾನ್ಯವಾಗಿ    ತಗ್ಗಿನ ಮಣೆಯಂತಿರುವ ಹಲಗೆಯ ಮೇಲೆ ಹಾಸಿದ ಹಾಸಿಗೆಯ ಮೇಲೆ ಕೂರುತ್ತಾರೆ.  ಇದಕ್ಕೆ ಹೊಂದುವಂತೆ 2 ಅಡಿ ಎತ್ತರದ ಟೀಪಾಯ್ ಇರುತ್ತದೆ.. ಪಕ್ಕದ ಶೆಲ್ಫಿನಲ್ಲಿ  ಕೆಲವು ಪುಸ್ತಕಗಳನ್ನು ಲೈಬ್ರೆರಿಯಂತೆ ಅಚ್ಚುಕಟ್ಟಾಗಿ ಜೋಡಿಸಿದ್ದರು. ಟಿ.ವಿಯಲ್ಲಿ ಯಾವುದೋ ಕಾರ್ಯಕ್ರಮ ಬರುತ್ತಿತ್ತು.   ಒಟ್ಟಿನಲ್ಲಿ, ಟಿಬೆಟಿಯನ್ ಸಂಸ್ಕೃತಿಯ ಛಾಪನ್ನು ಹೊಂದಿದ್ದ ಅವರ ದಿವಾನಖಾನೆಯ ಅಂದಚೆಂದ ನೋಡುತ್ತಾ ಇದ್ದೆವು. 

ಹೋಟೆಲ್ ಮಾಲಿಕ ಎಲ್ಲರನ್ನೂ ಮಾತನಾಡಿಸುತ್ತಾ,  ‘ಆಪ್ ಬ್ರೇಕ್ ಫಾಸ್ಟ್ ಕರೇಂ, ಬಾದ್  ಮೆ ರೆಸ್ಟ್ ಕೀಜಿಯೆ, ಗಾರ್ಡನ್ ಮೆ ಬೈಟಿಯೆ… ಆಜ್ ರೆಸ್ಟ್ ಕೀಜಿಯೆ…ಆಪ್ ಕೊ ಇಸ್ ಮೊಸಮ್ ಕೊ ಅಜಸ್ಟ್ ಹೋನೇ ಕೋ  ದೋ ದಿನ್ ಚಾಹಿಯೆ, ಜ್ಯಾದಾ ಗರಂ ಪಾನೀ ಪೀಲಿಯೇ, ಧೀರೇ ಸೆ ಚಲೇ, ಆರಾಮ್ ರಹೇ, ಆಪ್ ಕೋ ಚಾಯ್,  ಪಾನಿ ಚಾಹಿಯೇ ತೋ ಬೋಲಿಯೇ …” ಇತ್ಯಾದಿ  ಉಪಚರಿಸುತ್ತಿದ್ದರು. ತಿಂಡಿ ತಿಂದು, ವಿಶ್ರಮಿಸಿದೆವು. ಹೂದೋಟದಲ್ಲಿ ಅಡ್ಡಾಡಿ  ಅಲ್ಲಿದ್ದ ಕುರ್ಚಿಗಳಲ್ಲಿ ಕುಳಿತು ಎಳೆಬಿಸಿಲಿಗೆ ಮೈಯೊಡ್ಡಿದೆವು. ನಿಜಕ್ಕೂ ಅಲ್ಲಿನ ಪರಿಸರ ಮತ್ತು ಅವರ ಆತಿಥ್ಯ ಸೊಗಸಾಗಿತ್ತು. 

ನಮ್ಮ ಪ್ಯಾಕೇಜ್ ಪ್ರಕಾರ ಬೆಳಗ್ಗಿನ ಉಪಾಹಾರ ಮತ್ತು ರಾತ್ರಿಯ ಊಟವನ್ನು ಒದಗಿಸುವುದು  ಹೋಟೆಲ್ ನವರ ಜವಾಬ್ದಾರಿ. ಮಧ್ಯಾಹ್ನದ ಊಟಕ್ಕೆ ನಮ್ಮದೇ ವ್ಯವಸ್ಥೆ ಆಗಬೇಕಿತ್ತು. ಹೇಗೂ ತಿರುಗಾಟದಲ್ಲಿರುತ್ತಿದ್ದುದರಿಂದ ದಾರಿಯಲ್ಲಿ ಸಿಕ್ಕಿದ ಹೋಟೆಲ್/ಢಾಬಾದಲ್ಲಿ  ಏನಾದರೂ ತಿನ್ನುತ್ತಿದ್ದೆವು. ಆದರೆ ಮೊದಲ ದಿನ ವಿಶ್ರಾಂತಿ. ತಿರುಗಾಟವಿಲ್ಲದಿದ್ದುದರಿಂದ ಸ್ವಲ್ಪ ಸಮಯ ಗ್ಯಾಲಕ್ಸಿ ಹೋಟೆಲ್ ನಲ್ಲಿಯೇ ವಿರಮಿಸಿ ಮಧ್ಯಾಹ್ನದ ಸಮಯ  ಅಕ್ಕಪಕ್ಕ ಸುತ್ತಾಡಿ, ಹಾಗೆಯೇ ಏನಾದರೂ ತಿಂದು ಬರೋಣ ಎಂದು ಹೊರಟೆವು.

ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ :  http://surahonne.com/?p=36747

ಮುಂದುವರಿಯುವುದು..
-ಹೇಮಮಾಲಾ, ಮೈಸೂರು

6 Comments on “ಜೂನ್ ನಲ್ಲಿ ಜೂಲೇ : ಹನಿ 4

  1. ಸೊಗಸಾಗಿ ಓದಿಸಿಕೊಂಡು ಹೋಗುವ ಲಡಾಖ್ ಪ್ರವಾಸ ಕಥನವು ಸರಳ ಸುಂದರವಾಗಿದ್ದು ಆತ್ಮೀಯವೆನಿಸುತ್ತದೆ.

  2. ಬರಹವನ್ನು ಓದಿ, ಮೆಚ್ಚಿ ಪ್ರೋತ್ಸಾಹಿಸುವ ತಮಗೆಲ್ಲರಿಗೂ ಧನ್ಯವಾದಗಳು

Leave a Reply to ಗಾಯತ್ರಿ ದೇವಿ Cancel reply

 Click this button or press Ctrl+G to toggle between Kannada and English

Your email address will not be published. Required fields are marked *