ಪುಸ್ತಕ ಪರಿಚಯ: ಕೂಡಲ ಸಂಗಮ, ಲೇ:- ಡಾ.ಲಕ್ಷ್ಮಣ ಕೌoಟೆ

Share Button

ಪುಸ್ತಕ :- ಕೂಡಲ ಸಂಗಮ
ಲೇಖಕರು :- ಡಾ. ಲಕ್ಷ್ಮಣ ಕೌoಟೆ
ಪ್ರಕಾಶಕರು:- ಬಸವ ಧರ್ಮ ಪ್ರಸಾರ ಸಂಸ್ಥೆ
ಪುಸ್ತಕದ ಬೆಲೆ:- 600/-

ಇತಿಹಾಸ, ಐತಿಹಾಸಿಕ ವಿಚಾರಗಳೆಂದರೆ ಮೊದಲಿನಿಂದಲೂ ಅದೇನೋ ಆಕರ್ಷಣೆ ಕುತೂಹಲ. ಇತಿಹಾಸದಲ್ಲಿ ಬರುವ ಇಸವಿಗಳನ್ನು ನೆನಪಿನಲ್ಲಿ ಇಡಲಾಗಿದ್ದರೂ ಏನು ನಡೆದಿತ್ತು ಎನ್ನುವುದನ್ನು ತಿಳಿದುಕೊಳ್ಳುವ ಆಸಕ್ತಿ ಬಹಳ ಇತ್ತು. ಈ ಕುತೂಹಲವೇ ಪ್ರಸಿದ್ಧ ಲೇಖಕ ಡಾ.ಲಕ್ಷ್ಮಣಕೌಂಟೆ ಅವರು ಬರೆದಿರುವ ಐತಿಹಾಸಿಕ  ಕಾದಂಬರಿಗಳತ್ತ ಸೆಳೆಯಿತು. ಡಾ. ಲಕ್ಷ್ಮಣಕೌಂಟೆ ಅವರು ಪರಿಚಯವಾದದ್ದು ಮುಖ ಪುಸ್ತಕದ ಮೂಲಕ. ಇವರ ಪುಸ್ತಕಗಳ ಬಗ್ಗೆ ಗೊತ್ತಾಗಿ ಎಲ್ಲಿ ಸಿಗುತ್ತವೆ ಎಂದು ವಿಚಾರಿಸಿದಾಗ ಇವರೇ ಸ್ವತಃ ಕಳುಹಿಸಿಕೊಡುವ ಶ್ರಮವಹಿಸಿದ್ದರು. ಇದಕ್ಕೆ ನಾನು ಅವರಿಗೆ ಚಿರಋಣಿ.

ಬಸವಣ್ಣನಂತಹ ಮಹಾ ಶರಣರ ಹಾಗೂ ಶರಣ ಪರಂಪರೆಯ ಇತಿಹಾಸವುಳ್ಳ ಮಹಾಮಣಿಹ ಹಾಗೂ ಮಹಾಯಾಣ ಕಾದಂಬರಿಗಳನ್ನು ಒಟ್ಟು ಸೇರಿಸಿ ಆದ ಪುಸ್ತಕ ”ಕೂಡಲ ಸಂಗಮ”.

ದೊರೆ ಬಿಜ್ಜಳ ದೇವನ ಮಂತ್ರಿ ಬಲ ದೇವರಸನ ಮಗಳು ಗಂಗಾಂಬಿಕೆ. ಶಸ್ತ್ರ ವಿದ್ಯೆಗಳನ್ನು ಕಲಿಯುವತ್ತ ಆಸಕ್ತಿ ಹೊಂದಿದ ಧೀರೆ. ಬಹಳ ಚಿಕ್ಕ ವಯಸ್ಸಿನಲ್ಲೇ ಗಂಗಾಂಬಿಕೆಯ ಹೆತ್ತಬ್ಬೆ ತೀರಿ ಹೋದಾಗ ಮಗಳ ಉತ್ತಮ ಭವಿಷ್ಯದ ಸಲುವಾಗಿ ಮತ್ತೆ ಪುನಃ ಮರು ಮದುವೆಯಾಗದೇ ಮಗಳ ಯೋಗಕ್ಷೇಮಕ್ಕೆ ಒತ್ತು ಕೊಟ್ಟ ರೀತಿ ಅಪ್ಪನಾಗಿ ಅವನನ್ನು ಎತ್ತರದ ಸ್ಥಾನದಲ್ಲಿರಿಸುತ್ತದೆ. ಹೌದು… ಅಪ್ಪ ಎಂಬ ಜೀವ ಯಾವತ್ತೂ ಶ್ರೇಷ್ಠ. ಬಹಿರಂಗಪಡಿಸದಿದ್ದರೂ ಅವನ ಅಂತರಂಗ ಮಗಳೆಂಬ ಅಥವಾ ಮಕ್ಕಳ ಪ್ರತಿ ಅವನ ಅಂತಃಕರಣ ಬಹಳ ಹಿರಿದು. ಇದನ್ನು ಇಲ್ಲಿ ಲೇಖಕರು ಬಹಳ ಸೊಗಸಾಗಿ ವರ್ಣಿಸಿದ್ದಾರೆ.

ಕಥೆ ಮುಂದೆ ಸಾಗಿದಂತೆ ಗಂಗಾಂಬಿಕೆ ನೀಲಾಂಬಿಕೆಯರ ಆಪ್ತ ಗೆಳೆತನ ಒಡನಾಟಗಳ ಪರಿಚಯ. ಇವತ್ತಿಗೂ ಈ ಪ್ರಪಂಚದಲ್ಲಿ ಬಸವಣ್ಣರ ವಚನಗಳು ಬಹಳ ಪ್ರಸಿದ್ಧ ಹಾಗೂ ಶ್ರೇಷ್ಠ. ಮನುಷ್ಯ ಮನುಷ್ಯರ ನಡುವೆ ತೋರುತ್ತಿದ್ದ ಭೇದ ಭಾವ ಎಷ್ಟು ತಪ್ಪು ಎಂಬುದನ್ನು ಬಸವಣ್ಣ ತನ್ನ ವಚನಗಳಲ್ಲಿ ಬಹಳ ಸೊಗಸಾಗಿ ಹಾಗೂ ಸರಳವಾಗಿ ವಿವರಿಸಿದ್ದಾರೆ. ಇಲ್ಲಿ ನಮಗೆ ಬಸವಣ್ಣನ ವಚನಗಳು ಹೇಗೆ ಹುಟ್ಟಿಕೊಂಡವು ಹಾಗೂ ಅವುಗಳ ರಚನೆಗೆ ಪ್ರೇರಣೆಯಾದ ವಿಚಾರಗಳು ಯಾವುವು ಅನ್ನುವುದರ ಸವಿಸ್ತಾರ ವಿವರ ದೊರೆಯುತ್ತದೆ.

ಜೈನ ಧರ್ಮ ಹಾಗೂ ಶೈವ ಧರ್ಮಗಳ ನಡುವೆ ಸಾಕಷ್ಟು ಸಾಮ್ಯವಿದ್ದರೂ ಬಸವಣ್ಣ ಜೈನ ಧರ್ಮವನ್ನು ಬಿಟ್ಟು ಶೈವ ಧರ್ಮವನ್ನೇ ಯಾಕೆ ಒಪ್ಪಿಕೊಂಡರು ಅನ್ನುವುದಕ್ಕೆ ಅವರು ನೀಡಿದ ಕಾರಣ ನಿಜಕ್ಕೂ ಮನಸೂರೆಗೊಂಡಿತು. ಬಸವಣ್ಣನಂತಹ ಮಹಾನ್ ವ್ಯಕ್ತಿತ್ವದ ಮೇಲೆ ಪೂಜ್ಯಭಾವನೆಯನ್ನು ಮೂಡಿಸಿತು.

ಸಾಮಾನ್ಯವಾಗಿ ಹೆಣ್ಣಿನ ಸೌಂದರ್ಯವನ್ನು ಹೂವಿನ ಚೆಲುವು, ಪ್ರಕೃತಿ, ನಿಸರ್ಗದ ಚೆಲುವಿನೊoದಿಗೆ  ಹೋಲಿಸಲಾಗುತ್ತದೆ. ಆದರೆ ಇಲ್ಲಿ ಲೇಖಕರು ಗಂಗಾಂಬಿಕೆ ಚೆಲುವನ್ನು ವರ್ಣಿಸಿದ ಪರಿ ಹೆಣ್ಣಿನ ಪ್ರತಿ ಅವರ ಮನದಲ್ಲಿರುವ ಪೂಜ್ಯ ಭಾವವನ್ನು ಬಹಿರಂಗಪಡಿಸುತ್ತದೆ.

ಕತೆ ಸಾಗಿದಂತೆ ಬಸವಣ್ಣನ  ವ್ಯಕ್ತಿತ್ವದ ಪರಿಚಯ. ಎಲ್ಲ ಯುವಕರಂತೆ ಅವನು ಚೆಲ್ಲು ಚೆಲ್ಲಾಗಿ ಇರದೆ ಗಂಭೀರವಾಗಿರುತ್ತಾನೆ ಅನ್ನೋದನ್ನು ಇಲ್ಲಿ ಕಾಣಬಹುದು. ಅವನ ಹವ್ಯಾಸ, ಅಭ್ಯಾಸ, ಜ್ಞಾನದ ಸ್ಥೂಲ ಪರಿಚಯ ಅವನ ಪ್ರತಿ ಗಂಗಾಂಬಿಕೆ ಮಾತ್ರವಲ್ಲ ಓದುಗರ ಮನದಲ್ಲೂ ಗೌರವ ಭಾವವನ್ನು ಮೂಡಿಸುತ್ತದೆ.

ಅಕ್ಕನ ಮಗ ಚೆನ್ನ ಬಸವಣ್ಣನಿಗೆ ಬಸವಣ್ಣ ಗುರುವಾಗಿರುತ್ತಾನೆ. ಅವನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಬಸವಣ್ಣ ಹೊತ್ತಿರುತ್ತಾನೆ. ಚನ್ನಬಸವನ ಜೊತೆ ಬಸವಣ್ಣ ಹಲವಾರು ವಿಚಾರಗಳನ್ನು ಆವಾಗವಾಗ ಚರ್ಚಿಸುತ್ತಾನೆ. ದೇವರು ಹಾಗೂ ಧರ್ಮಗಳ ಸೃಷ್ಟಿಗೆ ಪ್ರಕೃತಿಯೇ ಪ್ರೇರಣೆ ಅನ್ನುವುದು ಬಸವಣ್ಣನ ವಾದ. ಬೇರೆ ಬೇರೆ ದಾರ್ಶನಿಕರು, ಗಣ್ಯವ್ಯಕ್ತಿಗಳು ಎಷ್ಟೇ ಜ್ಞಾನವಂತರಾಗಿದ್ದರೂ ಕೂಡ ಹೆಣ್ಣನ್ನು ಎಲ್ಲಾದರೂ ಒಂದು ಕಡೆ ಜರೆಯದೇ ಇದ್ದದ್ದು ಇಲ್ಲ ಅನ್ನುವುದು ಬಸವನಿಗೆ ನೋವನ್ನು ಉಂಟು ಮಾಡುವ ಸಂಗತಿ. ಇದನ್ನು ಅವನು ಚೆನ್ನಬಸವನೊಡನೆ ಹೇಳಿಕೊಳ್ಳುತ್ತಾನೆ ಹಾಗೂ ನಾವು ಇದರ ಕುರಿತಾಗಿ ವಿಚಾರ ಮಾಡಬೇಕು, ವಿವೇಕಯುತವಾಗಿ ಹೆಣ್ಣಿನ ವಿಚಾರದಲ್ಲಿ ನಡೆದುಕೊಳ್ಳಬೇಕು ಎನ್ನುವ ಬಸವಣ್ಣನ ಅಭಿಪ್ರಾಯದಿಂದ ಹೆಣ್ಣಿನ ಪ್ರತಿ ಅವನಿಗಿರುವ ಆದರ, ಗೌರವ ಎಷ್ಟು ಎಂಬುದು ಅರ್ಥವಾಗುತ್ತದೆ.

ಬಸವಣ್ಣನ ವಚನಗಳು ಇಂದಿಗೂ ಪ್ರಸಿದ್ಧ. ಇಲ್ಲಿ ಅವರ ಆಲೋಚನೆಗಳು, ಮನುಜರ ನಡುವಿನ ಮೇಲು ಕೀಳಿನ ಭಾವವನ್ನು ಹೋಗಲಾಡಿಸಿ ಸಮಾನತೆಯನ್ನು ತರುವ ಯೋಜನೆಗಳನ್ನು ರೂಪಿಸುವಲ್ಲಿ ನಡೆಸುವ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಬಸವಣ್ಣ ಆಡಂಬರ ಪ್ರಿಯನಲ್ಲ. ಅವನು ಮದುವೆಯನ್ನು ಸರಳವಾಗಿ ಮಾಡಿಕೊಡಬೇಕೆಂಬ ಷರತ್ತನ್ನು ಗಂಗಾಂಬಿಕೆಯನ್ನು ಮದುವೆಯಾಗಲು ಹೊರಟಾಗ ಮುಂದಿಡುತ್ತಾನೆ. ಇದು ಅವನ ಸರಳ ಸ್ವಭಾವವನ್ನು ಎತ್ತಿ
ತೋರಿಸುತ್ತದೆ. ಅನಗತ್ಯ ರಾಜ್ಯ, ದೇಶದ ಜನರ ಸಂಪತ್ತನ್ನು ಉಳ್ಳವರು ಪೋಲು ಮಾಡುವ ಬದಲು ಅದನ್ನು ಬಡವರಲ್ಲಿ ಹಂಚಬೇಕು, ಅವರ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ವಿನಿಯೋಗಿಸಬೇಕು ಅನ್ನುವ ಅದ್ಭುತ ಆಲೋಚನೆಯನ್ನು ಹೊಂದಿದ್ದಂತಹ ವ್ಯಕ್ತಿತ್ವ ಬಸವಣ್ಣನದು. ಜಾತಿ ಪದ್ಧತಿಯ ನಿರ್ಮೂಲನೆ ಬಸವಣ್ಣನ ಮೂಲ ಧ್ಯೇಯವಾಗಿತ್ತು.

ಬಸವಣ್ಣ, ಚೆನ್ನಬಸವ, ಗಂಗಾಂಬಿಕೆಯರಿಂದ ವಚನಗಳ ರಚನೆಯ ರೀತಿ ಹಾಗೂ ಅವರು ವಚನಗಳಿಗೆ ಅಂಕಿತನಾಮಗಳನ್ನು ಆರಿಸಿದ ಬಗ್ಗೆ ವಿವರವಿದೆ.

ಹೆಣ್ಣು ಎಂದರೆ ಮತ್ಸರ ಇನ್ನೊಂದು ಹೆಣ್ಣಿನಲ್ಲಿ ಹೊಟ್ಟೆಕಿಚ್ಚು ತೋರುವವಳು ಅನ್ನುವ ಭಾವ ಎಲ್ಲೆಲ್ಲೂ ಸಾಮಾನ್ಯವಾಗಿ ಪ್ರತೀತಿ. ಆದರೆ ಇಲ್ಲಿ ಗಂಗಾಂಬಿಕೆ ತನ್ನ ಪತಿ ಬಸವನಿಗೆ ತನ್ನ ಗೆಳತಿಯನ್ನೇ ಮದುವೆ ಮಾಡಿಸುವ ಆಲೋಚನೆಯನ್ನು ಮಾಡುವ ರೀತಿ ಪ್ರಚಲಿತಗೊಂಡಿರುವ ಹೆಣ್ಣಿನ ಪ್ರತಿ ಇರುವ ಭಾವವನ್ನು ಬದಲಾಯಿಸುತ್ತದೆ. ಅವಳ ಸಹನೆ, ತಾಳ್ಮೆ, ವಿಶಾಲ ಮನೋಭಾವ ಎಷ್ಟು ಅನ್ನುವುದನ್ನು ಲೇಖಕರಲ್ಲಿ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.

ಹೀಗೆಯೇ ಸಾಗುವ ಬಸವಣ್ಣನ ಪರಿಚಯವನ್ನು ಒಳಗೊಂಡ  ಸುಂದರ ಐತಿಹಾಸಿಕ ಕಾದಂಬರಿ ಮಹಾಮಣಿಹ. ಇದರಲ್ಲಿ ಓದಲು ಇರುವ ಇನ್ನೊಂದು ಕಾದಂಬರಿ ಮಹಾಯಾಣ. ಇವೆರಡನ್ನೂ ಜೊತೆ ಸೇರಿಸಿ ಮಾಡಿದ ಒಂದೇ ಪುಸ್ತಕಕ್ಕೆ ನೀಡಿದ ಹೆಸರು “ಕೂಡಲ ಸಂಗಮ” . ಇತಿಹಾಸ, ಚರಿತ್ರೆಯಲ್ಲಿ ಆಸಕ್ತಿ ಇದ್ದವರನ್ನು ಈ ಕಾದಂಬರಿ ಸೆಳೆಯದೆ ಬಿಡದು.

-ನಯನ ಬಜಕೂಡ್ಲು

4 Responses

  1. ನಯನ ಬಜಕೂಡ್ಲು says:

    ಧನ್ಯವಾದಗಳು ಹೇಮಕ್ಕ

  2. ಪುಸ್ತಕ.. ಪರಿಚಯ… ಚೆನ್ನಾಗಿ ಬಂದಿದೆ…ಅದನ್ನು ಓದಬೇಕೆಂಬ ಕುತೂಹಲ ಮೂಡಿಸಿದ ನಿಮಗೆ..
    ಧನ್ಯವಾದಗಳು.. ನಯನ.ಮೇಡಂ.

  3. ಕೂಡಲಸಂಗಮ ಎಂಬ ಅಂಕಿತನಾಮವನ್ನು ಬಸವಣ್ಣನವರ ವಚನಗಳಲ್ಲಿ ಕಾಣುತ್ತೇವೆ
    ಇದೇ ಅಂಕಿತನಾಮವನ್ನು ಶೀರ್ಷಿಕೆಯಾಗಿ ಉಳ್ಳ ಪುಸ್ತಕದ ಪರಿಚಯ ಸೊಗಸಾಗಿ ಮೂಡಿಬಂದಿದೆ ಧನ್ಯವಾದ ಗೆಳತಿ

  4. . ಶಂಕರಿ ಶರ್ಮ says:

    ಸೊಗಸಾದ ಐತಿಹಾಸಿಕ ಪುಸ್ತಕವೊಂದರ ಸೂಕ್ಷ್ಮ ಪರಿಚಯದ ಜೊತೆಗೆ ಕಥಾ ಹಂದರದ ಬಗ್ಗೆಯೂ ವಿವರ ನೀಡಿದ ಲೇಖನ ಇಷ್ಟವಾಯ್ತು.

Leave a Reply to ನಾಗರತ್ನ ಬಿ. ಆರ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: