ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 7

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಸ್ವದೇಶಿ-ಸಂಸ್ಥೆಗಳು:

ಕಲ್ಕತ್ತೆಯ ಮೆಡಿಕಲ್‌ ಕಾಲೇಜಿನ ಎರಡನೇ ಪದವೀಧರ ಮಹೇಂದರ್ಲಾಲ್ ಸರ್ಕಾರ್ ಅವರಿಗೆ ಹೋಮಿಯೋಪತಿ ಅಲೋಪತಿಗಿಂತಲೂ ಹೆಚ್ಚು ಪರಿಣಾಮಕಾರಿ ಮತ್ತು ಅಗ್ಗದ ಚಿಕಿತ್ಸಾ ಪದ್ಧತಿ ಎಂಬುದು ಒಂದು ಸಂದರ್ಭದಲ್ಲಿ ಗಮನಕ್ಕೆ ಬಂದಿತು. ಇದನ್ನು ಬ್ರಿಟಿಷ್‌ ಮೆಡಿಕಲ್‌ ಅಸೋಸಿಯೇಷನ್‌ ಒಪ್ಪಲು ನಿರಾಕರಿಸಿತು ಮತ್ತು ಅವರನ್ನು ಅಸೋಸಿಯೇಷನ್‌ನ ಅಧ್ಯಕ್ಷ ಪದದಿಂದ ಕಿತ್ತು ಹಾಕಿತು. ಅದರ ಬ್ರಿಟಿಷ್‌ ಸದಸ್ಯರು ಅವರ ಮೆಡಿಕಲ್‌ ಪ್ರಾಕ್ಟೀಸಿಗೂ ತೊಂದರೆಯನ್ನು ಉಂಟುಮಾಡಿದರು. ಅವರು ತಮ್ಮ ಪ್ರಬಂಧಗಳನ್ನು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಲು ತಡೆಯನ್ನೊಡ್ಡಿದರು.  

ಇದರಿಂದಾಗಿ ಮಹೇಂದ‌ರ್‌ ಲಾಲ್ ಸರ್ಕಾರ್‌ ಹಲವಾರು ವರ್ಷಗಳ ಕಾಲದ ಪರಿಶ್ರಮದಿಂದ “Indian Association for cultivation of Science” ಎಂಬ ಸಂಸ್ಥೆಯನ್ನು 1876ರಲ್ಲಿ ಆರಂಭಿಸಿದರು. ಇದು ಸ್ವದೇಶೀಯರಿಂದ ಸ್ವದೇಶೀ ಬಂಡವಾಳದಿಂದ ಕೆಲಸ ಮಾಡುವ ಸಂಸ್ಥೆಯಾಗಿತ್ತು. ಇದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ವಿಜ್ಞಾನಿಗಳು ಇತರರೊಂದಿಗೆ ಸ್ಪರ್ಧಿಸಲು ಸಹಾಯಕವಾಯಿತು. ವಿಜ್ಞಾನವನ್ನು ಜನಪ್ರಿಯಗೊಳಿಸುವ ಪ್ರದರ್ಶನ ಮತ್ತು ಉಪನ್ಯಾಸಗಳನ್ನು ಏರ್ಪಡಿಸಿತು. ಪ್ರಾಥಮಿಕ ವಿಜ್ಞಾನಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂಗರ್ಭಶಾಸ್ತ್ರ, ಶರೀರಶಾಸ್ತ್ರ, ಸಸ್ಯಶಾಸ್ತ್ರ ಮುಂತಾದ ಅಧ್ಯಯನ ವಿಭಾಗಗಳಿಗೆ ಅವಕಾಶ ಒದಗಿಸಿತು. ಇದು ಈಗಲೂ ಡೀಮ್ಡ್‌ ವಿಶ್ವವಿದ್ಯಾನಿಲಯವಾಗಿ ಪ್ರಾಥಮಿಕ ಮತ್ತು ಆನ್ವಯಿಕ ಸಂಶೋಧನೆಗಳನ್ನು ಎಲ್ಲಾ ವಿಭಾಗಗಳಲ್ಲಿ ಪ್ರೋತ್ಸಾಹಿಸುತ್ತಿದೆ. 

ಈ ಸಂಸ್ಥೆಯಡಿ ಸಂಶೋಧನೆ ಮಾಡಿದ ಸರ್‌ ಸಿ. ವಿ. ರಾಮನ್‌ ನೋಬಲ್‌ ಪಾರಿತೋಷಕವನ್ನು ಪಡೆದರು. ಕೆಎಸ್. ಕೃಷ್ಣನ್‌ ಮಾಡರ್ನ್ಮ್ಯಾಗ್ನೆಟಿಸಂ ಮತ್ತುಸ್ಟ್ರಕ್ಚರಲ್ಫಿಸಿಕ್ಸ್‌” ಅಧ್ಯಯನ ವಿಭಾಗಗಳನ್ನು ಆರಂಭಿಸಿದರು. ಕೆ. ಬ್ಯಾನರ್ಜಿ ಡೈರೆಕ್ಟ್ಮೆಥಡ್ಆಫ್ಕ್ರಿಸ್ಟಲ್ಲೊಗ್ರಫಿಯನ್ನು ಅಭಿವೃದ್ಧಿ ಪಡಿಸಿದರು. ಎಸ್.‌ ಭಗವಂತಂ, ಎಲ್.‌ ಶ್ರೀವಾತ್ಸವ, ಎನ್.ಕೆ. ಸೇಟಿ, ಸಿ. ಪ್ರಸಾದ್‌, ಎಂ.ಎನ್‌. ಶಹ ಮುಂತಾದವರು ಗಮನಾರ್ಹ ಸಂಶೋಧನೆ ಮಾಡಿದರು.

ಪ್ರಮಥನಾಥ ಬೋಸ್ ಬ್ರಿಟಿಷ್‌ ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನದಲ್ಲಿ ಪದವಿಯನ್ನು ಪಡೆದ ಪ್ರಪ್ರಥಮ ಭಾರತೀಯ. ಅವರು ಮೂಲಭೂತವಾಗಿ ಒಬ್ಬ ಭಾರತೀಯ ವಿಜ್ಞಾನಿ ಭಾರತೀಯರು ಭಾರತದಲ್ಲೇ ತಾಂತ್ರಿಕ ಶಿಕ್ಷಣವನ್ನು ಪಡೆಯಬೇಕು ಎಂದು ಸಹಜವಾಗಿ ಆಶಿಸಿದರು. ಈ ದಿಕ್ಕಿನಲ್ಲಿಯ ಅವರ ನಿರಂತರ ಪರಿಶ್ರಮದ ಫಲವಾಗಿ ಮೊದಲಿಗೆ 1891ರಲ್ಲಿ ಕಲ್ಕತ್ತೆಯಲ್ಲಿ ಇಂಡಸ್ಟ್ರಿಯಲ್ಕಾನ್ಫೆರೆನ್ಸ್ಪ್ರಪ್ರಥಮವಾಗಿ ನಡೆಯಿತು. ಇಲ್ಲಿ ತೆಗೆದುಕೊಂಡ ನಿರ್ಣಯದಂತೆ ಸ್ವದೇಶದಲ್ಲಿ ತಾಂತ್ರಿಕ ಶಿಕ್ಷಣದ ಸೌಲಭ್ಯ, ಭಾರತೀಯ ಉತ್ಪಾದನೆಗಳು ಮತ್ತು ಉತ್ಪಾದಕರ ಮಾಹಿತಿ ಸಂಗ್ರಹಣೆ, ಸ್ವಧೇಶೀ ಉದ್ಯಮಗಳ ಸ್ಥಾಪನೆಗೆ ಉತ್ತೇಜನ ನೀಡುವಿಕೆ – ಈ ಮೂರು ಉದ್ದೇಶಗಳಿಗಾಗಿ ಪ್ರಮಥನಾಥ ಬೋಸ್‌ ಸಹಮನಸ್ಕರೊಂದಿಗೆ “ಇಂಡಿಯನ್ಇಂಡಸ್ತ್ರಿಯಲ್ಅಸೋಸಿಯೇಷನ್‌” ಎಂಬ ಸಂಸ್ಥೆಯನ್ನು 1891ರಲ್ಲಿಯೇ ಆರಂಭಿಸಿದರು. ಇದಕ್ಕೆ ಸ್ವದೇಶೀಯರು ಮಾತ್ರವಲ್ಲದೆ ಕೆಲವು ಯೂರೋಪಿಯನ್ನರು ಸಹ ಪೋಷಕರಾಗಿದ್ದರು. 

ಆಧುನಿಕ ವಿಜ್ಞಾನದ ಹಿನ್ನೆಲೆಯ ಸ್ವದೇಶಿ ಉತ್ಪಾದನೆಯನ್ನು ಮಾಡುವ ಮತ್ತು ಸ್ವದೇಶಿ ಉತ್ಪತ್ತಿಗಳನ್ನು ಪರಿಚಯಿಸುವ ಹಾಗೂ ಗೃಹೋದ್ಯಮಗಳನ್ನು ಆಧುನಿಕ ವಿಜ್ಞಾನದ ನೆಲೆಯಲ್ಲಿ ನವೀಕರಿಸುವ ಅಗತ್ಯವನ್ನು ಮನಗಾಣಿಸುವ ಉಪನ್ಯಾಸಗಳನ್ನು “ಇಂಡಿಯನ್‌ ಇಂಡಸ್ತ್ರಿಯಲ್‌ ಅಸೋಸಿಯೇಷನ್‌ ಏರ್ಪಡಿಸಿತು. 1893ರಲ್ಲಿ ಮೊಟ್ಟಮೊದಲ ಕೈಗಾರಿಕ ವಸ್ತುಪ್ರದರ್ಶನವನ್ನು ಆಯೋಜಿಸಿತು. ಅದು 1897ರಲ್ಲಿ ನಡೆಸಿದ ವಸ್ತುಪ್ರದರ್ಶನದಲ್ಲಿ 380 ಕೈಗಾರಿಕಾ ಪ್ರದರ್ಶಕರು ಭಾಗಿಯಾಗಿದ್ದರು. ಈ ಸಂಸ್ಥೆ ಇಂಡಿಯನ್ಸ್ಟೋರ್ಸ್ಲಿಮಿಟೆಡ್‌”, “ಲಕ್ಷ್ಮಿ ಭಂಡಾರ್‌”, “ಯುನೈಟೆಡ್ಬೆಂಗಾಲ್ಸ್ಟೋರ್ಸ್”” ಮುಂತಾದ ಸ್ವದೇಶಿ ಅಂಗಡಿಗಳನ್ನು ಆರಂಭಿಸಿ ಪ್ರಾದೇಶಿಕ ವಸ್ತುಗಳನ್ನು ಮಾರಾಟ ಮಾಡಿತು. ಸೋಪು ಹಾಗೂ ಗಾಜುಗಳ ತಯಾರಿಕೆ, ಗಣಿಗಾರಿಕೆ, ಬಣ್ಣಹಾಕುವಿಕೆ, ಲೋಹ ವಿಜ್ಞಾನ, ಚರ್ಮ ಹದಮಾಡುವಿಕೆ, ಸಕ್ಕರೆಯ ಶುದ್ಧೀಕರಣ ಮುಂತಾದ ಜನೋಪಯೋಗಿ ವಸ್ತುಗಳ ತಯಾರಿಕೆಗೆ ಸಂಬಂಧಿಸಿದ ತಾಂತ್ರಿಕ ತರಬೇತಿಯನ್ನು ನೀಡಿತು. ಇದು 1906ರ ವರೆಗೂ ಕ್ರಿಯಾಶೀಲವಾಗಿತ್ತು. 

19ನೇ ಶತಮಾನದ ಮಧ್ಯ ಭಾಗದ ವೇಳೆಗಾಗಲೇ ವಿದೇಶಗಳಲ್ಲಿ ಕೈಗಾರಿಕಾ ತಂತ್ರಜ್ಞಾನ ಅತ್ಯುನ್ನತ ತಾಂತ್ರಿಕ ಮಟ್ಟವನ್ನು ತಲುಪಿತ್ತು ಸ್ವದೇಶೀ ಉದ್ಯಮವನ್ನು ಆರಂಭಿಸುವ ಆಸಕ್ತಿಯುಳ್ಳ ಭಾರತೀಯರು ಆ ಕೌಶಲ್ಯವನ್ನು ತಮ್ಮದನ್ನಾಗಿಸಿಕೊಳ್ಳುವ ತರಬೇತಿಯನ್ನು ವಿದೇಶದಲ್ಲಿಯೇ ಪಡೆಯಬೇಕಾದ ಅಗತ್ಯವಿತ್ತು. ಅದನ್ನು ಮನಗಂಡ ಜೋಗೇಂದ್ರಚಂದ್ರ ಘೋಷ್ ಮತ್ತಿತರರು “Association for Advancement of Scientific and Industrial Education” ಎಂಬ ಸಂಸ್ಥೆಯನ್ನು 1904ರಲ್ಲಿ ಆರಂಭಿಸಿದರು. ಇದು ಜನರಿಂದ ಹಣ ಸಂಗ್ರಹ ಮಾಡಿ ಅರ್ಹ ಭಾರತೀಯರನ್ನು ಕೈಗಾರಿಕಾ ತಂತ್ರಜ್ಞಾನ ತರಬೇತಿ ಪಡೆಯಲು ವಿದ್ಯಾರ್ಥಿವೇತನ ಅಥವಾ ಹಿಂತಿರುಗಿ ಕೊಡಬಹುದಾದ ಸಹಾಯ ಧನ ಕೊಟ್ಟು ಕಳುಹಿಸಿಕೊಟ್ಟಿತು. ಇದರ ನಾಲ್ಕಾಣೆಯ ಸದಸ್ಯತ್ವ ಜನಸಮೂಹವನ್ನು ಆಕರ್ಷಿಸಿತು. ಹಳ್ಳಿ ಹಳ್ಳಿಗಳಲ್ಲಿ ಇದರ ಅಂಗ-ಸಮಿತಿಗಳು ತಲೆಯೆತ್ತಿ ಹಣಸಂಗ್ರಹಣಾಕಾರ್ಯವನ್ನು ನಿರ್ವಹಿಸಿದವು. ಇದರ ಸಹಾಯದಿಂದ ತರಬೇತಿ ಪಡೆದ ಅನೇಕರು ಕೈಗಾರಿಕೋದ್ಯಮಗಳನ್ನು ಸ್ವಂತವಾಗಿ ಆರಂಭಿಸಿದರು.

ಉನ್ನತ ಮಟ್ಟದ ತಾಂತ್ರಿಕ ಕೌಶಲ್ಯವನ್ನು ಪಡೆಯುವ ಭಾರತೀಯರ ಸಾಮರ್ಥ್ಯವನ್ನು ಗುರುತಿಸಿದ ತಾರಕಾನಾಥ್ಪಂಡಿತ್‌, ಸರ್ರಾಸ ಬಿಹಾರಿ ಘೋಷ್ ಭಾರತದಲ್ಲಿಯೇ ಕೈಗಾರಿಕಾ ತಂತ್ರಜ್ಞಾನ ತರಬೇತಿಯನ್ನು ನೀಡುವ “ಬೆಂಗಾಲ್ಟೆಕ್ನಿಕಲ್ಇನಸ್ಟಿಟ್ಯೂಟ್ಮತ್ತು ನ್ಯಾಷನಲ್ಕೌನ್ಸಿಲ್ಆಫ್ಎಜುಕೇಷನ್‌” ಸಂಸ್ಥೆಗಳನ್ನು 1906ರಲ್ಲಿ ಆರಂಭಿಸಿದರು.  ಇದರ ಅಡಿಯಲ್ಲಿ ದೇಶೀಯ ಕಚ್ಚಾವಸ್ತುಗಳನ್ನು ಬಳಸಿ ಸಂಸ್ಥೆಯ ಸದಸ್ಯರು ಸಂಶೋಧನಾತ್ಮಕ ಪ್ರಯೋಗಗಳನ್ನು ಮಾಡಿದರು. 

ಕಲ್ಕತ್ತ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಆಶುತೋಷ ಮುಖರ್ಜಿಯವರು ಲಂಡನ್ನಿನ ಮ್ಯಾಥೆಮ್ಯಾಟಿಕಲ್‌ ಸೊಸೈಟಿಯ ಕಾರ್ಯಸ್ವರೂಪದಿಂದ ಪ್ರೇರಿತರಾಗಿ ಅಂಥ ಸೌಲಭ್ಯ ಭಾರತದಲ್ಲೇ ಭಾರತೀಯರಿಗೆ ದೊರೆಯಬೇಕೆಂದು ಯೋಚಿಸಿದರು. ಸರ್‌ ಗುರುದಾಸ ಬ್ಯಾನರ್ಜಿ, ಪ್ರೊಫೆಸರ್‌ ಕಲಿಸ್‌, ಪ್ರೊಫೆಸರ್‌ ಗೌರಿಶಂಕರ್‌ ದೇವ್‌, ಪ್ರೊಫೆಸರ್‌ ಫಣೀಂದ್ರಲಾಲ್ ಗಂಗೂಲಿ ಅವರ ಸಹಕಾರದಿಂದ ಕಲ್ಕತ್ತ ಮ್ಯಾಥೆಮ್ಯಾಟಿಕಲ್ಸೊಸೈಟಿಯನ್ನು 1908ರಲ್ಲಿ ಆರಂಭಿಸಿದರು. ಇದು ಈಗಲೂ ಥಿಯರಿಟಿಕಲ್‌ ಮತ್ತು ಆನ್ವಯಿಕ ಗಣಿತಶಾಸ್ತ್ರೀಯ ಬೋಧನೆ ಮತ್ತು ಸಂಶೋಧನೆಯನ್ನು ಮಾಡುತ್ತಿದೆ. ನಿಯಮಿತವಾಗಿ ಜನಪ್ರಿಯ ಗಣಿತೀಯ ವಿಷಯಗಳ ಬಗ್ಗೆ ಶೈಕ್ಷಣಿಕ ಮತ್ತು ತಾಂತ್ರಿಕ ಸಂಸ್ಮರಣ ಉಪನ್ಯಾಸಗಳನ್ನು ಏರ್ಪಡಿಸುತ್ತಿದೆ; ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಸೆಮಿನಾರುಗಳನ್ನು ನಿಯಮಿತವಾಗಿ ನಡೆಸುತ್ತಿದೆ.  

1914ರಲ್ಲಿ ಆಶುತೋಷ್‌ ಮುಖರ್ಜಿಯವರು ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ “ರಾಸ್ಬಿಹಾರಿ ಶಿಕ್ಷಾ ಪ್ರಾಂಗಣ ಎಂಬ ವಿಜ್ಞಾನ ಕಾಲೇಜನ್ನು ಆರಂಭಿಸಿದರು. ಇದು ಭಾರತೀಯ ವಿಜ್ಞಾನಿಗಳ ಸಮುದಾಯ ರೂಪುಗೊಳ್ಳಲು ಮತ್ತು ವಿಶ್ವ ದರ್ಜೆಯ ವೈಜ್ಞಾನಿಕ ಸಂಶೋಧನೆ ಮತ್ತು ಬೋಧನೆಯನ್ನು ಮಾಡಲು ಗಮನಾರ್ಹ ವೇದಿಕೆಯಾಯಿತು. ಇಲ್ಲಿ ಪದವಿಯನ್ನು ಪಡೆದವರು ಲಂಡನ್ನಿನ ರಾಯಲ್‌ ಸೊಸೈಟಿಯ ಫೆಲೋ ಸಹ ಆದರು. ಈ ಕಾಲೇಜು ಭಾರತೀಯರಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ಶಿಕ್ಷಣವನ್ನು ಕೊಡುವ, ಭಾರತದಲ್ಲಿಯೇ ಪ್ರಾಥಮಿಕ ಮತ್ತು ಆನ್ವಯಿಕ ವಿಜ್ಞಾನವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿತ್ತು. ಈಗಲೂ ಈ ಕಾಲೇಜು ವಿಶ್ವ ದರ್ಜೆಯ ಶಿಕ್ಷಣ ಸಂಸ್ಥೆ ಆಗಿದೆ. ಈ ಕಾಲೇಜಿನಲ್ಲಿ ಸತ್ಯೇಂದ್ರನಾಥ ಬೋಸ್‌, ಮೇಘನಾದ ಸಹ, ಜ್ಞಾನಚಂದ್ರ ಘೋಶ್‌, ಜ್ಞಾನೇಂದ್ರನಾಥ ಮುಖರ್ಜಿ ಮೊದಲಾದವರು ಸ್ನಾತಕೋತ್ತರಪದವಿಯನ್ನು ಪಡೆದು ವಿಶ್ವ ವಿಖ್ಯಾತ ಸಂಶೋಧನೆಯನ್ನು ಮಾಡಿದರು 

ಭಾರತೀಯ ವಿಜ್ಞಾನಿಗಳನ್ನು ಭಾರತೀಯರೇ ಬೆಂಬಲಿಸಬೇಕು ಎಂದು ಯೋಚಿಸಿದ ಜಗದೀಶಚಂದ್ರಬೋಸರು ಪ್ರೆಸಿಡೆನ್ಸಿ ಕಾಲೇಜಿನಿಂದ ನಿವೃತ್ತರಾದ ಮೇಲೆ ಅದುವರೆವಿಗೆ ತಾವು ಉಳಿತಾಯ ಮಾಡಿದ ಹಣದಿಂದ ಭಾರತೀಯ ವಿಜ್ಞಾನಿಗಳ ಅಂತರ್‌ ಶಾಸ್ತ್ರೀಯ ಪ್ರಾಯೋಗಿಕ ಸಂಶೋಧನಾ ಕಾರ್ಯಕ್ಕಾಗಿ “ಬಸು ವಿಜ್ಞಾನ ಮಂದಿರ ಎಂಬ ಸಂಸ್ಥೆಯನ್ನು 1917ರಲ್ಲಿ ಹುಟ್ಟುಹಾಕಿದರು. ಭಾರತೀಯ ವಿಜ್ಞಾನ ಸಂಸ್ಥೆಯಡಿ ವಿದ್ಯಾಭ್ಯಾಸ, ಸಂಶೋಧನೆಗಳನ್ನು ಮಾಡಿದ ಸಿ.ವಿ. ರಾಮನ್ ಅವರಿಗೆ ತಮ್ಮದೇ ಆದ ನಿಲುವಿನಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ಯಾವುದೇ ಸರ್ಕಾರಿ ಅಥವಾ ಸರ್ಕಾರೇತರ ಫಂಡಿಂಗ್‌ ಏಜೆನ್ಸಿಗಳ ಸಹಾಯವಿಲ್ಲದೆ ಸಹಮನಸ್ಕ ಉದಾರಿ ಜನಸಮೂಹದ ನೆರವಿನಿಂದ ನಡೆಸುವ ಇಚ್ಛೆ ಇತ್ತು. ಅವರು ಕರ್ನಾಟಕದಲ್ಲಿ ವಿಶೇಷವಾಗಿ ವೈಜ್ಞಾನಿಕ ಪರಿಸರವನ್ನು ನಿರ್ಮಿಸಲು “ಇಂಡಿಯನ್ಅಕಾಡೆಮಿ ಆಫ್ಸೈನ್ಸ್‌” ಎಂಬ ಸಂಸ್ಥೆಯನ್ನು ಬೆಂಗಳೂರಿನಲ್ಲಿ 1934ರಲ್ಲಿ ಆರಂಭಿಸಿದರು, ಈಗ ಇದು ಅಂತರ್ರಾಷ್ಟ್ರೀಯ ಖ್ಯಾತಿಯನ್ನು ಪಡೆದ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಎಂಬ ಸಂಶೋಧನಾ ಸಂಸ್ಥೆ ಆಗಿದೆ. 

ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರಗಳನ್ನು ಆಹಾರ, ಕೃಷಿ ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳ ದೃಷ್ಟಿಯಿಂದ ಅಭ್ಯಾಸ ಮಾಡುವುದು ಸಹಜವಾಗಿತ್ತು. ಪ್ರೊಫೆಸರ್‌ ಶಂಕರ್‌ ಪುರುಷೋತ್ತಮ ಅಗರ್‌ಕರ್‌ ಅವರು ಪ್ರಾಣಿ ಮತ್ತು ಸಸ್ಯ ವೈವಿಧ್ಯತೆಯ ವಿಶೇಷತೆಗಳನ್ನು ಗಮನಿಸುವ ದೃಷ್ಟಿಯಿದ್ದ ಮಾರ್ಫಾಲಜಿಸ್ಟ್‌ ಆಗಿದ್ದರು. ಆ ದೃಷ್ಟಿಕೋನವನ್ನು ಪೋಷಿಸುವ ಉದ್ದೇಶದಿಂದ “ಮಹಾರಾಷ್ಟ್ರ ಅಸೋಸಿಯೇಷನ್‌ ಫಾರ್‌ ದಿ ಕಲ್ಟಿವೇಷನ್‌ ಆಫ್‌ ಸೈನ್ಸ್‌” ಎಂಬ ಸಂಸ್ಥೆಯನ್ನು 1946ರಲ್ಲಿ ಆರಂಭಿಸಿದರು. ಪ್ರಾರಂಭದಲ್ಲಿ ಆರ್ಥಿಕ ಕೊರತೆಯಿಂದಾಗಿ ಇಲ್ಲಿ ಅನೇಕ ವಿಜ್ಞಾನಿಗಳು ಯಾವ ಸಂಭಾವನೆಯನ್ನೂ ಪಡೆಯದೆ ಕೆಲಸ ಮಾಡಿದರು. ಅದರ ನಿರ್ದೇಶಕರಾಗಿ ಅಗರ್‌ಕರ್‌ 1960ರ ವರೆಗೂ ಕೆಲಸ ಮಾಡಿದರು. ಈಗ ಈ ಸಂಸ್ಥೆ ಅಗರ್‌ಕರ್‌ ರಿಸರ್ಚ್‌ ಇನಸ್ಟಿಟ್ಯೂಟ್‌ ಎಂಬ ಹೆಸರಿನಲ್ಲಿ ಮಾನವ ಸಮುದಾಯದ ಅಭಿವೃದ್ಧಿಗೆ ಪೂರಕವಾಗುವ ಉತ್ಕೃಷ್ಟ ಮಟ್ಟದ ಸಂಶೋಧನೆಯನ್ನು ನಡೆಸುತ್ತಿದೆ.

ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=35753

(ಮುಂದುವರಿಯುವುದು)

-ಪದ್ಮಿನಿ ಹೆಗಡೆ

4 Responses

  1. sudha says:

    ನಮಸ್ಕಾರ
    ಬಹಳ ಚೆನ್ನಾಗಿದೆ.

  2. ಎಂದಿನಂತೆ ಮಾಹಿತಿ ಪೂರ್ಣ ಬರಹ…ಚೆನ್ನಾಗಿ ಮುಂದುವರೆಯುತ್ತಿದೆ…ಧನ್ಯವಾದಗಳು ಮೇಡಂ.

  3. . ಶಂಕರಿ ಶರ್ಮ says:

    ಬಹು ಪ್ರಮುಖ ವಿಷಯಗಳನ್ನೊಳಗೊಂಡ ಸಂಗ್ರಹಯೋಗ್ಯ ಬರೆಹ.

  4. padmini Hegade says:

    ಪ್ರೀತಿಯಿಂದ ಲೇಖನವನ್ನು ಓದಿ ಸ್ಪಂದಿಸುತ್ತಿರುವ ಸುಧಾ ಮೇಡಂ, ಬಿ.ಆರ್. ನಾಗರತ್ನ ಮೇಡಂ, ಶಂಕರಿ ಶರ್ಮ ಮೇಡಂ ಮತ್ತು ಅನಾಮಿಕ ಓದುಗರಿಗೆ ಧನ್ಯವಾದಗಳು.

Leave a Reply to padmini Hegade Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: