ಅಳಿವಿನಂಚಿನಲ್ಲಿರುವ ಪ್ರಾಣಿಗಳು-ಭಾಗ 1

Share Button


ಪ್ರಕೃತಿಯಲ್ಲಿನ ಜೀವವೈವಿಧ್ಯವೇ ಒಂದು ಸೋಜಿಗ. ಲಕ್ಷಾಂತರ ಪ್ರಬೇಧಗಳ ಪ್ರಾಣಿ, ಪಕ್ಷಿ, ಕೀಟ, ಸರೀಸೃಪ, ಗಿಡಮರ, ಸೂಕ್ಷ್ಮಜೀವಿಗಳು ಮತ್ತು ಇನ್ನೂ ಸಾವಿರಾರು ಬಗೆಯ ಜೀವಿಗಳಿಗೆ ಪ್ರಕೃತಿಯೇ ಮಡಿಲು. ಭೂಮಿ, ಸಾಗರ, ಕಾಡು, ಮರುಭೂಮಿ, ಪರ್ವತ, ಬೆಟ್ಟಗುಡ್ಡಗಳು, ಗುಹೆ, ಈ ರೀತಿ ಎಲ್ಲ ಕಡೆಯೂ ಇವುಗಳು ವಾಸವಾಗಿದೆ. ಪ್ರಕೃತಿಯ ಸಮತೋಲನ ಇವೆಲ್ಲವೂ ಸಮತೋಲನದಲ್ಲಿರುವುದರ ಮೇಲೆ ಅವಲಂಬಿತವಾಗಿವೆ. ಏರುಪೇರುಗಳಾದಲ್ಲಿ ಅದರ ನೇರ ಪರಿಣಾಮ ಪ್ರಕೃತಿ ಮತ್ತು ಅಲ್ಲಿರುವ ಜೀವಿಗಳ ಮೇಲೆ ಉಂಟಾಗುತ್ತದೆ. ಆದ್ದರಿಂದ ಜೀವಿ ಪರಿಸರವನ್ನು ಕಾಪಾಡಿಕೊಳ್ಳಬೇಕು. ತನ್ನ ಬುದ್ಧಿಶಕ್ತಿಯಿಂದಲೇ ಗುರುತಿಸಿಕೊಂಡಿರುವ ಮಾನವ ಇದನ್ನು ನೋಡಿಕೊಳ್ಳಬೇಕಾದದ್ದು ಅವನ ಕರ್ತವ್ಯ. ಆದರೆ ದುರದೃಷ್ಟವಶಾತ್ ಇದು ಆಗುತ್ತಿಲ್ಲ. ಪ್ರಕೃತಿಯಲ್ಲಿನ ಸಮತೋಲನ ಹಾಳಾಗುವುದಕ್ಕೆ ಅನೇಕ ಕಾರಣಗಳಿವೆ. ಜಾಗತಿಕ ತಾಪಮಾನದ ಏರಿಕೆಯಿಂದ ವಾತಾವರಣದಲ್ಲಿ ಏರುಪೇರಾಗುತ್ತಿದೆ. ಕಾಡುಗಳ ನಾಶ ಮತ್ತು ಛಿದ್ರೀಕರಣವಾಗಿದೆ. ಇದು ಪ್ರಾಣಿಗಳ ಓಡಾಟ, ಹಂಚಿಕೆ ಮತ್ತು ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತಿದೆ. ಅತಿಯಾದ ಉದ್ಯಮೀಕರಣ ಮತ್ತು ಮಾಲಿನ್ಯವೂ ಇದಕ್ಕೆ ಕಾರಣ. ಇದೆಲ್ಲವೂ ಮಾನವನ ದುರಾಸೆಯಿಂದಲೇ ಆಗುತ್ತಿವೆ ಎಂದರೂ ತಪ್ಪಾಗಲಾರದು. ಆಹಾರಕ್ಕೆ ಮತ್ತು ವಿಹಾರಕ್ಕೆ ಪ್ರಾಣಿಪಕ್ಷಿಗಳ ಬೇಟೆ ನಡೆಯುತ್ತಿದೆ. ವನ್ಯಜೀವಿಗಳ ಮಾಂಸಕ್ಕೆ, ದೇಹದ ಭಾಗಗಳಿಗೆ, ಅವುಗಳನ್ನು ಔಷಧಿಯಲ್ಲಿ ಉಪಯೋಗ ಮಾಡುವುದಕ್ಕೆ ಮತ್ತು ಚರ್ಮಕ್ಕೆ ಹೀಗೆ ಕಳ್ಳಬೇಟೆ ನಡೆಯುತ್ತದೆ. ಇವೆಲ್ಲಾ ಕಾರಣಗಳಿಂದ ನೂರಾರು ಪ್ರಬೇಧಗಳು ಜಗತ್ತಿನಾದ್ಯಂತ ಅಳಿವಿನಂಚಿಗೆ ಬಂದಿವೆ.

ಐ.ಯು.ಸಿ.ಎನ್. ಎನ್ನುವುದು ಇಂಟರ್‌ನ್ಯಷನಲ್ ಯೂನಿಯನ್ ಫಾರ್ ಕನ್ಸ್‌ರ್ವೇಷನ್ ಆಫ್ ನೇಚರ್. ಇದೊಂದು ಅಂತಾರಾಷ್ಟ್ರೀಯ ಸಂಸ್ಥೆ. ಪ್ರಕೃತಿಯ ರಕ್ಷಣೆ ಮತ್ತು ಸುಸ್ಥಿರವಾಗಿ ಪ್ರಕೃತಿಯ ಮೂಲಗಳನ್ನು ಉಪಯೋಗಿಸುವುದನ್ನು ಮಾಡುವುದೇ ಈ ಸಂಸ್ಥೆಯ ಉದ್ದೇಶ. ಐಯುಸಿ‌ಎನ್ ಸ್ವಿಟ್ಜ್ಸ್‌ರ್ಲಾಂಡಿನ ಗ್ಲಾಂಡ್‌ನಲ್ಲಿದೆ. ಇದರಲ್ಲಿ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಜೀವಿಗಳನ್ನೂ ವಿಭಾಗಿಸಲಾಗಿದೆ. ಯಾವುದೇ ಒಂದು ಪ್ರಾಣಿ ಪ್ರಕೃತಿಯಲ್ಲಿ ತೊಂದರೆ ಇಲ್ಲದೇ ಇದೆಯೇ ಅಥವಾ ವಿವಿಧ ಸ್ತರಗಳಲ್ಲಿ ಅದಕ್ಕೆ ಬದುಕಲು ಕಷ್ಟವಿದೆಯೇ ಎಂದು ಅಧ್ಯಯನ ಮಾಡಿದ್ದಾರೆ. ಇದರಲ್ಲಿ ಅಳಿವಿನಂಚಿನಲ್ಲಿರುವ ಜೀವಿಗಳದ್ದೂ ಒಂದು ಭಾಗ. ಇವುಗಳನ್ನು ಇ‌ಎನ್ (ಇ‌ಓ) ಅಥವಾ ಎಂಡೇನ್ಜರ್‍ಡ್ ಎಂದು ಗುರುತಿಸಲಾಗುತ್ತದೆ. ಅಂದರೆ ಇವುಗಳು ಪ್ರಕೃತಿಯಲ್ಲಿ ನಿರ್ನಾಮವಾಗಿ ಹೋಗುವ ಸಂಭವ ಬಹಳ ಜಾಸ್ತಿ ಎಂದರ್ಥ. ಈ ರೀತಿ 37,400 ಪ್ರಬೇಧಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಸ್ತನಿಗಳು 26% ಉಭಯ ಜೀವಿಗಳು 45%, ಪಕ್ಷಿಗಳು 14%, ಶಾರ್ಕ್ ಮೀನುಗಳು 36% ಮತ್ತು ಸೂಜಿಪತ್ರ ಮರಗಳು 34% ಹೀಗೆ ಇನ್ನೂ ಬಹಳ ಅಳಿವಿನಂಚಿನಲ್ಲಿರುವ ಜೀವಿಗಳ ‘ಕೆಂಪುಪಟ್ಟಿ’ ತಯಾರಿಸಲಾಗುತ್ತದೆ. ಭಾರತದಲ್ಲಿ 1212 ಪ್ರಾಣಿಗಳು ಕೆಂಪು ಪಟ್ಟಿಯಲ್ಲಿವೆ. ಇದರಲ್ಲಿ 148 ಅಳಿವಿನಂಚಿನಲ್ಲಿವೆ. ಇವುಗಳಲ್ಲಿ ಸ್ತನಿಗಳು – 69, ಸರೀಸೃಪಗಳು – 23, ಉಭಯಜೀವಿಗಳು – 56. ಆದ್ದರಿಂದ ಬುದ್ಧಿಜೀವಿಯಾದ ಮನುಷ್ಯ ಇವುಗಳು ನಿರ್ನಾಮವಾಗದಂತೆ ನೋಡಿಕೊಳ್ಳುವುದು ಅವನ ಜವಾಬ್ದಾರಿ. ಇಲ್ಲದಿದ್ದಲ್ಲಿ ಅವನ ಉಳಿವಿಗೂ ಸಂಚಕಾರ ಬರುತ್ತದೆ. ನಮ್ಮಂತೆಯೇ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ ಎನ್ನುವುದನ್ನು ನಾವು ಮರೆಯಬಾರದು. ಮೇ ತಿಂಗಳ ಮೂರನೆಯ ಶುಕ್ರವಾರವನ್ನು ವಿಶ್ವದಾದ್ಯಂತ ರಾಷ್ಟ್ರೀಯ ಅಳಿವಿನಂಚಿನಲ್ಲಿರುವ ಪ್ರಬೇಧಗಳ ದಿನ (National Endangered Species Day) ಎಂದು ಆಚರಿಸಲಾಗುತ್ತದೆ.

1.ಸಿಂಗಳೀಕ :
ಸಿಂಗಳೀಕ ಕಪ್ಪುಬಣ್ಣದ ಕೋತಿ, ಇದನ್ನು ಸಿಂಹಬಾಲದ ಕೋತಿ ಎಂದು ಕರೆಯುತ್ತಾರೆ. ಲಯನ್ ಟೈಲ್ಡ್ ಮಕಾಕ್ ಎಂದು ಆಂಗ್ಲಭಾಷೆಯಲ್ಲಿ ಇದರ ಹೆಸರು ಶಾಸ್ತ್ರೀಯ ಹೆಸರು ಮಕಾಕ ಸಿಲೆನಸ್ (Macaca Silenus) ಬಿಳಿಯ ಕೇಸರ ಮುಖದ ಸುತ್ತ ಮತ್ತು ಕೆನ್ನೆಗಳಿಂದ ಇಳಿಬಿದ್ದು ಗಲ್ಲದವರೆಗೂ ಇದೆ. ಮುಖ ಕಪ್ಪಾಗಿದ್ದು ಕೂದಲಿಲ್ಲ. ಇದರ ತೂಕ 2-10 ಕೆ.ಜಿ. ಇರುತ್ತದೆ. ಬಾಲದ ಉದ್ದ 25 ಸೆಂ.ಮೀ. ತುದಿಯಲ್ಲಿ ಒಂದು ಕಪ್ಪು ಕೂದಲಿನ ಗೊಂಡೆ ಇರುತ್ತದೆ. ಇದು ಸಿಂಹದ ಬಾಲವನ್ನು ಹೋಲುವುದರಿಂದ ಸಿಂಹ ಬಾಲದ ಕೋತಿ ಎಂದು ಕರೆಯುತ್ತಾರೆ. ಗಂಡಿನಲ್ಲಿ ಈ ಗೊಂಡೆ ಸ್ವಲ್ಪ ದೊಡ್ಡದಾಗಿರುತ್ತದೆ. ಕಾಡಿನಲ್ಲಿ ಸಿಂಗಳೀಕ ಸಾಧಾರಣವಾಗಿ ಇಪ್ಪತ್ತು ವರ್ಷ ಬದುಕುತ್ತದೆ. ಬಂಧನದಲ್ಲಿ 30 ವರ್ಷ ಬದುಕಬಹುದು.

ಮಳೆ ಕಾಡಿನ ವಾಸಿ ಈ ಕೋತಿ. ನಮ್ಮ ದೇಶದ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಇದರ ವಾಸ. ಬೆಳಗಿನ ಹೊತ್ತು ಓಡಾಡುತ್ತದೆ, ಅಂದರೆ ದಿನಚರಿ. ತೇವಭರಿತ, ನಿತ್ಯಹರಿದ್ವರ್ಣದ ಕಾಡುಗಳಲ್ಲಿರುವ ಮರಗಳ ಮೇಲಿನ ಭಾಗಗಳಲ್ಲಿ ವಾಸಿಸುತ್ತದೆ. ಮಾನವನನ್ನು ತಪ್ಪಿಸಿಕೊಂಡು ಓಡಾಡುತ್ತದೆ. ಸಿಂಗಳೀಕ ಗುಂಪುಗಳಲ್ಲಿ ಕಾಣಬರುತ್ತದೆ. ಒಂದು ಗುಂಪಿನಲ್ಲಿ 12-20 ಸದಸ್ಯರಿರಬಹುದು. ಕೆಲವು ಗಂಡು ಮತ್ತು ಅನೇಕ ಹೆಣ್ಣುಗಳಿರುತ್ತವೆ. ಪ್ರತಿ ಗುಂಪೂ ತನ್ನ ಸರಹದ್ದನ್ನು ಗುರುತಿಸಿಕೊಂಡು ಕಾಯುತ್ತದೆ. ಇನ್ನೊಂದು ಗುಂಪು ಹತ್ತಿರ ಬಂದರೆ ಜೋರಾಗಿ ಕೂಗುತ್ತದೆ. ಇಲ್ಲದಿದ್ದರೆ ಜಗಳ ಕಾಯುತ್ತದೆ. ಸಿಂಗಳೀಕದ ಆಹಾರ, ಹಣ್ಣುಗಳು, ಎಲೆಗಳು, ಮೊಗ್ಗುಗಳು ಕೀಟಗಳು ಮತ್ತು ಚಿಕ್ಕಪ್ರಾಣಿಗಳು. ಕೆಲ ಸಮಯ ಪರಿಸರದಲ್ಲಿ ವ್ಯತ್ಯಾಸವಾದರೆ ಬೀಜಗಳು, ಚಿಗುರು, ಮರದ ಒಳಭಾಗ, ಹೂವು ಮತ್ತು ಇತರ ಮರದ ಭಾಗಗಳನ್ನೂ ತಿನ್ನುತ್ತವೆ.

ಸಿಂಗಳೀಕ


ಕಳವಳಕಾರಿಯಾದ ಅಂಶವೆಂದರೆ, ಸಿಂಗಳೀಕದ ಗುಂಪುಗಳು ವಿಪರೀತವಾಗಿ ಬೇರ್ಪಟ್ಟಿವೆ. ಸಿಂಗಳೀಕ ಕಂಡುಬರುವುದು ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಹರಿದ್ವರ್ಣ ಕಾಡುಗಳಲ್ಲಿ. ಈ ಕಾಡುಗಳು ಈಗ ಛಿದ್ರಗೊಂಡಿವೆ. ಆದ್ದರಿಂದ ಸಿಂಗಳೀಕದ ವ್ಯಾಪ್ತಿಯು ತೀವ್ರವಾಗಿ ಪ್ರತ್ಯೇಕಗೊಂಡು, ತುಂಡುಗಳಾಗಿದೆ. ಇದಕ್ಕೆ ವ್ಯವಸಾಯ, ಚಹ ಮತ್ತು ಕಾಫಿ ತೋಟಗಳು, ತೇಗ ಮತ್ತು ಸಿಂಕೋನ ಮರದ ತೋಟಗಳು ಕಾರಣ. ಜೊತೆಗೆ ನೀರಿನ ಜಲಾಶಯಗಳು, ವಿದ್ಯುಚ್ಛಕ್ತಿ ಮತ್ತು ಮಾನವ ವಸತಿಗಳೂ ಕಾರಣ. ವಿಚಿತ್ರವೆಂದರೆ ಈ ಕೋತಿಗಳು ತೋಟಗಳ ಮುಖಾಂತರ ಓಡಾಡುವುದೇ ಇಲ್ಲ. ಅಲ್ಲಿ ಇರುವುದೂ ಇಲ್ಲ. ಇದರಿಂದ ಗುಂಪುಗಳು ಬೇರೆಯಾಗಿವೆ. ಇದರಿಂದ ಅವುಗಳ ಸಂಖ್ಯೆ ಇಳಿಮುಖವಾಗಿದೆ. ಅಳಿವಿನಂಚಿನಲ್ಲಿರುವ ಪ್ರಬೇಧ ಎಂದು ಗುರುತಿಸಲಾಗಿದೆ. ಇದಕ್ಕೆ ಸಿಂಗಳೀಕದ ಪರಿಸರದ ನಾಶವೂ ಮುಖ್ಯ ಕಾರಣ.
ಕೇರಳದ ಸೈಲೆಂಟ್ (ವ್ಯಾಲಿ) ಕಣಿವೆಯಲ್ಲಿ 1993-96 ರಲ್ಲಿ 14 ಗುಂಪುಗಳಿದ್ದುವು. ಕೇರಳದ‌ಇನ್ನೂ ಕೆಲವು ಅರಣ್ಯಗಳಲ್ಲಿ ಈ ಕೋತಿಯನ್ನು ಕಾಣಬಹುದು. ಕರ್ನಾಟಕದ ಶಿರಸಿ ಹೊನ್ನಾವರದಲ್ಲಿ 32 ಗುಂಪುಗಳನ್ನು ಗುರುತಿಸಲಾಗಿದೆ. ತಮಿಳುನಾಡಿನ ಥೇನಿಯಲ್ಲಿ 250 ಕೋತಿಗಳನ್ನು 2007ರಲ್ಲಿ ಗುರುತಿಸಲಾಗಿತ್ತು. ಕೆಲವು ಪ್ರಾಣಿ ಸಂಗ್ರಹಾಲಯಗಳಲ್ಲಿ ಸಿಂಗಳೀಕದ ಸಂತಾನಾಭಿವೃದ್ಧಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಳಿವಿನಂಚಿನಿಂದ ಸಿಂಗಳೀಕವು ಹೊರಬರಬಹುದು. ಏಕೆಂದರೆ ಇದು ವಾಸಿಸುವ ರಾಜ್ಯಗಳು ಈ ನಿಟ್ಟಿನಲ್ಲಿ ಶ್ರಮವಹಿಸುತ್ತಿವೆ.

2. ಚಿಪ್ಪುಹಂದಿ :
ಭರತ ಖಂಡದಲ್ಲಿ ಕಾಣಸಿಗುವ ವಿಚಿತ್ರ ದೇಹದ ಸ್ತನಿ. ಆಂಗ್ಲಭಾಷೆಯಲ್ಲಿ ಪ್ಯಾಂಗೊಲಿನ್ ಎಂದು ಕರೆಯುತ್ತಾರೆ. ಮೈಯನ್ನು ಆವರಿಸಿಕೊಂಡಿರುವ ದೊಡ್ಡ ಚಿಪ್ಪುಗಳಿವೆ. ತನ್ನ ರಕ್ಷಣೆಗೆ ಗಾಬರಿಯಾದಾಗ ಚೆಂಡಿನಂತೆ ಸುತ್ತಿಕೊಂಡು ಉರುಕುತ್ತದೆ. ಬಿಡಿಸುವುದು ಬಹಳ ಕಷ್ಟ. ಮಲಯ ಭಾಷೆಯಲ್ಲಿ ಪೆಂಗ-ಗೋಲಿಂಗ ಎಂದರೆ ಗುಂಡಾಗಿ ಉರುಳು ಎಂದರ್ಥ. ಭಾರತದಲ್ಲಿ ಕಾಣಸಿಗುವ ಚಿಪ್ಪುಹಂದಿಯ ಹೆಸರು ಮೇನಿಸ್ ಕ್ರಾಸಿಕಾಡೇಟ. (Manis Crassicaudata).


ಚಿಪ್ಪುಹಂದಿ

ಚಿಪ್ಪುಹಂದಿ ನಿಶಾಚರಿ. ಬೆಳಗಿನ ಹೊತ್ತು ಬಿಲಗಳಲ್ಲಿ ವಿಶ್ರಮಿಸುತ್ತದೆ. ಒಂಟಿಯಾಗಿರುತ್ತವೆ. ನಾಚಿಕೆ ಸ್ವಭಾವದ್ದು, ನಿಧಾನವಾಗಿ ಚಲಿಸುತ್ತದೆ. ಇದರ ತೂಕ 16 ಕೆ.ಜಿ.ಯವರೆಗೂ ಇರಬಹುದು. ಮೂತಿ ಉದ್ದವಾಗಿದ್ದು ಗೆದ್ದಲು, ಇರುವೆ ಹುತ್ತಗಳ ಒಳಗೆ ಹಾಕಲು ಅನುಕೂಲವಾಗಿದೆ. ಚಿಕ್ಕ ಕಣ್ಣುಗಳಿವೆ. ಮೂಗಿಗೆ ಒಂದು ಮೆತ್ತೆಯಿದೆ. ಕೈಕಾಲುಗಳು ಬಲವಾಗಿವೆ. ಬಾಯಲ್ಲಿ ಹಲ್ಲುಗಳಿಲ್ಲ, ಚಿಪ್ಪುಹಂದಿಗೆ ಬಹಳ ಉದ್ದವಾದ ಉಗುರುಗಳಿವೆ. ಇದರ ಆಹಾರ ಇರುವೆ ಮತ್ತು ಗೆದ್ದಲು ಹುಳುಗಳು. ಅದರಲ್ಲಿಯೂ ಇವುಗಳ ಮೊಟ್ಟೆಗಳು. ಚಿಪ್ಪುಹಂದಿಯ ಚಿಪ್ಪು ಅದರ ಜೀವಕ್ಕೇ ಮುಳುವಾಗಿದೆ. ಇದರಲ್ಲಿ ವಿಶೇಷ ಗುಣಗಳು ಇವೆಯೆಂದು ಬೇಟೆಯಾಡುತ್ತಾರೆ. ಚಿಪ್ಪು ಮತ್ತು ದೇಹದ ಇತರ ಭಾಗಗಳನ್ನು ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸುತ್ತಾರೆ. ಚೀನಿಯರಿಂದ ಭಾರಿ ಬೇಡಿಕೆಯಿದೆ. ಅವ್ಯಾಹತ ಬೇಟೆಯಿಂದ ಚಿಪ್ಪುಹಂದಿ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ಗುರುತಿಸಲಾಗಿದೆ. ಚಿಪ್ಪುಹಂದಿ ಕಾಣಬರುವ ಕಾಡು, ಹುಲ್ಲುಗಾವಲು ಒಣಪ್ರದೇಶಗಳೂ ಕಾಣೆಯಾಗುತ್ತಿರುವುದು ಇದರ ವಿನಾಶಕ್ಕೆ ಮತ್ತೊಂದು ಕಾರಣ. ಮನುಷ್ಯನೇ ಇದರ ಶತ್ರು. ಪ್ರಕೃತಿಯಲ್ಲಿ ಹುಲಿ ಚಿಪ್ಪುಹಂದಿಯ ಶತ್ರು. ಈ ಅಮಾಯಕ ಪ್ರಾಣಿಯನ್ನು ಉಳಿಸಬೇಕಿದೆ.

ಡಾ.ಎಸ್.ಸುಧಾ, ಮೈಸೂರು

5 Responses

  1. sudha says:

    ನಮಸ್ಕಾರ. ಧನ್ಯವಾದಗಳು ಹೇಮಮಾಲರವರಿಗೆ. ಅಕ್ಟೋಬರ್ ಮೊದಲ ವಾರ ವನ್ಯಜೀವಿ ಸಪ್ತಾಹದ ಆಚರಣೆ ಇರುತ್ತದೆ. ಆದ್ದರಿಂದ ನೀವು ಈ ಲೇಖನವನ್ನು ಪ್ರಕಟಿಸಿದ್ದಕ್ಕಾಗಿ ವಂದನೆಗಳು.

  2. ಉತ್ತಮ..
    ಮಾಹಿತಿ…ಯನ್ನು… ವಿವರವಾಗಿ ಕೊಟ್ಟ… ಸುಧಾ..ಮೇಡಂ ಗೆ..ಧನ್ಯವಾದಗಳು.

  3. ಕೆ. ರಮೇಶ್ says:

    ಉತ್ತಮ ಸಮೋಯೋಚಿತ ಬರಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: