ಅವಿಸ್ಮರಣೀಯ ಅಮೆರಿಕ-ಎಳೆ 33
ಉಪ್ಪು ಸರೋವರದ ಸುತ್ತಮುತ್ತ…
ಮಿಸ್ಸಿಸ್ಸಿಪಿ ನದಿಯ ಪಶ್ಚಿಮಕ್ಕಿರುವ ಈ ಬೃಹತ್ ಸಾಲ್ಟ್ ಲೇಕ್, ಸುಮಾರು 75 ಮೈಲು ಉದ್ದ, 35 ಮೈಲು ಅಗಲ ಹಾಗೂ 10 ಮೀಟರ್ ಆಳವಿದೆ. ಲಕ್ಷಾಂತರ ವರ್ಷಗಳಿಂದ , ಹಲವಾರು ನದಿಗಳು ನೂರಾರು ಮೈಲು ದೂರ ಹರಿದು, ಸರೋವರಕ್ಕೆ ಬಂದು ಸೇರುವ ನೀರಿನಲ್ಲಿ, ಮಣ್ಣಿನಿಂದ ಅಲ್ಪ ಸ್ವಲ್ಪ ಕರಗಿದ ಲವಣಾಂಶವು ವೃದ್ಧಿಯಾಗುತ್ತಾ ಹೋಯಿತು. ಅಲ್ಲದೆ, ಈ ಸರೋವರವು ದೊಡ್ಡ ಬೆಟ್ಟಗಳಿಂದ ಸುತ್ತುವರಿದಿರುವುದರಿಂದ ಇದರ ನೀರಿಗೆ ಹೊರ ಹರಿವು ಇಲ್ಲವಾಯಿತು. ಅಲ್ಲದೆ, ಕಾಲಕ್ರಮೇಣ ಆ ಪ್ರದೇಶದ ಉಷ್ಣತೆಯು ತಗ್ಗಿ, ನೀರ ಹರಿವು ಪೂರ್ತಿ ನಿಂತು, ಹಿಮಯುಗ ಪ್ರಾರಂಭವಾದಂತೆ, ನೀರಿನ ಲವಣಾಂಶವು ಸ್ಥಿರವಾಯಿತು. ಇದರಿಂದಾಗಿ, ಇದರ ನೀರು ಸದಾ ಉಪ್ಪಾಗಿದ್ದುದರಿಂದಲೇ ಇದಕ್ಕೆ “ಸಾಲ್ಟ್ ಲೇಕ್” ಎಂಬ ಹೆಸರು ಬಂತು.
ಇಲ್ಲಿಯ ಪಟ್ಟಣವಾದ ಸಾಲ್ಟ್ ಲೇಕ್ ಸಿಟಿಯು ಸಮುದ್ರಮಟ್ಟದಿಂದ ಸುಮಾರು1288ಮೀಟರ್ ಎತ್ತರದಲ್ಲಿದ್ದು, 287 ಚ. ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಜೋರ್ಡಾನ್ ನದಿಯ ಆಗ್ನೇಯ ದಿಕ್ಕಿನಲ್ಲಿರುವ ಈ ಭೂಭಾಗವು 1847ರಲ್ಲಿ ಜಗತ್ತಿನ ಕಣ್ಣಿಗೆ ಮೊತ್ತ ಮೊದಲು ಗೋಚರವಾಯಿತು. ಇಲ್ಲಿಗೆ ಮೊದಲು ಬಂದ ಮೊರ್ಮಾನ್ಸ್ (Mormons) ಎಂಬ ಕ್ರೈಸ್ತ ಪಂಗಡದವರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರು ತಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಇನ್ನೂ ಉಳಿಸಿಕೊಂಡು ಬಂದಿರುವರು. ಸ್ನೇಹಜೀವಿಗಳಾದ ಇವರು, ಜಗತ್ತಿನಲ್ಲಿಡೀ ಸುಮಾರು 16 ಮಿಲಿಯ ಸಂಖ್ಯೆಯಲ್ಲಿ ಇರುವರೆಂಬ ಮಾಹಿತಿಯಿದೆ. ಮುಖ್ಯವಾಗಿ, ಇಲ್ಲಿಯ ಅಹ್ಲಾದಕರ ವಾತಾವರಣ ಮತ್ತು ಕಡಿಮೆ ಜೀವನ ವೆಚ್ಚವು ಜನರ ವಾಸಕ್ಕೆ ಬಹಳ ಯೋಗ್ಯವಾಗಿದೆ ಹಾಗೂ ಅನುಕೂಲಕರವಾಗಿದೆ. ಮಾತ್ರವಲ್ಲದೆ, ಜೀವಿಸಲು ಉತ್ತಮ ಜಾಗವೆಂದು ಪರಿಗಣಿಸಲ್ಪಟ್ಟಿದೆ. ಪರ್ವತದಂತಿರುವ ಅತ್ಯಂತ ಎತ್ತರದ ಬೆಟ್ಟಗಳ ಮೇಲೆ ಚಳಿಗಾಲದಲ್ಲಿ ಸುಮಾರು 500 ಇಂಚುಗಳಷ್ಟು ದಪ್ಪಕ್ಕೆ ಹಿಮ ಬೀಳುವುದರಿಂದ, ಅದರ ಪದರದ ಮೇಲೆ, ಜಾರುವಂತಹ ಬಹಳಷ್ಟು ಹಿಮದಾಟಗಳನ್ನು ಇಲ್ಲಿ ಆಯೋಜಿಸುವರು. 2012ರಲ್ಲಿ ಹಿಮ ಒಲಿಂಪಿಕ್ ಕ್ರೀಡೆಯು ಇಲ್ಲೇ ಜರುಗಿದುದು ಇದರ ಹೆಗ್ಗಳಿಕೆ.
ನಾವು ಉಪ್ಪು ಸರೋವರ ನಗರದೊಳಗೆ (Salt Lake City) ಪ್ರವೇಶಿಸಿದಾಗ, ಅದರ ಸೊಬಗನ್ನು ನೋಡಿಯೇ ದಂಗಾಗಿಬಿಟ್ಟೆವು! ಎತ್ತ ನೋಡಿದರತ್ತ, ರಸ್ತೆಯ ಪಕ್ಕಗಳಲ್ಲಿ, ವಿಭಜಕಗಳಲ್ಲಿ, ಹೀಗೆ ಎಲ್ಲೆಲ್ಲೂ ಸುಂದರ ಹೂಗಿಡಗಳು. ರಸ್ತೆ ಪಕ್ಕದ ಗೋಡೆಯೇ ಕಾಣದಷ್ಟು ಮುಚ್ಚಿ ಬಿಟ್ಟಿವೆ..ನೂರಾರು ಬಣ್ಣದ ಹೂಗಳ ಬಳ್ಳಿಗಳು! ಸ್ವಲ್ಪವೇ ಖಾಲಿ ಜಾಗವಿದ್ದರೂ, ಕಾಂಕ್ರೀಟ್ ನೆಲವೇ ಗೋಚರಿಸದಷ್ಟು ಇರಿಸಿದ ಕುಂಡಗಳು, ಅತ್ಯಂತ ಚಂದದ ಹೂಗಳನ್ನು ಅರಳಿಸಿಕೊಂಡು ನಗುತ್ತಾ ನಮ್ಮನ್ನು ಎದುರುಗೊಂಡವು. ಹೂಗಳಲ್ಲಿನ ವೈವಿಧ್ಯತೆ, ಅವುಗಳನ್ನು ಬೆಳೆಸುವಾಗ, ವರ್ಣಸಂಯೋಜನೆಯ ಮೇಲಿರಿಸಿದ ವಿಶೇಷವಾದ ಪ್ರಾಮುಖ್ಯತೆ ನಿಜಕ್ಕೂ ಶ್ಲಾಘನೀಯ!
ಬಹಳ ಅಹ್ಲಾದಕರವಾದ ವಾತಾವರಣದಲ್ಲಿ, ಶಾಲಾ ಮಕ್ಕಳ ಸಮವಸ್ತ್ರದಂತೆ, ಎಲ್ಲರೂ ಒಂದೇ ತರಹದ ಕಪ್ಪು ಪ್ಯಾಂಟ್ ಮತ್ತು ಬಿಳಿ ಶರ್ಟ್ ಧರಿಸಿದ ಸ್ತ್ರೀ ಪುರುಷರು, ನಗುನಗುತ್ತಾ ಮಾತನಾಡಿಕೊಂಡು ಉತ್ಸಾಹದಿಂದ ಪಟ್ಟಣದ ಮುಂಭಾಗದಲ್ಲಿರುವ ಕ್ರೈಸ್ತ ದೇವಾಲಯಕ್ಕೆ ಗುಂಪು ಗುಂಪಾಗಿ ಹೋಗುತ್ತಿರುವುದು ಕಂಡಿತು. ಎಲ್ಲರ ಮುಖದಲ್ಲೂ ಮಂದಹಾಸದ ಕಳೆ ಎದ್ದು ಕಾಣುತ್ತಿತ್ತು. ಉಲ್ಲಸಿತರಾಗಿರುವ ಜನರನ್ನು ಕಾಣುವುದೇ ಕಷ್ಟವಾಗಿರುವ ಈ ದಿನಗಳಲ್ಲಿ ಅವರನ್ನು ನೋಡುವಾಗ ಖುಷಿ ಎನಿಸಿತು. ಒಂದೇ ತೆರನಾದ ಉಡುಪುಗಳು… ಇದ್ಯಾಕೆ ಹೀಗೆ? ಎಂದು ಯೋಚಿಸುವಾಗಲೇ ಮಗಳಿಂದ ತಿಳಿದ ಕೆಲವು ವಿಷಯಗಳು ನಿಜಕ್ಕೂ ಕುತೂಹಲಕಾರಿಯಾಗಿವೆ.
ಆ ಪಂಗಡದ ಜನರು ಕ್ರೈಸ್ತ ಧರ್ಮವನ್ನು ಪಾಲಿಸಿದರೂ, ಅವರದೇ ಆದ ಕೆಲವು ನಿಬಂಧನೆಗಳು ಜಾರಿಯಲ್ಲಿವೆ. ಮಹಿಳೆ, ಪುರುಷರೆಂಬ ಭೇದವಿಲ್ಲದೆ, ಪ್ರತಿಯೊಬ್ಬರೂ ಮೈಮುಚ್ಚುವಂತೆ, ಅಂದರೆ, ಮೊಣಕಾಲು,ಕೈಗಳು ಮುಚ್ಚುವಂತೆ ಉಡುಪು ಧರಿಸಬೇಕು. ಮದ್ಯ ಸೇವಿಸುವಂತಿಲ್ಲ…ಇದು ನಿಜವಾಗಿಯೂ ಮೆಚ್ಚತಕ್ಕ ಸಂಗತಿ ಎನಿಸಿತು ನಮಗೆ. ಎತ್ತರದ ಹಿಮ್ಮಡಿಯ ಬೂಟು, ಚಪ್ಪಲಿ ಹಾಕುವಂತಿಲ್ಲ. ಈಗಿನ ಫ್ಯಾಷನ್ ಯುಗದಲ್ಲಿ, ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಈ ನಿಯಮವನ್ನು ಅನುಸರಿಸಲು ಬಹಳ ಕಷ್ಟ ಎಂದು ಮಗಳು ಅವರ ಬಗ್ಗೆ ಅನುಕಂಪ ವ್ಯಕ್ತಪಡಿಸಿದಳು! ಇನ್ನೊಂದು ವಿಶೇಷವೆಂದರೆ, ಅವರು ಕಾಫಿ, ಟೀ ಕುಡಿಯುವ ಹಾಗಿಲ್ಲ! ಇದಂತೂ, ನಮಗೆಲ್ಲರಿಗೂ ಅವರನ್ನು “ಅಯ್ಯೋ ಪಾಪ!” ಎನ್ನುವಂತೆ ಮಾಡಿತು! ಇನ್ನು, ಬಹುಪತ್ನಿತ್ವ…ಗಂಡಸರು ಎಷ್ಟು ಮಂದಿಯನ್ನು ಬೇಕಾದರೂ ಮದುವೆಯಾಗಬಹುದು ಎಂಬ ನಿಯಮ ಮಾತ್ರ ನಮಗ್ಯಾರಿಗೂ ಇಷ್ಟವಾಗಲಿಲ್ಲ.
ಇಲ್ಲಿಯ ಬಹು ದೊಡ್ಡ ಚರ್ಚ್, ಸುಮಾರು 2,53,000 ಚ. ಅಡಿಗಳಷ್ಟು ವಿಸ್ತಾರವಾಗಿದ್ದು, ಸಾರ್ವಜನಿಕರಿಗೆ ನೋಡಲು ಮುಕ್ತ ಅವಕಾಶವಿದೆ. ಒಳಗಡೆಗೆ, ಅತ್ಯಂತ ಭವ್ಯವಾದ, ಎತ್ತರದ ಏಸು ವಿಗ್ರಹವು ಗಮನ ಸೆಳೆಯುತ್ತದೆ. ಬಹು ವಿಶೇಷದ ಒಳಾಂಗಣ ವಿನ್ಯಾಸವು ಅದ್ಭುತವಾಗಿದೆ. ಇದರ ನಿರ್ಮಾಣಕ್ಕೆ 40 ವರ್ಷಗಳೇ ಹಿಡಿದುವಂತೆ! ಅದರೊಳಗೆ ಸ್ವಲ್ಪ ಹೊತ್ತು ಕುಳಿತು, ಅಲ್ಲಿಯ ಪವಿತ್ರ ಮೌನವನ್ನು ಅಸ್ವಾದಿಸಿ ಹೊರಬಂದಾಗ ಮನಸ್ಸು ಅಹ್ಲಾದಗೊಂಡಿತ್ತು. ಚರ್ಚ್ ನ ಸುತ್ತಲೂ ಇರುವ ಅತ್ಯಂತ ಸುಂದರ ಹೂದೋಟದಲ್ಲಿ ಆಡುತ್ತಿದ್ದ ಮಕ್ಕಳ ಜೊತೆಗೆ ನಮ್ಮ ದೊಡ್ಡ ಮಗುವೂ ಆಟವಾಡಿ, ಕುಣಿದು ಕುಪ್ಪಳಿಸಿದಳು. ಅಲ್ಲಲ್ಲಿ ಇರುವ ಕಾರಂಜಿಗಳು ಮನಮೋಹಕವಾಗಿದ್ದವು. ಮುಂದಕ್ಕೆ ನಗರ ಮಧ್ಯದಲ್ಲಿರುವ ಕೃತಕ ಜಲಪಾತವನ್ನು ವೀಕ್ಷಿಸಲು ಮುಂದಾದೆವು. ಮೂರು ಹಂತಗಳಲ್ಲಿ ವಿಶಾಲವಾಗಿ ಧುಮುಕುವ ಜಲಪಾತದ ಪಕ್ಕದಲ್ಲಿ ಅದರ ಮೇಲ್ತುದಿಗೆ ಏರಿ ಹೋಗಲು ಸೊಗಸಾದ ಮೆಟ್ಟಲುಗಳಿವೆ. ನಾನು ಎರಡನೇ ಹಂತದ ವರೆಗೆ ಹೋಗಿ ಕೆಳಗಿಳಿದೆ…ಅದಾಗಲೇ ಮಧ್ಯಾಹ್ನ ಎರಡು ಗಂಟೆ, ಹೊಟ್ಟೆ ತಾಳಹಾಕಲಾರಂಭಿಸಿತ್ತು… ಉತ್ಸಾಹ ತಗ್ಗಿತ್ತು. ಊಟಕ್ಕಾಗಿ ಹೋಟೇಲ್ ಹುಡುಕಲೇ ಬೇಕಾಗಿತ್ತು.
ಆದರೆ, ಮೊದಲೇ ತಿಳಿಸಿದಂತೆ ಇಲ್ಲಿ ಎಲ್ಲಾ ಕಡೆಗಳಲ್ಲಿಯೂ, ಸಸ್ಯಾಹಾರ ಮತ್ತು ಮಾಂಸಾಹಾರಗಳನ್ನು ಜೊತೆಗೇ ಇರಿಸಿರುವರು… ಶುದ್ಧ ಶಾಕಾಹಾರ ಹೋಟೇಲ್ ಸಿಗುವುದೇ ಇಲ್ಲ. ಆದ್ದರಿಂದ, ಇದ್ದುದರಲ್ಲೇ ಉತ್ತಮವೆನಿಸಿದ Copper Bowl ಎನ್ನುವ ಹೋಟೇಲ್ ಒಳಹೊಕ್ಕೆವು… ಇದರ ಹೆಸರೇ ಅಪ್ಯಾಯಮಾನವೆನಿಸಿತು ನನಗೆ! ಇಲ್ಲಿಯ ಈ ಪಟ್ಟಣವೇ, ಸುತ್ತಲೂ ಎತ್ತರೆತ್ತರದ ಹಿಮಚ್ಛಾದಿತ ಬೆಟ್ಟಗಳಿಂದ ಆವೃತವಾಗಿ, ಒಂದು ಬೋಗುಣಿಯಾಕಾರದಲ್ಲಿ ಇರುವುದರಿಂದ ಇದು ಅನ್ವರ್ಥನಾಮವೆನಿಸಿತು. ಇಲ್ಲಿ ನಮ್ಮ ದೇಶದ ಅಡುಗೆಗಳಿರುವುದಾದರೂ ನನ್ನ ಗಂಟಲಲ್ಲಿ ಏನೂ ಇಳಿಯಲಾರದು ಎಂದು ಗೊತ್ತಿದ್ದ ನಾನು ಮನೆಯಿಂದ ತಯಾರಿಸಿ ತಂದ ಪುಳಿಯೋಗರೆ ಮತ್ತು ಬಾಳೆಹಣ್ಣುಗಳನ್ನು ಹೊಟ್ಟೆಗಿಳಿಸಿದೆ. ಅಲ್ಲಿ ಬಡಿಸಲು ಬಂದ ವ್ಯಕ್ತಿಯನ್ನು ಮಾತನಾಡಿಸಿದಾಗ, ಅವರು ಹೈದರಾಬಾದ್ ಕ್ರಿಶ್ಚಿಯನ್ ಎಂದು ತಿಳಿದು ಬಹಳ ಸಂತೋಷವಾಯಿತು.. ಹಿಂದಿ ಭಾಷೆಯಲ್ಲಿ ಮಾತನಾಡುತ್ತಾ, ಸ್ವಲ್ಪ ಹೊತ್ತಲ್ಲೇ ಆತ್ಮೀಯತೆ ಬೆಳೆದು, ಅವರ ಬಗ್ಗೆ ವಿಷಯಗಳನ್ನೆಲ್ಲಾ ತಿಳಿದು, ಸ್ವಲ್ಪ ಹೆಚ್ಚೇ ಟಿಪ್ಸ್ ಕೊಟ್ಟು ಹೊರಬಂದಾಗ ನಮ್ಮ ದೇಶದಲ್ಲೇ ಇದ್ದೇವೆ ಅನ್ನಿಸಿದ್ದು ಸುಳ್ಳಲ್ಲ. ಅದಾಗಲೇ, ಹೊರಗಡೆಗೆ, ನೇರ ನಿಲ್ಲಲಾಗದಷ್ಟು ವೇಗದಲ್ಲಿ ಚಳಿಗಾಳಿ ಬೀಸಲು ಪ್ರಾರಂಭವಾಗಿತ್ತು. ಊಟ ಮುಗಿಸಿ ನಮ್ಮ ಪ್ರಯಾಣ ಮುಂದುವರಿಯಿತು… ಸುಮಾರು 234 ಮೈಲು ದೂರದಲ್ಲಿರುವ ಮೋಬ್ (Moab) ಎಂಬ ಪುಟ್ಟ ಪಟ್ಟಣಕ್ಕೆ. ಮಧ್ಯ ಮಾರ್ಗದಲ್ಲಿ ಕಾಫಿಗಾಗಿ ಒಂದು ಚಿಕ್ಕ ಹೋಟೇಲ್ ಒಂದರಲ್ಲಿ ವಾಹನ ನಿಲ್ಲಿಸಿದಾಗ ಅದರ ಹೆಸರು ಮನಸೆಳೆಯಿತು… ಅದುವೇ,”Happiness within”..ಎಷ್ಟು ಅರ್ಥವತ್ತಾಗಿದೆ ಅನಿಸಿದ್ದು ಸುಳ್ಳಲ್ಲ. ಹಾಗೆಯೇ, ಅದಕ್ಕೊಪ್ಪುವ, ನಗುಮೊಗದ ಅಲ್ಲಿಯ ಸಿಬ್ಬಂದಿಗಳ ಸೇವೆಯೂ ಮನಸೆಳೆಯಿತು.
ಬಹು ಸುಂದರ, ನೇರ ರಸ್ತೆಯ ಇಕ್ಕೆಲಗಳ ನೋಟವು ಬಹಳ ವಿಶೇಷವಾಗಿತ್ತು. ಮರ, ಗಿಡಗಳ ಚಿಹ್ನೆಯೇ ಇಲ್ಲ..ಬರೇ ಸಣ್ಣ ಸಣ್ಣ ಖಾಲಿ ಗುಡ್ಡ ಬೆಟ್ಟಗಳಲ್ಲಿ ಕುರುಚಲು ಗಿಡಗಳು ಕಂಡುಬಂದವು. ಅವುಗಳಲ್ಲಿರುವ ಬಂಡೆಗಳ ವಿಚಿತ್ರ ಆಕೃತಿಗಳು ಮೋಜೆನಿಸುವಂತಿತ್ತು. ದಾರಿ ಮಧ್ಯದಲ್ಲಿ ಇಂತಹದೇ ಒಂದು ಗುಡ್ಡವೇರಿ ನೋಡಿದಾಗ ತಿಳಿಯಿತು, ಅವುಗಳು ಮೃದುವಾದ ಕಲ್ಲು ಬಂಡೆಗಳಾಗಿದ್ದವು. ನೂರಾರು ವರ್ಷಗಳಿಂದ, ರಭಸವಾಗಿ ಬೀಸುವ ಗಾಳಿಗೆ ಮೈಯೊಡ್ಡಿ ಸವೆಯುತ್ತಾ, ಅವುಗಳು ವಿವಿಧ ಆಕೃತಿಗಳನ್ನು ಪಡೆದಿದ್ದವು. ಪ್ರಾಕೃತಿಕವಾಗಿ ಇಂತಹ ಸಾವಿರಾರು ಕಲ್ಲುಗಳಿಂದ ಮೋಬ್ ಪಟ್ಟಣದ ಬಳಿ ರಚನೆಗೊಂಡ ವಿವಿಧ ಆಕೃತಿಗಳನ್ನು ಸಾರ್ವಜನಿಕರಿಗೆ ವೀಕ್ಷಿಸಲು, ಆ ಸ್ಥಳದಲ್ಲಿ ಕಮಾನುಗಳ ರಾಷ್ಟೀಯ ಉದ್ಯಾನವನ್ನು ರೂಪಿಸಿ (Arches National Park), ಅದ್ಭುತ ರೀತಿಯ ಪ್ರವಾಸ ಕೇಂದ್ರವನ್ನಾಗಿ ಮಾರ್ಪಡಿಸಿರುವರು. ಅಲ್ಲಿಗೆ ನಾವು ತಲಪುವಾಗ 7:30 ರ ಮುಸ್ಸಂಜೆ ಹೊತ್ತು. ಆ ಪುಟ್ಟ ಪಟ್ಟಣದಲ್ಲಿ ನಾವು ತಂಗಿದ Big Horn ವಸತಿಗೃಹವು ಫ್ರಿಜ್, ಮೈಕ್ರೋವೇವ್ ಒಲೆ ಸಹಿತ ಅತ್ಯುತ್ತಮ ಸವಲತ್ತುಗಳನ್ನು ಒಳಗೊಂಡಿತ್ತು. ಪ್ರಯಾಣದ ಆಯಾಸ ಪರಿಹರಿಸಿ, ರಾತ್ರಿಯೂಟದ ಬಳಿಕ, ಮರುದಿನದ ನಮ್ಮ ವಿಶೇಷವಾದ ವೀಕ್ಷಣೆಯ ಬಗ್ಗೆ ಕುತೂಹಲಭರಿತಳಾಗಿ ಮಲಗಿದವಳಿಗೆ, ನಿದ್ರಾದೇವಿಯ ಮಡಿಲಿಗೆ ಜಾರಿದುದೇ ತಿಳಿಯಲಿಲ್ಲ…..
(ಮುಂದುವರಿಯುವುದು……)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=35902
–ಶಂಕರಿ ಶರ್ಮ, ಪುತ್ತೂರು.
ಅಮೆರಿಕ ಪ್ರವಾಸ ಕಥನ.. ಚೆನ್ನಾಗಿ..
ಓದಿಸಿಕೊಂಡು ಹೋಗುತ್ತಿದೆ…ಧನ್ಯವಾದಗಳು ಶಂಕರಿ ಮೇಡಂ
ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು… ನಾಗರತ್ನ ಮೇಡಂ.
ಚೆನ್ನಾಗಿದೆ